ಈ ಸುದ್ದಿ ಸಂಪಾದಕೀಯದ ಕಣ್ತಪ್ಪಿದ್ದು ಹೇಗೆ?
ವಿಶೇಷ ಅಂದ್ರೆ ಈ ಬ್ಲಾಗು ನಡೆಸೋರು ಯಾರು ಅಂತ ತಿಳಿಯೋಕೆ ಜನ್ರು ಮಾಡಿದ ತಿಣುಕಾಟ, ಹಾಕಿದ ಗೆಸ್ಸು ಕಡಿಮೆಯೇನಲ್ಲ. ಆದರೆ ಸಂಪಾದಕೀಯದ್ದು ಇದಕ್ಕೆಲ್ಲ ದಿವ್ಯಮೌನವೇ ಉತ್ತರ. ಇಂಥ ಮೌನವೇ ಜನರಿಗೆ ಈ ಬ್ಲಾಗಿನ ವಿಷಯಗಳಲ್ಲಿ ಓದುಗರಿಗೆ ಇನ್ನಷ್ಟು ಕುತೂಹಲ ಬೆಳೆಯುವಂತೆ ಮಾಡಿದೆ.ಸಂಪಾದಕೀಯ ಅಷ್ಟೇ ಮಾಡಿ ಸುಮ್ಮನಾಗಿದ್ರೆ ಅದರಲ್ಲಿ ಏನೂ ವಿಶೇಷ ಇರುತ್ತಿರಲ್ಲಿಲ್ಲ.ಟೀವಿ ಪೇಪರ್ ಹೀಗೆ ಎಲ್ಲ ಮಾಧ್ಯಮಗಳ ಆರೋಗ್ಯದ ಬಗ್ಗೆ ಆಗಾಗ ಮಾತಾಡ್ತಾ ಮೀಡಿಯಾಗಳ ಹಿಡನ್ ಅಜೆಂಡಾಗಳನ್ನು, ಹಿತಾಸಕ್ತಿಗಳನ್ನು ಜನರ ಎದುರಿಗೆ ಬೆತ್ತಲೆಗೊಳಿಸಿದ್ದು ಸುಳ್ಳೇನಲ್ಲ.ಇದೊಂಥರ ಜರ್ನಲಿಸಂ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ಕ್ಲಾಸ್ ಅನ್ನಿಸಿದ್ರೆ ವಿಶೇಷವೇನಿಲ್ಲ ಬಿಡಿ. ಮತ್ತಷ್ಟು ಓದು
ಈ ಮಾಯಿ ಬರೆದಷ್ಟೂ ಮುಗಿಯದ ಕಥೆ
ಚಿತ್ರಾ ಸಂತೋಷ್
ಇಂದು ಮಿರ್ವಾಲಾ ಎಂಬ ಪುಟ್ಟ ಹಳ್ಳಿಯಲ್ಲಿ ಶಾಲೆ ಇದೆ. ನೂರಾರು ಮಕ್ಕಳು ಅಲ್ಲಿ ಓದುತ್ತಿದ್ದಾರೆ. ಮೇಲ್ವರ್ಗ-ಕೆಳ ವರ್ಗದ ತಾರತಮ್ಯ ನಿಧಾನವಾಗಿ ಇತಿಹಾಸವಾಗುತ್ತಿದೆ. ಚೌಕಟ್ಟಿನೊಳಗೆ ಬಂಧನವಾಗುತ್ತಿದ್ದ ಹೆಣ್ಣು ಮಕ್ಕಳು ಹೊರಜಗತ್ತನ್ನು ಕಾಣುವ ಪ್ರಯತ್ನ ಮಾಡುತ್ತಿದ್ದಾರೆ. ನೊಂದ ಹೆಣ್ಣು ಮಕ್ಕಳು ಮಾಯಿಯ ಮಡಿಲಲ್ಲಿ ಭರವಸೆ ಕಾಣುತ್ತಿದ್ದಾರೆ. ಮೀರ್ವಾಲದಲ್ಲಿ ಇಂಥದ್ದೊಂದು ಕ್ರಾಂತಿ ಆಗುತ್ತಿದ್ದರೆ ಅದಕ್ಕೆ ಕಾರಣ ಮುಕ್ತಾರ್ ಮಾಯಿ, ಅವಳ ಆಶಾವಾದ ಅಷ್ಟೇ.
ಇವಳ ಬಗ್ಗೆ ಬರೆಯೋಕೇನಿದೆ?
ಪತ್ರಿಕೆಗಳಲ್ಲಿ, ಬ್ಲಾಗ್ಗಳಲ್ಲಿ ಪೇಜುಗಟ್ಟಲೆ ಅವಳ ಬಗ್ಗೆ ಬರೆದವರಿದ್ದಾರೆ. ಇನ್ನೇನಿದೆ ನಾನು ಬರೆಯೋದು ಹೊಸತು? ನನಗೂ ತುಂಬಾ ಸಲ ಹಾಗೆನಿಸಿದೆ. ಆದರೂ, ಇನ್ನೊಂದೆಡೆ ಆ ಹೆಣ್ಣು ಮಗಳು ಬತ್ತದ ತೊರೆ, ಅವಳೆಂದೂ ಮುಗಿಯದ ಕತೆ ಎಂದನಿಸುತ್ತದೆ. ಏಕೆಂದರೆ, ಶೋಷಣೆಗೆ ಎದೆಗೊಟ್ಟು ‘ಸ್ವಾತಂತ್ರ್ಯ’ ವನ್ನು ಕಂಡುಕೊಂಡ ಹೆಣ್ಣುಮಗಳು ಆಕೆ, ತನ್ನ ಬದುಕಿನ ಸೌಧವನ್ನು ತಾನೇ ನಿರ್ಮಿಸಿಕೊಂಡು ಜಗತ್ತಿನ ಕೋಟ್ಯಂತರ ಹೆಣ್ಣು ಮಕ್ಕಳಿಗೆ ಧೈರ್ಯದ ಪಾಠ ಕಲಿಸಿದವಳು ಅವಳು. ಕಣ್ಣೀರ ಕೋಡಿಯಲ್ಲೇ ಭರವಸೆಯ ಹೂವಂತೆ ಅರಳಿದವಳು ಅವಳು.
ಅವಳೇ ಮುಕ್ತಾರ್ ಮಾಯಿ.
ಈ ಹೆಸರು ಕೇಳದವರು ವಿರಳ. ಹುಟ್ಟೂರು ಪಾಕಿಸ್ತಾನದ ಮೀರ್ವಾಲ. ಪಾಕಿಸ್ತಾನ ಅಂದ್ರೆ ಅಲ್ಲಿ ಹೆಣ್ಣು ಮಕ್ಕಳ ಬದುಕೇನು? ಎನ್ನುವುದು ಜಗತ್ತಿಗೇ ಗೊತ್ತಿದೆ. ಇಲ್ಲಿ ಹೆಣ್ಣು ಮಕ್ಕಳಿಗೆ ಸಂಪ್ರದಾಯ, ಚೌಕಟ್ಟುಗಳೇ ಬಂಧನ. ಹೆಣ್ಣು ಮಕ್ಕಳು ನಾಲ್ಕು ಗೋಡೆಯಾಚೆಯಿಂದ ಹೊರಬಂದು, ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳೋದೇ ಅಪರೂಪ. ಒಂದು ವೇಳೆ ಮನೆಯಿಂದ ಹೊರಬಂದರೆ ಮಗಳ ಭವಿಷ್ಯ ಉಳಿಯುತ್ತೆ ಅನ್ನೋ ಗ್ಯಾರಂಟಿ ಹೆತ್ತವರಿಗೂ ಇಲ್ಲ. ನಿತ್ಯ ಅರಾಜಕತೆಯ ಬೀಡಾಗಿದ್ದ ಪಾಕಿಸ್ತಾನದಂಥ ರಾಷ್ಟ್ರದಲ್ಲಿ ಒಬ್ಬಳು ಹೆಣ್ಣು ಮಗಳು ತನಗಾದ ಅನ್ಯಾಯದ ವಿರುದ್ಧ ಬದುಕನ್ನೇ ಪಣವಾಗಿಟ್ಟು ಹೋರಾಟ ಮಾಡಿ, ಗೆಲುವು ಪಡೆದಳೆಂದರೆ ಅದು ಮುಕ್ತಾರ್ ಮಾಯಿ ಮಾತ್ರ! ಈಗ ಪಾಕಿಸ್ತಾನದ ಹೆಣ್ಣು ಮಕ್ಕಳಿಗೆ ಮುಕ್ತಾರ್ ಮಾಯಿ ಕೇವಲ ಸಾಮಾನ್ಯ ಹೆಣ್ಣು ಮಗಳಲ್ಲ, ಅವಳೊಬ್ಬಳು ತಾಯಿ, ಹೋರಾಟಗಾರ್ತಿ, ಇಲ್ಲಿನ ಹೆಣ್ಣು ಮಕ್ಕಳ ದನಿ. ಮತ್ತಷ್ಟು ಓದು
ಬದುಕ ‘ಜಾತ್ರೆ’ ಯಲ್ಲಿ ಸಾಹಿತ್ಯದ ಪಾತ್ರ!
ಅರೆಹೊಳೆ ಸದಾಶಿವ ರಾವ್
ಒಂದು ರೀತಿಯ ನವೀಕರಣಗೊಂಡ ಮೂಡ್ನೊಂದಿಗೆ ಬರೆಯಕುಳಿತರೆ, ಅದೇಕೋ ‘ಜಾತ್ರೆ’ಬಹಳವಾಗಿ ಕಾಡುತ್ತಿದೆ. ಇದು ಎಲ್ಲೆಡೆಯಲ್ಲಿಯೂ ಜಾತ್ರೆನಡೆಯುವ ಸಂದರ್ಭ. ಅದರಲ್ಲೂ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಒಂದು ರೀತಿಯ ದೇವ-ದೈವದ ಕೇಂದ್ರವಾಗಿರುವ ಕಾರಣ, ಇದು ಒಂದು ರೀತಿಯ ಜಾತ್ರೆಯ ಸೀಸನ್. ಅದು ಕೋಲ, ಮಾರಿ, ನೇಮ, ರಥೋತ್ಸವ, ಗೆಂಡ ಸೇವೆ,…..ಇತ್ಯಾದಿ ಹೆಸರಿನಿಂದ ನಡೆಯುವ ವರ್ಷಂಪ್ರತಿ ಧಾರ್ಮಿಕ ಕಾರ್ಯಕ್ರಮಗಳಾದರೆ, ಅಷ್ಟಬಂಧ, ಬ್ರಹ್ಮಕಲಶೋತ್ಸವ, ಪುನ:ಪ್ರತಿಷ್ಠೆ, ನಾಗಮಂಡಲ…..ಇತ್ಯಾದಿಗಳಿಂದ ಕರೆಯಿಸಿಕೊಳ್ಳುವ ವಿಶೇಷ ಉತ್ಸವಗಳು. ಈಗ ನೀವು ಒಮ್ಮೆ ರಸ್ತೆ ಬದಿ ಹಾದಿರಿ ಎಂದಾದರೆ, ಇಂತಹ ಬ್ಯಾನರ್ಗಳು, ಕಟೌಟ್ಗಳು, ತೋರಣಗಳು ಎಲ್ಲೆಂದರಲ್ಲಿ ಕಾಣಸಿಕ್ಕಿದರೆ, ಎಲ್ಲಾ ಧಾರ್ಮಿಕ ಕೇಂದ್ರಗಳು ಹೊಸ ಬಣ್ಣ ಬಳಿದುಕೊಂಡು ಸಿಂಗಾರಗೊಂಡು ನಿಂತಿರುತ್ತವೆ. ಇಂತಹ ಉತ್ಸವಗಳು ಇಡಿಯ ಊರಿಗೆ ಊರೇ ಸಂಭ್ರಮಿಸಲು ಕಾರಣವಾಗುತ್ತವೆ. ಈ ಮೂಲಕ ನಾಟಕ, ಯಕ್ಷಗಾನ ಹಾಗೂ ಇನ್ನಿತರ ಕಲಾ ಪ್ರಕಾರಗಳ ಪ್ರದರ್ಶನ, ಊರಿನ ಸಂಭ್ರಮಕ್ಕೆ ಮೆರುಗು ನೀಡಿದರೆ, ಒಂದು ರೀತಿಯ ಜಡ ಹಿಡಿದ ಮನಸ್ಸುಗಳಿಗೆ ನವೀಕರಣವಾಗುವಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ.
ಇತ್ತೀಚೆಗೆ ನನ್ನೂರಿನ ಜಾತ್ರೆಯಲ್ಲಿ ಎರಡು ದಿನ ಕಳೆದು ಬಂದಾಗ ನನಗನಿಸಿದ್ದು, ಇದೂ ಜೀವನದ ಒಂದು ಅವಿಭಾಜ್ಯ ಅಂಗವೇ ಅಲ್ಲವೇ ಎಂಬುದು. ಅಲ್ಲಿ ಏನುಂಟು ಏನಿಲ್ಲ ಹೇಳಿ? ಬಾಲ್ಯದ ಗೆಳೆಯರ ಪುನರ್ಮಿಲನ, ಕುಡಿಮೀಸೆಯ ದಿನಗಳ ಕನಸಿನ ಮರು ನೆನಪು, ಚಾಪೆ ಹಿಡಿದೇ ಆಟಕ್ಕೆಂದು ಹೋಗಿ ೫ರೂಪಾಯಿಯ ಟಿಕೆಟ್ ಪಡೆದು ಗದ್ದೆಯಲ್ಲಿ ಮಲಗಿ ಬೆಳಗ್ಗೆದ್ದು ಮನೆಗೆ ಮರಳಿದ ದಿನದ ಮೆಲುಕು, ಆಟಿಕೆಯ ಅಂಗಡಿಯ ಮುಂದೆ ನಿಂತು ಇದು ಬೇಕೇ ಬೇಕೆಂದು ರೊಚ್ಚೆ ಹಿಡಿದು ಸಿಗದಾಗ ಮನೆಗೆ ಬಂದು ಅಳುಮೋರೆ ಹಾಕಿ ಹಬ್ಬ ಬಹಿಷ್ಕಾರ ಮಾಡಿದ ದಿನಗಳ ಗಮ್ಮತ್ತು……ಒಂದೇ ಎರಡೇ!. ಇದೆಲ್ಲಾ ಬಾಲ್ಯದ ದಿನಗಳು ಮರಳಿ ಬರಬೇಕೆಂದರೆ ಮತ್ತು ಬದುಕಿನ ಇಂದಿನ ಜಂಜಡಗಳಿಗೆ ತುಸು ನೆಮ್ಮದಿ ಸಿಗಬೇಕೆಂದಿದ್ದರೆ, ವರ್ಷಕ್ಕೊಮ್ಮೆ ನಡೆಯುವ ಹಬ್ಬಕ್ಕೆ ಹೋಗಿಯೇ ಸವಿಯಬೇಕು ಎಂಬುದನ್ನು ಈ ಸಲ ನನ್ನೂರ ಹಬ್ಬ ನನಗೆ ಖಚಿತವಾಗಿಸಿತು.
ಮತ್ತಷ್ಟು ಓದು