ಕಡಲ ಕಣ್ಣೀರು: ಒಂದು ಪ್ರೀತಿಯ ಕತೆ..!
– ದಿವ್ಯಾಧರ ಶೆಟ್ಟಿ ಕೆರಾಡಿ
ಉಪನ್ಯಾಸಕ
ಆಳ್ವಾಸ್ ಕಾಲೇಜು
ಮೂಡಬಿದ್ರೆ
ಇಂದು ಕಡಲು ಬತ್ತಿದಂತಿತ್ತು ಭೋರ್ಗೆರೆವ ಸದ್ದಿಲ್ಲದೆ, ಕಾಲು ಸುತ್ತಿ ಮುತ್ತಿಕ್ಕುವ ತೆರೆಗಳೆಲ್ಲಾ ದೂರ ದೂರಕ್ಕೆ ಸರಿದಂತೆ ಮರಳ ಮೇಲೆಲ್ಲಾ ಅವಳ ಹೆಜ್ಜೆ ಗುರುತುಗಳು ಸಾವಿರ ಕಥೆಗಳನ್ನು ಹೇಳಿ ನಕ್ಕಂತೆ ಭಾಸವಾಗುತ್ತಿತ್ತು.. ದೂರದಲ್ಲೆಲ್ಲೊ ಮಗುವೊಂದು ರಚ್ಚೆಹಿಡಿದು ಅಳುವ ಸದ್ದು ಉಕ್ಕಿ ಬರುವ ದುಃಖದ ಮುಂದುವರಿದ ಭಾಗದಂತಿತ್ತು.. ಹೃದಯದ ಆರ್ದ್ರತೆಯ ಚೀರುವಿಕೆಯ ನಡುವೆಯೆ ಏನೂ ನಡೆಯದ ಹಾಗೇ ಎದುರುನಿಂತು ಕಣ್ಣ ದಿಟ್ಟಿ ತಪ್ಪಿಸಿ ನೆಲ ನೋಡುತ್ತ ಕೊನೆಗೊಮ್ಮೆ ಕಾಲ್ಮುಟ್ಟಿ ಕ್ಷಮಿಸಿಬಿಡು, ಮರೆತುಬಿಡು ಎಂದು ಹೊರಟವಳ ಹಿಂದೆ ನೋವಿನ ಗಜಲ್ ಗಜ್ಜೆಕಟ್ಟಿ ಕುಣಿದಿತ್ತು.. ಕೊಸರಿಕೊಂಡ ಕೈಬೆರಳ ಗುರುತಿನ್ನು ಮಚ್ಚೆಯಂತೆ ಎದೆಯೊಳಗೆ ಅಂಟಿಕೊಳ್ಳುವುದು ನಿಶ್ಚಯವಾದಾಗ ಕಣ್ಣು ಯಾಕೋ ಅವಳ ಬಿಂಬದೊಡನೆ ಹನಿಯತೊಡಗಿತ್ತು…
ಎಲ್ಲವೂ ಶೂನ್ಯ ಕಣ್ಣೆದುರಿನ ಕಡಲು ಅವಳಿಲ್ಲದ ಒಡಲು.. ಬರಿ ಮೌನದ ಏರಿಳಿತದಲ್ಲಿ ಕಂಗಾಲಾಗಿ ನರ್ತಿಸುತ್ತಿದ್ದಾಗ ಹಳೆಯ ನೆನಪುಗಳ ಹನಿ ಮಳೆ ಕಣ್ಣಿರಾಗಿತ್ತು. ನಿಜ ಇದೇ ತೀರದಲ್ಲಿ ಅಲ್ಲವೆ..! ಅದೇಷ್ಟೋ ಸಂಜೆ ಹೀಗೆ ಅವಳ ಕಿರು ಬೆರಳ ತುದಿ ಹಿಡಿದು ಮೈಲುಗಟ್ಟಲೆ ನಡೆದಿದ್ದು, ಮರಳಿನ ಗೋಪುರ ಕಟ್ಟಿ ಕೈತಟ್ಟಿ ಕುಣಿದಿದ್ದು, ಬರಸೆಳೆವ ಬಿರುಸು ಅಲೆಗಳಿಗೆ ಬೈದಿದ್ದು.. ಬಯಸಿ ಬಯಸಿ ತಬ್ಬಿದ್ದು, ಹೆಜ್ಜೆಮೇಲೆ ಹೆಜ್ಜೆಯಿಟ್ಟು ನಡೆದಿದ್ದು. ಅಂದು ಇದ್ದ ಆ ಮುಗ್ಧತೆ ಇಂದೂ ಇತ್ತು.. ಕಡಲೂ ಇತ್ತೂ ಮರಳೂ ಇತ್ತು ಅವಳಿಲ್ಲ ಅಷ್ಟೇ.. ಎದೆಯೊಳಗೆ ಯಾರೋ ಹಿಂಡಿದಂತ ನೋವು ಹೀಗೆ ಬಂದು ಹಾಗೇ ನಡೆದು ಹೋದ ದಾರಿಯ ಕಡೆ ಕಣ್ಣಾಡಿಸಿದರೆ ಕಣ್ಣೀರು ಮಂಜಾಗಿ ಕೈ ಬೀಸಿದ ಅವಳ ಸೆರಗು ಮುಸುಕು ಮುಸುಕಾಗಿ ಕಾಣಿಸಿತು. ಕಾರಣವಿಲ್ಲದೆ ಕಣ್ಣೀರಿಟ್ಟು ಎದೆಯ ಕದ ತೆರೆದು ಹೊರಟವಳ ಮುದ್ದಾದ ಹೆಸರು ‘ಅವನಿ..!’
ಎಷ್ಟು ಅದ್ಭುತವಾದ ಹೆಸರು.. ಹೆಸರಷ್ಟೆ ಅಲ್ಲ, ಅವಳೂ ಒಂದು ಅದ್ಬುತವೆ..! ಆ ಇನಿದನಿ, ಜೀವನ್ಮುಖಿ ನಗು, ಸದಾ ಹರಿಯುವ ಝುಳು ಝುಳು ನಿನಾದದಂತ ಮಾತು ಮರುಳಾಗಲು ಕಾರಣಗಳಿಗೇನು ಕೊರತೆ ಇಲ್ಲ ಅವಳಲ್ಲಿ.. ಈ ಇಂದ್ರಚಾಪ ನನ್ನೆದೆಯಲ್ಲಿ ಮೂಡಿದ್ದು ಬಲು ಆಕಸ್ಮಿಕ. ಅದೊಂದು ದಿನ ಊರಿಗೆ ಹೋಗೊ ಬಸ್ ನಲ್ಲಿ ಕುಳಿತು ಯಾವುದೋ ಪುಸ್ತಕದ ಹಾಳೆ ತಿರುವುತ್ತಿರುವಾಗ ತಂಗಾಳಿಯಂತೆ ಮೆಲ್ಲನೆ ಮುಂದೆ ಸರಿದ ಹುಡುಗಿಯ ಮುದ್ದು ಮುಖಕ್ಕಿಂತ, ಗೆಳತಿಯರು ಕರೆದ ಅವಳ ಹೆಸರು ಕೇಳಿದಾಗ ಯಾಕೋ ಏನೋ ಒಂದೇ ಸಲಕ್ಕೆ ಸಿಕ್ಕಾಪಟ್ಟೆ ಇಷ್ಟವಾಗಿ ಹೋಗಿತ್ತು.. ಅವನಿ..ಅವನಿ..!
ಅಬ್ಬಾ ಎದೆಯೊಳಗೆ ಭಾವ ತರಂಗಗಳನೆಬ್ಬಿಸಿದ ನೋಟಗಾತಿಗಾಗಿ ಒಂದೆರಡು ದಿನ ಕಣ್ಣು ಅವಳಿಗಾಗಿ ಹುಡುಕಾಡದ ಜಾಗವಿಲ್ಲ. ಕಾಡಿದವಳ ನೆನಪು ಬಾಡಿ ಹೋಯಿತೇನೊ ಅಂತಂದುಕೊಳ್ಳುವಾಗಲೇ ಮತ್ತೆ ಅದೇ ಗೆಳತಿಯರ ಜೊತೆ ಪ್ರತ್ಯಕ್ಷ..! ಹಾಗೇ ಬಸ್ಸನ್ನೆರಿದವಳನ್ನು ಬಿಟ್ಟುಬಿಡದ ಹಾಗೆ ಕಣ್ತುಂಬಿಕೊಂಡವನು ಎದೆಯೊಳಗೆ ಭದ್ರವಾಗಿ ಮುಚ್ಚಿಟ್ಟುಕೊಂಡು ಬಿಟ್ಟಿದ್ದೆ. ಆನಂತರದ ಘಟನೆಗಳೆಲ್ಲ ಒಂದು ಕನಸಿನಂತೆ ನಡೆದು ಹೋಗಿತ್ತು.. ‘ಅವನಿ’ ನನ್ನ ಉಸಿರಿನ ದನಿಯಾಗಿ ಆವರಿಸಿಕೊಂಡು ಬಿಟ್ಟಿದ್ದಳು. ದಿನ, ಗಂಟೆಗಳ ಲೆಕ್ಕವಿಲ್ಲದೆ ಓಡುತ್ತಿತ್ತು ಪ್ರತಿ ಕ್ಷಣ! ಅವಳ ಜೊತೆಗಿದ್ದ ನನಗೆ ‘ಅವನಿ’ ಬಿಟ್ಟರೆ ಇನ್ನೊಂದು ಭೂಮಿ ಇದ್ದದ್ದು ಮರೆತೇ ಹೋಗಿತ್ತು..
ಆದರೆ ಈ ದಿನ ಎಂದಿನಂತಿರಲಿಲ್ಲ ಹೃದಯ ಮುಂಜಾನೆಯಿಂದ ಯಾಕೋ ಏನೋ ಒಂದೇ ಸಮನೆ ನಿರಂತರವಾಗಿ ಹೊಡೆದುಕೊಳ್ಳುತ್ತಿತ್ತು. ಏನೋ ಸಂಕಟ, ತಳಮಳ ಕಾರಣವಿಲ್ಲದೆ ಕಣ್ಣೀರು ಬೇಡವೆಂದರೂ ಧುಮ್ಮಿಕ್ಕುತ್ತಿತ್ತು. ಸಂಜೆ ವೇಳೆ ಮನೆಗೆ ಬರುವಾಗಲೇ ಅವನಿ ಎರಡೆರಡು ಬಾರಿ ಪೋನ್ ಮಾಡಿದ್ದಳು, ‘ಅರ್ಜೆಂಟಾಗಿ ಮಾತಾಡೊಕಿದೆ ಬಾ’ ಎಂದಾಗ, ಎಲ್ಲ ಒಂದುಕ್ಷಣ ಮರೆತು ರೆಕ್ಕೆ ಬಿಚ್ಚಿ ಕಡಲ ಕಿನಾರೆಗೆ ಓಡಿ ಬಂದಿದ್ದೆ.. ನಾ ಬರುವ ಮೊದಲೇ ಬಂದು ಕಡಲು ನೋಡುತ್ತಾ ದೀರ್ಘಾಲೋಚನೆಯಲ್ಲಿದ್ದವಳನ್ನು ಮೆಲ್ಲಗೆ ಬಂದು ತಬ್ಬಿಕೊಂಡರೆ ಎಂದಿನ ಹುಸಿಕೋಪವಿಲ್ಲ! ಇಂದ್ಯಾಕಪ್ಪ ಹೀಗೆ ಅಂದ್ಕೊಳ್ಳೊವಾಗ್ಲೆ ‘ಭಾನು ನಂಗೆ ನಿನ್ನ ಮಡಿಲಲ್ಲಿ ತಲೆ ಇಟ್ಟು ಮಲಗಬೇಕು ಅನ್ನಿಸ್ತಿದೆ’ ಅಂದಾಗ ದೂರದಲ್ಲೆಲ್ಲೋ ಭೂಮಿ ಕಂಪಿಸಿದಂತೆ ಎದೆ ನಡುಗಿತ್ತು.
ಮಡಿಲಲ್ಲಿ ಮಲಗಿ ಮರಳಲ್ಲಿ ಕೈಯಾಡಿಸುತ್ತಿದ್ದ ಹುಡುಗಿಯ ಮುಂಗುರುಳ ನಾಟ್ಯ ನೋಡುತ್ತಿದ್ದ ನನಗೆ ಅವಳ ಕಣ್ಣಿಂದ ಜಾರಿ ಕೆನ್ನೆತೊಯ್ಸಿ ಕಡಲ ಸೇರಲು ಹನಿಯುತ್ತಿದ್ದ ಕಣ್ಣೀರು ಕಂಡು ಕಣ್ಣಲ್ಲಿ ನೆತ್ತರೊಡೆದಿತ್ತು.. ‘ಅವನಿ.. ಅವನಿ.. ಏನಾಯ್ತು ಚಿನ್ನ..!’ ಎನ್ನುತ್ತಾ ಎದೆಗೊತ್ತಿಕೊಂಡರೆ ಅವಳ ಬಿಕ್ಕುವಿಕೆ ಎದೆ ಸೀಳಿದಂತಾಗುತ್ತಿತ್ತು.. ತುಂಬಾ ಹೊತ್ತು ಮೌನವಾಗಿ ಎದೆಗೊರಗಿ ಕಣ್ಣೀರಾದವಳು ತಟ್ಟನೆ ‘ಭಾನು ನಾನಿನ್ನು ಬರ್ಲಾ’ ಎನ್ನುತ್ತಾ ಎದ್ದು ನಿಂತಳು.. ನಾನಿನ್ನು ಮಾತನಾಡುವ ಮೊದಲೇ ಸ್ವಲ್ಪ ದೂರ ನಡೆದವಳು ಹಿಂತಿರುಗಿ ನೋಡಿ ಓಡಿ ಬಂದು ಗಟ್ಟಿಯಾಗಿ ತಬ್ಬಿಕೊಂಡು ಪ್ರಶ್ನೆಗಳಿಗೆ ಮತ್ತೆ ಕಣ್ಣೀರಾದಳು.. ಎದೆಯೊಳಗೆ ಬಿರುಗಾಳಿಯ ಹೊಡೆತ ಜೋರಾಗಿತ್ತು. ಎಲ್ಲೋ ಸುನಾಮಿಯ ಸುಳಿವು ಕಂಡ ಕಡಲು ಉಕ್ಕಿ ಬರಲು ಹೊಂಚುತ್ತಿತ್ತು.. ಒಂದು ಕ್ಷಣ ದೂರ ಸರಿದು ನಿಂತು ಮತ್ತೆ ಹತ್ತಿರ ಬಂದವಳ ಮೈ ನಡುಗುತ್ತಿತ್ತು.
ಮೆಲ್ಲಗೆ ಅವಳ ಕೈ ಹಿಡಿದು ಕೊಂಡೆ.. ಕೊಸರಿಸಿಕೊಂಡಳು. ಕೊನೆಗೊಮ್ಮೆ ಬಾಗಿ ಕಾಲ್ಮುಟ್ಟಿ ‘ಭಾನು ನನ್ನನ್ನು ಕ್ಷಮಿಸಿಬಿಡು, ನನ್ನನ್ನು ಮರೆತುಬಿಡು ಪ್ಲೀಸ್’ ಎನ್ನುತ್ತಾ ಅಳುವ ಕಡಲನ್ನು ನೋಡದೆ ನೂರು ಪ್ರಶ್ನೆಗಳನ್ನು ಪ್ರಶ್ನೆಯಾಗಿಸಿಯೇ ಉಳಿಸಿ ಕಡಲ ಕಣ್ಣಿಂದ ಕಣ್ಮರೆಯಾದಳು.
ಚೆನ್ನಾಗಿದೆ ಲೇಖನ