ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 26, 2016

3

ನಾನು – ನನ್ನದು

‍ನಿಲುಮೆ ಮೂಲಕ

-ಗೀತಾ ಹೆಗ್ಡೆ

ego-as-baggageಪ್ರತಿಯೊಬ್ಬರ ಮನದಲ್ಲೂ ಅಡಗಿಕೊಂಡಿರುವ ಆತ್ಮಾಭಿಮಾನವೊ ಅಥವಾ ನನ್ನದು ಅನ್ನುವ ಅಹಂಕಾರವೊ ಗೊತ್ತಿಲ್ಲ. ಆದರೆ ಯಾವುದು ನನ್ನದು ಎಂಬ ಭ್ರಮೆ ಎಲ್ಲಿಯವರೆಗೆ ನಮ್ಮ ಮನಸ್ಸಿನಲ್ಲಿ ಮನೆ ಮಾಡಿರುತ್ತೋ ಅಲ್ಲಿಯವರೆಗೆ ಅದರ ಹುಳುಕು ನಮಗೆ ಗೊತ್ತಾಗೋದೆ ಇಲ್ಲ. ಒಂದಾ ಶಾಂತವಾಗಿ ಕುಳಿತು ಯಾವ ತಾರತಮ್ಯವಿಲ್ಲದೆ ವಿಮರ್ಷಿಸುವ ಬುದ್ಧಿ ಹೊಂದಿರಬೇಕು. ಇಲ್ಲಾ ಬೇರೆಯವರು ಬೊಟ್ಟು ಮಾಡಿ ತೋರಿಸಿದಾಗ ಇದು ಸರಿಯಿಲ್ಲ ಅಥವಾ ನಿನ್ನಲ್ಲಿ ದೋಷವಿದೆ ಎಂದೆನ್ನುವ ಮಾತು ಕೇಳಿಸಿಕೊಂಡು ಅರ್ಥ ಮಾಡಿಕೊಳ್ಳುವ ಒಳ್ಳೆಯ ಮನಸ್ಸಿರಬೇಕು. ನಮ್ಮನ್ನು ಉತ್ತುಂಗದತ್ತ ಏರಲು ಹಾಕಿ ಕೊಟ್ಟ ಮೆಟ್ಟಿಲು ಎಂದು ಭಾವಿಸಬೇಕು. ಇನ್ನೂ ಹೆಚ್ಚಿನ ಉತ್ಸಾಹದಲ್ಲಿ ಗುರಿ ಮುಟ್ಟುವತ್ತ ನಮ್ಮ ನಡೆ ಬದಲಾಯಿಸಿಕೊಳ್ಳಬೇಕು. ಇವ್ಯಾವುದೂ ಇಲ್ಲದ ಜನರು ” ನಾನು, ಇದು ನನ್ನದು, ಯಾವೋನಾದರೂ ಬೊಟ್ಟು ಮಾಡಿ ತೋರಿಸಲಿ ನೋಡ್ತೀನಿ” ಅನ್ನುವ ಮೂರ್ಖತನದ ಮಾತು ಹೇಳುತ್ತಿರುತ್ತಾರೆ. ಆದರೆ ಈ ನಡೆ ಒಳ್ಳೆಯ ನಡೆಯಲ್ಲ; ಇದು ಖಂಡಿತಾ ನಮ್ಮನ್ನು ಅದಃಪತನಕ್ಕೆ ಕರೆದೊಯ್ಯುತ್ತದೆ. ಕೊನೆಯಲ್ಲಿ ಪಶ್ಚಾತ್ತಾಪವೇ ಕಟ್ಟಿಟ್ಟ ಬುತ್ತಿ.

