ಬಿಸಿಯೂಟದಲ್ಲಿ ಕೇಸರೀಬಾತು: ಮುಖ್ಯ ಶಿಕ್ಷಕ ಅಮಾನತು!
– ಪ್ರವೀಣ್ ಕುಮಾರ್,ಮಾವಿನಕಾಡು
ಕೋಮಿನಕೋಟೆ: ಕೋಮಿನಕೋಟೆ ತಾಲೂಕಿನ ಊಟೇನಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟದಲ್ಲಿ ಕೇಸರೀಬಾತು ಪತ್ತೆಯಾಗಿದೆ.ಅನಾಮಧೇಯ ಕರೆಯೊಂದರ ಸ್ಪಷ್ಟ ಮಾಹಿತಿಯ ಮೇರೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳು ಶಾಲೆಯ ಮೇಲೆ ದಾಳಿ ನಡೆಸಿ ಸುಮಾರು 8KG ಗೂ ಹೆಚ್ಚು ಕೇಸರೀ ಬಾತನ್ನು ವಶಪಡಿಸಿಕೊಂಡಿದ್ದಾರೆ.ಘಟನೆ ಖಂಡಿಸಿ ಮಕ್ಕಳ ಪೋಷಕರು ಶಾಲೆಯ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.ಅಲ್ಲದೆ ತಮಗೆ ನೀಡಲಾಗುತ್ತಿರುವ ಊಟ ಉತ್ತಮ ಗುಣಮಟ್ಟದ್ದೇ ಆಗಿದ್ದರೂ,ಊಟದಲ್ಲಿ ಪದೇ ಪದೇ ಕೇಸರೀಬಾತು ದೊರೆಯುತ್ತಿತ್ತು ಎಂದು ವಿದ್ಯಾರ್ಥಿಗಳು ಆರೋಪಿದ್ದಾರೆ.ಪ್ರಕರಣದ ರೂವಾರಿಗಳನ್ನು ಆದಷ್ಟೂ ಬೇಗ ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸ್ಥಳೀಯ ಆಡಳಿತ ಹಾಗೂ ಶಾಲಾ ಆಡಳಿತ ಮಂಡಳಿ ಭರವಸೆ ನೀಡಿವೆ.ರಾಜ್ಯ ಕೋಮುವೇದಿಕೆಯ ಪ್ರಮುಖರಾದ ಗಂಜಿ ಕೋಮ್ಲೇಶ್ ಮತ್ತವರ ತಂಡ ಶಾಲೆಯಲ್ಲೇ ಬೀಡುಬಿಟ್ಟಿದ್ದು ಪರಿಸ್ಥಿತಿಯ ಮೇಲೆ ತೀವ್ರ ನಿಗಾ ವಹಿಸಿದೆ.