ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 25, 2015

1

ಸ್ವಪ್ನ ಸಾರಸ್ವತ – ಎರಡು ಅನಿಸಿಕೆಗಳು

‍ನಿಲುಮೆ ಮೂಲಕ

ಸ್ವಪ್ನ ಸಾರಸ್ವತ – ಕುಲ ಮತ್ತು ಕಾಲದ ಕಥೆ

– ನವೀನ ಗಂಗೋತ್ರಿ

ಸ್ವಪ್ನ ಸಾರಸ್ವತ'ನೆನಪಳಿಯದ ಕೃತಿಗಳ ಸಾಲಿನಲ್ಲಿ ಈ ಹೆಸರು ಎಂದಿಗೂ ಅಜರಾಮರ- ಸ್ವಪ್ನ ಸಾರಸ್ವತ. ಒಂದು ಕೃತಿ ಯಾಕೆ ಹಾಗೆ ಪದೇ ಪದೇ ಸ್ಮರಣೀಯವಾಗುತ್ತದೆ ಎನ್ನುವುದಕ್ಕೆ ಆ ಕೃತಿಯ ರೋಚಕತೆಯಾಗಲೀ, ಕಥೆಯ ಕಲ್ಪಕತೆ ಅಥವಾ ಕುತೂಹಲದ ತುದಿಯಲ್ಲಿ ನಿಲ್ಲಿಸುವ ಗುಣವಾಗಲೀ ಕಾರಣವಾಗದೆ ಆ ಕೃತಿಯು ತನ್ನ ಪಾತ್ರಗಳ ಮೂಲಕ ಮಾನವ ಬದುಕಿನ ಯಾವೆಲ್ಲ ಘಟ್ಟಗಳನ್ನು ತಾಕಬಲ್ಲದು,ಮತ್ತು ತಾತ್ತ್ವಿಕವಾಗಿ ಯಾವ ಅನಿಸಿಕೆಯನ್ನು ವ್ಯಕ್ತಪಡಿಸಬಲ್ಲದು ಎನ್ನುವುದು ಕಾರಣವಾಗುತ್ತದೆ. ಮಹಾಕಾವ್ಯಗಳಲ್ಲದೆ, ನಮ್ಮನಡುವೆ ಉಳಿದುಬಂದ ಯಾವುದೇ ಮೌಲಿಕ ಕೃತಿಯನ್ನು ತೆಗೆದುಕೊಂಡರೂ ಅದರ ಸಾರ್ವತ್ರಿಕ ಗುಣ ಇದುವೇ ಆಗಿರುತ್ತದೆ- ಮಾನವ ಬದುಕನ್ನು ಅದು ಕಾಣುವ ರೀತಿ ಮತ್ತು ಕಟ್ಟಿಕೊಡುವ ತಾತ್ತ್ವಿಕತೆ. ಬದುಕಿನ ಅರ್ಥದ ಬಗ್ಗೆ ಮನುಷ್ಯನಿಗಿರುವ ಆರದ ಕುತೂಹಲವೂ ಇದಕ್ಕೆ ಕಾರಣವಿದ್ದೀತು. ಎಷ್ಟೇ ರೋಚಕವಾದರೂ ಯಾವುದೋ ಸಾಮಾನ್ಯ ಪತ್ತೇದಾರಿ ಕಾದಂಬರಿ, ಯಾವುದೋ ಸಾಮಾನ್ಯ ಪ್ರೇಮ ಕಥೆ ನೆನಪಿರುವುದು ತುಂಬ ತುಂಬ ವಿರಳ. ಸಾರಸ್ವತದ ಚಿರಂಜೀವಿತ್ವ ಇರುವುದು ಅದರ ಚಿಂತನೆ ಮತ್ತು ತಾತ್ತ್ವಿಕ ಹಿನ್ನೆಲೆಯಲ್ಲಿ.

ಗೋವೆಯೆಂಬ ಪುಟ್ಟ ನಾಡಲ್ಲಿ ತಮ್ಮಪಾಡಿಗೆ ತಾವು ಬದುಕಿದ್ದ ಸಾರಸ್ವತ ಜನಾಂಗ, ಏಕಾ ಏಕಿ ಎರಗಿದ ಹುಂಬ ಪೋರ್ಚುಗೀಸರ ಭಯಂಕರ ಕಿರುಕುಳ ತಾಳಲಾರದೆ ತಮ್ಮ ಉಸಿರಿನ ನೆಲ ಬಿಟ್ಟು, ಬದುಕಲ್ಲಿ ಎಂದಿಗೂ ಕಂಡಿರದಿದ್ದ ಅರಿಯದ ನೆಲೆಗೆ ಎದ್ದುನಡೆದ ಕಥೆ ಅದು. ಕಥೆಯ ಹಂದರವಂತೂ ತುಂಬ ತುಂಬ ಸಂಕೀರ್ಣವಾಗಿದೆ. ಓದುವುದಕ್ಕೇ ಅದೊಂದುಬಗೆಯ ಏಕಾಗ್ರತೆಯನ್ನು ಬೇಡುವ ಈ ಕೃತಿ ತನ್ನ ಬರಹಗಾರನಲ್ಲಿ ಬೇಡಿದ ತಪಸ್ಸಿನ ಮೊತ್ತವನ್ನು ಕಲ್ಪಿಸಿ ಚಕಿತನಾಗುತ್ತೇನೆ.

ಸಮುದಾಯವೊಂದು ತನ್ನ ಜೀವನೆಲೆಯಂತಿರುವ ಭೂಭಾಗವನ್ನು ತೊರೆದು ಬರುವಾಗ ಅದೊಂದು ’ಕೇವಲ ಸ್ಥಾನಾಂತರಣ’ ಆಗಿರದೆ, ತಲೆಮಾರುಗಳನ್ನು ಪ್ರಭಾವಿಸುವ ಸಂಗತಿಯಾಗಿರುತ್ತದೆ ಎನ್ನುವುದು ಸಾರಸ್ವತವನ್ನು ಓದುವಾಗ ನಿಚ್ಚಳವಾಗುತ್ತದೆ. ತನ್ನ ಪರಿವಾರ, ಪರಿಸ್ಥಿತಿ, ಸಮೂಹದ ಸಮೇತ ಒಂದು ಕುಲ ಸ್ಥಾನಾಂತರವಾಗುವಾಗ ಯಾವುದೆಲ್ಲವನ್ನು ತನ್ನೊಡನೆ ಕೊಂಡೊಯ್ಯಬಹುದು? ಆಸ್ತಿ, ಹಣ, ಒಡವೆ, ಉಳಿಕೆ, ಗಳಿಕೆ- ಯಾವುದನ್ನು? ಸಾರಸ್ವತದ ದೃಷ್ಟಿ ಕೇಂದ್ರಗೊಳ್ಳುವುದು ಇದ್ಯಾವುದರ ಮೇಲೆಯೂ ಅಲ್ಲ, ಬದಲಿಗೆ ಆ ಹಂತದಲ್ಲಿ ಮನುಷ್ಯ ತುಂಬಾ ಗಾಢವಾಗಿ ಹೊತ್ತೊಯ್ಯಲು ಬಯಸುವುದೆಂದರೆ ತನ್ನ ತಲೆಮಾರುಗಳಿಗೆ ಸಾಕಾಗುವಷ್ಟು ನೆನಪನ್ನು, ಸಂಪ್ರದಾಯ ಆಚಾರ ಮತ್ತು ನಂಬುಗೆಗಳನ್ನು ಎಂಬ ನಿಲುಮೆಗೆ ಸಾರಸ್ವತ ಬರುತ್ತದೆ. ನೆಲ ಬಿಟ್ಟೆದ್ದು ಬಂದದ್ದೇ ಆಚಾರದ ಉಳಿಕೆಗಾಗಿ ಎಂಬಾಗ, ಹೊತ್ತೊಯ್ಯಬೇಕಿರುವುದು ಅದನ್ನೇ ಅಲ್ಲವೆ?

ಒಂದು ಕಥೆಯನ್ನು ಕಲ್ಪಿಸಿಕೊಂಡು ಬರೆಯುವುದರಿಂದ ಸಾರಸ್ವತದಂಥಾ ಕೃತಿ ಹುಟ್ಟಲಾರದು. ಮನುಷ್ಯನ ಕಲ್ಪನೆಯು ವಾಸ್ತವದೊಡನೆ ಸಮಬೆರೆತಾಗಲೇ ಅದು ಅಮೂಲ್ಯವೆನಿಸುತ್ತದೆ. ಭೌಗೋಳಿಕ ವಿವರ, ಸಂಚಲನದ ಕಾಲದ ವಿವರ, ಆಗಿನ ಸಮಾಜಿಕ ಮತ್ತು ರಾಜಕೀಯ ಸ್ಥಿತಿಗಳನ್ನೊಳಗೊಂಡಂತೆ, ಮಾನವನೊಳಗೆ ಕಾಲವನ್ನು ಮೀರಿಯೂ ಉಳಿದುಕೊಳ್ಳುವ ಸಾಮಾನ್ಯ ಜಿಜ್ಞಾಸೆ ಮತ್ತು ಆಸೆಗಳ ಕಥನವೇ ಸ್ವಪ್ನ ಸಾರಸ್ವತ.

ಎಲ್ಲ ಪಾತ್ರಗಳೂ ತಮ್ಮದೇ ಆದ ನೆಲೆಯಲ್ಲಿ ಅನನ್ಯ ಅನ್ನಿಸುತ್ತವೆಯಾದರೂ, ನಾಗ್ಡೋ ಬೇತಾಳ ಎಂಬುವ ಸಾವಿರದ ಪಾತ್ರವು ಸಾರಸ್ವತದ ಜೀವಾಳ. ದೇಶ ಕಾಲಗಳ ಮೇರೆಯಿಲ್ಲದವನಂತೆ ಅವುಗಳ ಆಚೆಗೂ ಈಚೆಗೂ ಸಂಚಲಿಸುವ ನಾಗ್ಡೋ ಬೇತಾಳ ( ನಗ್ನ ಬೇತಾಳ ಸನ್ಯಾಸಿ) ಪೂರ್ಣ ಕೃತಿಯಲ್ಲಿ ನನ್ನನ್ನು ಬಹುವಾಗಿ ತಾಕಿದ ಪಾತ್ರ. ಅದೊಂದು ಪಾತ್ರ ಮಾತ್ರವೇ ಆಗಿರದೆ, ಮಾನವ ಬದುಕಿನ ಭರವಸೆ, ಆಶಾಭಾವ, ಯಾವುದೋ ಅರಿಯದೊಂದು ಬಲ ತನ್ನೊಡನೆ ಇದೆಯೆನ್ನುವ ಭಾವ- ಸ್ಥೂಲವಾಗಿ ದೇವರು ಎನ್ನುವುದರ ಪ್ರತಿನಿಧಿಯೂ ಹೌದು. ಪೂರ್ತಿ ಕಥೆಯು ಒಂದು ಜನಾಂಗದ ಸಂಕ್ರಮಣದ ದೀರ್ಘವೃತ್ತಾಂತವಾಗುತ್ತಲೂ ಅದು ಉಳಿಸಿಕೊಳ್ಳುವ ಏಕಸೂತ್ರತೆಯೆಂದರೆ ನಾಗ್ಡೋಬೇತಾಳ ಎಂಬ ಆಶಾವಾದ.

ಗೋವೆಯನ್ನು ತೊರೆಯುವ ಸಂಕಲ್ಪದ ಹಿಂದೆ ಮುಂದೆ ಎಲ್ಲಕಡೆಗೂ ಇದ್ದವ ಬೇತಾಳ. ಅವನ ಆಜ್ಞೆ ಅನುಜ್ಞೆಯನ್ನಲ್ಲದೆ ಸಾರಸ್ವತರು ಅನುಸರಿಸಿದ್ದು ಬೇರೆಯದನ್ನಲ್ಲ. ಅತಿ ಸಾಮಾನ್ಯರ ಜೊತೆಯಲ್ಲಿ ಸಾಮಾನ್ಯರಂತೆ ಬಂದು ಸುಳಿದಾಡುವ ಈ ಸನ್ಯಾಸಿ ಕಾಲದ ಒಳಗನ್ನು ಹೊಕ್ಕು ನಾಳೆಯನ್ನು ನೋಡಬಲ್ಲೆನೇನೋ ಎಂಬಂತೆ ಮಾತಾಡುತ್ತಾನೆ. ಮತ್ತು ಅವನ ಮಾತು ಸಂಭವಿಸುತ್ತದೆ ಎನ್ನುವುದನ್ನು ಕೃತಿಯು ಬಹಳೇ ನಾಜೂಕಾಗಿ ನಿರ್ವಹಿಸುತ್ತದೆ. ದೈವಿಕ ಮತ್ತು ಮಾನವೀಯ ಸಂಗತಿಗಳ ಇಷ್ಟು ಹದವಾದ ಮಿಶ್ರಣವು ಬದುಕಿನ ದೃಷ್ಟಿಯಿಂದ ಬಲು ಸ್ವೀಕಾರ್ಯವಾದ ಅಂಶ. ಇದು ಹೀಗಿಲ್ಲದಿದ್ದರೆ- ಒಂದೋ ನಾಗ್ಡೋ ಬೇತಾಳನನ್ನು ಅತಿಮಾನುಷನೆಂದು ಬಗೆದು ಅವನ ಆಣತಿಯಂತೆಯೇ ಕಾಲವು ಸಾಗಿತೆಂದು ಚಿತ್ರಿಸಬೇಕಿತ್ತು. ಅಥವಾ, ಕಾಲದ ಊಹೆಯನ್ನು ನಾಗ್ಡೋ ಕೂಡ ಮಾಡದಾದ, ಮತ್ತು ಬದಲಾದ ಕಾಲದಲ್ಲಿ ನಾಗ್ಡೋ ಅಪ್ರಸ್ತುತವಾದ ಎಂದು ಬರೆಯಬೇಕಿತ್ತು. ಆದರೆ ಹೀಗೆ ಏಕಪಕ್ಷೀಯವಾಗುವ ಅಪಾಯದಿಂದ ತಪ್ಪಿಸಿಕೊಂಡು ಕೃತಿಯು ನಾಗ್ಡೋ ಬೇತಾಳ ಎನ್ನುವ ಆದರ್ಶ ಪಾತ್ರವೊಂದನ್ನು ಕಟ್ಟಿಕೊಡುತ್ತದೆ. ಇಲ್ಲಿ ಆದರ್ಶ ಪಾತ್ರ ಎಂದು ನಾಗ್ಡೋ ಬೇತಾಳನನ್ನು ನಾನು ಬಗೆದಿರುವುದು ಆ ಪಾತ್ರವು ಕಾಲದೊಂದಿಗೆ ಸಂವಹನವನ್ನೂ, ಸಮತೆಯನ್ನೂ ಸಾಧಿಸುವ ರೀತಿಯ ಕಾರಣಕ್ಕೆ.

ಮಾನವ ಬದುಕನ್ನು ನಿರ್ಣಯಿಸುವ ಅಂಶ ಯಾವುದು? ಎಲ್ಲೋ ಸೂಕ್ಷ್ಮವಾಗಿ ಕೃತಿಯು ಈ ಪ್ರಶ್ನೆಗೆ ಉತ್ತರ ಕೊಡುತ್ತದೆ. ಮತ್ತು ಆ ಉತ್ತರ ’ನೈತಿಕತೆ’ ಎನ್ನುವುದಾಗಿದೆ. ನೈತಿಕ ಜಾರುವಿಕೆಯು ಬದುಕನ್ನು ಒಂದಿಲ್ಲ ಒಂದು ಬಗೆಯಲ್ಲಿ ಕೂಪಕ್ಕೇ ತಳ್ಳುತ್ತದೆ ಎನ್ನುವ ಧ್ವನಿಯಿದೆ ಅಲ್ಲಿ .

ಉದಾ- ಧಡ್ಡನೆಂಬೋ ಮೂಕ ಪಾತ್ರವೊಂದು ತನ್ನ ಬದುಕನ್ನೆಲ್ಲ ಒಂದೇ ಪರಮ ಕಾರ್ಯಕ್ಕೆ ಎಂಬಂತೆ ಬದುಕಿ ಕೊನೆಯಲ್ಲಿ ಆ ಕಾರ್ಯವನ್ನು ಸಮರ್ಥವಾಗಿ ನೆರವೇರಿಸಿರುತ್ತದೆ. ಪೋರ್ಚುಗೀಸರ ಕ್ರೂರತೆಗೆ ಸೋತ ವೆರಣೆಯ (ಗೋವೆಯ ಒಂದು ಭಾಗ) ಸಾರಸ್ವತರ ಕುಲವೇ ಊರು ಬಿಡುತ್ತಿದ್ದ ಸಂದರ್ಭ ಅದು. ಅದೇನೇ ಆದರೂ ಕುಲದೇವಿ ಮ್ಹಾಳಶಿ ಮಾಯಿಯ ಬೃಹತ್ ವಿಗ್ರಹವು ಪೋರ್ಚುಗೀಸರ ಕೈಗೆ ಸಿಗಲೇ ಬಾರದೆಂದು ಬಗೆದ ನಾಗ್ಡೋ ಬೇತಾಳ ಧಡ್ಡನ ಕೈಯಲ್ಲಿ ಆ ವಿಗ್ರಹವನ್ನು ರಾತ್ರೋ ರಾತ್ರಿ ಹೊರಿಸಿ ಬೇರೆಡೆಗೆ ಸಾಗಿಸುವ ವ್ಯವಸ್ಥೆ ಮಾಡಿರುತ್ತಾನೆ. ಗುಡಿಯಲ್ಲಿ ವಿಗ್ರಹ ಇಲ್ಲದ್ದನ್ನು ಕಂಡ ಪೋರ್ಚುಗೀಸ್ ಸೈನಿಕರು ಕೆಲವು ಸಾರಸ್ವತ ಬ್ರಾಹ್ಮಣರನ್ನು ಹಿಡಿದು ವಿಗ್ರಹದ ಜಾಡಿಗಾಗಿ ಹಿಂಸಿಸುತ್ತಾರೆ. ಹಾಗೆ ಹಿಂಸೆಗೆ ಒಳಗಾದವರಲ್ಲಿ ವಿಟ್ಠು ಪೈ ಎಂಬ ಕಥೆಯ ಅತಿಮುಖ್ಯ ಪಾತ್ರವೂ ಒಂದು. ದುರಂತವೆಂದರೆ ಆ ಬಂಧನಕ್ಕೊಳಗಾದ ಗುಂಪಿನಲ್ಲಿ ವಿಗ್ರಹದ ಗುಟ್ಟು ತಿಳಿದವನೇ ಈ ವಿಟ್ಠು ಪೈ ಮಾತ್ರ. ಛಡಿಯೇಟಿನ ಹಿಂಸೆ ತಾಳದಾದ ಆತ ಧಡ್ಡನ ವಿಷಯವಾಗಿ ಹೇಳಿಬಿಡುತ್ತಾನೆ. ಅಲ್ಲಿಗೆ ಇವರನ್ನು ಬಿಟ್ಟು ಧಡ್ಡನನ್ನು ಕಾಡುವ ಸೈನಿಕರ ಕ್ರೂರತೆಗೆ ಧಡ್ಡ ಯಾತನಾಮಯವಾದ ದಯನೀಯ ಸಾವು ಕಾಣುತ್ತಾನೆ. ಗುಟ್ಟು ಬಿಚ್ಚಿಡಲು ಬಾಯೇ ಇಲ್ಲದ ಅವನ ಅವಸ್ಥೆ ಸೈನಿಕರಿಗೂ ತಿಳಿಯದೆ ಹೋಗುತ್ತದೆ. ಮ್ಹಾಳಶಿ ಮಾಯಿಯ ವಿಗ್ರಹ ಉಳಿದುಕೊಳ್ಳುತ್ತದೆ, ಆದರೆ ಇತ್ತ ಧಡ್ಡನ ದಯನೀಯ ಸಾವಿನಿಂದ ಕ್ರುದ್ಧನಾದ ನಾಗ್ಡೋ ಬೇತಾಳ, ಅದಕ್ಕೆ ಕಾರಣನಾದ ವಿಟ್ಠು ಪೈ ವಿಷಯದಲ್ಲಿ ನಖಶಿಖಾಂತ ಉರಿದು ಶಾಪ ಕೊಡುತ್ತಾನೆ. ವೆರಣೆಯ ನೀರು ನೆಲ ಎಲ್ಲವೂ ನಿನಗೂ ನಿನ್ನ ನಾಲ್ಕು ತಲೆಮಾರಿಗೂ ವಿಷ, ಎದ್ದು ಹೋಗು ಇಲ್ಲಿಂದ ಎನ್ನುತ್ತಾನೆ. ಅದೇ ಶಾಪ ಮುಂದಿನ ತಲೆಮಾರುಗಳಲ್ಲಿ ಪ್ರತಿಫಲಿಸುತ್ತದೆ. ಅದೇ ಮುಂದಿನ ಕಥೆಯ ಮೂಲವೂ ಆಗುತ್ತದೆ.

ವಿಟ್ಠು ಪೈ ಯಾಕೆ ಬಾಯ್ಬಿಟ್ಟ ಎನ್ನುವುದಕ್ಕೆ ಹಿಂಸೆ ಮಾತ್ರವೆ ಕಾರಣವೇ ಅಂದರೆ, ಹಾಗಿಲ್ಲ. ಎಲ್ಲೋ ಒಂದು ಕಡೆ ಸೈರಣೆಯನ್ನೂ, ಕಷ್ಟಸಹಿಸುವ ಶಕ್ತಿಯನ್ನು, ನಿಷ್ಠೆಗೆ ಬೇಕಾದ ತಪಸ್ಸಿನಂಥಾ ಗುಣವನ್ನು ವಿಟ್ಠು ಪೈ ಕಳೆದುಕೊಂಡಿರುತ್ತಾನೆ. ತನಗೆ ಹೆಂಡತಿಯಿದ್ದೂ ಅಲ್ವೀರಾ ಎನ್ನುವ ಪ್ರೆಂಚ್ ಹುಡುಗಿಯೆಡೆಗಿನ ಮೋಹ ಮತ್ತು ನೈತಿಕವಲ್ಲದ ಸಂಬಂಧ ವಿಟ್ಠುವಿನ ಆತ್ಮಬಲವನ್ನು ಎಲ್ಲೋ ಸಡಿಲಮಾಡಿಬಿಟ್ಟಿರುತ್ತದೆ. ನೇರವಾಗಿ ಕೃತಿ ಆ ಮಾತು ಹೇಳದಿದ್ದರೂ, ವಿಟ್ಠುವಿನ ಮುಖ ನೋಡಿದ ನಾಗ್ಡೋ ಬೇತಾಳ ಒಂದೊಮ್ಮೆ ಆಡಿದ ಮಾತು ಅದನ್ನೇ ಧ್ವನಿಸುತ್ತದೆ. ಮನುಷ್ಯನ ನೈತಿಕ ಅಧಃಪಾತವು ಎಷ್ಟು ದೊಡ್ಡ ಪ್ರಮಾದಗಳಿಗೆ ಪರೋಕ್ಷ ಕಾರಣವಾಗಬಹುದು ಎನ್ನುವುದು ಧ್ವನಿತವಾಗಿದೆ ಇಲ್ಲಿ.

ಎಂಥ ಸೂಕ್ಷ್ಮ ಸಂದಿಗ್ಧ ಇಲ್ಲಿದೆಯೆಂದರೆ, ಧಡ್ಡನ ಕುರಿತಾದ ಸತ್ಯವನ್ನು ಸೈನಿಕರಿಗೆ ಹೇಳುವ ಸಾಧ್ಯತೆಯಿದ್ದವ, ಗುಟ್ಟು ತಿಳಿದವ ವಿಟ್ಠು ಪೈ ಮಾತ್ರ. ಅದಲ್ಲದೆ ಆ ಗುಟ್ಟು ಅವನನ್ನೂ ಮತ್ತು ಉಳಿದ ಬಂಧಿಗಳನ್ನೂ ಬಿಡುಗಡೆ ಮಾಡುವ ಸಾಮರ್ಥ್ಯ ಹೊಂದಿತ್ತು. ಮನುಷ್ಯ ಇಂಥದೊಂದು ಸಂದರ್ಭದಲ್ಲಿ ಏನಂತ ಯೋಚಿಸುತ್ತಾನೆ? ಉದಾತ್ತ ಆದರ್ಶವಾದಿಯಾಗಿ, ಕುದಿಯುವ ವಾಸ್ತವದಲ್ಲಿ ಬದುಕುವುದು ಎಷ್ಟು ಜನರಿಗೆ ಸಾಧ್ಯವಾದೀತು?

