ಬೆಂಗಳೂರಿನಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಆಂದೋಲನ…
– ಚೇತನ್ ಜೀರಾಳ್
ಬಹುಷಃ ಕಳೆದ ಕೆಲವು ತಿಂಗಳಿಂದ ದೇಶದ ಪ್ರತಿಯೊಬ್ಬ ಪ್ರಜೆಯು ಮಾತನಾಡುತ್ತಿರುವುದು ದೇಶದಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರದ ಬಗ್ಗೆ. ಈ ಭ್ರಷ್ಟಾಚಾರ ಅನ್ನೋ ಮಹಾಮಾರಿ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಕರಾಳ ಬಾಹುವನ್ನು ಚಾಚಿದೆ. ಭ್ರಷ್ಟಾಚಾರ ಸಮಾಜದ ನೈತಿಕತೆಯ ಜೊತೆಗೆ , ಇಡೀ ನಾಡನ್ನೇ ಅಧೋಗತಿಯತ್ತ ಕೊಂಡ್ಯೊಯುತ್ತದೆ. ಇಂದು ಭ್ರಷ್ಟಾಚಾರ ಅನ್ನುವುದು ಜಾತಿ, ಮತ, ಧರ್ಮ, ಭಾಷೆ ಹೀಗೆ ಎಲ್ಲವನ್ನು ಮೀರಿ ಬೆಳೆದು ನಿಂತು ನಮ್ಮ ನಾಡಿನ ಏಳಿಗೆಗೆ ಮಾರಕವಾಗಿ ಪರಿಣಮಿಸಿದೆ. ಕೇಂದ್ರ ಹಾಗೂ ರಾಜ್ಯ ಅನ್ನೋ ಭೇದವಿಲ್ಲದೇ ಭ್ರಷ್ಟಾಚಾರ ಇಂದು ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ನೆಲೆಗೊಂಡಿದೆ. ಭ್ರಷ್ಟಾಚಾರ ಅಳಿಯದ ಹೊರತು ನಮ್ಮ ರಾಜ್ಯ ಏಳಿಗೆ ಕಾಣುವುದಕ್ಕೆ ಸಾಧ್ಯವೇ ಇಲ್ಲಾ. ಈ ಭ್ರಷ್ಟಾಚಾರ ಎಂಬ ರಕ್ಷಸವನ್ನು ನಾವೆಲ್ಲಾ ಸೇರಿ ಹೊಡೆದು ಹಾಕಲೇ ಬೇಕು.
ಕಳೆದ ಕೆಲವು ತಿಂಗಳುಗಳಿಂದ ಅಣ್ಣಾ ಹಜಾರೆ ಅವರ ನೇತ್ರತ್ವದಲ್ಲಿ ಭ್ರಷ್ಟಾಚಾರದ ವಿರುದ್ಧ ಅಸ್ತ್ರವಾಗಿ ಜನಲೋಕಪಾಲ್ ಮಸೂದೆಯನ್ನು ಜಾರಿಗೆ ತರಬೇಕು ಎಂದು ದೇಶಾದ್ಯಂತ ಹೋರಾಟಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರ ಸಿದ್ಧ ಪಡಿಸಿದ್ದ ಲೋಕಪಾಲ್ ಮಸೂದೆ ಭ್ರಷ್ಟರನ್ನು ಶಿಕ್ಷಿಸುವ ಶಕ್ತಿಯನ್ನು ಹೊಂದಿರದ ಕಾನೂನು ಎಂದು ಆರೋಪಿಸುತ್ತಾ ಬಂದಿರುವ ಅಣ್ಣಾ ಹಜಾರೆ ಮತ್ತು ಅವರ ತಂಡ, ಜನರನ್ನು ಒಳಗೊಂಡ ಒಂದು ಲೋಕಪಾಲ್ ಸಂಸ್ಥೆ ಬರಬೇಕು ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಾ ಬಂದಿದ್ದಾರೆ. ಮುಖ್ಯವಾದ ಅಂಶವೆಂದರೆ ಭ್ರಷ್ಟಾಚಾರ ನಿಗ್ರಹಕ್ಕೆ ಹಲವು ಆಯಾಮಗಳಿವೆ. ವಿವಿಧ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ನೋಡುವುದಾದರೆ ಭ್ರಷ್ಟಾಚಾರವನ್ನು ಹತ್ತಿಕ್ಕಲು ವಿವಿಧ ಮಾರ್ಗಗಳು ಕಾಣಸಿಗುತ್ತವೆ. ಹಲವು ಸೈದ್ಧಾಂತಿಕ ಹಿನ್ನೆಲೆಯಲ್ಲಿ ಜನಲೋಕಪಾಲ್ ಕರಡನ್ನು ನೋಡುವುದಾದರೆ ಸಂಪೂರ್ಣವಾಗಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಈ ಮಸೂದೆ ಎಷ್ಟು ಸಹಕಾರಿ? ಈ ಮಸೂದೆಯೇ ಅಂತಿಮವೇ ಅನ್ನೋ ತೀರ್ಮಾನಕ್ಕೆ ಜನರು ಇನ್ನೂ ಬರಬೇಕಿದೆ. ಜನರಲ್ಲಿ ಜಾಗೃತಿ ಮೂಡದ ಹೊರತು ಯಾವುದೇ ಕಾನೂನುಗಳು ಸಮಾಜದ ಸ್ವಾಸ್ಥ್ಯವನ್ನು ಸರಿಪಡಿಸಲಾರವು ಎನ್ನುವುದು ನನ್ನ ನಂಬಿಕೆ.
ಮೊನ್ನೆ 28 ನೇ ತಾರೀಕು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಕೇವಲ ನಗರದ ಸುಶಿಕ್ಷಿತ ಜನರನ್ನ ದೃಷ್ಠಿಯಲ್ಲಿ ಇಟ್ಟುಕೊಂಡು ನಡೆಸಿದ ಕಾರ್ಯಕ್ರಮವಾಗಿತ್ತು ಅನ್ನೋದು ನನ್ನ ಅಭಿಪ್ರಾಯ. ಬೆಂಗಳೂರಿನ ಹಿರಿಯರು, ವಿಧ್ಯಾರ್ಥಿಗಳು, ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ಹೊರತುಪಡಿಸಿದರೆ ಸಾಮಾನ್ಯ ಜನರು ಕೆಲವೇ ಕೆಲವು ಸಂಖ್ಯೆಯಲ್ಲಿ ಕಂಡುಬಂದರು. ಈ ಮಾತು ಯಾಕೆ ಮುಖ್ಯವೆಂದರೆ ಇಂದು ಭ್ರಷ್ಟಾಚಾರದ ಕರಾಳ ಹಿಡಿತಕ್ಕೆ ಸಿಕ್ಕಿ ನರಳುತ್ತಿರುವವರು ಬಡವರ್ಗದ ಜನರೇ. ಭ್ರಷ್ಟಾಚಾರದ ಕಾರಣದಿಂದಾಗಿ ತಮಗೆ ನ್ಯಾಯವಾಗಿ ಸಿಗಬೇಕಾಗಿದ್ದ ಸವಲತ್ತುಗಳನ್ನು ಸಹ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾವುಗಳು ಸಾಮಾನ್ಯ ಜನರನ್ನು ಕಡೆಗಣಿಸಿ ಈ ಭ್ರಷ್ಟಾಚಾರ ವಿರೋಧಿ ಹೋರಾಟವನ್ನು ಯಶಸ್ವಿಗೊಳಿಸಲು ಸಾಧ್ಯವಿಲ್ಲಾ. ನಿಜಕ್ಕೂ ಈ ಕಾರ್ಯಕ್ರಮದ ವಿವರಗಳು ಸಾಮಾನ್ಯ ಜನರನ್ನು ತಲುಪಿತೇ ಅನ್ನುವುದು ನನ್ನ ಪ್ರಶ್ನೆ?
