ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 24, 2016

2

ಪ್ರಕೃತಿ ಮತ್ತು ಹರೆಯ..!

‍ನಿಲುಮೆ ಮೂಲಕ

– ಗೀತಾ ಹೆಗಡೆ

10812383-young-people-on-the-party-the-dancing-teenagers-stock-vectorಹೃದಯದ ಹೆಬ್ಬಾಗಿಲಿಗೆ ತೋರಣ ಕಟ್ಟಿ ಹೂವಿನ ಘಮಲಿನ ಅರವಳಿಕೆಯಲ್ಲಿ ಮೈನವಿರೇಳಿಸುವ ಶೃಂಗಾರದ ಕನಸು ಹೆಣೆಯುತ್ತ ಅರಿವಿಲ್ಲದೆ, ಅರಿವಾಗದಂತೆ ಹೃದಯ ಸಿಂಹಾಸನದ ಮೆಟ್ಟಿಲು ಒಂದೊಂದಾಗಿ ನಿಧಾನವಾಗಿ ಹತ್ತಿ ತಳವೂರಿದ ಕಾಲದ ನೆನಪು ಎಂದಾದರೂ ಮರೆಯಲು ಸಾಧ್ಯವೆ. ಅದು ಪ್ರತಿಯೊಬ್ಬರ ಬದುಕಿನ ಸುಂದರ ಕ್ಷಣವದು. ಹೆಣ್ಣಾಗಲಿ ಗಂಡಾಗಲಿ ಹರೆಯದ ಹೊಸಿಲಲ್ಲಿ ಮನಸ್ಸು ಬೆಳೆದಂತೆಲ್ಲ ಕನಸೂ ಬೆಳೆಯುವುದು ಸ್ವಾಭಾವಿಕ. ಅದಕ್ಕೆ ದಿನಕ್ಕೊಂದು ರೆಕ್ಕೆ ಪುಕ್ಕ. ಬಣ್ಣ ಬಣ್ಣದ ಓಕುಳಿಯ ತವರು. ಹರೆಯದ ಕನಸುಗಳು ನೂರೆಂಟು. ಅದು ಮಾತಿನಲ್ಲಿ ಅಥವಾ ಅಕ್ಷರಗಳಲ್ಲಿ ಯಾರಾದರು ವರ್ಣಿಸಲು ಸಾಧ್ಯವೇ.. ಇಲ್ಲವೆಂದೇ ಹೇಳಬೇಕು. ಹರೆಯದ ಪಾತ್ರೆಯಲ್ಲಿ ಪ್ರೀತಿಯೆಂಬ ಹುಟ್ಟು, ಮತ್ತದು ಹುಟ್ಟುವ ಕಾಲ ವಸಂತ ಋತು, ಚೈತ್ರ ಮಾಸ.

ಈ ಮಾಸ, ‘ಋತು’ವಿನಲ್ಲಿ ಮಾಮರ ಚಿಗುರಿ ಕೋಗಿಲೆಯ ಇಂಪಾದ ಗಾನ ಮುಂಜಾನೆಯ ಹಕ್ಕಿಗಳ ಕಲರವದಲ್ಲಿ ಅದ್ದಿ ತೆಗೆಯುತ್ತದೆ. ಅದೇ ಪೃಕೃತಿಯ ಹರೆಯವೆಂದರು ತಪ್ಪಾಗಲಾರದು. ಶೃಂಗಾರಕ್ಕೆ ಇನ್ನೊಂದು ಹೆಸರೇ ಪೃಕೃತಿಯ ಸೌಂದರ್ಯ.

ಯಾರಿರಲಿ ಇಲ್ಲದಿರಲಿ, ‘ಕಾಲ’ ತನ್ನ ಕಾಯಕ ಮುಂದುವರೆಸಿಕೊಂಡು ಹೋಗುವಂತೆ ಈ ಹರೆಯ ಕೂಡ. ಆಯಾ ಕಾಲ ಕಾಲಕ್ಕೆ ದೇಹವೆಂಬ ದೇಗುಲದಲ್ಲಿ ಮಂದಾರತಿ ಬೆಳಗುವ ಕಾಯಕ ತನ್ನಷ್ಟಕ್ಕೆ ನಡೆಯುತ್ತದೆ. ಮೇಲು ಕೀಳೆಂಬ ತಾರತಮ್ಯ ಇಲ್ಲ ಇಲ್ಲಿ. ಆ ಜಾತಿ ಈ ಜಾತಿ ಎಂಬ ಬೇದ ಭಾವವೂ ಇಲ್ಲ. ಮನಸ್ಸು ತಿಳಿಯಾದ ಕೊಳ. ನಭೋ ಮಂಡಲದಲ್ಲಿ ಉದಯಿಸುವ ಭಾರ್ಗವನ ಹೊಂಗಿರಣದ ಜಳಕು ಹಾದು ಪಳ ಪಳ ಹೊಳೆಯುವ ಮುತ್ತಂತಿರುವ ಹರೆಯ. ಕೋಟಿ ಮನುಜರ ವಯಸ್ಸಿನ ಅಂತರ ಒಂದು ಕ್ಷಣ, ಒಂದು ಗಳಿಗೆ, ಒಂದು ಆಯಾಮ ಹೀಗೆ ಒಬ್ಬೊಬ್ಬರಿಗೂ ಒಂದೊಂದು ವೇಳೆಗೆ ತಕ್ಕಂತೆ ಚಾಚೂ ತಪ್ಪದೆ ಬದಲಾವಣೆ ಮಾಡಬೇಕಲ್ಲ; ಇದೇನು ಸುಲಭದ ಮಾತಾ? ಅಬ್ಬಾ ಈ ಹರಯವೆ!

ಶುರುವಾಯಿತು ಇದರ ಬಗ್ಗೆ ಕಾಳಜಿ, ಆಸ್ಥೆ. ಮೊದಲು ತನ್ನ ಬಗ್ಗೆ ತನಗೆ ಹೆಮ್ಮೆ‌. ಬದಲಾಗುತ್ತಿರುವ ದೇಹ ಸೌಂದರ್ಯ. ಕಲ್ಪನೆ ಕೂಡಾ ಮಾಡಲಸಾಧ್ಯವಾದ ಅರಿವು ಮನ ಹೊಕ್ಕಂತೆಲ್ಲ ಚಿತ್ರ ವಿಚಿತ್ರ, ಭಯ.. ಏನೋ ಆತಂಕ, ಮನಸ್ಸೆಲ್ಲ ಗೊಂದಲ. ಯಾರಲ್ಲಿಯೂ ಹೇಳಿಕೊಳ್ಳಲಾಗದ ನಾಚಿಕೆ, ಸಂಕೋಚ. ತನ್ನನ್ನೆ ತಾನು ತದೇಕ ಚಿತ್ತದಿಂದ ಕನ್ನಡಿಯ ಮುಂದೆ ನಿಂತು ಅದೆಷ್ಟು ನೋಡಿಕೊಂಡರೂ ಸಾಲದು. ಶೃಂಗಾರಕ್ಕೆ ಹೊತ್ತಿನ ಅರಿವಿಲ್ಲ. ಇರುವವರೆಲ್ಲ ತನ್ನ ಕಡೆ ನೋಡಬೇಕು, ಮೆಚ್ಚುಗೆ ಹೇಳಬೇಕು, ಹೀಗೆಲ್ಲಾ ಒಳಗೊಳಗೆ ಖುಷಿ ಪಡುವ ಸಂಭ್ರಮ.

ಹರೆಯ ಹೆಣ್ಣಿಗೊಂದು ರೀತಿ ಅರಿವಾದರೆ ಗಂಡಿಗೆ ಇನ್ನೊಂದು ರೀತಿ ಅರಿವು. ಆದರೆ ಸ್ವಭಾವದಲ್ಲಿ ಅರಿವಿನ ಹಂತ ತಲುಪಿದಾಗ ಇಬ್ಬರ ನಡೆ ನೋಡುಗರು ಗಮನಿಸುವಷ್ಟು ಎದ್ದು ಕಾಣುತ್ತದೆ. ನಡೆ ನುಡಿ, ಹಾವ ಭಾವ, ಮಾತು ಮೌನ, ನಗು ಹಾಸ್ಯ, ಹುಸಿ ಕೋಪ  ಒಂದಾ ಎರಡಾ ಎಲ್ಲದರ ಒಪ್ಪಾದ ಸಮ್ಮಿಲನದ ಪ್ರೌಡಾವಸ್ಥೆಯಲ್ಲಿ ಮಿನುಗುವ ತೇರು ಈ ಹರೆಯವೆಂಬ ಚೈತ್ರ ಮಾಸ. ಮನಸ್ಸು ದೇಹ ಪುಳಕಗೊಳ್ಳುವ ಋತುಗಾನ.

ವೈಶಾಖ, ಜೇಷ್ಟ ಮಾಸಗಳ ಸಮ್ಮೇಳನದ ಮುಂದುವರಿದ ದಿನಗಳಲ್ಲಿ ಬರುವ ತುಂತುರು ಮಳೆಯ ಆರ್ಭಟ, ರೈತರಿಗಂತೂ ಖುಷಿಯಿಂದ ರೈತಾಪಿ ಕೆಲಸದಲ್ಲಿ ತಲ್ಲೀನತೆ ಮೇಳೈಸುವಂತೆ ಮಾಡುತ್ತದೆ. ಇಲ್ಲಿ ಮಳೆಯ ಸಂಭ್ರಮ. ಪೃಕೃತಿ ಹಚ್ಚ ಹಸುರಿನ ಸೀರೆಯಲ್ಲಿ ಕಂಗೊಳಿಸುತ್ತದೆ. ನವಿಲುಗಳು ಮಳೆಯ ಆಗಮನಕ್ಕೆ ಗರಿ ಬಿಚ್ಚಿ ನರ್ತಿಸುತ್ತವೆ.  ಹಕ್ಕಿಗಳು ಗೂಡು ಕಟ್ಟಿ ಸಂತಾನೋತ್ಪತ್ತಿಯಲ್ಲಿ ತೊಡಗಲು ಅಣಿಯಾಗುತ್ತವೆ. ಕೋಗಿಲೆಯ ಗಾನ ಮರಗಳ ಮರೆಯಿಂದ ಇಂಪಾಗಿ ಕೇಳಿಬರುತ್ತವೆ.

ಇದರ ಮುಂದೆ ಮುಖ ಸಪ್ಪೆ ಮಾಡಿ ಮೂಲೆ ತೋರಿಸುವ ಮಾಸ ಆಷಾಡ. ತಂಗಾಳಿ ಮರೆಯಾಗಿ ಬಿರುಗಾಳಿ ಬೀಸಿ ಹೂವು ಕಾಯಾಗಿ ಮಿಡಿ ಜೋತಾಡುವ ಮರವು, ತೂಗಾಡಿ ಮಿಡಿಗಳೆಲ್ಲಾ ಅಲ್ಲಲ್ಲಿ ಉದುರಿಸಿ “ಅಯ್ಯೋ ಎಷ್ಟು ಚಲೊ ಕಾಯಿ ನೇತಾಡ್ತಿತ್ತೆ, ಗಾಳಿಗೆ ‘ಮಿಡಿ’ ಎಲ್ಲ ಉದುರೋತೆ” ಎಂದು ಪಶ್ಚಾತಾಪ ಪಟ್ಟು ಮುಖ ಬಡವಾಗುವ ‘ಸಂಕಟದ ಮಾಸ’ವೆಂದು ಹೇಳಬಹುದು. ಇನ್ನೊಂದು ಕಾರಣ ಗಂಡ ಹೆಂಡಿರ ದೂರ ಇಡುವ ಮಾಸ.  ಮಂಗಳ ಕಾರ್ಯ ಮಾಡಲು ನಿಶೇಧ. ಹೆಣ್ಣು ಗಂಡಿನ ಕನಸ ಅಲ್ಪ ಕಾಲ ತಡೆಹಿಡಿದು ಮುಂಬರುವ ಜೀವನದ ಕುರಿತು ಯೋಚಿಸಿ ಅಡಿ ಇಡಲು, ಗಂಡ ಹೆಂಡಿರ ದೂರ ಮಾಡಿ ಅಗಲಿಕೆಯ ನೋವು ಅನುಭವಿಸುವಂತೆ ಮಾಡಿ ಪ್ರೀತಿಯ ಒರೆಗೆ ಹಚ್ಚಿ ಕೆಲವು ದಿನಗಳು ಹಳೆಯ ಗೆಳೆಯ ಗೆಳತಿಯರೊಡಗೂಡಿ ಕಾಲ ಕಳೆಯಲು ಅವಕಾಶ ಮಾಡಿ ಕೊಡುವ ಕಾಲ. ಆಷಾಡ ಒಂದು ರೀತಿ ಬಿಡುಗಡೆ ಮಾಸವೆಂದರೂ ತಪ್ಪಾಗಲಾರದು. ಈ ಮಾಸದಲ್ಲಿ ಬರುವ ಪ್ರಥಮೇಕಾದಶಿಯಲ್ಲಿ ಒಂದು ದಿನ ಉಪವಾಸವಿದ್ದು ಮನಸ್ಸು ದೇಹ ಶುದ್ಧ ಮಾಡಿಕೊ, ನಿನ್ನ ತಾಳ್ಮೆಯನ್ನು ಪರೀಕ್ಷೆಗೆ ಒಡ್ಡು ಅನ್ನುವಂತಿದ್ದರೆ, ಆಷಾಡ ಮಾಸದ ಹುಣ್ಣಿಮೆ ಗುರು ಪೂರ್ಣಿಮೆ ಆಧ್ಯಾತ್ಮದ ಬಾಗಿಲು ತಟ್ಟಿ ವಿಧ್ಯೆ ಬುದ್ದಿ ಕಲಿಸಿ, ಇದುವರೆಗೆ ನಿನ್ನ ಈ ಮಟ್ಟಕ್ಕೆ ಬೆಳೆಸಿದ ಗುರುವಿನ ನೆನಪಿಸಿಕೊಂಡು ಕೃತಜ್ಞನಾಗು ಎಂದು ನೆನಪಿಸುವ ಮಾಸ.  ದೂರದೂರಿನಲ್ಲಿ ನೆಲೆಸಿರುವ ಮಕ್ಕಳಿಗಂತೂ ಅದರಲ್ಲೂ ವಿದೇಶದಲ್ಲಿ ನೆಲೆಸಿರುವ ಭಾರತದ ಮಕ್ಕಳಿಗೆ ಊರು, ಹೆತ್ತವರು, ಶಾಲೆ ಕಾಲೇಜು, ಗುರುವಿನ ನೆನಪಿನ ಬುತ್ತಿ ನೆಪಿಸಿಕೊಂಡು ಕಾಲ ಕಳೆಯುವ ದಿನ.

ಹೀಗೆ ಯೋಚಿಸುತ್ತ ಹೋದಂತೆ ಕ್ಷಣಬಂಗುರವಾದ ಈ ಬದುಕೆಂಬ ತಟದಲ್ಲಿ ಸೃಷ್ಟಿ ಕರ್ತ ಒಂದೊಂದು ಮಾಸಕ್ಕೂ ಅದರದೇ ಆದ ಮಹತ್ವ ಇಟ್ಟು ಬದುಕು ನಡೆಸಲು ಅವಕಾಶ ನಿರ್ಮಿಸಿದ್ದಾನೆ. ಇದನ್ನು ಅನುಸರಿಸಿ ಜೀವನ ನಡೆಸುವುದು ಮಾನವರಾದ ನಮ್ಮ ಕರ್ತವ್ಯ. ಅರಿತು ನಡೆದರೆ ಬಾಳು ಬಂಗಾರ, ಅದಿಲ್ಲವಾದರೆ ಅವ್ಯವಸ್ಥೆಯ ಆಗರ.

ಪ್ರತೀ ವರ್ಷ ಬರುವ ಹನ್ನೆರಡು ಮಾಸಗಳ ವೈಶಿಷ್ಟ್ಯ, ಮಾನವ ಜೀವನಕ್ಕೆ ಹಾಸು ಹೊಕ್ಕಾಗಿದೆ. ಬಾಲ್ಯ, ಯೌವನ, ವೃದ್ದಾಪ್ಯಗಳಲ್ಲಿ ನಮ್ಮ ದೇಹ ಮನಸ್ಸುಗಳಲ್ಲಾಗುವ ಬದಲಾವಣೆ ಆಯಾ ಕಾಲಕ್ಕೆ ತಕ್ಕಂತೆ ನಮ್ಮ ಆಚಾರ, ವಿಚಾರ, ನೀತಿ, ನಿಯಮ ಅರಿತು ಸರಿಯಾದ ರೀತಿಯಲ್ಲಿ ನಡೆಯಲು ದಾರಿದೀಪವಾಗಿವೆ. ಸೃಷ್ಟಿಯ ನಿಯಮದಂತೆ ನಮ್ಮ ಜೀವನವನ್ನು ನಿಯಮಿತಗೊಳಿಸಿಕೊಳ್ಳಬೇಕು. ‘ಇದೆ’ ಎಂದು ಮನಸ್ಸಿಗೆ ಬಂದಂತೆ ಕುಣಿಯದೆ ಮನಸ್ಸು ದೇಹ ಹದ್ದುಬಸ್ತಿನಲ್ಲಿಟ್ಟು ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿತ್ವ, ಆಚರಣೆ ರೂಢಿಸಿಕೊಂಡು ಜೀವನ ಹಸನಾಗಿಸಿಕೊಳ್ಳುವುದು ನಮ್ಮ ಕೈಯಲ್ಲಿ ಇದೆ. ಆ ದಾರಿಯಲ್ಲಿ ಮುನ್ನಡೆಯೋಣ!

ಚಿತ್ರ ಕೃಪೆ :- ಗೂಗಲ್

Read more from ಲೇಖನಗಳು
2 ಟಿಪ್ಪಣಿಗಳು Post a comment
  1. ನವೆಂ 24 2016

    ಧನ್ಯವಾದ

    ಉತ್ತರ

Trackbacks & Pingbacks

  1. ಪ್ರಕೃತಿ ಮತ್ತು ಹರೆಯ..! | ನಿಲುಮೆ | Sandhyadeepa….

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments