ವಿವೇಕಾನಂದರ ವಿಚಾರಗಳ ಐತಿಹಾಸಿಕ ಸಂದರ್ಭ
– ಪ್ರೊ.ರಾಜಾರಾಮ ಹೆಗಡೆ
ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ
೧.ವಿವೇಕಾನಂದರ ವಿಚಾರಗಳು: ಜಾತಿ ಪದ್ಧತಿ
೨.ವಿವೇಕಾನಂದರ ವಿಚಾರಗಳು: ಸಮಾಜ ಸುಧಾರಣೆ
ಕಳೆದೆರಡು ಅಂಕಣಗಳಲ್ಲಿ ವಿವೇಕಾನಂದರು ಸಮಾಜ ಸುಧಾರಣೆಯ ಕುರಿತು ಹಾಗೂ ಜಾತಿಯ ಕುರಿತು ಏನು ಹೇಳುತ್ತಾರೆ ಎಂಬುದನ್ನು ನೋಡಿದೆವು. ಪ್ರಗತಿಪರರು ಜಾತಿ ಪದ್ಧತಿಯ ಹಾಗೂ ಬ್ರಾಹ್ಮಣರ ಕುರಿತ ಅವರ ಟೀಕೆಗಳು, ಕ್ರೈಸ್ತ, ಇಸ್ಲಾಂ ಮತಗಳ ಕುರಿತು ಹೇಳಿದ ಸಕಾರಾತ್ಮಕ ಮಾತುಗಳನ್ನಷ್ಟೇ ಎತ್ತಿ ಹೇಳಿದ್ದಾರೆ. ಮತ್ತೊಂದು ಥರದ ಹೇಳಿಕೆಗಳನ್ನು ನಾನು ಪ್ರಸ್ತುತ ಪಡಿಸಿದ್ದೇನೆ. ಅಲ್ಲಿ ಅವರು ಸಮಾಜ ಸುಧಾರಕರನ್ನು ಟೀಕಿಸುತ್ತಾರೆ ಹಾಗೂ ಜಾತಿ, ಬ್ರಾಹ್ಮಣ ಇತ್ಯಾದಿಗಳ ಕುರಿತು ತುಂಬಾ ಹೆಮ್ಮೆಯಿಂದ ಮಾತನಾಡುತ್ತಾರೆ. ಈ ಎರಡೂ ರೀತಿಯ ಹೇಳಿಕೆಗಳನ್ನು ಯಾವ ರೀತಿ ಜೋಡಿಸಿಕೊಂಡರೆ ವಿವೇಕಾನಂದರು ಒಟ್ಟಾರೆಯಾಗಿ ಏನು ಹೇಳುತ್ತಿದ್ದಾರೆ ಎಂಬುದು ಅರ್ಥವಾಗಬಹುದು? ಅದಕ್ಕೆ ಅವರ ಕಾಲಕ್ಕೆ ಹೋಗಬೇಕು. ವಿವೇಕಾನಂದರು ತಮ್ಮ ಕಾಲದ ಯಾವ ಸವಾಲುಗಳಿಗೆ ಉತ್ತರಿಸುತ್ತಿದ್ದರು?
ವಿವೇಕಾನಂದರು ರಾಮಕೃಷ್ಣರ ಶಿಷ್ಯರಾಗುವ ವೇಳೆಗಾಗಲೇ ಬಂಗಾಲದಲ್ಲಿ ಆಧುನಿಕ ವಿಚಾರಧಾರೆಯು ವಿದ್ಯಾವಂತರಲ್ಲಿ ತನ್ನ ಪ್ರಭಾವವನ್ನು ಸಾಕಷ್ಟು ಬೀರಿತ್ತು. ಪಾಶ್ಚಾತ್ಯ ಶಿಕ್ಷಣವೆಂದರೆ ಈ ಪ್ರಪಂಚದ ಕುರಿತು ವೈಜ್ಞಾನಿಕ ಚಿತ್ರಣಗಳನ್ನು ತಿಳಿದುಕೊಳ್ಳುವುದು.ಈ ಚಿತ್ರಣಗಳನ್ನಾಧರಿಸಿ ಭಾರತದಲ್ಲಿ ಸಮಾಜ ಸುಧಾರಣೆಗಳು ಮೊದಲುಗೊಂಡವು. ಭಾರತೀಯ ಸಮಾಜದಲ್ಲಿ ಉಳಿದೆಲ್ಲ ಸಮಾಜಗಳಲ್ಲಿ ಇರುವಂತೆ ದೌರ್ಜನ್ಯಗಳು, ಕ್ರೂರ ಆಚರಣೆಗಳು ಎಲ್ಲ ಇದ್ದವು. ಆದರೆ ಬ್ರಿಟಿಷರು ಭಾರತದಲ್ಲಿ ಇರುವ ಕ್ರೂರ ಆಚರಣೆಗಳೆಲ್ಲವೂ ಹಿಂದೂಯಿಸಂ ಎಂಬ ಭ್ರಷ್ಟ ರಿಲಿಜನ್ನಿನ ಲಕ್ಷಣಗಳು, ಇವನ್ನೆಲ್ಲ ಬ್ರಾಹ್ಮಣರು ಬಹು ಹಿಂದೆಯೇ ಸ್ವಲಾಭಕ್ಕಾಗಿ ಹುಟ್ಟುಹಾಕಿದ್ದಾರೆ.ಈ ಆಚರಣೆಗಳೆಲ್ಲವೂ ಸ್ವಾರ್ಥದ ಮೌಢ್ಯದ ಅನೈತಿಕ ತಳಹದಿಯ ಮೇಲೆ ನಿಂತಿವೆ, ಇತ್ಯಾದಿಯಾಗಿ ಅದಕ್ಕೊಂದು ಕಾರಣವನ್ನು ನೀಡಿದರು.ಹಾಗಾಗಿ ಇಂಥ ಕ್ರೂರ ಆಚರಣೆಗಳನ್ನು ನಿಲ್ಲಿಸಬೇಕಾದರೆ ಈ ಸಮಾಜದ ತಳಹದಿಯನ್ನೇ ನಾಶಗೊಳಿಸಬೇಕು ಎಂಬ ಅಭಿಪ್ರಾಯವನ್ನು ವಿದ್ಯಾವಂತರಲ್ಲಿ ಹುಟ್ಟುಹಾಕಿದರು.ಅಂದರೆ ಭಾರತೀಯರ ರಿಲಿಜನ್ನೇ ಭ್ರಷ್ಟವಾಗಿದೆ, ಅಮಾನವೀಯವಾಗಿದೆ ಎಂಬುದು ಈ ವಿದ್ಯಾವಂತರ ಸಾಮಾನ್ಯ ಜ್ಞಾನವಾಯಿತು.