ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 4, 2015

8

“ಪೂರ್ವಾಗ್ರಹ” ಕುರಿತ ಪೂರ್ವಗ್ರಹ

‍ನಿಲುಮೆ ಮೂಲಕ

– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ, ತುಮಕೂರು ವಿವಿ

ಪೂರ್ವಗ್ರಹಆಗಸ್ಟ್ ೨ ರಂದು ಬಿಡುಗಡೆಯಾದ ‘ಕೊಟ್ಟ ಕುದುರೆಯನೇರಲರಿಯದೆ…'(ವಚನಗಳ ಅಧ್ಯಯನದಲ್ಲಿ ಆಧುನಿಕರ ಪೂರ್ವಗ್ರಹಗಳು ಮತ್ತು ಅವುಗಳಾಚೆಗೆ) ಕೃತಿಯ ಶೀರ್ಷಿಕೆಯಡಿಯ ವಿವರಣ ವಾಕ್ಯ ಸಾಲಿನಲ್ಲಿ ಕಾಣಿಸಿದ “ಪೂರ್ವಗ್ರಹ” ಎಂಬ ಪದವನ್ನು ಕುರಿತು ಪೂರ್ವಾಗ್ರಹ ಪದ ಪರಿಚಯವಿರುವ ಬಹಳಷ್ಟು ಜನ ಇಲ್ಲೊಂದು ದೋಷವಾಗಿದೆ ಎಂದು ಹೇಳುತ್ತಿದ್ದಾರೆ.

ಇಲ್ಲ. ಪೂರ್ವಗ್ರಹ ಎಂಬುದೇ ವ್ಯಾಕರಣಾತ್ಮಕವಾಗಿ ಸರಿ.

ಇದು ಪೂರ್ವ+ಗ್ರಹಿಕೆ ಎಂಬುದರ ಸಂಕ್ಷಿಪ್ತ ರೂಪ. ಪೂರ್ವ ಮತ್ತು ಉತ್ತರ ಪದಗಳೆರಡೂ ಮುಖ್ಯವಾಗಿ ಮೂರನೆಯದನ್ನು ಹೇಳುವ ಕರ್ಮಧಾರಯ ಸಮಾಸದ ಪದ. ವ್ಯಕ್ತಿ, ವಿಷಯ ಇತ್ಯಾದಿಗಳನ್ನು ಕುರಿತು ಮೊದಲೇ ಒಂದು ಅಭಿಪ್ರಾಯ, ನಿರ್ಧಾರಕ್ಕೆ ಬರುವುದು ಎಂಬುದು ಇದರ ಅರ್ಥ. ಎಲ್ಲರೂ ಸಾಮಾನ್ಯವಾಗಿ ಭಾವಿಸಿದಂತೆ “ಪೂರ್ವ+ಆಗ್ರಹ” ಕೂಡಿ ಆದುದಲ್ಲ. ಅಷ್ಟಕ್ಕೂ “ಆಗ್ರಹಿಸುವ” ಅರ್ಥ ಈ ಪದ ಪ್ರಯೋಗದಲ್ಲಿ ಬರುವ ಪ್ರಶ್ನೆಯೇ ಇಲ್ಲ.

ಇಷ್ಟಾಗಿಯೂ ಈ ಕೃತಿಯನ್ನು ನಾವು ಓದಿ ತಿದ್ದಿದ್ದರೂ ಕಾರಣಾಂತರಗಳಿಂದ ಬೇಧ, ತಿಳುವಳಿಕೆಯಂಥ ದೋಷಗಳು ಅಲ್ಲಲ್ಲಿ ಇನ್ನೂ ಉಳಿದಿವೆ. ಯಾಕೆ ಹೀಗಾಗುತ್ತದೆ ಎಂಬುದಕ್ಕೆ ನನ್ನ ಅನುಭವ ಹೇಳುತ್ತೇನೆ:

ತಾವಿರುವ, ಕಲಿತ ರೀತಿಯೇ ಸಿದ್ಧತೆ ಎಂದು ಬಹುತೇಕರು ಭಾವಿಸಿರುತ್ತಾರೆ. ಇದಕ್ಕೆ ನಮ್ಮ ವ್ಯವಸ್ಥೆಯೂ ಕಾರಣ. ನೋಡಿ: ಕನ್ನಡವನ್ನು ಪದವಿವರೆಗೂ ಕಲಿತು ಬರುವ ವಿದ್ಯಾರ್ಥಿಗಳಿಗೆ ಪ್ರತಿ ಬಾರಿ ತರಗತಿ ಆರಂಭದಲ್ಲಿ ಸಣ್ಣ ಪರೀಕ್ಷೆಯನ್ನು ಮಾಡುತ್ತೇನೆ.

