ವಿವೇಕಾನಂದರ ವಿಚಾರಗಳು: ಜಾತಿ ಪದ್ಧತಿ
– ಪ್ರೊ.ರಾಜಾರಾಮ ಹೆಗಡೆ
ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ
ವಿವೇಕಾನಂದರ ವಿಚಾರಗಳು: ಸಮಾಜ ಸುಧಾರಣೆ
ಸಾಧಾರಣವಾಗಿ ಇಂದು ವಿವೇಕಾನಂದರ ಕುರಿತು ಒಂದು ಅಭಿಪ್ರಾಯ ಚಾಲ್ತಿಯಲ್ಲಿರುವುದು ಕಂಡುಬರುತ್ತದೆ. ಅದೆಂದರೆ ಅವರು ಜಾತಿ ಪದ್ಧತಿಯ ನಿರ್ಮೂಲನೆಗಾಗಿ ಹೋರಾಡಿದರು ಎಂಬುದು. ವಿವೇಕಾನಂದರ ಕುರಿತ ಈ ಚಿತ್ರವು ಇಂದು ಎಷ್ಟು ಗಟ್ಟಿಯಾಗಿದೆಯೆಂದರೆ ಅವರ ಅನುಯಾಯಿಗಳು ಕೂಡ ಅವರ ಕುರಿತು ಮಾತನಾಡುವಾಗ ಈ ಅಂಶವನ್ನೇ ಮೊದಲು ಒತ್ತಿ ಹೇಳುತ್ತಾರೆ. ವಿವೇಕಾನಂದರ ಪ್ರಸ್ತುತತೆಯನ್ನು ಮನದಟ್ಟು ಮಾಡಿ ಕೊಡುವಾಗ ಅವರು ಹಿಂದೂ ಧರ್ಮದ ಶ್ರೇಷ್ಟತೆಯನ್ನು ಎತ್ತಿಹಿಡಿದಿದ್ದರು ಎನ್ನುವುದು ಅನಿವಾರ್ಯ.
ಆ ಅಂಶವನ್ನಿಟ್ಟುಕೊಂಡೇ ಹಿಂದುತ್ವವಾದಿಗಳು ವಿವೇಕಾನಂದರನ್ನು ತಮ್ಮ ಮೂಲಪುರುಷರೆಂಬಂತೆ ಪರಿಗಣಿಸುತ್ತಾರೆ. ಹಾಗಾಗಿ ಬಹುಶಃ ಇಂದಿನ ಸೆಕ್ಯುಲರ್ ಚಿಂತಕರು ಅವರು ಜಾತಿಯ ಕುರಿತು ಮಾಡಿದ ಟೀಕೆಗಳನ್ನು ಪ್ರಧಾನವಾಗಿ ಇಟ್ಟು ಅವರ ವಿಚಾರಗಳನ್ನು ಪ್ರಸ್ತುತ ಪಡಿಸುವ ಉಪಾಯಗಳನ್ನು ಬೆಳೆಸಿರಲೂ ಬಹುದು. ಒಟ್ಟಿನಲ್ಲಿ ವಿವೇಕಾನಂದರ ಸೆಕ್ಯುಲರೀಕರಣದ ಒಂದು ಭಾಗವಾಗಿ ಈ ಅಭಿಪ್ರಾಯವು ಜನಪ್ರಿಯತೆಯನ್ನು ಪಡೆದಿದೆ.
ಕರ್ನಾಟಕದಲ್ಲಿ ಕುವೆಂಪು ಅವರು ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾಗಿದ್ದರು ಹಾಗೂ ಅವರ ಮೂಲಕ ವಿವೇಕಾನಂದರ ವಿಚಾರಗಳು ಶೂದ್ರ ಚಳವಳಿಯ ಒಂದು ಭಾಗವಾಗಿ ಕನ್ನಡ ಚಿಂತಕರಿಗೆ ಪರಿಚಯಿಸಲ್ಪಟ್ಟಿವೆ. ಹಿಂದುತ್ವದವರು ಬ್ರಾಹ್ಮಣರ ವಕ್ತಾರರು ಎಂದು ಈ ಚಿಂತಕರು ಪರಿಗಣಿಸಿರುವುದರಿಂದ ವಿವೇಕಾನಂದರ ಮೂಲ ಆಶಯವನ್ನು ಇವರು ತಿರುಚಬಹುದೆಂಬ ಆತಂಕ ಕೂಡ ಈ ಚಿಂತಕರಲ್ಲಿದೆ. ಹಾಗಾಗಿ ಕುವೆಂಪು ಅವರು ಹಿಂದೂ ಪರಂಪರೆಯ ಶ್ರೇಷ್ಟತೆಯ ಕುರಿತು ವ್ಯಕ್ತಪಡಿಸುವ ಚಿಂತನೆಗಳನ್ನು ಅವರ ಆರಾಧಕರು ಈಗ ಮೂಲೆಗೆ ಹಾಕಿದಂತಿದೆ. ಅವರನ್ನೂ ಕೂಡ ಇಂದಿನ ಪ್ರಗತಿಪರರ ಆಕಾರಕ್ಕೆ ಒಗ್ಗಿಸುವ ಪ್ರಯತ್ನವೇ ಎದ್ದುಕಾಣುವಂತಿದೆ. ಒಟ್ಟಿನಲ್ಲಿ ವಿವೇಕಾನಂದರು ಜಾತಿವಿರೋಧಿ ಎಂಬ ಚಿತ್ರಣವನ್ನು ತಮಗೆ ಬೇಕಾದಂತೆ ಕಲ್ಪಿಸಿಕೊಳ್ಳಲಾಗುತ್ತಿದೆ. ವಿವೇಕಾನಂದರು ಜಾತಿಯ ಕುರಿತು ಏನು ಹೇಳುತ್ತಾರೆ?