ಇಲ್ಲಿ ಅಸಹಿಷ್ಣುತೆಯಿದೆ!
Dedicated to our purva paksha and uttara- paksha debating tradition. With gratitude to the purva-pakshins (opponents) I have learned from. May we engage in this intellectual yajna, with mutual respect.
-ನವೀನ ಗಂಗೋತ್ರಿ
ರಾಜೀವ್ ಮಲ್ಹೋತ್ರಾ ತಮ್ಮ ಇತ್ತೀಚಿನ ಹೊಸ ಪುಸ್ತಕ, ‘ದಿ ಬ್ಯಾಟಲ್ ಫಾರ್ ಸಂಸ್ಕೃತ್’ ನ ಅರ್ಪಣೆಯಲ್ಲಿ ಈ ರೀತಿ ಬರೆಯುತ್ತಾರೆ. ಈ ನೆಲದಲ್ಲಿ ಒಂದು ಕಾಲಕ್ಕೆ ಉತ್ತುಂಗ ತಲುಪಿದ್ದ ಮತ್ತು ಮಹತ್ತರ ಗೌರವಕ್ಕೆ ಪಾತ್ರವಾಗಿದ್ದ ’ವಾಕ್ಯಾರ್ಥ’ ಪರಂಪರೆ ಅಥವಾ ವಾದ ಪ್ರತಿವಾದದ ಸಂಸ್ಕೃತಿಯ ಕುರಿತು ಆ ಪುಸ್ತಕ ಧ್ವನಿಯೆತ್ತುತ್ತದೆ. ಹಾಗೆ ದನಿಯಾಗಲೇ ಬೇಕಾದ ಕಾಲಖಂಡದಲ್ಲಿ ನಾವಿದ್ದೇವೆಂಬುದು ವಿಷಯ.
ನಮ್ಮ ವೇದಗಳು, ಸ್ಮೃತಿಗಳು, ನಮ್ಮ ಕಥೆ, ಪುರಾಣ, ಕಾವ್ಯ, ಶಾಸ್ತ್ರ, ಕಲಾಪ್ರಕಾರ ಮತ್ತು ಸಮಾಜದ ವ್ಯವಸ್ಥೆಯನ್ನೆಲ್ಲ ನಾವು ಸರಿಯಾಗಿ ಅರ್ಥ ಮಾಡಿಕೊಳ್ಳುವ ಅಗತ್ಯವೇ ಇಲ್ಲ ಅನ್ನುವ ಭರದಲ್ಲಿ ನಾವಿದ್ದರೆ ನಮ್ಮದೆಲ್ಲವನ್ನೂ ತಮ್ಮ ಸಮಾಜ ಮತ್ತು ತಮ್ ತಮ್ಮ ನಾಗರಿಗಕತೆಯ ಅರಿವಿನ ಪರಿಧಿಯಲ್ಲಿ ಅರ್ಥವಿಸಿಕೊಂಡು ವ್ಯಾಖ್ಯಾನ ಬರೆಯುವ ಹುಕಿಯೊಂದು ಪಶ್ಚಿಮ ರಾಷ್ಟ್ರಗಳ ವಿದ್ವಾಂಸರಲ್ಲಿ ಬಹುಕಾಲದಿಂದ ಚಾಲ್ತಿಯಲ್ಲಿದೆ. ಭಾರತದ ಬಗ್ಗೆ ತಿಳಿದುಕೊಳ್ಳುವ ಅಗತ್ಯ ನಮಗೆ ಕಾಣಿಸಿದಾಗೆಲ್ಲ ಈ ಪಶ್ಚಿಮದ ವಿದ್ವಾಂಸರು ಬರೆದದ್ದನ್ನು ಓದದೇ ಇರಲು ಸಾಧ್ಯವೇ ಇಲ್ಲ ಅನ್ನುವಷ್ಟು ಸಂಗತಿಗಳನ್ನೀಗಾಗಲೇ ಅವರು ಬರೆದಾಗಿದೆ. ಜಗತ್ತು ಮುನ್ನೂರರವತ್ತು ಡಿಗ್ರಿ ತೆರೆದುಕೊಳ್ಳುತ್ತಿರುವ ಹೊತ್ತಿನಲ್ಲಿ ನಮ್ಮ ಕುರಿತಾಗಿ ಜಗತ್ತಿನೆಲ್ಲ ಮೂಲೆಗಳಿಂದ ಬರುವ ಚಿಂತನೆಗಳಿಗೆ ನಾವು ಕಿವಿಯಾಗಲೇ ಬೇಕಾಗುತ್ತದೆನ್ನಿ. ಆದರೆ ಅದೇ ಹೊತ್ತಿನಲ್ಲಿ ನಮ್ಮ ಕುರಿತಾದ ವಿಮರ್ಶೆಗಳಿಗೆ ಉತ್ತರವನ್ನು ಕಂಡುಕೊಳ್ಳುವುದೂ ಮತ್ತು ಅವರ ಕುರಿತಾದ ಆಮೂಲಾಗ್ರ ಅಧ್ಯಯನಮಾಡುವುದೂ ನಮಗೆ ಮುಖ್ಯವಾಗಬೇಕಿತ್ತು. ದುರದೃಷ್ಟವಶಾತ್ ನಾವು ಆ ಹಾದಿಯಲ್ಲಿ ತುಂಬಾ ತುಂಬಾ ಹಿಂದಿದ್ದೇವೆ. ಭಾರತೀಯವಲ್ಲದ ಆಬ್ರಹಾಮಿಕ್ ರಿಲಿಜನ್ನುಗಳ ಒಳಸುಳಿ ಮತ್ತು ಹುಳುಕುಗಳ ಬಗ್ಗೆ ತಾತ್ತ್ವಿಕವಾದ ಮರುಪ್ರಶ್ನೆಯನ್ನು ಹುಟ್ಟುಹಾಕುವುದಂತಿರಲಿ, ನಮ್ಮ ಕುರಿತಾಗಿಯೂ ಸರಿಯಾದ ಅವಗಾಹನೆಯೇ ಇಲ್ಲದಂಥಾ ಸ್ಥಿತಿಯಲ್ಲಿ ನಾವಿದ್ದೇವೆ.
’ದಿ ಬ್ಯಾಟಲ್ ಫಾರ್ ಸಂಸ್ಕೃತ್’- ಪುಸ್ತಕವು ಬರಿಯ ಸಂಸ್ಕೃತ ಭಾಷೆಯೊಂದರ ಬಗ್ಗೆ ಮಾತ್ರವೇ ಕಾಳಜಿಯ ದನಿಯೆತ್ತದೆ, ಸಮಗ್ರವಾಗಿ ನಮ್ಮ ಚಿಂತನ ಪರಂಪರೆಯ ಸಧ್ಯದ ಅವಸ್ಥೆಯನ್ನೂ ಚರ್ಚಿಸುತ್ತದೆ. ಅದನ್ನು ಕಳಕೊಂಡ ನಾವು ಇವತ್ತಿಗೆದುರಿಸುತ್ತಿರುವ ಬೌದ್ಧಿಕ ಅಪಾಯಗಳನ್ನು ವಿಶ್ಲೇಷಿಸುತ್ತದೆ. ನಮ್ಮ ಸುತ್ತಲೂ ಸುದ್ದಿ ಮಾಡುವ ಕನ್ನಡದ ಬೌದ್ಧಿಕ ಲೋಕವನ್ನು ಪ್ರಸ್ತುತ ಪುಸ್ತಕದ ಹಿನ್ನೆಲೆಯಲ್ಲಿ ನೋಡೋಣ.
ಕನ್ನಡದಲ್ಲಿ ಉತ್ತಮ ವಿದ್ವಾಂಸರಿಲ್ಲ ಎನ್ನುವುದು ಸರಿಯಾದ ಮಾತಾಗದು. ಕನ್ನಡ ಭಾಷೆ ಮತ್ತು ಪರಂಪರೆಯನ್ನು ಅರಿವಾಗಿಸಿಕೊಂಡ ಸ್ಕಾಲರ್ ಜನ ನಿಜಕ್ಕೂ ಇದ್ದಾರೆ. ಆದರೆ ಸಧ್ಯದ ಸಂದರ್ಭದಲ್ಲಿ ನಮ್ಮೆದುರಿಗೆ ಮತ್ತೆ ಮತ್ತೆ ಅಸಂಬದ್ಧ ಕಾರಣಗಳಿಗಾಗಿ ತೋರುತ್ತಿರುವ ಕೆಲವು ಮುಖಗಳಿಂದಾಗಿ ನಮ್ಮ ವಿವಿಗಳ ಬಗೆಗೆ ಮತ್ತವುಗಳ ಅಕಾಡೆಮಿಕ್ ಪೊಟೆನ್ಷಿಯಾಲಿಟಿ ಬಗ್ಗೆ ಸಂಶಯಬರುವಂಥಾ ವಾತಾವರಣ ನಿರ್ಮಾಣವಾಗಿದೆ. ವಿಚಾರವಾದದ ಹೆಸರಲ್ಲಿ ಯಾವುದನ್ನೇ ಮಂಡಿಸಿದರೂ ಜನ ಸುಮ್ಮನೆ ಕೇಳಿಸಿಕೊಳ್ಳಬೇಕೆನ್ನುವ ಮನಃಸ್ಥಿತಿ ಒಂದು ವರ್ಗದಲ್ಲಿ ನಿರ್ಮಾಣವಾಗುತ್ತಿದೆ. ಪಾರಲಲ್ ಆದ ಸಿದ್ಧಾಂತಗಳು ಇರುವಲ್ಲಿ ಸೈದ್ಧಾಂತಿಕವಿರೋಧಗಳು ಹೊಸದಲ್ಲ. ಮಂಥನಕ್ಕೆ ಅದು ಕೂಡ ಅಗತ್ಯವಾದ್ದು. ಆದರೆ ಕರ್ನಾಟಕದ ಬೌದ್ಧಿಕ ಅಸಹಿಷ್ಣುತೆಯು ರಾಜಕೀಯ, ಪೋಲೀಸ್, ಮಾಧ್ಯಮ ಹೀಗೆ- ಪ್ರಜಾಪ್ರಭುತ್ವದ ಆಧಿಕಾರಿಕ ಮತ್ತು ಪ್ರಭಾವೀ ಅಂಶಗಳನ್ನು ತಮ್ಮ ವಾದದ ಪುರಸ್ಸಾರಕ್ಕಾಗಿ ಬಳಸಿಕೊಳ್ಳುತ್ತಿದೆ. ವಿಶ್ವವಿದ್ಯಾಲಯದ ಪ್ರೊಫೆಸರುಗಳು ಐಡಿಯಾಲಜಿಯ ಹಿಂದಕ್ಕೆ ಬಿದ್ದಷ್ಟೂ ಅಕಾಡೆಮಿಕ್ ವಲಯವು ರಾಜಕೀಯ ಒಲವುಗಳಿಗೆ ಅಂಟಿಕೊಂಡು ಮಲಿನವಾಗುತ್ತದೆ ಅನ್ನುವುದಕ್ಕೆ ಸಧ್ಯದ ಕರ್ನಾಟಕವೊಂದು ನಿದರ್ಶನ.
ನಿಖರತೆ ಅನ್ನುವುದು ವಿದ್ವತ್ತೆಯ ಮಾನಕ. ಸಣ್ಣದೊಂದು ಸಂಗತಿಯನ್ನು ಸಾರ್ವಜನಿಕವಾಗಿ ಉಲ್ಲೇಖಿಸುವಾಗಲೂ ವಿದ್ವಾಂಸನೆನಿಸಿಕೊಂಡವನು ತುಂಬಾ ನಿಖರವಾದ ಮೂಲಗಳನ್ನು(sources) ಮತ್ತು ಓದನ್ನು ಹೊಂದಿರಬೇಕಾದ್ದು ಬೌದ್ಧಿಕ ಪ್ರಪಂಚದ ಅಗತ್ಯ. ಅಂತಿರುವಾಗ ಲಕ್ಷಾಂತರ ಜನ ನೋಡುವ ಮಾಧ್ಯಮದ ಕೆಮೆರಾದ ಎದುರಿನಲ್ಲಿ ಸಂಶೋಧಕರೆನಿಸಕೊಂಡವರು ಸತ್ಯದ ತಲೆಯ ಮೇಲೆ ಹೊಡೆದಂತೆ ಆಸ್ತಿಕ ಅನ್ನುವ ಪದಕ್ಕೆ ಆಸ್ತಿಯುಳ್ಳವನು ಅಂತ ಅರ್ಥ ಹೇಳುವುದಲ್ಲದೆ, ಕನ್ನಡದ ಎಲ್ಲಾ ಅರ್ಥಕೋಶದಲ್ಲೂ ಅದಕ್ಕೆ ಅದೇ ಅರ್ಥವಿದೆಯೆಂದು ರೆಫರೆನ್ಸ್ ಕೂಡ ಕೊಡುತ್ತಾರೆ. ತಾನು ಕಟ್ಟುವ ವಾದವೊಂದನ್ನು ಸಮರ್ಥಿಸಿಕೊಳ್ಳುವುದು ಅಥವಾ ಅದರಲ್ಲಿ ಅಸಮರ್ಥನಾಗುವುದು ಒಬ್ಬನ ಬೌದ್ಧಿಕ ಸಾಮರ್ಥ್ಯಕ್ಕೆ ಬಿಟ್ಟಸಂಗತಿಯೆಂದು ಸುಮ್ಮನಾಗಬಹುದು. ಆದರೆ ಪ್ರಸಿದ್ಧ ಪರಿಕಲ್ಪನೆಯೊಂದನ್ನು ಅಪವ್ಯಾಖ್ಯಾನ ಮಾಡಿ ಅದಕ್ಕೆ ರೆಫರೆನ್ಸ್ ಕೊಡುವಷ್ಟು ಉಡಾಳರಾಗುವುದು ಅಜ್ಞಾನದಿಂದಾಗಿ ಬಂದ ಅಹಂಕಾರದಿಂದಾಗಿಯಷ್ಟೆ. ಪಾರಿಭಾಷಿಕ ಪದವೊಂದರ ಅರ್ಥವು ಪೂರ್ವಪಕ್ಷ ಮತ್ತು ಸಿದ್ಧಾಂತಗಳಲ್ಲಿ ಒಂದೇ ಆಗಿರಬೇಕಾದ್ದು ನ್ಯಾಯ್ಯ. ಅದಿಲ್ಲದಿದ್ದಲ್ಲಿ ಚರ್ಚೆಯೇ ಹಾದಿ ತಪ್ಪುತ್ತದೆ. ನಮ್ಮ ವಿಶ್ವವಿದ್ಯಾಲಯಗಳ ಸಂಶೋಧನೆಯ ಮಟ್ಟ ಇವತ್ತು ಇಷ್ಟು ದುರ್ಬಲವಾಗಿದೆಯೆ? ನಮ್ಮವೇ ಆದ ಪರಿಕಲ್ಪನೆಗಳನ್ನೂ (concept) ಸರಿಯಾಗಿ ಗ್ರಹಿಸಲಾಗದ ಹಂತಕ್ಕೆ ನಮ್ಮ ಸಂಶೋಧನ ವ್ಯವಸ್ಥೆ ಯಾಕೆ ಇಳಿದಿದೆ? ಆಸ್ತಿಕ ಮತ್ತು ನಾಸ್ತಿಕ ಎಂಬ ನಮ್ಮವೇ ಪರಿಭಾಷೆಗಳನ್ನು ಗ್ರಹಿಸಲಾಗದೆ ಹೋದರೆ ಉಳಿದ ಸಂಸ್ಕೃತಿಗಳನ್ನು ಈ ಸಂಶೋಧಕರು ಗ್ರಹಿಸುವ ರೀತಿ ಹೇಗಿರಬಹುದು?
