ಡಾ.ಅಬ್ದುಲ್ ಕಲಾಂರನ್ನ ನಿನ್ನೆ ಸಾಯಿಸುವವರಿದ್ದರು!
-ರಾಕೇಶ್ ಶೆಟ್ಟಿ
ನನ್ನ ಶಾಲೆಯ ದಿನಗಳವು ಆಗಿನ್ನೂ ಶಂಕರ್ ನಾಗ್ ಅಪಘಾತದಲ್ಲಿ ನಮ್ಮಿಂದ ದೂರವಗಿದ್ದರು,ಅದೇ ಸಮಯದಲ್ಲಿ ಕಿಡಿಗೇಡಿಗಳು ವಿಷ್ಣು ಇನ್ನಿಲ್ಲ ಅಂತ ಸುದ್ದಿ ಹಬ್ಬಿಸಿದ್ದರು.ಕಡೆಗದು ಟುಸ್ಸ್ ಪಟಾಕಿಯಾಗಿತ್ತು.ಈ ರೀತಿಯ ಸುದ್ದಿಗಳನ್ನ ಕೇಳಿ ಕೇಳಿ,ಕಡೆಗೆ ನಿಜವಾಗಿ ವಿಷ್ಣು ನಮ್ಮನ್ನ ಅಗಲಿದ ದಿನ,ಬೆಳ್ಳಂ ಬೆಳಿಗ್ಗೆ ಗೆಳೆಯ ಶ್ರೀಕಾಂತ ಬಂದು ವಿಷ್ಣು ಹೊದ್ರಂತೆ ಅಂದಾಗ, ’ಜೊತೆಗ್ ನೀನೂ ಹೋಗಲೆ’ ಅಂತ ಬೈದು ಕಳಿಸಿದ್ದೆ.ಆದರೆ ನಿಜ ಅಂತ ಗೊತ್ತಾದಗ ಮನಸ್ಸು ಕಳವಳಗೊಂಡಿತ್ತು.
ಈ ಗಾಳಿ ಸುದ್ದಿಗಳೇ ಹಾಗೆ ಅಲ್ವಾ? ನಿಜ ಸುದ್ದಿಗಳಿಗೊಂದು ಗುದ್ದು ನೀಡಿ ಹೊರಟು ನಿಲ್ಲುತ್ತವೆ! ಕಳೆದವಾರ ತಾನೆ ಆಫ಼ೀಸಿನಲ್ಲಿ ಕುಳಿತಿದ್ದವನಿಗೆ ಅತ್ತಿಗೆ ಕರೆ ಮಾಡಿ ಜಪಾನ್ ಮುಳುಗುತ್ತಿದೆ ನೋಡು ಅಂದಾಗಲು ನಂಬಲಿಕ್ಕಾಗಲಿಲ್ಲ.ಆದರೆ ಅದೂ ನಿಜವಾಗಿತ್ತು 😦
ಮತ್ತೆ ನಿನ್ನೆ ಮಧ್ಯಾನ ಗೆಳೆಯ ಸಾತ್ವಿಕ್ ಕರೆ ಮಾಡಿ ’ವಿಷ್ಯ ಗೊತ್ತಾಯ್ತ?’ ಅಂದ್ರು. ’ಏನ್ರಿ’ ಕೇಳ್ದೆ. ’ಅಬ್ದುಲ್ ಕಲಾಂ ಹೋಗ್ಬಿಟ್ರಂತೆ’ ಅನ್ನೋದಾ!…’ನೋಡಿ confirm ಮಾಡಿ ಹೇಳ್ರಿ’ ಅಂದ್ರು.’ಹೌದಾ!?’ ಅಂತ ತಡಬಡಾಯಿಸಿ ಗೂಗಲ್ ದೇವರಲ್ಲಿ ಪ್ರಶ್ನೆ ಹಾಕಿದರೆ ಮೊದಲ ಸುದ್ದಿ ಇದ್ದದ್ದು ’Abdul Kalam’s Advisor Dr.Hafiz Saleh Muhammad Alladin died’ ಅಂತ.ನಾನೋ ಗಾಬರಿಯಲ್ಲಿ ಅದನ್ನ ಅಬ್ದುಲ್ ಕಲಾಮ್ ಅವರೇ ಹೋಗ್ಬಿಟ್ರು ಅಂತಲೇ ಓದಿ ಕೊಂಡು, ಆಫ಼ಿಸಿನಲ್ಲೂ ಕಲಾಂ ಹೋಗ್ಬಿಟ್ರು ಅಂದು,ಕಡೆಗೆ ಇನ್ನೊಮ್ಮೆ ಶಾಂತನಾಗಿ ನೋಡಿ. ’ಹೇ,ಇಲ್ಲಾ ರೀ,ಯಾವನೋ ಕಿಡಿಗೇಡಿ ಸುದ್ದಿ ಮಾಡಿದ್ದಾನೆ’ ಅಂದೆ.
ನಿನ್ನೆಯ ಗೂಗಲ್ ದೇವರಿಗೆ ಬಿದ್ದ ಟಾಪ್ ೨೦ ಪ್ರಶ್ನೆ ಕಲಾಂ ಸರ್ ಅವರ ಸಾವಿನ ಕುರಿತದ್ದದ್ದೆ ಇತ್ತಂತೆ! ಲೇಖಕಿ ಶೋಭಾಡೇ ಅವ್ರು ’ರಾಷ್ಟ್ರಪತಿಭವನಕ್ಕೆ ಸಾಮನ್ಯ ಜನತೆಯ ಸ್ಪರ್ಶ ಕೊಟ್ಟ ಡಾ.ಅಬ್ದುಲ್ ಕಲಾಂ ಅವ್ರ ಆತ್ಮಕ್ಕೆ ಶಾಂತಿ ಸಿಗಲ” ಅಂತ ಟ್ವೀಟ್ ಸಹ ಮಾಡಿ,ಕಡೆಗೆ ವಿಷಯ ತಿಳಿದು ಕ್ಷಮಾಪಣೆಯನ್ನು ಕೇಳಿ ನೂರು ಕಾಲ ಬಾಳಿ ಬದುಕಿ ಅಂತ ಹಾರೈಸಿದ್ರು!
ಇದೆಲ್ಲ ಏನೇ ಇರಲಿ.ತಮ್ಮ ಸರಳತೆ,ಆತ್ಮೀಯತೆಯಿಂದಾಗಿ ಭಾರತದ ಜನಮಾನಸದಲ್ಲಿರುವ ಅಬ್ದುಲ್ ಕಲಾಂ ಅವರು ಇನ್ನು ಹೆಚ್ಚು ಕಾಲ ನಮ್ಮೊಂದಿಗಿರಲಿ.ಒಂದು ಮಾತಿದೆಯಲ್ವಾ, ಸತ್ರು ಅಂತ ಸುದ್ದಿ ಹಬ್ಬಿಸಿದರೆ ಆಯುಷ್ಯ ಜಾಸ್ತಿಯಾಗುತ್ತೆ ಅಂತ.ನಮ್ಮ ಪ್ರೀತಿಯ ಅಬ್ದುಲ್ ಕಲಾಂ ಸರ್ ವಿಷಯದಲ್ಲಿ ಹಾಗೆ ಆಗಲಿ ಅನ್ನುವುದು ನನ್ನ ಹಾರೈಕೆ.





ಜನರು ಸುದ್ದಿಯ ಸತ್ಯಾಸತ್ಯತೆಗ ಬಗ್ಗೆ ಪರಿಶೀಲಿಸದೆ ಅದನ್ನು ಎಲ್ಲಾ ಕಡೆ ಉಸುರುವುದು ಈಗೀಗ ಜಾಸ್ತಿ ಆಗಿದೆ. ಮೊಬೈಲ್ ಅಲ್ಲಿ ಮೆಸ್ಸೇಜ್, ಟ್ವೀಟ್, ಫೇಸ್ ಬುಕ್ ಎಲ್ಲಾ ಕಡೆ ಬರಿಯ ಬ್ರೇಕಿ೦ಗ್ ನ್ಯೂಸ್ ಗಳು.
ಸಾವಿನ ಸುಳ್ಳು ಸುದ್ದಿ ಹಬ್ಬಿದರೆ ನೂರಾರು ವರ್ಷ ಬದುಕುತ್ತಾರೆ ಅಂತಾರೆ…