ಕುವೆಂಪು ಮತ್ತು ಅಧ್ಯಾತ್ಮ
– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು
ಕುವೆಂಪು ಮೂಲತಃ ಒಬ್ಬ ಕವಿ, ಶ್ರೇಷ್ಠ ಕವಿ. “ನಾನೃಷಿಃ ಕುರುತೇ ಕಾವ್ಯಂ” ಎಂಬ ಮಾತಿದೆ. ಋಷಿ ಎಂಬುದಕ್ಕೆ ದ್ರಷ್ಟಾರ ಎಂಬ ಅರ್ಥವಿದೆ. ಅಧ್ಯಾತ್ಮದ ಒಂದು ಮಜಲನ್ನು ದಾಟದಿದ್ದರೆ ದ್ರಷ್ಟಾರನಾಗುವುದು ಸಾಧ್ಯವಿಲ್ಲ. ಅಧ್ಯಾತ್ಮ ಎಂದರೆ ‘Immediate feeling of unity of the self with God’ ಎಂಬ ವ್ಯಾಖ್ಯೆಯನ್ನು ನೀಡಲಾಗಿದೆ. ದೇವರದೊಂದಿಗಿನ ಆತ್ಮದ ಐಕ್ಯವೇ ಅಧ್ಯಾತ್ಮ. ಕಾಯಕ, ನಿಸರ್ಗ, ಅಣುಜೀವ ಪ್ರೇಮ, ಹೀಗೆ ಯಾವುದೇ ಶಾಶ್ವತ ಮೌಲ್ಯವೂ ದೇವರಾಗಬಹುದು. ಇವು ವ್ಯಕ್ತಿಯಲ್ಲಿ ಲೀನವಾಗುವ ಬಗೆ ಅಧ್ಯಾತ್ಮದ ಹಂತಕ್ಕೆ ಒಯ್ಯುತ್ತದೆ.
ತೀವ್ರ ವಿಚಾರವಾದಿ, ಅಧ್ಯಾತ್ಮವಾದಿ, ಅಧ್ಯಾತ್ಮ ಜೀವಿಯಾದ ಕುವೆಂಪು ಸುಲಭಗ್ರಾಹ್ಯರಲ್ಲ. ಅವರು ವಿಚಾರವಾದಿ ನಿಜ, ಆದರೆ ಕೇವಲ ಭೌತವಾದಿಯಲ್ಲ. ಅಧ್ಯಾತ್ಮವಾದಿ ನಿಜ, ಆದರೆ ಕರ್ಮಠರಲ್ಲ. ಅಧ್ಯಾತ್ಮ ಜೀವಿ ನಿಜ, ಆದರೆ ಸಂನ್ಯಾಸಿಯಲ್ಲ. ನಿರಂಕುಶಮತಿಗಾಗಿ ಅವರು ನೀಡುವ ಕರೆ,ಆತ್ಮಶ್ರೀಗಾಗಿಯೇ ವಿನಾ ಭೌತಿಕ ರುಚಿಗಳ ಆರೈಕೆ, ಪೂರೈಕೆಗಳಿಗಾಗಿ ಅಲ್ಲ.
ಯಾವುದೇ ಅಧ್ಯಾತ್ಮ ತತ್ತ್ವದ ಅಂತಿಮ ಬಿಂದು ವ್ಯಕ್ತಿ ನಿಷ್ಠತೆ, ವ್ಯಕ್ತಿ ಉದ್ಧಾರ. ಸಮೂಹವನ್ನು ಇಡಿಯಾಗಿ ಉದ್ಧರಿಸುವ ಆಧ್ಯಾತ್ಮಿಕ ಸೂತ್ರ ಇಲ್ಲವೇ ಇಲ್ಲ. ಭಗವದ್ಗೀತೆಯಲ್ಲಿ ಹೇಳುವ “ಉದ್ಧರೇದಾತ್ಮನಾತ್ಮನಂ” ಎಂಬ ಮಾತು ಅಕ್ಷರಶಃ ನಿಜ. ವ್ಯಕ್ತಿ ಸ್ವತಃ ಉದ್ಧಾರವಾಗಬೇಕು. ವ್ಯಕ್ತಿ ವ್ಯಕ್ತಿಗಳು ಕೂಡಿ ಒಂದು ಸಮಾಜ. ವ್ಯಕ್ತಿಗಳ ಉದ್ಧಾರವೇ ಸಮಾಜದ ಉದ್ಧಾರ. ಕುವೆಂಪು ಅವರ ಕಾವ್ಯ, ಸಾಹಿತ್ಯ ಸೃಷ್ಟಿಯ ಮುಖ್ಯ ಸೂತ್ರವೂ ವ್ಯಕ್ತಿಯ ಆತ್ಮ ಸ್ವಾತಂತ್ರ್ಯಕ್ಕಾಗಿ ತುಡಿಯುವುದೇ ಆಗಿದೆ. ನಮ್ಮ ಉದ್ಧಾರಕ್ಕಾಗಿ ಯಾರೋ ಒಬ್ಬರು ದುಡಿಯುತ್ತಾರೆ ಎಂದು ಬಯಸುವಂತಿಲ್ಲ. ಎಲ್ಲರೂ ದುಡಿಯುತ್ತಲೇ ಅವರವರ ಹಾದಿಯಲ್ಲಿ ನಡೆದು, ಉದ್ಧಾರ ಕಂಡುಕೊಳ್ಳಬೇಕೆಂಬುದು ಅವರ ಕಾಣ್ಕೆ. ಹಾಗಾಗಿಯೇ ಅವರ ಸಾಹಿತ್ಯ ಸರ್ವಸ್ವದ ಸಾರವೇ ಆಗಿರುವ ಸಪ್ತ ಸೂತ್ರಗಳಲ್ಲಿ, “ಮತ ತೊಲಗಿ ಅಧ್ಯಾತ್ಮ ಮಾತ್ರ ವೈಜ್ಞಾನಿಕ ತತ್ತ್ವವಾಗಿ ಮಾನ್ಯತೆ ಪಡೆಯಬೇಕು ಹಾಗೂ ಯಾವ ಒಂದು ಗ್ರಂಥವೂ ‘ಏಕೈಕ ಪರಮ ಪೂಜ್ಯ’ ಧರ್ಮಗ್ರಂಥವಾಗಬಾರದು, ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾಗುವ ಎಲ್ಲವನ್ನೂ ಓದಿ ತಿಳಿದು ತನ್ನ ‘ದರ್ಶನ’ವನ್ನು ತಾನೇ ಪಡೆಯಬೇಕು” ಎಂದಿದ್ದಾರೆ.