ಪ್ರತ್ಯಕ್ಷ ಕಂಡು ಪರಾಂಬರಿಸಿ ನೋಡಿದ ಮೇಲೂ ನಮೋ ಎನ್ನದಿದ್ದರೆ…
– ರಾಜೇಶ್ ರಾವ್
ಯಾವ ಘಟನೆ ಸಹನೆಯ ಕಟ್ಟೆಯೊಡೆದು ಸ್ವಾಭಿಮಾನ ಸಿಡಿದೆದ್ದು ನಡೆದಿತ್ತೋ ಆ ಘಟನೆ ಆತನನ್ನು ಜಗತ್ತಿಗೇ ಪರಿಚಯಿಸಿತು. ಜಗತ್ತಿಗೆ ಜಗತ್ತೇ ಆತನನ್ನು ಖಳನಾಯಕನನ್ನಾಗಿ, ರಾಕ್ಷಸನನ್ನಾಗಿ ಕಂಡು ದೂಷಿಸಿತು. ಜೊತೆಯಲ್ಲಿದ್ದವರೂ ದೂರವಾದರು. ಮಾಧ್ಯಮಗಳಿಂದ ನಿತ್ಯ ದೂಷಣೆಗಳ ಸಹಸ್ರನಾಮ. ರಾಷ್ಟ್ರವಿರೋಧಿ ಶಕ್ತಿಗಳಂತೂ ಹಬ್ಬದೂಟವೆಂಬಂತೆ ಈ ಸನ್ನಿವೇಶವನ್ನು ತಮಗೆ ತಕ್ಕಂತೆ ಮಾರ್ಪಡಿಸಿಕೊಂಡು ಕಣ್ಣಿಗೆ ರಾಚುವ ಸತ್ಯವನ್ನು ಕಾಲಗರ್ಭದಲ್ಲಿ ಅಡಗುವಂತೆ ಮಾಡಿದರು. ಮಾಧ್ಯಮಗಳು ಮುಚ್ಚಿಟ್ಟ ಕಾರಣ ಸಾಮಾನ್ಯ ಜನರಿಗೂ ಸತ್ಯ ತಿಳಿಯದೆ ಅವರೂ ದ್ವೇಷಿಸತೊಡಗಿದರು. ಅವನದೆಲ್ಲವನ್ನೂ ಮೌನವಾಗಿ ಸಹಿಸಿದ. ಮೌನವಾಗಿಯೇ ಕೆಲಸವನ್ನು ಮಾಡುತ್ತಾ ತನ್ನ ಜವಾಬ್ದಾರಿಯನ್ನು ಚ್ಯುತಿಯಿಲ್ಲದಂತೆ ಪೂರೈಸಿದ. ಯಾಕೆಂದರೆ ಅವನಲ್ಲೊಬ್ಬ ನಾಯಕನಿದ್ದ, ಸಂಘಟನಕಾರನಿದ್ದ, ಸಂಘದ ಶಿಸ್ತು, ಸಂಯಮ, ಸೇವಾಗುಣದ ಮೂರ್ತರೂಪವಿತ್ತು!
ಅದು 2013ರ ಜೂನ್ ತಿಂಗಳು. ಶಾಂತವಾಗಿದ್ದ ಗಂಗೆ ಉಕ್ಕಿ ಹರಿದಿದ್ದಳು. ಉತ್ತರ ಭಾರತ ಜಲ ಪ್ರಳಯದಿಂದ ತತ್ತರಿಸಿತ್ತು. ಚಾರ್ ಧಾಮಗಳಲ್ಲಿ ಯಾತ್ರಿಕರು ನಾಲ್ಕೂ ಕಡೆ ದಿಕ್ಕಾಪಾಲಾಗಿದ್ದರು. ಉತ್ತರಾಖಂಡದ ಜನರ ಬವಣೆಗೆ ಉತ್ತರ ಹೇಳುವವರಿರಲಿಲ್ಲ. ಕೇಂದ್ರ, ರಾಜ್ಯ ಸರಕಾರಗಳೆರಡೂ ನಿಷ್ಕ್ರಿಯವಾಗಿದ್ದ ಅಂತಹ ಕ್ಲಿಷ್ಟಕರ ಸಮಯದಲ್ಲಿ ಸಹಾಯಕ್ಕಾಗಿ ಪರಿತಪಿಸುತ್ತಿದ್ದ ಸಾವಿರಾರು ಸಂತ್ರಸ್ಥರಲ್ಲಿ ಸುಮಾರು 15,000 ಮಂದಿ ಸಂತ್ರಸ್ಥರನ್ನು ಹುಡುಕಾಡಿ ಅವರ ನೆರವಿಗೆ ಧಾವಿಸಿದ ಆತನ ಪಡೆ, ಸುಮಾರು 80 ಟೊಯೊಟಾ ಇನ್ನೋವಾ ಕಾರುಗಳಲ್ಲಿ ಅವರನ್ನು ಡೆಹ್ರಾಡೂನಿನ ಸುರಕ್ಷಿತ ಸ್ಥಳಕ್ಕೆ ಸಾಗಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರಲ್ಲದೆ, ಅಲ್ಲಿಂದ 25 ಐಷಾರಾಮಿ ಬಸ್ಸುಗಳ ಸಹಾಯದಿಂದ ನವದೆಹಲಿಗೆ ಪ್ರಯಾಣ ವ್ಯವಸ್ಥೆ ಕಲ್ಪಿಸಿದರು. ಇದು ಒಬ್ಬ ನಾಯಕನಾದವ ಮಾಡುವ ಕಾರ್ಯ.ಪಾಕಿಸ್ತಾನದ ಪ್ರಧಾನಿ ನಮ್ಮ ದೇಶದ ಪ್ರಧಾನಿಯನ್ನು ಹಳ್ಳಿ ಹೆಂಗಸು ಎಂದು ಜರೆದಾಗ ಬೇರೆ ನಾಯಕರಿರಲಿ ಪ್ರಧಾನಿಯ ಪಕ್ಷದ ನಾಯಕರೇ ತುಟಿಪಿಟಿಕ್ಕೆನ್ನದಿದ್ದಾಗ ನಮ್ಮ ದೇಶದ ಪ್ರಧಾನಿಯನ್ನು ಹೀಯಾಳಿಸುವ ಅಧಿಕಾರ ತಮಗಿಲ್ಲವೆಂದು ಹೇಳುವ ಮೂಲಕ ಯುಧಿಷ್ಟಿರನ “ಮೂರನೆಯವ ಎದುರಾದಾಗ ನಾವು ನೂರೈವರು” ಎಂಬ ಮಾತನ್ನು ಅಕ್ಷರಷಃ ಪಾಲಿಸಿದ ನಾಯಕ ಪ್ರಸಕ್ತ ಸನ್ನಿವೇಶದಲ್ಲಿ ಆತನೊಬ್ಬನೇ!
ಮುನ್ನುಗ್ಗುತ್ತಿದ್ದ ವಿಸ್ತರಣಾ ಮನೋಭಾವದ ಚೀನಾಕ್ಕೆ ಖಡಕ್ಕಾಗಿ ಉತ್ತರ ನೀಡಿದ ನಾಯಕ ಆತನಲ್ಲದೆ ಮತ್ಯಾರು? ವೀಸಾಕ್ಕಾಗಿ ಅಂಗಲಾಚದೇ ಅಮೇರಿಕಾದವರನ್ನೇ ಭಾರತದ ವೀಸಾಕ್ಕಾಗಿ ಸರತಿಯಲ್ಲಿ ನಿಲ್ಲುವಂತೆ ಮಾಡುತ್ತೇನೆಂದು ಘೋಷಿಸುವ ಧೈರ್ಯ ಮತ್ಯಾರಿಗಿದೆ? ಹೌದು, ಯಾವ ದೊಣ್ಣೆನಾಯಕನ ಅಪ್ಪಣೆಗೆ ಕಾಯದೇ ಸಂಧಿಗ್ಧ ಪರಿಸ್ಥಿತಿಯಲ್ಲಿ ಸ್ವಯಂ ಖಚಿತ ನಿರ್ಧಾರದೊಂದಿಗೆ ಮುನ್ನುಗ್ಗುವುದು ಮಾತ್ರವಲ್ಲ ಅದನ್ನು ಯಶಸ್ವಿಯಾಗಿ ಪೂರೈಸುವುದನ್ನು ಹಾಗೂ ದೇಶದ ಘನತೆ, ಸ್ವಾಭಿಮಾನ, ಗೌರವಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳುವ ಧೈರ್ಯ-ಸ್ಥೈರ್ಯ ಪ್ರದರ್ಶಿಸುವುದನ್ನು ಸರ್ದಾರ ಪಟೇಲ್ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿಯವರ ನಂತರದ ರಾಜಕೀಯ ನಾಯಕರಲ್ಲಿ ನೋಡಬಹುದಾದ ಏಕೈಕ ವ್ಯಕ್ತಿ ನರೇಂದ್ರ ಮೋದಿ!
ತುಷ್ಟೀಕರಣ ನಿಲ್ಲದ ಹೊರತು ಕಾಶ್ಮೀರ ತಣಿಯದು
– ಯೋಗೀಶ ತೀರ್ಥಪುರ
ಕಾಶ್ಮೀರ ಹಿಂದೂಗಳ ಪಾಲಿಗೆ ನರಕವಾಗಿ ಪರಿವರ್ತಿತವಾಗಿದೆ. ಹಿಂಸೆ, ಶೋಷಣೆಯ ದಳ್ಳುರಿಯಲ್ಲಿ ಇಲ್ಲನ ಹಿಂದೂಗಳ ಸ್ಥಿತಿ ತೀರಾ ದಯನೀಯವಾಗಿದೆ. ಇಷ್ಟೆಲ್ಲ ನಡೆದಿದ್ದರೂ ಕಾಶ್ಮೀರ ಸರ್ಕಾರ ಹಾಗೂ ಕೇಂದ್ರ ಸರ್ಕಾರ ತುಷ್ಟೀಕರಣ ರಾಜಕಾರಣದಲ್ಲೇ ಮುಂದುವರಿದಿರುವುದು ದುರದೃಷ್ಟಕರ.
1947ರ ವಿಭಜನೆಯ ನಂತರದ ಕಾಲದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ದಿಂದ ಸುಮಾರು 4.5 ಲಕ್ಷ ಹಿಂದುಗಳು ಕಾಶ್ಮೀರಕ್ಕೆ ಸ್ಥಳಾಂತರಗೊಂಡರು. ಈ ಹಿಂದುಗಳಿಗೆ ಕಾಶ್ಮೀರದಲ್ಲಿ ಮತದಾನದ ಹಕ್ಕಿಲ್ಲ ಮತ್ತು ಯಾವುದೇ ಪರಿಸ್ಥಿತಿಯಲ್ಲಿ ಹಿಂದುಗಳಿಗೆ ವಿಧಾನಸಭೆಯಲ್ಲಿ 31% ರಷ್ಟೇ ಪ್ರತಿ ನಿಧಿತ್ವ ಸಿಗುವಂತೆ ಒಟ್ಟು ಸ್ಥಾನಗಳ ಹೊಂದಾಣಿಕೆಯನ್ನು ಮಾಡಲಾಗಿದೆ.
ಕಾಶ್ಮೀರಿ ಹಿಂದುಗಳಲ್ಲಿ ಸಾಕ್ಷರತಾ ಪ್ರಮಾಣವು 88%ರಷ್ಟು ಇದ್ದರೂ ರಾಜ್ಯ ಸರಕಾರದ ಸೇವೆ, ಸಾರ್ವಜನಿಕವಲಯ ಮತ್ತು ಸರಕಾರಿ ಕಂಪೆನಿಗಳಲ್ಲಿ ಹಿಂದು ಕಾರ್ಮಿಕರ ಪ್ರಮಾಣವು 4.8% ರಷ್ಟು ಮಾತ್ರ ಇದೆ. 1980 ರಿಂದ 1990ರ ಅವಧಿಯಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಾದ ಮೇಲೆ ಈ ಪ್ರಮಾಣವು 1.7%ಕ್ಕೆ ಇಳಿಯಿತು. ಕಾಶ್ಮೀರದಲ್ಲಿನ ಯಾವ ಆರ್ಥಿಕ ವ್ಯವಹಾರವೂ ಹಿಂದೂಗಳ ಕೈಯಲ್ಲಿ ಇಲ್ಲ. ಕಾಶ್ಮೀರದ 97.4% ಭೂಮಿಯು ಮುಸಲ್ಮಾನರ ಒಡೆತನದಲ್ಲಿದೆ. ಕೇವಲ 2.6% ಭೂಮಿಯು ಮಾತ್ರ ಹಿಂದು ಮತ್ತು ಇತರ ಅಲ್ಪಾಸಂಖ್ಯಾತರ ಒಡೆತನದಲ್ಲಿದೆ. 1985ರಲ್ಲಿ ಕಾಶ್ಮೀರದಲ್ಲಿ ನೋದವಣೆ ಮಾಡಲ್ಪಟ್ಟ ಲಘು ಉದ್ಯೋಗಗಳ ಸಂಖ್ಯೆ 46,293 ಇತ್ತು. ಇದರಲ್ಲಿ 0.01% ರಷ್ಟು ಉದ್ಯೋಗಗಳು ಹಿಂದುಗಳ ಒಡೆತನದಲ್ಲಿದ್ದವು ಮತ್ತು ವಿದ್ಯುತ್ ಆಧಾರಿತ ಉದ್ಯೋಗಗಳ ಪೈಕಿ 98.9%ರಷ್ಟು ಮುಸಲ್ಮಾನರ ಒಡೆತನದ್ದಲಿವೆ. ಕಾಶ್ಮೀರದಲ್ಲಿನ 96%ರಷ್ಟು ಸೇಬು ತೋಟಗಳ ಜಮೀನು ಮುಸಲ್ಮಾನರ ಒಡೆತನದ್ದಲಿದೆ.
ಹೊಸದನ್ನೇನೋ ಕಂಡಂತೆ…!!
– ಅವಿನಾಶ್ ಜಿ ರಾಮ್
ವಿಚಿತ್ರವಾಗಿ ಕಾಡುವ ರಿಚ್ಚಿ, ಮೌನವಾಗಿಯೇ ಕೊಲ್ಲುವ ಮುನ್ನಾ ಅಲಿಯಾಸ್ ಪ್ರಣಯರಾಜ.. ನೋಡುವವರ ಕಣ್ಣು ತೇವ ಮಾಡಲೇಂದೆ ಕಾದು ಕುಳಿತ ರತ್ನಕ್ಕ ಮತ್ತವಳ ಮಗ ರಾಘು.. ಪಾಪ ಎನಿಸುವ ಬಾಲು.. ಕಣ್ಣೆದುರು ಬಂದಾಗೆಲ್ಲಾ ಬೆರಗು ಮೂಡಿಸುವ ಡೆಮಾಕ್ರಸಿ.. ಹೀಗೆ ಪಟ್ಟಿ ಮಾಡುತ್ತ ಹೋದರೆ ಉಳಿದವರ ಗುಂಪು ದೊಡ್ಡದಾಗುತ್ತ ಹೋಗುತ್ತದೆ..
ಅತ್ಯಂತ ವಿಭಿನ್ನ ಆಯಾಮಗಳೊಂದಿರುವ ಈ ಸಿನಿಮಾ ನನ್ನ ಕುತೂಹಲಕ್ಕೆ ಮೋಸ ಮಾಡಿಲ್ಲ. ಪ್ರತಿ ಪ್ರೇಮ್‌ನಲ್ಲೂ ತನ್ನ ಸಹಿ ಉಳಿಸಿರುವ ಕರಮ್ ಚಾವ್ಲಾರ ಕ್ಯಾಮೆರಾ ಕೈಚಳಕ, ಇಡೀ ಸಿನಿಮಾದಲ್ಲೊಂದು ಯಶಸ್ವಿ ಪಾತ್ರವಾಗಿರುವ ಅಜನೀಶ್ ರ ಸಂಗೀತ..:) ಕತ್ತರಿ ಪ್ರಯೋಗದಲ್ಲಿ ಕುಶಲತೆ ತೋರಿರುವ ಸಚಿನ್. ಈ ಎಲ್ಲಾ ತಂತ್ರಜ್ಞರ ತಾಂತ್ರಿಕತೆಯಲ್ಲಿ ಮಿಂದಿದೆ ‘ಉಳಿದವರು..‘
ತಂಡದ ನಾಯಕನಾಗಿರುವ ರಕ್ಷಿತ್ ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನದ್ದು ನೀಡಬಲ್ಲೇ ಎಂದು ಸಾಬೀತು ಮಾಡಿದ್ದಾರೆ. ಚಿತ್ರಕಥೆಯ ಶೈಲಿ ಭಿನ್ನವಾಗಿದೆ. ವರ್ಲ್ಡ್ ಸಿನಿಮಾಗಳ ಪ್ರಭಾವ ಅವರಿಗಾಗಿದೆ. ರಕ್ಷಿತ್ ಬರೀ ನಟನಾಗಿ ಮಾತ್ರ ಉಳಿದು ಹೋಗಬಾರದಾಗಿ ವಿನಂತಿ..
ಇನ್ನೂ ಲಾಭಾಂಶಗಳ ಲೆಕ್ಕಾಚಾರ ಮಾಡದೇ ಚಿತ್ರ ನಿರ್ಮಾಣ ಮಾಡಿದ ಸಿಂಪಲ್ ಸುನಿ ಮತ್ತು ತಂಡಕ್ಕೆ ಕೃತಜ್ಞತೆ ಹೇಳಲೇಬೇಕು..ಈ ಚಿತ್ರ ಅರ್ಥ ಆಗ್ತಿಲ್ಲ ಅನ್ನೋ ಕೊರಗು ಹಾಗೂ ವಿಮರ್ಶೆಗಳು ಎಲ್ಲೆಡೆ ಉಚಿತವಾಗಿ ಕೇಳಿ ಬರುತ್ತಿವೆ. ಇದುವರೆಗೂ ಎಂತೆಂಥ ಅನರ್ಥಗಳು, ಹೊಲಸು ತುಂಬಿರುವ ಚಿತ್ರಗಳು ಕನ್ನಡದಲ್ಲಿ ಬಂದಿವೆ. ಅಂತವುಗಳನ್ನು ಗೆಲ್ಲಿಸಿ ಯಶಸ್ವಿ ಚಿತ್ರ ಎಂಬ ಹಣೆ ಪಟ್ಟಿ ಕೊಟ್ಟವರು ನಾವು ಇನ್ನು ಈ ‘ ಉಳಿದವರನ್ನು ಅರಗಿಸಿಕೊಳ್ಳಲಾಗಲಿಲ್ಲವೆಂದರೇ ಹೇಗೆ..?
ಸಾಹಿತ್ಯ ಕ್ಷೇತ್ರದ ಒಳಹೊರಗು – ಭಾಗ ೨
-ಡಾ.ಶ್ರೀಪಾದ ಭಟ್, ತುಮಕೂರು
ಸಾಹಿತ್ಯ ಕ್ಷೇತ್ರದ ಒಳಹೊರಗು – ಭಾಗ ೧
ಕವಿಕಾಣದ್ದನ್ನು ವಿಮರ್ಶಕ ಕಂಡ!
ಕಾವ್ಯದಲ್ಲಿ ಕವಿ ಊಹಿಸದೇ ಇರುವ ಸಂಗತಿಯನ್ನು ಕೂಡ ವಿಮರ್ಶಕ ಖಚಿತವಾಗಿ ಹೇಳಬಲ್ಲ ಎಂಬ ಕಾರಣಕ್ಕೆ ಈ ಮಾತು. ಕುವೆಂಪು ಅವರು ಹೇಳಿದ್ದು: ರವಿ ಕಾಣದ್ದನ್ನು ಕವಿ ಕಂಡ. ಇದನ್ನು ಮುಂದುವರೆಸಿದ ಹಿರಣ್ಣಯ್ಯ ಕವಿ ಕಾಣದ್ದನ್ನು ಕುಡುಕ ಕಂಡ ಎಂದಿದ್ದರು. ಕನ್ನಡ ವಿಮರ್ಶೆಗಳನ್ನು ಅವಲೋಕಿಸಿದವರು ಆರಂಭದ ನನ್ನ ಮಾತನ್ನು ಒಪ್ಪಬಹುದು. ಇದಕ್ಕೆ ನಿದರ್ಶನವೊಂದಿದೆ. ಮೈಸೂರಿನಲ್ಲಿ ಕೆ.ಎಸ್ ನರಸಿಂಹಸ್ವಾಮಿಯವರ ಕಾವ್ಯ ಕುರಿತ ವಿಚಾರಗೋಷ್ಠಿ ನಡೆದಿತ್ತು. ಖ್ಯಾತರಾದ ಸ್ಥಾಪಿತ ವಿಮರ್ಶಕರೊಬ್ಬರು ಕೆಎಸ್‍ನ ಕಾವ್ಯದ ಜನಪ್ರಿಯ ಗೀತೆಯ ’ಪದುಮಳು ಒಳಗಿಲ್ಲ’ ಎಂಬ ಸಾಲನ್ನು ವಿಮರ್ಶಿಸುತ್ತ ಪದುಮ ಹೆಣ್ಣು ಕುಲದ ಪ್ರತೀಕ. ಗಂಡಸರು ಹೆಣ್ಣನ್ನು ಎಂದೂ ಒಳಗೆ ಬಿಟ್ಟುಕೊಂಡೇ ಇಲ್ಲ. ಆದ್ದರಿಂದ ಪದುಮಳು ಒಳಗಿಲ್ಲ ಎಂದರೆ ಹೆಣ್ಣನ್ನು ಗಂಡಸರು ತಮ್ಮ ವ್ಯಾವಹಾರಿಕ ಪ್ರಪಂಚದಿಂದ ಯಾವಾಗಲೂ ಹೊರಗೇ ಇಟ್ಟಿದ್ದಾರೆ ಎಂದರ್ಥ! ಎನ್ನುತ್ತ ವಿಶೇಷ ವ್ಯಾಖ್ಯಾನ ಮಾಡಿದರು. ಕೆಎಸ್‍ನ ಅವರನ್ನು ಒಮ್ಮೆ ಭೇಟಿಯಾದಾಗ ಪದ್ಯದ ಅರ್ಥ ಹಿಂಗಂತಲ್ಲಾ ಸಾರ್? ಅಂದೆ. ಅದೇನೋಪ್ಪ, ನಾನಂತೂ ಪದ್ಯ ಬರೆಯುವಾಗ ಅದನ್ನೆಲ್ಲ ಖಂಡಿತ ಯೋಚಿಸಿರಲಿಲ್ಲ. ಅದೇನಿದ್ದರೂ ಮುಟ್ಟು-ಮೈಲಿಗೆ ಅರ್ಥದಲ್ಲಿ ಹೊಳೆದ ಸಹಜ ಸಾಲು ಎಂದಿದ್ದರು. ಹೀಗಾಗಿಯೇ ಹೇಳಿದ್ದು: ಕವಿ ಕಾಣದ್ದನ್ನು ವಿಮರ್ಶಕ ಕಂಡ ಎಂದು. ಇರಬಹುದು. ಅನೇಕಾರ್ಥಗಳನ್ನು ಹೊಳೆಸಿದಾಗಲೇ ನಿಜವಾದ ಕಾವ್ಯವಾಗುವುದು. ಅಲ್ಲವೇ?
‘ದೇಶ ಮೊದಲು’ ಎಂದ ಕದನ ಕಲಿಗಳ ಆತ್ಮ ಸಮ್ಮಾನವನ್ನು ದೇನಿಸುತ್ತಾ….
– ರಾಘವೇಂದ್ರ ಅಡಿಗ ಎಚ್ಚೆನ್
ಯಾರೇ ಒಬ್ಬ ವ್ಯಕ್ತಿ ಸೈನ್ಯಕ್ಕೆ ಸೇರುತ್ತಾನೆಂದರೆ ಆ ವ್ಯಕ್ತಿಯ ಜಾತಿ, ಧರ್ಮಗಳೇನು ಎನ್ನುವುದನ್ನು ಯಾರೊಬ್ಬರೂ ಕೇಳುವುದಿಲ್ಲ. ಬದಲಾಗಿ ಅವನಿಗಿರುವ ದೇಶಾಭಿಮಾನಕ್ಕೆ ದೇಶವಾಸಿಗಳೆಲ್ಲಾ ತಲೆದೂಗುತ್ತಾರೆ. ಸೈನ್ಯಕ್ಕೆ ಸೇರ್ಬಹುದಾದ ವ್ಯಕ್ತಿ ಯಾರೇ ಆದರೂ ಅವನ ಬಗ್ಗೆ ಇಡಿ ದೇಶವೇ ಹೆಮ್ಮೆ ಪಡುತ್ತದೆ ಏಕೆಂದರೆ ಭಾರತೀಯ ಸೇನೆ ನಿರ್ವಹಿಸುವ ಕಾರ್ಯ ಅಂತಹುದು. ಮಳೆ, ಚಳಿ, ಶೀತ ಮಾರುತ, ಬಿರು ಬಿಸಿಲು ಎನ್ನುವುದನ್ನೂ ಲೆಕ್ಕಿಸದೆ ಹಗಲಿರುಳೂ ದೇಶದ ಗಡಿ ಕಾಯುವ ಯೋಧರ ದೇಶ ನಿಷ್ಠೆಯಿಂದಾಗಿಯೇ ಇಂದು ನಾವೆಲ್ಲಾ ನೆಮ್ಮದಿಯಿಂದ ಬದುಕುತ್ತಿದ್ದೇವೆ.
ಅದು 1999 ಮೇ ತಿಂಗಳು, ಪಾಕಿಗಳು ಕಾರ್ಗಿಲ್‌ನ, ಪೂರ್ವ ಬಟಾಲಿಕ್‌ನ ಮತ್ತು ದ್ರಾಸ್‌ನ ಉತ್ತರ ದಿಕ್ಕಿನ ಬೆಟ್ಟಗಳನ್ನು ಏರತೊಡಗಿದರು. ಗಟ್ಟಿ ಮುಟ್ಟಾಗಿದ್ದ ಬಂಕರುಗಳನ್ನು ತಮ್ಮೊಂದಿಗಿಟ್ಟುಕೊಂಡಿದ್ದ ಅವರು ಭಾರತೀಯದ ಸರ್ವ ರೀತಿಯ ಧಾಳಿಗೂ ಸನ್ನದ್ದರಾಗಿದ್ದರು. ಹಳ್ಳಿಗಾಡಿನ ದನಗಾಹಿಗಳಿಂದ ಪಾಕಿಸ್ತಾನದ ಈ ಕುಟಿಲೋಪಾಯವನ್ನರಿತ ನಮ್ಮ ಸೇನೆ ವರದಿ ತರಲೆಂದು ಸೌರಭ್ ಕಾಲಿಯಾ ನೇತೃತ್ವದಲ್ಲಿ ಐವರನ್ನು ಗುಡ್ಡ ಹತ್ತಿಸಿತು. ಶತ್ರುಪಡೆಗಳ ಸಾಮರ್ಥ್ಯದ ಅಂದಾಜಿಲ್ಲದ ನಮ್ಮವರು ಬೆಟ್ಟ ಹತ್ತಿ ಪಾಕ್ ನ ಮತಾಂಧ ಸೈನಿಕರ ಕೈಯಲ್ಲಿ ಸಿಕ್ಕಿಹಾಕಿಕೊಂಡು ಕ್ರೂರವಾದ ಹಿಂಸೆಗೆ ತುತ್ತಾದರು. ಅಷ್ಟೆ ಅಲ್ಲ ಅವರುಗಳ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಭಾರತೀಯ ಸೇನಾ ಶಿಬಿರಕ್ಕೆ ಹಿಂತಿರುಗಿಸಲಾಯಿತು.
ಅಂದಿನ ವಾಜಪೇಯಿ ನೇತೃತ್ವದ ಎನ್.ಡಿ.ಎ. ಸರ್ಕಾರವು ತಕ್ಷಣವೇ ‘ಆಪರೇಷನ್ ವಿಜಯ್’ ಹೆಸರಿನಲ್ಲಿ ಸೈನಿಕ ಕಾರ್ಯಾಚರಣೆ ನಡೆಸಲು ಆದೇಶ ನೀಡಿತು. ಆದರೆ ಅಂತಹಾ ಸೂಕ್ಷ್ಮ ಸ್ಥಿತಿಯಲ್ಲಿ ದೇಶದ ಗಡಿ ಕಾಯುತ್ತಿದ್ದ ಸೈನಿಕರ ಬಳಿ ಸರಿಯಾದ ಆಧುನಿಕ ಶಸ್ತ್ರಾಸ್ತ್ರಗಳೂ ಇರಲಿಲ್ಲ! ದೇಹ ರಕ್ಷಣೆಗೆ ಅವಷ್ಯವಾದ ಬಟ್ಟೆಗಳೂ ಇರಲಿಲ್ಲ! ಮತ್ತಷ್ಟು ಓದು 
ನಾಡು- ನುಡಿ: ಮರುಚಿಂತನೆ- ಪ್ರಜಾಪ್ರಭುತ್ವ ಹಾಗೂ ಪ್ರತಿನಿಧಿಗಳು- ಭಾಗ:2
-ಶ್ರೀ. ಆಯನೂರು ಮಂಜುನಾಥ್, ರಾಜ್ಯಸಭಾ ಸದಸ್ಯರು (-ಅಕ್ಷರಕ್ಕೆ ಇಳಿಸಿದವರು: ಸಂತೋಷ ಈ. ಕುವೆಂಪು.ವಿ.ವಿ, ಶಂಕರಘಟ್ಟ)-ಭಾಗ 1
ಒಂದು ಶಾಲೆಯಲ್ಲಿ ಒಬ್ಬ ಶಿಕ್ಷಕ ಪಾಠ ಮಾಡುವಾಗ ಒಂದು ಹುಡಗಿಯ ಹೆಗಲ ಮೇಲೆ ಕೈ ಹಾಕಿಕೊಂಡು ಪಾಠ ಮಾಡಿದ್ದಾನೆ. ಇದರ ಪರಿಣಾಮ ದೊಡ್ಡ ಗಲಾಟೆಯಾಗಿ ನಾನು ಹೋಗಬೇಕಾಯಿತು. ಆದ್ದರಿಂದ ನಾನು ಹೋದೆ, ಡಿಡಿಪಿಐಗೆ ಹೇಳಿ ಅಮಾನತು ಮಾಡಿಸಿದೆ. ಆದರೆ ಗ್ರಹಚಾರಕ್ಕೆ ಅವನು ನನ್ನ ಜಾತಿಯವನು ಆಗಿದ್ದ, ಹಾಗಾಗಿ ನನ್ನ ಜಾತಿಯವರು ಎಲ್ಲಾ ಬಂದರು. ಯಾರು ಈ ರೀತಿಯ ಕೆಲಸ ಮಾಡಿಲ್ಲವೇನು? ಏನೋ ಹುಡುಗ ತಪ್ಪು ಮಾಡಿದ್ದಾನೆ. ಕಪಾಳಕ್ಕೆ ಹೊಡೆದು ಬುದ್ಧಿ ಹೇಳ್ತಿವಿ ಬಿಡು. ನೀನು ನಮ್ಮವನಾಗಿ ಹೀಗೆನಾ ಮಾಡೋದು? ಅಂತ ಮಾತನಾಡಿದ್ದರು. ಅದಕ್ಕೆ ನಾನು ಹೇಳಿದೆ ಅವನು ನನ್ನ ಮಗಳ ಮೇಲೆ, ನಿನ್ನ ಮಗಳ ಮೇಲೆ ಕೈ ಹಾಕಿಲ್ಲ ಹಾಗಾಗಿ ನಿನಗೆ ಏನೂ ಅನಿಸುತ್ತಿಲ್ಲ. ಅಕಸ್ಮಾತ್ ಅವನು ನಿನ್ನ ಮಗಳ ಮೇಲೆ ಕೈ ಹಾಕಿದ್ದರೆ? ಎಂದು ಕೇಳಿದೆ. ಅದಕ್ಕೆ ಅವರು ನನ್ನ ಮೇಲೆ ಕೋಪಗೊಂಡು ಹೋದರು. ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಇಂಜಿನಿಯರನ ಅಮಾನತು ಮಾಡಿಸಿದೆ. ಅವನು ನನ್ನ ಜಾತಿಯವನೆ ಆಗಿದ್ದ. ಅದಕ್ಕೆ ನಮ್ಮ ಜಾತಿಯವರೆಲ್ಲ ಸೇರಿ ನಮ್ಮ ಜಾತಿಯ ವಿರುದ್ಧ ಇದ್ದಾನೆ ಎಂದು ಹಣೆಪಟ್ಟಿ ಕಟ್ಟುತ್ತಾರೆ. ಈ ರೀತಿಯ ಜನರ ಮಧ್ಯೆ ಹೇಗೆ ರಾಜಕಾರಣ ಮಾಡುವುದು? ಹೇಗೆ ಅಭಿವೃಧ್ಧಿ ರಾಜಕಾರಣ ಮಾಡುವುದು? ನಮ್ಮ ನಿಲವುಗಳನ್ನು ಹೇಗೆ ಪ್ರಕಟ ಮಾಡುವುದು? ನಾವು ನಂಬಿರುವ ಸಿದ್ಧಾಂತಗಳನ್ನು ಓರೆ ಹಚ್ಚಿ ಎಲ್ಲಿ ನೋಡಣ? ಒಂದು ರೀತಿಯಲ್ಲಿ ಶಾಸಕರಾದ ಮೇಲೆ ಸಂಸದರಾದ ಮೇಲೆ ನಮ್ಮ ವ್ಯಕ್ತಿತ್ವ ಎಲ್ಲಿ ಕರಿಗಿ ಹೋಗುತ್ತಿದೆಯೋ ಎಂಬ ಭಯ ನಮ್ಮಗಿದೆ.
ಇವತ್ತು ಮತದಾರರ ನಿರೀಕ್ಷೆ ಬೇರೆ ಬೇರೆ ರೀತಿಯಲ್ಲಿ ವ್ಯಕ್ತವಾಗುತ್ತಿದೆ. ಜನರು ತಮ್ಮ ಖಾಸಗಿ ಜೀವನದ ಕೆಲವು ಕಾರ್ಯಕ್ರಮಗಳಿಗೆ ಹಣವನ್ನು ರಾಜಕಾರಣಿಗಳಿಂದ ನೀರಿಕ್ಷಿಸುತ್ತಾರೆ. ಉದಾ:- ಮದುವೆ, ಆಸ್ಪತ್ರೆ ಖರ್ಚು, ಸಾವುಗಳಿಗೆ. ಜೊತೆಗೆ ಜಾತಿಯ ನಿರೀಕ್ಷೆ, ಏರಿಯಾ ಮನೆ ಮುಂದೆ ರಸ್ತೆ ಮಾಡಿಕೊಡಿ. ಹೊಸ ಚರಂಡಿ ಮಾಡಿಸಿ ಎನ್ನುವ ಮೂಲಕ ಅವರಲ್ಲಿ ವ್ಯಕ್ತಿಗತವಾಗಿ ತಮ್ಮ ತಮ್ಮ ನಿರೀಕ್ಷೆಗಳನ್ನು ವ್ಯಕ್ತಪಡಿಸುತ್ತಾರೆಯೇ ಹೊರತು ಕ್ಷೇತ್ರದ ಮತದಾರನಾಗಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಅವರ ನಿರೀಕ್ಷೆ ಇರುವುದಿಲ್ಲ. ಅವರ ನಿರೀಕ್ಷೆಗಳು ಯಾವ ಸ್ವರೂಪದಲ್ಲಿ ಇರುತ್ತವೆ ಎಂದರೆ, ನಮಗೆ ಓಟ್ ಬೇಕು ಅಂದರೆ ಅವರು ಕೇಳುವ ಕಾಲೇಜಿನಲ್ಲಿ ಸೀಟು ಕೊಡಿಸಬೇಕು. ಅವರ ಮಕ್ಕಳಿಗೆ ಕೆಲಸ ಕೊಡಿಸಬೇಕು. ಆಸ್ಪತ್ರೆಗೆ ಹೋದರೆ ಡಾಕ್ಟರಿಗೆ ಪೋನ್ ಮಾಡಿ ಹೇಳಬೇಕು. ಅವರ ಮಕ್ಕಳು ತಪ್ಪು ಮಾಡಿದರೆ ಅವರನ್ನು ಪೋಲಿಸ್ ಠಾಣೆಯಿಂದ ಬಿಡಿಸಬೇಕು. ಅರ್ಹತೆಯಿಲ್ಲದವನಿಗೆ ಸೀಟು ಮತ್ತು ಕೆಲಸ ಕೊಡಿಸಬೇಕು. ಎಲ್ಲಿಂದ ಎಲ್ಲಿಗೆ ನಿರೀಕ್ಷೆ ಅರ್ಥವಾಗುವುದಿಲ್ಲ. ಈ ರೀತಿಯ ವ್ಯವಸ್ಥೆಯ ಮಧ್ಯೆ ರಾಜಕಾರಣಿಗಳಿಗೆ ನಿತ್ಯ ಸವಾಲುಗಳಿವೆ. ಮತ್ತಷ್ಟು ಓದು 
ಉಸಿರೇ ಭಾರ: ಇಲ್ಲದಿರೆ ಆಧಾರ!
– ತುರುವೇಕೆರೆ ಪ್ರಸಾದ್
ದೇಶದ ಶತಕೋಟಿ ನಾಗರಿಕರಿಗೆ ಬಯೋಮೆಟ್ರಿಕ್ ಮಾಹಿತಿ ಆಧಾರದಲ್ಲಿ ವಿಶಿಷ್ಟ ಗುರುತಿನ ಸಂಖ್ಯೆ( ಯುಐಡಿ) ನೀಡುವ ಯೋಜನೆಯೇ ಆಧಾರ್. ಈ ಯೋಜನೆ ವಿಶ್ವದಲ್ಲೇ ಪ್ರಥಮ ಮತ್ತು ವಿಶಿಷ್ಟವಾದುದು, ಗುರುತಿನ ದಾಖಲೆಗಳಿಲ್ಲದವರೂ ಆಧಾರ್ ಚೀಟಿ ಪಡೆಯಬಹುದು ಎಂದು ಹೇಳಲಾಗಿದೆ. ಈ ಚೀಟಿ ವಿತರಣೆಗೆ ಬೆರಳಚ್ಚು, ಅಕ್ಷಿಪಟಲ ಸ್ಕ್ಯಾನ್, ಭಾವಚಿತ್ರ ಈ ಮೂರು ಬಯೋಮೆಟ್ರಿಕ್ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.
‘ಆಧಾರ್ ಕಾರ್ಡ್ ಕಡ್ಡಾಯವಲ್ಲ, ಐಚ್ಚಿಕ’ ಎಂದು ಕೇಂದ್ರ ಸರ್ಕಾರ ಈಚೆಗೆ ಸುಪ್ರೀಂ ಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸಿದೆ. ಇದರಿಂದ ಆಧಾರ್ ಬಗೆಗಿದ್ದ ಗೊಂದಲ, ಅನಗತ್ಯ ಕಿರಿಕಿರಿಗಳಿಗೆ ಕೇಂದ್ರವೇ ಸ್ಪಷ್ಟನೆ ನೀಡಿದಂತಾಗಿದೆ. ಇದು ನಿಜಕ್ಕೂ ಸ್ವಾಗತಾರ್ಹ ಕ್ರಮ. ಉದ್ಯೋಗ ಖಾತ್ರಿ ಯೋಜನೆ, ಸರ್ವ ಶಿಕ್ಷಾ ಅಭಿಯಾನ, ರಾಷ್ಟ್ರೀಯ ಗ್ರಾಮಿಣ ಆರೋಗ್ಯ ಕಾರ್ಯಕ್ರಮ, ಭಾರತ್ ನಿರ್ಮಾಣ್‍ನಂತಹ ಯೋಜನೆಗಳಡಿ ಉದ್ದೇಶಿತ ಫಲಾನುಭವಿಗಳನ್ನು ಗುರುತಿಸಲು ಆಧಾರ್ ಚೀಟಿ ನೆರವಾಗುತ್ತದೆ ಎಂದು ಹೇಳಲಾಗಿತ್ತು. ಆಧಾರ್ ಚೀಟಿ ಪಡೆಯುವುದು ಸ್ವಯಂಪ್ರೇರಣೆಗೆ ಬಿಟ್ಟಿದ್ದು ಎಂದು ಆರಂಭದಲ್ಲಿ ಹೇಳಲಾಗಿತ್ತಾದರೂ ಉದ್ಯೋಗ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು, ಮಕ್ಕಳನ್ನು ಶಾಲೆಗೆ ಸೇರಿಸಲು, ಆರೋಗ್ಯ ಸೇವೆಗಳ ಲಾಭ ಪಡೆಯಲು, ಪಡಿತರ ಚೀಟಿ ಪಡೆಯಲು, ವಿದ್ಯಾರ್ಥಿ ವೇತನ ಪಡೆಯಲು ಆಧಾರ್ ಏಕೈಕ ಕಡ್ಡಾಯ ದಾಖಲೆ ಎಂಬಂತೆ ಬಿಂಬಿಸಲಾಗುತ್ತಿದೆ. ಆಧಾರ್ ಇಲ್ಲದಿದ್ದರೆ ಸಾರ್ವಜನಿಕರಿಗೆ ಈ ದೇಶದ ಪೌರತ್ವ ಮತ್ತು ನಾಗರಿಕ ಸೌಲಭ್ಯಗಳು ದಕ್ಕುವುದಿಲ್ಲ ಎಂದು ಬೆದರಿಕೆ ಹಾಕುವ ಮಟ್ಟಿಗೆ ಅಧಿಕಾರಿಗಳು ಸಾರ್ವಜನಿಕರ ಮೇಲೆ ಒತ್ತಡ ಹೇರಿದ್ದಾರೆ. ಇತ್ತೀಚೆಗೆ ನಡೆದ ಅಧಿಕಾರಿಗಳ ಸಭೆಯೊಂದರಲ್ಲಿ ಜಿಲ್ಲಾಧಿಕಾರಿಗಳು ಆಧಾರ್ ಇಲ್ಲದೆ ಯಾವ ಯೋಜನೆಯನ್ನೂ ಅನುಷ್ಠಾನಕ್ಕೆ ತರಕೂಡದು ಎಂದು ಕಟ್ಟಾಜ್ಞೆಯನ್ನೇ ಮಾಡಿದರು. ಅಧಿಕಾರಿಗಳೇ ಈ ರೀತಿ ಅಂಕುಶ ಹಿಡಿದು ಹೊರಟರೆ ಸಾರ್ವಜನಿಕರ ಗತಿ ಏನು ಎಂದು ಯೋಚಿಸಬೇಕಿದೆ.
ಮತ್ತಷ್ಟು ಓದು 
ಮಹಾತ್ಮಾ ಗಾಂಧಿಯವರ ಆಸೆಯನ್ನು ನೆರವೇರಿಸಲಿರುವ ಸೋನಿಯಾ!
– ನರೇಂದ್ರ ಕುಮಾರ್
1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರದಲ್ಲಿ, ಕಾಂಗ್ರೆಸ್ಸಿನ ನಾಯಕರ ಮುಂದೆ ಮಹಾತ್ಮಾ ಗಾಂಧಿಯವರು ತಮ್ಮ ಆಸೆಯೊಂದನ್ನು ಹೇಳಿದರು. ಅದೆಂದರೆ, “ಭಾರತಕ್ಕೆ ಸ್ವಾತಂತ್ರ್ಯ ಪಡೆಯುವುದು ಕಾಂಗ್ರೆಸ್ಸಿನ ಉದ್ದೇಶವಾಗಿತ್ತು. ಈಗ ಅದು ನೆರವೇರಿದೆ. ಹೀಗಾಗಿ, ಇನ್ಮುಂದೆ ಕಾಂಗ್ರೆಸ್ಸಿನ ಆವಶ್ಯಕತೆಯಿರುವುದಿಲ್ಲ. ಈಗ ಕಾಂಗ್ರೆಸ್ಸನ್ನು ವಿಸರ್ಜಿಸಿಬಿಡೋಣ. ನಿಮಗೆ ಅಗತ್ಯವೆನಿಸಿದರೆ ಹೊಸದೊಂದು ರಾಜಕೀಯ ಪಕ್ಷವನ್ನು ಕಟ್ಟಿಕೊಳ್ಳಿ”. ಇದಕ್ಕೆ ಸರ್ದಾರ್ ಪಟೇಲರ ಸಮ್ಮತಿಯೂ ಇತ್ತು. ಆದರೆ, ಸ್ವತಂತ್ರ ಭಾರತದ ಪ್ರಧಾನಿಯಾಗುವ ಕನಸು ಕಾಣುತ್ತಿದ್ದ ಪಂಡಿತ್ ನೆಹರೂ ಅವರು ಇದಕ್ಕೆ ಒಪ್ಪಲಿಲ್ಲ. ಇಷ್ಟು ವರ್ಷಗಳ ಕಾಲ ಕಷ್ಟಪಟ್ಟ ನಂತರ, ಅದರ ಫಲವನ್ನು ಉಣ್ಣುವುದರಲ್ಲಿ ತಪ್ಪೇನಿದೆ ಎನ್ನುವುದು ಅವರ ವಾದವಾಗಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರಿಂದ ಬಂದಿದ್ದ ಪ್ರಸಿದ್ಧಿಯನ್ನು ಅಧಿಕಾರದ ಖುರ್ಚಿಗೆ ಏರುವುದಕ್ಕೆ ಉಪಯೋಗಿಸಿಕೊಳ್ಳುವುದೇ ಸರಿ ಎಂದು ಅವರು ಹೇಳಿದರು. ಇದಾದ ಸ್ವಲ್ಪ ದಿನದಲ್ಲೇ ಗಾಂಧೀಜಿಯವರ ಕೊಲೆಯೂ ಆಗಿಹೋಯಿತು. ಗಾಂಧೀಜಿಯವರ ಆಸೆ ಹಾಗೆಯೇ ಉಳಿದು ಬಿಟ್ಟಿತ್ತು!
1947ರಲ್ಲಿ “ಸಂವಿಧಾನ ಸಭೆ” (Constituent Assembly) ಅಸ್ತಿತ್ವಕ್ಕೆ ಬಂದಿತು. ನೆಹರೂ ಪ್ರಧಾನಿಯಾದರು. ವಿವಿಧ ಪಕ್ಷಗಳಿಗೆ ಸೇರಿದವರಿಗೂ ಸರಕಾರದಲ್ಲಿ ಅವಕಾಶ ನೀಡಿದರು. ಆ ನಂತರ, ಸರಕಾರದಲ್ಲಿ ಕಾನೂನು ಮಂತ್ರಿಯಾಗಿದ್ದ ಡಾ||ಅಂಬೇಡ್ಕರ್ ಅವರ ನೇತೃತ್ವದಲ್ಲಿ ಭಾರತದ ಸಂವಿಧಾನ ರಚನೆಯಾಯಿತು. 1951ರಲ್ಲಿ ಮೊದಲ ಚುನಾವಣೆಯಾಯಿತು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 364 ಸ್ಥಾನಗಳು ಲಭಿಸಿದವು. ಮತ್ತಾವ ಪಕ್ಷವೂ ಮೂರಂಕಿ ಮುಟ್ಟಲಿಲ್ಲ. 1957ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಸ್ಥಾನಗಳು 371 ಆದವು. ಈ ಬಾರಿಯೂ ಮತ್ತಾವ ಪಕ್ಷವೂ ಮೂರಂಕಿ ಮುಟ್ಟಲಿಲ್ಲ.
ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಗಳಿಸಿದ ಸ್ಥಾನಗಳು ಕೆಳಗಿನ ಕೋಷ್ಟಕದಲ್ಲಿದೆ:
ನಮ್ಮನಿಮ್ಮೊಳಗೂ ಇರಬಹುದು ಒಬ್ಬ ‘ಜೋನಾಥನ್ ಸೀಗಲ್’…..
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಅದೊ೦ದು ಸಮುದ್ರ ತೀರ. ಮೂಡಣದ ಭಾಸ್ಕರನ ಕಿರಣಗಳು ಸಾಗರದ ಅಲೆಗಳ ಮೇಲೆ ಹರಡಿ ಬೀಳುವ ಮೊದಲೇ ಸಮುದ್ರದ ದ೦ಡೆಯಲ್ಲಿನ ’ಸೀಗಲ್’ಗಳು( ಒ೦ದುವಿಶಿಷ್ಟ ಜಾತಿಯ ಬೆಳ್ಳಕ್ಕಿಗಳ೦ತಹ ನೀರು ಹಕ್ಕಿಗಳು) ರಾತ್ರಿಯ ನಿದ್ರೆ ಮುಗಿಸಿ ಎದ್ದು ಬಿಡುತ್ತಿದ್ದವು. ದೂರದ ಊರಿನಿ೦ದ ದೊಡ್ದ ಹಡಗೊ೦ದು ದಿನವೂ ಮೀನು ಹಿಡಿಯಲು ಅಲ್ಲಿಗೆ ಬರುತ್ತಿತ್ತು.ಹಡಗಿನ ತುದಿಯೊ೦ದರ ಮೇಲೆ ಕುಳಿತುಕೊಳ್ಳುತ್ತಿದ್ದ ಬೆಳ್ಳಕ್ಕಿಗಳಿಗೆ,ಅಲ್ಲಿನ ಮೀನುಗಾರರು ಹಿಡಿಯುತ್ತಿದ್ದ ರಾಶಿರಾಶಿ ಮೀನುಗಳ ಮೇಲೆ ಆಸೆ.ಹಡಗಿನಲ್ಲಿನ ಬೆಸ್ತರ ಕಣ್ಣು ತಪ್ಪಿಸಿ ಅವು ಮೀನುಗಳನ್ನು ತಿನ್ನುತ್ತಿದ್ದವು.ತು೦ಬ ದೂರಕ್ಕಾಗಲಿ, ಎತ್ತರಕ್ಕಾಗಲಿ ಹಾರಲಾಗದ ಬೆಳ್ಳಕ್ಕಿಗಳಿಗೆ ಹಡಗಿನಿ೦ದ ಮೀನು ಕದ್ದು ತಿನ್ನುವುದು,ಸಮುದ್ರದ ತೀರದಲ್ಲಿ ಈಜಾಡುವ ಮೀನುಗಳ ಬೇಟೆಯಾಡುವುದೊ೦ದೇ ದೈನ೦ದಿನ ಕಾರ್ಯವಾಗಿತ್ತು ಮತ್ತು ಆ ಕಾರ್ಯದಿ೦ದ ಅವು ಬಹಳ ಸ೦ತೋಷವಾಗಿದ್ದವು. ಆದರೆ ಜೋನಾಥನ್ ಎನ್ನುವ ಒ೦ದು ಬೆಳ್ಳಕ್ಕಿಗೆ ಮಾತ್ರ ತನ್ನ ಜನಾ೦ಗದ ದೈನ೦ದಿನ ಜೀವನ ಶೈಲಿ ಬೇಸರ ತರಿಸುತ್ತಿತ್ತು.ಬರೀ ತಿನ್ನುವುದು,ಮೊಟ್ಟೆಯಿಡುವುದೇ ಜೀವನವಾ..?
ಇದರ ಹೊರತಾಗಿಯೂ ಸಾಧಿಸಲು ಬೇಕಾದಷ್ಟಿದೆ ಜೀವನದಲ್ಲಿ ಎ೦ದುಕೊಳ್ಳುತ್ತಿದ್ದ ಜೋನಾಥನ್ ಗೆ ಹಾರುವುದೆ೦ದರೇ ಪ೦ಚಪ್ರಾಣ. ತಾನು ಹದ್ದಿನ೦ತೇ,ಗರುಡ ಪಕ್ಷಿಯ೦ತೇ ಆಗಸದೆತ್ತರಕ್ಕೆ ಹಾರುವುದು ಸಾಧ್ಯವಿಲ್ಲವಾ? ಎ೦ದು ಜೋನಾಥನ್ ಯೋಚಿಸುತ್ತಿತ್ತು.ತನ್ನ ಸ್ನೇಹಿತರು ಮೀನು ಹಿಡಿಯುವ,ಮೀನು ತಿನ್ನುವ ಕಾರ್ಯದಲ್ಲಿ ನಿರತರಾಗಿದ್ದರೆ, ಜೋನಾಥನ್ ಮಾತ್ರ ಬೆಟ್ಟದ ಮೇಲಿನಿ೦ದ ಜಿಗಿದು ಹದ್ದಿನ೦ತೇ ಎತ್ತರಕ್ಕೆ ಹಾರುವ ಪ್ರಯತ್ನ ಮಾಡುತ್ತಿತ್ತು.ಆದರೆ ತೀರ ಭಾರದ,ವಿಶಾಲ ರೆಕ್ಕೆಗಳಿ೦ದಾಗಿ ಪ್ರತಿಬಾರಿಯೂ ಜೋನಾಥನ್ ಸ್ವಲ್ಪ ದೂರ ಹಾರುತ್ತಲೇ,ನಿಯ೦ತ್ರಣ ಕಳೆದುಕೊ೦ಡು ಮುಗ್ಗರಿಸಿ ಬಿಳುತ್ತಿತ್ತು. ಏನೇ ಆದರೂ ಹಾರುವುದಲ್ಲೇ ಅದು ಆನ೦ದವನ್ನು ಅನುಭವಿಸುತ್ತಿತ್ತು.ಅನ್ನ ನೀರುಗಳ ಪರಿವೆಯಿಲ್ಲದೇ,ಎತ್ತರದಿ೦ದ ಹಾರಾಡಲು ಪ್ರಯತ್ನಿಸುತ್ತ,ಹಾರುತ್ತ,ಬೀಳುತ್ತ ದಿನವಿಡಿ ಕಾಲಕಳೆಯುತ್ತಿತ್ತು. ಜೋನಾಥನ್ ಈ ವಿಚಿತ್ರ ನಡುವಳಿಕೆ ಅದರ ತ೦ದೆತಾಯ೦ದಿರಿಗೂ ಮುಜುಗರಕ್ಕೀಡು ಮಾಡಿತ್ತು.’ಬೆಳ್ಳಕ್ಕಿಯಾಗಿ ಹುಟ್ಟಿದ ಮೇಲೆ,ಮೀನು ತಿನ್ನುತ್ತ ಬದುಕುವುದೇ ನಮ್ಮ ಜೀವನದ ಪರಮೋದ್ದೇಶ, ಅಲ್ಲದೆ ಹಾರುವಾಗ ಮುಗ್ಗರಿಸಿ ಬೀಳುವುದು ನಮ್ಮ ಕುಲಕ್ಕೇ ಅವಮಾನಕರ, ನಮ್ಮಿ೦ದಾಗುವಷ್ಟು ಮಾತ್ರ ಹಾರಲು ಪ್ರಯತ್ನಿಸುವುದನ್ನು ಬಿಟ್ಟು ಇದೇನು ಹುಚ್ಚಾಟ ನಿ೦ದು’ ಎ೦ದು ಅದರ ತ೦ದೆ ಒ೦ದೆರಡು ಬಾರಿ ಅದನ್ನು ಗದರಿಸಿದ್ದೂ ಉ೦ಟು. ಆದರೆ ಜೋನಾಥನ್ ಗೆ ಗಿಡುಗನ೦ತೇ ಮೋಡಗಳಾಚೆಗೆ ಹಾರುವ ಆಸೆ.ನೂರಾರು ಮೈಲಿಗಳ ವೇಗದಲ್ಲಿ ತೇಲುವ ತವಕ.ಹಾಗಾಗಿ ತ೦ದೆಯ ಬಯ್ಗುಳಗಳನ್ನು ಹೆಚ್ಚು ಗ೦ಭೀರವಾಗಿ ತೆಗೆದುಕೊಳ್ಳದ ಈ ಪಕ್ಷಿ ತನ್ನ ಪ್ರಯತ್ನವನ್ನು ಮು೦ದುವರೆಸುತ್ತಲೇ ಇತ್ತು.
ಜೋಶಿಯವರು ಕಂಡಂತೆ.. ಉಳಿದವರು ಕಂಡಂತೆ.. ಹೀಗಂತೆ…
-ಶ್ರೀವತ್ಸ ಜೋಶಿ
ಬೇಡಾ ನಂಬಬೇಡಾ… ಜೀವ ಹೋದರೂ ಕನ್ನಡ ಪತ್ರಿಕೆಗಳಲ್ಲಿನ ಚಿತ್ರವಿಮರ್ಶೆಗಳನ್ನು ನಂಬಬೇಡ.
‘ಉಳಿದವರು ಕಂಡಂತೆ’ ಬಗ್ಗೆ ಅವು ಬರೆದಿರೋ ವಿಮರ್ಶೆಯನ್ನಂತೂ ದೇವರಾಣೆಗೂ ನಂಬಬೇಡ.
ಅದರಲ್ಲೂ ಕಪ್ರ, ಪ್ರವಾ, ವಿಕ, ವಿವಾ ಗಳ ಪ್ರಲಾಪವನ್ನು ಕೇಳಲೇಬೇಡ. ಉದಯವಾಣಿಯಲ್ಲಿನ ವಿಮರ್ಶೆಯನ್ನು ಓದದೆ ಬಿಡಬೇಡ.
ಇದು, ಸದಭಿರುಚಿಯ ಕನ್ನಡ ಸಿನೆಮಾ ಪ್ರೇಕ್ಷಕನಿಗೆ ವಾಷಿಂಗ್ಟನ್ ಡಿಸಿಯಿಂದ ಒಬ್ಬ ಶ್ರೀ(ವತ್ಸ)ಸಾಮಾನ್ಯ ಕನ್ನಡಿಗನ ಕಿವಿಮಾತು.
ಭಾನುವಾರ (ಮಾರ್ಚ್ 30) ಬೆಳಿಗ್ಗೆ ಹತ್ತು ಗಂಟೆಗೆ ಇಲ್ಲಿನ AMC ಸಿನೆಮಾ ಕಾಂಪ್ಲೆಕ್ಸ್‌ನಲ್ಲಿ ’ಉಳಿದವರು ಕಂಡಂತೆ’ ಸಿನೆಮಾ ಪ್ರದರ್ಶನ ಇತ್ತು. ಅಮೆರಿಕದ ಇತರ ನಾಲ್ಕು ಕಡೆಗಳಲ್ಲಿ (ನ್ಯೂಜೆರ್ಸಿ, ಶಿಕಾಗೊ, ಡೆಟ್ರಾಯಿಟ್ ಮತ್ತು ಕ್ಯಾಲಿಫೋರ್ನಿಯಾ) ಸಹ ಈ ಚಿತ್ರ ಬಿಡುಗಡೆಯಾಯ್ತು. ಕನ್ನಡ ಚಲನಚಿತ್ರ ಪ್ರದರ್ಶನ ಇಲ್ಲಿ ಅಪರೂಪವೆಂದೇ ಹೇಳಬೇಕು, ಅದರಲ್ಲೂ ’ಉಳಿದವರು ಕಂಡಂತೆ’ಯಂಥ ವಿಭಿನ್ನ ವಿಶಿಷ್ಟ, “ಈರೀತಿಯದು ಕನ್ನಡದಲ್ಲಿ ಇದೇ ಮೊದಲು” ಎನ್ನಲಾದ ಚಿತ್ರ, ಅಲ್ಲಿ ಕರ್ನಾಟಕದಲ್ಲಿ ಬಿಡುಗಡೆಯಾದಾಗಲೇ ಇಲ್ಲೂ ಪ್ರದರ್ಶನ ಕಾಣುತ್ತಿರುವುದು ನಮಗೆಲ್ಲ ಸಂತೋಷದ, ಹೆಮ್ಮೆಯ ವಿಚಾರ. ವಾಷಿಂಗ್ಟನ್ ಡಿಸಿಯಲ್ಲಿನ ಚಿತ್ರಮಂದಿರ ಹೆಚ್ಚೂಕಡಿಮೆ ಭರ್ತಿಯಾಗಿತ್ತು, ಇತ್ತೀಚೆಗೆ ಇಲ್ಲಿಗೆ ಬಂದ ನವಯುವಕರು, ಐಟಿಹುಡುಗರು ತುಂಬಿಕೊಂಡಿದ್ರು. ನಾವೆಲ್ಲ ಚಿತ್ರವನ್ನು ತುಂಬ ಇಷ್ಟಪಟ್ಟೆವು.
’ಉಳಿದವರು ಕಂಡಂತೆ’ ಚಿತ್ರದ ವಿಮರ್ಶೆ ಕನ್ನಡದ ಪ್ರಮುಖ ದಿನಪತ್ರಿಕೆಗಳ ಶನಿವಾರದ ಸಂಚಿಕೆಗಳಲ್ಲಿ ಪ್ರಕಟವಾಗಿದ್ದನ್ನು ನಾನು ಗಮನಿಸಿದ್ದೆ, ಓದಿದ್ದೆ. ಅದೇನೂ ನನ್ನ ಮೇಲೆ ಪ್ರಭಾವ ಬೀರಿತ್ತು ಅಂತಲ್ಲ. ಆದರೆ ನಾನೇ ಸಿನೆಮಾ ನೋಡಿ ಬಂದಮೇಲೆ ಆ ವಿಮರ್ಶೆಗಳು (ಒಂದನ್ನು ಹೊರತುಪಡಿಸಿ) ಎಂಥ ಪ್ರಮಾಣದಲ್ಲಿ ದಾರಿತಪ್ಪಿಸುವಂಥವಾಗಿವೆ, ವಾಸ್ತವಕ್ಕೆ ಅದೆಷ್ಟು ದೂರವಾಗಿವೆ ಎಂದು ಅರಿತು ಆಘಾತವಾಯಿತು. ’ಉಳಿದವರು ಕಂಡಂತೆ’ಯಂಥ ಒಂದು ಉತ್ತಮ ಪ್ರಯತ್ನ/ಪ್ರಯೋಗದ ಉನ್ನತ ಮಟ್ಟದ ಮೌಲ್ಯವನ್ನು ಅರಿಯಲಾರದೆ “ದ್ರಾಕ್ಷಿ ಹುಳಿಯಾಗಿದೆ” ಎಂದು ಮುಖ ಸಿಂಡರಿಸಿ ಓಡಿದ ನರಿಯನ್ನು ಅವು ನನಗೆ ನೆನಪಿಸಿದವು.