ನಾಗ್ಡೋ ಬೇತಾಳನಂಥಾ ವ್ಯಕ್ತಿ ಇರುವುದೆಂದರೇನು, ಶಾಪ ಕೊಡುವುದೆಂದರೇನು, ಅದು ಸಂಭವಿಸುವುದೆಂದರೇನು- ಎಲ್ಲವೂ ಪುರಾಣದ ಕಥೆಯಂತಿದೆಯಲ್ಲವೆ ಅನ್ನಿಸಬಹುದು. ಆದರೆ ಕೃತಿಯು ಕಟ್ಟಿಕೊಡುವ ಸಂದರ್ಭದಲ್ಲಿ ನಾಗ್ಡೋ ಬೇತಾಳ ಆ ಕಾಲದ ಮಾತನ್ನಾಡಿದ ಅನ್ನಿಸುವುದೇ ಹೊರತು ಕಾಲವನ್ನು ಆದೇಶಿಸುವ ಮಾತಾಡಿದ ಅನ್ನಿಸದು. ಉದಾ- ಶಾಪದಿಂದಲ್ಲದಿದ್ದರೂ ಪೋರ್ಚಿಗೀಸರ ಪೈಶಾಚಿಕತೆಗೆ ರೋಸಿ ಆ ಬ್ರಾಹ್ಮಣ ಸಮುದಾಯ ವೇರಣಾ ಪ್ರದೇಶವನ್ನು ಬಿಟ್ಟು ತೆರಳಲೇ ಬೇಕಿತ್ತು, ಬೇತಾಳನ ಮಾತು ಅದಕ್ಕೆ ಸೇರಿಕೊಂಡಿತಷ್ಟೆ. ಈ ಅರ್ಥದಲ್ಲಿ ಬೇತಾಳ ಎನ್ನುವ ಪಾತ್ರ ಕಾಲವನ್ನು ತುಂಬ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳುವ ಮಾನವೀಯ ಪಾತ್ರವೇ ಹೊರತು ಯಾವುದೋ ಅಲೌಕಿಕ ಶಕ್ತಿಯ ಕಲ್ಪಕ ಪಾತ್ರವಲ್ಲ. ಕಾಲವನ್ನು ಚಿಂತಿಸುವ ಆ ಪಾತ್ರದ ಸೂಕ್ಷ್ಮತೆ ನನ್ನನು ಪದೇ ಪದೇ ಅಚ್ಚರಿಗೊಳ್ಳುವಂತೆ ಮಾಡುತ್ತದೆ. ಅಂಥದೊಂದು ಪಾತ್ರವನ್ನು ಗೋಪಾಲ ಕೃಷ್ಣ ಪೈಗಳು ಒಲಿಸಿಕೊಂಡುದು ಹೇಗೆ ಎಂದು ಬೆರಗುಂಟಾಗುತ್ತದೆ.

ಪೋರ್ಚುಗೀಸರ ಪ್ರಭಾವದಿಂದಾಗಿ ಗೋವೆಗೆ ಹೊಸದಾಗಿ ಮುದ್ರಣ ಯಂತ್ರಗಳು ಬಂದ ಸಂದರ್ಭ ಅದು. ಬರವಣಿಗೆ ಎನ್ನುವುದು ಕೆಲವೇ ಜನರಿಗೆ ತಿಳಿದಿದ್ದು ಅವರ ಜೀವನೋಪಾಯವೇ ಅದಾಗಿದ್ದ ಕಾಲದಲ್ಲಿ ಈ ಯಂತ್ರ ಬಂದಾಗ ಜನ ಆತಂಕಗೊಳ್ಳುತ್ತಾರೆ, ಆ ಯಂತ್ರಕ್ಕೆ ಬಹಿಷ್ಕಾರ ಹಾಕುವ ಯೋಚನೆ ಮಾಡುತ್ತಾರೆ. ನಾಗ್ಡೋ ಬೇತಾಳನೊಬ್ಬ ಮಾತ್ರ ಈ ಮಾತು ಹೇಳುತ್ತಾನೆ. “ಈ ಯಂತ್ರ ನಾಳೆ ಬಹುದೊಡ್ಡ ಪಾತ್ರವಹಿಸುತ್ತದೆ. ಬರಹ ಯಾರೊಬ್ಬರದೇ ಸೊತ್ತಾಗಿ ಉಳಿಯದು, ಹಾಗಂದುಕೊಳ್ಳುವುದೂ ಸಲ್ಲದು. ಈ ತಕ್ಷಣಕ್ಕೆ ಕೆಲವರಿಗೆ ಜೀವನೋಪಾಯ ಕಷ್ಟವಾಗಬಹುದು, ಅವರು ಬೇರೆ ಕೆಲಸ ಹುಡುಕಿಕೊಳ್ಳುವುದು ಒಳ್ಳೆಯದು. ಯಂತ್ರಕ್ಕೆ ಬಹಿಷ್ಕಾರ ಹಾಕುವುದು ಮೂರ್ಖತನ”. ಅತ್ಯಮೂಲ್ಯವಾದ ವಿಚಾರ ಇದು. ಕಾಲದೊಂದಿಗೆ ಯೋಚಿಸಬಲ್ಲವ ಮಾತ್ರ ಈ ಮಾತಾಡಬಲ್ಲ. ಕಾದಂಬರಿಯ ಕೊನೆಯಲ್ಲೂ ಆತ ಅತ್ಯಂತ ಯುಕ್ತವಾದ ಮಾತಾಡುತ್ತಾನೆ. ಅಂಥಾ ಅವನನ್ನೇ ಕಾಯುತ್ತ ಕಾಯುತ್ತ ಬದುಕಿನ ಕೊನೆಯ ಕ್ಷಣಗಳನ್ನು ಅಪ್ಪುತ್ತಿದ್ದ ರಾಮಚಂದ್ರ ಪೈಯ ಮನಸನ್ನು ಮಮತೆಯಿಂದ ಮುಕ್ತಗೊಳಿಸುವವನೂ ಬೇತಾಳನೇ.

ಇಡೀ ಕಾದಂಬರಿಯ ಓದಿನಬಳಿಕವೂ ಬಹುಕಾಲ ಓದುಗನ ಕಣ್ಣೆದುರು ತನ್ನ ರೂಪು ಮರೆಯದಂತೆ ಮಾಡುವವ ನಾಗ್ಡೋ ಬೇತಾಳ.

ನಾನು ಭಾವಿಸುವಂತೆ ಕಾದಂಬರಿಯ ಬೆನ್ನೆಲುಬಾದ ಅಂಶವೆಂದರೆ, ಯಾವೊಂದು ಸಂಗತಿಗೂ ಪೂರ್ತಿ ಅರ್ಪಿತವಾಗಿ ಅದರಲ್ಲಿಯೇ ಲೀನವಾಗದೆ ಅತ್ಯಂತ ದಕ್ಷವಾದ ’ಸ್ಥಿತಿ’ಯೊಂದನ್ನು ಕಂಡುಕೊಂಡುದು. ಇನ್ನಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ- ಬರಿಯ ಅದೃಷ್ಟಕ್ಕಾಗಲೀ, ಯಾವುದೋ ಆದರ್ಶವನ್ನು ಕಾಣಿಸುವ ಒತ್ತಡಕ್ಕಾಗಲೀ, ಇತಿಹಾಸವೆಂಬುದು ಅನ್ಯಾಯ ಎಸಗಿದ ಪಾಪಿ ಎಂಬ ಭಾವಕ್ಕಾಗಲೀ, ಮಾನವಾತೀತವಾದ ಶಕ್ತಿಗಾಗಲೀ, ಅಥವಾ ಪ್ರಕೃತಿಯೆಂಬ ಚಿರಂತನ ಸತ್ಯಕ್ಕೇ ಆಗಲೀ ಕಾದಂಬರಿಯು ತನ್ನೆಲ್ಲ ಮೈ ಅರ್ಪಿಸಿ ಮೈಲಿಗೆಯಾಗಿಲ್ಲ. ಹಾಗಂತ ಅದೆಲ್ಲವನ್ನೂ ಬಿಟ್ಟ ಸೆಕ್ಯುಲರ್ ಕೃತಿಯೂ ಆಗದೆ, ಎಲ್ಲವನ್ನೂ ಹದವರಿತು ಬಳಸಿಕೊಂಡು ’ಬೆನ್ನು ಹುರಿ ಇರುವ” ಅಪರೂಪದ ಕೃತಿಯಾಗಿ ಹೊಮ್ಮಿದೆ. ಯಾವುದೋ ಒಂದು ಸಂಗತಿಗೆ ಅರ್ಪಿತವಾಗುವ ಕೃತಿ- ಅದು ದೇಶಭಕ್ತಿ, ಮಾನವ ಪ್ರೇಮ, ದೈವಿಕತೆ, ನಂಬುಗೆ, ಆಚಾರ, ಇತಿಹಾಸ, ಕರ್ಮ ಸಿದ್ಧಾಂತ ಹೀಗೆ ಯಾವುದೇ ಇರಬಹುದು- ಅಷ್ಟರಮಟ್ಟಿಗೆ ಬದುಕಿನ ಸಮಗ್ರತೆಯನ್ನು ಚಿತ್ರಿಸುವಲ್ಲಿ ಹಿಂದೆ ಉಳಿಯುತ್ತದೆ. ರಸೋನ್ನತಿಯನ್ನು ಸಾಧಿಸುವುದಕ್ಕೆ ಹಾಗೂಂದು ಆನಿಕೆಯನ್ನು ಅರಸುವುದು ಅನಿವಾರ್ಯವೂ ಇರಬಹುದೇನೋ. ಹಾಗಿದ್ದೂ, ತತ್ತ್ವದ ಹುಡುಕಿಗೆ ಹೊರಟ ಕೃತಿಯೊಂದು ರಸದ ಗುಲಾಮಿತನಕ್ಕೆ ಬೀಳದೆ ಇರುವುದೇ ಹೆಚ್ಚು ಪ್ರಶಸ್ತವಾದ್ದು. ಸ್ವಪ್ನ ಸಾರಸ್ವತ ಆ ದಿಶೆಯಲ್ಲಿ ವಿಜೃಂಭಿಸುವ ಕೃತಿ. ಯಾವುದರ ಹೆಗಲ ಮೇಲೆಯೂ ಅತಿಯಾದ ಭಾರ ಹಾಕದೆ ತಾನೇ ತಾನಾಗಿ ಉಳಿಯುವ ಶಕ್ತಿ ಇದರಲ್ಲಿದೆ.

ಬಳಸಿಕೊಂಡ ಭಾಷೆಯು ಸಂದರ್ಭಗಳಿಗೆ ಹೊಂದಿಕೊಳ್ಳುವಂತಿದ್ದು, ಹಲವೊಮ್ಮೆ ಗ್ರಾಮೀಣ ಭಾಗದ ವಿಶಿಷ್ಟ ನುಡಿಗಟ್ಟಿನ ಪ್ರಯೋಗವೂ ಕಾಣುತ್ತದೆ. ಉದಾ- ಕಾಲುಗುರು ಕಾಣದ ಬಸುರಿ ಎಂಬ ನುಡಿಗಟ್ಟು. ತುಂಬು ತಿಂಗಳಿನ ಬಸುರಿ ಎನ್ನುವ ಅಭಿಪ್ರಾಯದ ಮಾತು ಅದು. ಕೆಲವಾರು ಕೊಂಕಣಿ ಪದಗಳು (ಶಿತ್ತಾಡೊ, ಉಪ್ಕರಿ), ಕೊಂಕಣಿ ಜನಪದ ಹಾಡುಗಳ ಮೂಲಕ ಸಾರಸ್ವತವೇ ಆದ ಲೋಕವೊಂದನ್ನು ಕಾದಂಬರಿ ತನ್ನೊಳಗೆ ಸೃಷ್ಟಿಸಿಕೊಳ್ಳುತ್ತದೆ.

ಇಷು ದೀರ್ಘವಾಗಿ ಬರೆಯುವಾಗ ಆ ನೆಲ ತಪ್ಪಿದ ತನ್ನವರ ಇತಿಹಾಸದ ಕಥೆ ಗೋಪಾಲಕೃಷ್ಣ ಪೈಗಳನ್ನು ಯಾವ ಬಗೆಯಲ್ಲಿ ತಾಕಿರಬಹುದು! ಹೌದು, ಕೃತಿ ಓದಿದ ಯಾರೇ ಆದರೂ ತನ್ನ ತಲೆಮಾರುಗಳ ಕಥೆಯನ್ನುಇದೇ ಬಗೆಯಲ್ಲಿ ತಿಳಿದುಕೊಳ್ಳಬೇಕೆಂದು ಬಯಸುವಂತಿದೆ, ಈ ವಂಶಾವಳಿಯ ಕಥೆ.

ನಡು ನಡುವೆ ಕೆಲವೊಮ್ಮೆ ನಿರೂಪಣೆಯ ಏಕತಾನತೆ ಬೇಸರವೆನ್ನಿಸಬಹುದು. ಕೆಲವು ಸಂದರ್ಭಗಳು ಅದೇ ಅದೇ ಮರುಕಳಿಕೆಯಿಂದಾಗಿ ಅನಗತ್ಯವಾಗಿತ್ತು ಎಂದೂ ಅನ್ನಿಸಬಹುದು. ಇಂಥ ಕೆಲವು ಹಿನ್ನಡೆಗಳನ್ನು ಹೊರತುಪಡಿಸಿ ಸ್ವಪ್ನ ಸಾರಸ್ವತ ಎನ್ನುವುದು ಕನ್ನಡದ ಅಪೂರ್ವ ಕಾದಂಬರಿ. ಕೇಂದ್ರಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಭಾಜನವಾದ್ದು ಯುಕ್ತವಾಗೇ ಇದೆ.

ಗಂಭೀರ ದೀರ್ಘ ಓದಿನ ಬಯಕೆಯಿರುವ ಯಾರೇ ಆದರೂ ಓದಬೇಕಾದ, ಓದುವ ಮೂಲಕ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ಇತಿಹಾಸವನ್ನು ಅರಿಯಬಹುದಾದ ಹೂರಣ ಇಲ್ಲಿದೆ. ಓದುವ, ,ಓದಿ ಮುಗಿಸುವ ಖುಷಿಯ ಅನುಭವ ಬೇಕಿದ್ದರೆ ಇಂಥಾ ಕೃತಿಯನ್ನೋದಬೇಕು.

*****************************************************************************************************************************

ಸ್ವಪ್ನ ಸಾರಸ್ವತ- ನನ್ನ ಅನಿಸಿಕೆಗಳು

– ಸುದರ್ಶನ ಗುರುರಾಜರಾವ್

ನಾವು ಶಾಲೆಯಲ್ಲಿ ಇತಿಹಾಸವನ್ನು ಓದುತ್ತಿದ್ದಾಗ ಯುರೋಪಿಯನ್ನರು ಬಂದಿದ್ದು, ವ್ಯಾಪಾರ ಮಾಡಿದ್ದು, ಕಾಲಕ್ರಮೇಣ ಅಧಿಕಾರವನ್ನು ಅತಿಕ್ರಮಿಸಿದ್ದು, ಹಲವಾರು ಬದಲಾವಣೆಗಳಿಗೆ ಕಾರಣರಾಗಿದ್ದನ್ನು ಓದುತ್ತೇವೆ,. ಇವೆಲ್ಲದರ ನಡುವೆ ಅವರು ತಮ್ಮ ಧರ್ಮ ಶ್ರೇಷ್ಠವೆಂದು ಬಗೆದು ಅವರು ಅದನ್ನು ಭಾರತದ ಸಮಾಜದಲ್ಲಿ ಬಲವಂತಪೂರ್ವಕವಾಗಿ ತಂದು ತುರುಕಿದ್ದನ್ನು ನಾವು ಓದುವುದಿಲ್ಲ. ಅವರ ಪಾದ್ರಿಗಳು ಭಾರತಕ್ಕೆ ಬಂದು ತಮ್ಮ ಧರ್ಮ ಸ್ಥಾಪನೆ ಮಾಡಿದರೆಂದು ಮಾತ್ರ ಓದುತ್ತೇವೆ. ಆದರೆ ಆ ಪ್ರಕ್ರಿಯೆಯಲ್ಲಿ ಅವರುಗಳು ಅನುಸರಿಸಿದ ವಿಧ್ವಂಸಕ ಮಾರ್ಗಗಳನ್ನು ಕುರಿತು ಅವು ವಿದ್ಯಾರ್ಥಿಗಳಿಗೆ ಅದೇ ಇತಿಹಾಸದ ಪಠ್ಯಗಳು ತಿಳಿಸದೇ ಹೋಗುತ್ತವೆ. ಇದು ಒಂದು ಬಗೆಯ ಎಕಪಕ್ಷೀಯ ಇತಿಹಾಸ ಎಂದೆನ್ನಬಹುದು. ಇತಿಹಾಸವನ್ನು ತಿಳಿಯುವುದು ಅದನ್ನು ಕಲಿತು ನಮ್ಮ ತುಲನಾತ್ಮಕ ಶಕ್ತಿಯನ್ನು ಬೆಳೆಸಿಕೊಳ್ಳಲಿಕ್ಕೆ ಎಂದಾದರೆ ಅದು ಆದಷ್ಟು ಪರಿಪೂರ್ಣವಾಗಿರಬೇಕಲ್ಲವೇ?

ಇನ್ನು ಯಾವುದೇ ಪುರಾತನ ಇತಿಹಾಸವನ್ನು ಓದಿದಾಗಲೂ ನಮಗೆ ಒಂದು ವಿಚಾರ ಗೋಚರವಾಗುತ್ತದೆ. ರಾಜ ಸಂತತಿಗಳು, ಹಲವಾರು ಪ್ರಸಿದ್ಧ ವಂಶಗಳು ಮೂರು ಅಥವಾ ನಾಲ್ಕನೆಯ ತಲೆಮಾರಿಗೆ ಬರುವಲ್ಲಿ ತಮ್ಮ ವೈಶಿಷ್ಟ್ಯತೆಯನ್ನು ಕಳೆದುಕೊಂಡು ದುರ್ಬಲವಾಗುವುದೋ ಇಲ್ಲವೇ ನಿರ್ನಾಮವಾಗುವುದೋ ಕಾಣುತ್ತೇವೆ. ಇದು ಒಂದು ನಿಯತ ಚಕ್ರದಂತೆ ಹಾಸು ಹೊಕ್ಕಾಗಳು ಕಾರಣವೇನಿರಬಹುದು? ತಮ್ಮ ಮೊದಲಿನ ಅಥವಾ ಎರಡನೆ ತಲೆಮಾರಿನ ಜನರಲ್ಲಿ ಕಂಡುಬರುವ ಸಾಮರ್ಥ್ಯಗಳು ತರುವಾಯು ಬರುವ ಪೀಳಿ ಗೆಗಳಲ್ಲಿ ನಶಿಸಲು ಕಾರಣಗಳೇನು? ಅದೇ ರೀತಿಯಲ್ಲಿ ಮೌಲ್ಯಗಳ ಅದಃಪತನವನ್ನು ನಾವು ಕಾಣುತ್ತೇವೆ. ಪೀಳಿಗೆಯಿಂದ ಪೀಳಿಗೆಗೆ ನಿಜವಾಗಿಯೂ ವರ್ಗಾವಣೆಯಾಗಬೇಕಾದ ಸಂಪತ್ಯಾವುದು?

ಈ ಪುರಾಣೇತಿಹಾಸಗಳ ಈ ವಿದ್ಯಮಾನಗಳ ನಡುವಿನ ಸಾಮಾನ್ಯ ಕೊಂಡಿ ಯಾವುದು? ಮನುಷ್ಯನ ಮೂಲಭೂತ ಗುಣ ಕ್ರೌರ್ಯ-ಸ್ವಾರ್ಥಗಳಾದರೂ ಅದನ್ನು ನಿಯಂತ್ರಿಸುವಲ್ಲಿ ಇರುವ ಎಡರು ತೊಡರುಗಳೇನು, ಅವು ಅನಾವರಣಗೊಳ್ಳುವ ಸಂದರ್ಭಗಳು ಹೇಗಿರುತ್ತವೆ , ಧರ್ಮ- ನೈತಿಕತೆಯ ಜೊತೆಗಿನ ಅವುಗಳ ಸೆಣೆಸಾಟ ಯಾವ ರೀತಿಯದ್ದು ಇತ್ಯಾದಿಗಳನ್ನು ಕುರಿತ ಜಿಜ್ಞಾಸೆಗಳನ್ನು ಯಾವ ಪೂರ್ವಾಗ್ರಹಕ್ಕೂ ಒಳಗಾಗದೆ ಸಮುದಾಯದ ಹಿನ್ನೆಲೆ ಇಟ್ಟುಕೊಂಡು ಕುಟುಂಬವೊಂದರ ನಾಲ್ಕು ತಲೆಮಾರುಗಳ ವಿದ್ಯಮಾನಗಳನ್ನು ಕಥಾರೂಪದಲ್ಲಿ ನಿರೂಪಿಸಿರುವುದೇ ಈ ‘’ಸ್ವಪ್ನ ಸಾರಸ್ವತ’’ ಕಾದಂಬರಿ.

ಯೂರೋಪಿಯನ್ನರಲ್ಲಿ ಮೊದಲು ಭಾರತಕ್ಕೆ ಬಂದವರು ಪೋರ್ಥುಗೀಸರೇ. ವ್ಯಾಪಾರ ಅವರ ಉದ್ದೇಶವಾಗಿದ್ದರೂ, ದೋಚಿ-ಬಾಚಿ ಹಣ ಮಾಡಿಕೊಂಡು ವಾಪಸ್ಸಾಗುವುದೋ ಅಥವಾ ಭಾರತದಲ್ಲೇ ಇರುವುದೋ ಎಂಬ ಆಸೆಯಿಂದ ಬಂದವರೇ ಅವರಲ್ಲಿ ಹೆಚ್ಚು. ಹೀಗೆ ಬಂದವರು ಸ್ಥಳೀಯರನ್ನು ದಬ್ಬಾಳಿಕೆ ಮಾಡಿ, ಅವರ ವ್ಯಾಪಾರ ವ್ಯವಹಾರಗಳನ್ನು ಅಸ್ಥಿರಗೊಳಿಸಿ, ದೋಚಿ ಬಾಚಿ ಹೆಣ್ಣು ,ಹೆಂಡ -ಖಂಡಗಳ ಜೀವನ ನಡೆಸಿದ್ದು ಒಂದು ಕಡೆಗಿದ್ದರೆ, ಸೈನ್ಯ-ಅಧಿಕಾರದ ಬಲದ ಮೂಲಕ ಕ್ರೈಸ್ತ ಮತವನ್ನು ಗೋವಾದ ಹಿಂದುಗಳ ಮೇಲೆ ಬಲವಂತವಾಗಿಯೂ, ಆಮಿಷ ತೋರಿಸುವ ಮೂಲಕವೂ, ದೌರ್ಜನ್ಯ, ಬೆದರಿಕೆಗಳನ್ನೊಡ್ಡಿ ಅಲ್ಲಿನ ಜನರ ಜೀವನವನ್ನೇ ಬುಡಸಮೇತ ಮಾಡುವುದರ ಕ್ರೂರ ಮಾರ್ಗಗಳಿಂದಲೂ ಅಸ್ಥಿರಗೊಳಿಸಿದ ಇತಿಹಾಸದ ಇನ್ನೊಂದು ಮುಖ ನಮಗೆ ಈ ಕಾದಂಬರಿಯಲ್ಲಿ ಕಾಣಬರುತ್ತದೆ. ಮುಸ್ಲಿಮರ ಧಾಳಿಗೆ ತುತ್ತಾಗಿ ಹಲವು ದೇವಾಲಯಗಳು ನಾಶವಾಗಿದ್ದನ್ನು ಓದಿರುತ್ತೇವೆ;ಆದರೆ ಪೋರ್ಚುಗೀಸರು ಗೋವೆಯಲ್ಲಿ ನಡೆಸಿದ ವಿಧ್ವಂಸಕ ಕ್ರಿಯೆಗಳು ನಮಗೆ ಅಪರಿಚಿತವಾಗಿಯೇ ಉಳಿದಿದ್ದವು. ಅದನ್ನೂ ವಿಸ್ತಾರವಾಗಿ ಈ ಕಾದಂಬರಿ ಚಿತ್ರಿಸುತ್ತದೆ. ನಂತರದಲ್ಲಿ ಬಂದ ಬ್ರಿಟಿಷರು ಸನಾತನ ಹಿಂದು ಧರ್ಮವನ್ನು ಒಡೆಯುವ ಕುರಿತಾಗಿ ನೇರ ಆಕ್ರಮಣ ನೀತಿಯನ್ನು ಅನುಸರಿಸದಿದ್ದರೂ, ಪರೋಕ್ಷವಾಗಿ ಅ ಕಾರ್ಯವನ್ನು ಮುಂದುವರಿಸಿದ್ದು ಇತಿಹಾಸ. ಆದರೆ ಪೊರ್ತುಗೀಸರು ತಮ್ಮ ಧರ್ಮ ಪ್ರಚಾರದ, ಧರ್ಮಾಂಧತೆಯ ಮತ್ತಿನಲ್ಲಿ ಗೋವೆಯ ಸಮಾಜದ, ಸಾಮಾಜಿಕ ಸಾಮರಸ್ಯದ,ಧಾರ್ಮಿಕ ನಂಬಿಕೆ-ಭಾವನೆಗಳಿಗೆ ನೇರವಾಗಿ ಹಾಗೂ ಅಮಾನುಷವಾಗಿ ಧಕ್ಕೆ ತಂದದ್ದನ್ನು,ಈ ವಿದ್ಯಮಾನಗಳನ್ನು, ಆ ಜನಗಳ ಆತಂಕವನ್ನು ಕಣ್ಣಿಗೆ ಕಟ್ಟುವಂತೆ ಪದಗಳಲ್ಲಿ ಹಿಡಿದಿಟ್ಟಿದ್ದಾರೆ ಲೇಖಕರು. ಈ ಕುರಿತು LIES WITH LONG LEGS ಎನ್ನುವ ಪುಸ್ತಕದಲ್ಲಿಯೂ ಐತಿಹಾಸಿಕ ದಾಖಲೆಗಳ ಸಮೇತ ವಿವರಿಸಲಾಗಿದೆ.

ಇಂತಹ ವಿದ್ರಾವಕ ಐತಿಹಾಸಿಕ ಕಾಲಘಟ್ಟದಲ್ಲಿ ಧರ್ಮ-ಮೌಲ್ಯಗಳನ್ನು ತ್ಯಜಿಸದೆ , ಅವುಗಳಿಗಾಗಿ ತಮ್ಮೆಲ್ಲ ಇತರ ಸಂಪತ್ತನ್ನು ತ್ಯಜಿಸಿ ಕರಾವಳಿ ಕರ್ನಾಟಕದ ಕಡೆಗೆ ಗುಳೆ ಹೊರಡುವ,ಕರ್ನಾಟಕದಲ್ಲಿ ನೆಲೆಸಿ ಜೀವನದೆಲ್ಲ ಏರು ಪೇರುಗಳನ್ನು, ಕಷ್ಟ ಕಾರ್ಪಣ್ಯಗಳನ್ನು, ಅಭಿವೃದ್ಧಿ ಅವನತಿಗಳನ್ನೂ, ಪ್ರೀತಿ-ಪ್ರೇಮ- ವಿಶ್ವಾಸ-ಅಂತಃಕರಣ ರಾಗ-ದ್ವೇಷ,ಕಲಹ ಮಾತ್ಸರ್ಯ ಎಲ್ಲವನ್ನೂ ಕಂಡು ಅನುಭವಿಸುವ ಸಾರಸ್ವತ ಬ್ರಾಹ್ಮಣ ಕುಟುಂಬ ಹಾಗೂ ಅದರ ಸುತ್ತಲಿನ ಸಮುದಾಯದ ಕುರಿತ ಅತಿ ಅಪೂರ್ವವಾದ ಕಾದಂಬರಿಯೇ ಸ್ವಪ್ನ ಸಾರಸ್ವತ.

ಗೋವೆಯ ಜನ ಜೀವನ, ಸಾರಸ್ವತ ಬ್ರಾಹ್ಮಣರ ಸಂಪ್ರದಾಯಗಳು, ಅವರಲ್ಲಿನ ಸಿರಿತನ ಬಡತನಗಳ ಚಿತ್ರಣ,ಸಮುದಾಯ ಹಾಗೂ ಕುಟುಂಬದ ಚರಿತ್ರೆಯನ್ನು ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸುವುದರ ಪ್ರಾಮುಖ್ಯತೆ,ಆ ಮೂಲಕ ಹಿಂದಿನವರ ಸಾಧನೆ ವೈಫಲ್ಯಗಳನ್ನು,ತಪ್ಪು ಒಪ್ಪುಗಳನ್ನು, ಧರ್ಮದ -ನೈತಿಕತೆಯ ನೆಲೆಗಟ್ಟಿನಲ್ಲಿ ತೂಗಿನೋಡಿ,ಸಮಷ್ಟಿ ಪ್ರಜ್ಞೆಯ ಜೀವನ ವಿಧಾನದ ಮೂಲಕ, ಅದರ ತತ್ವಗಳ ಅನುಸಾರ ಸಮಸ್ಯೆಗಳ, ಪರಿಹಾರಗಳ ಯುಕ್ತಾಯುಕ್ತತೆಯ ಮಾರ್ಗವನ್ನು ಕಂಡುಕೊಳ್ಳುವ ಪರಿಕಲ್ಪನೆಯನ್ನು ಬೆಳೆಸುವ ಸೂಚ್ಯ ಸಂದೇಶ ಅಡಕವಾಗಿದೆ.ಅದು ಸಾಧ್ಯವಾಗದ ಪೀಳಿಗೆ ಮುಂದೆ ಕ್ಷೋಭೆಗೊಳಗಾಗಿ ಒಡಕು ಬಿರುಕುಗಳಿಗೆ ಬಲಿಯಾಗುವ ಅನಿವಾರ್ಯ ಸತ್ಯವನ್ನು ಅನಾವರಣಗೊಳಿಸುತ್ತದೆ. ಈ ಕಾದಂಬರಿಯು ರಾಮಕೃಷ್ಣ ಪೈ ಎಂಬ ಪಾತ್ರದ ಸ್ವಾಗತ ಹಾಗೂ ಅವನಜ್ಜ ವಿಟ್ಠು ಪೈ ನಡುವಿನ ಸಮ್ಭಾಶಣೆಯಂತೆ ಸಾಗುತ್ತದೆ. ಇತಿಹಾಸದ ಅರಿವಿದ್ದ ಈ ಎರಡೂ ಪಾತ್ರಗಳು, ಹಾಗೂ ನಾಗಪ್ಪೈ ಎಂಬ ಇನ್ನೊಂದು ಪಾತ್ರ ತಮ್ಮ ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿಯೇ ನಿರ್ವಹಿಸುತ್ತವೆ. ಆದರೆ ತಮ್ಮ ಕೆಲಸದ ಭರದಲ್ಲಿ, ಸಂಪತ್ತನ್ನು ಗಳಿಸುವ ಛಲದಲ್ಲಿ ಕುಟುಂಬಿಕ , ಐತಿಹಾಸಿಕ ಮೌಲ್ಯಗಳನ್ನು,ಸತ್ಯಗಳನ್ನು ವರ್ಗಾಯಿಸುವಲ್ಲಿ ರಾಚ್ಚು ಪೈ(ರಾಮಕೃಷ್ಣ ಪೈ) ಗಮನ ಕೊಡದ ಕಾರಣ ಮುಂದಿನ ಒಂದು ಜೀವವು ಆದರ್ಶಗಳನ್ನು ಪ್ರತಿನಿಧಿಸುವುದೇ ಇಲ್ಲ. ಈ ಕಾದಂಬರಿಯಲ್ಲಿ ಅಡಕವಾಗಿರುವ ಅತಿ ಸೂಚ್ಯವಾದ ಸಂದೇಶ ಇದು ಎಂದು ನನ್ನ ಭಾವನೆ. ಈ ಕಾರಣಕ್ಕಾಗಿ ಹಲವಾರು ಅನಾಹುತಗಳು ಸಂಭವಿಸುತ್ತಾ ಹೋಗುತ್ತವೆ. ತಾನು ಕಟ್ಟಿದ ಸಾಮ್ರಾಜ್ಯ ತನ್ನೆದುರೇ ಕುಸಿಯುವ ಕ್ರೂರ ವಿಪರ್ಯಾಸವನ್ನು ನೋಡುವುದು ರಾಮಕೃಷ್ಣನ ಹಣೆಬರಹವಾಗುತ್ತದೆ. ಜೊತೆಗೆ ವಿಟ್ಠು ಪೈ ನ ಅನೈತಿಕ ಸಂಬಂಧ, ರಾಮಕೃಷ್ಣ ಪೈ ಗೆ ಇದ್ದಿದ್ದಿರಬಹುದಾದ ಹಲವು ಅನೈತಿಕ ಸಂಬಂಧಗಳು ಹೇಗೆ ತಮ್ಮ ಮಕ್ಕಳನ್ನು ಪ್ರತಿಬಮ್ಧಿಸುವಲ್ಲಿ ಸೋಲುತ್ತವೆ ಹಾಗೂ ಅದು ಮುಂದಿನ ಸಂಕ್ಷೋಭಗಳಿಗೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ನೇರವಾಗಿ ಹೇಳದಿದ್ದರೂ ನೈತಿಕ ಪ್ರಜ್ಞೆ ಹಾಗೂ ಅದರ ಚೌಕಟ್ಟು ಮೀರಿದರೆ ಕಾಡಬಹುದಾದ ಪರಿಣಾಮಗಳನ್ನು ಮನದಟ್ಟು ಮಾಡಿಸುತ್ತದೆ ದೀರ್ಘವಾದ ಕಾದಂಬರಿ, ಅನುಭವಿಸಿ ಬರೆದ ಕಥಾನಕದಂತೆ ಸಾಗುವುದರಿಂದ ಓದುಗನು ಪಾತ್ರಗಳನ್ನೂ ಸ್ವತಃ ಅನುಭವಿಸಿದಂತೆ ಭಾಸವಾಗುತ್ತದೆ.

