ಕಾರ್ಗಿಲ್ ವಿಜಯ ದಿನ
– ಮಯೂರಲಕ್ಷ್ಮಿ
ಅವರ ಕನಸುಗಳಲ್ಲಿ ನಾಳಿನ ನೆಮ್ಮದಿಯ ಬದುಕಿಲ್ಲ….
ಅವರ ಮನಸುಗಳಲ್ಲಿ ಬದುಕಿ ಬರುವ ಸುಳಿವಿಲ್ಲ….
ಮರಳಿ ಮನೆಗೆ ಹಿಂದಿರುಗಲೆಂದು ಹೆತ್ತವರ ಆಶಯ..
ಕೊರೆವ ಹಿಮದ ತಮದಲ್ಲಿ ಅಹರ್ನಿಶೆ ಕಾದಾಟದ ಭಯ…
ತ್ಯಾಗ-ಬಲಿದಾನವೇ ಸಾರ್ಥಕತೆಯ ವಿಜಯ!
ಹೌದು, ದೇಶವು ನಿದ್ರಿಸುತ್ತಿರಲು ಸುಂದರ ಭವಿಷ್ಯದ ಕನಸಿಲ್ಲದೆ, ವೈಯುಕ್ತಿಕ ಸುಖದ ಮರೀಚಿಕೆಯ ಸೋಗಿಲ್ಲದೆ, ರಕ್ತಸಿಕ್ತ ದೇಹಗಳಲ್ಲಾಗುವ ಗಾಯಗಳ ಕಿಂಚಿತ್ತೂ ನೋವಿಲ್ಲದಂತೆ ಕ್ಷಣಕ್ಷಣದಲ್ಲೂ ಆಪತ್ತಿನ ಕತ್ತಲೆಯ ಕಂದಕಗಳಲ್ಲಿ ಎಚ್ಚರದಿಂದಿದ್ದು ಗಡಿ ಕಾಯುವ ಅವರೇ ದೇಶದ ನಿಜ ನಾಯಕರು.ನಮ್ಮ ದೇಶದ ಅತ್ಯಧಿಕವೆನಿಸುವ ಆಪತ್ತುಗಳ ಪ್ರವಾಹ ಹರಿದಾಗ,ಭೂಕಂಪವಾದಾಗ, ಗಲಭೆಗಳಾದಾಗ, ನಿರಾಶ್ರಿತರಿಗೆ ನೆರವಾಗಲು ಅವರು ಸದಾ ಸಿದ್ಧ! ಗಡಿಗಡಿಗಳಲ್ಲಿ ಜೀವಭಯವಿಲ್ಲದೆ ಕಣಕಣಗಳಲ್ಲಿ ರಕ್ಷಣೆಯ ಹೊಣೆ ಹೊತ್ತು ನಮ್ಮನ್ನು ಕಾಪಾಡಲು ಧಾವಿಸುವ ಕೊನೆಯ ಆಸರೆಯೇ ಸೈನಿಕರು.