28 ನೇ ತಾರೀಕು ನಡೆದ ಕಾರ್ಯಕ್ರಮದಲ್ಲಿ ಎದ್ದು ಕಂಡ ಕೊರತೆಯೆಂದರೆ ಕನ್ನಡವನ್ನು ಕಡೆಗಣಿಸಿದ್ದು. ಎಲ್ಲೋ ಕೆಲವು ಬೆರೆಳೆಣಿಕೆಯಷ್ಟು ಕನ್ನಡದ ಗೆಳೆಯರನ್ನು ಬಿಟ್ಟರೆ ಮಿಕ್ಕಿದ್ದೆಲ್ಲಾ ಆಂಗ್ಲ ಹಾಗೂ ಹಿಂದಿಮಯವಾಗಿತ್ತು. ಆಯೋಜಕರು ಹಾಗೂ ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು ಮರೆತು ಹೋದ ಒಂದು ಪ್ರಮುಖ ವಿಷಯವೆಂದರೆ ಆಯಾ ಪ್ರದೇಶದ ಭಾಷೆಯನ್ನ ಕಡೆಗಣಿಸಿ ಹೋರಾಟ ಅಥವಾ ಆಂದೋಲನವನ್ನ ಯಶಸ್ವಿಗೊಳಿಸಲು ಸಾಧ್ಯವಿಲ್ಲಾ. ಭಾರತದಂತಹ ಒಕ್ಕೂಟ ವ್ಯವಸ್ಥೆಯನ್ನು ಹೊಂದಿರುವ ದೇಶದಲ್ಲಿ ಭಾಷೆ ತುಂಬ ಪ್ರಮುಖ ಹಾಗೂ ಪರಿಣಾಮಕಾರಿ ಸಾಧನವಾಗಿದೆ. ಆದರೆ ಯಾಕೋ ನಮ್ಮ ಆಯೋಜಕರು ಇದನ್ನ ಮರೆತಂತಿದ್ದರು. ಕಾರಣ ಬಂದಿದ್ದ ಅನೇಕ ಜನರಿಗೆ ಕಾರ್ಯಕ್ರಮದ ಗಣ್ಯರು ಮಾಡಿದ ಹಿಂದಿ ಭಾಷಣಗಳು ಅರ್ಥವಾಗಲೇ ಇಲ್ಲಾ. ಶಾಲೆಯಲ್ಲಿ ಹಿಂದಿಯನ್ನು ಒಂದು ಭಾಷೆಯನ್ನಾಗಿ ಕಲಿತಿರುವ ನನಗೇ ಗಣ್ಯರ ಎಲ್ಲಾ ಮಾತುಗಳನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ, ಅಂತಹುದರಲ್ಲಿ ಅನೇಕರಿಗೆ ಭಾಷಣಕಾರರ ಭಾಷಣಗಳು ಅರ್ಥವೇ ಆಗಲಿಲ್ಲ ಅನ್ನೋದು ನೋವಿನ ಸಂಗತಿ. ಕಡೇ ಪಕ್ಷ ಆಯೋಜಕರು ವೇದಿಕೆಯ ಮೇಲೆ ಮಾತನಾಡಿದ ಗಣ್ಯರ ಮಾತುಗಳನ್ನು ಕನ್ನಡಕ್ಕೆ ಅನುವಾದಿಸಿ ಕರಪತ್ರಗಳನ್ನು ಹಂಚಿದ್ದರೆ ಒಳ್ಳೆಯದಿತ್ತೇನೊ ಎಂದು ಅನ್ನಿಸಿತು. ಒಟ್ಟಿನಲ್ಲಿ ನಡೆದ ಕಾರ್ಯಕ್ರಮದ ಉದ್ದೇಶ ಒಳ್ಳೆಯದೇ ಇದ್ದರು ಅದರ ಸಫಲತೆ ಇರುವುದು ಅದನ್ನು ಜನರಿಗೆ ತಲುಪಿಸುವ ಬಗೆಯಲ್ಲಿ. ಈ ನಿಟ್ಟಿನಲ್ಲಿ ಮುಂದೆ ನಡೆಯುವ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಜನ ಸಾಮಾನ್ಯರನ್ನು ತಲುಪುವಂತಾಗಲಿ ಅನ್ನುವುದು ನನ್ನ ಆಶಯ.
(ಚಿತ್ರ ಕೃಪೆ : http://www.saaku.in)





ಆತ್ಮೀಯ
ಹೌದು ಕನ್ನಡವನ್ನು ಪೂರ್ತಿಯಾಗಿ ಕಡೆಗಣಿಸಲಾಗಿತ್ತು. ಎಲ್ಲೋ ಕೆಲವು ಮ೦ದಿ ಕನ್ನಡದಲ್ಲಿ ಮಾತನಾಡಿದ್ದು ಬಿಟ್ಟರೆ. ಸ್ವಾಗತ ಮಾಡಿದ ಕಾರ್ಯಕರ್ತರು ತಮಗೆ ಕನ್ನಡ ಬರುವುದಿಲ್ಲವೆ೦ಬ೦ತೆ (ಅವರು ಕನ್ನಡವರಲ್ಲವೇನೋ? :)) ಆ೦ಗ್ಲಮಿಶ್ರಿತ ಕನ್ನಡದಲ್ಲಿ (ಕೆಲವರು) ಪೂರ್ತಿಯಾಗಿ ಆ೦ಗ್ಲಭಾಷೆಯಲ್ಲಿ ಮಾತನಾಡಿ ಸ೦ತೋಷಪಟ್ಟರು. ಒಬ್ಬೊಬ್ಬರು ಒಬ್ಬೊಬ್ಬರನ್ನು ಸ್ವಾಗತಿಸಿದ್ದು ಚೆನ್ನಾಗಿತ್ತು.:) ಎಲ್ಲರಿಗೂ ಅವಕಾಶವನ್ನು (ವೇದಿಕೆಯನ್ನೇರಲು) ಕೊಡಲಾಗಿತ್ತು ಮತ್ತು ಅದಕ್ಕೆ ಪೈಪೋಟಿಯಿದ್ದ೦ತಿತ್ತು. ಒ೦ದಷ್ಟು ಕಾರ್ಯಕರ್ತರು ಅಲ್ಲೇ ಠಿಕಾಣಿ ಹೂಡಿದ್ದರು ಕೂಡ(ವೇದಿಕೆಯ ಹಿ೦ದೆ). ಆರು ಜನ ಅಥಿತಿಗಳನ್ನು ಸತ್ಕರಿಸಲು ೧೦ – ೧೨ ಜನ ಕಾರ್ಯಕರ್ತರು ವೇದಿಯಲ್ಲಿದ್ದರು.
ವಯೋವೃದ್ದರನೇಕರು ಬಿಸಿಲಿನಲ್ಲಿ ಹಾಯಾಗಿ(?) ಕುಳಿತು ಸಭೆ ವೀಕ್ಷಿಸಿದರು. (ವ್ಯ೦ಗ್ಯಕ್ಕೆ ಕ್ಷಮೆ ಇರಲಿ. ಕನಿಷ್ಠ ವೃದ್ಧರಿಗಾದರೂ ಒ೦ದು ವ್ಯವಸ್ಥೆ ಮಾಡಬಹುದುದಿತ್ತು.) ಬೇರೆ ಎಲ್ಲರನ್ನೂ ಉಪಚರಿಸಿದ್ದು ಅದ್ಬುತವಾಗಿತ್ತು. ಮೊದಮೊದಲು ವೀಕ್ಷರನ್ನು ದೇವರ೦ತೆ ಕ೦ಡವರು ನ೦ತರ ವೇದಿಕೆಗಾಗಿ ಅಪೇಕ್ಷೆಪಟ್ಟದ್ದು…. ಹ್ಮ್! ಬಿಡಿ. ಅರ್ದ ಲೋಟ ತು೦ಬಿತ್ತು ಅಷ್ಟು ಸಾಕು 🙂
ಹರಿ
ಯಾರಿಗೆ ಆಗಲೀ ಅನುಕೂಲ ಮಾಡಿಕೊಟ್ಟು ತಂಪಾಗಿ ಹಾಯಾಗಿ ಕೂರಿಸಲು ಅದು ಮದುವೆ ಕಾರ್ಯಕ್ರಮ ಅಲ್ಲವಲ್ಲ. ಬಂದವರು ಬೀಗರೂ ಅಲ್ಲ. ಪ್ರತಿಯೊಬ್ಬನೂ ತಮ್ಮ ಜವಾಬ್ದಾರಿ ಎಂದು ತಿಳಿದುಕೊಂಡರೆ ಸಾಕು.
ಆತ್ಮೀಯ
ಎಲ್ರಿಗೂ ತ೦ಪಾಗಿರಕ್ಕೆ ಅವಕಾಶ ಕೊಡಿ ಅ೦ತ ನಾ ಕೇಳಲಿಲ್ಲ. ತು೦ಬಾ ವಯಸ್ಸಾಗಿದ್ದ ಬಿಸಿಲಿನ ಝಳಕ್ಕೆ ಸೊರಗಿ ಕರಗಿ ಹೋಗಬಹುದಾಗಿದ್ದ ಹಿರಿಯರಿಗೆ ಮಾತ್ರ. ನಿಜ ಅದು ಮದ್ವೆ ಮನೆ ಅಲ್ಲ ಹಾಗಾಗಿದ್ರೆ ನಮಗೂ ಸರ್ಯಾದ ಜಾಗ ಕೊಡ್ಲಿಲ್ಲ ಅ೦ತ ಗಲಾಟೆ ಮಾಡ್ತಾ ಇದ್ವೇನೋ! ನಾನು ಕೇಳಿದ್ದು ದೊಡ್ಡೋರಿಗೆ ಮಾತ್ರ. ಬೆರಳೆಣಿಕೆಯಷ್ಟು ಜನ ಇದ್ರು ಹಿರಿಯರು, ಮೇಲಾಗಿ ಅವರು ಬ೦ದದ್ದು ತು೦ಬಾ ಜನಕ್ಕೆ ಗೊತ್ತು. ಕೈಲಿ ಬಾವುಟ ಹಿಡ್ಕೊ೦ಡು ಕೋಟು ಹಾಕ್ಕೊ೦ಡು ಬ೦ದ್ರು “ಪರ್ವಾಗಿಲ್ಲ ಬಿಡಿ ನಾವು ಹಿ೦ದೇನೇ ಕೂರ್ತೇವೆ”ಅ೦ತ ವಿನಯವಾಗೇ ಹೇಳಿದ್ರು. ಇಷ್ಟಾದ್ರೂ ಅವರಿಗೆ ಪ್ರಜ್ಞೆ ಬರ್ಲಿಲ್ಲ. ದೊಡ್ಡ ನಿರೀಕ್ಷೆಯನ್ನೇನೂ ಇಟ್ಕೊ೦ಡಿರ್ಲಿಲ್ಲ, ಕನಿಷ್ಟ ಅವರಿಗಾಗಿ ಆದ್ರೂ ಸ್ವಲ್ಪ ಸ್ಥಳ ಮಾಡಿಕೊಟ್ಟಿದ್ರೆ ಸಾಕಿತ್ತು. ನೂರಾರು ಕಾರ್ಯಕರ್ತರ ಕಣ್ಗೆ ಇವರು ಕಾಣಿಸ್ಲಿಲ್ಲ ಅ೦ತ ಮಾತ್ರ ಹೇಳ್ಬೇಡಿ. ಇನ್ನು ಜವಾಬ್ದಾರಿ ವಿಷ್ಯ, ಒ೦ದು ಚೂರೂ ಮಾತನಾಡದೆ ವಿಷಯಗಳನ್ನ ಕೇಳ್ತಾ ಸುಡೋ ಬಿಸಿಲಿನಲ್ಲಿ ಬೆವರು ಒರೆಸಿಕೊಳ್ತಾ ಆ ವಯೋ, ಜ್ಞಾನ ವೃದ್ದರು ಕೂತಿದ್ದನ್ನ ನೋಡಿದ್ರೆ ಗೊತ್ತಾಗ್ತಾ ಇತ್ತು. ಇರ್ಲಿ ಬಿಡಿ. ಎಲ್ರನ್ನ ತ೦ಪು ಮಾಡಕ್ಕಾಗಲ್ಲವಲ್ಲ. ಹ್ಮ್ ! 🙂
ಹರಿ
ಹೌದು, ಭ್ರಷ್ಟಾಚಾರಕ್ಕಿಂತ ಬಿಸಿಲೇ ದೊಡ್ಡದು ಅಂದುಕೊಂಡಾಗ ಹೀಗಾಗುತ್ತವೆ ಮತ್ತು ಆ ಆಂದೋಲನ ಕೇವಲ ಕಾರ್ಯಕರ್ತರ ಜವಾಬ್ದಾರಿ ಅಂದುಕೊಂಡಾಗ ಹೀಗೆಲ್ಲ ಯೋಚನೆಗಳು ಬರುತ್ತವೆ.
ಉತ್ತಮ ಲೇಖನ, ಲೇಖನ ಅಂದರೆ ಈತರಹ ಬರೀಬೇಕು. ಇನ್ನೊಬ್ಬ ಮಹಾಶಯನ ಲೇಖನಕ್ಕೂ ನಿಮ್ಮ ಲೇಖನಕ್ಕೂ ತುಂಬಾ ವ್ಯತ್ಯಾಸ ಇದೆ. ಮುಖ್ಯವಾಗಿ ಏನು ಬೇಕೊ ಅದನ್ನು ಬರೀಬೇಕು ಆಗ ಆ ಲೇಖನಕ್ಕೊಂದು ಘನತೆ ಬರುತ್ತೆ.. Good work, keep it up,
ಭಾಷಣದ ಅನುವಾದಕರು ಇದ್ದಿರಬಹುದೆಂಬ ನಿರೀಕ್ಷೆ ಇತ್ತು.
ಬಹುಷಃ ಮುಂದಿನಬಾರಿ ಈ ಬಗ್ಗೆ ಎಚ್ಚರ ವಹಿಸಿಯಾರೆಂಬ ನಿರೀಕ್ಷೆ ನನಗೆ.
ಕನ್ನಡದ ಬಗೆಗಿನ ನಿರ್ಲಕ್ಷ್ಯವನ್ನು http://www.saaku.in ನಲ್ಲೇ ಮನಗಂಡಿದ್ದೇನೆ.
“ಬ್ರಷ್ಟಾಚಾರ” ಪದವನ್ನು “ಭ್ರಷ್ಟಾಚಾರ” ಎಂದು ಬದಲಿಸಿ ಎಂದು ಅವರು ನೀಡಿರುವ ಚರದೂರವಾಣಿ ಸಂಖ್ಯೆಗೆ ಸಂದೇಶ ಕಳುಹಿಸಿದ್ದೆ, ಮಿಂಚಂಚೆ ಕಳುಹಿಸಿದ್ದೆ. ಅಲ್ಲದೇ, ಕೊನೆಗೆ ಕರೆ ಮಾಡಿ ತಿಳಿಸಿದ್ದೆ ಕೂಡ.
ಆದರೂ ಅದನ್ನು ಬದಲಿಸಿಲ್ಲ.
ಆತ್ಮೀಯ
ಅನುವಾದಕರು ಇದ್ರು ಸರ್ ಬಾಲಸುಬ್ರಹ್ಮಣ್ಯ೦ ಅ೦ತ ಚೆನ್ನಾಗಿ ಮಾಡಿದ್ರು. ಆದರೆ ಇ೦ಗ್ಲೀಷಿನ ಘಾಟು ಭಾಳ.. ಕನ್ನಡ ಮೂಲೆಗು೦ಪಾಗಿದ್ದು ನಿಜ
ನಿಮ್ಮ ಪಾಲ್ಗೊಳ್ಳುವಿಕೆ ಅದ್ಭುತ ! ‘ಬ್ರ’ ವನ್ನು ‘ಭ್ರ’ ಮಾಡಿಸಲು ಬಹಳ ಹೋರಾಡಿದ್ದೀರಿ. ನಿಮ್ಮ ಸೇವೆಗೆ ಧನ್ಯವಾದಗಳು !
ನೀವು ಹೇಳಿದ್ದು ನಿಜಾ , ಆದರೆ ಭಾಷಣ ಮುಗಿದ ನಂತರ ೮ – ೧೦ ಮಂದಿ ಕನ್ನಡಿಗರು ಆಯೋಜಕರಿಗೆ ಕೇಳಿದೆವು ಕನ್ನಡವನ್ನು ಕಡೆಗಣಿಸಿದ್ದೇಕೆ ? ಈ ಹೋರಾಟ ಯಶಸ್ವಿಯಾಗಲು ಆಯಾ ರಾಜ್ಯದ ಪ್ರಾದೇಶಿಕ ಭಾಷೆಗೆ ಮಹತ್ವ ಕೊಟ್ಟಲ್ಲಿ ಮಾತ್ರ, ಪ್ರತಿಯೊಬ್ಬರನ್ನು ತಲುಪಲು ಸಾಧ್ಯ ಎಂದು. ಹಾಗೂ ನಮ್ಮೊಂದಿಗೆ ಆರಕ್ಷಕ ಸಿಬ್ಬಂದಿ ಕೂಡ ಧ್ವನಿಗೂಡಿಸಿದರು ” ಕನ್ನಡವನ್ನು ಕಡೆಗಣಿಸಿದ್ದಕ್ಕೆ ನಮಗೂ ಬೇಜಾರಾಗಿದೆ” ಎಂದು. ಆಗ ಎಲ್ಲಿಂದಲೋ ಬಂದ ಒಂದಿಬ್ಬರು ಢೋಂಗಿ Volunteers ಹೇಳಿದ್ರು ಕನ್ನಡ ಅಂದ್ರೆ corruption ಅಂತೆ ಎಲ್ಲರೂ ಹಿಂದಿ ಕಲಿಯಿರಿ ಎಂದು. ಆವಾಗ ಸಿಟ್ಟಿಗೆದ್ದ ಕನ್ನಡಿಗರನ್ನು ಆರಕ್ಷಕರು ಹಾಗೂ ಆಯೋಜಕರು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಸಮಾಧಾನ ಪಡಿಸಿದ ಮೇಲೆ ಪರಿಸ್ಥಿತಿ ತಿಳಿಯಾಯಿತು.
ನೋಡಿ ಈ ರೀತಿ ಉದ್ದಟತನದಿಂದ ವರ್ತಿಸುವವರಿಗೆ (ಢೋಂಗಿ Volunteers) ಹೇಳುವುದೆಂದರೆ :
ದಯವಿಟ್ಟು ಅತಿರೇಕದಿಂದ ವರ್ತಿಸಬೇಡಿ ದೇಶದ ಎಲ್ಲಾ ಭಾಷೆ, ರಾಜ್ಯಗಳು ಸೇರಿದರೆ ಮಾತ್ರ ಭಾರತ. ಯಾವುದೇ ಭಾಷೆ ಹಾಗೂ ರಾಜ್ಯವನ್ನು ಕಡೆಗಣಿಸಿ ಈ ಹೋರಾಟ ಯಶಸ್ವಿಗೊಳಿಸಲು ಸಾಧ್ಯವಿಲ್ಲ. ನೀವು ನಿಂತ ನೆಲದ ಭಾಷೆಯನ್ನೇ ಗೌರವಿಸದ ಮೇಲೆ ನೀವು ಭಾರತಾ0ಭೆಯನ್ನು ಹೇಗೆ ಗೌರವಿಸುವಿರಿ.
ನಿಮಗೆ ನಿಮ್ಮ ಭಾಷೆ ಹಾಗೂ ನಿಮ್ಮ ಸಂಸ್ಕೃತಿ, ಬೇರೆ ಭಾಷೆ ಹಾಗೂ ಸಂಸ್ಕೃತಿ ಇರುವ ನಾಡಿಗೆ ಹೋದಾಗ ಗೌರವ ಕೊಡುವುದನ್ನು ಕಲಿಸದೇ ಇದ್ದರೆ ಅಥವಾ ನೀವು ಕಲಿತಿಲ್ಲದಿದ್ದರೆ ..ದಯವಿಟ್ಟು ಇಂತಹ ಕಾರ್ಯಕ್ರಮಗಳಿಗೆ ಬಂದು Volunteers ಎಂದು ಲೇಬಲ್ ಆ೦ಟಿಸಿಕೊಂಡು ಕಾರ್ಯಕ್ರಮದ ಘನತೆ ಹಾಳುಮಾಡಬೇಡಿ.
ಭ್ರಷ್ಟಾಚಾರಿಗಳಿಗೆ ಹಾಗೂ ಕನ್ನಡ ವಿರೋಧಿಗಳೇ ನಾಡನ್ನು ಬಿಟ್ಟು ತೊಲಗಿ …. ಇಂತಹ ಢೋಂಗಿ Volunteers ಗಳಿಗೆ ೬- ೧/೨ ಕೋಟಿ ಭಾರತೀಯ ಕನ್ನಡಿಗರ ಧಿಕ್ಕಾರ….
ಜೈ ಹಿಂದ್ ….ವಂದೇ ಮಾತರಂ ….ಜೈ ಕರ್ನಾಟಕ….
ಸರಿಯಾಗಿ ಹೇಳಿದಿರಿ ಸಾಗರ್ ಅವರೇ , 99% ಕಾರ್ಯಕ್ರಮಗಳು ಕುಲಗೆಟ್ಟು ಹೋಗೋದು ಇಂತಹ ಡೋಂಗಿ Volunteersಗಳಿಂದಲೇ. ಅಂತಹವರಿಗೆ ಕಾರ್ಯಕ್ರಮದ ಮಹತ್ವವಾಗಲಿ ಸಭ್ಯತೆಯಾಗಲಿ ಬೇಕಾಗಿಲ್ಲ.
ದರಿದ್ರ ಜನಾನಪ್ಪಾ, ಯಾಕಾದ್ರೂ ಹುಟ್ಟುತ್ತಾರೋ? ಯಾಕಾದ್ರೂ ಇಂತಹ ಸಮಾರಂಬಗಳಿಗೆ ಬರುತ್ತಾರೋ? ವಿದ್ಯಾವಂತ ಪಿಶಾಚಿಗಳು !!!!!!!
ಆತ್ಮೀಯ
ನ೦ದೂ ಒ೦ದು +೧ ಸೇರಿಸಿಕೊಳ್ಳಿ ನಿಮ್ಮ ಪ್ರತಿಕ್ರಿಯೆಗೆ
ಈ ಕಾರ್ಯಕ್ರಮದ ಸ್ವಯಂ ಸೇವಕರಲ್ಲಿ ನಾನೂ ಒಬ್ಬನಾಗಿದ್ದೆ.ಆ ತಂಡದಲ್ಲಿ ಕನ್ನಡದ ಬಗ್ಗೆ ಅಸಡ್ಡೆ ಇರುವುದಂತು ಕಟು ಸತ್ಯ.ಅಪ್ಪಿ ತಪ್ಪಿ ಕನ್ನಡ ಬಳಸಿದ್ರು ಅಂದ್ರೆ ಅದು ಭಯದಿಂದಲೇ ಹೊರತು ಭಕ್ತಿಯಿಂದಲ್ಲ.ಹೊರಟಿದ್ದ ಕಾರ್ಯದ ಉದ್ದೇಶ ದೊಡ್ಡದಿದ್ದರಿಂದ ಈ ಬಗ್ಗೆ ಹೆಚ್ಚು ಮಾತನಾಡ ಹೋಗಲಿಲ್ಲ.
ಇ೦ತಹ ಸಮಯದಲ್ಲಿ ಬಾಷೆಯ ವಿಷಯ ಬ೦ದಿರುವುದು ವಿಪರ್ಯಾಸ ನಮ್ಮ ಹಾಗೆ ಬೇರೆ ರಾಜ್ಯದಲ್ಲು ಹೀಗೆ ಆದರೆ ನಮ್ಮ ಗುರಿಯೆ ಬದಲಾಗುತ್ತೆ ಇಲ್ಲಿ ಬ್ರಷ್ತ್ರಾಚಾರ ವಿರುದ್ದದ ಹೋರಾಟ ಮುಖ್ಯ ಹೊರತು ಬಾಷೆಯಲ್ಲ,
ಅದ್ಯಕೊ ಗೊತ್ತಿಲ್ಲ ಹಿ೦ದಿ ಅ೦ದರೆ ಯಾಕಿಷ್ಟು ಕೋಪ ದ್ವೇಷ, ಅದು ಕೂಡ ನಮ್ಮ ಬಾಷೆಯಲ್ಲವೆ ಅದರಲ್ಲೂ ರಾಷ್ಟ್ರ ಬಾಷೆ, ವಿವಿದತೆಯಲ್ಲಿ ಎಕತೆ ಇರಬೇಕು ಅನ್ನುವುದು ಎಲ್ಲರ ವಾದ, ಆದರೆ ಎಲ್ಲಿದೆ ಎಕತೆ ನಮ್ಮ ರಾಷ್ತ್ರ ಬಾಷೆಯನ್ನೇ ವಿರೊದಿಸುತಿದ್ದೇವೆ ಆದರೆ ನಮ್ಮ ಜನ ಬೇರೆ ವಿದೇಶ ಬಾಷೆಯನ್ನು ಕಲಿತು (ಜರ್ಮನಿ, ಪ್ರೆ೦ಚ್) ಹೆಮ್ಮೆಯಿ೦ದ ಬೀಗುತ್ತ್ತಾರೆ, ಆದರೆ ಹಿ೦ದಿ ಮಾತ್ರ ಬೇಡ
ಆದರೂ ಪ್ರಾದೇಶಿಕ ಬಾಷೆ ಮುಖ್ಯ ಅ೦ತ ನನಗು ಗೊತ್ತು ಹಾಗೆ೦ದ ಮಾತ್ರೆಕ್ಕೆ ರಾಷ್ತ್ರ ಬಾಷೆಯನ್ನು ವಿರೊದಿಸುವುದು ಸರಿಯಲ್ಲ. ಮೊದಲು ದೇಶ ನ೦ತರ ರಾಜ್ಯ, ಬಾಷೆ.
