ನಮಗೆ ಪೋಲಿಸರ ಮೇಲೆ ನಂಬಿಕೆಯಿದೆ; ನಿಮ್ಮ ಸರ್ಕಾರದ ಮೇಲಿಲ್ಲ ಸಿ.ಎಂ.ಸಿದ್ಧರಾಮಯ್ಯನವರೇ
– ರಾಕೇಶ್ ಶೆಟ್ಟಿ
ಸದನದಲ್ಲಿ ತನ್ನ ಹಟಮಾರಿ ಧೋರಣೆಯನ್ನು ಬಿಡದಿದ್ದ ಸರ್ಕಾರ,ನಿನ್ನೆಯ ಸಂಪುಟ ಸಭೆಯ ನಂತರವಾದರೂ ಬುದ್ಧಿ ಕಲಿತೀತು ಎಂಬ ಸಣ್ಣದೊಂದು ಆಸೆಯಿತ್ತು. ಆದರೆ,ಸಂಪುಟ ಸಭೆ ಮುಗಿದ ನಂತರ ಗೃಹ ಸಚಿವ ಜಾರ್ಜ್ ಸಾಹೇಬರು “ಸಿಬಿಐ ತನಿಖೆಯಿಲ್ಲ” ಎಂಬ ತಮ್ಮ ಹಳೇ ರಾಗವನ್ನೇ ಹಾಡಿದ್ದರು.ಇವತ್ತು ಸಂಜೆಯ ವೇಳೆಗೆ ಸಿಬಿಐ ತನಿಖೆಗೆ ಸೋಮವಾರ ಒಪ್ಪಿಸುತ್ತಾರೆ ಎಂಬ ಸುದ್ದಿಯೇನೋ ಹರಿದಾಡುತ್ತಿದೆ.ದಕ್ಷ ಯುವ ಅಧಿಕಾರಿಯ ಅಸಹಜ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸಿ ಎಂಬುದು ಕೇವಲ ವಿರೋಧ ಪಕ್ಷಗಳ ಬೇಡಿಕೆಯಲ್ಲ ಮಿ.ಸಿ.ಎಂ ಸಿದ್ದರಾಮಯ್ಯನವರೇ. ಈ ಪ್ರಕರಣ ಬೆಳಕಿಗೆ ಬಂದ ತಕ್ಷಣ ಡಿ.ಕೆ ರವಿಯವರ ಬಗ್ಗೆ ತಿಳಿದುಕೊಂಡಿದ್ದ ಜನ ಸಾಮಾನ್ಯರು ಸಹ ಅದೇ ಬೇಡಿಕೆಯನ್ನಿಟ್ಟಿದ್ದರು. ಆದರೆ,ಇನ್ನು ಐದು ವರ್ಷ ಸರ್ಕಾರವನ್ನು ಯಾರೂ ಏನು ಮಾಡಲಾರರು ಎಂಬ ಧೋರಣೆಯಿರಬೇಕು ನಿಮ್ಮದು. ಪ್ರಜಾಪ್ರಭುತ್ವವೆಂದರೆ, ಪ್ರಭುಗಳು ಹೇಳಿದಂತೆ ಪ್ರಜೆಗಳು ಕೇಳಬೇಕು ಎಂಬುದು ಬಹುಷಃ ನಿಮ್ಮ ನಿಲುವಾಗಿರಬೇಕು.ಇಲ್ಲವಾಗಿದ್ದರೆ ನೀವು ಇಡೀ ರಾಜ್ಯದ ಜನತೆಯ ಬೇಡಿಕೆಯನ್ನು ಹೀಗೆ ಧಿಕ್ಕರಿಸುತ್ತಿರಲಿಲ್ಲ.ನಿಮಗೆ ಮತ್ತು ನಿಮ್ಮ ಪಕ್ಷಕ್ಕೇ ಮತ ನೀಡಿದ “ಪ್ರಜೆ” ಸೋತಿದ್ದಾನೆ ಸಿದ್ದರಾಮಯ್ಯನವರೇ.ಇನ್ನು ಮುಂದೆ ದಯವಿಟ್ಟು ಪ್ರಜಾಪ್ರಭುತ್ವದ ಬಗ್ಗೆ ನಮಗೆ ಲೆಕ್ಚರ್ ಮಾಡಲು ಬರಬೇಡಿ.
ಸಿಬಿಐ ತನಿಖೆಗೊಪ್ಪಿಸಿ ಎಂದ ತಕ್ಷಣವೇ,”ನಮ್ಮ ರಾಜ್ಯದ ಪೋಲಿಸರ ಶಕ್ತಿಯ ಬಗ್ಗೆ ಅನುಮಾನವೇ? ರಾಜ್ಯ ಪೋಲಿಸರ ಮೇಲೆ ನಂಬಿಕೆಯಿಡಿ” ಎಂದೆಲ್ಲಾ ಸಿನೆಮಾ ಡೈಲಾಗ್ ಹೇಳಬೇಡಿ ಮಿಸ್ಟರ್ ಸಿ.ಎಂ.ಸಿದ್ಧರಾಮಯ್ಯನವರೇ.ನಮಗೆ ಪೋಲಿಸರ ಮೇಲೆ ನಂಬಿಕೆಯಿದೆ; ನಿಮ್ಮ ಸರ್ಕಾರದ ಮೇಲೆ ನಂಬಿಕೆಯಿಲ್ಲ.ಅಷ್ಟಕ್ಕೂ ನಿಮ್ಮ ಮೇಲೆ ನಿಮ್ಮ ಸರ್ಕಾರದ ಮೇಲೆ ನಾವು ನಂಬಿಕೆಯಿಡುವುದಾದರೂ ಹೇಗೆ ಹೇಳಿ? ಡಿ.ಕೆ ರವಿಯಂತ ದಕ್ಷ ಅಧಿಕಾರಿಗಳಿಗೆ ಮಾತ್ರ ನಿಮ್ಮ ಘನ ಸರ್ಕಾರದಲ್ಲಿ ತೊಂದರೆಗಳಾಗಿಲ್ಲ.ಆ ಪಟ್ಟಿಗೆ ಸಾಲು ಸಾಲು ಅಧಿಕಾರಿಗಳು ಸೇರಿಕೊಳ್ಳುತ್ತಾರೆ.
ಮತ್ತಷ್ಟು ಓದು
ಈ ಸಾವು ನಿಮ್ಮಲ್ಲಿ ವಿಷಾದ ಹುಟ್ಟಿಸಬೇಕಿತ್ತು
– ರೋಹಿತ್ ಚಕ್ರತೀರ್ಥ
ಬಹಳ ಹಿಂದೆ ಓದಿದ ಸಾಲು ಅದು. ಒಬ್ಬಳು ಹೆಣ್ಣಿನ ಹತ್ಯೆಯಾಗಿದೆ. ಅದನ್ನು ಯಾರ್ಯಾರು ಯಾವ್ಯಾವ ಬಗೆಯಲ್ಲಿ ಬಳಸಿಕೊಳ್ಳಬಹುದು ಎನ್ನುವ ಬಗ್ಗೆ ಒಬ್ಬೊಬ್ಬರೂ ತಮ್ಮ ಮೂಗಿನ ನೇರಕ್ಕೆ ಸಲಹೆಗಳನ್ನು ಕೊಡುತ್ತಾ ಹೋಗುತ್ತಾರೆ. ಅವೆಲ್ಲ ಮಾತುಗಳು ನಿಂತ ಮೇಲೆ ರಾಜ್ಯದ ಮುಖ್ಯಮಂತ್ರಿ – ಇಷ್ಟೆಲ್ಲಾ ಹೇಳಿದಿರಿ, ಆದರೆ ಆಕೆಯ ಸಾವು ನಮ್ಮೊಳಗೆ ವಿಷಾದ ಹುಟ್ಟಿಸಬೇಕಾಗಿತ್ತು ಅಂತ ನಿಮಗ್ಯಾರಿಗೂ ಅನ್ನಿಸಲೇ ಇಲ್ಲವಲ್ಲ – ಎಂದು ಮರುಗುತ್ತಾನೆ. ಅವಸ್ಥೆ ಕಾದಂಬರಿಯಲ್ಲಿ ಬರುವ ಆ ಭಾಗವನ್ನು ಓದುವಾಗ ನನಗೇ ತಿಳಿಯದಂತೆ ಕಣ್ಣೀರಾಗಿಬಿಟ್ಟಿದ್ದೆ. ಹೌದಲ್ಲ, ಒಂದು ಸಾವು ನಮ್ಮನ್ನು ಕಾಡಬೇಕು; ನಮ್ಮ ಅಂತರಾತ್ಮವನ್ನು ಕಲಕಬೇಕು; ಸುತ್ತ ಗವ್ವೆನ್ನುವ ಕತ್ತಲೆ ಮುತ್ತಿದಾಗ ಒಂಟಿ ನಿಂತ ಮೇಣದಬತ್ತಿ ಸದ್ದಿಲ್ಲದೆ ಕರಗಿಹೋದಂತೆ ನಾವೂ ನಿಂತಲ್ಲೇ ಕಲ್ಲಾಗಬೇಕು, ಕರಗಬೇಕು.
ಮತ್ತಷ್ಟು ಓದು
ಒಡೆಯನ ನಿಷ್ಠ ‘ಬ್ರೂನಿ’ಯ ಸ್ವಗತ
– ಚಕ್ರವರ್ತಿ ಸೂಲಿಬೆಲೆ
ಮಾನ್ಯ ಮುಖ್ಯಮಂತ್ರಿಗಳಿಗೆ ನಮಸ್ಕಾರ.
ನನ್ನ ಯಜಮಾನನ ಸಾವಿಗೆ ನಾಲ್ಕು ದಿನ ಕಳೆದೇ ಹೋಯಿತು. ಮೊದಲ ದಿನದಿಂದಲೂ ಇದನ್ನು ಆತ್ಮಹತ್ಯೆಯೆಂದೇ ಸಾಬೀತು ಪಡಿಸಲು ಹೆಣಗಾಡುತ್ತಿದ್ದ ನಿಮಗೂ-ನಿಮ್ಮ ವ್ಯವಸ್ಥೆಗೂ ನಾಲ್ಕು ದಿನವಾದರೇನು? ನಲ್ವತ್ತು ದಿನವಾದರೇನು? ನನಗಿರುವ ನಿಯತ್ತಿನ ಹತ್ತು ಪರ್ಸೆಂಟು ನಿಮ್ಮ ವ್ಯವಸ್ಥೆಗೆ ಇದ್ದಿದ್ದರೆ ಇವತ್ತು ನಮ್ಮ ಯಜಮಾನರು ಸಾಯುವ ಸ್ಥಿತಿ ಬರುತ್ತಿರಲಿಲ್ಲ.
ನಮ್ಮ ಮನೆಗೆ ಬಂದಾಗಲೆಲ್ಲ ಅವರು ಮೊದಲು ನನ್ನತ್ತಲೇ ಬರಬೇಕಿತ್ತು. ಪ್ರೀತಿಯಿಂದ ನೇವರಿಸಿ ನನ್ನೊಡನೆ ಹತ್ತು ನಿಮಿಷ ಆಡಿದ ಮೇಲೆಯೇ ಮನೆಯೊಳಗೆ ಹೋಗುತ್ತಿದ್ದರು. ಅವರು ಮುಟ್ಟುವಾಗ,ಮುದ್ದಿಸುವಾಗ ಅವರೊಬ್ಬ ದೊಡ್ಡ ಅಧಿಕಾರಿ ಅಂತ ನನಗೆಂದೂ ಅನ್ನಿಸಲೇ ಇಲ್ಲ. ಕುಸುಮಕ್ಕ ಆಗಾಗ ದೊಡ್ಡ ಯಜಮಾನರ ಜೊತೆಗೆ ಸಾಹೇಬರ ಕುರಿತಂತೆ ಮಾತನಾಡುವುದನ್ನು ಕೇಳಿ ರೋಮಾಂಚನವಾಗುತ್ತಿದ್ದೆ. ನಿಷ್ಠೆಗೆ ಇನ್ನೊಂದು ಹೆಸರು ಅಂತ ನನಗೆ ಹೇಳುತ್ತಾರೆ ಅನ್ನೋ ಧಿಮಾಕು ನನಗಿತ್ತು. ಆದರೆ ರಾಷ್ಟ್ರನಿಷ್ಠೆಗೆ ನಮ್ಮ ಯಜಮಾನರೇ ನಿಜವಾದ ಸಂಕೇತ ಎನ್ನುವುದು ನನಗೆ ಖಾತ್ರಿಯಾಗಿತ್ತು. ಥೂ! ಬಿಡಿ ವೋಟಿಗಾಗಿ ದೇಶವನ್ನೂ ಮಾರಿಬಿಡುವವರಿಗೆ ರಾಷ್ಟ್ರನಿಷ್ಠೆಯೆಂಬುದೆಲ್ಲ ಹೇಗೆ ಅರ್ಥವಾಗಬೇಕು.
ಮತ್ತಷ್ಟು ಓದು