ಸುನಾಮಿ ಕಾವು – ಮಾಧ್ಯಮಗಳಿಗೆ ಮೇವು
ತಲೆಕೆಟ್ಟ ಮಾಧ್ಯಮಗಳ ಮಾತಿಗೆ ಹೆದರಿ ಕಂಗಾಲಾದವರು, ಮತ್ತೆ ಮತ್ತೆ ಮುರ್ಖರಾಗುವವರು ಅದೇ ಸಾಮಾನ್ಯ ಜನ.
ಮಾರ್ಚ್ ೧೯ ರಂದು ಸುಪರ್ ಮೂನ್ ಪ್ರಭಾವದಿಂದ ಸಮುದ್ರ ಉಕ್ಕಿ ಹರಿದು ಇಡೀ ಮಂಗಳೂರಿಗೆ ಮಂಗಳೂರೇ ಮುಳುಗಿ ಹೋಗುತ್ತೆ ಅಂತ ಯಾವಾಗ ಟೀವಿಯಲ್ಲಿ ಸುದ್ದಿ ಬಂತೋ ಪರವೂರಗಳಿಂದ ಬಂದು ಇಲ್ಲಿ ಕೆಲಸ ಮಾಡ್ತಾ ಇರೋ ಜನ ಬೆವತು ಹೋದರು. ಮೊದಲೇ ಇಲ್ಲಿನ ಪ್ರಕೃತಿಯ ಸರಿಯಾದ ಅಂದಾಜಿಲ್ಲದ ಜನರಂತೂ ನಿಜಕ್ಕೂ ಒಂದು ಕ್ಷಣ ಅವಕ್ಕಾದರು. ಅವರವರ ಮನೆಗಳಿಂದ ಪೋನಿನ ಮೇಲೆ ಪೋನ್ ಬರತೊಡಗಿದವು. ಎಲ್ಲರದ್ದೂ ಒಂದೇ ಮಾತು ಈ ಕ್ಷಣವೇ ಅಲ್ಲಿಂದ ಹೊರಟು ಬಾ ಅಂತ.
ಹೆದರಿದವರ ಮೇಲೆ ಹಾವು ಎಸೆದಂತೆ ಜಪಾನಿನಲ್ಲಿ ಎದ್ದ ಸುನಾಮಿ ಇನ್ನಷ್ಟು ಹೆದರಿಕೆ ಹುಟ್ಟಿಸಿತು. ಇದರೆಲ್ಲರ ಪರಿಣಾಮ ದೂರದ ಊರಿಗೆ ಹೋಗೋ ಎಲ್ಲ ಬಸ್ಸುಗಳು ಬಸುರಿಯಂತೆ ತುಂಬಿ ಹೋದವು. ರಾತ್ರೋ ರಾತ್ರಿ ಖಾಸಗಿ ಬಸ್ಸಿನವರು ಪ್ರಯಾಣ ದರವನ್ನು ಹೆಚ್ಚಿಸಿ ಉರಿಯುವ ಮನೆಯಲ್ಲಿ ಗಳ ಹಿರಿಯುವ ಕೆಲಸ ಮಾಡಿದರು. ಒಂದಕ್ಕೆ ಎರಡು ನೀಡಿ ತಮ್ಮ ಊರಿಗೆ ಹೊರಟು ನಿಂತಿತು ಜನತೆ. ೫೦ ಜನರು ಇರಬೇಕಾದ ಬಸ್ಸಿಲ್ಲಿ ೬೦-೭೦ ಜನ ಪ್ರಯಾಣ ಮಾಡಿದರು.
ಮಕ್ಕಳು, ಮರಿ, ಹೆಂಗಸರು, ಗಂಡಸರು ಎಂಬ ಬೇಧಭಾವವಿಲ್ಲದೇ ಹೊರಟೆ ಹೊರಟರು. ಇವರೆಲ್ಲ ಮಾಸಿಕ ಪಗಾರ ಎಣಿಸೋ ಸರ್ಕಾರಿ ಬಾಬುಗಳಲ್ಲ. ದಿನಗೂಲಿಗೆ ದೂರದ ಉತ್ತರ ಕರ್ನಾಟಕದಿಂದ ಬಂದ ಜನ. ಒಪ್ಪತ್ತಿಗೆ ಪರದಾಡುತ್ತಿರುವ ಇವರು, ಪ್ರಕೃತಿಯ ಮುನಿಸಿಗೆ ಒಳಗಾದ ನೆರೆಪೀಡಿತ ಜನ.
ಕಾಸಿಗೆ ಕಾಸು ಕೂಡಿಸಿ ಊರಿನ ಉಳಿದ ಸಂಬಂಧಿಕರ ಹೊಟ್ಟೆ ತುಂಬಿಸುತ್ತಿರುವ ಈ ಜನರಿಗೆ ಒಮ್ಮೆ ಊರಿಗೆ ಹೋಗಿ ಬರುವುದೆಂದರೆ ಕಡಿಮೆ ಖರ್ಚಿನ ಬಾಬತ್ತೇನು ಅಲ್ಲ. ಸಾವಿರದಿಂದ ಎರಡು ಸಾವಿರಕ್ಕೆ ಕತ್ತರಿ. ಮಕ್ಕಳ ಫೀಸಿಗೋ, ಅಮ್ಮನ ಮದ್ದಿಗೋ, ತಮ್ಮನ ಸಹಾಯಕ್ಕೋ ಕೂಡಿಟ್ಟ ಹಣ ಕಾರಣವಲ್ಲದ ಕಾರಣಕ್ಕೆ ಖರ್ಚಾಗಿ ಹೋಗಿದೆ.ಇಷ್ಟೇಲ್ಲ ನೋಡುವಾಗ ಎಂಥವರಿಗೂ ಈ ಮೀಡಿಯಾಗಳ ಬಗ್ಗೆ ಹೇಸಿಗೆ ಬರೋದಿಲ್ವಾ ಹೇಳಿ ? ದುಡ್ಡು ಮಾಡೊಕೆ ಅಂತ ಸುಳ್ಳು ಸುದ್ದಿ ಹರಡುವ ದೈನೇಸಿ ಸ್ಥಿತಿ ನಮ್ಮ ಮೀಡೀಯಾಗಳಿಗೆ ಬಂದಿದ್ರೆ ಎಲ್ಲಾದರೂ ದೇವಸ್ಥಾನಗಳನ್ನು ಹುಡುಕಿಕೊಳ್ಳಲಿ. ನಮ್ಮ ಜನ ಇವತ್ತಿಗೂ ಧಾರಾಳಿಗಳೇ.
ಇಲ್ಲಿ ಗಮನಿಸಬೇಕಾದ ಸಂಗತಿ ಮತ್ತೊಂದಿದೆ. ಇಲ್ಲಿ ಕೆಲಸ ಮಾಡೋ ಪ್ರಗತಿಪರರು ಇಂಥ ವಿಷಯಗಳ ಬಗ್ಗೆ ತುಟಿ ಬಿಚ್ಚುವುದೇ ಇಲ್ಲ. ರಾಜಕಾರಣಿಗಳನ್ನು ಅಟ್ಟಾಡಿಸಿಕೊಂಡು ಪ್ರಶ್ನೆ ಕೇಳೋ ಖದರ್ ಇಲ್ಲಿ ಎಲ್ಲಿ ಹೋಗತ್ತೋ ಆ ಜ್ಯೊತಿಷಿಯೇ ಹೇಳಬೇಕು. ಅದೆಲ್ಲ ಮಾನೇಜ್ ಮೆಂಟ್ ಆದೇಶ ಅಂತ ಹೊಟ್ಟೆಪಾಡಿನ ನೆಪವನ್ನು ನಮ್ಮ ಪತ್ರಕರ್ತರು ಮುಂದಿಟ್ಟರೆ ಜನರು ಅವರ ಮೇಲಿನ ನಂಬಿಕೆಯನ್ನು ಪಕ್ಕಕಿಡುತ್ತಾರೆ. ಇದರಿಂದ ಒಳ್ಳೆಯ ದೃಷ್ಟಿಕೋನ ಹೊಂದಿರುವ ಸಹೃದಯಿ ಪತ್ರಕರ್ತನಿಗೂ ಅವಮಾನ. ಇಂಥ ಕಾರ್ಯಕ್ರಮಗಳು ಇತ್ತೀಚೆಗೆ ಮಾಮೂಲು ಅನ್ನುವಷ್ಟು ಮಟ್ಟಿಗೆ ಸಲೀಸಾಗಿ ಬಿಟ್ಟಿವೆ. ನಾಳೆ ಸರ್ಕಾರ ಇದನ್ನೆಲ್ಲ ನಿಯಂತ್ರಿಸಲು ಓಂಬಟ್ಸ್ ಮನ್ ಕಮಿಟಿ ಅಂತ ಏನಾದ್ರೂ ಮಾಡಿದ್ರೆ ವಿರೋಧಿಸೋಕೆ ಮಾಧ್ಯಮಗಳಿಗೆ ನೈತಿಕತೆಯೇ ಇರುವುದಿಲ್ಲ. ಇಂಥ ಸ್ಥಿತಿ ನಮಗೆ ಮಾಧ್ಯಮಗಳಿಗೆ ಬೇಕಾ?
*******
(ಚಿತ್ರಕೃಪೆ: media-mad-ia.blogspot.com)




![Media_goofup_photo[1]](https://nilume.net/wp-content/uploads/2011/03/media_goofup_photo1.jpg?w=300&h=240)

ಟಿಆರ್ ಪಿ ಬೇಕು ಅಂತ ಅಡ್ಡದಾರಿ ಹಿಡಿಯೋ ಮಾಧ್ಯಮಗಳಿಗೆ ಭಾರತವನ್ನೂ ಯಾವ ಕಡೆ ಕೊಂಡೊಯ್ಯತ್ತದೋ… ಇದಕ್ಕೆಲ್ಲ ಕೊನೆ ಹೇಗೆ?
ಛೇ.. ಎನು ಮರುಳು ಜನರಪ್ಪಾ…. ತುಂಬಾ ಅಪಾಯಕಾರಿಯಾಗ್ತಿದ್ದಾರೆ ಕೆಲವು ಢೋಂಗಿ ಜ್ಯೋತಿಷ್ಯ ಹೇಳೋರು ಹಾಗೂ ಅವರಿಗೆ ಬೆಲೆ ಕೊಡೋ ಮಾಧ್ಯಮಗಳು!