ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 10, 2016

2

ಜಮ್ಮು-ಕಾಶ್ಮೀರ (ಐತಿಹಾಸಿಕ ಸತ್ಯಗಳು ಮತ್ತು ವರ್ತಮಾನದ ತಲ್ಲಣಗಳು)

‍ನಿಲುಮೆ ಮೂಲಕ

ನಿಲುಮೆ ತಂಡ ನಡೆಸಿದ ಕಾಶ್ಮೀರದ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಪ್ರೊ.ಪ್ರೇಮಶೇಖರವರ ಮಾತುಗಳನ್ನು ಶೋಭ ರಾವ್ ರವರು ಅಕ್ಷರ ರೂಪಕ್ಕಿಳಿಸಿದ್ದಾರೆ. ಅಂದಿನ ಕಾರ್ಯಕ್ರಮದ ವಿಚಾರಗಳು ಈಗ ನಿಲುಮೆಯ ಓದುಗರ ಮುಂದೆ..

14088692_10154596775090649_5386569408904041755_nಕಾಶ್ಮೀರದ ಬಗ್ಗೆ ಇಂದು ಹಲವಾರು ಜನ ತಮ್ಮ ಅಲ್ಪಜ್ಞಾನದಿಂದ ಹಲವಾರು ತರಹ ಮಾತಾಡುತ್ತಾರೆ. ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ. ದುರಂತವೆಂದರೆ ಅದನ್ನು ಕೇಳಲು ಕೂಡ ಬಹಳಷ್ಟು ಜನರಿದ್ದಾರೆ. ನಾವು ಅವರ ಬಳಿ ಹೋಗಿ ಬೀದಿ ಜಗಳ ಮಾಡಬೇಕಿಲ್ಲ. ವಸ್ತುನಿಷ್ಠ ಚರ್ಚೆಯನ್ನು ಏರ್ಪಡಿಸಿ ನಿಜಸಂಗತಿಗಳನ್ನ ತಿಳಿಸಿದರೆ ಸಾಕು. ಕಾಶ್ಮೀರ ನಮ್ಮದೂ ಎಂದು ಭಾರತವೂ ಹೇಳುತ್ತೆ, ಪಾಕಿಸ್ತಾನವೂ ಹೇಳುತ್ತೆ. ನಾವು ಇವೆರೆಡಕ್ಕೂ ಸೇರಿಲ್ಲ ಎಂದು ಮತ್ತೊಂದು ಗುಂಪು ಕೂಡ ಹೇಳುತ್ತೆ. ಇದೇ ಕಾಶ್ಮೀರದ ನಿಜವಾದ ಸಮಸ್ಯೆ.

ಇಂಡಿಯನ್ ಇಂಡಿಪೆಂಡೆನ್ಸ್ ಆಕ್ಟ್ ಪ್ರಕಾರ ಎರಡೂ ದೇಶಗಳ ವಿಭಜನೆಯಾಗುತ್ತದೆ. ಮುಸ್ಲಿಂ ಬಾಹುಳ್ಯ ಇರುವ ಪ್ರದೇಶಗಳು ಪಾಕಿಸ್ತಾನಕ್ಕೆ ಸೇರಿದರೆ ಉಳಿದವು ಭಾರತಕ್ಕೆ ಸೇರಿತು. ತಮ್ಮ ಪ್ರದೇಶಗಳನ್ನು ಭಾರತಕ್ಕೂ, ಪಾಕಿಸ್ತಾನಕ್ಕೋ ಸೇರಿಸುವ ನಿರ್ಧಾರ ಆ ಪ್ರದೇಶದ ರಾಜ/ನವಾಬರಿಗಿದೆ, ಆದರೆ ಆ ಪ್ರದೇಶದ ಭೌಗೋಳಿಕ ಹಿನ್ನಲೆ ಮತ್ತು ಅಲ್ಲಿಯ ಜನರ ಧರ್ಮದ ಆಧಾರದ ಮೇಲೆ ಅದನ್ನು ನಿರ್ಧರಿಸಬೇಕು ಎನ್ನುವ ಸಲಹೆಯನ್ನು ಬ್ರಿಟಿಷರು ಕೊಡುತ್ತಾರೆ. ಆದರೆ ಕಾಶ್ಮೀರದ ರಾಜ ಹರಿಸಿಂಗ್ ತಾನು ಸ್ವಂತಂತ್ರವಾಗಿಯೇ ಉಳಿಯಲು ನಿರ್ಧರಿಸಿದ. ಅಲ್ಲಿ ಒಂದು ಭಾಗದಲ್ಲಿ ಮುಸ್ಲಿಂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೆ ಇನ್ನೊಂದು ಭಾಗದಲ್ಲಿ Non Muslim ಪ್ರಾಬಲ್ಯವಿತ್ತು.

ಇಂಡಿಯಾ ಅನ್ನೋ ಹೆಸರು ನಮಗೆ ಬೇಕು ನೀವು ಬೇರೇನಾದರೂ ಇಟ್ಟುಕೊಳ್ಳಿ ಎಂದು ಪಾಕಿಸ್ತಾನ ಹೇಳಿತ್ತು. ಯಾಕೆಂದರೆ ಇಂಡಿಯಾ ಅನ್ನೋ ಹೆಸರು ಬಂದಿದ್ದು ಇಂಡಸ್ ನದಿಯಿಂದ. ಅದು ನಮಗೆ ಸೇರುವುದರಿಂದ ಇಂಡಿಯಾ ಅನ್ನೋ ಹೆಸರು ನಮಗೆ ಬೇಕು ಎಂದು ಪಟ್ಟು ಹಿಡಿದಿತ್ತು. ಆದರೆ ‘ಪಾಕಿಸ್ತಾನ’ ಅನ್ನೋ ಹೆಸರು ಹೇಗೆ ಬಂತು ಅನ್ನೋದು ಬಹಳ ಕುತೂಹಲಕಾರಿಯಾದ ವಿಷಯ.

ರಾಜ ಹರಿಸಿಂಗ್ ಅವರ ನಿರ್ಧಾರ ಪಾಕಿಸ್ತಾನಕ್ಕೆ ಸಮ್ಮತವಾಗಲೇ ಇಲ್ಲ. ಯಾಕೆಂದರೆ PAKISTAN ದಲ್ಲಿ ಬರುವ K ರೆಪ್ರೆಸೆಂಟ್ ಮಾಡೋದು ಕಾಶ್ಮೀರವನ್ನ. ಅಸಲಿಗೆ ಪಾಕಿಸ್ತಾನ ಅನ್ನೋದು ಒಂದು ಸಿಂಗಲ್ ಪದ ಅಲ್ಲವೇ ಅಲ್ಲ. U.N.O, U.S.A ಇರುವ ಹಾಗೆ ಅದು P.A.K.I.S.T.A.N.
P- Punjab
A- Afghania (NWFP)
K- Kashmir
I- Iran
S- Sindh
T- Tokharistan
A- Afghanistan
N- Baluchstan.
ಇದನ್ನು ಕಂಡುಹಿಡಿದ್ದಿದ್ದು ರಹಮತ್ ಅಲಿ. ಇದರಲ್ಲಿ N ಅನ್ನೋ ಅಕ್ಷರವನ್ನು ಮಾತ್ರ ಬಲುಚಿಸ್ತಾನ್ ದ ಕೊನೆಯ ಅಕ್ಷರವನ್ನು ತೆಗೆದು ಕೊಳ್ತಾರೆ Pak I Stan ಅನ್ನೋದು ಅದರ ರೂಪ. ಅದಕ್ಕೆ ಒಂದು ಪೂರ್ಣ ರೂಪ ಕೊಡುವುದಕ್ಕಾಗಿಯೇ ಬಲುಚಿಸ್ತಾನ್ ದಿಂದ ಕೊನೆಯ ಅಕ್ಷರವನ್ನು ತೆಗೆದುಕೊಳ್ಳಲಾಗುತ್ತದೆ. ಪಾಕ್ ಅಂದ್ರೆ ಅರೇಬಿಕ್ ನಲ್ಲಿ ಪವಿತ್ರ ಎಂದು, ಸ್ಥಾನ ಎಂದರೆ ಸಂಸ್ಕೃತ ದಲ್ಲಿ ಜಾಗ ಅಂತ ಅರ್ಥ. ಇದು ಸಂಸ್ಕೃತ ಹಾಗೂ ಅರೇಬಿಕ್ ನಿಂದ ಕೂಡಿದ ಪದ. ಎಲ್ಲಾದರೂ B ತೆಗೆದುಕೊಂಡಿದ್ದಾರೆ ಏನಾಗುತ್ತಿತ್ತು ಗಮನಿಸಿ. Pak I Stab… ಈಗ ಅದು ಮಾಡುತ್ತಿರುವುದು ಅದೇ stabbing.

ಕಾಶ್ಮೀರ ತಮಗೆ ಸೇರುತ್ತೆ ಎಂದು ಪಾಕಿಸ್ತಾನಕ್ಕೆ ಅದೆಷ್ಟು ನಂಬಿಕೆಯೆಂದರೆ, ಶ್ರೀನಗರದ ದಾಲ್ ಸರೋವರದಲ್ಲಿ ವಿಹರಿಸಲೆಂದೇ ಜಿನ್ನಾ ಒಂದು ಹೌಸ್ಬೋಟ್ ಅನ್ನು ಖರೀದಿಸಿ ರೆಡಿಯಾಗಿಟ್ಟಿದ್ದರು. ಆದರೆ ಯಾವಾಗ ಹರಿಸಿಂಗ್ ಸೇರಲು ನಿರಾಕರಿಸಿದನೋ ಆಗ ಪಾಕಿಸ್ತಾನ ಅವರ ಮೇಲೆ ಒತ್ತಡ ಹಾಕಲು ಆರಂಭಿಸಿತು. ಆಗ ಕಾಶ್ಮೀರಕ್ಕೆ ಬೇಕಾದ ಅಗತ್ಯ ವಸ್ತುಗಳು ಪೂರೈಕೆಯಾಗುತ್ತಿದ್ದಿದ್ದು ರಾವಲ್ಪಿಂಡಿ ಹಾಗೂ ಸಿಯಾಮ್ಪುರದಿಂದ. ಅಲ್ಲಿಂದ ರಸ್ತೆ ಸೌಲಭ್ಯಗಳು ಉತ್ತಮವಾಗಿತ್ತು. ಯಾವಾಗ ಹರಿಸಿಂಗ್ ನಿರಾಕರಿಸಿದರೋ ಆಗ ಪಾಕಿಸ್ತಾನ ಇವೆರಡೂ ಮಾರ್ಗಗಳನ್ನು ನಿರ್ಭಂದಿಸಿ ಕಾಶ್ಮೀರದ ಮೇಲೆ ಅರ್ಥಿಕ ದಿಗ್ಭಂದನವನ್ನು ಹೇರುತ್ತೆ. ಆಗ ರಾಜಾ ಹರಿಸಿಂಗ್ ಭಾರತ ಸರ್ಕಾರವನ್ನು ಅಗತ್ಯವಸ್ತುಗಳನ್ನು ಪೂರೈಕೆ ಮಾಡುವಂತೆ ಮನವಿ ಮಾಡಿಕೊಳ್ಳುತ್ತಾರೆ. ಆಗಿನ ಪ್ರಧಾನಿ ನೆಹರೂ ಅವರು 5000 ಕ್ಯಾನ್ ಡಿಸೇಲ್ ಹಾಗೂ ನಿರ್ಧಿಷ್ಟ ಪ್ರಮಾಣದ ಗೋಧಿಯನ್ನು ಕಳುಹಿಸಿ ಇನ್ನು ನಮ್ಮಿಂದ ಯಾವುದೇ ರೀತಿಯ ಸಹಾಯ ನಿರೀಕ್ಷೆ ಮಾಡಬೇಡಿ ಎಂದು ಸೂಚನೆ ನೀಡುತ್ತಾರೆ. ಅರ್ಥಿಕ ದಿಗ್ಬಂದನ ಯಾವಾಗ ಸಫಲವಾಗಲಿಲ್ಲವೋ ಆಗ ಪಾಕ್ ಮಿಲಿಟರಿ ಮೂವ್ ಮಾಡಲು ನಿರ್ಧಾರ ಮಾಡಿ, 5000 ಪಠಾಣರ ಒಂದು ಸೈನ್ಯವನ್ನು ತಯಾರುಮಾಡುತ್ತದೆ. ಅದರ ನಾಯಕ ಜನರಲ್ ತಾರೆಖ್. 22 oct 1947 ರಾತ್ರಿ ಈ ಸೈನ್ಯ ಗಾಡಿಯನ್ನು ದಾಟಿ ಶ್ರೀನಗರದ ಕಡೆ ಹೊರಡುತ್ತದೆ. ಜನರಲ್ ತನ್ನ ಸೈನ್ಯಕ್ಕೆ ಶ್ರೀನಗರದ ವರೆಗೂ ಎಲ್ಲಿಯೂ ನಿಲ್ಲಬೇಡಿ. ಒಮ್ಮೆ ಶ್ರೀನಗರವನ್ನು ಮುಟ್ಟಿದ ನಂತರ ಅಲ್ಲಿ ಪಾಕಿಸ್ತಾನದ ಧ್ವಜವನ್ನು ಹಾರಿಸಿ… ಆಗ ಅಲ್ಲಿಯ ನೆಲ ಪಾಕಿಸ್ತಾನದ್ದಾದರೆ, ಅಲ್ಲಿಯ ಐಶ್ವರ್ಯ ಹಾಗೂ ಹೆಣ್ಣು ನಿಮ್ಮದಾಗುತ್ತದೆ ಎಂಬ ಸೂಚನೆಯನ್ನು ಅವರಿಗೆ ಕೊಡುತ್ತಾನೆ. ಹಾಗೆ ಬಂದವರು 24 ರ ಸಂಜೆ ಬಾರಾಮುಲ್ಲ ಅನ್ನುವ ಸ್ಥಳವನ್ನು ತಲುಪುತ್ತಾರೆ. ಅಲ್ಲಿ ಏನು ನಡೆಯುತ್ತೆ ಅನ್ನೋದು ಊಹಿಸಿಕೊಳ್ಳಲೂ ಭಯವಾಗುವ ಸಂಗತಿ.

ಪಾಕಿಸ್ತಾನದ ರಾಜಧಾನಿ ಕರಾಚಿಯಾದರೂ ಅದರ ನಿಜವಾದ ಅಧಿಕಾರ ಕೇಂದ್ರ ರಾವಲ್ಪಿಂಡಿ. ಅಲ್ಲಿಂದ ಭಾರತದ ಗಡಿಗೆ ಇರುವ ದೂರ ಹೆಚ್ಚೂ ಕಮ್ಮಿ 80 ರಿಂದ 90 ಕಿ.ಮಿ. ಹಾಗಾಗಿ ಅಪಾಯ ಜಾಸ್ತಿ ಎಂದು ಭಾವಿಸಿದ ಜನರಲ್ ತಾರೆಖ್ ಆದಷ್ಟೂ ಗಡಿಯನ್ನು ತಳ್ಳಲು ಪ್ರಯತ್ನಿಸಿದ್ದೇ ಈ ಯುದ್ಧಕ್ಕೆ ಕಾರಣ. ಪಾಕಿಸ್ತಾನದ ಸೇನೆ ಹೋರಾಟ ಸುದ್ದಿಯನ್ನು ಕೇಳಿದ ರಾಜ ಹರಿಸಿಂಗ್ ತನ್ನ ಸಾಮ್ರಾಜ್ಯವನ್ನು ಅವರಿಂದ ಕಾಪಾಡಿಕೊಳ್ಳಲು ಅಸಾದ್ಯವೆಂದು ತಿಳಿದು ಭಾರತ ಸರ್ಕಾರಕ್ಕೆ ಸಹಾಯವನ್ನು ಕೋರಿ ಮನವಿಯನ್ನು ಸಲ್ಲಿಸುತ್ತಾನೆ. ಇದು ದೆಹಲಿಯಲ್ಲಿ ನೆಹರೂ ಹಾಗೂ ಮೌಂಟ್ ಬ್ಯಾಟನ್ ನಡುವೆ ಚರ್ಚೆಗೆ ಬರುತ್ತದೆ. ಕಾಶ್ಮೀರ ನಮ್ಮ ಭೂ ಭಾಗ ಅಲ್ಲಾ, ಹಾಗಾಗಿ ನಮ್ಮದಲ್ಲದ ಪ್ರದೇಶಕ್ಕೆ ನಾವು ಸೈನ್ಯವನ್ನು ಕಳಿಸುವುದಿಲ್ಲ ಎಂದು ನೆಹರು ಖಡಾಖಂಡಿತವಾದ ಸೂಚನೆಯನ್ನು ವಿ.ಪಿ ಮೆನನ್ ಮೂಲಕ ಕಳುಹಿಸುತ್ತಾರೆ.

ತನ್ನ ಪ್ರದೇಶವನ್ನು ಉಳಿಸಿಕೊಳ್ಳ ಬೇಕಾದರೆ ತಾನು ಭಾರತದೊಂದಿಗೆ ವಿಲೀನವಾಗುವುದು ಅನಿವಾರ್ಯ ಎಂದು ಅರಿತ ರಾಜ ಹರಿಸಿಂಗ್ ಅಕ್ಟೋಬರ್ 26 ರಂದು ನಾನು ಭಾರತದೊಂದಿಗೆ ಅಧಿಕೃತವಾಗಿ ವಿಲೀನವಾಗುತ್ತೇನೆ ಎಂಬ ಸಂದೇಶವನ್ನು ಕಳುಹಿಸುತ್ತಾನೆ. ತಕ್ಷಣವೇ ಅಲ್ಲಿನ ಪ್ರಧಾನಿ ಮೆಹರ್ಜನ್ ಮಹಾಜನ್ ದೆಹಲಿಗೆ ಆಗಮಿಸಿ ನೆಹರೂ ಅವರನ್ನು ಭೇಟಿ ಮಾಡಿ ತಕ್ಷಣವೇ ಸೈನ್ಯವನ್ನು ಕಳುಹಿಸಲು ಮನವಿ ಮಾಡುತ್ತಾರೆ. ನೆಹರು ಸೇನೆಯನ್ನು ಕಳುಹಿಸಲು ನಿರಾಕರಿಸುತ್ತಾರೆ. ನೀವು ಸೈನ್ಯವನ್ನು ಕಳುಹಿಸದಿದ್ದರೆ ಶ್ರೀನಗರವನ್ನು ಅವರು ಆಕ್ರಮಿಸಿಕೊಳ್ಳುತ್ತಾರೆ ಹಾಗೂ ಅಲ್ಲಿ ದೌರ್ಜನ್ಯವನ್ನು ಮಾಡುತ್ತಾರೆ ಎಂದು ಮಹಾಜನ್ ವಿವರಿಸಿದರೂ ಒಪ್ಪದ ನೆಹರು ವಶಪಡಿಸಿಕೊಂಡರೆ ವಶಪಡಿಸಿಕೊಳ್ಳಲಿ ಬಿಡಿ ಎಂದು ಉತ್ತರಿಸುತ್ತಾರೆ. ಶತಾಯಗತಾಯ ಶ್ರೀನಗರವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಮಹಾಜನ್ ನೆಹರುರವರ ಉತ್ತರದಿಂದ ನೊಂದು, ಹಾಗಾದರೆ ಶ್ರೀನಗರವನ್ನು ಅದೇ ಸ್ಥಿತಿಯಲ್ಲಿ ಉಳಿಸಿಕೊಳ್ಳಲು ನಾನು ಜಿನ್ನಾ ಅವರ ಸಹಾಯ ಪಡೆಯಬೇಕಾಗುತ್ತದೆ ಎಂದಾಗ ನೆಹರು ಹೇಳಿದ್ದು ಒಂದೇ ವಾಕ್ಯ “ಗೆಟ್ ಲಾಸ್ಟ್….!”
ಇದು ಮಹಾಜನ್ ಬರೆದ ‘Kashmir accession to India an inside story’ ಎಂಬ ಪುಸ್ತಕದಲ್ಲಿ ದಾಖಲಾಗಿದೆ.

ಇದೆಲ್ಲವನ್ನೂ ಪಕ್ಕದ ಕ್ಯಾಬಿನ್ ನಲ್ಲಿ ಕುಳಿತು ಕೇಳುತ್ತಿದ್ದ ಅಬ್ದುಲ್ಲ್ಲಾ ಅವರು ಮಹಾಜನ್ ಮಾತಿಗೆ ನನ್ನ ಸಮ್ಮತವಿದೆ ಹಾಗೂ ಅಲ್ಲಿಗೆ ಸೇನೆಯನ್ನು ಕಳುಹಿಸುವ ಅನಿವಾರ್ಯತೆ ಇದೆ ಎಂದು ಒಂದು ಚೀಟಿಯಲ್ಲಿ ಬರೆದು ತಮ್ಮ ಸೇವಕನ ಕೈಯಲ್ಲಿ ಕೊಟ್ಟು ನೆಹರೂವಿಗೆ ತಲುಪಿಸಲು ಹೇಳುತ್ತಾರೆ. ಅವರನ್ನು ತುಂಬಾ ಗೌರವಿಸುತ್ತಿದ್ದ ನೆಹರು ಅವರ ಮಾತಿಗೆ ಒಪ್ಪಿ ಸೈನ್ಯವನ್ನು ಕಳುಹಿಸಲು ನಿರ್ಧರಿಸುತ್ತಾರೆ. ರಸ್ತೆಯ ಮೂಲಕ ಪ್ರಯಾಣಿಸಿದರೆ ಬಹುದಿನಗಳು ಬೇಕಾಗುವುದರಿಂದ ಸೈನ್ಯವನ್ನು air lift ಮಾಡಲಾಗುತ್ತದೆ. ಇತ್ತ ಬಾರಮುಲ್ಲದಲ್ಲಿ ನಿಂತ ಸೈನ್ಯ ಅಲ್ಲಿ ಯಾವ ಪರಿಯಲ್ಲಿ ಲೂಟಿ, ದೌರ್ಜನ್ಯ, ಅತ್ಯಾಚಾರಕ್ಕೆ ತೊಡುಗತ್ತದೆ ಎಂದರೆ ಅಲ್ಲಿನ ಚರ್ಚ್ಗಳಲ್ಲಿನ ಯುರೋಪಿಯನ್ ನನ್ ಗಳನ್ನೂ ಸಹ ಬಿಡುವುದಿಲ್ಲ. ಆಗ ಅಲ್ಲಿಯ ಜನಸಂಖ್ಯೆ ಇದ್ದಿದ್ದು 45000. ಆರು ತಿಂಗಳ ನಂತರ ಭಾರತೀಯ ಸೇನೆ ಅಲ್ಲಿನ ಜನರನ್ನು ಪಾಕ್ ಸೈನ್ಯದಿಂದ ವಿಮೋಚನೆಗೊಳಿಸಿದಾಗ ಅಲ್ಲಿದ್ದ ಜನಸಂಖ್ಯೆ ಕೇವಲ 4200. ಎಲ್ಲಾದರೂ ಪಾಕ್ ಸೈನ್ಯ ಅಲ್ಲಿ ನಿಲ್ಲದೆ ಶ್ರೀನಗರಕ್ಕೆ ಬಂದಿದ್ದರೆ ಅಲ್ಲಿಯ ಪರಿಸ್ಥಿತಿ ಊಹಿಸಿಕೊಳ್ಳಿ. ಬಾರಮುಲ್ಲದ ಜನತೆಯ ಮಾನ ಹಾಗೂ ಪ್ರಾಣವೇ ಶ್ರೀನಗರವನ್ನು ಕಾಪಾಡಿದ್ದು ಅನ್ನೋದು ಮಾತ್ರ ಇತಿಹಾಸದಲ್ಲಿ ದಾಖಲಾದ ಕರಾಳ ಸತ್ಯ. ವಿಮೋಚನೆಯ ನಂತರ ಅಲ್ಲಿಯ ಜನರನ್ನು ನಿಮ್ಮನ್ನು ಯಾರು ಆಳಬೇಕು ಎಂದು ಕೇಳಿದರೆ ಅವರು ಜನರಲ್ ತಿಮ್ಮಯ್ಯ ಎಂದು ಉತ್ತರಿಸಿದ್ದರಂತೆ.

ಇತ್ತ ಕಾಶ್ಮೀರದ ವಿಷಯ ವಿಶ್ವಸಂಸ್ಥೆಯ ಮೆಟ್ಟಿಲು ಏರುತ್ತದೆ. ಇಲ್ಲಿ ಕೂಡಾ ನೆಹರು ಒಂದು ತಪ್ಪನ್ನು ಮಾಡ್ತಾರೆ. ಕಾಶ್ಮೀರವನ್ನು ವಿವಾದಿತ ಪ್ರದೇಶ ಎಂದು ನಮೂದಿಸುತ್ತಾರೆಯೇ ವಿನಾ ಭಾರತದ ಭೂ ಪ್ರದೇಶ ಎಂದು ಉಲ್ಲೇಖಿಸುವುದಿಲ್ಲ. ಇದನ್ನು ಗಟ್ಟಿಯಾಗಿ ಹಿಡಿದ ಪಾಕ್ ಹೌದು ಅದು ವಿವಾದಿತ ಪ್ರದೇಶ ಅದೊಂದೇ ಅಲ್ಲಾ ಹೈದರಾಬಾದ್ ಕೂಡಾ ವಿವಾದಿತ ಪ್ರದೇಶ ಎಂದು ತನ್ನ ವಾದವನ್ನು ಮಂಡಿಸುತ್ತದೆ.

ಇದೇ ಸಮಯದಲ್ಲಿ ಅಮೇರಿಕಾ ಏಷ್ಯಾದಲ್ಲಿ ಮಿತ್ರರಾಷ್ಟ್ರಕ್ಕಾಗಿ ಪ್ರಯತ್ನಿಸುತ್ತಿರುತ್ತದೆ. ನೆಹರು ತಮ್ಮ ಅಲಿಪ್ತ ನೀತಿಯಿಂದಾಗಿ ಅಮೇರಿಕಾ ಹಾಗೂ ಬ್ರಿಟನ್ ನ ವೈರ ಕಟ್ಟಿಕೊಂಡಿರುತ್ತಾರೆ. ಇಂಥಹ ಸನ್ನಿವೇಶದಲ್ಲಿ ಅಮೆರಿಕಾದ ಕಣ್ಣು ಬಿದ್ದಿದ್ದು ಸಹಜವಾಗಿ ಪಾಕಿಸ್ತಾನದ ಮೇಲೆ. ರಷ್ಯಾ ಕೂಡಾ ಆಗ ಭಾರತದ ಮಿತ್ರನಾಗಿರಲಿಲ್ಲ. ಹೀಗಾಗಿ ವಿಶ್ವಸಂಸ್ಥೆಯಲ್ಲಿ ಭಾರತ ಏಕಾಂಗಿಯಾಗುತ್ತದೆ. ಹಾಗಾಗಿ ಬಹಳಷ್ಟು ನಿರ್ಧಾರಗಳು ನಮಗೆ ಪ್ರತಿಕೂಲವಾಗಿಯೇ ಬರುತ್ತದೆ.
ವಿಶ್ವಸಂಸ್ಥೆ ಮೂರು ನಿರ್ಣಯಗಳನ್ನ ಜಾರಿಮಾಡುತ್ತದೆ.
೧. ಯುದ್ದ ವಿರಾಮ ಘೋಷಣೆಯಾಗಬೇಕು.
೨. ಪಾಕ್ ತನ್ನ ಸೈನ್ಯವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು.
೩. ಜನಮತ ಗಣನೆ ತೆಗೆದುಕೊಳ್ಳಬೇಕು.

ಒಂದನೆಯ ನಿರ್ಧಾರ ಜಾರಿಯಾಗುತ್ತದೆ. ಆದರೆ ಎರಡನೆಯ ನಿರ್ಧಾರ ಇಂದಿಗೂ ಜಾರಿಯಾಗಿಲ್ಲ. ಎರಡನೆಯ ನಿರ್ಣಯ ಜಾರಿಯಾಗದೆ ಮೂರನೆಯದನ್ನು ಪಾಲಿಸುವುದು ಹೇಗೆ? 1956 ರಲ್ಲಿ ಪಾಕಿಸ್ತಾನದ ಆಗಿನ ಪ್ರಧಾನಿ ಮಹಮದ್ ಅಲಿ ಭಾರತಕ್ಕೆ ಒಂದು ಸೂಚನೆಯನ್ನು ಕೊಡುತ್ತಾರೆ. ಅದರ ಪ್ರಕಾರ ಪೂರ್ವ ಪಾಕಿಸ್ತಾನವನ್ನು ಭಾರತ ತೆಗೆದುಕೊಂಡು ಕಾಶ್ಮೀರವನ್ನು ನಮಗೆ ಕೊಡಿ ಎಂದು. ಪೂರ್ವ ಪಾಕಿಸ್ತಾನ ಮುಸ್ಲಿಂ ಪ್ರಾಬಲ್ಯ ಪ್ರದೇಶ ವಾಗಿತ್ತು. ಪಾಕಿಸ್ತಾನಕ್ಕೆ ಮುಸ್ಲಿಂ ಮೇಲಿನ ಪ್ರೀತಿಯಾಗಲಿ, ಕಾಶ್ಮೀರದ ಬಗ್ಗೆ ಕಾಳಜಿಯಾಗಲಿ ಇರಲಿಲ್ಲ ಅದರ ಉದ್ದೇಶವೇ ಬೇರೆ. ಪಾಕಿಸ್ತಾನದ ಪ್ರಮುಖ ನದಿಗಳಾದ ಇಂಡಸ್, ಚೀನಾಬ್, ರಾವಿ ಹರಿಯುತ್ತಿದ್ದದ್ದು ಕಾಶ್ಮೀರದ ಕಣಿವೆಯ ಮೂಲಕ. ಒಂದುವೇಳೆ ಭಾರತವೇನಾದರೂ ಇದರ ಹರಿವನ್ನು ನಿಲ್ಲಿಸಿದರೆ ಪಾಕಿಸ್ತಾನದ ಬಹುಪಾಲು ಪ್ರದೇಶ ಮರುಭೂಮಿಯಾಗುತ್ತಿತ್ತು. ಹಾಗಾಗಿ ಪಾಕಿಸ್ತಾನಕ್ಕೆ ಕಾಶ್ಮೀರದ ಬಗೆಗೆ ಇದ್ದಿದ್ದು ಕೇವಲ ಅರ್ಥಿಕ ಲಾಲಸೆ ಮಾತ್ರ.

ಯಾವಾಗ ತನ್ನ ಯತ್ನ ವಿಫಲವಾಗುತ್ತೋ ಆಗ ಪಾಕ್ ನ ಸೇನಾ ಮುಖ್ಯಸ್ಥ ಒಂದು ಸಲಹೆಯನ್ನು ಭಾರತಕ್ಕೆ ಸಲ್ಲಿಸುತ್ತಾರೆ. ಅವರ ಪ್ರಕಾರ ಕಾಶ್ಮೀರದ ಗಡಿಭಾಗದಲ್ಲಿನ ಭಾರತ ಹಾಗೂ ಪಾಕ್ ಸೇನೆಯನ್ನು ಒಗ್ಗೂಡಿಸೋಣ, ಇದರಿಂದ ನಮ್ಮ ಶತ್ರುಗಳ ವಿರುದ್ಧ ಹೋರಾಡಲು ಅನುಕೂಲವಾಗುತ್ತದೆ ಹಾಗೂ ರಕ್ಷಣೆಯೂ ಹೆಚ್ಚುತ್ತದೆ ಎಂದು. ಆದರೆ ಅದರ ಸಾಧಕ, ಬಾಧಕಗಳನ್ನ, ಹೇಗೆ ಎಂಬುದನ್ನೂ ಯೋಚಿಸಿದ ನೆಹರು ಹೇಳಿದ್ದು ಒಂದೇ ಮಾತು. ‘Joint defense force, against whom?’.. ಇದಕ್ಕೆ ಉತ್ತರ ದೊರಕಿದ್ದು 1967 ರಲ್ಲಿ, ಚೀನಾ ದಂಡೆತ್ತಿಬಂದಾಗ… ಅಂದು ನೆಹರು ಎಸ್ ಅಂದಿದ್ದರೆ ಬಹುಶಃ ಚೀನಾ ಆ ಧೈರ್ಯ ಮಾಡುತ್ತಲೇ ಇರಲಿಲ್ಲವೇನೋ. ಭಾರತದ ಮೊದಲ ಪ್ರಧಾನಿ ಪಾಕ್ ನ ಬಗ್ಗೆ ತೆಗೆದುಕೊಂಡಿದ್ದು ಮತ್ತೆ ಮತ್ತೆ ತಪ್ಪುನಿರ್ಧಾರಗಳೇ.

ಪಾಕಿಸ್ತಾನದ ಮುಂದಿನ ಹೆಜ್ಜೆ 1984 ರಲ್ಲಿ ಸಿಯಾಚಿನ್ ಮೇಲೆ. ಅದನ್ನು ಪ್ಲಾನ್ ಮಾಡಿದ್ದು ಜಿಯಾಉಲ್ಲ್ಹ. ಸಿಯಾಚಿನ್ ಪ್ರದೇಶವನ್ನು ವಶಪಡಿಸಿಕೊಂಡರೆ ಭಾರತದೊಳಕ್ಕೆ ನುಸುಳುವುದು ಬಹುಸುಲಭವಾಗಿತ್ತು. ಯಾವಾಗ ಪಾಕ್ ಈ ನಿರ್ಧಾರ ತೆಗೆದುಕೊಂಡು ಮುಂದುವರಿಯುತ್ತದೋ ಆಗ ಆಗಿನ ಪ್ರಧಾನಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧೀ ಸೈನ್ಯಕ್ಕೆ ಹೇಳಿದ್ದು ಒಂದೇ ಮಾತು. ‘Just take siyachin at any cost’. ಆ ವಾಕ್ಯದ ಪರಿಣಾಮ ಮಾತ್ರ ಅದ್ಭುತ. ಸಿಯಾಚಿನ್ ನಲ್ಲಿ ತ್ರಿವರ್ಣ ಹಾರಾಡಿತು. ಈ ಪ್ರಯತ್ನವೂ ವಿಫಲವಾದ ನಂತರ ಪಾಕಿಸ್ತಾನ ಯೋಚಿಸಿದ್ದು, ಹಾಗೂ ಪ್ರಯತ್ನಿಸಿದ್ದು ಕಾರ್ಗಿಲ್ ಅನ್ನು ವಶಪಡಿಸಿಕೊಳ್ಳುವ ಬಗ್ಗೆ. ಹೀಗೆ ಪಾಕಿಸ್ತಾನದ ಪ್ರತೀ ಪ್ರಯತ್ನವೂ ವಿಫಲವಾದಾಗ ಅವರಿಗೆ ಅರಿವಾಗುತ್ತದೆ, ಕಾಶ್ಮೀರ ಎಂದಿಗೂ ನಮ್ಮದಾಗುವುದಿಲ್ಲ, ಅದೇನಿದ್ದರೂ ಇನ್ನು ವ್ಯರ್ಥಪ್ರಯತ್ನ ಅಂತ. ಹಾಗಾದರೆ ಪಾಕಿಸ್ತಾನ ಯಾಕೆ ಅಲ್ಲಿ ಕಿರಿಕ್ ಮಾಡ್ತಾ ಇದೇ ಅನ್ನೋದು ಬಹಳ Interesting ವಿಷ್ಯ.

ಈಗಾಗಲೇ ಸಿಂಧ್ ಪ್ರಾಂತ್ಯ, ಹಾಗೂ ಬಲೂಚಿಸ್ಥಾನ ಗಳಲ್ಲಿ ಪಾಕ್ ವಿರುದ್ದ ದಂಗೆಯಾಗುತ್ತಿದೆ. ಹಾಗಾಗಿ ಅವರಿಗೆ ಗೊತ್ತು, ಕಾಶ್ಮೀರವನ್ನು ತೆಗೆದುಕೊಂಡರೆ ಅದು ಇನ್ನೊಂದು ಬಲೂಚಿಸ್ಥಾನವಾಗುತ್ತೆ ಅಂತ. ಆಗ ಅಲ್ಲಿ ಈಗ ನಡೆಯುತ್ತಿರುವುದಕ್ಕಿಂತಲೂ ಹೆಚ್ಚು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಅದೂ ಅಲ್ಲದೆ ತಾವೇ ಹುಟ್ಟುಹಾಕಿದ ಪ್ರತ್ಯೇಕತಾವಾದವನ್ನು suppress ಮಾಡುವುದಾದರೂ ಹೇಗೆ? ಉತ್ತರಿಸುವುದಾದರೂ ಏನು?. ಹೀಗಾದರೆ ಭಾರತವನ್ನು blame ಮಾಡಿ ಜಾರಿಕೊಳ್ಳಬಹುದು ಹಾಗೂ ಅದನ್ನು ಕಟ್ಟಿಹಾಕಬಹುದು. ಹಾಗಾಗಿ ಅವರಿಗೆ ಕಾಶ್ಮೀರ ಬೇಡ ಹಾಗಾದರೆ ಬೇಕಾಗಿರೋದೇನು? ಇದನ್ನು ಬಹಳ ನೇರವಾಗಿ ಮಹಮೂದ್ ಬುಲ್ ಅನ್ನುವ ISI ಮಾಜಿ ನಿರ್ದೇಶಕರು ಹೇಳಿದ್ದಾರೆ. “We will make India bleed with thousands cuts”.

ಭಾರತದ ಶಿರೋ ಭಾಗದಲ್ಲಿ ಒಂದು ಗಾಯ ಸದಾ ಇರಬೇಕು ಹಾಗೂ ಅದು ರಕ್ತ ಸುರಿಸುತ್ತಲೇ ಇರಬೇಕು. ಒಂದು ವೇಳೆ ಕಾಶ್ಮೀರವೇನಾದರೂ ಪಾಕ್ ಗೆ ಹೋದರೆ ಭಾರತದ ತಲೆಯ ಮೇಲಿನ ಗಾಯ ಪಾಕ್ ನ ಮೂಗಿನ ಮೇಲಾಗುತ್ತದೆ. ಹಾಗಾಗಿ ಅವರಿಗೆ ಕಾಶ್ಮೀರ ಭಾರತದಲ್ಲಿ ಉಳಿಯುವುದೇ ಹೆಚ್ಚು ಲಾಭಕಾರಿ. ಇದಿಷ್ಟೂ ಪಾಕ್ ನ ಒಂದು ಮುಖವಾದರೆ ತಮ್ಮ ತಪ್ಪುಗಳಿಂದ ಪಾಠ ಕಲಿತ ಅದು ಸಂಧಾನ ಪ್ರಯತ್ನವನ್ನೂ, ಬಗೆಹರಿಸಿಕೊಳ್ಳುವ ಕಾರ್ಯವನ್ನೂ ಮಾಡಲು ಯತ್ನಿಸಿತ್ತು. ಹಾಗಾದರೆ ಆ ಪ್ರಯತ್ನವೇನು, ಯಾರ್ಯಾರು ಮಾಡಿದರು?

ಮೊದಲ ಸಂಧಾನ ಪ್ರಯತ್ನ ಶುರುವಾಗಿದ್ದು1956 ರಲ್ಲಿ. ಅದರ ಪ್ರಕಾರ ಶ್ರೀನಗರ ಭಾರತಕ್ಕೆ ಸೇರಬೇಕು ಹಾಗೂ ಗುಲಾಲ್ ಸರೋವರದ ಬಳಿ ಗಡಿರೇಖೆ ಹಾದುಹೋಗಬೇಕು ಎಂದು. ಇದರ ಪ್ರಕಾರ ಜನರಲ್ ಇಸ್ಕಿಂದರ್ ಮಿರ್ಜಾ ಹಾಗೂ ನೆಹರೂ ನಡುವೆ ಮಾತುಕತೆ ನಡೆಯುವ ಮೊದಲೇ ಸೈನಿಕ ಕ್ರಾಂತಿ ನಡೆದು ಜನರಲ್ ಅವರನ್ನು ಒನ್ ವೆ ಟಿಕೆಟ್ ಕೊಟ್ಟು ವಿದೇಶಕ್ಕೆ ಕಳುಹಿಸಲಾಗುತ್ತದೆ. ಇದಾದ ನಂತರ ಮತ್ತೊಂದು ಪ್ರಯತ್ನ ಮಾಡಿದ್ದು ಭಾರತವನ್ನು ಅತಿಯಾಗಿ ದ್ವೇಷಿಸಿದ ಜಿಯಾಉಲ್ ಹಕ್. 1987 ರ ಹೊತ್ತಿಗೆ ಅವರಿಗೆ ಅರ್ಥವಾಗುತ್ತೆ, ಇದು ಈಡೇರದ ಪ್ರಯತ್ನ ಹಾಗಾಗಿ ಸಂಧಾನ ಮಾಡಿಕೊಂಡು ಗುಲಾಲ್ ಸರೋವರದ ಹತ್ತಿರ ಗಡಿಯನ್ನು ಮಾಡಿಕೊಳ್ಳುವುದೇ ಸೂಕ್ತ ಅಂತ. ಅವರ ಹಾಗೂ ಭಾರತದ ಆಗಿನ ಪ್ರಧಾನಿ ರಾಜೀವ್ ಗಾಂಧಿ ನಡುವೆ ರಹಸ್ಯ ಮಾತುಕತೆಗಳೂ ನಡೆಯುತ್ತದೆ. ಅಧಿಕೃತವಾಗಿ ಸಹಿ ಬೀಳುವ ಮೊದಲು ಜಿಯಾ ಅವರು ಏರಿದ್ದ ವಿಮಾನ ಅಪಘಾತಕ್ಕಿಡಾಗುತ್ತದೆ. ಕೊನೆಯ ಗಳಿಗೆಯಲ್ಲಿ ಅವರ ವಿಮಾನದಲ್ಲಿಟ್ಟ ಮಾವಿನ ಹಣ್ಣಿನ ಬಾಕ್ಸ್ ಸ್ಪೋಟವಾಗುತ್ತೆ. ‘Mangoes are exploded’.

ಮೂರನೆ ಪ್ರಯತ್ನ ಮಾಡಿದ್ದು ಮುಷರಫ್. ಮೊದಲಿನ ಪ್ಲಾನ್ ಅನ್ನು ಇಂಪ್ಲಿಮೆಂಟ್ ಮಾಡುವ ಪ್ರಯತ್ನದಲ್ಲಿದ್ದಾಗ ಅವರಿಗೆ ಇನ್ನಿಲ್ಲದ ತೊಂದರೆಯನ್ನು ಕೊಟ್ಟು ಅವರನ್ನು ಅಧಿಕಾರದಿಂದ ಇಳಿದು ಓಡಿಹೋಗುವ ಹಾಗೆ ಮಾಡಲಾಗುತ್ತದೆ. ಇವೆಲ್ಲದರ ಹಿಂದಿನ ಭಾವ ಒಂದೇ ಇದು ಕೇವಲ ಎರಡು ರಾಷ್ಟ್ರ್ರಗಳು ಸಮಸ್ಯೆ ಮಾತ್ರವಲ್ಲ. ಇದರ ಹಿಂದೆ ಇನ್ಯಾವುದೋ ಒಂದು ಮೂರನೇಶಕ್ತಿ ಇದೆ. ಅದಕ್ಕೆ ಈ ಸಮಸ್ಯೆ ಪರಿಹಾರವಾಗುವುದು ಬೇಡವಾಗಿದೆ ಅಂತ.

2 ಟಿಪ್ಪಣಿಗಳು Post a comment
 1. ಭಾಸ್ಕರ್ ಭೀಮರಾವ್ ಖಾಂಡ್ಕೇ
  ಸೆಪ್ಟೆಂ 10 2016

  ಕಾಶ್ಮೀರದ ಈಗಿನ ಕಲ್ಲೆಸೆತದ ಹಿಂದಿನ ಸತ್ಯ, ಪ್ರತ್ಯೇಕವಾದಿಗಳ ಆಷಾಢಭೂತಿತನಾ…ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ ಕಂಡವರ ಮಕ್ಕಳ ತಲೆಕೆಡಿಸುತ್ತಿರೋದನ್ನೂ ಸೇರಿಸಬಹುದಿತ್ತು. ಈ ಕಾರ್ಯಕ್ರಮದ ತಿರುಳನ್ನು ಅನುವಾದಿಸಿದಾ ಶೋಭಾರಾವ್ರವರಿಗೆ ಧನ್ಯವಾದಗಳು

  ಉತ್ತರ
 2. K.Sreepathybhat
  ಸೆಪ್ಟೆಂ 14 2016

  The naked truth of History.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments