ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 10, 2015

6

ಬುದ್ಧಿಜೀವಿಗಳ ಭೌತಶಾಸ್ತ್ರ

‍ನಿಲುಮೆ ಮೂಲಕ

– ವಿನಾಯಕ ಹಂಪಿಹೊಳಿ

ಬುದ್ಧಿಜೀವಿಗಳ ತಂಡವೊಂದು ಭೌತಿಕ ವಿಜ್ಞಾನವನ್ನು ಕಲಿಯಲು ಹೊರಟಿತು. ಸರ್ಕಾರದಿಂದ ಅನುದಾನ ಪಡೆದು ಎ.ಸಿ. ರೂಮೊಂದನ್ನು ಕಟ್ಟಿಸಿ, ಅಲ್ಲಿ ಎಲ್ಲ ಭೌತ ವಿಜ್ಞಾನದ ಪುಸ್ತಕಗಳನ್ನುಬುದ್ಧಿಜೀವಿ ತರಿಸಿ ಎಲ್ಲವನ್ನೂ ಅನೂಚಾನವಾಗಿ ಓದಿಕೊಂಡಿತು. ನ್ಯೂಟನ್ನಿನ ನಿಯಮಗಳಿಂದ ಆರಂಭಿಸಿ, ಕ್ವಾಂಟಂ ಸಿದ್ಧಾಂತದವರೆಗಿನ ಎಲ್ಲ ಸಿದ್ಧಾಂತಗಳನ್ನೂ ಅವುಗಳ ಇತಿಮಿತಿಗಳನ್ನೂ ಅಧ್ಯಯನ ಮಾಡಿತು. ೩-೪ ವರ್ಷಗಳ ನಂತರ ಆ ಬುದ್ಧಿಜೀವಿಗಳು ಈಗ ತಾವು ಎಲ್ಲವನ್ನೂ ತಿಳಿದುಕೊಂಡಿದ್ದೇವೆ ಎಂದು ಭಾವಿಸಿ ಒಂದು ಬಹುದೊಡ್ಡ ಅನ್ವೇಷಣಾ ವರದಿಯನ್ನು ಬರೆದು ಎ.ಸಿ. ರೂಮಿನಿಂದ ಹೊರಬಂದಿತು. ಅದು ತನ್ನ ಅನ್ವೇಷಣೆಯನ್ನು ಸರ್ಕಾರಕ್ಕೆ ಸಲ್ಲಿಸಿತು. ಆ ವರದಿಯ ಕೊನೆಯಲ್ಲಿ ಇಡೀ ಅಧ್ಯಯನದ ಸಾರಾಂಶ ಅಡಗಿತ್ತು.

“ಈ ಪ್ರಕೃತಿಯು ಬಹು ಗೊಂದಲದಿಂದ ಕೂಡಿದೆ. ವಸ್ತುಗಳ  ವೇಗ ಕಡಿಮೆಯಿದ್ದರೆ ನ್ಯೂಟನ್ನಿನ ನಿಯಮವನ್ನು ಪಾಲಿಸುತ್ತದೆ, ಆದರೆ ವೇಗ ತುಂಬಾ ಹೆಚ್ಚಿದಂತೆ ಆ ನಿಯಮಗಳನ್ನು ಮೀರುತ್ತವೆ ಮತ್ತು ಇದ್ದಕ್ಕಿದ್ದಂತೆ ಐನ್ಸ್ಟೈನ್ ನಿಯಮಗಳನ್ನು ಪಾಲಿಸುತ್ತವೆ. ಅಂದರೆ ಯಾವ ನಿಯಮವನ್ನು ಸರಿಯಾಗಿ ಪಾಲಿಸಬೇಕು ಎಂಬುದರ ಸ್ಪಷ್ಟವಾದ ಕಲ್ಪನೆ ಪ್ರಕೃತಿಗೆ ಇದ್ದಂತಿಲ್ಲ. ಗಾತ್ರದಲ್ಲಿ ದೊಡ್ಡದಾಗಿರುವ ವಸ್ತುಗಳು ಕ್ಲಾಸಿಕಲ್ ಮೆಕಾನಿಕಲ್ ನಿಯಮಗಳನ್ನು ಅನುಸರಿಸಿದರೆ, ಚಿಕ್ಕದಾಗಿರುವ ವಸ್ತುಗಳು ಮೆಕಾನಿಕಲ್ ನಿಯಮಗಳನ್ನು ಗಾಳಿಗೆ ತೂರಿ ಕ್ವಾಂಟಂ ಮೆಕಾನಿಕಲ್ ನಿಯಮಗಳನ್ನು ಅನುಸರಿಸುತ್ತವೆ. ಹೀಗೆ ದೊಡ್ಡವುಗಳಿಗೊಂದು ನ್ಯಾಯ, ಚಿಕ್ಕವುಗಳಿಗೊಂದು ನ್ಯಾಯವನ್ನು ನೀಡುವ ಪ್ರಕೃತಿಯು ನಿಜವಾಗಿಯೂ ಆದರ್ಶ ಪ್ರಕೃತಿಯಾಗಿರಲಾರದು.

ಬೆಳಕು ಮೊದಮೊದಲು ತರಂಗದಂತೆ ವರ್ತಿಸಿದರೆ, ಇದ್ದಕ್ಕಿದ್ದಂತೆ, ಕಣಗಳ ರೂಪದಲ್ಲಿ ವರ್ತಿಸಲು ಶುರು ಮಾಡುತ್ತವೆ. ಇದೇ ರೀತಿ, ಎಲೆಕ್ಟ್ರಾನ್ ಮುಂತಾದ ಸೂಕ್ಷ್ಮ ಕಣಗಳು ಒಮ್ಮೊಮ್ಮೆ ತರಂಗದಂತೆ ವರ್ತಿಸುತ್ತವೆ. ಹೀಗಾಗಿ ಈ ನಿಸರ್ಗವು ಒಂದು ಸುವ್ಯವಸ್ಥಿತವಾದ ಜಗತ್ತನ್ನು ಕಟ್ಟುವಲ್ಲಿ ವಿಫಲವಾಗಿದೆಯೆಂದು ಧಾರಾಳವಾಗಿ ಹೇಳಬಹುದು. ಅಲ್ಲದೇ ಥರ್ಮೋಡೈನಮಿಕ್ಸ್ ಪ್ರಕಾರ, ಜಗತ್ತಿನ ಎಂಥ್ರೊಪಿ (disorderness) ನಿರಂತರವಾಗಿ ಹೆಚ್ಚುತ್ತಲೇ ಇದೆ. ಪ್ರಕೃತಿಯ ಈ ಬೆಳವಣಿಗೆ ನಿಜವಾಗಿಯೂ ಆಘಾತಕಾರಿ. ಜಗತ್ತು ಸುವ್ಯವಸ್ಥತೆಯಿಂದ ಅವ್ಯವಸ್ಥತೆಯೆಡೆಗೆ ಸಾಗುತ್ತಿರುವದನ್ನು ಗುರುತಿಸುವಲ್ಲಿ ಪ್ರಕೃತಿಯು ಸಂಪೂರ್ಣವಾಗಿ ವಿಫಲವಾಗಿದೆ.

