‘ದುರ್ಗಾಸ್ತಮಾನ’ ಮತ್ತು ‘ಗಂಡುಗಲಿ ಮದಕರಿ ನಾಯಕ’
– ಶ್ಯಾಮಲ ಜನಾರ್ದನನ್
ದುರ್ಗಾಸ್ತಮಾನದ ಮುನ್ನುಡಿಯಲ್ಲೇ ಲೇಖಕ ದಿವಂಗತ ಶ್ರೀ ತರಾಸು ಬರೆದಿರುವ “ಚಿತ್ರದುರ್ಗ ಎಂದರೆ ತಮ್ಮ ಕರುಳಿಗೆ ಕಟ್ಟಿಕೊಂಡು ಬೆಳೆದ ಜೀವಂತ ವಸ್ತು – ಮದಕರಿ ನಾಯಕ ಒಬ್ಬ ಅರಸನಲ್ಲ ಜೀವಂತ ಆಪ್ತನೆಂಟ. ಚಿತ್ರದುರ್ಗ – ಮದಕರಿನಾಯಕ ಬೇರೆ ಬೇರೆಯಲ್ಲ ಒಂದೇ ಎಂಬ ಅವಿನಾಭಾವ, ದುರ್ಗ ಎಂದರೆ ಮದಕರಿ, ಮದಕರಿ ಎಂದರೆ ದುರ್ಗ ” ಎಂಬ ಮಾತುಗಳು ಅತ್ಯಂತ ಪ್ರಭಾವೀ ವಾಕ್ಯಗಳಾಗಿ, ನಾವು ಪುಸ್ತಕ ಓದಲು ತೊಡಗುವ ಮೊದಲೇ ನಮ್ಮ ಮನಸ್ಸನ್ನು ದುರ್ಗ-ಮದಕರಿ ಎಂಬ ಮೋಡಿಯಲ್ಲಿ ಸಿಲುಕಿಸುತ್ತದೆ.
ನಾಯಕವಂಶದಲ್ಲಿ ಹಲವಾರು ಮದಕರಿನಾಯಕರುಗಳಿದ್ದರೂ, ಜನತೆ ಈಗಲೂ ತುಂಬಾ ಅಭಿಮಾನದಿಂದ ದುರ್ಗ – ಮದಕರಿ ಎಂದರೆ ನೆನಪಿಸಿಕೊಳ್ಳುವುದು, ಈ ಕಥೆಯ ನಾಯಕ, ಕೊನೆಯ ಪಾಳೆಯಗಾರ / ಅರಸ ಚಿಕ್ಕ ಮದಕರಿನಾಯಕರನ್ನೇ !! ಈ ನಮ್ಮ ಅಭಿಮಾನಕ್ಕೆ ಕಾರಣನಾದ ಮದಕರಿನಾಯಕ ಅತಿ ಸಾಹಸಿ, ಅತಿಕ್ರೂರಿ, ಅತಿಮದಾಂಧ, ಅತಿಕಾಮಿ ಮತ್ತು ದೈವಕೃಪೆ, ಗುರುವಿನ ಅನುಗ್ರಹ ಎರಡನ್ನೂ ಕಳೆದುಕೊಂಡಿದ್ದ ನತದೃಷ್ಟ ಎಂದು ಚಿತ್ರದುರ್ಗ ಸಂಸ್ಥಾನದ ಚಪ್ಪೇ ಚಾವಡಿ ದಳವಾಯಿಗಳ ನೇರ ವಂಶಸ್ಥರಾದ, ಭದ್ರಾವತಿಯ ಉಕ್ಕಿನ ಕಾರ್ಖಾನೆಯ ನಿವೃತ್ತ ವರ್ಕ್ಸ್ ಮ್ಯಾನೇಜರ್ ಶ್ರೀ ಸಿ ಪರಶುರಾಮನಾಯಕ್ ರವರು ಹೇಳಿದ್ದನ್ನೂ, ಈ ಕೃತಿ “ದುರ್ಗಾಸ್ತಮಾನ” ಬರೆಯಲು ಸ್ಫೂರ್ತಿಯಾದದ್ದನ್ನೂ ಲೇಖಕರು ಸ್ಮರಿಸಿದ್ದಾರೆ.
ದುರ್ಗಾಸ್ತಮಾನವನ್ನು ಅನೇಕ ಸಂಶೋಧನೆಗಳು, ಮುದ್ರಣ ರೂಪದಲ್ಲಿ ಪ್ರಕಟವಾಗಿಲ್ಲದ ಶ್ರೀ ಚಿಕ್ಕೇರೂರು ಗೋವಿಂದಾಚಾರ್ಯರು ಬರೆದ ಹರಪನಹಳ್ಳಿ ಪಾಳೆಯಗಾರರ ಚರಿತ್ರೆಯ ಹಸ್ತಪ್ರತಿಯನ್ನು ಆಧರಿಸಿ ಬರೆಯಲಾಗಿದೆ. ಚಿತ್ರದುರ್ಗದ ಇತಿಹಾಸಕ್ಕೆ ಸಂಬಂಧಪಟ್ಟ ಮತ್ತು ಲಭ್ಯವಿದ್ದ ಎಲ್ಲಾ ದಾಖಲೆಗಳನ್ನೂ ಚೆನ್ನಾಗಿ ಅಧ್ಯಯನ ಮಾಡಿದ ನಂತರವೇ ಶ್ರೀ ತರಾಸುರವರು ಕಾದಂಬರಿ ಬರೆದಿದ್ದಾರೆ.
ತರಾಸುರವರು, ಅತ್ಯಂತ ಕಾಳಜಿಯಿಂದ, ಎಲ್ಲಾ ಅಧ್ಯಯನಗಳನ್ನೂ ಮಾಡಿ, ಸಂಗ್ರಹಕ್ಕೆಲ್ಲಾ ಆಧಾರ ತೋರಿಸಿಯೇ ದುರ್ಗಾಸ್ತಮಾನದಲ್ಲಿ ದೊರೆ ಮದಕರಿ ನಾಯಕನನ್ನು ಮೆಚ್ಚಬೇಕಾದ ಶೂರ ಎಂದೇ ಚಿತ್ರಿಸಿದ್ದಾರೆ. ದುರಂತ ಕಾದಂಬರಿಗೆ ಅರ್ಹನಾದ ಧೀರೋದ್ಧಾತ ನಾಯಕ ಎನ್ನುವಂತೆಯೂ ಚಿತ್ರಿಸಿದ್ದಾರೆ. ತನ್ನ ದುರ್ಗದ ಜನರೇ ತನಗೆ ದ್ರೋಹ ಮಾಡಿ, ಹೈದರಾಲಿಯ ಸೇನೆ ಕೋಟೆ ಮುತ್ತಿದಾಗ, ವೀರಾವೇಶದಿಂದ ಕಾದಾಡುತ್ತಾ, ಕೊನೆಯ ಉಸಿರು, ಒಡಲು ಬಿಡುವ ಮುನ್ನ ಮದಕರಿ, ಹೈದರನ ಧ್ವಜ ಸ್ಥಂಭವನ್ನು ಹೊಡೆದುರಿಳಿಸಿದ್ದನ್ನು ಓದುವಾಗ, ರೋಮಾಂಚನದಿಂದ ಮೈ ನವಿರೇಳುತ್ತದೆ. ಹೈದರಾಲಿಯ ಕಡೆಯವರ ಹತ್ತಾರು ಗುಂಡುಗಳು ಮದಕರಿಯನ್ನು ಹೊಡೆದುರುಳಿಸಿದಾಗ, ದುರ್ಗದ ಗಂಡುಗಲಿ ವೀರ ಮದಕರಿನಾಯಕ ತನ್ನ ಪ್ರಾಣಪ್ರಿಯವಾದ ದುರ್ಗದ ಮಣ್ಣಿಗೆ ರಕ್ತ ತರ್ಪಣ ನೀಡುತ್ತಾ, ಕೋಟೆಯ ಮೇಲಿಂದ ಕೆಳಗುರುಳುತ್ತಾನೆ. ಮತ್ತೇಳುವುದಿಲ್ಲ – ಅಲ್ಲಿಗೆ ದುರ್ಗದ ಇತಿಹಾಸದಲ್ಲಿ ಪ್ರಜ್ವಲಿಸುವ ಸೂರ್ಯ ಅಸ್ತನಾಗಿದ್ದ, ದುರ್ಗಾಸ್ತಮಾನವಾಗಿ ಹೋಗುತ್ತದೆ, ಆ ಕ್ಷಣ.
ಅನ್ಯಾಯವನ್ನು ಕಾಪಿಡುತಿರುವ ಕಾನೂನಿನಡಿಯಲ್ಲಿ ಮಹಿಳೆಯೆಷ್ಟು ಭದ್ರ?!!!

“ಬಲಾತ್ಕಾರ, ಮಾನಭಂಗ, ಮಾನಹರಣ, ರೇಪ್” ಈ ಶಬ್ದಗಳನ್ನು ಕೇಳುವಾಗಲೇ ಮೊಗ ಕಪ್ಪಿಡುತ್ತದೆ. ಮನ ಭಯಗೊಳ್ಳುತ್ತದೆ. ಆ ಕೃತ್ಯ ಎಸಗಿದ ವ್ಯಕ್ತಿಯ ಮೇಲೆ ಅಗಾಧ ರೋಷ, ತಿರಸ್ಕಾರ, ಅಸಹ್ಯ ಮೂಡುತ್ತದೆ ನಮಗೆ. ಆದರೆ ಈ ದುಷ್ಕೃತ್ಯಕ್ಕೆ ಒಳಗಾದ ವ್ಯಕ್ತಿಗೆ ಯಾವ ರೀತಿ ಅನಿಸಬಹುದು? ಆಕೆ ಹೇಗೆ ತನ್ನ ತಾನು ಸಂಭಾಳಿಸಿಕೊಳ್ಳುವಳು? ಮುಂದೆ ಆಕೆಯ ಬದುಕು ಅವಳನ್ನು ಎಲ್ಲಿಗೆ ಒಯ್ಯಬಹುದು? ಎನ್ನುವ ಚಿಂತನೆಗೆ ಹೋಗುವವರು ಕಡಿಮೆಯೇ. ಆ ಕ್ಷಣದ ಕರುಣೆ, ಅನುಭೂತಿ, ಅಯ್ಯೋ ಪಾಪ ಎನ್ನುವ ಅನುಕಂಪವನ್ನಷ್ಟೇ ತೋರಿ, ಆ ಪಾಪಿಗೆ ಸರಿಯಾಗಿ ಶಿಕ್ಷೆಯಾಗಲೆಂದು ಹಾರೈಸಿ ಮರೆಯುತ್ತೇವೆ. ಆದರೆ ಅಂತಹ ಒಂದು ಮಹಾಪಾಪವನ್ನು ಎಸಗಿದ ವ್ಯಕ್ತಿಗೆ ಸರಿಯಾದ ಶಿಕ್ಷೆಯಾಗಿದೆಯೋ ಇಲ್ಲವೋ?! ಇಲ್ಲದಿದ್ದರೆ ಹೇಗೆ ಶಿಕ್ಷೆ ಆಗುವಂತೆ ಮಾಡಬೇಕು? ಎಂಬುದನ್ನು ನಾವು ಯೋಚಿಸುವುದೇ ಇಲ್ಲ. ಆ ಹೊತ್ತಿನ ಬಿಸಿ ಸುದ್ದಿಯನ್ನಷ್ಟೇ “Breaking News” ಆಗಿ ಪ್ರಸಾರಮಾಡುವ ಮಾಧ್ಯಮ, ತದನಂತರದ ಬೆಳವಣಿಗೆಯ ಬೆನ್ನತ್ತಿ ಹೋಗುವುದೂ ಇಲ್ಲ. ಆಘಾತಕ್ಕೊಳಗಾದ ಮಹಿಳೆಗೆ ತಮ್ಮ ಬೆಂಬಲ ಹಾಗೂ ಮಾನಸಿಕ ಶಕ್ತಿಯನ್ನು ನೀಡಿ, ಆ ಮೂಲಕ ಪಾಪಿಗೆ ಆಕೆಯೇ ಶಿಕ್ಷೆ ನೀಡುವಂತೆ ಮಾಡಲು ಸಹಕರಿಸುವ ನಿಟ್ಟಿನಲ್ಲಿ ನಮ್ಮ ಸಮಾಜವಾಗಲೀ, ಕಾನೂನಾಗಲೀ, ಕನಿಷ್ಠ ಆಕೆಯ ಮನೆಯವರಾಗಲೀ ಮುಂದುವರಿಯುವುದೇ ಇಲ್ಲ!