“ವಿಧ್ವಂಸಕತೆ”ಯೆಂಬುದು ಪ್ರಗತಿಪರರ ಹುಟ್ಟುಗುಣವೇ?
– ರಾಕೇಶ್ ಶೆಟ್ಟಿ
ಎಲ್ಲಾ ಚುನಾವಣಾ ಸಮೀಕ್ಷೆಗಳನ್ನು ತಲೆಕೆಳಗು ಮಾಡಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿಯೇ ಬಹುಮತ ಪಡೆದಾಗ,ದಶಕಗಳಿಂದ ನಡೆಸಿಕೊಂಡು ಬರಲಾಗಿದ್ದ “ಮೋದಿ ವಿರೋಧಿ ಕ್ಯಾಂಪೇನ್”ನ ಶವ ಪೆಟ್ಟಿಗೆಗೆ ಅಂತಿಮ ಮೊಳೆ ಬಿದ್ದಿತ್ತು.ಆದರೆ ಅತೃಪ್ತ ಆತ್ಮಗಳೇನು ಸುಮ್ಮನಿರುವ ಪೈಕಿಯೇ? ಅವುಗಳು ಶವಪೆಟ್ಟಿಗೆಯೊಳಗಿಂದಲೂ ಸದ್ದು ಮಾಡುತಿದ್ದವು.ಬಿಜೆಪಿಯ ವೋಟ್ ಶೇರ್ ಇರುವುದು ೩೧% ಮಾತ್ರ,ಇನ್ನು ೬೯% ಎಲ್ಲಿ ಅಂತ.ಪ್ರಗತಿಪರರ ಈ ಲೆಕ್ಕಾಚಾರವನ್ನು,ಕಷ್ಟಪಟ್ಟು ೩೫ ಅಂಕ ಪಡೆದು ಪಾಸ್ ಆದ ವಿದ್ಯಾರ್ಥಿಯೊಬ್ಬನ ಮುಂದೆ ನಿಂತು, “ನೋಡಪ್ಪಾ ನೀನು ತೆಗೆದಿರುವುದು ೩೫ ಮಾತ್ರ,ಇನ್ನು ೬೫ ತೆಗೆದಿಲ್ಲವಾದ್ದರಿಂದ ನೀನು ಪಾಸಾದರೂ,ಫೇಲ್ ಆದಂತೆ ಲೆಕ್ಕ” ಹೇಳಿದರೆ ಕೆನ್ನೆಯೂದುವುದು ಖಚಿತ.ಮೋದಿ ಸರ್ಕಾರದ ವಿರುದ್ಧ ಹೀಗೆ ಶುರುವಾದ ನರಳಾಟ ಮುಂದುವರೆಯುತ್ತಲೇ ಇದೆ.
Of course ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನ ಧ್ವನಿಗಳಿಗೆ ಮನ್ನಣೇ ನೀಡಲೇಬೇಕು.ಕೇಂದ್ರ ಸರ್ಕಾರವನ್ನು ವಿರೋಧಿಸಲೇ ಬಾರದೂ ಅಂತಲೂ ಏನಿಲ್ಲ.ಟೀಕೆ-ಟಿಪ್ಪಣಿಗಳಿರಲೇಬೇಕು.ಆದರೆ ಅವು ಸಕಾರಾತ್ಮಕವಾಗಿದ್ದರೆ ಸಮಾಜದ ಆರೋಗ್ಯಕ್ಕೂ ಒಳ್ಳೆಯದು.ಆದರೆ ನಮ್ಮ ಪ್ರಗತಿಪರರು ತಮ್ಮ “ಪುರಾತನ ಪದ್ಧತಿ”ಯಾದ ನಕಾರಾತ್ಮಕ ಟೀಕಾ ಶೈಲಿಯನ್ನೇ ಮುಂದುವರೆಸಿದ್ದಾರೆ.ಪುರಾತನ ಪದ್ಧತಿ ಎನ್ನಲು ಕಾರಣವಿದೆ.
ಮದರಾಸಿನ ಭಾಷಣವೊಂದರಲ್ಲಿ ಸ್ವಾಮಿ ವಿವೇಕಾನಂದರು,ಅಂದಿನ ಕಾಲದ ಸಮಾಜ ಸುಧಾರಕರ ಕುರಿತು “ಅವರದು ಧ್ವಂಸ ಮಾರ್ಗ.ನನ್ನದು ನಿರ್ಮಾಣ ಮಾರ್ಗ“ ಎಂದಿದ್ದರು.