ಬಹುಶಃ ಬಿಗ್ ಬ್ಯಾಂಗಿನೊಂದಿಗೆ ಆರಂಭವಾದ ಈ ಜಗತ್ತು ಮೊದಲು ಅತ್ಯಂತ ಸುವ್ಯವಸ್ಥಿತವಾಗಿತ್ತು. ಕೆಲವು ಸ್ಪಷ್ಟವಾದ ನಿಯಮಗಳನ್ನು ಪಾಲಿಸುತ್ತಿತ್ತು ಎಂದು ಊಹಿಸಬಹುದು. ಆದರೆ ಕಾಲಾನಂತರ  ಪುರೋಹಿತಶಾಹಿಯಂಥ ಯಾವುದೋ ಇವಿಲ್ ಶಕ್ತಿ ತನ್ನ ಸ್ವಾರ್ಥಕ್ಕೋಸ್ಕರ ಈ ಪ್ರಕೃತಿಯ ಮೂಲರೂಪವನ್ನು ಭ್ರಷ್ಟಗೊಳಿಸಿತು. ಹೀಗಾಗಿ ಜಗತ್ತು ಇಂದು ಗೊಂದಲದ ಗೂಡಾಗಿ ಹೋಗಿದೆ. ವಸ್ತುಗಳು ಕೇವಲ ಒಂದು ನಿಯಮವನ್ನು ಪಾಲಿಸುವದನ್ನು ಬಿಟ್ಟು, ಪರಸ್ಪರ ವಿರುದ್ಧವಾಗಿರುವ ಅನೇಕ ನಿಯಮಗಳನ್ನು ಏಕಕಾಲಕ್ಕೆ ಪಾಲಿಸುತ್ತಿವೆ. ನ್ಯೂಟನ್ನಿನ ಪ್ರಕಾರ ಚಲಿಸುತ್ತಿರುವ ವಸ್ತು ಚಲಿಸುತ್ತಲೇ ಇರಬೇಕಾಗಿತ್ತು, ಆದರೆ ಪುರೋಹಿತಶಾಹಿಯಂಥ ಇವಿಲ್ ಶಕ್ತಿಯೊಂದು, ಫ್ರಿಕ್ಷನ್ ಅನ್ನು ಸೃಷ್ಟಿಸಿಬಿಟ್ಟಿರಬಹುದು. ಈ ಫ್ರಿಕ್ಷನ್ನಿನಿಂದಾಗಿಯೇ ಭೂಮಿಯ ಮೇಲೆ ಸತತವಾಗಿ ಚಲಿಸಲು ಸಾಧ್ಯವಾಗದೇ, ಇಂದು ನಾವು ವಾಹನಗಳ ಚಾಲನೆಗೆ ಇಂಧನಗಳ ಮೇಲೆ ಅವಲಂಬಿಸಬೇಕಾದ ಅನಿವಾರ್ಯತೆ ಬಂದೊದಗಿದೆ.

ಆದ್ದರಿಂದ, ಈ ಪ್ರಕೃತಿಯನ್ನು ಭ್ರಷ್ಟವನ್ನಾಗಿಸಿ, ಜಗತ್ತನ್ನು ಸುವ್ಯವಸ್ಥತೆಯಿಂದ ಅವ್ಯವಸ್ಥತೆಗೆ ಕೊಂಡೊಯ್ಯುತ್ತಿರುವ ಆ ಪುರೋಹಿತಶಾಹೀ ಇವಿಲ್ ಶಕ್ತಿಯನ್ನು ಕಂಡುಹಿಡಿದು ಅದನ್ನು ನಾಶಮಾಡಬೇಕಾದ ಅನಿವಾರ್ಯತೆ ಇದೆ. ಅವ್ಯವಸ್ಥಿತವಾದ ಈ ಪ್ರಕೃತಿಯನ್ನು ಸಂಪೂರ್ಣ ನಾಶ ಮಾಡಿ ಸುವ್ಯವಸ್ಥಿತವಾಗಿ ಪುನಾರಚಿಸಬೇಕಾದ ಅಗತ್ಯತೆ ಬಂದೊದಗಿದೆ. ಭೌತಿಕ ವಿಜ್ಞಾನಿಗಳು ಈ ನಿಟ್ಟಿನಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾಗಿ ಒಂದು ಆದರ್ಶಯುತವಾದ ಜಗತ್ತನ್ನು ಕಟ್ಟಬೇಕು. ಒಂದು ವೇಳೆ ಈ ಪ್ರಕೃತಿ ಮತ್ತು ಜಗತ್ತನ್ನು ರಚಿಸಿದ ಭಗವಂತ ಇರುವದೇ ಹೌದಾದಲ್ಲಿ ಈ ಕೂಡಲೇ ನಮ್ಮ ಈ ಬೇಡಿಕೆಯನ್ನು ಈಡೇರಿಸಬೇಕು. ಏಕೆಂದರೆ ಒಂದು ಸುವ್ಯವಸ್ಥಿತವಾದ ಪ್ರಕೃತಿ ಮತ್ತು ಆದರ್ಶಯುತ ಜಗತ್ತಿನಲ್ಲಿ ಬದುಕವದು ನಮ್ಮೆಲ್ಲರ ಹಕ್ಕು ಮತ್ತು ಅಂಥ ಜಗತ್ತನ್ನು ನಿರ್ಮಿಸಿ ಕೊಡುವದು ಸೃಷ್ಟಿಕರ್ತನೆಂದೆನಿಸಿಕೊಂಡ ಭಗವಂತನ ಕರ್ತವ್ಯವಾಗಿರುತ್ತದೆ.”