ಹದಿಮೂರನೇ ಅಧ್ಯಾಯದಲ್ಲಿ, ಗುಳೆ ಹೊರಟ ಸಾರಸ್ವತ ಸಮುದಾಯ ಕರ್ನಾಟಕವನ್ನು ಪ್ರವೇಶಿಸಿ ಕನ್ನಡದ ವರ್ಣಮಾಲೆಯ ಅಕ್ಷರಗಳನ್ನು ಕಂಡು ಅವುಗಳನ್ನು ವರ್ಣಿಸುವ ರೀತಿ, ಕನ್ನಡಿಗ ಜನರನ್ನು ಸ್ನೇಹಮಯಿಗಳೆಂದು ವರ್ಣಿಸಿದ ಪರಿಯನ್ನು ಕಾದಂಬರಿಯಲ್ಲಿ ಓದಿಯೇ ಅನುಭವಿಸಬೇಕು. ಇವು ಲೇಖಕರಿಗೆ ಅವರ ಪೂರ್ವಜರು ಹೇಳಿದ್ದ ಮಾತುಗಳಿರಬಹುದು ಅಥವಾ ಕನ್ನಡವನ್ನು ಕುರಿತಾದ ಲೇಖಕರ ಗಾಢಪ್ರೇಮವೇ ಇರಬಹುದು. ಈ ಕಾದಂಬರಿಯನ್ನು ಬರೆಯುವಲ್ಲಿ ಲೇಖಕರ ತೋರಿರುವ ಶ್ರದ್ಧೆಯನ್ನು ಓದುಗರಿಗೆ ಮನಗಾಣಲು ಆ ಒಂದು ಪುಟವೇ ಸಾಕು.

ಸಾರಸ್ವತ ಬ್ರಾಹ್ಮಣರನ್ನೂ ಒಳಗೊಂಡು ಗೋವೆಯ ಹಿಂದೂ ಸಮುದಾಯ ಬಹುವಾಗಿ ವಿಶ್ವಾಸವಿಟ್ಟಿದ್ದ ನಾಗ್ಡೋ ಬೇತಾಳ ಎಂಬ ನಗ್ನ ಸಾಧುವಿನ ಪಾತ್ರ ಈ ಕಾದಂಬರಿಯ ನೈತಿಕ ಪ್ರಜ್ಞೆಯ ತಿರುಳುದಿಂಡು. ಭರವಸೆ, ಆತ್ಮಸ್ಥೈರ್ಯ, ಸಲಹೆ ನಿರ್ದೇಶನಗಳನ್ನು ನೀಡುತ್ತಾ, ಧರ್ಮವನ್ನು ಬಿಡದೇ ಧರ್ಮವನ್ನು ರರ್ಕ್ಷಿಸಿ ಆ ಮೂಲಕ ತಮ್ಮನ್ನು ರಕ್ಷಿಸಿಕೊಳ್ಳುವಂತೆ ಅವನು ಕರೆ ನೀಡುತ್ತಾ, ಭವಿಷ್ಯದ ಬದಲಾವಣೆಗಳನ್ನು ಮನಗಾಣಿಸುತ್ತಾ,ಅವಶ್ಯಕತೆ ಇರುವಲ್ಲಿ ಬಂದು ದುಡಿಯುತ್ತಾ ,ಓದುಗರ ಮನದಲ್ಲಿ ಭದ್ರ ಸ್ಥಾನ ಗಳಿಸಿಕೊಳ್ಳುವ ಈ ಪಾತ್ರವನ್ನು ಲೇಖಕರು ಬೆಳೆಸಿರುವ ಪರಿ ಅನನ್ಯವಾಗಿದೆ.(ಧರ್ಮ ಎಂದರೆ ಬರೀ ಪೂಜೆ ಪುನಸ್ಕಾರಗಳಿಗೆ ಸಂಬಂಧಿಸಿದ ಅಚಾರವಾಗಿರದೇ ಜೀವನ ಮೌಲ್ಯಗಳ ಸಮಷ್ಟಿ ಪ್ರಜ್ಞೆ.)

ನಾಗ್ಡೋ ಬೇತಾಳನೆಂಬ ತಿರುಳು ದಿಂಡಿನ ಸುತ್ತ ಉಳಿದ ಪಾತ್ರಗಳು, ಕಥೆ ಉಪ ಕಥೆಗಳು ಸಿಹಿ ಕಹಿ ಹುಳಿ ಉಪ್ಪು ಖಾರಗಳಿರುವ ಪದರುಗಳಾಗಿ ನಮ್ಮ ಅನುಭವಕ್ಕೆ ಬರುತ್ತವೆ.

ಓದಿದ ಮೇಲೂ ಚಿಂತನೆಗೆ ಹಚ್ಚುವ, ಗುಂಗಿನಿಂದ ಸುಳಿಯಲ್ಲಿ ಸಿಕ್ಕಿಸುವ ,ಮನುಷ್ಯನಾಗಿ ಓದುಗನನ್ನು ಒಂದು ಹಂತ ಮೆಲಕ್ಕೇರಿಸುವ ಅತ್ಯಪೂರ್ವವಾದ ಈ ಕೃತಿ ಇದುವರೆಗೆ ನಾನು ಓದಿರುವ ಕಾದಂಬರಿಗಳಲ್ಲಿ “ಪರ್ವ”ವನ್ನು ಹೊರತುಪಡಿಸಿ ಉತ್ಕೃಷ್ಟವಾದದ್ದು. ನೀವೂ ಓದಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.

1 ಟಿಪ್ಪಣಿ Post a comment
  1. ಆಗಸ್ಟ್ 25 2015

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments