ಇದು ಬೌದ್ಧಿಕ ಕ್ಷತ್ರಿಯರ ಯುದ್ಧ
– ಚಕ್ರವರ್ತಿ ಸೂಲಿಬೆಲೆ
ಅಮೇರಿಕಾದ ಪ್ರಿಸ್ನಟನ್ ನ ಶಾಲೆ. ಅಲ್ಲಿನ ಶಿಕ್ಷರರೊಬ್ಬರು ದೆಹಲಿ ಮೂಲದ ಹಿಂದೂವೊಬ್ಬರನ್ನು ವಿವೇಕಾನಂದರು ಮತ್ತು ರಾಮಕೃಷ್ಣರ ಕುರಿತಂತೆ ಮಕ್ಕಳಿಗೆ ಪಾಠ ಮಾಡಬಾರದೆಂದು ನುಡಿದರು.ಆಶ್ಚರ್ಯಚಕಿತರಾದ ಆತ ಹುಬ್ಬೇರಿಸಿ ಏಕೆಂದು ಕೇಳಿದರೆ ಅವರು ಸಲಿಂಗಕಾಮಿಗಳಾಗಿದ್ದರಂತೆ ಎಂಬ ಉತ್ತರ ಬಂತು.ಬೆಚ್ಚಿ ಬಿದ್ದ ಭಾರತೀಯ ಮೂಲದ ವ್ಯಕ್ತಿ ಹಾಗೆ ಹೇಳಿದ್ದು ಯಾರೆಂದು ಕೇಳಿದ್ದಕ್ಕೆ ಅವರು ಆತನ ಕೈಗೊಂದು ಪುಸ್ತಕವಿತ್ತರು.ಅದು ಜೆಫ್ರಿ ಕೃಪಾಲ್ ಬರೆದಿದ್ದ ‘ಕಾಳಿಯ ಮಕ್ಕಳು’. ಕೃತಿಯುದ್ದಕ್ಕೂ ವಿಕೃತಿಗಳೇ ತುಂಬಿದ್ದುದನ್ನು ಕಂಡು ಅಸಹ್ಯದಿಂದ ಬೆಂದು ಹೋದ ಆತ ಅಮೇರಿಕಾದ ಬುದ್ಧಿವಂತರ ನಡುವೆ ತಿರುಗಾಡುತ್ತಿರುವ ಹಿಂದೂಗಳ ಅವಹೇಳನ ಮಾಡುವ ಅನೇಕ ಪುಸ್ತಕಗಳನ್ನು ಹುಡುಕಿದರು.ಅದರ ಕುರಿತಂತೆ ಇತರ ಹಿಂದೂಗಳಿಗೆ ಗೊತ್ತಿರಲಿಲ್ಲವೆಂದಲ್ಲ.ಆದರೆ ಅವರು ಅದೆಷ್ಟು ಅವಮಾನಿತರಾಗಿದ್ದರೆಂದರೆ ಬಾಯಿ ತೆರೆಯಲಾಗದೇ ಮೌನವಹಿಸಿ ಬಿಟ್ಟಿದ್ದರು.ಶಾಲೆಗಳಲ್ಲಿ ಹಿಂದೂವಾಗಿರುವುದು ಮಗುವೊಂದಕ್ಕೆ ಅತ್ಯಂತ ಕಠಿಣವಾಗಿತ್ತು.ಓರಗೆಯ ಕ್ರಿಶ್ಚಿಯನ್ನರು ಹಿಂದೂ ದೇವ-ದೇವಿಯರನ್ನು ಆಡಿಕೊಂಡು ನಗುವಾಗ ಇವರೆಲ್ಲ ಬರಿಯ ಮೂಕ ಪ್ರೇಕ್ಷಕರಷ್ಟೇ.
ರಾಜೀವ್ ಮಲ್ಹೋತ್ರಾ! ಬ್ರೇಕಿಂಗ್ ಇಂಡಿಯಾ, ಬೀಯಿಂಗ್ ಡಿಫರೆಂಟ್, ಇಂದ್ರಾಸ್ ನೆಟ್ ಗಳ ಮೂಲಕ ಅಮೇರಿಕಾದಾದ್ಯಂತ ಹರಡಿಕೊಂಡಿರುವ ಹಿಂದೂ ವಿರೋಧಿಗಳಿಗ ಸೂಕ್ತ ಉತ್ತರ ಕೊಡುತ್ತಿರುವ ವ್ಯಕ್ತಿ. ಎಡಪಂಥದ ಗಬ್ಬು ಘಾಟಿನಲ್ಲಿಯೇ ಕಾಲದೂಡುತ್ತಿರುವ ಭಾರತದ ಬುದ್ಧಿ ಜೀವಿಗಳ ಆರಾಧ್ಯವೆನಿಸಿದ್ದವರನ್ನೆಲ್ಲ ತನ್ನ ಬೌದ್ಧಿಕ ಗದಾಪ್ರಹಾರದಿಂದ ಝಾಡಿಸಿ ಕೊಡವಿ ಬಿಟ್ಟಿರುವ ಜಟ್ಟಿ ಆತ.