ಒಂದಿಷ್ಟು ಒತ್ತಕ್ಷರ, ದೀರ್ಘ, ಅಲ್ಪಪ್ರಾಣ, ಮಹಾಪ್ರಾಣ ಅಕ್ಷರಗಳಿರುವ ಹತ್ತು ಪದಗಳನ್ನು ಉಚ್ಚರಿಸಿ ಅವುಗಳನ್ನು ಬರೆದು ತೋರಿಸುವಂತೆ ಕೇಳುವ ಪರೀಕ್ಷೆ ಇದು. ನಾನು ಅಧ್ಯಾಪಕನಾದ ಹತ್ತು ವರ್ಷದ ಅವಧಿಯಲ್ಲಿ ಒಂದೇ ಒಂದು ಬ್ಯಾಚಿನ ಯಾವ ವಿದ್ಯಾರ್ಥಿಯೂ ಎಲ್ಲ ಹತ್ತೂ ಪದಗಳನ್ನು ಸರಿಯಾಗಿ ಬರೆದದ್ದಿಲ್ಲ. ಈ ಪದಗಳೇನೂ ಬಾಣ, ಪಾಣಿನಿಯರ ಮಹಾಕ್ಲಿಷ್ಟ ಪದಗಳಾಗಿರುವುದಿಲ್ಲ. ಧೂಮಪಾನ, ನಿಷೇಧ, ಭೇದಿ, ಸೃಷ್ಟಿ, ಪ್ರಭೃತಿ ಇತ್ಯಾದಿ ಪದಗಳೇ ಆಗಿರುತ್ತವೆ. ದು(ದೂ)ಮಪಾನ, ನಿಶೇದ,
ಬೇ(ಬೆ)ಧಿ, ಸೃಷ್ಠಿ, ಹೀಗೆ ಅವರ ಉತ್ತರವಿರುತ್ತದೆ. ಇನ್ನು ಉಕ್ತ ವಾಕ್ಯಗಳನ್ನು ಹೇಳಿದರೆ ಮುಗಿದೇ ಹೋಯಿತು. ಅವರ ಬರಹದಲ್ಲಿ

ತಿದ್ದಬೇಕಾದ ಭಾಗ ಯಾವುದು? ಅಕ್ಷರವೋ ಪದವೋ ವಾಕ್ಯವೋ? ಕೆಲವೊಮ್ಮೆ ಎಲ್ಲವೂ!

ಕಳೆದ ಬಾರಿ ಹೀಗಾಯಿತು: ಸೃಷ್ಠಿ ಎಂದು ಬರೆದ ವಿದ್ಯಾರ್ಥಿಗಳಿಗೆ ಅದರ ಸ್ವರೂಪ ಹಾಗಲ್ಲ, ಸೃಷ್ಟಿ ಎಂದೆ. ‘ಏನ್ ಸಾರ್ ನಾವು ಇಲ್ಲಿವರೆಗೂ ಹಿಂಗೇ ಬರ್ಕೊಂಡು ಬಂದಿರೋದು. ಎಲ್ಲೂ ಯಾರೂ ಕೇಳಿಲ್ಲ, ನೀವೇನ್ ಸಾರ್?’ ಅಂದರು. ಯಾರೂ ಕೇಳಿಲ್ಲ ಅಂದಮಾತ್ರಕ್ಕೆ ನೀವು ಮಾಡಿದ್ದು ಸರಿ ಅಂತಲ್ಲ. ನೀವು ಕಲಿತ ಎಷ್ಟು ಪದಗಳನ್ನು ಬಳಸುವ ಮುಂಚೆ ಶಬ್ದಕೋಶ ನೋಡಿ ಬಳಸಲು ಕಲಿತಿದ್ದೀರಿ ಹೇಳಿ ಅಂದರೆ ಉತ್ತರವಿಲ್ಲ. ಯಾಕೆಂದರೆ ಯಾರೂ ಶಬ್ದಕೋಶ ನೋಡಿ ಪದಪರೀಕ್ಷೆ ಮಾಡಿಯೇ ಇಲ್ಲ. ಇದು ಈ ವಿದ್ಯಾರ್ಥಿಗಳ ಹಣೆಬರಹವಷ್ಟೇ ಅಲ್ಲ, ಎಲ್ಲರದೂ ಇದೇ ಕತೆ.