ಚಿತ್ರಕೃಪೆ : http://www.colourbox.com

6 ಟಿಪ್ಪಣಿಗಳು Post a comment
  1. WITIAN
    ಆಗಸ್ಟ್ 10 2015

    ವಿನಾಯಕ ಹಂಪಿಹೊಳಿಯವರೆ, ನೀವು ಬರೆದ ಒಂದು ಅಕ್ಷರವಾದರೂ ಈ ಮತಿಗೆಟ್ಟ ಬುದ್ಧಿಜೀವಿಗಳಿಗೆ ಅರ್ಥವಾದೀತೆಂದು ಅಂದು ಕೊಂಡಿದ್ದೀರಾ? ನಿಮ್ಮ ಅದಮ್ಯ ಆಶಾಭಾವನೆಗೆ ಒಂದು ದೊಡ್ಡ ಸಲಾಮ್!

    ಉತ್ತರ
  2. Murari
    ಆಗಸ್ಟ್ 11 2015

    ಲೇಖನ ಸ್ವಾರಸ್ಯಪೂರ್ಣವಾಗಿದೆ.

    ಉತ್ತರ
  3. valavi
    ಆಗಸ್ಟ್ 12 2015

    ಹ್ಹಾ !ಹ್ಹಾ! ಹ್ಹಾ!

