ಡಾಲರ್ ಲೆಕ್ಕಕ್ಕೆ : ಕನ್ನಡ ಪಕ್ಕಕ್ಕೆ
– ರಾಕೇಶ್ ಶೆಟ್ಟಿ
ಬೆಳಗಾವಿಯಲ್ಲಿ ನಡೆಯೋ ವಿಶ್ವ ಸಮ್ಮೇಳನದ ಉದ್ಘಾಟನೆಗಾಗಿ ಇನ್ಫೋಸಿಸ್ ನಾರಾಯಣ ಮೂರ್ತಿಯವರನ್ನ ಸರ್ಕಾರ ಆಹ್ವಾನಿಸಿದ್ದು, ಮತ್ತದಕ್ಕೆ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಆಕ್ಷೇಪಿಸಿ ಪತ್ರ ಬರೆದಿದ್ದು ಈದೀಗ ಚರ್ಚೆಗೆ ಗ್ರಾಸವಾಗಿದೆ.ಯಾರೇ ಕೂಗಾಡಲಿ ಊರೇ ಹೊರಾಡಲಿ ’ಇನ್ಫಿ ನಾಣಿ’ಯವ್ರೆ ಉದ್ಘಾಟನೆ ಮಾಡ್ತಾರೆ ಅಂತ ಯಡ್ಯೂರಪ್ಪನವ್ರು ಹೇಳಿಯಾಗಿದೆ.ಅದು ಬದಿಗಿರಲಿ.ಬರಗೂರರ ಪತ್ರಕ್ಕೆ ಪ್ರತಿವಾದವಾಗಿ ಕನ್ನಡ ಪ್ರಭದಲ್ಲಿ ಪ್ರತಾಪ್ ಸಿಂಹ “ನಾರಾಯಣ ಮೂರ್ತಿ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಬದುಕು ಕಟ್ಟಿಕೊಟ್ಟದ್ದು ಕನ್ನಡದ ಕೆಲಸವಲ್ಲವೇ?ಕೇವಲ ಸಾಹಿತ್ಯ ಕೃಷಿಯೊಂದೇ ಕನ್ನಡದ ಕೈಂಕರ್ಯವೇ? ” ಅಂತ ಕೇಳಿದ್ದಾರೆ.ಮುಕ್ತ ಚರ್ಚೆಗೆ ಆಹ್ವಾನವನ್ನು ನೀಡಿದ್ದಾರೆ.ಅದನ್ನೆಲ್ಲ ಓದುವಾಗ ಬಹಳಷ್ಟು ಜನ ಬರಗೂರರಿಗೆನು ಹಕ್ಕಿದೆ?ಸಾಹಿತಿಗಳೇ ಏಕೆ ಬೇಕು ಅಂದಿದ್ದಾರೆ?
ನಿಜ.ಕೇವಲ ಸಾಹಿತ್ಯ ಕೃಷಿಯೊಂದೇ ಕನ್ನಡದ ಕೈಂಕರ್ಯವಲ್ಲ ಅನ್ನುವ ಪ್ರತಾಪ್ ಮಾತು ಒಪ್ಪಲೆಬೇಕಾದದ್ದು.ಆದರೆ ಬೆಂಗಳೂರಿನ ಭಾಗ್ಯೋದಯಕ್ಕೂ ಇನ್ಫೋಸಿಸ್ ನಾರಾಯಣ ಮೂರ್ತಿಯವರೆ ಕಾರಣ ಅನ್ನುವ ರೀತಿಯ ಮಾತುಗಳು ಸಹ್ಯವೇ?ಸುಮ್ಮನೆ ಕನ್ನಡಿಗರಿಗೆ ಕೆಲಸ ಕೊಟ್ರೂ,ಜೀವನ ಕೊಟ್ರೂ ಅಂತ ಅಬ್ಬರಿಸಿದರಾಯಿತೆ.ಕನ್ನಡಿಗರಿಗೆ ಕೆಲಸ ಕೊಟ್ರೂ ಕೊಟ್ರೂ ಅನ್ನೋವ್ರು ಒಮ್ಮೆ ಹೋಗಿ ಮೂರ್ತಿಯವರ ಕಂಪೆನಿಯಲ್ಲಿ ಎಷ್ಟು ಪ್ರತಿಶತ ಜನ ಕನ್ನಡಿಗರಿದ್ದಾರೆ?ಅಲ್ಲಿರುವ ಕನ್ನಡಿಗರಾದರು ಯಾವ ಡೆಸಿಗ್ನೇಷನ್ ಹೊಂದಿದ್ದಾರೆ? ಅಸಲಿಗೆ ಅಲ್ಲಿನ ಕನ್ನಡಿಗ ಉದ್ಯೋಗಿಗಳ ಪಾಡೇನಿದೆ ಅನ್ನುವುದಾದ್ರು ಕೇಳಿ ನೋಡಿ.ಅಲ್ಲಿ ಯಾರ ಕಾರು-ಬಾರು ನಡೆಯುತ್ತಿದೆ ಅನ್ನುವುದು ತಿಳಿಯಬಹುದು. ಇವೆಲ್ಲದರ ಸತ್ಯ ದರ್ಶನವಾದರೆ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಬದುಕು ಕಟ್ಟಿಕೊಟ್ಟರು ಅನ್ನುವಂತೆ ಮಾತಾಡಿರುವುದು ಸುಳ್ಳೇ ಸುಳ್ಳು ಅನ್ನುವುದು ಗೊತ್ತಾಗುತ್ತದೆ.