ಮಾಧ್ಯಮ, ಪುಸ್ತಕ ಇತ್ಯಾದಿ ಎಲ್ಲೆಡೆಯೂ ಇಂಥ ರೂಪಗಳೇ ಕಣ್ಣಿಗೆ ಪರಿಚಯವಾಗಿ ತಪ್ಪು ರೂಪಗಳೇ “ಸರಿ” ಯಾಗಿಬಿಡುತ್ತವೆ!

ಚಳವಳಿ, ಜಾತ್ಯತೀತ, ಕೋಟ್ಯಧೀಶ, ಉಪಾಹಾರ ಗೃಹ ಮೊದಲಾದ ಪದಗಳು ಚಳುವಳಿ, ಜಾತ್ಯಾತೀತ, ಕೋಟ್ಯಾಧೀಶ,ಉಪಹಾರ ಗೃಹ ಎಂದು ತಪ್ಪಾಗಿಯೇ ಎಲ್ಲೆಡೆ ಮುದ್ರಣವಾಗುತ್ತವೆ. ನಾವೂ ಅದೇ ಸರಿ ಅಂದುಕೊಳ್ಳುತ್ತ ಹೋಗುತ್ತೇವೆ.

8 ಟಿಪ್ಪಣಿಗಳು Post a comment
  1. Rajaram Hegde
    ಆಗಸ್ಟ್ 5 2015

    ಶ್ರೀಪಾದ್
    ನೀವು ತಿದ್ದಿದ್ದರೂ ದೋಷಗಳು ಹಾಗೇ ಉಳಿದಿವೆ, ಅದಕ್ಕೆ ಕಾರಣ ಈ ಪುಸ್ತಕ ರೂಪದಲ್ಲಿ ಬಂದ ಪ್ರತಿ ನೀವು ತಿದ್ದಿದ್ದಲ್ಲ ಎಂಬ ಗುಮಾನಿ ನನ್ನದು. ಏಕೆಂದರೆ ನಾನು ನಿಮಗೆ ಫೈಲನ್ನು ಕಳುಹಿಸಿದ ಕೆಲವು ದಿನಗಳ ನಂತರ ರಾಖೇಶ್ ಗೆ ಪ್ರಿಂಟ್ ಗಾಗಿ ಕಳುಹಿಸಿದೆ. ಅದಾಗಲೇ ನಿಮಗೆ ಕಳುಹಿಸಿದ್ದು ನನಗೆ ಮರೆತುಹೋಗಿತ್ತು. ನೀವು ತಿದ್ದಿ ಕಳುಹಿಸಿದಾಗ ಮತ್ತೊಂದು ಪ್ರತಿಯು ಪೇಜ್ ಗೆ ಪರಿವರ್ತನೆಗೊಂಡಿತ್ತು. ಪೇಜ್ ಮೇಕರ್ ನಲ್ಲಿ ಇಡೀ ಪಠ್ಯಕ್ಕೆ ಶಬ್ದಗಳ ತಿದ್ದುಪಡಿಯನ್ನು ಅಳವಡಿಸಬಲ್ಲ ತಂತ್ರಜ್ಞಾನ ಇಲ್ಲಂತೆ. ಹಾಗಾಗಿ ರಾಕೇಶ ಹಾಗೂ ಸಂದೀಪ ನಿಮ್ಮ ಪ್ರತಿಯನ್ನು ಇಟ್ಟುಕೊಂಡು ಕೈಯಲ್ಲಿ ತಿದ್ದುಪಡಿ ಹಾಕಿದ್ದಾರೆ. ಹಾಗಾಗಿ ಅಲ್ಲಲ್ಲಿ ಹಳೆಯ ರೂಪಗಳು ಹಾಗೇ ಉಳಿದುಕೊಂಡಿವೆ. ( ಪಾಪ ಅವರಿಬ್ಬರಿಗೆ ಕೊನೆ ಘಳಿಗೆಯಲ್ಲಿ ಸಿಕ್ಕಾ ಪಟ್ಟೆ ಕೆಲಸ ಆಗಿದೆ. ಅದರಲ್ಲಿ ನಾನು ಮತ್ತು ಷಣ್ಮುಖ ಅವರ ಕರ್ತವ್ಯ ಲೋಪಗಳೂ ಸಾಕಷ್ಟು ಕಾರಣವಾಗಿವೆ. ಅದಕ್ಕೆ ನಾವೇ ಹೊಣೆ, ಆ ಇಬ್ಬರು ಹುಡುಗರ ಪರಿಶ್ರಮವನ್ನು ನಾನು ಮೆಚ್ಚುತ್ತೇನೆ) ಆದರೆ ನಾವು ಬುದ್ಧಿಜೀವಿಗಳ ಮೂಢನಂಬಿಕೆ ಪುಸ್ತಕದ ವರ್ಡ್ ಫೈಲಲ್ಲಿ ಬದಲಾವಣೆ ಹಾಕಿದ್ದೇವೆ. ಅದರಲ್ಲಿ ಸಂಪೂರ್ಣ ಬದಲಾವಣೆ ಆಗಿದೆ ಗಮನಿಸಿ.
    ಇಷ್ಟಾಗಿಯೂ ನನಗೆ ಬಹಳ ಅನಾಹುತವಾಗಿದೆ ಎಂದೇನೂ ಅನಿಸುವುದಿಲ್ಲ. ತಿಳಿವಳಿಕೆ ಹಾಗೂ ತಿಳುವಳಿಕೆಗಳಿಗೆ ಬೇರೆ ಬೇರೆ ಅರ್ಥಗಳನ್ನೇ ಆರೋಪಿಸಿಕೊಳ್ಳುವ ಸಂದರ್ಭ ಇದ್ದಾಗ ಮಾತ್ರ ಅಪಾರ್ಥಗಳು ಹುಟ್ಟುವ ಸಂದರ್ಭ ಇತ್ತು. ಪೂರ್ವಾಗ್ರಹ ಕೂಡ ತಪ್ಪು ಪ್ರಯೋಗವೇ ಹೊರತೂ ರೂಢಿಯಲ್ಲಿ ಪೂರ್ವಗ್ರಹದ ಅರ್ಥದಲ್ಲೇ ( ಅದೂ ಪ್ರಿಜುಡೀಸ್ / ಬಯಾಸ್ ಎಂಬ ಶಬ್ದವನ್ನು ಭಾಷಾಂತರಿಸಲಿಕ್ಕಾಗಿ ಆಧುನಿಕ ಬರವಣಿಗೆಗಳಲ್ಲಿ ಪ್ರಸ್ತುತತೆ ಪಡೆದ ಶಬ್ದ) ಬಳಕೆಯಲ್ಲಿತ್ತು. ಹಾಗಂತ ಅವು ತಪ್ಪು ಪ್ರಯೋಗಗಳು ಎಂಬುದು ನನಗೆ ನಿಮ್ಮಿಂದಲೇ ತಿಳಿದಿದ್ದು. ಹಾಗಾಗಿ ಧನ್ಯವಾದ. ಬಹುಶಃ ಈ ತಿಳಿವಳಿಕೆಯ ಕಾರಣದಿಂದ ನಮ್ಮ ಗುಂಪಿನಲ್ಲಿ ಇನ್ನು ಮುಂದೆ ನಿಮ್ಮ ಹೊಣೆಗಾರಿಕೆ ಹೆಚ್ಚುತ್ತದೆ. ಅದು ಭವಿಷ್ಯದಲ್ಲಿ ನಿಮಗೆ ಕಾದಿರುವ ಅನಾಹುತ!

    ಉತ್ತರ
    • Shripad
      ಆಗಸ್ಟ್ 6 2015

      ಅಂಥ ಅನಾಹುತಗಳನ್ನು ಎದುರಿಸಲು ಸಿದ್ಧ! ಭಾಷೆ ವಿಷಯದಲ್ಲಿ ಕೊನೆಗೂ ಇದೇ ಸರಿ ಅನ್ನಲಾಗದು ಎಂಬುದೂ ವಿಸ್ಮಯ. ಆಯಾ ಕಾಲಕ್ಕೆ ತಕ್ಕ ವ್ಯಾಕರಣಾತ್ಮಕ- ಸಾಮಾನ್ಯ ಸ್ವೀಕೃತ ರೂಪಗಳಿಗೆ (ಲಿಖಿತ ರೂಪದಲ್ಲಿ) ಒಂದು ಸ್ಟಾಂಡರ್ಡ್ ಇಟ್ಟುಕೊಳ್ಳಬೇಕಷ್ಟೆ. ಕೇಶಿರಾಜನೇ ಹೇಳಿದ್ದಾನಲ್ಲ-“ಶಬ್ದಪಾರಮಾರ್ಗಮಶಕ್ಯಂ”

      ಉತ್ತರ
    • WITIAN
      ಆಗಸ್ಟ್ 8 2015

      ಶ್ರೀ ರಾಜಾರಾಮ ಹೆಗಡೆಯವರೆ,

      ನಿಮ್ಮನ್ನು ತಿದ್ದುವಷ್ಟು ಪಾಂಡಿತ್ಯ ನನಗಿದೆ ಎನ್ನುವ ಧಾರ್ಷ್ಟ್ಯ ತೋರುತ್ತಿದ್ದೇನೆ ಎಂದುಕೊಳ್ಳಬೇಡಿ. ರಾಖೇಶ ಕೂಡಾ ತಪ್ಪು, ರಾಕಾಚಂದ್ರ ನನ್ನು ತಲೆಯ ಮೇಲೆ ಧರಿಸಿದವನು ರಾಕೇಶ (ಶಿವ) ಎನ್ನಬಹುದು. ಘುಸ್ತಾಖೀ ಮಾಫ್.. 🙂

      ಉತ್ತರ
      • shripad
        ಆಗಸ್ಟ್ 8 2015

        ರಾಕೇಶ-ಸರಿ. ರಾಖೇಶ್, ರಾಕೇಸ, ರಾಕೆಸ ರಾಕೆಷ ರಾಕೇಷ…ಏನೆಲ್ಲ ರಾಕೇಶನ ತಪ್ಪು ರೂಪಗಳು!! ಸರಿ ರೂಪ ಗೊತ್ತಿದ್ದರೂ ಕೆಲವೊಮ್ಮೆ ಟೈಪಿಂಗ್ ತಪ್ಪನ್ನು ನೋಡುವುದು ಕಷ್ಟ.

        ಉತ್ತರ
  2. rajaram hegde
    ಆಗಸ್ಟ್ 7 2015

    ಶ್ರೀಪಾದ್ ನಮ್ಮಲ್ಲೊಂದು ಗಾದೆ ಇದೆ. ಬಹಳ ಅರ್ಥಪೂರ್ಣವಾಗಿದೆ. ಅದು ಹೀಗಿದೆ “ಅರಿಯೆ ಎಂದರೆ ಅರವತ್ತು ಗುಣ, ಅರಿತೆ ಎಂದರೆ ಸತ್ತು ಹೆಣ” ಇದಕ್ಕೆ ಒಂದು ಆಧ್ಯಾತ್ಮಿಕ ಅರ್ಥ ಕೂಡ ಸಾಧ್ಯವಿದೆ. ಆದರೆ ಹಳ್ಳಿಗರು ಬಳಸುವುದು ಆ ಅರ್ಥದಲ್ಲಲ್ಲ. ದಿನನಿತ್ಯದ ಜೀವನದಲ್ಲಿ ತಮಗೆ ಯಾವ ಕೆಲಸವೂ ಬರುವುದಿಲ್ಲ ಎನ್ನುವವರೇ ಜಾಣರು, ಏಕೆಂದರೆ ಕೆಲಸ ಮಾಡುವ ಪ್ರಮೇಯವೇ ಇಲ್ಲ. ಇದೊಂಥರಾ ದೇಶೀ ಜಾಣತನ. ನಮ್ಮ ವಿಶ್ವವಿದ್ಯಾಲಯದಲ್ಲಿ ಇಂಥ ಜಾಣರೇ ತುಂಬಿದ್ದಾರೆ. ನಮ್ಮ ಒಬ್ಬ ಅಟೆಂಡರ ಗೆ ಓದುವುದು ಬರುತ್ತಿದ್ದರೂ ಕೊನೆಗೂ ಬರುವುದಿಲ್ಲ ಎಂದೇ ಮುಚ್ಚಿಟ್ಟಿದ್ದಳು. ಆ ಕಾರಣದಿಂದ ಅನೇಕ ಕೆಲಸಗಳನ್ನು ಕಡಿಮೆ ಮಾಡಿಕೊಂಡಿದ್ದಳು. ಬಹುಶಃ ಈ ಜಾಣತನವೇ ನಮ್ಮ ಬಹಳಷ್ಟು ಶಿಕ್ಷಕ ಹಾಗೂ ವಿದ್ಯಾರ್ಥಿಗಳಲ್ಲಿ ಕಲಿಕೆಗೆ ತಡೆಯೊಡ್ಡುತ್ತಿದೆಯೇನೋ ಎಂದೂ ಅನ್ನಿಸುತ್ತದೆ.

    ಉತ್ತರ
    • Shripad
      ಆಗಸ್ಟ್ 10 2015

      ಹೌದು. ನೂರಕ್ಕೆ ನೂರು. ಒಪ್ಪಿದೆ.

      ಉತ್ತರ
  3. MANJURAJ
    ಆಗಸ್ಟ್ 9 2015

    ಪ್ರಿಯ ಶ್ರೀಪಾದ್, ನಿಮ್ಮ ಮಾತು ಸರಿಯಿದೆ, ಹೆಗಡೆಯವರದೂ ……. ಸರಿಯೇ ಇದೆ. ಸರಿ ಮತ್ತು ತಪ್ಪು ರೂಪಗಳು ಗೊತ್ತಿರಬೇಕು, ಜನಬಳಕೆಯನ್ನೂ ಗೌರವಿಸಬೇಕು. ವ್ಯಾಕರಣಕ್ಕಿಂತ ಭಾಷಾವಿಜ್ಞಾನ ಬೇಕಾಗಿದೆ. ಭಾಷೆಯ ವಿಷಯದಲ್ಲಿ ನಾವು ಅ-ಸಹಾಯಕರು ಮತ್ತು ಪ್ರಾಧ್ಯಾಪಕರು! ಜೊತೆಗೆ ನಾವು ಕಲಿಸುವವರು, ಅದೂ ಕಲಿಯುತ್ತಾ…….. ಈ ಮಧ್ಯೆ ನಮ್ಮ ಶಂಕರಭಟ್ಟರು ಮತ್ತವರ ಪರಿಷ್ಕರಣೆ…… ಅವರ ಪ್ರಕಾರ ಶಂಕರಬಟ್ಟರು……

    -ಮಂಜುರಾಜ್, ಕೆ ಆರ್ ನಗರ

    ಉತ್ತರ
  4. Dayanand Hegde
    ನವೆಂ 27 2023

    ಪೂರ್ವ + ಆಗ್ರಹ = ಪೂರ್ವಾಗ್ರಹ. ಇದು naanu ಕಲಿತ ಕನ್ನಡ. ಸವರ್ಣದೀರ್ಘ ಸಂಧಿ.

    ಜಲಜಾಕ್ಷಿ = ಜಲಜ + ಅಕ್ಷಿ. ನಿಮ್ಮ ಪ್ರಕಾರ ಜಲಜಕ್ಷಿ ಆಗಬೇಕು.

    ದೇವ + ಅಸುರ = ದೇವಾಸುರ ನಿಮ್ಮ ಪ್ರಕಾರ ದೇವಸುರ ಆಗಬೇಕು.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments