ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 11, 2016

6

ಸಿದ್ಧಾಂತಗಳ ಚರಿತ್ರೆ – 1 (ಕಾರ್ಲ್ ಮಾರ್ಕ್ಸ್ ಕಟ್ಟಿಕೊಟ್ಟ ಕಲ್ಪನೆಯ ಸ್ವರ್ಗ)

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

karl-marx-wikimedia-commonsಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನದ ಪ್ರಪಂಚವನ್ನು ಹೆಚ್ಚು ಪ್ರಭಾವಿಸಿದ, ಬದಲಾಯಿಸಿದ ಸಿದ್ಧಾಂತಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ಕಮ್ಯುನಿಸಂ. ಇಪ್ಪತ್ತನೇ ಶತಮಾನದಲ್ಲಿ ನಡೆದ ಹಲವು ಮಹತ್ವದ ರಾಜಕೀಯ ಚಳುವಳಿಗೆ ಕಮ್ಯುನಿಸಂ ಮೂಲದ್ರವ್ಯವಾಗಿ ಒದಗಿಬಂತು. ಕಮ್ಯುನಿಸಂ ಎಂದರೇನು, ಅದು ಜಗತ್ತನ್ನು ಪ್ರಭಾವಿಸಿದ ಬಗೆ ಹೇಗೆ, 1970ರ ನಂತರ ಅದು ಅವನತಿಯತ್ತ ಸಾಗಲು ಕಾರಣವಾದ ಸನ್ನಿವೇಶಗಳೇನು, ಇಂದಿನ ಯುಗಕ್ಕೆ ಕಮ್ಯುನಿಸಂ ಪ್ರಸ್ತುತವೇ ಎಂಬ ವಿಚಾರಗಳನ್ನು ತಿಳಿದುಕೊಳ್ಳಲು, ಮೊದಲಿಗೆ ನಾವು ಅದರ ಹುಟ್ಟಿನ ದಿನಗಳ ಅವಲೋಕನ ಮಾಡಬೇಕಾಗುತ್ತದೆ.

ಕಮ್ಯುನಿಸಂ ಚಿಂತನೆಯ ಆದ್ಯಬ್ರಹ್ಮನೆಂದೇ ಪರಿಗಣಿಸಲ್ಪಡುವ ಕಾರ್ಲ್ ಮಾರ್ಕ್ಸ್ ಹುಟ್ಟಿದ್ದು ಜರ್ಮನಿಯ ಟ್ರಿಯರ್ ಎಂಬ ಪಟ್ಟಣದಲ್ಲಿ, ಕ್ರಿಶ 1818ರಲ್ಲಿ. ಮಾರ್ಕ್ಸ್ ಬುದ್ಧಿವಂತ, ಚೂಟಿ, ಓದು-ಬರಹಗಳಲ್ಲಿ ಅಪಾರ ಆಸಕ್ತಿಯಿದ್ದವನು. ಮಾರ್ಕ್ಸ್ ಹುಟ್ಟುವುದಕ್ಕಿಂತ ಮೂವತ್ತು ವರ್ಷಗಳ ಮೊದಲು ಫ್ರಾನ್ಸ್ ನಲ್ಲಿ ಫ್ರೆಂಚ್ ಕ್ರಾಂತಿ ನಡೆದು ಜನಸಾಮಾನ್ಯರು ರಾಜಪ್ರಭುತ್ವವನ್ನು ಕಿತ್ತೊಗೆದು ಫ್ಯೂಡಲಿಸಂ ಎಂಬ ಮಾದರಿಯನ್ನು ಅಪ್ಪಿಕೊಂಡರು. ಸಮಾನತೆ, ಸ್ವಾತಂತ್ರ್ಯ, ಬಿಡುಗಡೆಯ ಘೋಷಣೆಗಳು ಮುಗಿಲು ಮುಟ್ಟಿದವು. ನೂರಾರು ವರ್ಷಗಳ ದಾಸ್ಯದಿಂದ ಬಿಡುಗಡೆಯಾದ ಶ್ರೀಸಾಮಾನ್ಯ ಸ್ವಾತಂತ್ರ್ಯದ ಸುಖವನ್ನು ಮೊತ್ತಮೊದಲ ಬಾರಿಗೆ ಅನುಭವಿಸಿದ. ತನ್ನ ಹದಿಹರೆಯದಲ್ಲಿ ಮಾರ್ಕ್ಸ್, ಇತಿಹಾಸದಲ್ಲಿ ನಡೆದುಹೋದ ಈ ಮಹತ್ತರ ಬದಲಾವಣೆಯ ವಿವರಗಳನ್ನು ಓದಿ ರೋಮಾಂಚಿತನಾದ. ಅದೇ ಸಮಯದಲ್ಲಿ ಇಂಗ್ಲೆಂಡ್ ಮತ್ತು ಜರ್ಮನಿಯಲ್ಲಿ ಕೈಗಾರಿಕಾ ಕ್ರಾಂತಿ ತನ್ನ ಹೊಚ್ಚ ಹೊಸ ಹೆಜ್ಜೆಗಳನ್ನು ದಿಟ್ಟವಾಗಿ ಮೂಡಿಸತೊಡಗಿದ್ದು, ಮಾರ್ಕ್ಸ್ ಅದನ್ನೂ ಕುತೂಹಲದಿಂದ ನೋಡುವಂತೆ ಮಾಡಿತು. ಒಂದೆಡೆಯಲ್ಲಿ ರಾಜಪ್ರಭುತ್ವದ ಸಂಕೋಲೆಗಳಿಂದ ಹೊರಬಂದು ಕುಣಿದು ಕುಪ್ಪಳಿಸುತ್ತಿದ್ದ ಜನ ಮತ್ತೊಂದೆಡೆ ಕೈಗಾರಿಕಾ ಕ್ರಾಂತಿಯೆಂಬ ಉರುಳಿಗೆ ಕೊರಳು ಸಿಕ್ಕಿಸಿಕೊಂಡು ಬಂಡವಾಳಶಾಹಿ ಮಾಲೀಕರ ಪಾದಗಳಡಿ ತಮ್ಮ ಸ್ವಾತಂತ್ರ್ಯವನ್ನು ಚೆಲ್ಲಿಕೊಳ್ಳುತ್ತಿದ್ದಾರೆಂದು ಮಾರ್ಕ್ಸ್ ನಿಗೆ ಅನಿಸತೊಡಗಿತು. ಕಾರ್ಮಿಕ ವರ್ಗ ದಿನಕ್ಕೆ 12 ಗಂಟೆ ಬೆವರಿಳಿಸಿ ದುಡಿಯುತ್ತ, ಕನಿಷ್ಠ ಸಂಬಳ ಪಡೆಯುತ್ತ, ದರಿದ್ರನಾರಾಯಣನಾಗಿ ಬಾಳುತ್ತ ಗುಲಾಮಗಿರಿಗಿಂತ ಯಾವ ರೀತಿಯಲ್ಲೂ ಉತ್ತಮವಲ್ಲದ ಸ್ಥಿತಿಯಲ್ಲಿದ್ದಾರೆಂದು ಮಾರ್ಕ್ಸ್ ನಿಗೆ ಮನವರಿಕೆಯಾಯಿತು. ಕಾರ್ಮಿಕರು ಶಿಕ್ಷಣ, ಕಲೆ, ಸಾಹಿತ್ಯ, ಮನರಂಜನೆ, ಸಾಮಾಜಿಕ ಚಟುವಟಿಕೆಗಳು – ಎಲ್ಲದರಿಂದ ವಿಮುಖರಾಗಿದ್ದರು. ಫ್ಯಾಕ್ಟರಿಯೆಂಬ ವ್ಯವಸ್ಥೆ ರಕ್ತಮಾಂಸಗಳಿಂದ ಕೂಡಿದ ಮನುಷ್ಯರನ್ನು ಯಂತ್ರಗಳನ್ನಾಗಿಸುತ್ತದೆ; ಅವರ ಬೌದ್ಧಿಕ ಸಾಮರ್ಥ್ಯವನ್ನು ಕೊಲ್ಲುತ್ತದೆ; ಜನ ಯಾಂತ್ರಿಕರಾಗುತ್ತ ಹೋದಂತೆ ಕಾರ್ಖಾನೆಗಳ ಮಾಲಿಕರು ಹೆಚ್ಚು ಬಲಾಢ್ಯರಾಗುತ್ತ ಹೋಗುತ್ತಾರೆಂಬುದನ್ನು ಆತ ಕಂಡುಕೊಂಡ. ಅಧಿಕಾರ ಕಳೆದುಕೊಂಡ ರಾಜಪ್ರಭುತ್ವ ಬಂಡವಾಳಶಾಹಿಯ ಮೂಲಕ ಮತ್ತೆ ತನ್ನ ಅಸ್ತಿತ್ವ ಸಾರಲು ಬರುತ್ತಿದೆ ಎನ್ನುವುದರಲ್ಲಿ ಯಾವ ಸಂಶಯವೂ ಉಳಿಯಲಿಲ್ಲ.

ಮಾರ್ಕ್ಸ್’ನ ಮುಂದಿನ ದಿನಗಳು ಸುಖಮಯವಾಗಿರಲಿಲ್ಲ. ಕೋಟಿಗಟ್ಟಲೆ ಸಂಪತ್ತಿನ ಒಡೆಯರಾದ ಕಂಪೆನಿ ಮಾಲಿಕರ ವಿರುದ್ಧ ತನ್ನ ಲೇಖನಿ ಝಳಪಿಸತೊಡಗಿದ ಕಾರಣಕ್ಕೆ ಆತನನ್ನು ಜರ್ಮನಿಯಿಂದ ಎತ್ತಿ ಹೊರಗೆಸೆಯಲಾಯಿತು. ದೇಶಭ್ರಷ್ಟನಾದ ಆತನಿಗೆ ಯುರೋಪಿನ ಯಾವೊಂದು ದೇಶವೂ ನೆಲೆ ಕೊಡದಾಗ ಕೊನೆಗೆ ಇಂಗ್ಲೆಂಡಿಗೆ ಬರಬೇಕಾಯಿತು. ಕೆಲವು ವರ್ಷ ನ್ಯೂಯಾರ್ಕ್ ಟ್ರಿಬ್ಯೂನ್ ಪತ್ರಿಕೆಗೆ ಇಂಗ್ಲೆಂಡಿನ ಪ್ರತಿನಿಧಿಯಾಗಿ ದುಡಿದ; ಅಮೆರಿಕನ್ ಸಿವಿಲ್ ವಾರ್ ಕುರಿತು ಸರಣಿ ಲೇಖನಗಳನ್ನು ಬರೆದ. ಅರ್ಥಶಾಸ್ತ್ರದಲ್ಲಿ ಉದ್ದಾಮ ಕೃತಿಗಳನ್ನು ರಚಿಸಿದ್ದ ಆಡಂ ಸ್ಮಿತ್, ಡೇವಿಡ್ ರಿಕಾರ್ಡೊ, ಜೇಮ್ಸ್ ಮಿಲ್ ಮುಂತಾದ ಪೂರ್ವಸೂರಿಗಳ ವಿಶ್ಲೇಷಣೆಯನ್ನು ಅಧ್ಯಯನ ಮಾಡಿದ. ಅವರೆಲ್ಲ ಸಮಾಜದಲ್ಲಿ ದೊಡ್ಡ ಆರ್ಥಿಕ ವ್ಯವಸ್ಥೆಗಳು ಹೇಗೆ ಬದಲಾವಣೆ ತರುತ್ತವೆಂಬುದರ ಕುರಿತು ದೊಡ್ಡದೊಡ್ಡ ಸಿದ್ಧಾಂತಗಳನ್ನು ಸೃಷ್ಟಿಸಿ ಮಣಭಾರದ ಪುಸ್ತಕಗಳನ್ನು ಬರೆದು ತಮ್ಮ ಪಾಂಡಿತ್ಯ ಪ್ರದರ್ಶನ ಮಾಡಿದ್ದರೂ ಯಾರೊಬ್ಬರೂ ಕಾರ್ಮಿಕ ಎಂಬ ವರ್ಗದ ಅಸ್ತಿತ್ವದ ಬಗ್ಗೆ ತಲೆಯನ್ನೇ ಕೆಡಿಸಿಕೊಂಡಿರಲಿಲ್ಲ! ಕಾರ್ಮಿಕನೆಂದರೆ ಕೊಟ್ಟ ಸಂಬಳಕ್ಕೆ ತಕ್ಕಂತೆ ಕಮಕ್ ಕಿಮಕ್ ಎನ್ನದೆ ಕೆಲಸ ಮಾಡಿಹೋಗುವವನು; ಅವನ ಬಗ್ಗೆ ತಮ್ಮ ಸಿದ್ಧಾಂತಗಳಲ್ಲಿ ಒಂದು ಸಾಲನ್ನೂ ಮೀಸಲಿಡಬೇಕಾಗಿಲ್ಲ ಎಂದೇ ಅವರೆಲ್ಲ ಭಾವಿಸಿದಂತಿತ್ತು! ಕಾರ್ಲ್ ಮಾರ್ಕ್ಸ್ ಗೆ ಸಮಸ್ಯೆಯ ಮೂಲಬೀಜ ಎಲ್ಲಿದೆ ಎಂಬುದು ತಟ್ಟನೆ ಹೊಳೆದುಬಿಟ್ಟಿತು.

ಮಾರ್ಕ್ಸ್ ಕಾನೂನು ವಿದ್ಯಾರ್ಥಿಯಾಗಿದ್ದರೂ ಅವನನ್ನು ಹೆಚ್ಚು ಸೆಳೆದದ್ದು ತತ್ತ್ವಶಾಸ್ತ್ರ. 1843ರಲ್ಲಿ, ಅಂದರೆ ತನ್ನ ಇಪ್ಪತ್ತೈದನೇ ವಯಸ್ಸಿನಲ್ಲಿ ಆತ “ಹೇಗಲ್‍ನ ಚಿಂತನೆಗಳ ವಿಮರ್ಶೆ” ಎಂಬ ಕೃತಿ ಬರೆದ. ಹೇಗಲ್ ಎಂಬ ಆ ಕಾಲದ ಪ್ರಸಿದ್ಧ ಜರ್ಮನ್ ತತ್ತ್ವಶಾಸ್ತ್ರಜ್ಞನ ಮೂರ್ನಾಲ್ಕು ಉದ್ದಾಮ ಗ್ರಂಥಗಳನ್ನು ಓದಿ ಅರ್ಥೈಸಿಕೊಂಡು, ಅವುಗಳ ಮೇಲೆ ತನ್ನದೇ ಚಿಂತನೆಯನ್ನು ಈ ಕೃತಿಯಲ್ಲಿ ಕಾಣಿಸಿದ. ಮಾರ್ಕ್ಸ್ ನಲ್ಲಿ ಮುಂದೆ ಕಾಣಿಸಿಕೊಂಡ ಕಮ್ಯುನಿಸ್ಟ್ ಚಿಂತನೆಗೆ ಬೀಜರೂಪದ ಹಲವು ವಿಷಯಗಳನ್ನು ನಾವು ಹೇಗಲ್ ಕೃತಿಯಲ್ಲಿ ನೋಡಬಹುದು. ಉದಾಹರಣೆಗೆ, ಕಾರ್ಮಿಕರ ಜೀವನ ನಿಸ್ಸಾರವಾಗಿದೆ; ಅವರು ಎಲ್ಲ ಬಗೆಯ ಕಲೆ-ಸಾಹಿತ್ಯ ಚಟುವಟಿಕೆಗಳಿಂದ ವಿಮುಖರಾಗಿ ಸಂಪೂರ್ಣವಾಗಿ ಜಡಭರತರಾಗಿದ್ದಾರೆಂಬ ಮಾರ್ಕ್ಸ್ ನ ಚಿಂತನೆಯ ಹಿಂದೆ ಹೇಗಲ್ ಹೇಳಿದ “ಕಲೆಗಾಗಿ ಕಲೆ ಅಲ್ಲ. ಅದಕ್ಕೊಂದು ಅರ್ಥವತ್ತಾದ ಮೂಲೋದ್ದೇಶವಿದೆ” ಎಂಬ ಮಾತಿನ ಪ್ರಭಾವವಿದೆ. 1844ರಲ್ಲಿ ಕಾರ್ಲ್ ಮಾರ್ಕ್ಸ್ “ಎಕನಾಮಿಕ್ ಆಂಡ್ ಫಿಲಾಸಾಫಿಕ್ ಮ್ಯಾನುಸ್ಕ್ರಿಪ್ಟ್ಸ್” ಎಂಬ ಕೃತಿಯೊಂದಿಗೆ ತನ್ನ ಸ್ವತಂತ್ರ ಚಿಂತನೆಗಳನ್ನು ಪುಸ್ತಕ ರೂಪದಲ್ಲಿ ಹೊರತರುವ ಕಾರ್ಯಕ್ಕೆ ಚಾಲನೆ ನೀಡಿದ. ಅದರ ಮರುವರ್ಷ, “ಥೀಸೀಸ್ ಆನ್ ಫಾಯರ್‍ಬಾಕ್”, “ದ ಜರ್ಮನ್ ಐಡಿಯಾಲಜಿ”, “ದ ಹೋಲಿ ಫ್ಯಾಮಿಲಿ” ಎಂಬ ಮೂರು ಪುಸ್ತಕಗಳನ್ನು ಪ್ರಕಟಿಸಿದ. 1848ರಲ್ಲಿ, ಮಾರ್ಕ್ಸ್ ನ ಮೂವತ್ತನೇ ವಯಸ್ಸಿನಲ್ಲಿ, ಅವನ ಜೀವಮಾನದ ಪ್ರಸಿದ್ಧ ಕೃತಿಯಾದ “ದ ಕಮ್ಯುನಿಸ್ಟ್ ಮ್ಯಾನಿಫೆಸ್ಟೋ” ಬಂತು. ತನ್ನ ಬದುಕಿನ ಬಹಳಷ್ಟು ಮಹತ್ವದ ಕೆಸಲಗಳನ್ನೆಲ್ಲ ಮಾಕ್ರ್ಸ್ ಮೂವತ್ತೈದು ವರ್ಷಕ್ಕಿಂತ ಮೊದಲೇ ಮಾಡಿ ಮುಗಿಸಿದನೆಂದು ಹೇಳಬಹುದು. ಬದುಕಿನ ಉತ್ತರಾರ್ಧದಲ್ಲಿ ಆತನಿಂದ ಅಂಥ ಗಮನೀಯ ಸಾಧನೆಗಳೇನೂ ಆಗಲಿಲ್ಲ ಎಂಬುದು ಅಚ್ಚರಿಯ ಸತ್ಯ.

ಕಮ್ಯುನಿಸ್ಟ್ ಎಂಬ ಚಿಂತನೆಯನ್ನೂ ಶಬ್ದವನ್ನೂ ಟಂಕಿಸಿದವನೇ ಕಾರ್ಲ್ ಮಾರ್ಕ್ಸ್ ಎಂಬ ಭಾವನೆ ಹಲವರಲ್ಲಿದೆ. ಮಾರ್ಕ್ಸ್ ನಿಗೆ ಮೊದಲೂ ಕಮ್ಯುನಿಸ್ಟ್ ಚಿಂತನೆ ಅಸ್ತಿತ್ವದಲ್ಲಿತ್ತು. ಸಮಾಜದ ಒಂದು ವರ್ಗವನ್ನು ಶೋಷಿಸಲಾಗುತ್ತಿದೆಯೆಂಬ ಅಂದಾಜು ಇದ್ದರೂ ಸಮಸ್ಯೆಯ ಪೂರ್ಣಚಿತ್ರಣವನ್ನು ಗ್ರಹಿಸುವಷ್ಟು ಬೌದ್ಧಿಕತೆ ಕಮ್ಯುನಿಸ್ಟರಲ್ಲಿ ಬೆಳೆದಿರಲಿಲ್ಲ. ‘ಬಂಡವಾಳಶಾಹಿತ್ವ’ ಯಾಕೆ ಮತ್ತು ಹೇಗೆ ಜಗತ್ತು ಎದುರಿಸುತ್ತಿರುವ ಮಹಾಸಮಸ್ಯೆ ಎಂಬುದನ್ನು ಸ್ಪಷ್ಟ ಶಬ್ದಗಳಲ್ಲಿ ವರ್ಣಿಸಿ ಅದಕ್ಕೊಂದು ನಿರ್ದಿಷ್ಟ ಚೌಕಟ್ಟನ್ನು ಹಾಕಿಕೊಟ್ಟವನು ಮಾರ್ಕ್ಸ್. ಆತನ ಪ್ರಕಾರ:

(1) ಆಧುನಿಕ ವೃತ್ತಿಗಳಲ್ಲಿ ಕೆಲಸಕ್ಕೂ ಕೆಲಸಗಾರನಿಗೂ ಕರುಳಬಳ್ಳಿಯ ಸಂಬಂಧವಿಲ್ಲ:
ಮಾರ್ಕ್ಸ್ ಹೇಳುವಂತೆ ಪ್ರತಿಯೊಂದು ಕೆಲಸ/ವೃತ್ತಿಯೂ ಅದನ್ನು ಮಾಡುವವನಿಗೆ ಅತ್ಯಂತ ಪರಿಶುದ್ಧವಾದ ಆತ್ಮತೃಪ್ತಿಯನ್ನು ತಂದುಕೊಡುವಂತಿರಬೇಕು. ಉದಾಹರಣೆಗೆ ಬಡಗಿಯನ್ನೇ ನೋಡಿ. ಒಂದು ಕುರ್ಚಿಯನ್ನೋ ಮೇಜನ್ನೋ ಬಾಗಿಲನ್ನೋ ಮಾಡಿಮುಗಿಸಿದ ಮೇಲೆ ಅವನಲ್ಲಿ ಸಂತೃಪ್ತಿಯ ನಗು ತುಳುಕುವಂತಿದ್ದರೆ ಕೆಲಸ ಸಾರ್ಥಕ. ಮಾಡಿದ ಕೆಲಸದ ಪೂರ್ಣ ಜವಾಬ್ದಾರಿಯನ್ನು ಹೊರುವುದರಲ್ಲಿರುವ ಆತ್ಮತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ ಆಧುನಿಕ ಜಗತ್ತಿನ ಕಾರ್ಖಾನೆಗಳಲ್ಲಿ ಅಂಥದೊಂದು ಸ್ವಂತಿಕೆಯ ಅಥವಾ ಜವಾಬ್ದಾರಿ ಹೊರುವಷ್ಟು ದೊಡ್ಡ ಪ್ರಮಾಣದ ಕೆಲಸವನ್ನು ಯಾರೂ ಮಾಡುತ್ತಲೇ ಇಲ್ಲ. ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಒಬ್ಬಾಕೆ ಅಂಗಿಗೆ ಗುಂಡಿ ಹೊಲಿಯುವ ಕೆಲಸ ಮಾಡುತ್ತಿದ್ದರೆ ದಿನಾಂತ್ಯಕ್ಕೆ ಮೂನ್ನೂರೋ ನಾಲ್ಕುನೂರೋ ಗುಂಡಿಗಳನ್ನಷ್ಟೇ ಹೊಲಿದಿರುತ್ತಾಳೆ. ಕಾಲರ್ ಹೊಲಿಯುವಾಕೆ ದಿನವಿಡೀ ಕಾಲರ್‍ಗಳೊಂದಿಗೇ ಕಳೆದಿರುತ್ತಾಳೆ. ಕಾರು ಉತ್ಪಾದಿಸುವ ಕಾರ್ಖಾನೆಯಲ್ಲಿ ಚಕ್ರ ಜೋಡಿಸುವ ಕಾರ್ಮಿಕನಿಗೆ ಅದೊಂದನ್ನು ಬಿಟ್ಟರೆ ಮಿಕ್ಕ ಯಾವ ವಿವರಗಳೂ ತಿಳಿದಿರುವುದಿಲ್ಲ. ಪ್ರಿಂಟಿಂಗ್ ಪ್ರೆಸ್‍ನಲ್ಲಿ ಮೊಳೆ ಜೋಡಿಸುವ ಕಾರ್ಮಿಕ ತಾನು ಜೋಡಿಸಿದಷ್ಟು ವಾಕ್ಯಗಳನ್ನು ಓದಿಬಿಟ್ಟಿದ್ದರೆ ವ್ಯಾಸಮಹರ್ಷಿಯೇ ಆಗಿಬಿಡುತ್ತಿದ್ದನೇನೋ! ಒಟ್ಟಾರೆಯಾಗಿ ಆಧುನಿಕ ಜಗತ್ತಿನಲ್ಲಿ ಕೆಲಸವೇನೋ ನಡೆಯುತ್ತಿದೆ; ಆದರೆ ಯಾರಿಗೂ ತಮ್ಮ ಕೆಲಸದ ಪೂರ್ಣರೂಪದ ಪರಿಚಯ ಇಲ್ಲ; ಅಥವಾ ಇಲ್ಲದಿರುವಂತೆ ಕಾರ್ಖಾನೆಯ ಮುಖ್ಯಸ್ಥ ಎಚ್ಚರಿಕೆ ವಹಿಸುತ್ತಾನೆ.

ಮಾರ್ಕ್ಸ್ ನಿಗೆ ಇಲ್ಲಿ ಬಹಳ ದೊಡ್ಡ ಸಮಸ್ಯೆಯೊಂದು ಕಂಡಿತು. ವೃತ್ತಿಯೆಂಬುದು ನಮ್ಮೊಳಗಿನ ಪ್ರತಿಭೆ, ಕೌಶಲಗಳನ್ನು ಹೊರಹಾಕಲು ಇರುವ ಅತ್ಯದ್ಭುತ ಮಾರ್ಗವೆನ್ನುವುದನ್ನು ಮರೆತು ಅದನ್ನು ಕೇವಲ ಅನ್ನ ಸಂಪಾದಿಸಲಿಕ್ಕಿರುವ ದಾರಿಯೆಂಬಂತೆ ನೋಡುತ್ತಿದ್ದೇವಲ್ಲಾ ಎಂದು ಆತ ಕೊರಗಿದ. ಆಧುನಿಕ ಜಗತ್ತಿನಲ್ಲಿ ಕಾರ್ಖಾನೆಗಳು ಸುಸಜ್ಜಿತ ಯಂತ್ರೋಪಕರಣಗಳನ್ನು ಅಳವಡಿಸಿಕೊಳ್ಳುತ್ತಿವೆ. ಕಾರ್ಮಿಕರು ಸ್ಪೆಷಲೈಸ್ಡ್ ಕೆಲಸಗಳನ್ನು ಮಾಡಲು ನಿಯೋಜಿತರಾಗಿದ್ದಾರೆ. ಹೆಚ್ಚು ನಿಖರ, ನಿಷ್ಕೃಷ್ಟ ಮತ್ತು ಬೆಲೆ ಬಾಳುವ ಸಾಮಗ್ರಿಗಳನ್ನು ಉತ್ಪಾದಿಸಿ ಕಾರ್ಖಾನೆಗಳು ಮಾರುಕಟ್ಟೆಗೆ ಬಿಡುತ್ತಿವೆ. ಉತ್ಪನ್ನವೇ ಮುಖ್ಯವಾಗಿ ಅದನ್ನು ರೂಪಿಸಿದ ಕೈಗಳು ನಗಣ್ಯವಾಗುತ್ತಿವೆ. ಸೃಷ್ಟಿಕರ್ತ ನೇಪಥ್ಯಕ್ಕೆ ಸರಿದು ಆತನ ಸೃಷ್ಟಿ ಮಾತ್ರ ವೇದಿಕೆಯಲ್ಲಿ ಮಿಂಚುತ್ತಿದೆ. ಪ್ರತಿಯೊಬ್ಬ ಕಾರ್ಮಿಕನೂ ಒಂದೆರಡು ಪ್ರಾಥಮಿಕ ಕೌಶಲಗಳನ್ನು ಮಾತ್ರ ಗಳಿಸುವುದಕ್ಕೆ ಅವಕಾಶವಿರುವುದರಿಂದ, ಆತನನ್ನು ಕಾರ್ಖಾನೆಯ ಮಾಲಿಕ ಬದಲಾಯಿಸುವುದು ಸುಲಭ. ಕಾರ್ಮಿಕರನ್ನು ಬೇಕೆಂದಾಗ ಹೊರಗೆಸೆದು ಹೊಸಬರನ್ನು ನೇಮಿಸಿಕೊಳ್ಳಬಹುದು; ಅಥವಾ ಎಲ್ಲರನ್ನೂ ಹೊರಹಾಕಿ ಕೇವಲ ಯಂತ್ರಗಳಿಂದಲೇ ಕೆಲಸ ತೆಗೆಯಲೂಬಹುದು! ತನ್ನ ಕೆಲಸದೊಂದಿಗೆ ಕಾರ್ಮಿಕನಿಗೂ ತಾದಾತ್ಮ್ಯವಿಲ್ಲದೇ ಇರುವುದರಿಂದ ಆತನಿಗೆ ಕೆಲಸ ಕಳೆದುಕೊಂಡು ಹೊರಬಂದಾಗ ಸಂಬಳ ನಿಂತಿತೆಂಬ ಆಘಾತ ಆವರಿಸೀತೇ ಹೊರತು ಮಹತ್ವದ ಸಂಗತಿಯೊಂದನ್ನು ಸೃಷ್ಟಿಸುವ ಅವಕಾಶ ತಪ್ಪಿಹೋಯಿತೆಂಬ ವಿಷಾದ ಹುಟ್ಟದು. ಇಂಥ ಆಧುನಿಕತೆ ಸಮಾಜದಲ್ಲಿ ಸಾವಿರಾರು ಸಂಖ್ಯೆಯ ಭಾವನಾಶೂನ್ಯ ಕೌಶಲರಹಿತ ಯಾಂತ್ರಿಕ ಕಾರ್ಮಿಕರನ್ನು ಹುಟ್ಟುಹಾಕಲಿದೆ; ಯಂತ್ರಜಗತ್ತು ಮನುಷ್ಯರ ಆಸಕ್ತಿಗಳನ್ನು ಕೊಂದುಹಾಕಲಿದೆ; ಮನುಷ್ಯ ತಲೆಬುಡವಿಲ್ಲದ ಕೆಲಸಕ್ಕೆ ತನ್ನನ್ನು ಒಡ್ಡಿಕೊಳ್ಳುವುದರಿಂದ ನೈಜ ಸಾಮರ್ಥ್ಯವನ್ನು ಎಂದೆಂದೂ ಪರೀಕ್ಷೆಗೊಡ್ಡಿಕೊಳ್ಳದೆ ನಿರ್ವೀರ್ಯನಾಗುತ್ತಾನೆ ಎಂದು ಮಾರ್ಕ್ಸ್ ಬಗೆದ.

(2) ಬಂಡವಾಳಶಾಹಿ ಧನಿಕನಾಗುತ್ತಾನೆ ಮತ್ತು ಕಾರ್ಮಿಕ ಬಡವನಾಗಿಯೇ ಉಳಿಯುತ್ತಾನೆ:
ಆಗಲೇ ಹೇಳಿದಂತೆ ಬಂಡವಾಳಶಾಹಿ ವ್ಯವಸ್ಥೆಯು ತನ್ನಲ್ಲಿ ಕೆಲಸ ಮಾಡುತ್ತಿರುವ ಪ್ರತಿ ಕಾರ್ಮಿಕನಿಗೂ ಒಂದು ನಿರ್ದಿಷ್ಟ ಕೆಲಸವನ್ನಷ್ಟೇ ವಹಿಸುತ್ತದೆ. ಇದರಿಂದಾಗಿ, ಆ ಕಾರ್ಮಿಕರನ್ನು ತರಬೇತಿಗೊಳಿಸುವುದೂ ಸುಲಭ ಮತ್ತು ನೌಕರಿಯಿಂದ ಕಿತ್ತೊಗೆಯುವುದೂ ಸುಲಭ. ಸಂಸ್ಥೆಯ ಅರ್ಧಕ್ಕರ್ಧ ಜನ ಗುಂಪುಗೂಡಿದರೂ ಅವರಿಗೆ ಇಡೀ ಉತ್ಪನ್ನವನ್ನು ಹೊಸತಾಗಿ ತಯಾರಿಸುವುದು ಸಾಧ್ಯವಿಲ್ಲದ ಮಾತು. ಅಂದರೆ ಕಂಪೆನಿ ಮಾಲಿಕ ಕಾರ್ಮಿಕರನ್ನು ಅವಲಂಬಿಸುವುದಕ್ಕಿಂತ ಕಾರ್ಮಿಕರೇ ಮಾಲಿಕನ ದಾಕ್ಷಿಣ್ಯಕ್ಕೆ ಬೀಳಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ. ಇದು ಒಂದು ರೀತಿಯಲ್ಲಿ ಆನೆಯ ಕಿವಿಗೆ ಸದಾ ಅಂಕುಶ ಹಾಕಿ ನಿಯಂತ್ರಣದಲ್ಲಿಟ್ಟು ಬೇಕಾದ ಕೆಲಸ ತೆಗೆದ ಹಾಗೆ. ಕಾರ್ಮಿಕ ಸದಾ ಭಯಗ್ರಸ್ಥನಾಗಿ, ಅನಿಶ್ಚಿತತೆಯಲ್ಲಿ ದಿನಗಳೆಯಬೇಕಾದ ಪರಿಸ್ಥಿತಿ ಬರುತ್ತದೆ.

ಮಾರ್ಕ್ಸ್ ಪ್ರಕಾರ, ಇಂಥದೊಂದು ನಿಯಂತ್ರಣದ ಅಸಮತೋಲನ ತಲೆದೋರಿದಾಗ ಹೆಚ್ಚು ಅನ್ಯಾಯಕ್ಕೊಳಗಾಗುವವನು ಕಾರ್ಮಿಕನೊಬ್ಬನೇ. ಯಾಕೆಂದರೆ ಆತನನ್ನು ಭಯದ ವಾತಾವರಣದಲ್ಲಿಟ್ಟು ಕೆಲಸ ತೆಗೆಯಬಹುದೆಂದು ತಿಳಿದಾಗ ಮಾಲಿಕ ಮೊದಲು ಕತ್ತರಿ ಹಾಕುವುದೇ ಸಂಬಳಕ್ಕೆ. ಕಡಿಮೆ ಕೂಲಿ, ಹೆಚ್ಚು ದುಡಿಮೆ ಎಂಬುದು ಕಾರ್ಖಾನೆಯ ಸೂತ್ರವಾಗುತ್ತದೆ. ಲಾಭ ಎಂದರೆ ಇಲ್ಲಿ ಯಾರ ಲಾಭ? ಕಾರ್ಖಾನೆಯ ಮಾಲಿಕ ನೂರು ರುಪಾಯಿ ಬಂಡವಾಳ ಹಾಕಿ ಸಾವಿರ ರುಪಾಯಿ ಲಾಭ ತೆಗೆದರೆ ಅದಕ್ಕೆ ಮುಖ್ಯವಾಗಿ ಕಾರಣರಾದವರು ಕಾರ್ಮಿಕರು ತಾನೇ? ಕೇವಲ ಬಂಡವಾಳ ಹಾಕಿದೆನೆಂಬ ಹೆಗ್ಗಳಿಕೆ ಬಿಟ್ಟರೆ ಮಾಲಿಕನ ಯೋಗದಾನ ಎಷ್ಟಿದೆ? ಹಾಗಿರುವಾಗ ಬಂದ ಸಾವಿರ ರುಪಾಯಿ ಲಾಭಕ್ಕೆ ಆತನೆಷ್ಟು ಬಾಧ್ಯಸ್ಥ? ಆ ಲಾಭ ಕಾರ್ಮಿಕರ ದುಡಿತಕ್ಕೆ ತಕ್ಕಂತೆ ಅವರ ನಡುವೆ ಹಂಚಿಹೋಗಬೇಕಿತ್ತಲ್ಲ? ಹಾಗಾಗಿ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಲಾಭ ಎಂದರೇನೇ ಕಳ್ಳತನ. ಒಂದು ಬೆಲೆಗೆ ತಯಾರಿಸಿ ಇನ್ನೊಂದು ಬೆಲೆಗೆ ಮಾರುವ ವ್ಯವಸ್ಥೆ ಬಂದಾಗಲೇ ಸಮಾನತೆಯ ಕೊಲೆ ಆದಂತಾಯಿತು. ಶೋಷಣೆಗೆ ಸಭ್ಯಸಮಾಜದಲ್ಲಿ ಲಾಭ ಎಂದು ಕರೆಯುತ್ತಾರೆ.

(3) ಬಂಡವಾಳಶಾಹಿ ವ್ಯವಸ್ಥೆ ಅನಿಶ್ಚಿತ:
ಜಗತ್ತಿನಲ್ಲಿ ಅದುವರೆಗೂ ಯಾವುದಾದರೂ ವಸ್ತುವಿನ ಕೊರತೆಯಾದಾಗ ಅದನ್ನು ಬಿಕ್ಕಟ್ಟು ಎಂದು ಕರೆಯುವ ಪದ್ಧತಿ ಇತ್ತು. ದೇಶಗಳ ನಡುವೆ ಯುದ್ಧಗಳಾದಾಗ ಆಹಾರದ ಬಿಕ್ಕಟ್ಟು ತಲೆದೋರುತ್ತಿತ್ತಲ್ಲ, ಹಾಗೆ. ಆದರೆ ಕೈಗಾರಿಕಾ ಕ್ರಾಂತಿ ಮತ್ತು ಬಂಡವಾಳಶಾಹಿ ವ್ಯವಸ್ಥೆಗಳಿಂದಾಗಿ ಜಗತ್ತಿನಲ್ಲಿ ಹೊಸದೊಂದು ಬಗೆಯ ಬಿಕ್ಕಟ್ಟು ತಲೆದೋರತೊಡಗಿತು. ಅದುವೇ ಬಾಹುಳ್ಯದ ಬಿಕ್ಕಟ್ಟು! ಅಂದರೆ ಕಾರ್ಖಾನೆಗಳು ಯಂತ್ರಗಳನ್ನೂ ಅಧಿಕ ಕಾರ್ಮಿಕರನ್ನೂ ಬಳಸಿ ಮಾರುಕಟ್ಟೆಯ ಸಾಮರ್ಥ್ಯವನ್ನೂ ಮೀರಿ ಉತ್ಪನ್ನಗಳನ್ನು ತಯಾರಿಸಿ ಬಿಕರಿಗಿಡತೊಡಗಿದವು. ಅಭಿವೃದ್ಧಿ ದಾಪುಗಾಲಿಡುತ್ತ ಮುಂದೆ ಓಡಿದಂತೆ ಜನರ ಜೀವನಮಟ್ಟ ಸುಧಾರಿಸುವ ಬದಲು ಹಳ್ಳ ಹಿಡಿಯುತ್ತದೆ. ಉದಾಹರಣೆಗೆ ಕಾರ್ಖಾನೆಗಳು ಬಣ್ಣದ ಟಿವಿಗಳನ್ನೋ ಕಾರುಗಳನ್ನೋ ಬಂದೂಕುಗಳನ್ನೋ ಅಗತ್ಯಕ್ಕೂ ಮೀರಿ ಉತ್ಪಾದಿಸಿಬಿಟ್ಟವೆನ್ನೋಣ. ಅವನ್ನು ಕೊಳ್ಳುವವರೆಲ್ಲಾ ಕೊಂಡ ಮೇಲೆ ಉಳಿದವನ್ನೇನು ಮಾಡಬೇಕು? ಹೀಗೆ ಉತ್ಪನ್ನಗಳು ಮಾರಾಟವಾಗದೆ ಗೋದಾಮಿನಲ್ಲಿ ರಾಶಿ ಬೀಳುವುದನ್ನು ಯಾವ ಕಾರ್ಖಾನೆಯೂ ಸಹಿಸಲಾರದು. ಅದು ಆಗ ತನ್ನ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಬಹುದು. ಪರಿಸ್ಥಿತಿ ಮತ್ತೂ ಬಿಗಡಾಯಿಸಿದರೆ ಒಂದಷ್ಟು ಕಾರ್ಮಿಕರನ್ನು ಕಡ್ಡಾಯವಾಗಿ ಕೆಲಸದಿಂದ ವಿಮುಕ್ತಿಗೊಳಿಸಿ ಮನೆಗೆ ಕಳಿಸಬಹುದು. ಸಮಾಜದಲ್ಲಿ ಒಮ್ಮಿಂದೊಮ್ಮೆಲೇ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುವುದು ಆರೋಗ್ಯಕರ ಬೆಳವಣಿಗೆಯಲ್ಲ. ಇದರಿಂದಾಗಿ ಜನರಲ್ಲಿ ಕೊಳ್ಳುವ ಸಾಮರ್ಥ್ಯ ಕುಸಿದು ಕಾರ್ಖಾನೆಗಳ ಉತ್ಪನ್ನಗಳ ದಾಸ್ತಾನು ಇನ್ನಷ್ಟು ದೊಡ್ಡ ಬೆಟ್ಟವಾಗಿ ಬೆಳೆಯಬಹುದು ಮತ್ತು ಅದು ಕೊನೆಗೆ ಕಾರ್ಖಾನೆಯ ಮಾಲಿಕನೇ ನಷ್ಟದಿಂದ ಕುಸಿದುಹೋಗುವಂತೆ ಮಾಡಬಹುದು!

ಹೀಗಾಗಿ ಬಂಡವಾಳಶಾಹಿ ವ್ಯವಸ್ಥೆ ಹೆಚ್ಚು ವ್ಯಾಪಕವಾಗುತ್ತ ಹೋದಂತೆ, ಅರ್ಥವ್ಯವಸ್ಥೆಯಲ್ಲಿ ಏರಿಳಿತಗಳು ಸಾಮಾನ್ಯವಾಗಿಬಿಡುತ್ತವೆ ಎಂದು ಮಾರ್ಕ್ಸ್ ಭವಿಷ್ಯ ನುಡಿದ. ಕೊರತೆಯಲ್ಲ ಬಾಹುಳ್ಯ ಕೂಡ ಒಂದು ಸಮಸ್ಯೆಯಾಗಿ ಕಾಡಲಿದೆ ಎಂಬ ಅವನ ಮಾತು ಇಂದು ವಿಚಿತ್ರವಾಗಿ ಕಾಣಿಸಿದರೂ ಹತ್ತೊಂಬತ್ತನೇ ಶತಮಾನದ ಕೈಗಾರಿಕಾ ಕ್ರಾಂತಿಯ ಕಾಲದಲ್ಲಿ ಅಂಥ ಅಸಂಗತ ವಾದವೆಂದೇನೂ ಅನ್ನಿಸಲಿಲ್ಲ. ಯಾಕೆಂದರೆ ಯಂತ್ರಗಳು ಮಾನವನನ್ನು ಆಳುತ್ತವೆ; ಅವನ ಸ್ವಾತಂತ್ರ್ಯ ಕಿತ್ತುಕೊಳ್ಳುತ್ತವೆ; ಅವನನ್ನು ನಿರುದ್ಯೋಗಿಯಾಗಿಸುತ್ತವೆ ಎಂಬ ಊಹೆ ಮತ್ತು ಭಯ ಅದಾಗಲೇ ಬೆಳೆದುಬಿಟ್ಟಿತ್ತು. ಕಾರ್ಖಾನೆಗಳು ಹದವರಿತು, ಸ್ವಯಂ ನಿಯಂತ್ರಣ ಹೇರಿಕೊಂಡು, ಬೇಡಿಕೆ ಇದ್ದಷ್ಟೇ ಉತ್ಪನ್ನಗಳನ್ನು ತಯಾರಿಸಬೇಕು ಮತ್ತು ಬಂದ ಲಾಭಾಂಶವನ್ನು ಎಲ್ಲ ಕಾರ್ಮಿಕರಿಗೂ ಅರ್ಹತೆಗನುಸಾರ ಹಂಚಿಬಿಡಬೇಕು ಎಂಬ ಪರಿಹಾರವನ್ನು ಮಾರ್ಕ್ಸ್ ಕೊಟ್ಟ.
(ಮುಂದುವರಿಯುತ್ತದೆ)

6 ಟಿಪ್ಪಣಿಗಳು Post a comment
  1. ಸೆಪ್ಟೆಂ 11 2016

    ಕಮ್ಯುನಿಸಂ ಬಗ್ಗೆ ಕಾರ್ಲ್ ಮಾರ್ಕ್ಸ್ ಬಗ್ಗೆ ಅತ್ಯಲ್ಪ ಗೊತ್ತಿರುವ ನನ್ನಂಥವರಿಗೆ ಉತ್ತಮ, ಮಾಹಿತಿಯುಕ್ತ ಲೇಖನ. ಮುಂದಿನ ಭಾಗಗಳಿಗೆ ಕಾಯುವೆ.. 🙂

    ಉತ್ತರ
  2. Shreekar hegde
    ಸೆಪ್ಟೆಂ 11 2016

    ಬಹಳ ಚೆನ್ನಾಗಿದೆ.ಕಮ್ಯುನಿಸಮ್’ನ ಗಂಧಗಾಳಿ ಇರದ ವಿಜ್ಞಾನದ ವಿದ್ಯಾರ್ಥಿಗಳಿಗೆ ಬಹಳ ಅನುಕೂಲಕರ ಲೇಖನ.. 🙂

    ಉತ್ತರ
  3. Manikumar
    ಸೆಪ್ಟೆಂ 12 2016

    ನನಗೂ ಬಹಳ ದಿನಗಳಿಂದ ನಿಜವಾದ ಕಮ್ಯೂನಿಸಂ ಬಗ್ಗೆ ತಿಳ್ಕೊಬೇಕು ಅಂತ ಆಸೆ ಇತ್ತು…ಈಗ ನಿಮ್ಮ ಲೇಖನಗಳಿಂದ ನನ್ನ ಆಸೆ ಈಡೇರುವ ಎಲ್ಲ ಲಕ್ಷಣಗಳು ಕಾಣುತ್ತಿವೆ…ಧನ್ಯವಾದಗಳು…

    ಉತ್ತರ
  4. K.Sreepathybhat
    ಸೆಪ್ಟೆಂ 14 2016

    Just waiting for the next part.

    ಉತ್ತರ

Trackbacks & Pingbacks

  1. ಸಿದ್ಧಾಂತಗಳ ಚರಿತ್ರೆ – 2 ( ಆತನ ಚಿಂತನೆ ಅರ್ಧ ಭೂಗೋಲವನ್ನು ನಿಯಂತ್ರಿಸಿತು! ) | ನಿಲುಮೆ
  2. ಸಿದ್ಧಾಂತಗಳ ಚರಿತ್ರೆ – 3 ಕಮ್ಯುನಿಸಂ: ( ಅಪ್ರಸ್ತುತ ಸಿದ್ಧಾಂತ, ಅವಾಸ್ತವಿಕ ಪರಿಹಾರ ) | ನಿಲುಮೆ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments