ಅಂದು “ಕೈ” ಗೆ ಜೈ ಎಂದ ಬುದ್ಧಿಜೀವಿಗಳು ಎಲ್ಲಿ ಅಡಗಿದ್ದಾರೆ?
– ರಾಕೇಶ್ ಶೆಟ್ಟಿ
“ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ನಮ್ಮ ಸಂಪೂರ್ಣ ಬೆಂಬಲವಿದೆ.ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳವಿದೆ.ಆದರೆ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಂವಿಧಾನಕ್ಕೆ ಬದ್ಧವಾಗಿ ಆಡಳಿತ ನಡೆಸುವ ಹಿನ್ನೆಲೆ ಆ ಪಕ್ಷಕ್ಕಿದೆ. ಇಂತಹ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯ ಅಭಿವೃದ್ಧಿ ಕಾಣಲು ಸಾಧ್ಯ.ಬಿಜೆಪಿಯ ದುರಾಡಳಿತ ಹಾಗೂ ನೈಸರ್ಗಿಕ ಸಂಪನ್ಮೂಲ ಲೂಟಿಗೆ ಬ್ರೇಕ್ ಹಾಕಿ ಕೋಮುವಾದಿ ಶಕ್ತಿಗಳ ನಿರ್ಮೂಲನೆಗೆ ಪರ್ಯಾಯವಾಗಿ ಉಳಿದಿರುವ ಶಕ್ತಿ ಕಾಂಗ್ರೆಸ್ ಮಾತ್ರ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಒಕ್ಕೊರಲ ನಿರ್ಧಾರ ಕೈಗೊಂಡಿದ್ದೇವೆ … “ ಎಂಬಂತಹ ಸಾಲುಗಳಿದ್ದ ಪತ್ರವೊಂದನ್ನು ಕಳೆದ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯ ಸಮಯದಲ್ಲಿ ಬರೆದು ದಿ.ಯು.ಆರ್. ಅನಂತ ಮೂರ್ತಿ, ಕೆ.ಮರುಳಸಿದ್ದಪ್ಪ ಪ್ರೊ.ಎಸ್.ಜಿ. ಸಿದ್ಧರಾಮಯ್ಯ, ಡಾ.ಬಂಜಗೆರೆ ಜಯಪ್ರಕಾಶ್,ಮಾವಳ್ಳಿಶಂಕರ್,ಪ್ರೊ.ರವಿವರ್ಮಕುಮಾರ್ ಮುಂತಾದ ಕೆಲ ಸಾಹಿತಿಗಳು ಹಾಗೂ ಬುದ್ಧಿಜೀವಿಗಳು ಕಾಂಗ್ರೆಸ್ಸಿಗೆ ಬೆಂಬಲ ಸೂಚಿಸಿದ್ದವರು.’ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡುವ ನಿಟ್ಟಿನಲ್ಲಿ ಯು.ಆರ್.ಅನಂತಮೂರ್ತಿ ಸೇರಿದಂತೆ ಕೆಲ ಸಾಹಿತಿಗಳು ಕಾಂಗ್ರೆಸ್ ಬೆಂಬಲಿಸಿದ್ದಾರೆ.ಇದಕ್ಕೆನನ್ನ ಸಹಮತವಿದೆ’ ಎಂದು ಹಿರಿಯ ಸಾಹಿತಿ ಚಂಪಾ ಅವರೂ ಹೇಳಿದ್ದರು.
ಆ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬಂದು,ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದರು.ಸಿದ್ದರಾಮಯ್ಯನವರು ಅಧಿಕಾರ ವಹಿಸಿಕೊಂಡ ನಂತರ,ಅಂದು ಬೆಂಬಲ ಪತ್ರದಲ್ಲಿ ಹೇಳಿದ್ದಂತೆ “ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಂವಿಧಾನಕ್ಕೆ ಬದ್ಧವಾಗಿ ಆಡಳಿತವನ್ನು ಕಾಂಗ್ರೆಸ್ಸ್ ಸರ್ಕಾರ ನಡೆಸಿದೆಯಾ ಮಾನ್ಯ ಸಾಹಿತಿಗಳೇ-ಬುದ್ಧಿಜೀವಿಗಳೇ? ಬಹಳಷ್ಟು ಹಿಂದೆಯೇನು ಹೋಗುವುದು ಬೇಡ.ರಾಜ್ಯದಲ್ಲಿ ಸದ್ಯಕ್ಕೆ ನಡೆಯುತ್ತಿರು ವಿದ್ಯಾಮಾನವನ್ನೇ ತೆಗೆದುಕೊಳ್ಳೋಣ.