ಬಾಪೂ ನೇತಾಜಿಯನ್ನು ತುಳಿದರೆ ?
– ಶ್ರೀಹರ್ಷ ಸಾಲೀಮಠ
ಸುಭಾಷ ಚಂದ್ರ ಭೋಸರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಕಂಡ ಅತ್ಯಂತ ಚಾರ್ಮಿಂಗ್ ವ್ಯಕ್ತಿ. ಅವರು ಹುಟ್ಟಾ ಜಿನಿಯಸ್. ಕೇವಲ ಎಂಟು ತಿಂಗಳ ಅವಧಿಯ ಸಿದ್ಧತೆಯಲ್ಲಿ ಐ.ಸಿ.ಎಸ್ ಪರೀಕ್ಷೆಯಲ್ಲಿ ನಾಲ್ಕನೆಯ ರ್ಯಾಂಕ್ ಪಡೆದ ಮೇಧಾವಿ. ಸುಭಾಷ್ ರ ಚರಿಷ್ಮಾ ಹಿಟ್ಲರ್ನಂತಹವನನ್ನೇ ಬೆರಗುಗೊಳಿಸಿತ್ತು. ದೇಶಬಂಧು ಚಿತ್ತರಂಜನ್ ದಾಸ್ ರ ಗರಡಿಯಲ್ಲಿ ಪಳಗಿದ ನೇತಾಜಿ ಕ್ರಿಯಾಶಿಲತೆಯಲ್ಲೂ ಎಲ್ಲರಿಗಿಂತ ಒಂದು ಕೈ ಮೇಲು. ದೇಶಸೇವೆಯ ಕೈಂಕರ್ಯಕ್ಕೆ ಓಗೊಟ್ಟು ಐ.ಸಿ.ಎಸ್ ನಂತಹ ಹುದ್ದೆಯನ್ನು ಬಿಟ್ಟು ಮರಳಿದವರು. ನೇತಾಜಿಯ ದೇಶಭಕ್ತಿಯ ಬಗ್ಗೆ ಯಾರಿಗೂ ಅನುಮಾನಗಳಿರಲಿಲ್ಲ; ಇಂದಿಗೂ ಇಲ್ಲ!
ಸುಭಾಷರಿಗೂ ಬಾಪೂರಿಗೂ ತಾತ್ವಿಕವಾದ ಅಭಿಪ್ರಾಯಬೇಧಗಳಿದ್ದವು. ಅದನ್ನು ವೈಯಕ್ತಿಕ ಮಟ್ಟದ ಬೇಧಗಳು ಎಂಬಂತೆ ಚಿತ್ರಿಸಿ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಕಸ್ತುರ್ ಬಾ ಹೇಳುತ್ತಾರೆ “ಗಾಂಧೀಜಿ ಮತ್ತು ಸುಭಾಷರು ಚರ್ಚೆಗೆ ಕುಳಿತರೆ ಇಬ್ಬರು ದೈವಿಪುರುಷರು ಸಂಭಾಷಣೆಗೆ ತೊಡಗಿದಂತೆ ತೋರುತ್ತಿತ್ತು.” ಅಭಿಪ್ರಾಯಗಳಲ್ಲಿ ಬಲವಾದ ಬೇಧಗಳಿದ್ದರೂ ನೇತಾಜಿ ಮತ್ತು ಬಾಪೂಜಿಯವರಲ್ಲಿ ವಯಕ್ತಿಕ ಮಟ್ಟದ ದ್ವೇಷಗಳಿರಲಿಲ್ಲ.
ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡಲು ವಿದೇಶಿ ತಾಕತ್ತು ಹಾಗೂ ಸೈನ್ಯದ ನೆರವು ಪಡೆಯಬೇಕು ಎಂಬ ಅಭಿಪ್ರಾಯ ನೇತಾಜಿಯವರಾಗಿತ್ತು. ಸಂಪೂರ್ಣ ಸ್ವದೇಶಿ ಮಾರ್ಗದಲ್ಲೇ ಸ್ವಾತಂತ್ರ್ಯ ಪಡೆಯಬೇಕೆಂಬುದು ಗಾಂಧೀಜಿಯ ಅಭಿಪ್ರಾಯವಾಗಿತ್ತು. ಯುದ್ಧಾಸ್ತ್ರಗಳು, ಬಾಂಬುಗಳ ಸಹಾಯದಿಂದ ನೆತ್ತರು ಹರಿಸಿ ಸ್ವಾಯತ್ತೆ ಪಡೆಯಬೇಕೆಂಬುದು ನೇತಾಜಿ ಚಿಂತನೆಯಾಗಿದ್ದರೆ ಸತ್ಯ ಮತ್ತು ಅಹಿಂಸೆ ಗಾಂಧೀಜಿಯ ಮಂತ್ರವಾಗಿತ್ತು. ಇದು ಅವರ ನಡುವೆ ಸಾಕಷ್ಟು ಜಿಜ್ಞಾಸೆ, ಚರ್ಚೆಗಳಿಗೆ ದಾರಿ ಮಾಡಿಕೊಂಡಿತ್ತು. ಹಾಗಂತ ಇಬ್ಬರೂ ಪರಸ್ಪರ ದ್ವೇಷಿಸುತ್ತಿರಲಿಲ್ಲ.
ನಾ ಕಂಡಂತೆ ನಮ್ಮ ಬೆಳಗಾವಿ
– ಚೇತನ್ ಜೀರಾಳ್
ಉತ್ತರ ಕರ್ನಾಟಕದವನಾದ ನನಗೆ, ಬೆಳಗಾವಿ ನನ್ನ ಬೆಳವಣಿಗೆಯ ಒಂದು ಭಾಗವೇ ಅಂದರೆ ತಪ್ಪಲ್ಲ. ವರ್ಷಗಳು ಕಳೆದಂತೆ ನನ್ನ ಜೊತೆಯೇ ಬೆಳಗಾವಿಯ ಸ್ವರೂಪ ಬದಲಾಗುತ್ತಾ ಬಂತು. ಉತ್ತರ ಕರ್ನಾಟಕದ ಜಿಲ್ಲೆಗಳು ಶೈಕ್ಷಣಿಕವಾಗಿ ಬಹಳ ಹಿಂದುಳಿದಿವೆ. ಒಳ್ಳೆಯ ಓದು ಅಥವಾ ಉನ್ನತ ಶಿಕ್ಷಣ ಪಡೆಯಬೇಕೆಂದರೆ ನಾವು ಹುಬ್ಬಳ್ಳಿ, ಧಾರವಾಡ ಇಲ್ಲವೆಂದರೇ ಬೆಳಗಾವಿಗೆ ಹೋಗಿ ಓದಬೇಕು. ಪಿಯುಸಿ ಮುಗಿಸಿದ ಮೇಲೆ ಇಂಜಿನಿಯರಿಂಗ್ ಒದಲು ನನಗೆ ಸಿಕ್ಕಿದ್ದು ಬೆಳಗಾವಿಯ ಒಂದು ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ. ಅದು 2003-04ರ ಸಮಯ, ಕಾಲೇಜಿಗೆ ಸೇರಿಕೊಳ್ಳಲು ಇನ್ನು ಕೆಲವೇ ದಿನಗಳು ಬಾಕಿ ಇದ್ದವು, ಆಗ ಒಂದು ಕಡೆ ಖುಷಿಯಾಗುತ್ತಿದ್ದರೆ ಮತ್ತೊಂದು ಕಡೆ ಭಯ ಕಾಡುತ್ತಿತ್ತು ಕಾರಣ ನಾನು ಹೋಗುತ್ತಿರುವುದು ಬೆಳಗಾವಿ ಅನ್ನೋ ಊರಿಗೆ. ಜೊತೆಗೆ ಹಿಂದೆ ನನ್ನ ತಂದೆ ಇಲ್ಲಿ ಓದುತ್ತಿದ್ದಾಗ ಅವರಿಗೆ ಆಗಿದ್ದ ಅನೇಕ ಕಹಿ ಘಟನೆಗಳು. ಹೆದರಿಕೆಗೆ ಕಾರಣವಿದ್ದದ್ದು ಬೆಳಗಾವಿಯಲ್ಲಿ ಮರಾಠಿಗರು ಹೆಚ್ಚು, ಅಲ್ಲಿ ಕನ್ನಡ ಮಾತನಾಡುವವರನ್ನು ಹೊಡೆಯುತ್ತಾರೆ ಅನ್ನೋ ಭಯ, ಕಾರಣ ನನ್ನ ತಂದೆ 70ರ ದಶಕದಲ್ಲಿ ಇಲ್ಲಿ ಓದುತ್ತಿದ್ದಾಗ ಕನ್ನಡ ಮಾತನಾಡಿದ್ದಕ್ಕಾಗಿ ಮರಾಠಿಗರು ನನ್ನ ತಂದೆ ಜೊತೆ ಜಗಳವಾಡಿ ಅವರನ್ನ ಹೊಡೆದಿದ್ದರು ಕೂಡ.