ಸರ್ವಾಧಿಕಾರಿಗಳನ್ನೂ ಜನಶಕ್ತಿ ಮುಗಿಸಿಹಾಕಿದೆ, ನೆನಪಿರಲಿ!
– ರೋಹಿತ್ ಚಕ್ರತೀರ್ಥ
ಮಹಾಭಾರತದಲ್ಲಿ ಬರುವ ಪ್ರಸಂಗ ಇದು. ಭೀಷ್ಮರ ಸೇನಾಧಿಪತ್ಯವನ್ನು ಕೊನೆಗಾಣಿಸಿ ಅವರನ್ನು ಪಾಂಡವರು ಶರತಲ್ಪದಲ್ಲಿ ಮಲಗುವಂತೆ ಮಾಡಿದ ಮೇಲೆ, ದುರ್ಯೋಧನ, ದ್ರೋಣನಿಗೆ ಸೇನೆಯ ಅಧಿಪತ್ಯ ವಹಿಸುತ್ತಾನೆ. ದ್ರೋಣ ಆದದ್ದಾಗಲಿ, ದೊಡ್ಡ ಮಿಕವನ್ನೇ ಬಲೆಗೆ ಕೆಡವಬೇಕು ಎಂದು ಯೋಚಿಸಿ ಚಕ್ರವ್ಯೂಹದ ರಚನೆ ಮಾಡುತ್ತಾನೆ. ಈ ವ್ಯೂಹಕ್ಕೆ ಅರ್ಜುನನಲ್ಲದೆ ಮತ್ಯಾರೂ ಎಂಟೆದೆಯಿಂದ ನುಗ್ಗುವುದಿಲ್ಲ; ಅವನೊಮ್ಮೆ ಒಳಬಂದರೆ ಸಾಕು ಒಂದೆರಡು ದಿನದ ಮಟ್ಟಿಗೆ ಅವನನ್ನು ಓಡಾಡಿಸಿ ಸುಸ್ತುಹೊಡೆಸಬಹುದು ಎನ್ನುವುದು ದ್ರೋಣನ ಲೆಕ್ಕಾಚಾರ. ಆದರೆ, ಅರ್ಜುನ ಸಂಶಪ್ತಕರೊಂದಿಗೆ ಹೋರಾಡಲು ಹೋದದ್ದರಿಂದ ಅವನ ಮಗ ಅಭಿಮನ್ಯು ಈ ಚಕ್ರವ್ಯೂಹದೊಳಕ್ಕೆ ನುಗ್ಗುತ್ತಾನೆ. ಆಗ ಅವನಿಗಿನ್ನೂ ಹದಿನಾರರ ಹರೆಯ. ವ್ಯೂಹವನ್ನು ಭೇದಿಸುವುದು ಹೇಗೆಂದು ತಿಳಿದಿದೆಯೇ ಹೊರತು ಹೊರಬರುವ ತಂತ್ರ ಅವನ ಕೈಯಲ್ಲಿಲ್ಲ. ಆದರೂ ಒಂದು ಕೈ ನೋಡೇಬಿಡಬೇಕು ಎಂಬ ಭಂಡಧೈರ್ಯದಲ್ಲಿ ನುಗ್ಗಿದ ಕೂಸು ಅದು. ಚಕ್ರವ್ಯೂಹವನ್ನು ಹೊಕ್ಕಮೇಲೆಯೇ ಅವನಿಗೆ ನಿಜಸ್ಥಿತಿಯ ಅರಿವಾಗುವುದು. ವ್ಯೂಹದ ರಚನೆ ಹೇಗಿರುತ್ತದೆಂದರೆ, ಎಷ್ಟೇ ಹೊತ್ತು ಕಾದಾಡಿದರೂ ಆ ಸೈನಿಕರು ವೃತ್ತಾಕಾರದಲ್ಲಿ ಸುತ್ತುತ್ತಿರುವುದರಿಂದ ಯುದ್ಧ ನಿಲ್ಲುವ ಪ್ರಶ್ನೆಯೇ ಇಲ್ಲ! ಅಭಿಮನ್ಯು ಎಲ್ಲರನ್ನೂ ಕೊಂದು ಹೊರಬರುವ ಯೋಚನೆಯನ್ನು ಬಿಟ್ಟೇಬಿಡಬೇಕು!