ಆಭಿ ರವರೇ,
ಕನ್ನಡಿಗರೆ೦ದು ಹಿ೦ದಿ ವಿರೋಧಿಗಳಲ್ಲ, ಕನ್ನಡ ವಿರೋಧಿಗಳ ವಿರೋಧಿಗಳು. ಎಲ್ಲಿಯಾದರು ಕನ್ನಡಿಗರು ಹಿ೦ದಿ ಬೇಡವೆ೦ದು ಹೇಳಿಲ್ಲ ಆದರೆ ಹಿ೦ದಿಯ೦ತೆ ಕನ್ನಡಕ್ಕೂ ಪ್ರಾಶಸ್ತ್ಯ ನೀಡಿ ಎ೦ದರೇ ಹಿ೦ದಿ ವಿರೋಧಿಗಳು ಎ೦ದು ಹೇಗೆ ಅರ್ಥ ಬರುತ್ತೆ ನೀವೇ ಹೇಳಿ ? ನೀವು ತಿಳಿದಿರುವ ಹಾಗೆ ಹಿ೦ದಿ ರಾಷ್ಟ್ರ ಭಾಷೆ ಅಲ್ಲ. ಇ೦ಗ್ಲೀಷ್ ಹಾಗು ಹಿ೦ದಿ ಕೇ೦ದ್ರ ಸರ್ಕಾರದ ಆಡಳಿತ ಭಾಷೆಗಳಷ್ಟೆ, ಹಾಗೇನಾದರು ರಾಷ್ಟ್ರ ಭಾಷೆ ಮಾಡುವುದಿದ್ದರೆ ಸ೦ಸ್ಕೃತ ರಾಷ್ಟ್ರ ಭಾಷೆ ಯಾಗುತಿತ್ತು. ಸ೦ವಿಧಾನದ ಪ್ರಕಾರ ಭಾರತ ದೇಶದ ಎಲ್ಲಾ ಭಾಷೆಗಳು ರಾಷ್ಟ್ರ ಭಾಷೆಗಳು. ಅದರಿ೦ದಲೇ ನೀವು ಭಾರತದಲ್ಲಿ ಚಲಾವಣೆಯಾಗುವ ನೋಟಿನಲ್ಲಿ ಎಲ್ಲಾ ಭಾಷೆಗಳನ್ನು ನೀವು ಕಾಣಬಹುದು. ನೀವು ಹೇಳಿದ೦ತೆ ಇಲ್ಲಿ ಮುಖ್ಯವಾದದ್ದು ಭ್ರಷ್ಟಾಚಾರದ ವಿರುದ್ಧ ಸಮರ, ಆದರೆ ಇಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು ಎ೦ಬ ಉದ್ದೇಶವಿದೆ. ನಾವು ಪ್ರತಿಯೊಬ್ಬರನ್ನು ಬಡಿದೆಬ್ಬಿಸಿ ಹೋರಾಡಲು, ಅವರ ಮಾತೃಭಾಷೆಯಲ್ಲಿ ನಮ್ಮ ಉದ್ದೇಶ ಅವರನ್ನು ತಲುಪುವ೦ತೆ ಮಾಡಿದಲ್ಲಿ ಮಾತ್ರ ಸಾರ್ಥಕ್ಯ. ಭಾಷೆ ಹಲವು ಆದರೂ ಭಾವನೆ ಒ೦ದು ಎ೦ದು ಮುನ್ನಡೆಯೋಣ. ಭವ್ಯ ಭಾರತವನ್ನು ನಿರ್ಮಿಸೋಣ. ಆದರೆ ಒ೦ದು ಮಾತ್ರ ಸತ್ಯ ಕನ್ನಡವನ್ನು ವಿರೋಧಿಸುವವರು ದೇಶ ಭಕ್ತರಲ್ಲ, ಹಿ೦ದಿ ವಿರೋಧಿಸಿದರೆ ಕನ್ನಡ ಬೆಳೆಯುತ್ತೆ ಅನ್ನೊ ಭ್ರಮೆಯು ಕನ್ನಡಿಗರಿಗಿಲ್ಲ, ಎಲ್ಲಿಯಾದರು ಇರಿ ಅಲ್ಲಿನ ಭಾಷೆ ಹಾಗೂ ಸ೦ಸ್ಕೃತಿಗೆ ಗೌರವಿಸಿ.
@ಸಾಗರ್, ತುಂಬಾ ಸರಿಯಾಗಿ ಹೇಳಿದ್ದಿರಿ.
@ಅಭಿ,
ನೀವು ನನ್ನ ಲೇಖನವನ್ನ ಇನ್ನೊಂದು ಸರ್ತಿ ಪೂರ್ತಿಯಾಗಿ ಓದಿ. ಇಲ್ಲಿ ನಾನೆಲ್ಲೂ ಹಿಂದಿ ಭಾಷೆಯ ಬಗ್ಗೆ ದ್ವೇಷದಿಂದ ಬರೆದಿಲ್ಲ. ಇಲ್ಲಿ ಭಾಷೆ ಅತಿ ಮುಖ್ಯ, ಕಾರಣ ಅಲ್ಲಿ ಬಂದಿದ್ದ ಅನೇಕ ಜನರಿಗೆ ಹಿಂದಿ ಭಾಷೆ ಬರುತ್ತಿರಲಿಲ್ಲ, ಯಾವುದೇ ಚಳುವಳಿ/ಹೋರಾಟಗಳು ಯಶಸ್ವಿಯಾಗೋದು ಅದು ಜನರಿಗೆ ಮುಟ್ಟಿದರೆ ಮಾತ್ರ. ಆದರೆ ಅಲ್ಲಿ ಭಾಷಣ ಮಾಡಿದ ಗಣ್ಯರ ಮಾತುಗಳು ಅನೇಕ ಜನರಿಗೆ ಅರ್ಥವೇ ಆಗಲಿಲ್ಲ. ಅಂದರೆ ಸಭೆಯ ಉದ್ದೇಶ ಇಡೆರಿದಂತೆ ಆಗಲೇ ಇಲ್ಲ. ದೇಶದ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ನಾಯಕರು ಇಂತಹ ಸಂಗತಿಗಳಿಗೆ ಗಮನ ಕೊಡಲೇಬೇಕು.
ಇನ್ನು ಹಿಂದಿ ನಮ್ಮ ರಾಷ್ಟ್ರ ಭಾಷೆ ಅನ್ನೋ ನಿಮ್ಮ ತಪ್ಪು ಮಾಹಿತಿಗೆ ಸಾಗರ್ ಉತ್ತರ ನೀಡಿದ್ದಾರೆ.
ನಿಮ್ಮೆಲರ ಅಬಿಪ್ರಾಯಕ್ಕೆ ಧನ್ಯವಾದಗಳು ಹಾಗದರೆ ನನ್ನದೊ೦ದು ಪ್ರಶ್ನೆ ಯಾರದರು ಬೇರೆ ರಾಜ್ಯದವರು ಕರ್ನಾಟಕ್ಕೆ ಬ೦ದರೆ ಅವರು ಯಾವ ಬಾಷೆಯಲ್ಲಿ ಮಾತಡಬೇಕು ತಕ್ಶಣ ಕನ್ನಡ ಕಲಿತು ಮತನಾಡುವುದು ಕಷ್ತ ಉದಾಹರಣಗೆ ನಾವೇ ಬೇರೆ ರಾಜ್ಯಕ್ಕೆ ಪ್ರಾವಸಕ್ಕೆ ಹೋದರೆ ಯಾವ ಬಾಷೆ ಮಾತನಾಡಬೇಕು ಇ೦ತಹ ಸ೦ದರ್ಬದಲ್ಲಿ ಒ೦ದು ಸಾಮನ್ಯ ಸ೦ಪರ್ಕ ಬಾಷೆ ಬೇಕಲ್ಲವೆ. ಆ೦ಗ್ಲ ಬಾಷೆ ಮಾತನಾಡುವುದುಕ್ಕಿ೦ತ ನಮ್ಮದೆ ಯಾವುದೊ ಬಾಷೆ ಯಾಕಗಬಾರದು. ನೀವೆಲ್ಲರೂ ಹೇಳಿದ ಹಾಗೆ ಹಿ೦ದಿ ರಾಷ್ತ್ರ ಬಾಷೆ ಅಲ್ಲ ಅ೦ತನೆ ಬಾವಿಸೊಣ ಹಾಗದರೆ ನಮ್ಮ ಬಾರತದಲ್ಲಿ ಒ೦ದು ಸಾಮನ್ಯ ಬಾಷೆ ಇಲ್ಲವೆ ಅದು ಎಲ್ಲ ರಾಜ್ಯಗಳ ಸ೦ಪರ್ಕ ಮಾದ್ಯಮವಾಗಬೇಕು. ನೀವು ಯಾವುದೆ ಸಕ್ರಾರದ ಸುತ್ತೋಲೆಯನ್ನು ಗಮನಿಸಿ ಅದರಲ್ಲಿ ಆ೦ಗ್ಲ ಬಾಷೆಯಿಲ್ಲವೆ ಅದು ಹೇರಿಕೆಯಲ್ಲವೆ
ಇಲ್ಲಿ ವಿಷಯ ಒ೦ದೆ ಬಾರತದಲ್ಲಿ ಹಲವಾರು ಬಾಷೆಗಳಿವೆ ಹಲವಾರು ರಾಜ್ಯಗಳಿವೆ ಆದರೆ ಅದನ್ನೆಲ ಒಗ್ಗೂಡಿಸುವ ಒ೦ದು ಬಾಷೆ ಬೇಕು, ಕರ್ನಾಟಕದಲ್ಲೆ ಬಹಳ ಸಮಯದಿ೦ದ ಇದ್ದು ಕನ್ನಡ ಬಾರದೆ ಇದ್ದವರು ಬಹಳ ಜನ ಇದ್ದಾರೆ ಅದಕ್ಕೆ ಕಾರಣ ಅವರಲ್ಲ ನಾವೇ…………!
“ನಮ್ಮಲ್ಲಿ ಹಲವು ಭಾಷೆಗಳಿವೆ, ಅವರುಗಳ ನಡುವೆ ಮಾತುಕತೆ ನಡೆಯಲು ಒಂದು ಭಾಷೆ ಬೇಕಲ್ವ, ಹಂಗಾಗಿ ಹಿಂದಿ” ಎಂಬ ಆಲೋಚನೆ ಹಲವರಲ್ಲಿರೋದು ಕಾಣಬಹುದು.
ಆ ರೀತಿಯ ಆಲೋಚನೆಯನ್ನು ವಿಮರ್ಶೆ ಮಾಡುವ ಮೊದಲು, “ಲಿಂಕ್ ಲಾಂಗ್ವೇಜ್ ಎಂದರೇನು, ಇತರೆ ಭಾಷಿಕ ಸಮುದಾಯಗಳು ಹೇಗೆ ಲಿಂಕ್ ಲಾಂಗ್ವೇಜ್ ಇಟ್ಟುಕೊಂಡಿವೆ”, ಎಂಬುದನ್ನು ನೋಡಬೇಕಾಗುತ್ತದೆ.
ಪ್ರತಿಯೊಂದು ಭಾಷಿಕ ಸಮುದಾಯವೂ, ಇತರೆ ಭಾಷಿಕ ಸಮುದಾಯಗಳ ಜೊತೆ ಮಾತುಕತೆ ನಡೆಸಲೇ ಬೇಕಾಗುತ್ತದೆ. ವ್ಯವಹಾರ ನಡೆಸಲೇ ಬೇಕಾಗುತ್ತದೆ. ಆ ಮಾತುಕತೆ, ವ್ಯವಹಾರಕ್ಕೆ ಎರಡು ಭಾಷಿಕ ಸಮುದಾಯಕ್ಕೆ ಸೇರಿದವರೂ ಬಲ್ಲ ಒಂದು ಭಾಷೆ ಬೇಕಾಗುತ್ತದೆ. ಅದನ್ನೇ ಲಿಂಕ್ ಲಾಂಗ್ವೇಜ್ ಎಂದು ಕರೆಯಬಹುದಾಗಿದೆ.
ಉದಾಹರಣೆಗಾಗಿ, ಜಪಾನೀಸ್ ಮತ್ತು ಜರ್ಮನ್ ಭಾಷಿಕ ಸಮುದಾಯಗಳನ್ನೇ ತೆಗೆದುಕೊಳ್ಳಬಹುದು. ಈ ಎರಡೂ ಭಾಷಿಕ ಸಮುದಾಯಗಳು, ಇತರೆ ಬಹುತೇಕ ಭಾಷಿಕ ಸಮುದಾಯಗಳೊಡನೆ ವ್ಯವಹಾರ ನಡೆಸುತ್ತವೆ. ಆ ವ್ಯವಹಾರಗಳಲ್ಲೆಲ್ಲಾ ಹೆಚ್ಚಾಗಿ ಇಂಗ್ಲೀಷನ್ನೇ ಬಳಸುತ್ತಾರೆ (ಕೆಲವೆಡೆ ಫ್ರೆಂಚು, ಚೈನೀಸು ಬಳಸುವ ಉದಾಹರಣೆಯುಂಟು). ಈ ಎರಡೂ ಸಮುದಾಯಗಳು, ಇಂಗ್ಲೀಷನ್ನೇ ಲಿಂಕ್ ಲಾಂಗ್ವೇಜ್ ಎಂದು ಒಪ್ಪಿಕೊಂಡಿವೆ ಎಂದು ಹೇಳಬಹುದಾಗಿದೆ. ಆದರೆ, ಲಿಂಕ್ ಲಾಂಗ್ವೇಜನ್ನು ಆ ಸಮುದಾಯದ ಎಷ್ಟು ಮಂದಿ ಬಲ್ಲರು ಎಂದು ತಿಳಿಯಲು, ಒಮ್ಮೆ ಜರ್ಮನಿಗೋ ಅಥವಾ ಜಪಾನಿಗೋ ಭೇಟಿ ಕೊಟ್ಟರೆ ತಿಳಿಯುತ್ತದೆ. ಅವಶ್ಯಕತೆ ಇರುವ ಕೆಲವೇ ಕೆಲವು ಮಂದಿ, ತಮ್ಮ ಸಮುದಾಯದ ಲಿಂಕ್ ಲಾಂಗ್ವೇಜ್ ಬಲ್ಲರು. ಸಮುದಾಯದ ಹೆಚ್ಚಿನ ಜನರಿಗೆ ತಮ್ಮ ಭಾಷೆಯಲ್ಲೇ ಎಲ್ಲಾ ನಡೆದು ಹೋಗುತ್ತದೆ. ಹಾಗಾಗಿ, ಲಿಂಕ್ ಲಾಂಗ್ವೇಜ್ ಆಗಿ ನಾವು ಕನ್ನಡಿಗರು ಯಾವುದೇ ಭಾಷೆಯನ್ನು ಒಪ್ಪಿಕೊಂಡರೂ, ಅದನ್ನು ಎಲ್ಲರೂ ಕಲಿಯಬೇಕು ಎಂದು ಮಾಡಬೇಕಾಗಿಲ್ಲ. ಅವಶ್ಯಕತೆ ಇದ್ದವರು ಮಾತ್ರ ಕಲಿಯುತ್ತಾರೆ. ಅವಶ್ಯಕತೆ ಇದ್ದವರು ಕಲಿಯಲು ತಕ್ಕ ಏರ್ಪಾಡು ಮಾಡುವುದು ಸರಕಾರದ ಕೆಲಸವಾಗಿರಬೇಕೇ ಹೊರತು, ಎಲ್ಲರಿಗೂ ಕಲಿಸಲು ಮುನ್ನುಗ್ಗುವುದಲ್ಲ.
@ಅಭಿ,
[ಬೇರೆ ರಾಜ್ಯದವರು ಕರ್ನಾಟಕ್ಕೆ ಬ೦ದರೆ ಅವರು ಯಾವ ಬಾಷೆಯಲ್ಲಿ ಮಾತಡಬೇಕು ತಕ್ಶಣ ಕನ್ನಡ ಕಲಿತು ಮತನಾಡುವುದು ಕಷ್ತ ಉದಾಹರಣಗೆ ನಾವೇ ಬೇರೆ ರಾಜ್ಯಕ್ಕೆ ಪ್ರಾವಸಕ್ಕೆ ಹೋದರೆ ಯಾವ ಬಾಷೆ ಮಾತನಾಡಬೇಕು]
ನಿಮಗೆ ಆ ರಾಜ್ಯದ ಭಾಷೆ ಗೊತ್ತಿದ್ದರೆ ಆ ಭಾಷೆಯಲ್ಲಿ ಮಾತನಾಡಿ ಇಲ್ಲದಿದ್ದರೆ ಇಂಗ್ಲಿಶ್ ಭಾಷೆ ಉಪಯೋಗಿಸಬಹುದು. ಇಂಗ್ಲೀಷ್ ಭಾಷೆ ಜಗತ್ತಿನ್ನ ಸಾಮಾನ್ಯ ಸಂಪರ್ಕ ಭಾಷೆಯಾಗಿದೆ, ಅದನ್ನ ಎಲ್ಲಿ ಬೇಕಾದರೂ ಉಪಯೋಗಿಸಬಹುದು. ಇಲ್ಲಿ ಆಂಗ್ಲ ಭಾಷೆ ಮೇಲು ಅಥವಾ ಇತರ ಭಾಷೆ ಕೀಳು ಅನ್ನೋ ಭಾವನೆ ಇಲ್ಲ. ಇವತ್ತು ಇಂಗ್ಲೀಷ್ ಭಾಷೆ ನನ್ನಂತಹ ಬಹುತೇಕ ಜನರಿಗೆ ಅಣ್ಣ ನೀಡುತ್ತಿದೆ ಹಾಗಾಗಿ ಅದು ಕೂಡ ನಮ್ಮದೇ ಭಾಷೆ ಹೌದು.
[ನೀವೆಲ್ಲರೂ ಹೇಳಿದ ಹಾಗೆ ಹಿ೦ದಿ ರಾಷ್ತ್ರ ಬಾಷೆ ಅಲ್ಲ ಅ೦ತನೆ ಬಾವಿಸೊಣ ಹಾಗದರೆ ನಮ್ಮ ಬಾರತದಲ್ಲಿ ಒ೦ದು ಸಾಮನ್ಯ ಬಾಷೆ ಇಲ್ಲವೆ ಅದು ಎಲ್ಲ ರಾಜ್ಯಗಳ ಸ೦ಪರ್ಕ ಮಾದ್ಯಮವಾಗಬೇಕು]
ಸಂವಿಧಾನದ ಪ್ರಕಾರ ದೇಶದಲ್ಲಿ ಇಂಗ್ಲೀಷ್ ಹಾಗು ಹಿಂದಿ ಭಾಷೆಯನ್ನೂ ಆಡಳಿತ ಭಾಷೆ ಎಂದು ಘೋಷಿಸಿವೆ. ಹಾಗಾಗಿ ರಾಜ್ಯಗಳು ತಮಗೆ ಬೇಕಾದ ಭಾಷೆಯಲ್ಲಿ ಇತರೆ ರಾಜ್ಯಗಳ ಜೊತೆ ಅಥವಾ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಬಹುದು.
[ನೀವು ಯಾವುದೆ ಸಕ್ರಾರದ ಸುತ್ತೋಲೆಯನ್ನು ಗಮನಿಸಿ ಅದರಲ್ಲಿ ಆ೦ಗ್ಲ ಬಾಷೆಯಿಲ್ಲವೆ ಅದು ಹೇರಿಕೆಯಲ್ಲವೆ]
ಕರ್ನಾಟಕದಲ್ಲಿ ನಮ್ಮ ರಾಜ್ಯ ಸರ್ಕಾರ, ತನ್ನ ಸುತ್ತೋಲೆಗಳನ್ನು ಆಂಗ್ಲ ಭಾಷೆಯಲ್ಲಿ ಪ್ರಕಟಿಸುತ್ತಿದ್ದಾರೆ ಅದು ಹೇರಿಕೆಯೆ ಹೌದು. ಈ ವಿಷಯದಲ್ಲಿ ನನ್ನ ನಿಲುವು ಸ್ಪಷ್ಟವಾಗಿದೆ ಆಯಾ ರಾಜ್ಯದ ಭಾಷೆಯಲ್ಲಿಯೇ ಆಡಳಿತ ಜನರಿಗೆ ಸಿಗುವಂತಾಗಬೇಕು.
[ಇಲ್ಲಿ ವಿಷಯ ಒ೦ದೆ ಬಾರತದಲ್ಲಿ ಹಲವಾರು ಬಾಷೆಗಳಿವೆ ಹಲವಾರು ರಾಜ್ಯಗಳಿವೆ ಆದರೆ ಅದನ್ನೆಲ ಒಗ್ಗೂಡಿಸುವ ಒ೦ದು ಬಾಷೆ ಬೇಕು]
ಯಾಕೆ ಬೇಕು? ಆಡಳಿತ ವಿಷಯಗಳನ್ನು ನಡೆಸಲು ಅಥವಾ ಸಂಪರ್ಕ ಏರ್ಪಡಿಸಲು ಮೇಲೆ ಹೇಳಿದಂತೆ ಇಂಗ್ಲಿಷ ಅಥವಾ ಹಿಂದಿ ಭಾಷೆಗಳನ್ನು ಬಳಸಬಹುದು. ಕೇವಲ ಒಂದು ಭಾಷೆ ಮಾತನಾಡಿದರೆ ಮಾತ್ರ ದೇಶದಲ್ಲಿ ಒಗಟ್ಟು ಇರುತ್ತದೆ ಅನ್ನುವುದು ಸತ್ಯಕ್ಕೆ ದೂರವಾದ ಮಾತು. ನಮ್ಮ ಭಾರತ ದೇಶದ ಶ್ರೇಷ್ಠತೆ ಇರುವುದೇ ವಿವಿಧತೆಯಲ್ಲಿ ಏಕತೆ ಕಾಣುವುದರಿಂದ. ಹಲವು ಭಾಷೆ, ಹಲವು ರಾಜ್ಯಗಳು, ಹಲವು ಸಂಸ್ಕೃತಿಗಳು ಇಂತಹ ಹಲವು ವಿಷಯಗಳನ್ನು ಒಳಗೊಂಡಿರುವುದೇ ಭಾರತ, ಹಾಗೂ ಇದೇ ನಿಜವಾದ ಭಾರತ.
[ಕರ್ನಾಟಕದಲ್ಲೆ ಬಹಳ ಸಮಯದಿ೦ದ ಇದ್ದು ಕನ್ನಡ ಬಾರದೆ ಇದ್ದವರು ಬಹಳ ಜನ ಇದ್ದಾರೆ ಅದಕ್ಕೆ ಕಾರಣ ಅವರಲ್ಲ ನಾವೇ…………!]
ಇದಕ್ಕೆ ಕನ್ನಡಿಗರು ಹೇಗೆ ಕಾರಣ ಹೇಳಿ? ಹೊರ ನಾಡಿನ ಅನೇಕ ಜನರು ಇಲ್ಲಿ ಬಂದು ಬಹು ಬೇಗ ಕನ್ನಡ ಕಲಿತು ಕನ್ನಡಿಗರಾಗಿದ್ದರೆ. ಅವರಲ್ಲಿ ನನ್ನ ಅನೇಕ ಹೊರ ನಾಡ ಸ್ನೇಹಿತರೇ ಉದಾಹರಣೆ. ಹೊರಗಿನಿಂದ ಬಂದವರಿಗೆ ನಿಜಕ್ಕೂ ತಾವುಗಳು ಜನರ ಜೊತೆ ಬೆರೆತು ಬಾಳುವೆ ನಡೆಸಬೇಕೆಂದಿದ್ದರೆ ಕನ್ನಡ ಕಲಿಯುತ್ತಾರೆ. ಇಲ್ಲದಿದ್ದರೆ ಸಿನಿಕರ ಹಾಗೆ ಕನ್ನಡವನ್ನ ಬೈಯುತ್ತ ಕನ್ನಡ ಜನರಿಂದ ದೂರ ಇರುತ್ತಾರೆ.
ಬಹುಶಃ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಪ್ರಶ್ನೆಗಳಿದ್ದರೆ ಚರ್ಚೆ ಮಾಡೋಣ.
ಚೇತನ್ ಹಾಗದರೆ ನನ್ನೊ೦ದು ಸಣ್ಣ ಪ್ರಶ್ನೆ ನಮ್ಮ ರಾಷ್ತ್ರ ಗೀತೆಯನ್ನು ಯಾವ ಬಾಷೆಯಲ್ಲಿ ಹಾಡಬೇಕ೦ತಿರ
ಎಲ್ಲ ರಾಜ್ಯದವರು ಅವರವರ ಬಾಷೆಗೆ ಅನುವಾದ ಮಾಡ ಬೇಕೆ?
ನಮ್ಮ ರಾಷ್ಟ್ರ ಗೀತೆ ಬೆಂಗಾಲಿಯಲ್ಲಿದ್ದು, ಅದನ್ನು ಬೇರೆ ಬೇರೆ ಭಾಷಿಕರು ತಮ್ಮ ತಮ್ಮದೇ ರೀತಿಯಲ್ಲಿ ಹಾಡುತ್ತಾರೆ, ಹಾಡುತ್ತಿದ್ದಾರೆ.
ನಾವು ಕನ್ನಡಿಗರು “ಜನ ಗಣ ಮನ ..” ಅಂತ ಹೇಳ್ತೀವಿ.
ಹಿಂದಿ ಭಾಷಿಕರು “ಜನ ಗನ್ ಮನ್ ..” ಅಂತ ಹಾಡ್ತಾರೆ.
ಮೂಲ ಬೆಂಗಾಲಿ ಭಾಷೆಯಲ್ಲಿ “ಜೋನೋ ಗೊನೋ ಮೋನೋ ” ಅಂತ ಹಾಡಲಾಗುತ್ತೆ.
ನಿಜವಾಗಿಯೂ ಬಾರತದಲ್ಲಿ ಎಲ್ಲಾ ಬಾಶೆಯ ಜನರಿಗೆ ಗೌರವ ಸಿಗಬೇಕು ಎಂತಿದ್ದರೆ ರಾಶ್ಟ್ರ ಗೀತಿಯನ್ನೂ ಸಹ ಕನ್ನಡದಲ್ಲೂ ಹಾಡುವಂತಾಗಬೇಕು. ಅದೇ ಸರಿಯಾದುದು. ನಮಗೆ ಗೊತ್ತಿಲ್ಲದ ಬಾಶೆಯಲ್ಲಿ ಏನು ಅರ್ತ ಅಂತ ತಿಳಿಯದೇ ಹಾಡೊಕ್ಕಿಂತ. ನಮಗರಿವ ಬಾಶೆಯಲ್ಲಿ ಹಾಡುವುದು ಸೂಕ್ತವಲ್ಲವೆ? ಆಗಲೇ ನಮ್ಮ ರಾಶ್ಟ್ರಕ್ಕೆ ಗೌರವ ಸೂಚಿಸಿದಂತಾಗುವುದು.
ಪ್ರಿಯಾ೦ಕ ಮತ್ತು ಅರುಣ್ ನೀವು ಹೇಳಿದ್ದು ಸರಿಯಾಗಿದೆ ನಾನು ಅದನ್ನು ಸಮ್ಮತ್ತಿಸುತ್ತೇನೆ. ಆದರೆ ಉದಾಹರಣೆಗೆ ನಮ್ಮ ದೇಶದ ಯಾವುದೆ ವಿಬಾಗದ ತ೦ಡ ಬೇರೆ ದೇಶಕ್ಕೆ ಹೋಗಿ ಅಲ್ಲಿ ನಮ್ಮ ರಾಷ್ತ್ರ ಗೀತೆಯನ್ನು ಹಾಡುವ ಸ೦ದರ್ಬ ಬ೦ದರೆ ಎನು ಮಾಡಬೇಕು ಎಲ್ಲರು ನೀವೆ ಹೇಳಿದ ಹಾಗೆ ಎಲ್ಲರೂ ಅವರವರ ರಾಜ್ಯದ ಬಾಷೆಯಲ್ಲೆ ಹಾಡಬೇಕೆ? ಅದು ಚೆನ್ನಾಗಿರುತ್ತಾ ನೀವೆ ಹೇಳಿ?
ಅಬಿ ಅವರೇ,
ನಮ್ಮ ಜನರು ಅವರವರ ರೀತಿಯಲ್ಲೇ ಹಾಡಲಿ.
ನನಗೇನೂ ಅದರಿಂದ ಬೇಜಾರು ಆಗೋದಿಲ್ಲ, ಬದಲಿಗೆ ಹೆಮ್ಮೆಯಾಗುತ್ತದೆ.
ನಮ್ಮ ಜನರು ತಮ್ಮ ದೇಶದಲ್ಲಿ ತಮ್ಮತನವನ್ನ ಮೆರೆಯಲಿ.
‘ವಿವಿದತೆಯಲ್ಲಿ ಏಕತೆ’ ಅಂದ್ರೆ ನಿಜವಾಗಿ ಅದೇ ತಾನೇ?
ಸರಿಯಾಗಿ ಹೇಳಿದ್ರಿ ಅರುಣ್ ಮತ್ತೆ ಪ್ರಿಯಾಂಕ್ ,
ನಮ್ಮ ಭಾರತದ ತರ ಅದ್ಭುತವಾದ ದೇಶದಲ್ಲಿ ವಿವಿಧತೆಗೆ ಮಹತ್ವ ಅಲ್ಲವೇ? ಅದಕ್ಕೆ ಆಲ್ವಾ ವಿವಿಧತೆಯಲ್ಲಿ ಏಕತೆ ಅನ್ನೋದು. ಹಾಗಿರುವಾಗ ಎಲ್ಲ ಭಾಷೆಗಳಿಗೂ, ಎಲ್ಲ ಧರ್ಮಗಳಿಗೂ, ಎಲ್ಲ ಸಂಸ್ಕೃತಿಗಳಿಗೂ ಸಮನಾದ ಮನ್ನಣೆ ಸಿಗಬೇಕು.
ಈಗ ಅಣ್ಣ ಹಜಾರೆ ಅವರ ಹೋರಾಟದ ವಿಷಯಕ್ಕೆ ಬಂದ್ರೆ, ಹೋರಾಟದ ಮೊಟಿವ್ ಸರಿಯಾಗಿದೆ. ಕ್ಯಾನ್ಸರ್ ರೋಗದ ತರ ಬ್ರಷ್ಟಾಚಾರ ನಮ್ಮನ್ನ ಕೊರೆದು ಕೊರೆದು ತಿಂತಾ ಇದೆ. ಅಣ್ಣ ಹಜಾರೆ ಅವರಿಗೆ ತಿಳಿದರೋ ಹಿಂದಿ ಭಾಷೆಯಲ್ಲಿ ಅವರು ಭಾಷಣ ಮಾಡಿದು ತಪ್ಪಲ್ಲ. ಆದ್ರೆ ಆಯೋಜಕರು ಕನ್ನಡ ಅನುವಾದಕರೊಬ್ಬರನ್ನ ಅಲ್ಲಿ ನೆಮಿಸಬೇಕಾದದ್ದು ಮುಖ್ಯವಾಗಿತ್ತು. ಜನ ಸಾಮಾನ್ಯರನ್ನು ಒಳಗೊಂಡಿರುವ ಈ ಅಭಿಯಾನದಲ್ಲಿ ಜನ ಸಾಮಾನ್ಯರಿಗೆ ಅರ್ಥವಾಗದ ಭಾಷೆಯಲ್ಲಿ ಭಾಷಣ ಆದ್ರೆ ಹಾಕಿದ ಅಷ್ಟು ಶ್ರಮ ನೀರಲ್ಲಿ ಹೋಮ ಮಾಡಿದಂಗೆ ಆಗತ್ತೆ. ನನಗಿರುವ ಮತ್ತೊಂದು ಪ್ರಶ್ನೆ ಅಂದ್ರೆ, ಈ ರೀತಿ ರಾಷ್ಟ್ರ ಮಟ್ಟದ ಯಾವುದೇ ಹೋರಾಟವಾಗಲೀ, ಕಾರ್ಯಕ್ರಮವಾಗಲೀ, ಅಲ್ಲಿ ತಿಳಿದೋ, ತಿಳಿಯದೆಯೋ ಎಲ್ಲ ಭಾರತೀಯರ ಮೇಲೆ ಹಿಂದಿ ಹೇರಿಕೆ ಆಗುತ್ತದೆ. ಇದರ ಬಗ್ಗೆ ಜನರು ಜಾಗರೂಕರಾಗಿದ್ದು ನಮ್ಮ ನಮ್ಮ ಭಾಷೆಗಳನ್ನು ಬಳಸುತ್ತಲೇ, ನಮ್ಮ ದೇಶವನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯಬೇಕು. ಇದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವು ಹೌದು.