    ಉತ್ತರ
  4. M A sreeranga
    ಆಗಸ್ಟ್ 18 2015

    ಹಂಪಿಹೊಳಿ ಅವರಿಗೆ– ಇಂದು ಭಾರತದ ಮತ್ತು ಪ್ರಪಂಚದ ಇತರೆ ಭಾಗಗಳಲ್ಲಿ ಅವಿರತವಾಗಿ ಸಂಶೋಧನೆ ಮಾಡುತ್ತಿರುವ ವಿಜ್ಞಾನಿಗಳು ತಮ್ಮ ಲೇಖನದಂತೆ ಯೋಚಿಸಲಾರರು. ತಾವು ಬುದ್ಧಿಜೀವಿಗಳನ್ನು ಟೀಕಿಸುವ ಭರದಲ್ಲಿ ನಮ್ಮ ದಿನನಿತ್ಯದ ಜೀವನವನ್ನು ಆದಷ್ಟೂ ಹಸನಗೊಳಿಸಲು ಪ್ರಯತ್ನಿಸುತ್ತಿರುವ ವಿಜ್ಞಾನಿಗಳನ್ನು ಅಪಹಾಸ್ಯ ಮಾಡಿದ್ದೀರಿ. ನ್ಯೂಟನ್ ಕಾಲಕ್ಕೆ, ಅವನ ಬುದ್ಧಿಮತ್ತೆಗೆ ಆತನ ಥಿಯರಿ ಸರಿಯಾಗಿಯೇ ಇತ್ತು. ಅದನ್ನು ನಾವು ಈಗಲೂ ದಿನನಿತ್ಯ ಕಾಣಬಹುದು. ವೈಜ್ಞಾನಿಕ ಕ್ಷೇತ್ರ ನಿಂತ ನೀರಲ್ಲ, ಹರಿಯುವ ನದಿ. ಹೀಗಾಗಿ ಐನ್ ಸ್ಟೀನ್ ನ ಕ್ವಾಂಟಮ್ ಥಿಯರಿ ಬಂತು. ಆಗಲೂ ಸಹ ಐನ್ ಸ್ಟೀನ್ ತಾನು ಕಲಿತಿರುವುದು,ಸಂಶೋಧಿಸಿರುವುದು, ಸಮುದ್ರದ ಬಳಿಯ ಒಂದು ಮರಳಿನ ಕಣದಷ್ಟೇ ಎಂದು ಹೇಳಿದ್ದ. ನಾಳೆ ಐನ್ ಸ್ಟೀನ್ ನನ್ನೂ ಮೀರಿಸುವ ವಿಜ್ಞಾನಿ ಬರಬಹುದು. ಹಾಗೆಂದು ಐನ್ ಸ್ಟೀನ್ ನ ಮಹತ್ವ ಹೇಗೆ ಕಡೆಗಣಿಸಲು ಸಾಧ್ಯ? ಕಲರ್ ಟಿವಿ ಬಂತೆಂದು ಬ್ಲಾಕ್ ಅಂಡ್ ವೈಟ್ ಟಿವಿ , ಮೊಬೈಲ್ ಬಂತೆಂದು ಲ್ಯಾಂಡ್ ಲೈನ್ ಫೋನುಗಳನ್ನು ನಾವು ಈ ಹಿಂದೆ ಉಪಯೋಗಿಸಿದ್ದನ್ನೇ ಮರೆಯಲು ಸಾಧ್ಯವೇ?

    ಉತ್ತರ
    • ಆಗಸ್ಟ್ 18 2015

      ಶ್ರೀರಂಗರವರೆ, ಹಂಪಿಹೊಳಿಯವರು ವಿಜ್ಞಾನಿಗಳನ್ನು ಅಪಹಾಸ್ಯ ಮಾಡಿಲ್ಲ. ಆದರೆ ಬುದ್ಧಿಜೀವಿಗಳು ವಿಜ್ಞಾನವನ್ನು ಅವಲೋಕಿಸುವ ಪರಿಯನ್ನು ಅಪಹಾಸ್ಯ ಮಾಡಿದರು ಎಂದುಕೊಳ್ಳಬಹುದು.
      ಯಾಕೆಂದರೆ ಬಹಳ ಮುಖ್ಯವಾಗಿ ನಾವಿಲ್ಲಿ ಗಮನಿಸಬೇಕಾದುದೆಂದರೆ ‘ವೈಜ್ಞಾನಿಕ ಚಿಂತನೆ’ ಯನ್ನು ಪುನರುಚ್ಚರಿಸುವ ಬುದ್ಧಿಜೀವಿಗಳ ವಿಜ್ಞಾನ ಜ್ಞಾನ ಭೌತ ವಿಜ್ಞಾನದ ಆಳವನ್ನಾಗಲಿ, ಕಾಗ್ನಿಟಿವ್ ಸೈನ್ಸ್ ಗಳನ್ನಾಗಲೀ ಆಧರಿಸಿರುವದಿಲ್ಲ. ರಿಲಿಜಿಯನ್ ಗಳಂತೆಯೇ ಅವರ ಚಿಂತನೆಯೂ ಸಹ ನಿಂತ ನೀರು. ವಿಜ್ಞಾನದ ಆಳವನ್ನು ಹೊಕ್ಕಿದವರಿಗೆ ಇವರ ಚಿಂತನೆ ಎಷ್ಟು ಜೊಳ್ಳು ಎನ್ನುವದು ಅರ್ಥವಾಗಿಬಿಡುತ್ತದೆ.
      ಇವರ ಚಿಂತನೆಗೆ ವಿರುದ್ಧವಾಗಿರುವ ವೈಜ್ಞಾನಿಕ ಸಂಗತಿಗಳನ್ನೂ ಇವರು ಹೇಗೆ ಸಾರಾಸಗಟವಾಗಿ ತಿರಸ್ಕರಿಸುತ್ತಾರೆ ಎನ್ನುವದು ಈ ಲೇಖನದ ಉದ್ದೇಶ ಎಂದುಕೊಳ್ಳುತ್ತೇನೆ.

      ಉತ್ತರ
    • vinayakhampiholi
      ಆಗಸ್ಟ್ 19 2015

      ಧನ್ಯವಾದಗಳು ಬಾಲಚಂದ್ರ ಅವರೇ,

      ಶ್ರೀರಂಗರೇ,

      ಇಡೀ ಈ ಲೇಖನದ ಉದ್ದೇಶ ನಮ್ಮ ಬುದ್ಧಿಜೀವಿಗಳು, ನಮ್ಮ ಸಮಾಜವನ್ನು, ನಮ್ಮ ಪರಂಪರೆಗಳನ್ನು ಯಾವ ದೃಷ್ಟಿಕೋಣದಿಂದ ಅರ್ಥೈಸಿದ್ದಾರೆ ಎಂಬುದನ್ನು ತಿಳಿಸುವದಾಗಿದೆ. ಈ ಸಮಾಜ ಸರಿಯಿಲ್ಲ, ಈ ಪರಂಪರೆಗಳು ಮೂಢನಂಬಿಕೆಗಳು, ಇವುಗಳನ್ನೆಲ್ಲ ನಾಶ ಮಾಡಿ ಸಮಾಜವನ್ನು ಸರಿಯಾಗಿ ಕಟ್ಟಬೇಕು ಎಂಬ ಪಾಶ್ಚಿಮಾತ್ಯ ಕಲ್ಪನೆಯಡಿಯಲ್ಲಿ ನಮ್ಮ ಪರಂಪರೆಗಳನ್ನು ನೋಡುವದು ಎಷ್ಟು ಹಾಸ್ಯಾಸ್ಪದವಾಗುತ್ತದೆ, ಎಂಬುದನ್ನು ತಿಳಿಸಲು ಇದನ್ನು ಉಪಮಾನವನ್ನಾಗಿ ಉಪಯೋಗಿಸಿದ್ದೇನೆ. ವಚನಸಾಹಿತ್ಯವನ್ನು ಸಾಮಾಜಿಕ ಚಳುವಳಿ ಎಂದು ನೋಡುವದು, ವಚನಗಳಿಗೆ ಇಲ್ಲದ ಅರ್ಥಗಳನ್ನು ಕಲ್ಪಿಸುವದು ಇವೆಲ್ಲವುಗಳೂ ಕೂಡ ಯಾವ ಪ್ರಯೋಜನಕ್ಕೂ ಬರಲಾರದು ಎಂದು ಸಾರುವದು ಈ ಲೇಖನದ ಉದ್ದೇಶ.

      ಒಂದು ವೈಜ್ಞಾನಿಕ ಸಿದ್ಧಾಂತವನ್ನು ಕಲಿಯಲು ಒಂದು ಕ್ರಮವಿರುತ್ತದೆ. ಅದನ್ನು ಹಾಗೆಯೇ ಕಲಿತರೆ ಅದು ಸಾರ್ಥಕವಾಗುತ್ತದೆ. ಹಾಗೆಯೇ ನಮ್ಮ ಪರಂಪರೆಗಳನ್ನು ಕಲಿಯಲೂ ಒಂದು ಕ್ರಮವಿದೆ. ಅದನ್ನು ಬಿಟ್ಟು ಹೇಗೇಗೋ ಕಲಿತರೆ ಅದು ಮೇಲೆ ತಿಳಿಸಿದಂತೆ ಯಾವ ಪ್ರಯೋಜನಕ್ಕೂ ಬಾರದೇ ಕೇವಲ ವಿರೋಧಾಭಾಸಗಳಷ್ಟೆ ತುಂಬಿಕೊಂಡಿರುತ್ತವೆ.

      ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments