ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪ-ರೇಖೆ? – ಭಾಗ 1
– ರೋಹಿತ್ ಚಕ್ರತೀರ್ಥ
ಗೋಪಾಲಕೃಷ್ಣ ಅಡಿಗರು ನನ್ನ ಮೆಚ್ಚಿನ ಕವಿ.ಲ್ಯಾಟಿನ್ ಜಗತ್ತಿಗೆ ನೆರೂಡ ಇದ್ದ ಹಾಗೆ, ಶಿಷ್ಟ ಅಮೆರಿಕಕ್ಕೆ ಎಲಿಯೆಟ್ ಇದ್ದ ಹಾಗೆ ಕನ್ನಡ ಜಗತ್ತಿಗೆ ಅಡಿಗರು. ಅವರನ್ನು ಕೇವಲ ಕನ್ನಡದ ನೆಲಕ್ಕೆ ಸೀಮಿತಗೊಳಿಸುವುದು ತಪ್ಪಾಗಬಹುದು. ಅಡಿಗರು ಇಂಗ್ಲೀಷಿನಲ್ಲಿ ಬರೆದಿದ್ದರೆ ಅಥವಾ ಅವರು ಬರೆದಿದ್ದನ್ನು ಅಷ್ಟೇ ಸಮರ್ಥವಾಗಿ ಇಂಗ್ಲೀಷಿಗೆ ಅನುವಾದಿಸುವುದು ಸಾಧ್ಯವಿದ್ದರೆ, ನಮಗೆ ಇನ್ನೊಂದು ನೊಬೆಲ್ ಅನಾಯಾಸವಾಗಿ ದೊರೆಯುತ್ತಿತ್ತು. ಅಡಿಗರ ಕಾವ್ಯಕೃಷಿಯ ಬಗ್ಗೆ ಗೊತ್ತಿಲ್ಲದ ಕನ್ನಡಿಗ ಸಿಗುವುದು ಅಪರೂಪ. ಅವರ ಹೆಸರು ತಿಳಿಯದವರು ಕೂಡ “ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು” ಎಂಬ ಹಾಡು ಕೇಳಿದರೆ, ಕೊರಳು ತುರಿಸಿಕೊಳ್ಳುವ ಬೆಕ್ಕಿನಂತೆ ಕಣ್ಣುಮುಚ್ಚಿ ಕಾವ್ಯಾರ್ಥವನ್ನು ಆನಂದಿಸುತ್ತಾರೆ. ನವ್ಯ ಎಂಬ ಒಂದು ಪಂಥವನ್ನೇ ಕನ್ನಡದಲ್ಲಿ ಸೃಷ್ಟಿಸಿದ, ಕಾವ್ಯಲೋಕದಲ್ಲಿ ಹೊಸದಾರಿ ಕೊರೆದ, ಒಂದು ಯುಗದ ಕಣ್ಣು ತೆರೆಸಿದ ಕವಿ ಎಂದು ಕರೆಸಿಕೊಂಡ ಅಡಿಗರು ಕನ್ನಡಿಗರಿಗೆ ಕೊಟ್ಟಿರುವ ಸಫಲ ಕವಿತೆಗಳ ಸಂಖ್ಯೆ ದೊಡ್ಡದು. ಕುಮಾರವ್ಯಾಸನನ್ನು ಓದಿಕೊಂಡರೆ ಹೇಗೋ ಹಾಗೆಯೇ ಅಡಿಗರನ್ನು ಓದಿಕೊಂಡರೂ ಶಬ್ದ ಮತ್ತು ಅರ್ಥಗಳ ದಾರಿದ್ರ್ಯ ಬರುವುದಿಲ್ಲ ಎಂದು ಧೈರ್ಯವಾಗಿ ಹೇಳಬಹುದು.
ಚೈತ್ರ ಮಾಸದ ಶುಕ್ಲಪಕ್ಷದ ಒಂಬತ್ತನೆ ದಿನ ನವಮಿ. ರಾಮನ ಬರ್ತ್‍ಡೇ. ರಾಮಾಯಣದ ನಾಯಕಮಣಿ, ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರನ ಬಗ್ಗೆ ಅಡಿಗರು ಒಂದು ಕವಿತೆ ಬರೆದಿದ್ದಾರೆ. ಉಡುಪಿಯ ರಥಬೀದಿಯ ಪರಿಸರದಲ್ಲಿ ಪ್ರತಿವರ್ಷದ ಬೇಸಗೆಯಲ್ಲಿ ನಡೆಯುವ ವಸಂತೋತ್ಸವದಲ್ಲೊಮ್ಮೆ ಅವರು ಈ ಕವನ ವಾಚಿಸಿದ್ದರಂತೆ. (ಪ್ರಾಸಂಗಿಕವಾಗಿ ಒಂದಷ್ಟು ಮಾತು: ಉಡುಪಿ ಮತ್ತು ಅಡಿಗರ ಸಂಬಂಧಕ್ಕೆ ಹಲವು ಕೊಂಡಿಗಳಿವೆ. ಅಡಿಗರು ಆಚಾರ್ಯ ಮಧ್ವರ ಮೇಲೆ “ಆನಂದತೀರ್ಥರಿಗೆ” ಎಂಬ ಕವಿತೆ ಬರೆದಿದ್ದಾರೆ. ಹಾಗೆಯೇ, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕ ಮತ್ತು ಪ್ರಿನ್ಸಿಪಾಲ್ ಆಗಿಯೂ ಕೆಲವರ್ಷ ಕೆಲಸ ಮಾಡಿದ್ದಾರೆ. ಅವರ “ಸುವರ್ಣಪುತ್ಥಳಿ” ಕವನಸಂಗ್ರಹಕ್ಕೆ ಉಡುಪಿಯ ಜಿ. ರಾಜಶೇಖರ ಮುನ್ನುಡಿ ಬರೆದರು)
ಶಿಕ್ಷಣ ಮತ್ತು ಧರ್ಮ: ಪರಸ್ಪರ ಪೂರಕ ಅಂಶಗಳು
– ಎಸ್.ಎನ್.ಭಾಸ್ಕರ್
ಶಿಕ್ಷಣದ ಮೂಲ ಉದ್ದೇಶ ವ್ಯಕ್ತಿಯ ಪರಿಪೂರ್ಣ ವಿಕಾಸ. ಸಂಸ್ಕಾರ, ತಿಳುವಳಿಕೆ, ಜ್ಞಾನ, ಕೌಶಲ್ಯ ಇವು ಶಿಕ್ಷಣದ ಮೂಲಭೂತ ಅಂಶಗಳು. ಉತ್ತಮ ಮಟ್ಟದ ಶಿಕ್ಷಣ ವ್ಯವಸ್ಥೆಯು ಈ ಎಲ್ಲಾ ಅಂಶಗಳಲ್ಲೂ ವ್ಯಕ್ತಿಯನ್ನು ಶಿಕ್ಷಿತನನ್ನಾಗಿಸುತ್ತದೆ. ಪ್ರಾರಂಭಿಕ ಹಂತದಿಂದಲೇ ಮಕ್ಕಳಿಗೆ ಈ ಎಲ್ಲಾ ಪ್ರಕಾರಗಳಲ್ಲಿ ಶಿಕ್ಷಣವನ್ನು ಒದಗಿಸುವುದು ಶೈಕ್ಷಣಿಕ ವ್ಯವಸ್ಥೆಯೊಂದರ ಆದ್ಯತೆ – ಯಾಗಬೇಕಾಗುತ್ತದೆ. ಆದರೆ ಇಂದಿನ ಪರಿಸ್ಥಿತಿ ಬಿನ್ನವಾಗಿದೆ. ಪಾಶ್ಚಾತ್ಯ ಕ್ರಮಗಳ, ವಿಧಿ-ವಿಧಾನಗಳ ಅನುಕರಣೆಯಲ್ಲಿ ನಾ ಮುಂದು ತಾ ಮುಂದು ಎಂದು ಶಿಕ್ಷಣ ಸಂಸ್ಥೆಗಳು ಪೈಪೋಟಿಗೆ ಬಿದ್ದಿವೆ. ಕೇವಲ ಆಂಗ್ಲ ಭಾಷೆಯ ಕಲಿಕೆಯಿಂದ ಮಕ್ಕಳು ಸುಶಿಕ್ಷಿತರಾಗುತ್ತಾರೆ ಎಂಬುದು ಬಹುತೇಕ ಪೋಷಕರ ಅನಿಸಿಕೆಯಾಗಿದೆ, ಇದನ್ನು ಮನಗಂಡ ಹಲವಾರು ಖಾಸಗಿ ಶಾಲೆಗಳು ಅಂಗ್ಲ ಭಾಷೆಯನ್ನು ಮಕ್ಕಳ ಮೇಲೆ ಹೇರುವುದರ ಮೂಲಕ ಜನಪ್ರಿಯವಾಗುತ್ತಿವೆ. ತನ್ನದೇ ಮಾತೃಭಾಷೆಯಲ್ಲಿ ಉನ್ನತ ಮಟ್ಟದ ಪ್ರೌಢಿಮೆ ಗಳಿಸದೇ ಇರುವ ವ್ಯಕ್ತಿಯ ಶಿಕ್ಷಣವು ಪರಿಪೂರ್ಣವಾಗುವುದಾದರೂ ಹೇಗೆ..? ಮೇಲೆ ತಿಳಿಸಿದ ನಾಲ್ಕೂ ಅಂಶಗಳೂ ಶಿಕ್ಷಣದ ಆಧಾರ ಸ್ಥಂಭಗಳಿದ್ದಂತೆ. ಯಾವುದೇ ಒಂದು ಸ್ಥಂಭ ಕುಸಿದರೂ ವ್ಯಕ್ತಿಯ ಕಲಿಕೆ, ಶಿಕ್ಷಣ ಪರಿಪೂರ್ಣತೆಯನ್ನು ಪಡೆಯುವುದಿಲ್ಲ. ಹಾಗೆಯೇ ನಮ್ಮ ಧರ್ಮ, ಸಂಸ್ಕೃತಿಯ ಬಗ್ಗೆ ಸೂಕ್ತ ಅರಿವು ಅಧ್ಯಯನವಿಲ್ಲದೇ ಜ್ಞಾನಾರ್ಜನೆ ವಿಕಾಸವಾಗುವುದಿಲ್ಲ, ನಮ್ಮ ಸಂಸ್ಕೃತಿಯ ಹಿನ್ನೆಲೆ ವ್ಯಾಪ್ತಿಗಳನ್ನು ಅರಿಯದೆಯೇ ಇದ್ದರೆ ಹೇಗೆ ತಾನೆ ಕಲಿಕೆ ಪೂರ್ಣತೆಯನ್ನು ಮುಟ್ಟಲು ಸಾಧ್ಯ..? ನಮ್ಮ ಸಂಸ್ಕೃತಿಯು ನಮ್ಮ ಬೇರುಗಳಿದ್ದ ಹಾಗೆ ಮೂಡುವ ಪ್ರತೀ ಚಿಗುರಿಗೂ ಸತ್ವ ಬೇರುಗಳಿಂದಲೇ ಒದಗ ಬೇಕಾಗುತ್ತದೆ. ನಮ್ಮದೇ ಬೇರುಗಳ ಬಗ್ಗೆ ನಮ್ಮ ಮಕ್ಕಳು ಶಿಕ್ಷಿತರಾಗದಿದ್ದರೆ ಅವರ ಜ್ಞಾನ ಅರ್ಧ ಬೆಂದ ಮಡಿಕೆಯಾಗುವುದರಲ್ಲಿ ಸಂಶಯವೇ ಇಲ್ಲ.