ಇದು ಒಂದು ಉದಾಹರಣೆ ಮಾತ್ರವಷ್ಟೇ. ವಿಶ್ವವಿದ್ಯಾಲಯದ ಮಟ್ಟದಲ್ಲಿರುವವರ ಕಡೆಯಿಂದ ಕೇಳಿಬಂದ ಇನ್ನೂ ಹಲವಾರು ತಳರಹಿತ ಮಾತುಗಳು ಕರ್ನಾಟಕದ ಜನರ ಎದುರಿನಲ್ಲಿವೆ. ಅಕಾಡೆಮಿಕ್ ವಲಯವು ಜನ ಸಾಮಾನ್ಯರ ಎದುರಿನಲ್ಲಿ ಇಷ್ಟೊಂದು ಸಣ್ಣದಾಗುವ ಹಂತಕ್ಕೆ ಬಂದಿದೆಯೆನ್ನುವುದು ತೀರದ ವಿಷಾದ. ’ಬಲಗಾಲಿಟ್ಟು ಬಾರೆಂದು ನವವಧುವಿಗೆ ಹೇಳುವುದರ ಮೂಲಕ ವೈದಿಕ ಸಂಸ್ಕೃತಿಯು ಮಾನವ ದೇಹವನ್ನೇ ಎಡ ಬಲವನ್ನಾಗಿ ವಿಭಾಗ ಮಾಡಿದೆ’ ಎನ್ನುವುದಾಗಲೀ, ’ಶ್ರೀರಾಮ ಕಬ್ಬಿಣದ ಅದುರಿಗಾಗಿ ಲಂಕೆಯ ಮೇಲೆ ದಂಡೆತ್ತಿ ಹೋದ’ ಎನ್ನುವುದಾಗಲೀ ಸಂಶೋಧನೆಯ ಪ್ರಾಕ್ಕಲ್ಪನೆಗಳಾಗಿದ್ದರೆ ಚಂದವೇ ಹೊರತು ಅವುಗಳನ್ನು ಸಮಾಜದ ಎದುರಿನಲ್ಲಿ ಇಡಬೇಕಾದ್ದು ಅಕಾಡೆಮಿಕ್ ವಲಯದ ಕೆಲಸವಾಗಬಾರದು.
ವಿವಿ ಸ್ತರದ ಕೆಲವರು ತಮ್ಮ ಈ ಬಗೆಯ ವಾದಗಳಿಂದ ಜನಮನಕ್ಕೆ ಕ್ಷೋಭೆ ತಂದಾಗ ಕನ್ನಡ ವಿದ್ವದ್ವಲಯದಿಂದ ಸರಿಯಾದ ಪ್ರತಿವಾದದ ಧ್ವನಿ ಎದ್ದುಬರಲಿಲ್ಲ. ಅಥವಾ ಎಲ್ಲೋ ಕೆಲವರು ನಿಜಕ್ಕೂ ವಿದ್ವಾಂಸರಾದವರು ಮಾತಿಗೆ ನಿಂತಿದ್ದನ್ನು ಕನ್ನಡ ಮಾಧ್ಯಮವಲಯ ಗಂಭೀರವಾಗಿ ಪರಿಗಣಿಸಲಿಲ್ಲ. ಸಂಶೋಧನೆಯ ಹಣೆಪಟ್ಟಿ ಹೊತ್ತಿರದ ಸಾಮಾನ್ಯ ಜನರು ಸಮೂಹಮಾಧ್ಯಮಗಳಲ್ಲಿ ಸರಿಯಾಗೇ ತರಾಟೆಗೆ ತೆಗೆದುಕೊಂಡರು. ಅದೇ, ಕನ್ನಡ ವಿವಿಗಳ ವಿದ್ವಲ್ಲೋಕ ಸರಿಯಾದ ಪೂರ್ವಪಕ್ಷವನ್ನೇ ಮಾಡಲಿಲ್ಲ. ಯಾಕೆ? ಕನ್ನಡ ಚಿಂತನೆಯ ವಲಯದಲ್ಲಿ ಒಂದೇಬಗೆಯ ಚಿಂತನೆಯ ಏಕಾಧಿಪತ್ಯ ಸಾಧಿಸಿದೆಯೆ? ವಿಶ್ವವಿದ್ಯಾಲಯಗಳು ಯಾವುದೋ ಒಂದು ದಿಕ್ಕಿನಲ್ಲಿ ಮಾತ್ರವೇ ಚಿಂತಿಸುವುದನ್ನು ಮಾತ್ರವೇ ಸಂಶೋಧನೆಯೆಂದೂ, ಉಳಿದದ್ದನ್ನೆಲ್ಲ ಮೂಲಭೂತವಾದವೆಂದೂ ಪರಿಗಣಿಸುವ ವಿದ್ವಾಂಸರನ್ನೇ ಯಾಕೆ ತಯಾರಿಸುತ್ತಿವೆ? ಇದಕ್ಕೆಲ್ಲ ಹೌದು ಎಂಬ ಉತ್ತರವೇ ಸಧ್ಯದ ಸ್ಥಿತಿಯಲ್ಲಿ ಸರಿಯಾದ್ದು.
ಒಂದು ವಿಚಾರದ ಪಂಥ ಮಾತ್ರವೇ ಉಳಿಯಬೇಕು ಎಂದು ಬಯಸುವುದು, ಅದನ್ನೊಂದನ್ನೇ ಪೂರ್ತಿಯಾಗಿ ಒಂದು ಬೃಹತ್ ವ್ಯವಸ್ಥೆ ಎತ್ತಿ ಹಿಡಿಯುವುದು ಬೌದ್ಧಿಕ ಫ್ಯಾಸಿಸಂನ ಲಕ್ಷಣ. ಕರ್ನಾಟಕದಲ್ಲಿ ತೀರಾ ಕೆಳಮಟ್ಟದ ಚಿಂತನೆಯು ಭಾರೀ ಉನ್ನತ ಚಿಂತನೆಯೆಂಬಂತೆ ಗೌರವಕ್ಕೆ ಪಾತ್ರವಾದಾಗ, ಯಾವೊಂದು ವಿವಿ ಯ ಪ್ರೊಫೆಸರರೂ ಆ ಬಗ್ಗೆ ಚಕಾರವನ್ನೇ ಎತ್ತಲಿಲ್ಲ ಅಂದರೆ ನಮ್ಮ ವಿವಿಗಳಿಗೆಲ್ಲ ಏಕ ಚಿಂತನೆಯ ಗರ ಬಡಿದಿದೆ ಅಂತಲೇ ಲೆಕ್ಕ. ಹಿಂದೂ ದೇವರು ಮತ್ತು ಚಿಂತನೆಗಳನ್ನು ನಿಂದಿಸಿ ಹೀನೈಸಿದಾಗೆಲ್ಲ ನಮ್ಮಲ್ಲಿಯ ವಿವಿ ಚಿಂತಕರು ಮೌನವಾಗಿರುತ್ತಾರೆ, ಅಥವಾ ದನಿಗೂಡಿಸುತ್ತಾರೆ. ಸರ್ವದಾ ಭಂಜಕ ಚಿಂತನೆಗಳನ್ನೇ ಹರಿಬಿಡುವ ಯಾವೊಬ್ಬ ಪ್ರೊಫೆಶನಲ್ ಚಿಂತಕನ ವಿರುದ್ಧವೂ ನಮ್ಮ ವಿವಿ ಗಳ ಮೊಗಸಾಲೆಯಿಂದ ವಿರೋಧದ ದನಿ ಕೇಳಿಬರಲೇ ಇಲ್ಲ. ಅಂದರೆ, ವಿವಿ ಗಳಿಗೆ ಬೌದ್ಧಿಕ ಜವಾಬ್ದಾರಿಗಳು ಮರೆತು ಹೋಗಿವೆ ಅಥವಾ ಭಂಜಕ ಚಿಂತನೆಗೆ ಅವುಗಳ ಸಮ್ಮತಿ ಇದೆ. ಇದೆಲ್ಲದರ ಪರಿಣಾಮವೇ ಆಯಕಟ್ಟಿನ ಜಾಗೆಗಳಿಗೇರಿ ಕುಳಿತ ಒಂದು ನಿರ್ದಿಷ್ಟ ಚಿಂತನೆಯ ಜನಗಳು ಸರ್ವಸ್ವವೂ ತಮ್ಮ ಚಿಂತನೆಯ ನೇರಕ್ಕೆ ನಡೆಯಬೇಕೆಂದು ಬಯಸುತ್ತಿದ್ದಾರೆ. ರಾಷ್ಟ್ರವಾದ ಮತ್ತು ಪ್ರಾದೇಶಿಕ ಚಿಂತನೆಗಳು, ಸ್ಥಾನೀಯ ದೇವತೆಗಳು ಮತ್ತು ಪ್ರಾದೇಶಿಕತೆಯನ್ನು ಮೀರಿದ ದೇವತೆಗಳು, ಜಾನಪದ ಮತ್ತು ಆರ್ಷ ಸಾಹಿತ್ಯ, ಸಂಸ್ಕೃತ ಮತ್ತು ಉಳಿದ ಭಾಷೆಗಳು – ಇವರ ಕಣ್ಣಿನಲ್ಲಿ ಪರಸ್ಪರ ವಿರೋಧಿ ನಿಲುವು ಮತ್ತು ಸಂಗತಿಗಳಾಗಿವೆ. ಅಂದರೆ ರಾಷ್ಟ್ರಿಯತೆ ಮತ್ತು ಪ್ರಾದೇಶಿಕತೆ, ಜಾನಪದ ಮತ್ತು ಆರ್ಷಗಳ ಮಧ್ಯೆ ವಿರೋಧ ಹಾಗೂ ಸಂಘರ್ಷ ಇರಲೇಬೇಕೆಂದು ಹಠ ತೊಟ್ಟಂತಿದೆ. ಇದನ್ನಲ್ಲವೇ ಅಸಹಿಷ್ಣುತೆ ಅನ್ನಬೇಕಾದ್ದು? ಕರ್ನಾಟಕದಲ್ಲಂತೂ ಅಸಹಿಷ್ಣುತೆ ಇಲ್ಲವೆನ್ನುವುದು ತಪ್ಪಾಗುತ್ತದೆ; ನಮ್ಮ ಪ್ರಚಾರಪ್ರಿಯ ಬೌದ್ಧಿಕ ವಲಯದಲ್ಲಿ ತಮ್ಮದಲ್ಲದ ಚಿಂತನೆಯ ವಿಷಯದಲ್ಲಿ ಗಾಢವಾದ ಅಸಹಿಷ್ಣುತೆ ಇದ್ದೇ ಇದೆ.
ಆಂತರಿಕವಾಗಿಯೇ ನಮ್ಮ ನಡುವೆ ಏಕಚಿಂತನೆಯ ಹೇರಿಕೆ ನಡೆಯುತ್ತಿರುವಾಗ ಹೊರಗಿನ ಪ್ರಪಂಚವು ಸಹಜವಾಗಿಯೇ ಎತ್ತುವ ಪ್ರಶ್ನೆಗಳಿಗೆ ನಮ್ಮ ಬೌದ್ಧಿಕ ವಲಯದ್ದು ಸಮ್ಮತಿ ಬರಬಹುದೇ ವಿನಾ ಪ್ರತಿವಾದ ಎಲ್ಲಿಂದ ಎದ್ದೀತು ಅನ್ನುವುದು ಮಲ್ಹೋತ್ರಾರವರ ಕಳಕಳಿ. ಕರ್ನಾಟಕದ ಹುಸಿ ಇಂಟಲೆಕ್ಚುವಲ್ ಗಳ ಇತ್ತೀಚಿನ ನಾಟಕಗಳನ್ನು ನೋಡುವಾಗ ಈ ಕಳಕಳಿ ಅದೆಷ್ಟು ವಿಹಿತವಾದ್ದು ಎಂಬುದರಿವಾಗುತ್ತದೆ. ನಾಡಿನ ಬೌದ್ಧಿಕ ವಲಯವು ರಾಜಕೀಯ ಬಣ್ಣಗಳಿಗೆ ಎರವಾಗಬಾರದೆಂಬ ಮಾತು ಅದೆಷ್ಟು ಮುಖ್ಯವಾದ್ದೆಂದು ಅರ್ಥವಾಗುತ್ತದೆ. ನಮ್ಮೆಲ್ಲ ವಿವಿ ಗಳು ಜೆ ಎನ್ ಯು ಆದಾವೇನೋ ಅನ್ನುವ ಸಕಾರಣ ಭಯ ಆವರಿಸಿಕೊಳ್ಳುತ್ತದೆ.
ಈ ಹಿನ್ನೆಲೆಯಲ್ಲಿ ರಾಜೀವರ ಪುಸ್ತಕದ ಮೂಲ ಧ್ವನಿ ಇವತ್ತಿಗೆ ತುಂಬಾ ಮುಖ್ಯವಾದ್ದು, ಮತ್ತದು ಅಗತ್ಯವಾಗಿಯೂ ಮುಖ್ಯವಾಹಿನಿಯಲ್ಲಿ ಚರ್ಚೆಗೆ ಬರಬೇಕಾದ್ದು ಅನ್ನುವಲ್ಲಿ ಎರಡು ಮಾತಿಲ್ಲ. ಪೂರ್ತಿ ಪುಸ್ತಕವನ್ನು ಸಂಸ್ಕೃತದವರು ಮಾತ್ರವಲ್ಲದೆ, ಭಾರತೀಯ ಚಿಂತನೆಯಲ್ಲಿ ಪೂರ್ವಪಕ್ಷವು ವಾರಸುದಾರರಿಲ್ಲದೆ ಕಳೆದುಹೋಗುತ್ತಿರುವ ಕುರಿತು ಕಳಕಳಿಯಿರುವ ಎಲ್ಲರೂ ಓದಿಕೊಂಡರೆ ಚೆನ್ನ.
Naveen,
Timely and nice write up. I haven’t read the book yet. You have raised the issues in a systematic way but not quoted the specific examples in an explicit way. I guess you wanted to make it a broad based article, I appears to be weak. To grasp it, reader should know about Rajiv, his work and the struggle that we are facing. A relatively fresher might not get th punch. Could you make it stronger please.
Sorry for a not so positive feedback.
Your words are welcomed Sudarshan Ji. Indeed I had thought of a detailed article at the beginning, but feared of sounding more academic. But, soon I will come up with an article which will be along with authentic quotes and references. If not on this book, I will do an article on the book that I translated recently.
Thank you 🙂
True writing ..
True. Good writing.