ದ್ವೇಷ ಬಿತ್ತಿದ ಲೇಖಕರು
– ಸುದರ್ಶನ ಗುರುರಾಜ ರಾವ್
ಇತ್ತೀಚೆಗೆ ’ಅಗ್ನಿ’ ಎಂಬ ಸಂಸ್ಕೃತ ಪದದ ಹೆಸರುಳ್ಳ ಟ್ಯಾಬ್ಲಾಯ್ಡ್ ಮಾದರಿಯ ಪತ್ರಿಕೆಯೊಂದು ೧೯/೦೨ ರ ಸಂಚಿಕೆಯಲ್ಲಿ ಡಾ.ಎಸ್.ಎಲ್.ಭೈರಪ್ಪನವರ ಚಿತ್ರವೊಂದನ್ನು ಮುಖಪುಟದಲ್ಲಿಯೇ ಅಚ್ಚಿಸಿ ’”ದ್ವೇಷ ಬಿತ್ತುವ ಲೇಖಕ” ಎಂಬ ಶೀರ್ಷಿಕೆಯೊಂದಿಗೆ ಪೂರ್ಣ ಸಂಚಿಕೆಯನ್ನೇ ಭೈರಪ್ಪನವರನ್ನು ನಿಂದಿಸಲು ಮೀಸಲಾಗಿಟ್ಟಿತು. ಆಶ್ಚರ್ಯವೆಂದರೆ ಆ ಪತ್ರಿಕೆಯ ಪ್ರತಿಗಳು ಚೆನ್ನಾಗಿ ಖಾಲಿಯಾಗಿದ್ದು, ಅದರ ನಿರ್ವಾಹಕರಿಗೆ ಸಂತೋಷ ತಂದಿತು.ಶ್ರವಣಬೆಳಗೊಳದ ಕನ್ನಡ ಮೇಳದಲ್ಲಿ ವೇದಿಕೆಯನ್ನು ಚರ್ಚೆಗೆ ವಿನಿಯೋಗಿಸದೆ ದುರ್ಬಳಕೆ ಮಾಡಿಕೊಂಡು, ಭೈರಪ್ಪನವರ ಮೇಲೆ ವಿನಾಕಾರಣ (ಅವರ ಪ್ರಕಾರ ಸಕಾರಣವೇ ಆಗಿದ್ದರೂ,ವಿಷಯಾಂತರ ಮಾಡಿದ್ದರಿಂದ ಅದೊಂದು ವಿನಾಕಾರಣ ಬೊಗಳೆ) ಹರಿಹಾಯ್ದು, ಬೊಬ್ಬಿರಿದು,ಎಗರಾಡಿ ತಮ್ಮ ನಾಲಿಗೆ ತುರಿಯನ್ನು ತೀರಿಸಿಕೊಂಡಿದ್ದ ಘನಂದಾರಿಗಳು ತಮ್ಮ ಕೈತುರಿಕೆಯನ್ನೂ ತೀರಿಸಿಕೊಳ್ಳಲು ’ಅಗ್ನಿ ’ ಪತ್ರಿಕೆಯ ಮೊರೆಹೋದರು. ಭೈರಪ್ಪ ದ್ವೇಷವನ್ನು ಅಕ್ಷರಗಳ ಬೀಜರೂಪದಲ್ಲಿ ಬಿತ್ತಲು ಡಾಕ್ಟರೇಟು ಪಡೆದ ಹಲವಾರು ಲೇಖಕರ ಜೊತೆಗೆ, ಯಾವರೇಟೂ ಇಲ್ಲದ ಇನ್ನು ಕೆಲವರು ಸೇರಿ ಇಡೀ ಸಂಚಿಕೆಯನ್ನು ಸಂಪನ್ನಗೊಳಿಸಿದರು. ಸಮಾನತೆಯ ಪ್ರತಿಪಾದಕರಾದ ಇವರುಗಳು ತಮ್ಮ ಅನಿಸಿಕೆಗಳನ್ನು ಬಿತ್ತರಿಸುವಲ್ಲಿ ತೋರಿದ ಮುಚ್ಚಟೆಯನ್ನು ವಿಭಿನ್ನ ಅಭಿಪ್ರಾಯವಿರುವ ಒಬ್ಬನೇ ಒಬ್ಬ ಲೇಖಕನನ್ನು ಆರೋಗ್ಯಕರ ಚರ್ಚೆಗೆ ಅಹ್ವಾನಿಸಲಿಲ್ಲ ಎಂಬುದು ಇವರ ಇಬ್ಬಂದಿ, ಎಡಬಿಡಂಗಿ,ಹಾಗೂ ಅಷಾಢಭೂತಿ ತನಕ್ಕೆ ಹಿಡಿದ ಕನ್ನಡಿಯಾಗಿದ್ದು ವಿಪರ್ಯಾಸ.
ಮೊದಲ ಲೇಖನ – “ಕೇಡಿನ ಕಿಡಿಯನ್ನು ಕಾಪಿಟ್ಟುಕೊಂಡ ಲೇಖಕ”- ದಲ್ಲಿ ಘೋಷಿಸಿದಂತೆ ಅಕ್ಷರವನ್ನು (ಅಷ್ಟೇಕೆ, ಇಡೀ ಸಂಚಿಕೆಯನ್ನು) ಒಂದು ಗುಂಪಿನ ಜನರು ಒಬ್ಬ ಸೃಜನಶೀಲ ಲೇಖಕನ ನಿಂದನೆಗೆ, ತಮ್ಮ ದ್ವೇಷ, ಹತಾಷೆ, ಅಸೂಯೆಗಳನ್ನು ಪ್ರಕಟಪಡಿಸಲು ಬಳಸಿದರೆ, ಅದನ್ನು ಪ್ರಶ್ನಿಸುವ ಹಕ್ಕು ಓದುಗನಿಗೆ ಇದೆ ಎಂಬ ಧೋರಣೆಯಿಂದಲೇ ಈ ಲೇಖನ ಸರಣಿಯನ್ನು ಬರೆಯುತ್ತಿದ್ದೇನೆ.ಒಬ್ಬ ಲೇಖಕ, ತಾನು ನಂಬಿದ ತತ್ವ ಆದರ್ಶಗಳನ್ನು ಆಧರಿಸಿ ಸಾಹಿತ್ಯ ರಚಿಸಿದರೆ ಮತ್ತು ಅದು ಯಶಸ್ವಿಯಾಗಿ ಜನಪ್ರಿಯವಾದರೆ ಅದರಲ್ಲೇನು ತಪ್ಪು? ಈ ಚಿಂತನೆಯ ಹಂತಕರ ಮನೋಭೂಮಿಕೆಗೆ ಅನುಸಾರವಾಗಿ ಬರೆಯಬೇಕೆಂಬ ನಿಯಮವೇನೂ ಇಲ್ಲವಲ್ಲ.ಅದಕ್ಕೆ ಸರಿಸಾಟಿಯಾದ ಸಾಹಿತ್ಯ ರಚನೆ ಈ ವಿಭಿನ್ನ ದೃಷ್ಟಿಕೋನದ ದ್ರಷ್ಟಾರರು ಏಕೆ ರಚಿಸಲು ಸಾಧ್ಯವಾಗದೆ ಹೆಣಗುತ್ತಿದ್ದಾರೆಂಬ ಪ್ರಶ್ನೆಯ ಮೂಲಕ ಮೊದಲನೆಯ ”ಕೇಡಿನ ಕಿಡಿಯನ್ನು ಕಾಪಿಟ್ಟುಕೊಂಡ ಲೇಖಕ” ಎಂಬ ಶೀರ್ಷಿಕೆ ಕೊಟ್ಟು ಬರೆದ ಲೇಖನದ ಮೂಲಕ ನನ್ನ ಪ್ರತಿಕ್ರಿಯೆಗಳನ್ನು ದಾಖಲಿಸುತ್ತಿದ್ದೇನೆ. ತಮ್ಮ ಕೆನ್ನಾಲಗೆಯ ಹುನ್ನಾರಿಕರು ತಮ್ಮ ಪುಸ್ತಕಗಳನ್ನೆಷ್ಟು ಮಾರಿಕೊಂಡಿದ್ದಾರೋ ನನಗೆ ತಿಳಿಯದು;ಆದರೆ ಭೈರಪ್ಪನವರ ದೂಷಣೆಯಿಂದ “ಅಗ್ನಿ”ಯ ವ್ಯಾಪಾರ ಲಾಭಕಂಡಿದ್ದಂತೂ ನಿಜ. ಶ್ರೀಹರಿಯನ್ನು ನಿಂದಿಸುತ್ತಲೇ ಕೈವಲ್ಯ ಪಡೆದ ಹಿರಣ್ಯ ಕಶ್ಯಪುವಿನಂತೆ!!.