ಬಹುಶಃ ನನಗೇ ಈ ಶೋಷಣೆ,ಸಮಾನತೆ,ಸಹಪಂಕ್ತಿ ಇವೆಲ್ಲಾ ಅರ್ಥವಾಗೊಲ್ಲ
– ರಾಘವೇಂದ್ರ ಸುಬ್ರಹ್ಮಣ್ಯ,ಶೃಂಗೇರಿ
ಯಾಕಂದ್ರೆ ನಮ್ಮೂರಲ್ಲಿ ದೇವಸ್ಥಾನಕ್ಕೆ ಒಳಗೆ ಬಿಡೋದ್ರ ಬಗ್ಗೆ ಗಲಾಟೆಯೇ ಇಲ್ಲ. ಶೃಂಗೇರಿ ಅಂತಲ್ಲ, ಸುತ್ತ ಮುತ್ತಲಿನ ಯಾವೂರಿನಲ್ಲೂ ‘ಏಯ್ ಹೊರಗೆ ಹೋಗೋ, ದೇವಸ್ಥಾನದೊಳಗೆ ನೀನು ಬರೋ ಹಾಗಿಲ್ಲ’ ಅನ್ನಲ್ಲ. ಅಲ್ಲಿ ಜನರನ್ನ ಹೊರಗಿಡೋದು ಬಿಡಿ, ಉಲ್ಟಾ, ಕೆಲವಷ್ಟು ಕೆಲಸಗಳಿಗೆ ಕೆಲಜನರು ಬರದಿದ್ರೆ ಮುಖ್ಯ ಕೆಲಸಗಳೇ ನಡೀತಾ ಇರ್ಲಿಲ್ಲ. ಉದಾಹರಣೆಗೆ, ಭೋವಿ ಜನಾಂಗದ ಜನರು ಬಂದು ಪಲ್ಲಕ್ಕಿ ಹೊರ್ಲಿಲ್ಲ ಅಂದ್ರೆ, ಸಾರದಬಾಗಿಲಿನಿಂದ ಜನ ಬಂದು ದೀಪ, ದೀವಟಿಗೆ, ಚಾಮರ ಹಿಡೀಲಿಲ್ಲ ಅಂದ್ರೆ ನವರಾತ್ರಿಯ ಅಡ್ಡಪಲ್ಲಕ್ಕಿಯ ಉತ್ಸವವೇ ನಡಿತಾ ಇರ್ಲಿಲ್ಲ. ಅವತ್ತಿನ ಮಟ್ಟಿಗೆ ನಾನಂತೂ ಅದನ್ನ ಶೋಷಣೆ ಅಂತಾ ಅಂದ್ಕೊಳ್ಳಿಲ್ಲ. ಉಲ್ಟಾ ಅದು ನಮ್ಮ ಐಡೆಂಟಿಟಿಯಾಗಿತ್ತು. ಇವತ್ತಿನ ಹುಡುಗ್ರು ಏನಂದ್ಕೊಳ್ತಾರೋ ಗೊತ್ತಿಲ್ಲಪ್ಪ. ಶೃಂಗೇರಿಯಲ್ಲಂತೂ ಬುರ್ಖಾ ಹಾಕಿಕೊಂಡೇ ಕೆಲ ಹೆಣ್ಣುಮಕ್ಕಳು ದೇವಸ್ಥಾನದಲ್ಲಿರೋ ಮೀನುಗಳಿಗೆ ಮಂಡಕ್ಕಿ ತಿನ್ಸೋಕೆ ಬಂದಿರೋದನ್ನ ನೋಡಿದ್ದೇನೆ. ದೇವಸ್ಥಾನವೆಂದರೆ ನಾಲ್ಕು ಜನ ಸೇರೋ ಜಾಗ ಅಂದುಕೊಂಡು ಬೆಳೆದ ನನಗೆ ಶೋಷಣೆಯ ಆಂಗಲ್ಲೇ ಹೊಳೆಯಲಿಲ್ಲ. ಅದೂ ಅಲ್ದೆ ‘ತಿಂಗಳ ಆ ದಿನಗಳಲ್ಲಿ’ ದೇವಸ್ಥಾನದೊಳಗೆ ಹೋಗದ ನನ್ನ ಅತ್ತೆಯಂದಿರು, ಉತ್ಸವ ಮೂರ್ತಿ ಹೊರಗೆ ಬಂದಾಗ ಕೈಮುಗಿದು ‘ನೋಡು ನಾವು ಒಳಗೆ ಹೋಗದಿದ್ರೇನಂತೆ, ಶಾರದಮ್ಮನೇ ಹೊರಗೆ ಬಂದು ನಮಗೆ ದರ್ಶನ ಕೊಟ್ಲು’ ಅಂತಾ ಹೇಳಿದ್ದು ನನಗೆ ತಮಾಷೆ ಎನ್ನಿಸಲೇ ಇಲ್ಲ. ಅವೊಂತರಾ pradigm shift ಮಾಡುವಂತಾ ಮಾತುಗಳಾಗಿಬಿಟ್ಟವು. ಆದರೂ ಕೆಲವರು ‘ನಮ್ಮನ್ನು ದೇವಸ್ಥಾದೊಳಕ್ಕೆ ಬಿಡಲಿಲ್ಲ’ ಅಂತಾ ಹೋರಾಟ ಮಾಡುವಾಗ ನನಗೆ ಆಶ್ಚರ್ಯವಾಗುತ್ತೆ. ಅದಕ್ಕೇ ಏನೋಪ್ಪ ನನಗೆ ಇವೆಲ್ಲಾ ಅರ್ಥವಾಗೊಲ್ಲ.