ಹಿಂದೂ ಸಂಸ್ಕೃತಿಯ ಕುರಿತು ವಿವೇಕಾನಂದರ ವಿಚಾರಗಳು
– ಪ್ರೊ.ರಾಜಾರಾಮ ಹೆಗಡೆ,
ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ
೧.ವಿವೇಕಾನಂದರ ವಿಚಾರಗಳು: ಜಾತಿ ಪದ್ಧತಿ
೨.ವಿವೇಕಾನಂದರ ವಿಚಾರಗಳು: ಸಮಾಜ ಸುಧಾರಣೆ
೩.ವಿವೇಕಾನಂದರ ವಿಚಾರಗಳ ಐತಿಹಾಸಿಕ ಸಂದರ್ಭ
ವಿವೇಕಾನಂದರ ಗುರಿಯನ್ನು ಒಂದೇ ಸಾಲಿನಲ್ಲಿ ಹೇಳಬಹುದಾದರೆ ‘ಹಿಂದೂ ಸಂಸ್ಕೃತಿಯ ಉದಾತ್ತ ಧ್ಯೇಯಗಳ ಕುರಿತು ಜಾಗೃತಿ ಮೂಡಿಸುವುದು’ ಎನ್ನಬಹುದು. ಆದರೆ ಈ ಒಂದು ಸಾಲೇ ನಮಗಿಂದು ಅರ್ಥವಾಗದ ಸ್ಥಿತಿಗೆ ಬಂದಿದ್ದೇವೆ ಎಂಬುದೊಂದು ವಿಪರ್ಯಾಸ. ಅದಕ್ಕೆ ಕಾರಣ ಕಳೆದ ನೂರು ವರ್ಷಗಳಲ್ಲಿ ಭಾರತೀಯ ರಾಜಕೀಯದಲ್ಲಿ ನಡೆದಿರುವ ಬೆಳವಣಿಗೆಗಳು. ಹಿಂದೂ ಎಂಬ ಶಬ್ದವನ್ನು ಇಂದು ನಿರ್ವಿಕಾರವಾಗಿ, ವಸ್ತುನಿಷ್ಠವಾಗಿ ನೋಡುವುದೇ ನಮಗೆ ಸಾಧ್ಯವಿಲ್ಲದಂತಾಗಿದೆ. ಒಂದೆಡೆ ಹಿಂದುತ್ವದ ರಾಜಕೀಯದಿಂದಾಗಿ ಅದನ್ನು ಭಾವನಾತ್ಮಕವಾಗಿ ಕ್ರೈಸ್ತ, ಇಸ್ಲಾಂ ಎಂಬ ಪ್ರಭೇದಗಳಿಗೆ ಪ್ರತಿಯಾಗಿ ನಮ್ಮೊಂದು ಅಹಂ ಎಂಬಂತೇ ನೋಡುವುದನ್ನು ಕಲಿತಿದ್ದೇವೆ,ಅಥವಾ ಪ್ರಗತಿಪರ ಚಳವಳಿಗಳ ರಾಜಕೀಯದಿಂದಾಗಿ ಅದಕ್ಕೆ ಇಲ್ಲದ ಹಲ್ಲು ಉಗುರುಗಳನ್ನು ಆರೋಪಿಸಿ ಅದರ ಕುರಿತು ಸಂದೇಹ ಹಾಗೂ ಭಯಗಳ ಮೂಲಕ ಪ್ರತಿಕ್ರಿಯಿಸುವುದನ್ನು ಕಲಿತಿದ್ದೇವೆ. ಎರಡೂ ಪಕ್ಷಗಳೂ ಈ ಶಬ್ದಕ್ಕೆ ನಿರ್ದಿಷ್ಟ ರಾಜಕೀಯ ಅರ್ಥಗಳನ್ನು ರೂಢಿಸಿಬಿಟ್ಟಿವೆ. ವಿವೇಕಾನಂದರ ಕುರಿತು ನಮ್ಮ ತಲೆಮಾರಿನವರ ಪ್ರತಿಕ್ರಿಯೆಗಳು ಈ ಅರ್ಥಗಳಿಂದ ಪ್ರಭಾವಿತವಾಗಿವೆ ಎಂಬುದು ಸ್ಪಷ್ಟ.