ಈ ಜಗತ್ತು ಕೋಟಿ ಕೋಟಿ ಜನರ ಕಣಜ. ಇಲ್ಲಿ ಓದಿದ ಹಲವು ಪುಸ್ತಕ ಭಂಡಾರಗಳನ್ನೆಲ್ಲ ಅರಗಿಸಿಕೊಂಡ ಅತೀ  ಬುದ್ಧಿವಂತರೂ ಇದ್ದಾರೆ. ಓದದೆ ಇರುವ ಜೀವನದ ರಸಾನುಭವದಲ್ಲಿ ಹಲವು ಮಜಲುಗಳ ಮೆಟ್ಟಿಲು ಎದ್ದು ಬಿದ್ದು ಏರಿರುವ ಅನುಭವದ ಗುಡ್ಡೆಯನ್ನೆ ಹೃದಯದ ಕವಾಟದಲ್ಲಿ ಬಚ್ಚಿಟ್ಟು ಎದುರಿಗೆ ಸಂತೋಷದ ಮುಖವಾಡ ಹೊತ್ತ ಅನುಭವಸ್ತ ಶಿಖಾಮಣಿಗಳೂ ಇದ್ದಾರೆ. ಇವರಿಬ್ಬರನ್ನೂ ತುಲನೆ ಮಾಡಿ ನೋಡಿದಾಗ ಅನನ್ಯ ಅನುಭವದ ಮನುಷ್ಯನ ನಿಷ್ಕಲ್ಮಶ ವ್ಯಕ್ತಿತ್ವ ಹೆಚ್ಚು ಮನ್ನಣೆಯನ್ನು ಪಡೆಯುತ್ತದೆ. ಯಾಕೆ? ಜನ ಅಂಥವರನ್ನೇ ಯಾಕೆ ಮೆಚ್ಚುತ್ತಾರೆ? ಅಂಥದ್ದೇನಿದೆ ಅವರಲ್ಲಿ? ಅವರ ಮಾತು ಅಂದರೆ ವೇದ ವಾಕ್ಯವಪ್ಪಾ ನನಗೆ; ಅವರು ಹೇಳಿದ ಮೇಲೆ ಮುಗೀತು, ಬೇರೆ ಮಾತೇ ಇಲ್ಲ ಅಂಥ ಅಷ್ಟು ಗೌರವ ನಂಬಿಕೆ, ವಿಶ್ವಾಸ.

ಇವೆಲ್ಲ ಯಾರೂ ಕೊಟ್ಟ ಕಾಣಿಕೆಯಲ್ಲ ಅಥವಾ ಬಿರುದು ಬಾವಲಿಗಳೂ ಅಲ್ಲ. ಎಲ್ಲಾ ಕಾಲ ಸರಿದಂತೆ ಅವರಾಗೇ ಜನರಿಂದ ಗಳಿಸಿದ ವಿಶ್ವಾಸ, ಪ್ರೀತಿ, ನಂಬಿಕೆ. ಆ ಮಟ್ಟಕ್ಕೆ ಏರಬೇಕಂದರೆ ಮನುಷ್ಯ ಯಾವ ಪಾಠ ಶಾಲೆಗೂ ಹೋಗಬೇಕಾಗಿಲ್ಲ. ಯಾವ ಡಿಗ್ರಿಯೂ ಬೇಕಾಗಿಲ್ಲ. ಯಾವ ಗುರುವಿನ ಮಾಗ೯ದಶ೯ನದ ಅಗತ್ಯವೂ ಇಲ್ಲ. ಏಕೆಂದರೆ ಈ ಜೀವನವೇ ಒಂದು ಪಾಠ ಶಾಲೆ. ಇಲ್ಲಿ ಬದುಕಿನುದ್ದಕ್ಕೂ ಸಿಗುವ ಸಾವಿರಾರು ಮಂದಿಯೊಂದಿಗಿನ ಒಡನಾಟ, ಬದುಕಲ್ಲಿ ಎದುರಾಗುವ ಘಟನೆಗಳು, ಹೋರಾಡಿದ ಕ್ಷಣಗಳು ಪ್ರತಿಯೊಬ್ಬರಿಗೂ ಪಾಠ ಕಲಿಸುತ್ತದೆ. ನಾನು ಯಾರು? ಇದಕ್ಕೆ ಸರಿಯಾದ ಉತ್ತರ ಕಂಡು ಕೊಳ್ಳುವ ಹೋರಾಟದತ್ತ ಚಿತ್ತ ಇಟ್ಟ ವ್ಯಕ್ತಿ ಬಹುಶಃ ಬದುಕಲ್ಲಿ ಯಾವತ್ತೂ ಹಿಂದೆ ಬೀಳೋದಿಲ್ಲ.  ಏಕೆಂದರೆ ಅವನಿಗೆ ಅಹಂಕಾರ ಇರುವುದಿಲ್ಲ. ತನ್ನನ್ನು ತಾನು ತಿಳಿದು ಕೊಳ್ಳುವ ಹವಣಿಕೆ ಜನರು ಅವನ ಹತ್ತಿರ ಹತ್ತಿರ ಬರುತ್ತಾರೆ಼. ಅಂಥವರ ಜೊತೆ ಸುಃಖ ಇದೆ. ಸಾಂತ್ವನ ಇದೆ. ಸಮಾಧಾನದ ಹಿತ ನುಡಿಗಳಿವೆ. ಅಲ್ಲಿ ವೈಭವ ಇಲ್ಲ, ವೈಭೋಗವೂ ಇಲ್ಲ, ತನ್ನಂತೆ ಪರರು ಅನ್ನುವ ಪ್ರೀತಿಯ ಮಹಾಪೂರವೇ ಇದೆ.

ಗಂಗಾಜಲ ಬಾಯಿಗೆ ಬಿಟ್ಟಾಗ ಮನುಷ್ಯನ ದಿನಗಳು ಮುಗಿತು ಅಂತ ಅಲ್ಲ. ಆ ನಂತರವೆ ಆತ್ಮ ಬಿಟ್ಟ ದೇಹ ಮಣ್ಣಲ್ಲಿ ಮಣ್ಣಾದರೂ ಇರುವ ಜನರ ಬಾಯಲ್ಲಿ ಅವನ ಗುಣಗಾನ ನಡೆಯುತ್ತಲೆ ಇರುತ್ತದಲ್ಲ; ಸತ್ತ ದೇಹದ ಹೆಸರಿನೊಂದಿಗೆ ಇದ್ದವರು ನೆನಪಿಸಿ ನಡೆದುಕೊಳ್ಳುವ ಬದುಕು.  ನಿಜ, ಬದುಕಿನಾಚೆಗೂ ಬದುಕುವ ಬದುಕಿದೆಯಲ್ಲ ಅದೇ ನಿಜವಾದ ಬದುಕು. ಇತಿಹಾಸದ ಪುಟಗಳನ್ನು ತಿರುವಿದಾಗ ಅನೇಕ ಮಹಾತ್ಮರು ನಮ್ಮ ಕಣ್ಣ ಮುಂದೆ ಬರುತ್ತಾರೆ. ಅವರೂ ನಮ್ಮಂತೆ ಮನುಷ್ಯರೆ ಆಗಿದ್ದರು ಅಲ್ಲವೆ? ಆದರೆ ಆ ಉನ್ನತವಾದ ಸ್ಥಾನಕ್ಕೆ ಎರಿದ್ದು ಮಾತ್ರ ಯಾವ ಪದವಿಯಿಂದಲ್ಲ ಅಥವಾ ಯಾರು ಹೇಳಿ ಕೊಟ್ಟು ಗಳಿಸಿದ್ದಲ್ಲ. ಅವರಾಗೆ ಗಳಿಸಿಕೊಂಡಿದ್ದು. ಅವರು ಅಮರರು. ಸೂರ್ಯ ಚಂದ್ರ ಇರುವವರೆಗೂ ಅವರು ರಾರಾಜಿಸುತ್ತಿರುತ್ತಾರೆ. ಜಗತ್ತಿನಲ್ಲಿ ಒಬ್ಬರಲ್ಲಾ ಒಬ್ಬರು ನೆನಪಿಸಿಕೊಳ್ತಾನೆ ಇರುತ್ತಾರೆ. ಇದು ಎಂಥ ಹಿತ ಮನಸ್ಸಿಗೆ. ಅವರಂತಾಗದಿದ್ದರೂ ನಾನು ಎನ್ನುವುದು ಮರೆತು ನಾವು ಎಂದು ಬದುಕಿದರೆ? ನನಗಾಗಿ ಸಮಾಜ ಅಲ್ಲ; ಸಮಾಜಕ್ಕಾಗಿ ನಾನು.

ಯಾರು ನನಗೇನು ಕೊಟ್ಟರು? ಯಾರು ನನ್ನ ಇಷ್ಪ ಪಡುತ್ತಾರೆ? ಯಾರಿಂದ ನನಗೇನು ಆಗಬೇಕಾಗಿಲ್ಲ. ನನಗೆ ಬೇಕಾದಷ್ಟಿದೆ. ಅಧಿಕಾರ ಇದೆ. ಈ ದುರಹಂಕಾರ ಬಿಟ್ಟು ಸತ್ಯದ ಕಡೆ ಸಾಗುವುದರಲ್ಲಿ ಶ್ರೇಯಸ್ಸಿದೆ. ನಮಗೆ ನಾವೇ ಶತ್ರು, ನಮಗೆ ನಾವೇ ಮಿತ್ರ. ಮಿತ್ರತ್ವದ ಭಾವನೆ ನಮ್ಮದಾಗಲಿ. ದುಡ್ಡು ಅಧಿಕಾರ ಶಾಶ್ವತ ಅಲ್ಲ. ಅರಿವು ಶಾಶ್ವತ. ಆದ್ದರಿಂದ ನಾನು, ನನ್ನದು ಎಂಬ ಮಮಕಾರದಿಂದ ಹೊರಬಂದು ಸತ್ಯಾ ಸತ್ಯತೆಯ ಕಡೆ ನಮ್ಮ ಸಂಪೂರ್ಣ ಗಮನ ಹರಿಸಿದರೆ ಉತ್ತಮ. ನಮ್ಮ ಬದುಕಿನಲ್ಲಿ ಇನ್ನೊಬ್ಬರ ನಡೆ ಕೆಲವೊಮ್ಮೆ ನಮ್ಮ ತಪ್ಪು ಒಪ್ಪುಗಳನ್ನು ತೊರಿಸಿ ಕೊಡುತ್ತದೆ. ಅದು ಸಣ್ಣವರಿಂದ ಆಗಿರಬಹುದು ಅಥವಾ ಏನೂ ಓದದೇ ಇರುವ ವ್ಯಕ್ತಿಯಿಂದಲಾದರೂ ಆಗಿರಬಹುದು. ಬಂದ ಸಲಹೆ ಸೂಚನೆ ಪರಾಮಷಿ೯ಸಿ ಪ್ರೀತಿಯಿಂದ ಸ್ವೀಕರಿಸುವ ಬುದ್ದಿ ನಮ್ಮದಾಗಿರಬೇಕಷ್ಟೆ. ಸುತ್ತಲ ಆತ್ಮೀಯರ ಅಭಿಮಾನ ನಮ್ಮನ್ನು ಮೇಲಕ್ಕೆರಿಸುವುದಂತೂ ದಿಟ. ಆದರೆ ನಾವಿಡುವ ಹೆಜ್ಜೆಯತ್ತ ನಮ್ಮ ಚಿತ್ತ ನೆಟ್ಟಿರಬೇಕಷ್ಟೆ. ತಿರಸ್ಕಾರದ ಮನೋಭಾವ ಬೆಳೆಸಿಕೊಂಡಲ್ಲಿ ಅದು ನಮ್ಮನ್ನೆ ನಾಳೆ ಜನ ತಿರಸ್ಕರಿಸುವಂತೆ ಮಾಡುತ್ತದೆ.

ಬದುಕುವ ಕಲೆ ತಿಳಿದಷ್ಟೂ ನಿಗೂಢ. ಆ ಪರಮಾತ್ಮನ ಲೀಲೆಯೆ ವಿಚಿತ್ರ. ಎಷ್ಟು ಅರಿತರೂ ಇನ್ನೂ ಮುಗಿಯದು ದಾರಿ. ದಾರಿ ಸವಕಲು ಆಗುವುದೆ ಇಲ್ಲ. ನಡೆದಷ್ಟೂ ಅಂತ್ಯ ಕಾಣದು ತನ್ಮಯತೆಯತ್ತ ಮುಗಿಯದ ಪಯಣ.

ಚಿತ್ರ ಕೃಪೆ:- germaneconsulting.com

3 ಟಿಪ್ಪಣಿಗಳು Post a comment
  1. ಸೆಪ್ಟೆಂ 26 2016

    ಉತ್ತಮ ಲೇಖನ. ಜೀವನಕ್ಕೆ ಸ್ಪುರ್ತಿ ತುಂಬುವಂತದು
    Thanku

    ಉತ್ತರ
  2. ಸೆಪ್ಟೆಂ 26 2016

    ಧನ್ಯವಾದಗಳು ಸರ್

    ಉತ್ತರ

Trackbacks & Pingbacks

  1. ನಾನು – ನನ್ನದು | ನಿಲುಮೆ | Sandhyadeepa….

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments