ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 9, 2011

1

ಕರಾವಳಿಗರನ್ನು ಬಲಿ ತೆಗೆದುಕೊಳ್ಳಲಿರುವ ನೇತ್ರಾವತಿ ನದಿ ತಿರುವು ಯೋಜನೆ…!

‍ನಿಲುಮೆ ಮೂಲಕ

-ಶಂಶೀರ್, ಬುಡೋಳಿ

ಯಾರಾದರೂ ಊಹಿಸಿರಬಹುದೇ?

ತಣ್ಣನೆಯ ಹಾದಿಯಲ್ಲಿ ಹರಿಯುತ್ತಿದ್ದ ನೇತ್ರಾವತಿ ನದಿಗೋಸ್ಕರ ಒಂದೊಮ್ಮೆ ಹೋರಾಟ ನಡೆಸುವ ಬಗ್ಗೆ ನಮ್ಮ ಹಿರಿಯರು ಕನಸು ಕೂಡಾ ಕಂಡಿರಬಹುದೇ? ಇಲ್ಲ. ಸಾಧ್ಯವೇ ಇಲ್ಲ. ಯಾಕೆಂದರೆ ನದಿಯ ಮೂಲ ಶೋಧಿಸಬೇಡ ಎನ್ನುವ ಮಾತನ್ನು ಅವರು ನಂಬಿದ್ದರು. ಹಾಗಾಗಿ ಅವರು ಈ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಂಡಿರಲಿಲ್ಲ.ಪಶ್ಚಿಮ ಘಟ್ಟದ ಉಳಿವಿಗಾಗಿ ನಡೆಸುತ್ತಿರುವ ಹೋರಾಟದ ನಂತರ ಕರಾವಳಿಗರು ನಡೆಸುತ್ತಿರುವ ನೇತ್ರಾವತಿ ನದಿ ಉಳಿಸುವ ಹೋರಾಟ ಇವತ್ತಿಗೂ ನಡೆಯುತ್ತಲೇ ಇದೆ.ಮೊನ್ನೆಯ ವಿಶ್ವ ತುಳು ಸಮ್ಮೇಳನದಲ್ಲೂ ಸಹ ಈ ಬಗ್ಗೆ ಚರ್ಚೆ ಉಂಟಾಗಿತ್ತು. ಇತ್ತೀಚಿಗೆ ಪರಮಶಿವಯ್ಯನವರು ಈ ಬಗ್ಗೆ ಚಕಾರವೆತ್ತಿದ್ದು ತನ್ನ ವರದಿ ಅಸಮರ್ಪಕವಾಗಿದ್ಜದರೆ ತಾನು ಯಾವ ಶಿಕ್ಷಾರ್ಹ ಕ್ರಮಕ್ಕೂ ಬದ್ಧ ಎಂದು ಹೇಳಿಕೆ ಕೊಟ್ಟಿದ್ದಾರೆ. ಆದರೆ ಸರಕಾರ ಮಾತ್ರ ತೆಪ್ಪಗಾಗಿದೆ. ವಿಜ್ಞಾನ-ತಂತ್ರಜ್ಞಾನ,ಭ್ರಷ್ಟ ರಾಜಕಾರಣ,ಬಂಡವಾಳಶಾಹಿತ್ವದ ವಿರುದ್ಧದ ಹೋರಾಟದ ತರಹೇ ಈ ನೇತ್ರಾವತಿ ನದಿ ಉಳಿಸುವ ಹೋರಾಟ. ಈ ಹೋರಾಟಕ್ಕೆ ಪ್ರಗತಿಪರ ಸಂಘಟನೆಗಳು ಮಾತ್ರ ಬೆಂಬಲ ಕೊಡುತ್ತಿರುವುದರಿಂದ ಬಲಪಂಥೀಯ ಎನ್ನಿಸುವ ಸಂಘಟನೆಗಳ ವಿರುದ್ಧದ ಆಟದಿಂದ ಇವತ್ತು ಈ ಹೋರಾಟ ಮುಂದುವರಿಯುತ್ತಲೇ ಇದೆ. ಹಾಗಾಗಿ ಪಕ್ಷಾತೀತವಾದ ಸ್ವತಂತ್ರ ಸಂಘಟನೆಗಳು, ಸೇವಾ ಸಂಸ್ಥೆಗಳು ಮಾತ್ರ ಈ ಹೋರಾಟದಲ್ಲಿ ಭಾಗಿಯಾಗಿರುವುದನ್ನು ನಾವು ನೋಡ್ತಾ ಇದ್ದೇವೆ. ಉದಾಹರಣೆಗೆ ಭಾರತೀಯ ಕಿಸಾನ್ ಸಂಘ,ನಾಗರಿಕ ಸೇವಾ ಟ್ರಸ್ಟ್ ಮುಂತಾದ ಸಂಘಟನೆಗಳನ್ನ ಗುರುತಿಸಬಹುದು. ೨೦೦೯ಸಾಗಿದ್ದರೂ ಈ ವರ್ಷದಲ್ಲಿ ನೇತ್ರಾವತಿ ನದಿಯ ಹರಿವನ್ನು ನಿಲ್ಲಿಸಿ ಬೆಂಗಳೂರಿನಲ್ಲಿ ನದಿ ತಿರುಗಿಸುವ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ.

ಕರಾವಳಿಗರ ಕೊರತೆಯೇನೆಂದರೆ, ಸಮೃದ್ಧವಾಗಿ ಹರಿಯುತ್ತಿರುವ ನದಿಯನ್ನು ಸಮರ್ಥವಾಗಿ ಉಪಯೋಗಿಸದ ಕೊರತೆಯ ಲಾಭ ಗಳಿಸಲು ಪ್ರಯತ್ನಿಸಲಾಗುತ್ತಿದೆ.ಗ್ರಾಮೀಣ ಪ್ರದೇಶದಲ್ಲಿ ಹರಿಯುತ್ತಿರುವಂತಹ ನದಿಗೆ ಅಡ್ಡಲಾಗಿ ಅಣೆಕಟ್ಟನ್ನು , ನದಿ ನೀರಿನ ನಿರ್ವಹಣೆ ಬಗ್ಗೆ ಇಲ್ಲಿನ ಬುದ್ದಿವಮತ ಗ್ರಾಮೀಣ ಜನತೆಯ ಯೋಚನೆಯ ಲಾಭವನ್ನು ಬಳಸಿಕೊಳ್ಳುವಮತಹ ಅವಕಾಶ ಅಧಿಕವಿದ್ದರೂ ಸಹ ಕಾರ್ಯಗತಗೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಇವತ್ತು ನೇತ್ರಾವತಿ ಬೇರೆಯವರ ಪಾಲಾಗುತ್ತಿದೆ.ಈ ಪ್ರಯತ್ನವನ್ನು ಮೊದಲೇ ಕರಾವಳಿಗರು ಮಾಡುತ್ತಿದ್ದರೆ ಇವತ್ತು ನದಿ ತಿರುಗಿಸುವ ಹಂತಕ್ಕೆ ಬರುತ್ತಿರಲಿಲ್ಲ. ಪಶ್ಚಿಮ ಘಟ್ಟದ ಎಳನೀರು ಘಾಟಿಯಲ್ಲಿ ಹುಟ್ಟಿ ನೂರಾರು ಉಪನದಿ ,ತೊರೆಗಳನ್ನು ಮಡಿಲಿಲ್ಲಿರಿಸಿಕೊಂಡು ಹರಿಯುತ್ತಿರುವ ನೇತ್ರಾವತಿ ನದಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ,ಪುತ್ತೂರು,ಬಂಟ್ವಾಳ, ಮಂಗಳೂರು ಇತ್ಯಾದಿ ತಾಲೂಕುಗಳಲ್ಲಿ ಹರಿಯುತ್ತಿದೆ.ಈ ನದಿಯನ್ನೇ ಆಶ್ರಯಿಸಿ ಇಲ್ಲಿನ ವಿವಿಧ ತಾಲೂಕಿನ ಕೃಷಿಕರು,ಕೃಷಿ ಕೂಲಿ ಕಾರ್ಮಿಕರು,ಮೀನುಗಾರರು ತಮ್ಮ ಬದುಕನ್ನು ರೂಪಿಸಿಕೊಂಡಿದ್ದು,ಮಂಗಳೂರು ನಿವಾಸಿಗಳ ಕುಡಿಯುವ ನೀರಿನ ಮೂಲ ಇದೇ ನೇತ್ರಾವತಿ.ದ.ಕ.ಜಿಲ್ಲೆಯ ಸುಮಾರು ೧೦ ಲಕ್ಷ ಕೃಷಿಕರ ೩.೫೦ಲಕ್ಷ ಎಕರೆ ಕೃಷಿ ಪ್ರದೇಶ ಈ ನದಿ ನೀರನ್ನು ಅವಲಂಬಿಸಿದೆ.

ನೇತ್ರಾವತಿ ಜಲಾನಯನ ಪ್ರದೇಶ ಪಶ್ಚಿಮ ಘಟ್ಟದ ಭಾಗವಾಗಿದ್ದು, ವಿಶ್ವದ ಹದಿನೆಂಟು ಜೀವ ವೈವಿಧ್ಯ ಸಂರಕ್ಷಣಾ ಪ್ರದೇಶಗಳಲ್ಲೊಂದಾಗಿದೆ.ಅಪಾಯದ ಹಂಚಿನಲ್ಲಿರುವ ಹುಲಿ,ಸಿಂಗಲೀಕ, ಕುಲಾವಿ ಹಕ್ಕಿಗಳ ನೆಲೆಬೀಡಾಗಿದೆ. ಕರ್ನಾಟಕ ಸರಕಾರದ ನೀರಾನರಿ ಇಲಾಖೆಯು ನೇತ್ರಾವತಿ ನದಿಯನ್ನು ಪೂರ್ವಾಭಿಮುಖವಾಗಿ ತಿರುಗಿಸಿ ಕಾಲುವೆಗಳ ಮೂಲಕ ಒಯ್ದು ಪೂರ್ವ ಮತ್ತು ಮಧ್ಯ ಕರ್ನಾಟಕದ ಜಿಲ್ಲೆಗಳ ಜನತೆಗೆ ಕುಡಿಯುವ ನೀರೊದಗಿಸಲು ಹೊರಟಿರುವುದು ಹುಚ್ಚಾಟವಾಗಿದೆ.ಈ ಮೂಲಕ ರಾಜ್ಯ ಸರಕಾರ ದ.ಕ.ಜಿಲ್ಲೆಯ ಜನತೆಯ ಗೋರಿ ಕಟ್ಟಲು ಹೊರಟಿದೆ.ನೇತ್ರಾವತಿಯನ್ನು ಪೂರ್ವಾಭಿಮುಖವಾಗಿ ತಿರುಗಿಸುವುದರಿಂದ ಮಳೆಗಾಲದಲ್ಲಿ ಅನಿರೀಕ್ಷಿತವಾಗಿ ಕಾಣುವ ನೆರೆಯನ್ನು ತಡೆಗಟ್ಟಲು ಸಾಧ್ಯವೆನ್ನುವ ಮಾತಿನಲ್ಲಿ ಎಷ್ಟು ಸತ್ಯಾಂಶವಿದೆ?ನೆರೆಯಂತಹ ಭೀಕರತೆಯನ್ನು ನೋಡಿರುವುದು ಉತ್ತರ ಕರ್ನಾಟಕವಲ್ಲದೇ ದಕ್ಷಿಣ ಕನ್ನಡವಲ್ಲ. ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನಲ್ಲಿರುವ ಮಾಪಕದ ಪ್ರಕಾರ ನೇತ್ರಾವಚಿ ನದಿಯಿಂದ ಪ್ರತಿ ವರ್ಷ ೪೬೪.೬೨ ಅಂದರೆ ನೂರು ಕೋಟಿ ಘನ ಅಡಿ ನೀರು ತಡೆರಹಿತವಾಗಿ ಹರಿದು ಹೆಚ್ಚುವರಿ ಸಮುದ್ರ ಪಾಲಾಗುತ್ತಿದೆ.ಈ ಪೈಕಿ ೧೪೨.೪೬ ಟಿ‌ಎಂಸಿ ನೀರನ್ನು ಪಶ್ಚಿಮ ಘಟ್ಟದಲ್ಲಿ ಕಾಲುವೆಗಳನ್ನು ನಿರ್ಮಾಣ ಮಾಡಿ ಆ ಮೂಲಕ ಬಯಲು ಸೀಮೆಯ ೫೭ ತಾಲೂಕುಗಳಿಗೆ ನೀರನ್ನು ಒಯ್ಯಲಾಗುತ್ತದೆ.

ಶ್ರೀ ಪರಮಶಿವಯ್ಯ ಸೇರಿರುವ ಒಟ್ಟು ಒಂಭತ್ತು ಮಂದಿ ನಿವೃತ್ತ ಎಂಜಿನಿಯರ್‌ಗಳ ಸಮಿತಿಯ ವರದಿ ಹೇಳುವುದೇನೆಂದರೆ, ನೇತ್ರಾವತಿಯ ಉಗಮ ಪ್ರದೇಶದಲ್ಲಿ ಮಳೆಗಾಲದಲ್ಲಿ ಬೀಳುವ ಮಳೆ ನೀರನ್ನು ಸಂಗ್ರಹಿಸಿ ಗುರುತ್ವಾಕರ್ಷಣ ಶಕ್ತಿಯನ್ನು ಬಳಸಿಕೊಂಡು ಕಾಲುವೆ ಮೂಲಕ ಎರಡು ಹಂತಗಳಲ್ಲಿ ನೀರು ಸಾಗಿಸುವ ಯೋಜನೆ ಇದಾಗಿದೆ. ಮೊದಲ ಹಂತದಲ್ಲಿ ನೀರನ್ನು ಪಶ್ಚಿಮದಿಂದ ಪೂರ್ವಕ್ಕೆ ಹರಿಸಿ ಒಟ್ಟು ೯೦.೭೩ ಟಿ‌ಎಂಸಿ ನೀರನ್ನು ಬಯಲು ಸೀಮೆಯ ಏಳು ಜಿಲ್ಲೆಗಳ ನಾಲ್ವತ್ತು ಬರಪೀಡಿತ ತಾಲೂಕಗಳಿಗೆ ಸಾಗಿಸಲಾಗುತ್ತದೆ. ಚಿಕ್ಕಮಗಳೂರು, ಹಾಸನ, ಮಂಡ್ಯ, ತುಮಕೂರು, ಬೆಂಗಳೂರು ನಗರ, ಕೋಲಾರದ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ, ಕನಕಪುರ, ರಾಮನಗರ ಹಾಗೂ ಚನ್ನಪಟ್ಟಣ ತಾಲೂಕುಗಳಿಗೆ ನೇರವಾಗಿ ಹಾಗೂ ದೇವನಹಳ್ಳಿ, ದೊಡ್ಡ ಬಳ್ಳಾಪುರ, ಹೊಸಕೋಟೆ, ನೆಲಮಂಗಲ ತಾಲೂಕುಗಳಿಗೆ ಪೈಪ್‌ಲೈನ್ ಮೂಲಕ ಸಾಗಿಸಲಾಗುತ್ತದೆ. ಇದರಲ್ಲಿ ಒಟ್ಟು ೮೬೮೪ ಹಳ್ಳಿಗಳಿಗೆ ನೀರೊದಗಮೆಯಾಗಲಿದೆ.ಇದರಿಂದ ೧೦೮ ಲಕ್ಷ ಜನರಿಗೆ ೧೦೨ ಲಕ್ಷ ಜಾನುವಾರುಗಳಿಗೆ ಪ್ರಯೋಜನವಾಗಿದೆ ಎನ್ನಲಾಗಿದೆ.

ಈ ಯೋಜನೆಯಡಿಯಲ್ಲಿ ನೀರು ಸಾಗಿಸಲು ಎರಡು ಪ್ರಮುಖ ಕಾಲುವೆಗಳನ್ನು ೩೮ ಜಲಾಶಯಗಳನ್ನು ಮತ್ತು ೮೬೯೭ ಕೆರೆಗಳನ್ನು ನಿರ್ಮಿಸಿ ಇವುಗಳಿಗೆ ವರ್ಷದಲ್ಲಿ ೨ ಬಾರಿ ನೀರು ಸರಬರಾಜು ಮಾಡಲಾಗುವುದು. ಪರಮಶಿವಯ್ಯ ವರದಿ ಹೇಳುವುದೇನೆಂದರೆ, ಈವರೆಗೆ ರಾಜ್ಯದಲ್ಲಿ ಕೈಗೆತ್ತಿಕೊಂಡ ಎಲ್ಲಾ ಅಭಿವೃದ್ಧಿ ಯೋಜನೆಗಳಿಗಿಂತಲೂ ಈ ಯೋಜನೆ ಭಿನ್ನವಾದುದು. ಪರಿಸರಕ್ಕೆ ಮತ್ತು ಜನಸಾಮಾನ್ಯರಿಗೆ ಯಾವುದೇ ಸಮಸ್ಯೆ ಇದರಿಂದ ಬರುವುದಿಲ್ಲವೆನ್ನುತ್ತದೆ. ಸಮುದ್ರ ಮಟ್ಟದಿಂದ ೯೨೨ ಮೀ.ಎತ್ತರದಲ್ಲಿ ಒಂದು,೮೫೦ ಮೀ.ಎತ್ತರದಲ್ಲಿ ಇನೊಂದು ಒಟ್ಟು ಎರಡು ಹಾರದ ಕಾಲುವೆಗಳ ಮೂಲಕ ನೀರನ್ನು ಹಾಯಿಸಿ ೩೮ ಜಲಾಶಯಗಳನ್ನು ನಿರ್ಮಿಸುವ ಉದ್ದೇಶ ಹೊಂದಿದೆ. ೧೨,೦೦೦ಕೋಟಿ ರೂ. ಈ ಯೋಜನೆಗೆ ವೆಚ್ಚವಾಗಲಿದೆ. ೨೦೦೩ರಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದ್ದು, ಯೋಜನ ಪ್ರದೇಶದ ಸೆಟೆಲೈಟ್ ಮೂಲಕ ಸಮೀಕ್ಷೆಗೆ ರಾಜ್ಯ ಸರಕಾರ ೧೫ ಕೋಟಿ ರೂ.ಗಳಿಗೆ ಮಂಜೂರಾತಿ ನೀಡಿದೆ ಎಂದು ಪ್ರಸ್ತುತ ೫ ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದೆಯೆಂದು ಹೇಳಲಾಗಿದೆ.

ಉಡುಪಿ ಜಿಲ್ಲೆಯ ಕಾರ್ಕಳದ ಗಡಿಕಲ್ಲು ಗುಡ್ಡದಿಂದ ಪ್ರಾರಂಭಗೊಳ್ಳುವ ನೇತ್ರಾವತಿ ನದಿ ತಿರುವು ಯೋಜನೆಯು ಪಶ್ಚಿಮ ಘಟ್ಟದ ಹೃದಯ ಭಾಗದಲ್ಲಿ ಮಾತ್ರ ಹಾದುಹೋಗುವ ಮುಖ್ಯ ಕಾಲುವೆ ೪೧೯ ಕಿ.ಮೀ ದೂರಕ್ಕೆ ಸಮುದ್ರ ಮಟ್ಟದಿಂದ ೯೨೨ ಮೀ.ಎತ್ತರದಲ್ಲಿ ಸಾಗಲಿದೆ. ಸುಬ್ರಹ್ಮಣ್ಯ ಬೆಟ್ಟ ಸಮೀಪದಿಂದ ಹೊರಡುವ ಇನ್ನೊಂದು ಕಾಲುವೆ ಶಿಶಿಲದ ಬಳಿ ಮುಖ್ಯ ಕಾಲುವೆಯನ್ನು ಸಂಧಿಸುತ್ತದೆ. ಇಲ್ಲಿನ ೨೬ ಹಳ್ಳಗಳ ನೀರು ಹಾರದ ಕಾಲುವೆಯ ಮೂಲಕ ಹೇಮಾವತಿ ನದಿಯತ್ತ ಹರಿಯಲಿದೆ. ಈ ಮಧ್ಯೆ ೨೭ ಜಲಾಶಯಗಳನ್ನು ನಿರ್ಮಿಸಿ ನೀರು ಸಂಗ್ರಹಿಸಲಾಗುತ್ತದೆ. ಇದು ವರದಿ ಹೇಳುವ ಸಂಗತಿ. ಎರಡೂ ಕಡೆಯಿಂದ ಬರುವ ಕಾಲುವೆಗಳು ಸಕಲೇಶಪುರದ ಬಳಿ ಒಂದೇ ಕಡೆಗೆ ಬುರತ್ತವೆ. ಸಕಲೇಶಪುರದಿಂದ ಸುಮಾರು ೧೬ ಕಿ.ಮೀ.ದೂರದಲ್ಲಿ ಕಾಲುವೆಗೆ ಅಡ್ಡ ಬರುವ ಹೇಮಾವತಿ ನದಿಯ ಮೇಲೆ ಬ್ರಿಜ್ ಕಟ್ಟಿ ಬೃಹತ್ ಗಾತ್ರದ ಸಿಮೆಂಟ್ ಪೈಪ್‌ಗಳ ಮೂಲಕ ನೇತ್ರಾವತಿ ನದಿ ನೀರನ್ನು ದಾಟಿಸಿ ಕೊಂಡೊಯ್ಯಲಾಗುತ್ತದೆ.

ವಿವಾದಾಸ್ಪದವಾಗಿರುವ ಈ ಯೋಜನೆಯ ಕುರಿತು ವಿವಿಧ ಎಂಜಿನಿಯರುಗಳು ಟೀಕೆಗಳನ್ನು ವ್ಯಕ್ತಪಡಿಸಿದರೂ ಇವತ್ತು ಈ ಯೋಜನೆ ಹಲವು ವಿವಾದಗಳು ಸುತ್ತಾ ತಿರುಗುತ್ತಿದೆ ಎನ್ನಬಹುದು. ಇಲಾಖೆಯ ಬಹುತೇಕ ಮಂದಿಗೆ ಈ ಯೋಜನೆಯ ಗಂಧಗಾಳಿಯೂ ಗೊತ್ತಿಲ್ಲ ಎನ್ನುವ ಪರಮಶಿವಯ್ಯನವರನ್ನು ಏನೆನ್ನಬೇಕು? ಮಾತ್ರವಲ್ಲ, ತಾವೇ ನೇತ್ರಾವತಿ ಯೋಜನೆಯನ್ನು ರೂಪಿಸಿದ್ದು ಎಂದು ಜಂಭ ಕೊಚ್ಚಿಕೊಳ್ಳುವ ಇವರು ನಾನು ತಯಾರಿಸಿದ ಯೋಜನೆಗಳಲ್ಲಿ ಇದು ಅತ್ಯತ್ತಮವೆಂದು ತಮ್ಮಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಿದ್ದಾರೆ. ಈ ಯೋಜನೆಯಿಂದ ಪ್ರಾಕೃತಿಕ ಅಸಮತೋಲನಯುಂಟಾಗುತ್ತದೆ. ಬಹಳಷ್ಟು ಕೃಷಿ ಭೂಮಿಗಳು ಮಾತ್ರವಲ್ಲ, ದಕ್ಷಿಣ ಕನ್ನಡ ಕೃಷಿಕರು ನಿರ್ಗತಿಕರಾಗುತ್ತಾರೆ ಎಂಬುದು ಸತ್ಯ. ಆದರೆ ಪರಮಶಿವಯ್ಯ ವರದಿಗೆ ಇದು ಮುಖ್ಯವೆನಿಸುವುದಿಲ್ಲ. ಇದರ ಬದಲಿಗೆ ಮುಳುಗಡೆಯಾಗುವ ಬಹುತೇಕ ಕೃಷಿ ಪ್ರದೇಶಗಳು ಅರಣ್ಯ‌ಅತಿಕ್ರಮಣ ಪ್ರದೇಶ ಎನ್ನುತ್ತದೆ.ಇದು ಜನಪರವೇ?

ಮತ್ತೊಂದು ಆಘಾತಕಾರಿ ಸಂಗತಿಯೆಂದರೆ, ಅಸಂಖ್ಯ ಪ್ರಮಾಣದಲ್ಲಿ ಪಶ್ಚಿಘಟ್ಟ ಪ್ರದೇಶದಲ್ಲಿ ಜೀವ ಸಂಕುಲ ನಾಶವಾಗುತ್ತದೆ. ಯೋಜನಾ ಪ್ರದೇಶವಾದ ಗಡಿಕಲ್ಲು ಗುಡ್ಡ, ಬಲ್ಲಾಳರಾಯನ ದುರ್ಗ, ಕುದುರೆ ಮುಖ, ಎಳನೀರು ಘಾಟಿ, ಬಂಡಾಜೆ, ಚಾರ್ಮಾಡಿ, ಎರಂಕಲ್ಲು, ಮಾಣಿಕಲ್ಲು, ಮಿಂಚುಕಲ್ಲು,ಬಾಂಜಾರು ಮಲೆ,ಇಳಿಮಲೆ, ಅಂಬಟೆ ಮಲೆ, ಬಾರಿಮಲೆ,ಅಮೇದಿಕಲ್ಲು, ಅಣಿಕಲ್ಲು ನಿಶಾನೆ ಗುಡ್ಡ,ಬೈರಾಪುರ ಘಾಟಿ, ಎಡಕುಮೇರಿ,ಬಿಸಿಲೆಘಾಟಿ, ಕುಮಾರ ಪರ್ವತ ಮುಂತಾದ ಪಶ್ಚಿಮ ಘಟ್ಟದ ದಟ್ಟ ಅರಣ್ಯ ಪ್ರದೇಶದಲ್ಲಿ ಅಪಾಯಕಾರಿ ಯಂತ್ರಗಳು ಕಾಮಗಾರಿ ಮಾಡುವಾಗ ಚಲಿಸುವಾಗ ಆಗಾಧ ಪ್ರಮಾಣದಲ್ಲಿ ಕಾಡು ನಾಶವಾಗುತ್ತದೆ. ಈ ಸಂದರ್ಭದಲ್ಲಿ ಉಂಟಾಗುವ ಮಣ್ಣು ಹರಿದು ಬಂದು ನದಿಗೆ ಸೇರುವುದರಿಂದ ಶಾಶ್ವತವಾಗಿ ನೇತ್ರಾವತಿಯ ನದಿ ಮೂಲವೇ ತಪ್ಪಿ ಹೋಗುವ ಭೀಕರತೆಯಿದ್ದರೂ ರಾಜ್ಯ ಸರಕಾರಕ್ಕೆ ಇದು ಮುಖ್ಯವೆನಿಸಲ್ಲ. ಮಾತ್ರವಲ್ಲ, ಯೋಜನಾ ಪ್ರದೇಶದಲ್ಲಿ ಬರುವ ೫೫೫೦ ಹೆಕ್ಟೇರ್ ದಟ್ಟಕಾಡು ನೀರಿನಲ್ಲಿ ಮುಳುಗಡೆಯಾಗುತ್ತದೆ. ಇಷ್ಟೇ ಅಲ್ಲ, ಈ ಪ್ರದೇಶದ ಅನೇಕ ಗಿರಿಜನರ, ಅರಣ್ಯವಾಸಿಗಳ ಕೃಷಿಭೂಮಿ ಮುಳುಗಡೆಯಾಗಿ ಇವರ ಬದುಕನ್ನೇ ಕಸಿದುಕೊಳ್ಳುತ್ತದೆ.

ಹೀಗೆ ಭಾದಕಗಳ ಪಟ್ಟಿ ಉದ್ದುದ್ದ ಬೆಳೆಯುತ್ತಾ ಸಾಗುತ್ತದೆ.ಸಮುದ್ರಕ್ಕೆ ನೈಸರ್ಗಿಕವಾಗಿ ಹರಿಯುವ ಲವಣಾಂಶ,ಇತರ ಪೋಷಕಾಂಶಗಳು ಕಡಿಮೆಯಾಗಿ ಅಸಂಖ್ಯಾತ ಮೀನುಗಳು ಜಲಚರಗಳು ನಾಶವಾಗುತ್ತದೆ. ಮಳೆಗಾಲದ ನೀರಿನ ಪೋಷಕಾಂಶಗಳು ಸಮುದ್ರ ಸೇರದಿದ್ದರೆ ಮೀನುಗಳು ಬದುಕಲಾರವು.ನದಿಗಳಿಂದ ಕೊಚ್ಚಿಕೊಂಡು ಬರುವ ಪೋಷಕಾಂಶಗಳು ಕರಾವಳಿಯ ಕೃಷಿಕರಿಗೂ ಅನುಕೂಲ. ಆದರೆ ಈ ಬಗ್ಗೆ ಪರಮಶಿವಯ್ಯ ವರದಿ ಹಾನಿಯೇ ಇಲ್ಲವೆನ್ನುತ್ತದೆ. ಹೆಚ್ಚುವರಿ ನೀರಿನ ಹರಿವು ಇದೆ ಎಂದಾದರೆ ಬೇಸಗೆಯಲ್ಲಿ ಈ ನದಿ ಪಾತ್ರದಲ್ಲಿ ನೀರಿನ ಸಮಸ್ಯೆ ಯಾಕೆ ಉಂಟಾಗುತ್ತದೆ? ಫೆಬ್ರವರಿಯಿಂದ ಜೂನ್ ತನಕ ಕೃಷಿಕರು ಪಂಪ್‌ಸೆಟ್ ಮೂಲಕ ನದಿ ನೀರೆತ್ತಬಾರದೆಂದು ನೀರಾವರಿ ಇಲಾಖೆ ಜಿಲ್ಲೆಯ ರೈತರಿಗೆ ಶರ್ತ ವಿಧಿಸುತ್ತದೆ. ಈ ಸಮಯದಲ್ಲಿ ಕೃಷಿಕರು ನೀರೆತ್ತುವುದರಿಂದ ಮಂಗಳೂರು ನಗರ ವಾಸಿಗಳಿಗೆ ಕುಡಿಯಲು ನೀರಿನ ಕೊರತೆಯಾಗಲು ಇದೇ ಕಾರಣವಾಗಿದೆ.

೧೨,೦೦೦ಕೋಟಿ ರೂ.ಗಳ ವೆಚ್ಚದ ಈ ಯೋಜನೆಯ ವರದಿಯನ್ನು ಸರಕಾರಕ್ಕೆ ನೀಡಿದ ಕೇವಲ ೨೨ದಿನಗಳಲ್ಲಿಯೇ ಸರಕಾರ ಅದಕ್ಕೆ ಸಮಿತಿ ರೂಪಿಸಿ ಅಧ್ಯಯನ ಮಾಡಲು ಅನುಮತಿ ನೀಡಬೇಕಿದ್ದರೆ ಈ ಯೋಜನೆಯ ಹಿಂದಿರುವ ಪ್ರಭಾ ಶಕ್ತಿಗಳ ಕೈವಾಡವಿದೆಯೆಂದು ಸತ. ೯ ಮಂದಿ ಸದಸ್ಯರಿರುವ ಈ ಸಮಿತಿಯಲ್ಲಿ ೬ ಜನರು ನಿವೃತ್ತ ಎಂಜಿನಿಯರುಗಳಿದ್ದಾರೆ. ಮತ್ತೆ ಮೂರು ಮಂದಿ ನಾಮ ನಿರ್ದೇಶಿತ ಸದಸ್ಯರಾಗಿದ್ದಾರೆ. ಯಾವೊಬ್ಬನೂ ಭೂಗರ್ಭಶಾಸ್ತ್ರಜ್ಞರಾಗಲಿ ಅಥವಾ ಪರಿಸರ ತಜ್ಞರಿರದ ಈ ಸಮಿತಿ ಸಲ್ಲಿಸಿದ ವರದಿ ಅವೈಜ್ಞಾನಿಕ, ಅವ್ಯವಹಾರಿಕದಿಂದ ಕೂಡಿರುವ ವರದಿಗೆ ರಾಜ್ಯ ಸರಕಾರ ಒಮ್ಮತ ನೀಡಿರುವುದು ನ್ಯಾಯಸಮ್ಮತವಲ್ಲ. ಯಾಕೆಂದರೆ ಈ ಸಮಿತಿಯಲ್ಲಿ ವಸ್ತುಸ್ಥಿತಿಯೆ ಇಲ್ಲ.

೨೩-೩-೨೦೦೧ರಂದು ಕರ್ನಾಟಕ ಸರಕಾರದ ನೀರಾವರಿ ಇಲಾಖೆಗೆ ಎರಡು ಪ್ರತ್ಯೇಕ ಯೋಜನಾ ಪ್ರಸ್ತಾವಗಳನ್ನು ಜಿ.ಎಸ್.ಪರಮಶಿವಯ್ಯ ಮುಖ್ಯಸ್ಥರಾಗಿರುವ ೯ ಮಂದಿ ಎಂಜಿನಿಯರುಗಳ ಸಮಿತಿ ಸಲ್ಲಿಸಿತು. ೧ನೇ ಪ್ರಸ್ತಾಪದಲ್ಲಿ ೭ ಜಿಲ್ಲೆಗಳ ೪೦ ಬರಪೀಡಿತ ತಾಲೂಕುಗಳಿಗೆ ಕುಡಿಯುವ ನೀರು, ಜಾನುವಾರು ಮತ್ತು ಕೃಷಿಗೆ ಒಟ್ಟು ೯೦.೭೩ ಟಿ‌ಎಂಸಿ ನೀರನ್ನು ಒದಗಿಸುವುದು.ಅಂದರೆ ಸಮುದ್ರ ಮಟ್ಟದಿಂದ ೯೩೦ ಮೀ.ಎತ್ತರದಲ್ಲಿ ಪಶ್ಚಿಮ ಘಟ್ಟದ ಗಡಿಗಲ್ಲು ಗುಡ್ಡ ,ಕೊಲ್ಕಲ್ಲು ಬೆಟ್ಚ,ಕುದುರೆಮುಖ,ಏಳನೀರು,ಚಾರ್ಮಾಡಿ, ನೆರಿಯ ಮೂಲಕ ಶಿಶಿಲ -ಶಿರಾಡಿ ಎತ್ತಿನ ಹೊಳೆ ಪರ್ವತದ ಸಕಲೇಶಪುರದ ನಿಶಾನೆಗುಡ್ಡೆ ತನಕ ೧೫೦ ಕಿ.ಮೀ. ಉದ್ದದ ಕಿ.ಮೀ.ಗೆ ೭ ಅಂಚು ಇಳ‌ಇಜಾರಿನ ಕಾಲುವೆ ನಿರ್ಮಾಣಗೊಳ್ಳಲಿದೆ.ಇದರ ಜಲಾನಯನ ಪ್ರದೇಶ ೧೪೨.೨೨ ಚದರ ಕಿ.ಮೀ.ಗಳಾಗಿದ್ದು ೪೦.೮೦ ಟಿ‌ಎಂಸಿ ನೀರು ಇದರಿಂದ ಸಿಗಲಿದೆ.೨ ನೇ ಪ್ರಸ್ತಾಪ ೬ ಜಿಲ್ಲೆಗಳ ೨೨ ಬರಪೀಡಿತ ತಾಲೂಕುಗಳು ಮತ್ತು ವಾಣಿ ವಿಲಾಸ ಸಾಗರ ಜಲಾಶಯಕ್ಕೆ ನೀರೊದಗಿಸುವುದು. ಹೀಗೆ ಮುಂತಾದ ವಿವರಗಳನ್ನು ಹೊಂದಿದೆ.

ಪಶ್ಚಿಮ ಘಟ್ಟದ ಪರ್ವತ ಶ್ರೇಣಿಗಳ ತುದಿಗೆ ಸ್ಪಲ್ಪ ಕೆಳಸ್ತರದಲ್ಲಿ ಒಂದು ತುದಿಯಿಂದ ಸಮಪಾತಾಳಿಯಲ್ಲಿ ಕಾಲುವೆ ನಿರ್ಮಾಣವಾಗುವುದರಿಂದ ಇದನ್ನು ಶ್ರೇಣಿಯ ತುತ್ತ ತುದಿಯಲ್ಲಿ ನಿಂತು ನೋಡುವಾಗ ಪಶ್ಚಿಮ ಘಟ್ಟಕ್ಕೆ ಹಾಕಿದ ಹಾರದ ಆಕಾರದಲ್ಲಿ ಕಾಣುವುದರಿಂದ ಇದನ್ನು ಹಾರದ ಕಾಲುವೆ ಎಂದು ಕರೆಯಲಾಗುತ್ತದೆ. ಇದು ಅಪೂರ್ವವಾದ ಯೋಜನೆ ಹಾಗೂ ಹಾರದ ಕಾಲುವೆ ಮಾಡುವ ಕಲ್ಪನೆ ಹೊಸ ಚಿಂತನೆ ಎನ್ನುತ್ತಾರೆ ಪರಮಶಿವಯ್ಯ. ಇದು ಸುಳ್ಳು. ಯಾಕೆಂದರೆ, ಇದೊಂದು ಹೊಸದೇನೂ ಅಲ್ಲ. ಇದು ಕ್ಯಾಪ್ಟನ್ ದಸ್ತೂರ್‌ರ ಕಲ್ಪನೆಯಾಗಿದೆ. ಇವರು ೧೯೭೪ರಲ್ಲಿ ಈ ರೀತಿಯ ಯೋಜನೆಯನ್ನು ಪ್ರಸ್ತಾಪ ಮಾಡಿದ್ದರು. ಅದರಲ್ಲಿ ಹಿಮಾಲಯದ ದಕ್ಷಿಣ ಇಳಿಜಾರು ಪ್ರದೇಶದಲ್ಲಿ ಪಶ್ಚಿಮದಿಂದ ರವಿ ಮತ್ತು ಪೂರ್ವದ ಕಡೆಯಿಂದ ಬ್ರಹ್ಮಪುತ್ರ ನದಿಗೆ ೪೨೦೦ಕಿ.ಮೀ.ಉದ್ದ, ೩೦೦ ಮೀ.ಅಗಲದ ಹಾಗೂ ಸಮುದ್ರ ಮಟ್ಟದಿಂದ ಸುಮಾರು ೩೩೫ ಮೀ.ನಿಂದ ೪೫೭ ಮೀಟರ್ ಎತ್ತರದಲ್ಲಿ ಕಾಲುವೆ ಮಾಡುವ ಯೋಜನೆಯನ್ನು ಮಾಡಲಾಗಿತ್ತು. ಇದರಲ್ಲಿ ಐವತ್ತಕ್ಕೂ ಹೆಚ್ಚು ಕೃತಕವಾಗಿ ನಿರ್ಮಿಸಲ್ಪಟ್ಟ ಸರೋವರಗಳನ್ನು ಜೋಡಿಸುವುದಾಗಿ ಯೋಜಿಸಲಾಗಿತ್ತು.

ಇನ್ನೊಂದು ಯೋಜನೆಯಲ್ಲಿ ಸಮುದ್ರ ಮಟ್ಟದಿಂದ ಸುಮಾರು ೨೪೪ರಿಂದ ೩೦೫ ಮೀಟರ್ ಎತ್ತರದಲ್ಲಿ ಸುಮಾರು ೯೩೦ ಕಿ.ಮೀ.ಉದ್ದದ ೩೦೦ ಮೀ ಆಗಲದ ಕಾಲುವೆ ಮೂಲಕ ೨೦೦ರಷ್ಟು ಕಾಲುವೆಗಳನ್ನು ಜೋಡಿಸುವುದಾಗಿ ಯೋಜಿಸಲಾಗಿತ್ತು. ಆದರೆ ಇದು ತಾಂತ್ರಿಕ ದೋಷವೆಂದು ಹೇಳಿ ಯೋಜನೆಯನ್ನು ಕೈಬಿಡಲಾಗಿತ್ತು. ಪರಮಶಿವಯ್ಯ ನೇತೃತ್ವದ ವರದಿಯ ಹಾರ ಕಲ್ಪನೆ ಪಶ್ಚಿಮ ಘಟ್ಟದ ಕೊರಳಿಗೆ ಹಾಕುವ ಅಂತಿಮ ಯಾತ್ರೆಯ ಹಾರವಾದರೆ ಯಾವ ಆಶ್ಚರ್ಯವಿಲ್ಲ. ಈಗ ಪರಮಶಿವಯ್ಯ ಈ ವರದಿಯಲ್ಲಿ ದೋಷಗಳಿದ್ದರೆ ನಾನು ಶಿಕ್ಷೆ ಎದುರಿಸಲು ಸಿದ್ದವೆಂದಿದ್ದಾರೆ. ಅಂದ ಮೇಲೆ ಶಿಕ್ಷೆ ಕೊಡಲು ಹಿಂದೇಟು ಯಾಕೆ?

ಮಣಿಪಾಲ ಇನ್ಸಿಟ್ಟೂಟ್ ಆಫ್ ಟೆಕ್ನಾಲಜಿಯ ಭೂ ವಿಜ್ಞಾನಿ ಪ್ರೊ.ಉದಯಶಂಕರ್ ಹೇಳುವಂತೆ ಪಶ್ಚಿಮ ಘಟ್ಟಗಳ ಉಗಮ,ಅನಂತರ ಅವುಗಳಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿಯುವ ನದಿಗಳ ಉಗಮಗಳ ಬಗ್ಗೆ ಅವಲೋಕಿಸಿದಾಗ ಇವುಗಳು ತೀರಾ ಚಿಕ್ಕ ವಯಸ್ಸಿನ ನದಿಗಳು ಎನ್ನುವ ಇವರು ಯಾವುದೇ ಹಂತದಲ್ಲಿ ನದಿ ತಿರುಗಿಸುವ ಪ್ರಯತ್ನ ಮಾಡಿದರೆ ಪಾಕೃತಿಕ ದುರಂತಗಳಿಗೆ ಇದು ನಾಂದಿ ಹಾಡುತ್ತದೆ ಎನ್ನುತ್ತಾರೆ.

ಯಾಕೆಂದರೆ ಕಾರಣಗಳು ಬಹಳಷ್ಟಿವೆ. ಪಶ್ಚಿಮ ಘಟ್ಟಗಳ ಶ್ರೇಣಿಗಳು ಪಸ್ಚಿಮ ತೀರದ ಸ್ವರಭಂಗಗಳಿಂದ ಉಂಟಾದವು. ಕಳೆದ ಭೂ ಖಂಡಗಳ ಪುನರ್ ರಚನೆಯ ನಂತರ ಉದ್ಭವವಾದ ರಚನೆಗಳಾಗಿವೆ. ಈ ಪರ್ವತ ಶ್ರೇಣಿಗಳಲ್ಲಿ ಹಲವು ದುರ್ಬಲ ವಲಯಗಳಿದ್ದು ಉದ್ದಕ್ಕೂ ಬಿರುಕುಗಳಿವೆ. ಹೀಗೆ ಇಲ್ಲಿ ಒತ್ತಡಗಳನ್ನು ಹೇರಿದಾಗ ಮತ್ತೆ ಸ್ತರಭಂಗ ಉಂಟಾಗಿ ಭೂಮಿಯಲ್ಲಿ ಅಲೆಗಳೆದ್ದು ಕಂಪನಕ್ಕೆ ಕಾರಣವಾಗುತ್ತದೆ. ೨ಪ್ರಸ್ತಾವನೆಗಳಲ್ಲಿ ಒಟ್ಟು ೩೮ ಜಲಾಶಯಗಳನ್ನು ನಿರ್ಮಿಸಲಾಗುವುದೆಂದು ಯೋಜನೆಯಲ್ಲಿ ಹೇಳಲಾಗಿದೆ. ಆದರೆ ಈ ಜಲಾಶಯದಲ್ಲಿ ಸಂಗ್ರಹಿತ ಜಲ ನೆಲದ ಮೇಲೆ ಒತ್ತಡ ಬೀರುತ್ತದೆ. ಸ್ತರಭಂಗಗಳಿರುವಂತ ದುರ್ಬಲ ವಲಯಗಳಿದ್ದರೆ ಅವುಗಳಿಂದ ನೀರು ಜಿನುಗಿ ಶಿಲೆ ಸರಿದು ಭೂಕಂಪನಗಳಾಗುವ ಸಾಧ್ಯತೆ ಹೆಚ್ಚುತ್ತದೆ. ೨೮ ಜಲಾಶಯಗಳಿಂದ,೫೫೫೦ ಮತ್ತು ಹೆಕ್ಟೇರ್ ೧೧ ಜಲಾಶಯಗಳಿಂದ ೨೧೧೬ ಹೆಕ್ಟೇರ್ ಪಶ್ಚಿ ಘಟ್ಟ ಪ್ರದೇಶ ಮುಳುಗಡೆಯಾಗುತ್ತದೆ. ಹಾರದ ಕಾಲುವೆಯಿಂದ ಫಲವತ್ತಾದ ಪಶ್ಚಿಘಟ್ಟದ ಮೇಲ್ಪದರದಲ್ಲಿ ಮಾಡಿದಾಗ ಭೂಸವಕಳಿ ತೀರಾ ಹೆಚ್ಚಾಗಿ ತುಂಬಲಾರದ ನಷ್ಟ, ನದಿಮುಖಜಗಳು ಹಾಗೂ ತೀರ ಪ್ರದೇಶದಲ್ಲಿ ಹೂಳು ತುಂಬಿ,ಪ್ರಾಕೃತಿಕ ಅಸಮತೋಲನ ,ಮೀನುಗಾರಿಕೆ ಅಡ್ಡಿ ,ನೆರೆ ಸಮುದ್ರ ಕೊರತೆ ಮುಂತಾದ ಸಮಸ್ಯೆಗಳು ಪದೇ ಪದೇ ಉಂತಾಗುತ್ತದೆ.

ಪಶ್ಚಿಮ ಘಟ್ಟ ಪ್ರದೇಶದ ಮಣ್ಣು ಮತ್ತು ಶಿಲೆಗಳ ಗುಣಧರ್ಮಗಳನ್ನು ಅಧ್ಯಯನ ಮಾಡದೆ ಕಾಮಗಾರಿ ಮಾಡುವುದು ಮೂರ್ಖತನ.ಯಾಕೆಂದರೆ ಇಲ್ಲಿಯ ಕಲ್ಲುಗಳಲ್ಲಿ ಸಾಮಾನ್ಯವಾಗಿ ಸೀಳುಗಳಿದ್ದು ಮಣ್ಣು ತೀರಾ ಸಡಿಲವಾಗಿದೆ. ಹೀಗಾಗಿ ನೀರು ಇಲ್ಲಿಯೇ ಇಂಗುತ್ತದೆ. ಹಾರದ ಕಾಲುವೆ ನಿರ್ಮಾಣಕ್ಕೆ , ನಿರ್ವಹಣೆಗೆ ದೊಡ್ಡ ಗಾತ್ರದ ಯಂತ್ರಗಳನ್ನು ಒಯ್ಯಲು ರಸ್ತೆ, ಇತರ ವ್ಯವಸ್ಥೆಗೆ ಸಾವಿರಾರು ಹೆಕ್ಟೇರ್ ದಟ್ಟ ಅರಣ್ಯ ,ಕಾಡು ನಾಶವಾಗುತ್ತೆ. ಮತ್ತೊಂದು ವಿಷಯವೆಂದರೆ, ನಿರ್ಮಾಮವಾಗುವ ಕಾಲುವೆ ಅಗಲವನ್ನು ಎಲ್ಲಿ ಹೇಳಿಲ್ಲ. ಬಹುಶ: ಪಾಣೆಮಂಗಳೂರಿನಲ್ಲಿರುವ ನೇತ್ರಾವತಿಯ ಅಗಲದಷ್ಟೇ ಅಗಲ ಬೇಕಾಗಬಹುದು. ಯೋಜನೆಯಲ್ಲಿ ಹೇಳಿದಂತೆ ಕಾಲುವೆಯ ಇಳಿಜಾರು ಪ್ರತಿ ಕಿ.ಮೀ.ಗೆ ಸುಮಾರು ೭ ಅಂಚು ಇಟ್ಟರೆ ನೀರು ಸುಲಲಿತವಾಗಿ ಹರಿಯಲು ಕಷ್ಟವಾಗುತ್ತದೆ. ಹಾಗೆಯೇ ಅಲ್ಲಲ್ಲಿ ಕೊರಕಲುಗಳು ಬಿದ್ದು ಅಪಾಯ ಹೇಳುವ ಸಾಧ್ಯತೆಯಿದೆ. ೯೦ ಡಿಗ್ರಿಗೂ ಹೆಚ್ಚು ಹೊರಗೆ ಚಾಚಿರುವ ಈ ಘಟ್ಟದಲ್ಲಿ ಕಾಲುವೆ ನಿರ್ಮಾಣ ಸಾಧ್ಯವೇ ಎಂಬ ಪ್ರಶ್ನೆ ಇದೆ. ಇಷ್ಟೇ ಅಲ್ಲ ಭಾದಕಗಳ ಪಟ್ಟಿಯಲ್ಲಿ ಅನೇಕ ಅಂಶಗಳಿವೆ.

ಕಾಮಗಾರಿ ಸಂದರ್ಭದಲ್ಲಿ ಮಣ್ಣು ಜರಿದು ಅದೆಷ್ಟೋ ಸಣ್ಣ ಸಣ್ಣ ಹಳ್ಳಗಳು ಹೂಳು ತುಂಬಿ ಕ್ರಮೇಣ ಇಲ್ಲವಾಗಿ ನೆರೆಗೂ ಕಾರಣವಾಗಿ ಕಾಲುವೆ ತೋಡಲು ಬಂಡೆ ಕಲ್ಲುಗಳನ್ನು ಸ್ಪೋಟಕದಿಂದ ಸಿಡಿಸಿದಾಗ ಅದು ಕಾಲುವೆಗಷ್ಟೇ ಸೀಮಿತವಾಗಿರದೇ ಸುತ್ತಲ ಪ್ರದೇಶದಲ್ಲಿ ಮಣ್ಣು ಸಡಿಲಗೊಂಡು ,ಭೂಕುಸಿತ, ಮಣ್ಣು ಸವೆತ ಉಂಟಾಗುತ್ತದೆ. ಗುಡ್ಡಗಳಲ್ಲಿ ಇಂಗಿದ ನೀರು ಅಂತರ್ಜಲವಾಗಿ ಒರತೆಯಾಗಿ ಹಳ್ಳ, ಕೊಳ್ಳಗಳು ಹುಟ್ಟುತ್ತವೆ. ಇದನ್ನು ತಿರುಗಿಸಿದರೆ ನೇತ್ರಾವತಿ ಹರಿವಿನ ಪ್ರಮಾಣ ಕಡಿಮೆಯಾಗುತ್ತದೆ. ಕೃಷಿಕರಿಗೆ ನೀರು ಇಲ್ಲವಾಗುತ್ತದೆ. ದಕ್ಷಿಣ ಕನ್ನಡದ ನೀರಾವರಿಯ ಮೂಲ ಸಣ್ಣ ಹಳ್ಳಗಳಿಗೆ ಹಾಕುವ ಕಟ್ಟಗಳಾಗಿದ್ದು, ಸಾಮಾನ್ಯವಾಗಿ ಹಳ್ಳದ ಮೇಲ್ಭಾಗದಿಂದ ಪ್ರಾರಂಭವಾಗುತ್ತದೆ.

ಮೇಲಿನ ಕಟ್ಟ ತುಂಬಿ ಕೆಳಗಿನ ಕಟ್ಟಕ್ಕೆ ಒರತೆಯಾಗಿ ನೀರು ಬರುವ ನೀರಾವರಿ ಪದ್ಧತಿ ನಾಶವಾಗುತ್ತದೆ. ಮಾತ್ರವಲ್ಲ, ಶಿರ್ಲಾಲು ಹಳ್ಳ, ಶಿವನಾಳ ಹಳ್ಳ, ಅರ್ಬಿ ಹಳ್ಳ, ಹಳೆಮನೆ ಹಳ್ಳ,ಬಟ್ಟಿಹಳ್ಳ,ಕಿಲ್ಲೂರು ಹಳ್ಳ, ಬಂಗರಬಲಿಕೆ ಹಳ್ಳ, ಘಟ್ಟಡ್ಕ ಹಳ್ಳ, ಆನಡ್ಕ ಹಳ್ಳ, ನಂದಿಕಾಡುಹಳ್ಳ, ಮಲ್ಲಹಳ್ಳ ,ಮಲ್ಲಹಳ ಕಜಕ್ಕೆ ಹೊಳೆ,ಎಳುವರೆ ಹಳ್ಳ, ಕೂಡಬೆಟ್ಟು ಹಳ್ಳ, ಬಂಡಾಜೆ ಆರ್ಬಿ, ಮುಂಡಾಜೆ ಹೊಳೆ, ಬಳ್ಳಾಲರಾಯನ ಫಾಲ್ಸ್ ,ದುರ್ಗದಿಲ್ಲ ಹಳ್ಳ, ಬಿದಿರತಳೆ ಹೊಳೆ, ದೊಡ್ಡ ಹಳ್ಳ, ಅಣಿಯೂರು ನೆರಿಯ ಹೊಳೆ, ನೆಲ್ಲಿತಾಟು ಹಳ್ಳ, ಬಿರುಮಲೆ ಹಳ್ಳ ಮತ್ತು ಕುಮಾರಧಾರ ನದಿ. ಅನೇಕ ಹಳ್ಳಗಳಲ್ಲಿ ನೀರಿನ ಹರಿವು ಕಡಿಮೆಯಾಗಲಿದೆ. ಬಂಡಾಜೆ ಅರ್ಬಿ,ಬಳ್ಳಾಲರಾಯನ ಫಾಲ್ಸ್ ,ಎಳ್ನೀರು ಫಾಲ್ಸ್ ಪೂರ್ತಿಯಾಗಿ ಬತ್ತಲಿದೆ. ಈ ಸಹಜ ಸ್ವಾಭಾವಿಕವಾದ ವ್ಯವಸ್ಥೆಯನ್ನು ಹಾಳು ಮಾಡುವುದರಿಂದ ಪ್ರಾಕೃತಿಕ ವಿಕೋಪಗಳಿಗೆ ಕಾರಣವಾಗುವ ಜೊತೆಗೆ ಪಶ್ಚಿಮ ಘಟ್ಟದ ಜೀವ ಸಂಕುಲದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಈ ಯೋಜನೆ ಕಾರ್ಯಗತಗೊಂಡರೆ ಇನ್ನೊಂದು ಯೋಜನೆ ಬೇಕಾಗುತ್ತದೆ.ಕಾರಣ ಇದರ ನಿರ್ವಹಣೆಗೆ. ಜೊತೆಗೆ ರಾಜ್ಯದ ಜನತೆ ಹೆಚ್ಚುವರಿ ತೆರಿಗೆಯನ್ನು ಇದಕ್ಕಾಗಿ ಪಾವತಿಸಬೇಕಾಗುತ್ತದೆ.

ಬೆಳ್ತಂಗಡಿ, ಬಂಟ್ವಾಳ, ಪುತ್ತೂರು,ಸುಳ್ಯ ತಾಲೂಕುಗಳು ಈಗಾಗಲೇ ಬೂದು ಪ್ರದೇಶವೆಂದು ಘೋಷಿತಗೊಂಡಿವೆ. ಇಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತದೆ. ನೇತ್ರಾವತಿಯಿಂದ ಈಗ ಸಮುದ್ರ ಸೇರುವ ನೀರಿನಲ್ಲಿ ಮುಂದೆ ಸುಮಾರು ೧/೩ ಅಂಶದಷ್ಟು ಕಡಿಮೆಯಾಗಿ ಸೇರುವುದರಿಂದ ಸಮುದ್ರದ ಉಪ್ಪು ನೀರು ಒಳಬರುವುದು ಮತ್ತು ಸಮುದ್ರ ಕೊರೆತ ಹೆಚ್ಚಾಗಬಹುದು. ಮಾತ್ರವಲ್ಲ, ಮೀನುಗಾರರ ಬದುಕು ದುರ್ಬಲವಾಗುತ್ತದೆ. ಯಾಕೆಂದರೆ, ನದಿ ನೀರಿನ ಮೂಲಕ ಸಮುದ್ರ ಸೇರುವ ಲವಣಾಂಶ ತೀರಾ ಕಡಿಮೆಯಾಗಿ ಮೀನು ಸಂತತಿಯ ಮೇಲೆ ಪರಿಣಾಮ ಬೀರುತ್ತದೆ. ಅಂತರಜಿಲ್ಲಾ ಮಟ್ಟದಲ್ಲಿ ನದಿ ನೀರಿನಲ್ಲಿ ಏರುಪೇರಾಗುವ ಜೊತೆಗೆ ಸಮುದ್ರದಿಂದ ಉಪ್ಪುನೀರು ಒಳಪ್ರದೇಶಕ್ಕೆ ಹರಿಯುವ ಸಾಧ್ಯತೆಯಿದೆ . ಕಿರುಜಲ ವಿದ್ಯುತ್ ಘಟಕಗಳನ್ನು ಸರಕಾರ ಯಾವ ಕಡೆ ಸ್ಥಾಪಿಸಲು ಉದ್ದೇಶಿಸಿದೆಯೇ ಅದನ್ನು ಕೈಬಿಡಬೇಕಾಗುತ್ತದೆ. ಕೃಷಿ ವೈವಿಧ್ಯ ಕಡಿಮೆಯಾಗಿ ಜಿಲ್ಲೆಯ ಸಣ್ಣ ರೈತರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಜಲಾಶಯಗಳ ಮುಖಜ ಭೂಮಿಯನ್ನು ಮಾರಿ ಕೊಟ್ಯಾಂತರ ಗಳಿಸುವುದಕ್ಕಿಂತ ಯೋಜನೆಯಿಂದ ಆಪ್ರದೇಶದ ನೀರು ನಿಂತು ಮಣ್ಣು ಜೌಗಾಗುವುದರಿಂದ ಇಲ್ಲಿ ಯಾವುದೇ ಬೆಳೆ ಬೆಳೆಯದಿರುವ ಸಾಧ್ಯತೆ ಇದೆ. ನಾಲ್ಕು ತಿಂಗಳ ಮಳೆಗಾಲದಲ್ಲಿ ಕೇವಲ ಒಂದೆರಡು ದಿನ ಮಾತ್ರ ಭಾರೀ ಮಳೆ ಬರುವುದರಿಂದ ಇಲ್ಲಿನೆರೆ ಬರುತ್ತದೆ. ಒಂದೊ ಈ ಯೋಜನೆ ಜಾರಿಯಾದಲ್ಲಿ ಹಾರದ ಕಾಲುವೆಗಳಲ್ಲೂ ನೀರು ತುಂಬಿ ಉಕ್ಕಿ ನೆರೆ ಹಾವಳಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ರಾಜ್ಯ ಸರಕಾರವು ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲು ೧೫,೦೦೦ಕೋಟಿಯನ್ನು ಸಂಪಾದಿಸಲು ಕಷ್ಟಪಡುತ್ತಿರುವಾಗ ನೇತ್ರಾವತಿ ನದಿ ತಿರುಗಿಸಲು ಯೋಜನೆಯ ಮೂಲಕ ರಾಜ್ಯ ಸಾಲದ ಹೊರೆಯಿಂದ ತತ್ತರಿಸಿ ಸಾಯುವ ಮಾರ್ಗವನ್ನು ಕೈಹಿಡಿದಿದ್ದಾರೆ ಎಂದು ಹೇಳಬೇಕು. ಮೆಲ್ನೋಟಕ್ಕೆ ಒಳಿತೆನಿಸಿದರೂ, ಇದರಿಂದ ತೀರಾ ಅಪಾಯವಿದೆ ಎನ್ನುತ್ತಾರೆ ಪರಿಸರ ತಜ್ಞರು.ಆದರೆ ರಾಜ್ಯ ಸರಕಾರ ಮಾತ್ರ ಇದಕ್ಕೆ ಬೆಲೆ ಕೊಡುತ್ತಿಲ್ಲ. ಕೆಲವು ಪ್ರದೇಶದ ಜನರಿಗಾಗಿ ಇಡಿ ಪ್ರದೇಶದ ಜನರನ್ನು ಬಲಿಕೊಡುವ ಪ್ರಯತ್ನವಾದ ಈ ಯೋಜನೆ ಸರಕಾರದ ಏಕಾ‌ಏಕಿ ಯೋಜನೆಯಲ್ಲವಾಗಿದೆ.ನೇತ್ರಾವತಿ ನದಿಯಲ್ಲಿ ಹೆಚ್ಚುವರಿ ನೀರಿದೆ ಎಂಬ ಮಾತು ಹುಸಿಯಾದುದು. ಯಾಕೆಂದರೆ,ನೀರು ಅಧಿಕವಾಗಿದ್ದರೆ ಈ ಭಾಗದ ಜನರು ಬೇಸಿಗೆಯಲ್ಲಿ ನೀರಿಗಾಗಿ ಪರದಾಡುವುದು ಯಾಕೆ? ದುಡುಕಿನ, ತಲೆಕೆಟ್ಟ ಯೋಜನೆಯ ಕಾರ್ಯಗತಕ್ಕೆ ಹೊರಟಿರುವ ರಾಜ್ಯಸರಕಾರ ಪರಮಶಿವಯ್ಯನವರ ವರದಿಯ ಆಟPದ ಲಯಕ್ಕೆ ತಕ್ಕಂತೆ ಆಟವಾಡುತ್ತಿದೆ. ಕರಾವಳಿಗರ ಹಿತದ ದೃಷ್ಟಿಯಲ್ಲಿ ನೇತ್ರಾವತಿ ನದಿಯನ್ನು ಪೂರ್ವಾಭಿಮುಖವಾಗಿ ತಿರುಗಿಸುವ ಯೋಜನೆ ಮಹಾದುರಂತವನ್ನು ಸೃಷ್ಟಿಸಲಿದೆ ಎಂಬುದು ಸತ್ಯ.

1 ಟಿಪ್ಪಣಿ Post a comment
  1. pavan's avatar
    ಮಾರ್ಚ್ 9 2011

    ಏನು ಮಾಡುವುದು ಸರ್ ನಮ್ಮ ಕರಾವಳಿ ಮತ್ತು ಇಲ್ಲಿಯ ಜನರ ಹಣೆಬರಹ ಸರಿ ಇಲ್ಲ. ಒಂದುಕಡೆ ಎಸ್ ಇ ಝಡ್, ಇನ್ನೊಂದುಕಡೆ ನಾಗಾರ್ಜುನ, ಸರಿ ಇದೆ ಬಿಡಿ. ನದಿಯನ್ನು ತಿರುಗಿಸುವುದೊಂದು ಬಾಕಿಯಿದೆ ಅದನ್ನು ಮಾಡಿ ಮುಗಿಸಲಿ.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments