ವಿಷಯದ ವಿವರಗಳಿಗೆ ದಾಟಿರಿ

ಜೂನ್ 3, 2011

24

ಆಯುರ್ವೇದವನ್ನು ಕಂಡರೆ ಪಾಶ್ಚಾತ್ಯರಿಗೆ ಭೀತಿ!

‍ನಿಲುಮೆ ಮೂಲಕ
– ವಿಷ್ಣು ಪ್ರಿಯ
ಇಂಗಿಷ್ ವೈದ್ಯ ಪದ್ಧತಿಯು ಯಾವುದೇ ರೋಗವನ್ನು ಸಂಪೂರ್ಣ ಗುಣ ಮಾಡುವುದಿಲ್ಲ. ರೋಗದ ಲಕ್ಷಣಗಳನ್ನು ತಟಸ್ಥಗೊಳಿಸುವ ಮೂಲಕ ಆ ರೋಗವನ್ನು ಅಜ್ಞಾತವಾಗಿಡುತ್ತದೆ ಅಷ್ಟೆ. ಗುಳಿಗೆಗಳು ರೋಗಲಕ್ಷಣಗಳನ್ನು ತಟಸ್ಥವಾಗಿಸುವ ಕಾರಣ ರೋಗ ಗುಣವಾಗಿದೆ ಎಂಬ ಭ್ರಾಂತಿಗೊಳಗಾಗುತ್ತೇವೆ.  ಆದರೆ ಆಯುರ್ವೇದ ವೈದ್ಯ ಪದ್ಧತಿ ಹಾಗಲ್ಲ, ರೋಗಮೂಲ ಏನು ಎಂಬುದನ್ನು ಅರಿತುಕೊಂಡು ಅದಕ್ಕೆ ಚಿಕಿತ್ಸೆ ಮಾಡುತ್ತದೆ. 
`ಅದ್ಯಾವುದೋ ಬೇರಂತೆ, ನಾರಂತೆ, ಸೊಪ್ಪು, ಎಲೆ, ಬಳ್ಳಿಯಿಂದಾನೂ ಔಷಧಿ ಕೊಡ್ತಾರಂತೆ, ಹಣ್ಣೂ ಮದ್ದಂತೆ, ಕಾಯಿಯೂ, ಕಾಯಿಯೊಳಗಿನ ಬೀಜವೂ ರೋಗ ನಿವಾರಕವಂತೆ. ಹಲವು ಮೂಲಿಕೆಗಳನ್ನು ಸೇರಿಸಿ ಔಷಧಿ ಮಾಡೋದಂತೆ. ಇದನ್ನೆಲ್ಲ ನಂಬ್ತೀರಾ? ಇದು ಮೂಢನಂಬಿಕೆ. ಇಂಥದ್ದನ್ನೆಲ್ಲ ತಿಂದು ಆರೋಗ್ಯ ಹಾಳು ಮಾಡ್ಕೋಬೇಡಿ’ ಎಂದು ಭಾರತೀಯ ವೈದ್ಯ ಪದ್ಧತಿಯ ಬಗ್ಗೆ ಮೂಗು ಮುರಿದದ್ದು ಪಾಶ್ಚಾತ್ಯರು. `ನಿಮ್ಮ ವೈದ್ಯ ಪದ್ಧತಿ ಆಧಾರವಿಲ್ಲದ್ದು, ಅದನ್ನೆಲ್ಲ ಒಪ್ಪುವುದಕ್ಕೆ ಸಾಧ್ಯವಿಲ್ಲ’ ಎಂದು ಕೆಲವು ಸಮಯದ ಹಿಂದೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮ ದೇಶದಲ್ಲಿ ಈ ವೈದ್ಯ ಪದ್ಧತಿಗೆ ಪ್ರೋತ್ಸಾಹ ನೀಡದಿರುವಂತೆ ಹೇಳಿದ್ದರು. ಬ್ರಿಟನ್ ಕೂಡಾ ಆಯುರ್ವೇದ ವೈದ್ಯ ಪದ್ಧತಿಯ ಮೇಲೆ ನಿಷೇಧ ಹೇರಿತು. ಇದೀಗ ಆಯುರ್ವೇದ ವೈದ್ಯ ಪದ್ಧತಿಯ ಮೇಲೆ ಮತ್ತೊಂದು ನಿಷೇಧ! ಅದು ಐರೋಪ್ಯ ಒಕ್ಕೂಟದಿಂದ. ಮೇ 1ರಿಂದ ಈ ಔಷಧ ಪದ್ಧತಿಯನ್ನು, ಗಿಡಮೂಲಿಕೆಗಳ ಮಾರಾಟವನ್ನು ಐರೋಪ್ಯ ರಾಷ್ಟ್ರಗಳಲ್ಲಿ ನಿಷೇಧಿಸಲಾಗಿದೆ.
ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಆಯುರ್ವೇದ ವೈದ್ಯ ಪದ್ಧತಿಯ ಮೇಲೆ ನಿಷೇಧ ಹೇರಲಾಗಿದೆ ಎಂದರೆ ಅದರ ಅರ್ಥವೇನು? ಆಯುರ್ವೇದ ವೈದ್ಯ ಪದ್ಧತಿಯಲ್ಲಿ ದೋಷಗಳಿವೆ ಎಂಬುದಂತೂ ಅಲ್ಲ. ಈ ಪದ್ಧತಿಗೆ ಆಧಾರವಿಲ್ಲವೆಂಬುದೂ ಅಲ್ಲ. ಮೂಢನಂಬಿಕೆ ಎಂಬುದಂತೂ ಅಲ್ಲವೇ ಅಲ್ಲ. ಇದರ ಹಿಂದಿರುವ ವಾಸ್ತವ ಕಾರಣ- ಭೀತಿ! ಆಯುರ್ವೇದ ವೈದ್ಯ ಪದ್ಧತಿಯ ಸಾಮಥ್ರ್ಯದ ಮುಂದೆ ತಮ್ಮ ವೈದ್ಯ ಪದ್ಧತಿಗೆ ಎಲ್ಲಿ ನೆಲೆಯಿಲ್ಲದಂತಾಗುತ್ತದೆಯೋ ಎಂಬ ಆತಂಕ. ಜನರೆಲ್ಲ ಆಯುರ್ವೇದದ ಮೊರೆ ಹೊಕ್ಕರೆ ತಮ್ಮಲ್ಲಿನ ವೈದ್ಯ ಪದ್ಧತಿಯ ಮಾರುಕಟ್ಟೆ ಕುಸಿದು ಬೀಳುತ್ತದೆ ಎಂಬ ಭಯ!
`ಚಿಕಿತ್ಸೆ ಬೇಕಾದದ್ದು ರೋಗಕ್ಕಲ್ಲ. ರೋಗಮೂಲಕ್ಕೆ’ ಎಂದು ಸಾರುತ್ತಾ ಸಾವಿರಾರು ವರ್ಷಗಳಿಂದ ಜನರಿಗೆ ಸಂಜೀವಿನಿಯಾಗಿದ್ದ ಆಯುರ್ವೇದ ಒಂದು ಹಂತದಲ್ಲಿ ತನ್ನ ಛಾಪು ಕಳೆದುಕೊಂಡಿದ್ದು ನಿಜ. ಹಾಗಂತ ಅತ್ಯುನ್ನತ ಸ್ಥಾನಕ್ಕೆ ತನ್ನ ಶಕ್ತಿಯಿಂದಲೇ ಏರಿದ್ದಂಥ ವೈದ್ಯ ಪದ್ಧತಿಯ ಮೇಲೆ ಎಷ್ಟು ಕಾಲ ಕತ್ತಲೆ ಇರಲು ಸಾಧ್ಯ? ರಾತ್ರಿ ಕಳೆದ ಮೇಲೆ ಸೂರ್ಯೋದಯವಾಗಲೇಬೇಕು. ಅಂತೆಯೇ ಆಯುರ್ವೇದದ ಕತ್ತಲೆ ಸರಿಯಿತು. ಭಾರತಕ್ಕಷ್ಟೇ ಸೀಮಿತವಾಗಿದ್ದ ವೈದ್ಯ ಪದ್ಧತಿ ಜಗದ್ವ್ಯಾಪಿಯಾಯಿತು. ಅಮೆರಿಕ, ಬ್ರಿಟನ್, ಐರೋಪ್ಯ ರಾಷ್ಟ್ರಗಳು ಸೇರಿದಂತೆ ಜಗತ್ತಿನ ಮೂಲೆ ಮೂಲೆಯಲ್ಲಿ ಆಯುರ್ವೇದ ಪದ್ಧತಿ ಹರಡಿಕೊಂಡಿತು. ವಿವಿಧ ದೇಶಗಳಲ್ಲಿ ಆಯುರ್ವೇದ ವೈದ್ಯ ಪದ್ಧತಿಯ ಕಾಲೇಜುಗಳು ತೆರೆದುಕೊಂಡವು, ಕೋರ್ಸ್ ಗಳು ಆರಂಭವಾದವು. ವಿದ್ಯಾರ್ಥಿಗಳು ಸಾಲುಗಟ್ಟಿ ಆಯುರ್ವೇದ ವೈದ್ಯ ಪದ್ಧತಿ ಕಲಿಯುವುದಕ್ಕೆ ಬಂದರು.
ಈ ರೀತಿ ವಿದ್ಯಾರ್ಥಿಗಳು ಆಕರ್ಷಿತರಾಗುವುದಕ್ಕೆ ಕಾರಣವಾದದ್ದು ಜನಸಾಮಾನ್ಯರು. ಭಾರತಕ್ಕೆ ಪ್ರವಾಸಿಗರಾಗಿ ಬಂದ ವಿದೇಶಿಯರು ಇಲ್ಲಿನ ವೈದ್ಯ ಪದ್ಧತಿಯ ಲಾಭ ಪಡೆದು ಅದರ ವಿಚಾರವನ್ನು ತಮ್ಮ ದೇಶದಲ್ಲಿ ಪಸರಿಸಿದರು. ಅಡ್ಡಪರಿಣಾಮಗಳಿಲ್ಲದೆ. ರೋಗ ಮೂಲಕ್ಕೇ ಔಷಧಿ ಕೊಡುವ ಆಯುರ್ವೇದ ವಿದೇಶಿಯರಿಗೆ ಇಷ್ಟವಾದದ್ದರಲ್ಲಿ ಅಚ್ಚರಿಯೇನೂ ಇಲ್ಲ. ಕೇವಲ ಇಷ್ಟವಾಗುತ್ತಿದ್ದರೆ ಅಮೆರಿಕ, ಬ್ರಿಟನ್ ಮತ್ತು ಯೂರೋಪ್ ಸರ್ಕಾರಗಳು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆಯುರ್ವೇದ ಮತ್ತು ಇತರ ವೈದ್ಯ ಪದ್ಧತಿಗಳನ್ನು ಜನ ತಾಳೆಮಾಡಿ ನೋಡಿದರು. ರೋಗವನ್ನು ಸಂಪೂರ್ಣವಾಗಿ ವಾಸಿಮಾಡುವ ಆಯುರ್ವೇದದ ಗುಣ ಇಷ್ಟವಾಯಿತು. ಪೂರ್ಣವಾಗಿ ಆಯುರ್ವೇದಕ್ಕೇ ಒಗ್ಗಿಕೊಂಡರು ಪಾಶ್ಚಾತ್ಯ ಜನ. ಅಲ್ಲಿನ ಸರ್ಕಾರಗಳಿಗೆ ಸಮಸ್ಯೆಯಾದದ್ದೇ ಇದು.
ನಿಷೇಧದ ತಂತ್ರ
ಕೆಲವೊಂದು ಸಣ್ಣಪುಟ್ಟ ಮೂಲಿಕೆಗಳನ್ನು ಹೊರತುಪಡಿಸಿ ಉಳಿದೆಲ್ಲ ಮೂಲಿಕೆಗಳಿಗೆ ಐರೋಪ್ಯ ರಾಷ್ಟ್ರಗಳಲ್ಲಿ ಮೇ 1ರಿಂದ ನಿಷೇಧ ಜಾರಿಯಾಗಿದೆ. ಪರವಾನಗಿ ಇಲ್ಲದೆ ಈ ಮೂಲಿಕೆಗಳನ್ನು ಆಮದು ಮಾಡಿಕೊಳ್ಳುವುದಾಗಲೀ, ಮಾರಾಟ ಮಾಡುವುದಾಗಲೀ ನಿಷಿದ್ಧ. ಇನ್ನು ಪರವಾನಗಿ ಪಡೆದು ಮೂಲಿಕೆಗಳನ್ನು ಮಾರಾಟ ಮಾಡುತ್ತೇವೆಂದು ಹೊರಟರೆ ಪರವಾನಗಿ ಶುಲ್ಕ ಕಟ್ಟುವುದೇ ಸಾಧ್ಯವಾಗದಂಥ ಪರಿಸ್ಥಿತಿ. 80,000 ಪೌಂಡ್ ಗಳಿಂದ 1.2 ಲಕ್ಷ ಪೌಂಡ್ ಶುಲ್ಕ. ಅದೂ ನಿಗದಿತ ಅವಧಿಗೆ ಮಾತ್ರ. ಇಷ್ಟು ದೊಡ್ಡ ಮೊತ್ತವನ್ನು ಪರವಾನಿಗೆ ಶುಲ್ಕವಾಗಿ ಕಟ್ಟಿ ಔಷಧಿ ಮಾರಾಟ ಮಾಡುವುದು ಸಾಧ್ಯವೇ? ಅದರರ್ಥ ಆಯುರ್ವೇದ ಔಷಧಿಗಳು ಮಾರುಕಟ್ಟೆಗೇ ಬರಬಾರದು ಎಂಬುದು. `ಹಾವೂ ಸಾಯಬೇಕು, ಕೋಲೂ ಮುರಿಯಬೇಕು’ ಎಂಬಂತೆ ಆಯುರ್ವೇದ ವೈದ್ಯ ಪದ್ಧತಿಯನ್ನು ದೂಷಿಸಿದಂತೆಯೂ ಆಗಬಾರದು, ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಬಳಸುವಂತ ಮೂಲಿಕೆಗಳನ್ನೂ ಜನ ಬಳಸಬಾರದು ಎಂಬುದು ಅಲ್ಲಿನ ಸರ್ಕಾರಗಳ ತಂತ್ರ.
ಕೆಲವೊಂದು ಮೂಲಿಕೆಗಳನ್ನು ಔಷಧಿ ಅಂಗಡಿಗಳಲ್ಲಿ ಸಂಗ್ರಹಿಸಿಡುವುದನ್ನೂ ನಿಷೇಧಿಸಲಾಗಿದೆ. ಬಹುತೇಕ ಕಳೆದ 30 ವರ್ಷಗಳಿಂದ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಬಳಕೆಯಲ್ಲಿರುವ ಆಯುರ್ವೇದ ವೈದ್ಯ ಪದ್ಧತಿಯ ಮೇಲೆ ನಿಷೇಧ ಹೇರಿದ್ದು, ಅಲ್ಲಿನ ಆಯುರ್ವೇದ ವೈದ್ಯರ ಮತ್ತು ಈ ವೈದ್ಯ ಪದ್ಧತಿಯನ್ನು ಅಭ್ಯಸಿಸುತ್ತಿರುವವರ ಆತಂಕಕ್ಕೆ ಕಾರಣವಾದದ್ದಂತೂ ದಿಟ. 1960ರ ದಶಕದಲ್ಲಿ ಯೂರೋಪ್ನಲ್ಲಿ ಗಿಡಮೂಲಿಕೆಗಳ ಬಳಕೆ ಶುರುವಾದಾಗ ಅಲ್ಲಿನ ಸರ್ಕಾರಗಳು ಚಿಂತಿತವಾಗಿದ್ದವು. 1968ರ ಹೊತ್ತಿಗೆ ಔಷಧಿಗಳ ಕಾಯ್ದೆ ರಚಿಸಿ, ಆ ಕಾಲದಲ್ಲಿ ಯೂರೋಪ್ನಲ್ಲಿ ಲಭ್ಯವಿದ್ದ ಕೆಲವೇ ಕೆಲವು ಗಿಡಮೂಲಿಕೆಗಳ ಮೇಲೆ ನಿಯಂತ್ರಣ ಹೇರುವ ಪ್ರಯತ್ನ ಮಾಡಿದವು. ಆದರೆ ಜನ ಕೇಳಲಿಲ್ಲ. ಆಯುರ್ವೇದದ ಬಳಕೆ ಹೆಚ್ಚಿತು. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಎರಡು ವರ್ಷಗಳಲ್ಲಿ 60 ಲಕ್ಷಕ್ಕೂ ಅಧಿಕ ಯೂರೋಪಿಯನ್ನರು ಗಿಡಮೂಲಿಕೆಗಳನ್ನು ಬಳಸಿದ್ದಾರೆ.
ಆಯುರ್ವೇದದ ಮಹಿಮೆ
ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಆಯುರ್ವೇದ ಔಷಧಿಗಳ ಮೇಲೆ ನಿಷೇಧ ಹೇರಿದ್ದರ ಮುಖ್ಯ ಕಾರಣವೇ ಈ ವೈದ್ಯ ಪದ್ಧತಿಯ ಮಹತ್ವ. ಇತರ ವೈದ್ಯ ಪದ್ಧತಿಗಳನ್ನು ಮೀರಿ ಬೆಳೆಯಬಲ್ಲ ಸಾಮಥ್ರ್ಯ. ಇದನ್ನು ಹಲವಾರು ಪಾಶ್ಚಾತ್ಯ ದೇಶಗಳ ವೈದ್ಯರೂ ಒಪ್ಪಿಕೊಳ್ಳುತ್ತಾರೆ. `ಆಯುರ್ವೇದ ಚಿಕಿತ್ಸಾ ಪದ್ಧತಿ ಏನೆಂಬುದು ಇತ್ತೀಚಿನ ದಿನಗಳಲ್ಲಿ ಸಾಬೀತಾಗುತ್ತಿದೆ. ಮುಂದೊಂದು ದಿನ ಈ ವೈದ್ಯ ಪದ್ಧತಿಯು ಎಲ್ಲಾ ಅಡೆ ತಡೆಗಳನ್ನು ಮೀರಿ ನಿಲ್ಲುವುದು ಖಂಡಿತ’ ಎನ್ನುತ್ತಾರೆ ಸೌಥ್ಆಂಪ್ಟನ್ ಯೂನಿವರ್ಸಿಟಿಯ ಸಂಶೋಧಕ ಪ್ರೊ. ಜಾರ್ಜ್ ಲೆವಿಥ್.
ಇಂಗಿಷ್ ವೈದ್ಯ ಪದ್ಧತಿಯು ಯಾವುದೇ ರೋಗವನ್ನು ಸಂಪೂರ್ಣ ಗುಣ ಮಾಡುವುದಿಲ್ಲ. ರೋಗದ ಲಕ್ಷಣಗಳನ್ನು ತಟಸ್ಥಗೊಳಿಸುವ ಮೂಲಕ ಆ ರೋಗವನ್ನು ಅಜ್ಞಾತವಾಗಿಡುತ್ತದೆ ಅಷ್ಟೆ. ಆದರೆ ಆಯುರ್ವೇದ ವೈದ್ಯ ಪದ್ಧತಿ ಹಾಗಲ್ಲ, ರೋಗಮೂಲ ಏನು ಎಂಬುದನ್ನು ಅರಿತುಕೊಂಡು ಅದಕ್ಕೆ ಚಿಕಿತ್ಸೆ ಮಾಡುತ್ತದೆ. ಯಾವುದೇ ರೋಗ ಬಂದರೂ ಜ್ವರ ಬಂದೇ ಬರುತ್ತದೆ. ಜ್ವರ ಬಂದಿದೆ ಎಂದರೆ ದೇಹದ ಯಾವುದೋ ಕ್ರಿಯೆ ಸಮರ್ಪಕವಾಗಿಲ್ಲ ಎಂದೇ ಅರ್ಥ. ಹೀಗಾಗಿಯೇ ಆಯುರ್ವೇದೀಯ ಸಂಹಿತೆಗಳು ಜ್ವರವನ್ನು ಕಡಿಮೆ ಮಾಡುವುದರ ಬಗ್ಗೆ ಹೆಚ್ಚು ವಿವರಣೆಗಳನ್ನು ಕೊಡುತ್ತವೆ ಮತ್ತು ಒಬ್ಬ ವೈದ್ಯನಿಗೆ ಜ್ವರವನ್ನು ಕಡಿಮೆ ಮಾಡುವುದು ಹೇಗೆಂಬುದು ಗೊತ್ತಾದರೆ ಆತ ಯಾವ ರೋಗಕ್ಕಾದರೂ ಔಷಧಿ ಕೊಡಬಲ್ಲ ಎನ್ನುತ್ತವೆ. `ಆಯುರ್ವೇದ ಔಷಧಿಗಳ ಪರಿಣಾಮ ನಿಧಾನಗತಿಯದ್ದು’ ಎಂಬ ಆರೋಪವೂ ಇದೆ. ಆದರೆ ಇದು ಶುದ್ಧ ಸುಳ್ಳು. ಒಂದು ರೋಗ ಪೂರ್ಣವಾಗಿ ವಾಸಿಯಾಗಬೇಕಾದರೆ ಎಷ್ಟು ಸಮಯ ಬೇಕಾಗುತ್ತದೆಯೋ ಅಷ್ಟನ್ನು ಮಾತ್ರ ಆಯುರ್ವೇದ ಔಷಧಿಗಳು ತೆಗೆದುಕೊಳ್ಳುತ್ತವೆ. ಇಂಗ್ಲಿಷ್ ವೈದ್ಯ ಪದ್ಧತಿಯಲ್ಲಿ ನೀಡುವ ಗುಳಿಗೆಗಳು ರೋಗಲಕ್ಷಣಗಳನ್ನು ತಟಸ್ಥವಾಗಿಸುವ ಕಾರಣ ರೋಗ ಗುಣವಾಗಿದೆ ಎಂಬ ಭ್ರಾಂತಿಗೊಳಗಾಗುತ್ತೇವೆ.
ವಾಸ್ತವದಲ್ಲಿ ಆ ರೋಗ ಗುಣವಾಗಿರುವುದೇ ಇಲ್ಲ. ಇನ್ನು ಇಂಗ್ಲಿಷ್ ಔಷಧಿಯಿಂದ ಅಡ್ಡ ಪರಿಣಾಮಗಳು ಉಂಟಾದರೆ ಆಯುರ್ವೇದದಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಕಾರಣ ಒಂದು ಬಳ್ಳಿ, ಬೇರು, ಅಥವಾ ಎಲೆಗಳನ್ನು ಬಳಸುವಾಗ ಅದರಲ್ಲಿ ವಿವಿಧ ರೀತಿಯ ರಾಸಾಯನಿಕಗಳು ಅಡಕವಾಗಿರುತ್ತವೆ. ಒಂದು ರಾಸಾಯನಿಕ ರೋಗವನ್ನು ಕಡಿಮೆ ಮಾಡಿದರೆ ಇನ್ನೊಂದು ಆ ರಾಸಾಯನಿಕದ ಅಡ್ಡ ಪರಿಣಾಮವನ್ನು ತಡೆಯುತ್ತದೆ.  ಇದರಿಂದಾಗಿ ಜನರು ಆಯುರ್ವೇದ ವೈದ್ಯ ಪದ್ಧತಿಯಿಂದ ಆಕರ್ಷಿತರಾದರು. ಅಮೆರಿಕ, ಇಂಗ್ಲೆಂಡ್ ಮತ್ತು ಐರೋಪ್ಯ ರಾಷ್ಟ್ರಗಳ ಸರ್ಕಾರಗಳಿಗೆ ತಲೆನೋವಾಯಿತು. ತಮ್ಮಲ್ಲಿನ ವೈದ್ಯ ಪದ್ಧತಿಗೆ ಧಕ್ಕೆಯಾಗುತ್ತದೆಂದು ಬಗೆದು ಆಯುರ್ವೇದದ ಮೇಲೆ ನಿಷೇಧ ಹೇರಿದವು. ಆದರೆ ಇದು `ಭೂಮಿಗೆ ಬೆಳಕು ಕೊಡದಂತೆ ಸೂರ್ಯನನ್ನು ತಡೆಯಲು ಹೊರಟಂತಾದೀತು’! ಸಾವಿರಾರು ವರ್ಷಗಳಿಂದ ಜನಮಾನಸದಲ್ಲಿ ನೆಲೆಯೂರಿರುವ ಆಯುರ್ವೇದವನ್ನು, ಅದರ ಅಭಿವೃದ್ಧಿಯನ್ನು ತಡೆಯಲು ಸಾಧ್ಯವೇ?
24 ಟಿಪ್ಪಣಿಗಳು Post a comment
  1. anand prasad's avatar
    anand prasad
    ಜೂನ್ 3 2011

    ಆಯುರ್ವೇದ ಯಾವ ರೀತಿ ರೋಗಗಳನ್ನು ಗುಣಪಡಿಸುತ್ತದೆ ಎಂಬ ಬಗ್ಗೆ ಸಮರ್ಪಕವಾದ ವೈಜ್ಞಾನಿಕ ವಿವರಣೆ ಸಿಕ್ಕುವುದಿಲ್ಲ. ಹೆಚ್ಚಿನ ಆಯುರ್ವೇದ ವೈದ್ಯರೆಂದು ಪ್ರಾಕ್ಟೀಸ್ ಮಾಡುವವರೂ ಆಯುರ್ವೇದ ಎಂದು ಬೋರ್ಡು ಹಾಕಿಕೊಂಡು ಅಲೋಪತಿ ಔಷಧಿಗಳನ್ನೇ ಕೊಡುವುದು ಏಕೆ? ಆಯುರ್ವೇದದ ಸಿದ್ಧಾಂತಗಳು ಅಲೋಪತಿಯಷ್ಟು ಸಮರ್ಪಕವಾಗಿ, ವೈಜ್ಞಾನಿಕವಾಗಿ ವಿವರಣೆಯನ್ನು ನೀಡುವುದಿಲ್ಲ. ಹೀಗಿದ್ದರೂ ಕೆಲವು ಅಲೋಪತಿಯಲ್ಲಿ ಔಷಧ ಇಲ್ಲವೆಂದು ಕಂಡ ರೋಗಗಳಿಗೆ ಆಯುರ್ವೇದ ಔಷಧಿಗಳು ಇದೆಯೆಂದು ಹೇಳಲಾಗುತ್ತದೆ. ಇದು ಎಷ್ಟು ನಿಜವೋ ಬಳಸಿದವರೇ ಹೇಳಬೇಕು. ಆಯುರ್ವೇದ ಅಂಥ ರೋಗಗಳನ್ನು ಹೇಗೆ ಗುಣಪಡಿಸುತ್ತದೆ ಎಂಬ ಬಗ್ಗೆ ಸಂಶೋಧನೆ ಸಮರ್ಪಕವಾದ ರೀತಿಯಲ್ಲಿ ನಡೆದರೆ ಪಶ್ಚಿಮದ ದೇಶಗಳಲ್ಲೂ ಅದನ್ನು ಒಪ್ಪಬಹುದು. ಆದರೆ ನಮ್ಮಲ್ಲಿ ಆಯುರ್ವೇದದ ಬಗ್ಗೆ ಸಮರ್ಪಕವಾದ ಸಂಶೋಧನೆ ಅಧುನಿಕ ವಿಜ್ಞಾನದ ಬೆಳಕಿನಲ್ಲಿ ನಡೆಯುತ್ತಿಲ್ಲ.

    ಉತ್ತರ
  2. santhosh kumar's avatar
    santhosh kumar
    ಜೂನ್ 3 2011

    ಪ್ಲೇಗ್, ಕಾಲರ, ಮಲೇರಿಯಾ, ರೇಬೀಸ್, ಕ್ಷಯ ಮೊದಲಾದ ಮಾರಕ ಕಾಯಿಲೆಗಳಿಗೆ, ಪೋಲಿಯೋದಂಥ ಅಂಗ ಊನಗೊಳಿಸುವ ಕಾಯಿಲೆಗಳಿಗೆ ಆಯುರ್ವೇದದ ಮೊರೆ ಹೋಗಲು ಸಾಧ್ಯವಿಲ್ಲ. ಇಂಥ ಕಾಯಿಲೆಗಳಿಗೆ ಯಾರೂ ಇಂದು ಆಯುರ್ವೇದ ಔಷಧ ಮಾಡುವ ಧೈರ್ಯ ಮಾಡುವುದಿಲ್ಲ. ಈ ರೋಗಗಳಿಗೆ ಅಲೋಪತಿಯಲ್ಲಿ ಖಚಿತವಾಗಿ ಗುಣ ಪಡಿಸುವ ಔಷಧಿ ಅಥವಾ ತಡೆಗಟ್ಟುವ ಲಸಿಕೆಗಳಿವೆ. ಹೀಗಾಗಿ ಆಯುರ್ವೇದವೂ ಎಲ್ಲ ಕಾಯಿಲೆಗಳನ್ನು ವಾಸಿ ಮಾಡುವ ಸಾಮರ್ಥ್ಯ ಹೊಂದಿಲ್ಲ ಹಾಗೂ ಜನರೂ ಕೂಡ ಇಂಥ ರೋಗಗಳಿಗೆ ಆಯುರ್ವೇದದ ಔಷಧ ಮಾಡಲು ಧೈರ್ಯ ಮಾಡುವುದಿಲ್ಲ. ಅದೇ ರೀತಿ ಹಾವು ಕಡಿತ ಚಿಕಿತ್ಸೆಗೂ ಅಷ್ಟೆ ಅಲೋಪತಿಯಲ್ಲಿ ಸ್ಪಷ್ಟ ನಿರೋಧಕ ಔಷಧ ಲಭ್ಯ ಇದೆ.

    ಉತ್ತರ
    • ಮಹೇಶ ನೀರ್ಕಜೆ's avatar
      ಮಹೇಶ ನೀರ್ಕಜೆ
      ಜೂನ್ 6 2011

      ಒಪ್ಪುವಂಥಾದ್ದೆ. ಅಲ್ಲದೇ ಇನ್ನೊಬ್ಬ ಮಹನೀಯರು ಆಯುರ್ವೇದ ಮತ್ತು ಅಲೋಪಥಿ ಎರಡೂ ಒಂದಕ್ಕೊಂದು ಪೂರಕ ಎಂದಿದ್ದಾರೆ. ನನಗೆ ಅದರ ಬಗ್ಗೆ ಒಬ್ಬ ಗ್ರಾಹಕನಾಗಿ ಸಹಮತವಿದೆ. ಆಯುರ್ವೇದದಲ್ಲಿ ಹೆಚ್ಚು ಒತ್ತು ಕೊಟ್ಟಿರುವುದು ರೋಗ ಬಾರದಂತೆ ತಡೆಯುವ ವಿಧಾನಗಳ ಬಗ್ಗೆ ಮತ್ತು ರೋಗದ ಮೂಲವನ್ನು ಹುಡುಕಿ ಸರಿಪಡಿಸುವ ಬಗ್ಗೆ. ಅಲೋಪಥಿಯಲ್ಲಿ ಹೆಚ್ಚು ಒತ್ತು ಕೊಟ್ಟಿರುವುದು ರೋಗದ ಲಕ್ಷಣಗಳನ್ನು ವಾಸಿ ಮಾಡುವ ಬಗ್ಗೆ. ಹೆಚ್ಚಿನ ಸಂದರ್ಭಗಳಲ್ಲಿ ಆಯುರ್ವೇದದಿಂದ ಪರಿಹಾರ ದೊರಕಿಸಿಕೊಳ್ಳುವುದು ಉಚಿತವೆನಿಸಿದರೂ, ಅನಿವಾರ್ಯ ಸಂದರ್ಭಗಳಲ್ಲಿ ಅಲೋಪಥಿ ಚಿಕಿತ್ಸೆ ಬೇಕಾಗುತ್ತದೆ.

      ಇನ್ನು ಕೆಲವರು ಶಸ್ತ್ರಚಿಕಿತ್ಸೆ ಇತ್ಯಾದಿಗಳು ಆಯುರ್ವೇದದಲ್ಲಿ ಇಲ್ಲ, ಅಲೋಪಥಿಯಲ್ಲಿ ಮಾತ್ರ ಇದೆ ಎಂದು ವಾದಿಸುತ್ತಾರೆ. ಆದರೆ ವಿಷಯ ಏನೆಂದರೆ ಶಸ್ತ್ರ ಚಿಕಿತ್ಸೆ ಎನ್ನುವುದು ಆಧುನಿಕ ವಿಜ್ನಾನ ನೀಡಿದ ದೇಹರ ರಚನೆ ಬಗೆಗಿನ ಜ್ನಾನ ಮತ್ತು ಅದನ್ನು ಮಾಡಬಲ್ಲ ಯಂತ್ರಗಳ ಆವಿಷ್ಕಾರವೇ ಹೊರತು ಅದಾಗಿ ಯಾವುದೇ‌ ಒಂದು ‘ಪಥಿ’ ಗೆ ಅಂಟಿಕೊಂಡಿಲ್ಲ. ಅಂದರೆ, ಒಬ್ಬ ರೋಗಿ – ಅವನು ಅಲೋಪಥಿ ಮದ್ದು ತಿನ್ನುತ್ತಿದ್ದಾನೋ ಅಥವಾ ಆಯುರ್ವೇದ ಮದ್ದು ತಿನ್ನುತ್ತಿದ್ದಾನೋ – ರೋಗ ಬಿಗಡಾಯಿಸಿದರೆ ಆಪರೇಶನ್ ಮಾಡಿಕೊಳ್ಳಲೇ ಬೇಕು. ಹಾಗಾಗಿ ಈ ಆಧುನಿಕ ಶಸ್ತ್ರ ಚಿಕಿತ್ಸೆ ಯಾವುದೇ ವೈದ್ಯಪಧ್ಧತಿಗಾದರೂ ಉಪಯೋಗವಾಗುವಂಥಾದ್ದೆ.

      ಉತ್ತರ
  3. Satish Sringeri's avatar
    ಜೂನ್ 3 2011

    ಲೇಖನದಲ್ಲಿ ಹೇಳಲಾದ ಹಲವಾರು ವಿಷಯಗಳು ಸತ್ಯವಾದದ್ದು, ಆಯುರ್ವೇದದ ಗ್ರಂಥಗಳಲ್ಲಿ ಸಾವಿರಾರು ವರ್ಷಗಳ ಹಿಂದೆಹೇಳಲಾಗಿದ್ದ ಹಲವಾರು
    ಉಕ್ತಿಗಳು ಈಗಿನ ಪರಿಸ್ಥಿತಿಯಲ್ಲೂ ಉಪಯುಕ್ತವಾಗುತ್ತಿರುವುದನ್ನು ಹಲವಾರು ಸಂಶೋಧನೆಗಳು ಜಗತ್ತಿನ ಮುಂದಿಡುತ್ತಿವೆ, ಆಯುರ್ವೇದ ಕೇವಲ ವೈದ್ಯ ಪದ್ಧತಿಯಲ್ಲ,ಅದೊಂದು ಪರಿ ಪೂರ್ಣಜೀವನ ವಿಧಾನ ಎಂಬುದನ್ನು ಮನಗಂಡ ವಿದೇಶಿಗರು ಆಕರ್ಷಣೆಗೊಳಗಾದದ್ದು ಆಶ್ಚರ್ಯವಲ್ಲ,
    ನಮ್ಮದೆಲ್ಲವನ್ನೂ ಬಿಟ್ಟು ಇರದುದರೆಡೆಗೆ ತುಡಿಯುವ ಮನಸ್ಥಿತಿಯ ನಮಗೂ ಇತ್ತೀಚೆಗೆ ಇದರ ಅರಿವಾಗುತ್ತಿದೆ, ನಮ್ಮವರಿಗೆ “ಶಂಖದಿಂದ ಬಂದರೇ ತೀರ್ಥ”! ಆಯುರ್ವೇದದಲ್ಲಿ ಹೇಳಲಾದ ಸಂಗತಿಗಳನ್ನು, ವಿಶೇಷವಾಗಿ ಪ್ರಪಂಚದ ಅತಿ ಪ್ರಾಚೀನ ಗ್ರಂಥವಾದ “ಚರಕ ಸಂಹಿತೆ”ಯಲ್ಲಿ ಹೇಳಿದ್ದನ್ನು ಇದುವರೆಗೆ ಯಾರಿಗೂ ಅಲ್ಲಗಳೆಯಲಾಗಿಲ್ಲ, ಸುಶ್ರುತಾಚಾರ್ಯರು ಉಲ್ಲೇಖಿಸಿದ್ದ ಹಲವಾರು ಶಸ್ತ್ರಗಳು ಇಂದಿನ ಶಸ್ತ್ರಚಿಕಿತ್ಸೆಗೆ ಸ್ಪೂರ್ತಿಯಾಗಿವೆ, “Father of Rhinoplasty ” ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಅವರನ್ನು ಆಧುನಿಕ ಶಸ್ತ್ರ ಚಿಕಿತ್ಸಕರೇ ಗೌರವಿಸುತ್ತಿದ್ದಾರೆ, ಆಯುರ್ವೇದದಲ್ಲಿ ಹೇಳಿದ ಗಿಡಮೂಲಿಕೆಗಳ ಬಳಕೆ ದಿನದಿಂದ ದಿನಕ್ಕೆ ಜನಪ್ರಿಯಾಗುತ್ತಿರುವಾಗ ಪಾಶ್ಚಾತ್ಯ ಔಷಧಿ ಕಂಪೆನಿಗಳಿಗೆ ಇತ್ತೀಚೆಗೆ ಇದರ ಅರಿವಾಗುತ್ತಿದೆ

    ಉತ್ತರ
  4. amita ravikiran's avatar
    ಜೂನ್ 3 2011

    ಆಯುರ್ವೇದ ಎಂಬುದು ಸರ್ವೋಚ್ಚ ಶಾಸ್ತ್ರ .ಜಗತ್ತಿನ ಎಲ್ಲ ವೈದ್ಯ ಪಧತಿಗಳಿಗೆ ಹೋಲಿಸಿದರೆ ಆಯುರ್ವೇದ ಅತ್ಯಂತ ಪುರಾತನ ವು ಹೌದು… ಒಂದು ವಿಷಯ ಮಾತ್ರ ಸ್ಪಷ್ಟ ವಾಗುತ್ತಿಲ್ಲ…ಆಯುರ್ವೇದವನ್ನು ನಿಷೇಧಿಸುವ ಈ ರಾಷ್ಟ್ರಗಳು ಹರ್ಬಲ್ ಮೆಡಿಸಿನ್ ಬಗ್ಗೆ ಸಾವಿರಾರು ಪುಟ ಬರೆದು ಅಚ್ಚು ಮಾಡಿ..ಜೊತೆಗೆ ಇದಕ್ಕೊಂದು ಅಂತರಾಷ್ಟಿಯ ಸ್ಥಾನ ವನ್ನು ಕಲ್ಪಿಸುವಲ್ಲಿ National Institute of Medical Herbalist ಎಂಬ ಸಂಸ್ಥೆಯ ಮೂಲಕ ೧೮೬೪ ರಿಂದಲೂ ಕೆಲಸ ಮಾಡುತ್ತಿದ್ದಾರೆ.ಈ ಬಗ್ಗೆ ಹೆಚ್ಚಿನ ವಿವರ ಗಳನ್ನೂ ದಿ ಕಂಪ್ಲೀಟ್ ಹರ್ಬಲ್ ಟ್ಯುತರ್ ಎಂಬ ಪುಸ್ತಕದಲ್ಲಿ ಕಾಣಬಹುದು…
    ಜೊತೆಗೆ..ಇಲ್ಲಿಯ ಹಲವಾರು ಸಮಾಜ ಸೇವಾ ಸಂಸ್ಥೆಗಳು ಹರ್ಬಲ್ ಮೆಡಿಸಿನ್ ಬಳಸುವ ಒಲವನ್ನು ಜನರ ಮನದಲ್ಲೂ ಮೂಡಿಸುತ್ತಿವೆ ಇಂಥ ೨ ಘಂಟೆಗಳ ವರ್ಕ್ ಶಾಪ್ ಗಳಲ್ಲಿ ನಾನು ಭಾಗವಹಿಸಿದ್ದೇನೆ…ಇಲ್ಲಿ ಪ್ರಶ್ನೆ.ಔಷದಿಯದ್ದಲ್ಲ ಶಾಸ್ತ್ರ ದ್ದು ತಮ್ಮದಲ್ಲದ ಒಂದು ಹೆಸರನ್ನು ತಮ್ಮ ಜನ ಒಪ್ಪಿ ಕೊಳ್ಳುತ್ತಿರುವುದು ಅವರಿಗೆ ಇರುಸು ಮುರುಸು…ಆಯುರ್ವೇದದ ಎಲ್ಲಾ ಚಿಕಿತ್ಸೆ ಗಳನ್ನೂ ಆಂಗ್ಲ ಬಣ್ಣದಲ್ಲಿ ಮುಳುಗಿಸಿ ತೆಗೆದು…ಅದನ್ನು ಜನಪ್ರಿಯ ಗೊಳಿಸುವ ತಂತ್ರವು ಇರಬಹುದು…
    ಇನ್ನು ಅನಂತ್ ಪ್ರಸಾದ್ ಮತ್ತು ಸಂತೋಷ್ ಕುಮಾರ್ ಅವರ ಮಾತುಗಳನ್ನು ನಾನು ಅಲ್ಲಗಳೆಯಲಾರೆ…ಏಕೆಂದರೆ ನಮ್ಮ ಜನರಿಗೆ ಬೇಗ ಗುಣವಾಗಬೇಕು..ಅದು ಹೇಗೆ ಆಗಲಿ…ಅದಕ್ಕೆ ದಿನ ನಿಧಾನ ವಿಷ ದಂಥಹ ಜೀವ ನಿರೋಧಕ ಗಳನ್ನು ಚುಚಿಸಿ ಕೊಳ್ಳ ಬಲ್ಲರು…ಆಯುರ್ವೇದ ವನ್ನು ಕಲಿತ ವೈದ್ಯನ ಚಿಕಿತ್ಸೆಗೆ ಸ್ಪಂದಿಸಿ ಪರಿಣಾಮ ಕ್ಕೆ ಕಾದು ನಿಲ್ಲುವ ಸಹನೆ ನಮಗಿದೆಯೇ???ನಾವೇ ವೈದ್ಯರಿಗೆ ನಿರ್ದೇಶಿಸುವ ಕಾಲವಿದು…ಅಂಥದ್ದರಲ್ಲಿ ವೈದ್ಯರು ತಮ್ಮ ಜೇಬನ್ನು ನಮ್ಮ ಅಸಹನೆಯ ಮೂಲಕ ತುಂಬಿ ಕೊಳ್ಳುವಲ್ಲಿ ತಪ್ಪೇನು???
    ಮೂಲಿಕೆಗಳನ್ನು ನಿಷೆದಿಸಿದಂತೆ ಸಾಂಬಾರು ಪದಾರ್ಥ …ಅಕ್ಕಿ ,ಮತ್ತು ಗೋದಿ ಪೆಟ್ರೋಲ್ ಗಳನ್ನು ಯಾವಾಗ ನಿಷೆಧಿಸುತ್ತಾರೋ..ಕಾದು ನೋಡೋಣ…

    ಉತ್ತರ
  5. sriharsha's avatar
    sriharsha
    ಜೂನ್ 3 2011

    ಇದೊಂದು ಕಾಮೆಡಿ ಲೇಖನ ಎಂದರೆ ನಕ್ಕು ಸುಮ್ಮನಾಗಿಬಿಡುವೆ.
    ಜ್ಷಾನವರ್ಧನೆಗೆಂದು ಬರೆದಿದ್ದರೆ ಇಲ್ಲಿ ನನ್ನ ವಿರೋಧವಿದೆ.

    “//ರಾತ್ರಿ ಕಳೆದ ಮೇಲೆ ಸೂರ್ಯೋದಯವಾಗಲೇಬೇಕು. ಅಂತೆಯೇ ಆಯುರ್ವೇದದ ಕತ್ತಲೆ ಸರಿಯಿತು. ಭಾರತಕ್ಕಷ್ಟೇ ಸೀಮಿತವಾಗಿದ್ದ ವೈದ್ಯ ಪದ್ಧತಿ ಜಗದ್ವ್ಯಾಪಿಯಾಯಿತು. ಅಮೆರಿಕ, ಬ್ರಿಟನ್, ಐರೋಪ್ಯ ರಾಷ್ಟ್ರಗಳು ಸೇರಿದಂತೆ ಜಗತ್ತಿನ ಮೂಲೆ ಮೂಲೆಯಲ್ಲಿ ಆಯುರ್ವೇದ ಪದ್ಧತಿ ಹರಡಿಕೊಂಡಿತು. ವಿವಿಧ ದೇಶಗಳಲ್ಲಿ ಆಯುರ್ವೇದ ವೈದ್ಯ ಪದ್ಧತಿಯ ಕಾಲೇಜುಗಳು ತೆರೆದುಕೊಂಡವು, ಕೋರ್ಸ್ ಗಳು ಆರಂಭವಾದವು. ವಿದ್ಯಾರ್ಥಿಗಳು ಸಾಲುಗಟ್ಟಿ ಆಯುರ್ವೇದ ವೈದ್ಯ ಪದ್ಧತಿ ಕಲಿಯುವುದಕ್ಕೆ ಬಂದರು.//”

    ಯಾವಾಗ ಉದಯವಾಯಿತು? ಎಲ್ಲೆಲ್ಲಿ ಕೋರ್ಸ್ ಗಳು ಆರಂಭವಾದವು? ಎಷ್ಟು ಜನ ವಿದ್ಯಾರ್ಥಿಗಳು ಕಲಿತರು? ಅಂಕಿ ಅಂಶಗಳು ಇವೆಯೇ?

    “//ಇಂಗಿಷ್ ವೈದ್ಯ ಪದ್ಧತಿಯು ಯಾವುದೇ ರೋಗವನ್ನು ಸಂಪೂರ್ಣ ಗುಣ ಮಾಡುವುದಿಲ್ಲ. ರೋಗದ ಲಕ್ಷಣಗಳನ್ನು ತಟಸ್ಥಗೊಳಿಸುವ ಮೂಲಕ ಆ ರೋಗವನ್ನು ಅಜ್ಞಾತವಾಗಿಡುತ್ತದೆ ಅಷ್ಟೆ.//”
    ಇದು ಆಲೋಪತಿ ವೈದ್ಯ ಪದ್ಧತಿಯ ಬಗೆಗಿನ ತಮ್ಮ ಅಜ್ಞಾನವನ್ನು ತೋರಿಸುತ್ತದೆ. ಇದು ಶುದ್ಧ ಸುಳ್ಳು. ನಿಮ್ಮ ಹೇಳಿಕೆ ಸರಿಯಿದ್ದರೆ ಸರಿಯಾದ ದಾಖಲೆಗಳನ್ನು ಕೊಡಿ.

    ಇನ್ನೂ ಕೆಲವು ಪ್ರಶ್ನೆಗಳಿಗೆ ಉತ್ತರ ಬೇಕು..
    ಆಯುರ್ವೇದ ಅಷ್ಟು ಶ್ರೇಷ್ಟವಾಗಿದ್ದರೆ ಸಹಸ್ರಾರು ಜನ ಒಂದೇ ಸಾರಿಗೆ ಪ್ಲೇಗ್, ಕಾಲರಾಕ್ಕೆ ತುತ್ತಾಗಿ ಯಾಕೆ ಸಾಯುತ್ತಿದ್ದರು? ಹಳ್ಳಿ ಹಳ್ಳಿಗಳೇ ಯಾಕೆ ನಿರ್ನಾಮವಾಗುತ್ತಿದ್ದವು?
    ಹುಟ್ಟಿದ ಹತ್ತು ಮಕ್ಕಳಲ್ಲಿ ಮೂರೋ ನಾಕೋ ಯಾಕೆ ಉಳಿಯುತ್ತಿದ್ದವು?
    ಏಡ್ಸ್ ಕ್ಯಾನ್ಸರ್‍ ಗಳನ್ನು ಆಯುರ್ವೇದ ಗುಣಪಡಿಸಬಲ್ಲದೇ?

    ಉತ್ತರ
    • ರವಿ ಜಿ ಬಿ's avatar
      ರವಿ ಜಿ ಬಿ
      ಜೂನ್ 6 2011

      ಶ್ರೀ ಹರ್ಷರವರೆ ಮತ್ತು ಇತರರೆ ,
      ಮೊ೦ಡು ವಾದ ಬೇಡ !!!
      ಸಾವಿರಾರು ಜನ ಪ್ಲೇಗೆ ಮೊದಲಾದ ಸಾಂಕ್ರಾಮಿಕ ರೋಗಗಳಿಂದ ಸತ್ತರು ನಿಜ ..ಇದರಲ್ಲಿ ಆಯುರ್ವೇದದ ತಪ್ಪೇನು? ಆಗ ಇದ್ದ ವೈದ್ಯರಿಗೆ ಇದೊಂದು ಹೊಸ ರೋಗ ಚಿಹ್ನೆ, ಅದನ್ನ ಗ್ರಹಿಸುವದರಲ್ಲಿ ವಿಫಲರಾದರು ಅಸ್ಟೇ. ಈಗಲೂ ನೀವು ಹೇಳುತ್ತಿರುವ ಅಲೋಪತಿಯಲ್ಲಿ ವೈದ್ಯರು ರೋಗ ಚಿಹ್ನೆ ಪತ್ತೆ ಹಚ್ಚಲು ವಿಫಲರಾದರೆ ಪ್ಲೇಗು ಯಾಕೆ ಮಾಮೂಲಿ ಜ್ವರ ಬಂದರೂ ವ್ಯಕ್ತಿ ಸಾಯುತ್ತಾನೆ!!!
      ಹಿಂದೆ ಪ್ಲೇಗೆ ಮೊದಲಾದ ರೋಗಗಳು ಬಂದಾಗ ಜನ ಜಾಗೃತರಾಗಲಿಲ್ಲ ಹಾಗಾಗಿ ಸಾವಿನ ಸಂಖ್ಯೆ ಅಸ್ತೊಂದ್ ಹೆಚ್ಚಾಗಿರಬಹುದು ಅಲ್ಲವೇ? ಅವರಿಗಿದ್ದ ಮೂಡ ನ೦ಬಿಕೆಯೋ ಕಾರಣ ವಾಗಿರಬಹುದು!

      ಇನ್ನು ಆಯುರ್ವೇದ ವೈದ್ಯ ,ಅಲೋಪತಿ ಔಷಧಿ ಕೊಡುವ ಬಗ್ಗೆ ” ಅದು ವೈದ್ಯನ ತಪ್ಪೇ ಹೊರತು ಆಯುರ್ವೇದದ ತಪ್ಪಲ್ಲವಲ್ಲ? ಇನ್ನು ಕೆಲವು ಅಲೋಪತಿ ವೈದ್ಯರ ಹತ್ತಿರ ಹೋದಾಗ ,ಎಷ್ಟು ದಿನಕ್ಕೆ ಕೊಡಲಿ ಔಷಧಿ ಎ೦ದು ನಮ್ಮನ್ನೇ ಕೇಳುತ್ತಾರೆ! ಇದು ಜನರ ತಪ್ಪಾ ಅಥವಾ ಅಲೋಪತಿಯ ತಪ್ಪಾ ಅಥವಾ ಅಲೋಪತಿ ವೈದ್ಯನ ತಪ್ಪಾ?

      ಇನ್ನೊಂದು ಮುಖ್ಯ ವಿಷಯ ಎಲ್ಲೇ ಹೋದರು ಬಂದರೂ “ಸರಿಯಾದ ದಾಖಲೆಗಳನ್ನು ಕೊಡಿ” ಎಂದು ಕೇಳುವುದು ನಿಮ್ಮ ಹವ್ಯಾಸ ವಾಗಿದೆ! ಏ ಹವ್ಯಾಸವೇನೆ ಸ್ವಾಗತಾರ್ಥವೆ ಆದರೆ ನೀವು ಅದನ್ನು ಅನುಸರಿಸುತ್ತಿದ್ದೀರೋ? ಅದು ಪ್ರಶ್ನೆ ! ಯಾಕೆಂದರೆ ಹಿಂದೆ ಪ್ಲೇಗು ಇತ್ಯಾದಿ ಸಾಂಕ್ರಾಮಿಕ ಖಾಯಿಲೆಗಳು ಹರಡಿದಾಗ ಅದರಲ್ಲಿ ಅಲೋಪತಿ ವೈದ್ಯ ಪದ್ಧತಿ ಉಪಯೋಗಿಸಿ ಬದುಕುಳಿದವರೆಷ್ಟು? ಆಯುರ್ವೇದ ಉಪಯೋಗಿಸಿ ಸತ್ತವರೆಷ್ಟು? ದಯವಿಟ್ಟು ಅ೦ಕಿ ಅ೦ಶ ಸಮೇತ ತಿಳಿಸಿ ಕೃತಾರ್ಥರಾಗಿ!!!!

      ಮುಖ್ಯ ವಿಷಯ : ಈ ಲೋಕ ದಲ್ಲಿ ಸಾಂಕ್ರಾಮಿಕವಾಗಿ ಹಬ್ಬುತ್ತಿರುವ “ಪ್ರಪಂಚದ ಯಾವುದೇ ವೈದ್ಯ/ ವೈಜ್ಞಾನಿಕ ಪದ್ದತಿಗ ಳಿ೦ದ ಗುಣಪಡಿಸಲಾಗದ ಒ೦ದು ಖಾಯಿಲೆ ಅಂದರೆ ಇಂತಹ ಮೂರ್ಖ ವಾದ ( ನನ್ನ ಭಾಷೆಯಲ್ಲಿ ಹೇಳುವುದಾದರೆ ” ವೈಜ್ಞಾನಿಕ ಮೂಢ ನ೦ಬಿಕೆ “).
      ದಯವಿಟ್ಟು ಅದರಿ೦ದ ಹೊರಬನ್ನಿ ಇದು ಈ ರೀತಿ ಮೊ೦ಡು ವಾದ ಮಾಡುವ ಎಲ್ಲರಿಗೂ ಅನ್ವಯ !!! ನಾನೂ ಮೊ೦ಡು ವಾದ ಮಾಡಿದರೆ ನನಗೂ ಅನ್ವಯ ಆಗುತ್ತದೆ ಖಂಡಿತಾ !!!!

      ಉತ್ತರ
      • ರವಿ ಜಿ ಬಿ's avatar
        ರವಿ ಜಿ ಬಿ
        ಜೂನ್ 6 2011

        ತಿದ್ದುಪಡಿ :
        ಇನ್ನೊಂದು ಮುಖ್ಯ ವಿಷಯ ಎಲ್ಲೇ ಹೋದರು ಬಂದರೂ “ಸರಿಯಾದ ದಾಖಲೆಗಳನ್ನು ಕೊಡಿ” ಎಂದು ಕೇಳುವುದು ನಿಮ್ಮ ಹವ್ಯಾಸ ವಾಗಿದೆ! ಈ ಹವ್ಯಾಸವೇನೋ ಸ್ವಾಗತಾರ್ಥವೆ ಆದರೆ ನೀವು ಅದನ್ನು ಅನುಸರಿಸುತ್ತಿದ್ದೀರೋ? ಅದು ಪ್ರಶ್ನೆ ! ಯಾಕೆಂದರೆ ಹಿಂದೆ ಪ್ಲೇಗು ಇತ್ಯಾದಿ ಸಾಂಕ್ರಾಮಿಕ ಖಾಯಿಲೆಗಳು ಹರಡಿದಾಗ ಅದರಲ್ಲಿ ಅಲೋಪತಿ ವೈದ್ಯ ಪದ್ಧತಿ ಉಪಯೋಗಿಸಿ ಬದುಕುಳಿದವರೆಷ್ಟು? ಆಯುರ್ವೇದ ಉಪಯೋಗಿಸಿ ಸತ್ತವರೆಷ್ಟು? (ಮತ್ತು ತಿರುಗು ಮುರುಗು ಕೂಡ ) .ದಯವಿಟ್ಟು ಅ೦ಕಿ ಅ೦ಶ ಸಮೇತ ತಿಳಿಸಿ ಕೃತಾರ್ಥರಾಗಿ!!!!

        ಉತ್ತರ
        • ರವಿ ಜಿ ಬಿ's avatar
          ರವಿ ಜಿ ಬಿ
          ಜೂನ್ 6 2011

          ಓಹ್ ಬಹುಮುಖ್ಯ ವಿಷಯ ಮರೆತಿದ್ದೆ !!! ನಾನು ಅಲೋಪತಿ ವಿರೋಧಿಯೂ ಅಲ್ಲ , ಆಯುರ್ವೇದದ ಪರವೂ ಅಲ್ಲ .
          ಇದನ್ನು ಸ್ಪಷ್ಟ ಪಡಿಸಲು ಕಾರಣ ” ಖಾವಿ ದರಿಸಿದವರು ಮತ್ತು ಓಂ ಉಚ್ಚರಿಸುವವರು ಮತ್ತು ಹೇಳಿ ಕೊಡುವವರು “ಅರ್ ಎಸ್ ಎಸ್” ನವರು ಮತ್ತು ಕೋಮುವಾದಿಗಳು ಎಂದು ಬಿಂಬಿಸಿದಂತೆ. ತಪ್ಪು ಕಲ್ಪನೆ ಬಾರದಿರಲೆ೦ದು ಈ ಸ್ಪಷ್ಟನೆ ಅಷ್ಟೇ !!!

          ಉತ್ತರ
      • sriharsha's avatar
        sriharsha
        ಜೂನ್ 6 2011

        ಮಹಾಸ್ವಾಮಿ ರವಿ ಜಿಬಿ ಯವರೇ!,
        ಮೊಂಡುವಾದ ಬೇಡ ಎಂಬ ತಮ್ಮ ’ಬಿಟ್ಟಿ’ ಸಲಹೆಗೆ ಧನ್ಯವಾದಗಳು! ನಾನು ಇಲ್ಲಿ ಕೇವಲ ಪ್ರಶ್ನೆಗಳನ್ನು ಕೇಳಿದ್ದೇನೆ. ನನ್ನ ವಾದವನ್ನೇ ಮುಂದಿಟ್ಟಿಲ್ಲ! ಪ್ರಶ್ನೆ ಕೇಳುವದನ್ನೇ ಮೊಂಡುವಾದ ಎಂದು ತಪ್ಪಿಸಿಕೊಳ್ಳಲು ನೋಡಿದರೆ ಬಿಡಲಾದೀತೆ? ನೇರ ಉತ್ತರ ಕೊಡಿ ಸ್ವಾಮಿ.
        ವಿಶ್ವದಾದ್ಯಂತ ಎಷ್ಟು ಜನ ಆಯುರ್ವೇದ ಕಲಿತರು ಎಂದು ಹೇಳಿದಿರಲ್ಲ ಅದರ ಅಂಕಿ ಅಂಶವನ್ನು ಈಗಲೂ ಹೇಳುತ್ತಿಲ್ಲ ತಾವು ಜಾಣ ಮರೆವೇ?
        ಪ್ಲೆಗ್ ಕಾಲರಾ ಬಗ್ಗೆ ಅದೇನೋ ಅಸಂಬದ್ಧ ಉತ್ತರ ಕೊಟ್ಟಿದ್ದೀರಿ. ಇರಲಿ. ಉಳಿದ ಪ್ರಶ್ನೆಗಳಿಗೆ ಜಾಣ ’ಇಗ್ನೋರ್‍’ ತನ ಯಾಕೆ?
        ನಾನಿಲ್ಲಿ ಆಯುರ್ವೇದವನ್ನು ಹಂಗಿಸುವ ಉದ್ದೇಶದಿಂದ ಪ್ರಶ್ನೆ ಕೇಳಿಲ್ಲ ತಿಳಿದುಕೊಳ್ಳಬೇಕೆಂಬ ಕುತೂಹಲದಿಂದ ಕೇಳಿದೆ. ತಮ್ಮ ಉತ್ತರ ನೋಡಿದರೆ ಅನುಮಾನಿಸಬೇಕೆನ್ನಿಸುತ್ತಿದೆ!

        ಉತ್ತರ
        • ಮಹೇಶ ನೀರ್ಕಜೆ's avatar
          ಮಹೇಶ ನೀರ್ಕಜೆ
          ಜೂನ್ 6 2011

          ವಿಶ್ವದಾದ್ಯಂತ ಎಷ್ಟು ಜನ ಆಯುರ್ವೇದ ಕಲಿತರು ಎನ್ನುವ ಮಾಹಿತಿ ತಮಗೆ ಬೇಕಿದ್ದರೆ ಭಗವಂತನನ್ನು ಕೇಳಿ. ನಾವು ಇಲ್ಲಿ ಅಂಕಿ ಅಂಶಗಳ ಬ್ಯೂರೋವನ್ನೂ ಇಟ್ಟುಕೊಂಡಿಲ್ಲ. ಆಯುರ್ವೇದದ ಬಗ್ಗೆ ಚರ್ಚೆ ಮಾಡೋಣ. ಅದು ಬಿಟ್ಟು ಅಂಕಿ ಅಂಶಗಳು ಯಾಕೆ? ಒಂದಂಕಿ ಹೆಚ್ಚು ಕಮ್ಮಿ ಆದರೆ ಆಯುರ್ವೇದ ಸರಿ ತಪ್ಪು ಎಂದು ಹೇಳಬಹುದೆ? ಇದು ಹಾಸ್ಯಾಸ್ಪದ.

          ಉತ್ತರ
          • sriharsha's avatar
            sriharsha
            ಜೂನ್ 7 2011

            ರನ್ನಿಂಗ್ ರೇಸ್ ಚಾಂಪಿಯನ್ ಶ್ರೀಯುತ ಮಹೇಶರೇ,

            ಜಗವೆಲ್ಲ ಆಯುರ್ವೇದವನ್ನು ಕಲಿಯತೊಡಗಿತು ನೂರಾರು ವಿದ್ಯಾರ್ಥಿಗಳು ಸೇರಿದರು ಸಾವಿರಾರು ವಿದ್ಯಾಲಯಗಳು ತೆರೆದಸ್ವು ಅಂತ ಬರೆದಿದ್ದಾರಲ್ಲ ಇಂಥ ಬುರುಡೆಗಳನ್ನು ನಾವು ನಂಬಬೇಕೆ?
            ಸರಿಯಾದ ಅಂಕಿ ಅಂಶಗಳನ್ನು ಕೊಡದ ನಿಮ್ಮ ಹಸೀ ಹಸೀ ಸುಳ್ಳುಗಳನ್ನು ನಾವು ಏಕೆ ನಂಬಬೇಕು?
            ಸರಿ ಅಂಕಿ ಅಂಶಗಳು ಕೊಡಲಾಗದಿದ್ದರೆ ಬೇಡ ಉಳಿದ ಪ್ರಶ್ನೆಗಳಿಗೆ ಉತ್ತರ ಕೊಡುವ ತೊಂದರೆಯನ್ನು ತಾವು ಏಕೆ ತೆಗೆದುಕೊಳ್ಳುತ್ತಿಲ್ಲ? ನೀವು ಮೂರ್ಖರಾದ್ ಕೂಡ್ಲೇ ಜಗತ್ತು ತಮ್ಮ ಮೂರ್ಖತನವನ್ನು ಕಣ್ಣುಮುಚ್ಚಿ ಪಾಲಿಸುತ್ತದೆ ಎಂದುಕೊಳ್ಳಬೇಡಿ.
            ಯಾವುದನ್ನೂ ಪ್ರಶ್ನಿಸ್ದೇ ಒಪ್ಪಿಕೊಳ್ಳಬೇಡಿ ಎಂದು ತಾವು ಬಹಳವಾಗಿ ನಂಬುವ ವೇದಗಳೇ ಹೇಳುತ್ತವೆ. ಪ್ರಶ್ನಿಸಿದ್ರೆ ತಮ್ಮಂತಹ ಪ್ರಭೃತಿಗಳಿಂದ ಬರುವ ಉತ್ತರ ನೋಡಿ!
            ನಿಮ್ಮ ಸುಳ್ಳುಗಳಿಗೆ ಭಗವಂತ ಉತ್ತರ ಕೊಡುತ್ತಾನೆ ಎಂದರೆ ನೀವೇನು ಕಡಿಯುತ್ತಿದ್ದೀರಿ ಇಲ್ಲಿ?

            ಉತ್ತರ
            • ಮಹೇಶ ಪ್ರಸಾದ ನೀರ್ಕಜೆ's avatar
              ಮಹೇಶ ಪ್ರಸಾದ ನೀರ್ಕಜೆ
              ಜೂನ್ 7 2011

              ಉತ್ತರಿಸಬಹುದಾದ ಪ್ರಶ್ನೆಗಳಿಗೆ ಉತ್ತರಿಸುವೆ. ಉತ್ತರಿಸಬಾರದೆಂದೇ ಕೇಳಿದಂತಹ ಪ್ರಶ್ನೆಗಳಿಗೆ ಉತ್ತರಿಸಲಾರೆ. ಊರಿಗೆ ಊರೇ ಪ್ಲೇಗ್ ಗೆ ತುತ್ತಾದಂತೆ ಪೇಟೆಯಂಥಾ ಪೇಟೆಗಳಲ್ಲಿಯೇ ಇಂದು ಸಾವಿರಾರು ಜನ ಹೃದಯ ಸಂಬಂಧಿ ರೋಗಗಳಿಂದ, ಕ್ಯಾನ್ಸರ್ ನಿಂದ ಸಾಯುತ್ತಿದ್ದಾರೆ. ಅದಕ್ಕೆಲ್ಲ ಅಲೋಪಥಿ ಕಾರಣವೇ? ಆಯುರ್ವೇದದಲ್ಲಿ ಗುಣವಾಗದ ರೋಗಗಳೇ ಇಲ್ಲ ಅಥವಾ ಎಲ್ಲಾ ಆಯುರ್ವೇದ ಪಂಡಿತರಿಗೂ ಎಲ್ಲಾ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯ ಇತ್ತು ಎಂದು ಬರೆದದ್ದು ಲೇಖನದಲ್ಲಿ ನನಗೆ ಎಲ್ಲಿಯೂ ಕಾಣಿಸಿಲ್ಲ. ಇಂತಿರುವಾಗ ನಿಮ್ಮ ಪ್ರಶ್ನೆಗೆ ಅರ್ಥವಿಲ್ಲ.

              ಉತ್ತರ
        • ರವಿ ಜಿ ಬಿ's avatar
          ರವಿ ಜಿ ಬಿ
          ಜೂನ್ 7 2011

          ಶ್ರೀ ಶ್ರೀ ಶ್ರೀಹರ್ಷರವರೆ ,
          ಇದನ್ನೇ ನಾನು ಮೊ೦ಡು ವಾದ ಅಂದಿದ್ದು !!!! ನಿಮ್ಮನ್ನೂ ಸೇರಿಸಿ ನೀವು ಕೇಳಿದ ಪ್ರಶ್ನೆಗಳು “ತಿಳಿದುಕೊಳ್ಳಬೇಕೆಂಬ ಕುತೂಹಲದಿಂದ ಕೇಳಿದ ” ಪ್ರಶ್ನೆ ಗಳು ಅಂತ ಯಾರಿಗೂ ಅನ್ನಿಸಿರಲಾರದು. ಯಾಕೆಂದರೆ ಆ ರೀತಿಯ ಪ್ರಶ್ನೆಗಳಲ್ಲ ಅವುಗಳು !!!!
          ನೀವು ಅಂಕಿ ಅ೦ಶ ಕೇಳಿದರೆ ಅದು “ತಿಳಿದುಕೊಳ್ಳಬೇಕೆಂಬ ಕುತೂಹಲದಿಂದ ಕೇಳಿದ ” ಪ್ರಶ್ನೆ ಗಳು, ಅದೇ ತರಹ ನಾನು ಕೇಳಿದರೆ ಅದು ಅಸಂಬದ್ದ ಉತ್ತರ !!??? ಇದು ಮೊ೦ಡು ವಾದವಲ್ಲದೆ ಇನ್ನೇನು?
          ಯಾಕೆ ಸ್ವಾಮೀ ಕಾಲೆರಾ ,ಪ್ಲೇಗು ಗಳು ಬಂದಾಗ ಅಲೋಪತಿ ಇರಲಿಲ್ಲವ? ಇದು ಜಾಣ ಮರೆವು ಅಂದುಕೋಳ್ಳಲೋ?
          ಎಲ್ಲಾ ಬಿಡಿ ಸ್ವಾಮೀ ಈಗ ಜನ ಆಯುರ್ವೇದದ ಕಡೆ ವಾಲುತ್ತಿರುವುದು ಆಲೋಪತಿಯಲ್ಲಿರುವ “ಸೈಡ್ ಎಫೆಕ್ಟ್ “ನಿಂದ ತಪ್ಪಿಸಿಕೊಳ್ಳಲು ಅಸ್ಟೇ. ಅಲೋಪತಿಯ ಪೈನ್ ಕಿಲ್ಲರ್ ಗಳು ರೋಗವನ್ನು ಗುಣಪಡಿಸುತ್ತವೆಯೋ? ಅಥವಾ ಮರೆಮಾಚುತ್ತವೆಯೋ?ನೀವೇ ಹೇಳಿ!
          ಇನ್ನು ಮುಖ್ಯವಾಗಿ ಅಂಕಿ ಅ೦ಶ ಗಳು ಬೇಕು ಅನ್ನುವ ನೀವು ಕೊಡೋದು ಮಾತ್ರ ಯಾವುದೊ ಹಳಕಲು ವಿಕಿಪೀಡಿಯ ದ ಕೊಂಡಿ ಮಾತ್ರ !! ಅದನ್ನು ನನ್ನ೦ತಹವನು ಕೂಡ ಯಾವಾಗ ಬೇಕಾದರೂ ತಿದ್ದಬಹುದು !!!!

          ಕೊನೆ ತುತ್ತು : ಅಲೋಪತಿ ಮತ್ತು ಆಯುರ್ವೆದಗಳಿಗೆ ಅವುಗಳದ್ದೇ ಆದ “merits ಮತ್ತು demerits ಗಳು ಇವೆ . ಅವುಗಳ ಬಗ್ಗೆ ಚರ್ಚೆಯಾಗಲಿ. ಅದು ಬಿಟ್ಟು ಮೊ೦ಡುತನ ಬೇಡ !!!!!

          ಉತ್ತರ
          • sriharsha's avatar
            sriharsha
            ಜೂನ್ 7 2011

            ಹೋ! ಇದಾ ಮೊಂಡುವಾದ? ಓಕೆ ಗೊತ್ತಿರಲಿಲ್ಲ.
            ಸಕ್ಕತ್ ಕಣ್ರೀ.. ಉತ್ತರ ಕೊಡಲು ಆಗದಿದ್ದರೆ ಹಿಂಗೆ ಮೈ ಪರಚಿಕೊಂಡರೆ ಆಯಿತು ಬಿಡಿ.

            ಹನ್ನೆರಡು ಹದಿಮೂರನೆಯ ಶತಮಾನದಲ್ಲಿ ಪ್ಲೇಗ್ ಬರುತ್ತಿತ್ತಲ್ಲ? ಆವಾಗ್ ಆಲೋಪತಿ ಎಲ್ಲಿತ್ತು? ಜನ ಯಾಕೆ ಸಾಯುತ್ತಿದ್ದರು? ಹೇಳಿ.
            ಪ್ರಶ್ನೆ ಕೇಳಿದವರಿಗೆ ಉತ್ತರ ಕೊಟ್ಟು ನಂತರ ಪ್ರಶ್ನೆ ಕೇಳುವುದು ಸಜ್ಜನಿಕೆ.

            ಒಬ್ಬ ತಾಯಿ ಹ್ತ್ತು ಮಕ್ಕಳನ್ನು ಹುಟ್ಟಿಸಿದರೆ ಹತ್ತನ್ನೂ ಉಳಿಸಿಕೊಡುವ ತಾಕತ್ತು ಆಲೋಪತಿಕ್ ವೈದ್ಯರಿಗೆ ಇದೆ. ಆಯುರ್ವೇದ ಪಂಡಿತರಿಗೆ ಇದೆಯೇ? ಇದ್ದಿದ್ದೇ ಆದರೆ ಆಲೋಪ್ತಿ ಬರುವ ಮುಂಚೆ ಹುಟ್ಟಿದ ಮಕ್ಕಳಲ್ಲಿ ಅರ್ಧಕ್ಕರ್ಧ ಯಾಕೆ ಸಾಯುತ್ತಿದ್ದವು?

            ಆಲೋಪತಿ ರೋಗಗಳನ್ನು ಮರೆಮಾಚುತ್ತವೆ ಎಂಬುದಕ್ಕೆ ತಕ್ಕ ಸಾಕ್ಶಿ ಕೊಡಿ ಸಾರ್! ಅಂದಹಾಗೆ ಇಲ್ಲಿ ನಾನು ಆಲೋಪ್ತಿಯ ವಕೀಲಿಕೆ ಮಾಡುತ್ತಿಲ್ಲ. ನೀವು ಹೇಳುತ್ತಿರುವುದು ಸರಿ ಎಂಬುದಕ್ಕೆ ಸಾಕ್ಶಿ ಕೊಡಿ ಅಂತ ಕೇಳುತ್ತಿದ್ದೇನೆ.

            ನನ್ನ ಪ್ರಶ್ನೆಗಳು ನೇರವಾಗಿವೆ. ಅದರ ಹಿಂದಿನ ಉದ್ದೇಶದ ಬಗ್ಗೆ ಗಾಂಚಾಲಿಯ ಮಾತುಗಳನ್ನಾಡದೇ ನೇರ ಉತ್ತರ ಕೊಡಿ. ಇಲ್ಲವೇ ಈ ಲೇಖನವು ಮೂರ್ಖತನದ್ದು ಹಾಗೂ ಇದನ್ನು ಬೆಂಬಲಿಸುವವರು ಶತಮೂರ್ಖರು ಎಂದುಕೊಂಡು ಸುಮ್ಮನಾಗುತ್ತೇನೆ.

            ಉತ್ತರ
            • ರವಿ ಜಿ ಬಿ's avatar
              ರವಿ ಜಿ ಬಿ
              ಜೂನ್ 7 2011

              ಮೊ೦ಡುವಾದ ಪ್ರವರ್ತಕ , ವ್ಯಂಗ್ಯ ಕಲಾಧೀಶ, ಇತ್ಯಾದಿ ಶಬ್ಧಗಳಿ೦ದ ನಿಮ್ಮನ್ನು ನಾನು ಸ೦ಬೊದಿಸಿದರೆ , ನಿಮಗೂ ನನಗೂ ವ್ಯತ್ಯಾಸವೇ ಇರೋದಿಲ್ಲ !! ಅಲ್ಲವೇ?
              ನೀವು ಹುಟ್ಟು ಹಾಕಿದ ನಿಮ್ಮವೇ ಆದ ಕೆಲವು ವಿಷಯಗಳು ನಿಮಗೇ ಇಲ್ಲಿ ಎಲ್ಲರಿಗಿ೦ತ ಹೆಚ್ಚಾಗಿ ಅನ್ವಯವಾಗೋದು ಮಾತ್ರ ಇಲ್ಲಿ ವಿಪರ್ಯಾಸವೋ ಅಥವಾ ಕಾಕತಾಳೀಯವೋ ತಿಳಿಯದು !! ಬೇಷ್ಹ್!!!

              “ಒಬ್ಬ ತಾಯಿ ಹ್ತ್ತು ಮಕ್ಕಳನ್ನು ಹುಟ್ಟಿಸಿದರೆ ಹತ್ತನ್ನೂ ಉಳಿಸಿಕೊಡುವ ತಾಕತ್ತು ಆಲೋಪತಿಕ್ ವೈದ್ಯರಿಗೆ ಇದೆ. ಆಯುರ್ವೇದ ಪಂಡಿತರಿಗೆ ಇದೆಯೇ? ಇದ್ದಿದ್ದೇ ಆದರೆ ಆಲೋಪ್ತಿ ಬರುವ ಮುಂಚೆ ಹುಟ್ಟಿದ ಮಕ್ಕಳಲ್ಲಿ ಅರ್ಧಕ್ಕರ್ಧ ಯಾಕೆ ಸಾಯುತ್ತಿದ್ದವು?”
              >>>> ಅದ್ಭುತ ಅತ್ಯದ್ಭುತ !!!!!!!!

              ನಿಮಗೇ ಗೊತ್ತಾಗಿಲ್ಲ ಅಂತಾದರೆ ಪುನಃ ಹೇಳುತ್ತೆನೇ ಕೇಳಿ ” ಅಲೋಪತಿ ಮತ್ತು ಆಯುರ್ವೆದಗಳಿಗೆ ಅವುಗಳದ್ದೇ ಆದ “merits ಮತ್ತು demerits ಗಳು ಇವೆ . ಅವುಗಳ ಬಗ್ಗೆ ಚರ್ಚೆಯಾಗಲಿ.”

              ಹಾಗಾಗಿ ಯಾವುದೂ ಕೆಟ್ಟದ್ದಲ್ಲ . ಪೈನ್ ಕಿಲ್ಲರ್ ಗಳ ಬಗ್ಗೆ ಹೇಳಿದ್ದೆ ತಮಗೆ ಕಾಣಿಸಲಿಲ್ಲವೋ?
              “ಆದರೆ “ಇಂತಹ ” ರೋಗಕ್ಕೆ ಆಲೋಪತಿಯಲ್ಲಾಗಲಿ,ಆಯುರ್ವೆದದಲ್ಲಾಗಲಿ, ಅಥವಾ ಪ್ರಪಂಚದ ಇನ್ನಾವುದೇ ಚಿಕಿತ್ಸಾ ಪದ್ದತಿಗಳಲ್ಲಾಗಲಿ ಚಿಕಿತ್ಸೆ ಇಲ್ಲ ಎಂಬುದಂತೂ ನೂರಕ್ಕೆ ನೂರು ಸತ್ಯ !!!!! ಇನ್ನೂ ಬಂದಿಲ್ಲ ಮುಂದೆಯೂ ಬರಲಾರದು !!!!!! ಹೆಹ್ಹೆ !!”

              ಉತ್ತರ
              • sriharsha's avatar
                sriharsha
                ಜೂನ್ 7 2011

                ಅದೇನು ಚರ್ಚೆಯೋ ಸುಡಗಾಡೋ…!!!
                ನನ್ನ ಒಂದೇ ಪ್ರಶ್ನೆಗೂ ಉತ್ತರ ಬಂದಿಲ್ಲ. ಜಾರಿಕೆಗಳು ಹಾರಿಕೆಗಳು ಕಾಣುತ್ತಿವೆ.
                ಈಚೆಗೆ ಎದುರಿಗೆ ಹೋರಾಡುವುದಕ್ಕೂ ಛಾತಿಯಿಲ್ಲ. ಸೋಲೊಪ್ಪಿಕೊಳ್ಳಲೂ ಆಗುತ್ತಿಲ್ಲ.
                ವಾಮಮಾರ್ಗ ಬಿಡಿ ನೇರ ಉತ್ತರ ಕೊಡಿ.
                ಲೇಖನದ ಆಶಯದ ಬಗ್ಗೆ ನಾನು ಪ್ರಶ್ನೆ ಎತ್ತಿದ್ದು. ತಾವು ಕಮೆಂಟಿಸಿ ಕೊಟ್ಟ ಅನೂಹ್ಯ ಸಲಹೆಗೆ ಚರ್ಚೆಯನ್ನು ತಿರುಗಿಸುವ ಅವಶ್ಯಕತೆಯಿಲ್ಲ. ಅದರ ಬಗ್ಗೆ ಚರ್ಚೆ ಆಗಬೇಕಿದ್ದರೆ ಬೇರೆ ಲೇಖನ ಬರೆಯಿರಿ.

                ಉತ್ತರ
  6. jagadisha bhat's avatar
    jagadisha bhat
    ಜೂನ್ 4 2011

    Both the systems of Medicines compliment one another. In fact when they combine traditional medicine and use Pharma intelligently, patients are benefited. End result of any system of medicine is to take care of patients. Understand them. Understand the side effects of certain Pharmaceutical ingredients. No point in criticizing any system of Medicine.

    ಉತ್ತರ
    • ಮಹೇಶ ನೀರ್ಕಜೆ's avatar
      ಮಹೇಶ ನೀರ್ಕಜೆ
      ಜೂನ್ 6 2011

      ನಿಮ್ಮ ಪಾಯಿಂಟುಗಳು ಇಷ್ಟವಾಯಿತು. ಧನ್ಯವಾದ.

      ಉತ್ತರ
  7. ಅಕ್ಷಯರಾಮ ಕಾವಿನಮೂಲೆ's avatar
    ಅಕ್ಷಯರಾಮ ಕಾವಿನಮೂಲೆ
    ಜೂನ್ 7 2011

    ಶ್ರೀ ಹರ್ಷ ಅವರೇ, ದಯವಿಟ್ಟು ಹೆಚ್ಚು ಹೆಚ್ಚು ಕಾಮೆಂಟ್ ಹಾಕಿ…. ನಿಮ್ಮ ಕಾಮೆಂಟ್ ನೋಡಿ ನಗಲು ತುಂಬಾ ಖುಷಿಯಾಗುತ್ತದೆ……. ನಿಮ್ಮ “ಕಾಮಿಡಿ” ಶೋ ತುಂಬಾ ಚೆನ್ನಾಗಿದೆ ಕೂಡಾ 🙂 ಎಷ್ಟಾದರೂ ನಿಮ್ಮ ಕುದುರೆಗೆ ಮೂರೇ ಕಾಲಲ್ಲವೇ ??? ಯಾವುದೇ ಲೇಖನವಿರಲಿ ಅಲ್ಲೊಂದು ಕೊಂಕು, ದೂಷಣೆ ತುಂಬಿದ ಕಾಮೆಂಟ್ ಹಾಕದೆ ಇದ್ದರೆ ಹೇಗೆ ಆಲ್ವಾ ????
    “ರನ್ನಿಂಗ್ ರೇಸ್ ಚಾಂಪಿಯನ್ ಶ್ರೀಯುತ ಮಹೇಶರೇ”, “ಮಹಾಸ್ವಾಮಿ ರವಿ ಜಿಬಿ ಯವರೇ!”, ಅಂತ ವೈಯುಕ್ತಿಕವಾಗಿ ಯಾಕೆ ಹೀಗಳೆಯುತ್ತೀರಿ ??? ನಿಲುಮೆಯಲ್ಲಿ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಹಕ್ಕಿಲ್ಲವೇ ????

    ಆಯುರ್ವೇದದ ಬಗೆಗಿನ ನಿಮ್ಮ ತಿರಸ್ಕಾರ, ಮೂದಲಿಕೆಗಳಿಗೆ ಉತ್ತರಿಸುವುದು ಸ್ವಲ್ಪ ಕಷ್ಟವೇ ಸ್ವಾಮೀ…….

    ಆಯುರ್ವೇದದಲ್ಲಿ ಪದವಿ ನೀಡುವ ಕಾಲೇಜುಗಳಿವೆ….. ಅಲ್ಲಿನ ಗ್ರಂಥಾಲಯಕ್ಕೊಮ್ಮೆ ಭೇಟಿ ಕೊಡಿ……. ಚರಕ, ಶುಶ್ರುತರೇ ಮೊದಲಾದವರು ಬರೆದ ಗ್ರಂಥಗಳು ಆಯುರ್ವೇದದ ಬಗ್ಗೆ ಮಾಹಿತಿ ನೀಡುತ್ತವೆ…… ಆಯುರ್ವೇದದಲ್ಲಿ ಎಂ.ಡಿ., ಎಂ.ಎಸ್. ಮಾಡುವವರು ಸಾಕಷ್ಟು ಅಧ್ಯಯನ, ಸಂಶೋಧನೆ ಮಾಡಿಯೇ ಪದವಿ ಪಡೆಯುತ್ತಾರೆ…… ಪ್ರತಿಯೊಂದು ಪ್ರಯೋಗಕ್ಕೂ ಸಾಕಷ್ಟು ಆಧಾರಗಲಿತ್ತವೆ ಅವರಲ್ಲಿ….. ತಮ್ಮ “ವೈಜ್ಞಾನಿಕ” ಪ್ರಶ್ನೆಗಳಿಗೆ ಉತ್ತರ ಕೊಡಲು ಅವರೇ ಸಮರ್ಥರು ಅಂತ ಅನ್ನಿಸುತ್ತದೆ……..

    ಆಯುರ್ವೇದ ಅಂದರೆ ಬರೀ “ನಾರು ಬೇರು ಕಷಾಯ” ಮಾತ್ರ ಅಲ್ಲ ಮಹಾಸ್ವಾಮೀ……. ಅದರಲ್ಲೂ ಸಾಕಷ್ಟು ವಿಜ್ಞಾನ ಇದೆ….. ಉದಾಹರಣೆಗೆ ಹೇಳುತ್ತೇನೆ ಕೇಳಿ…… ನನ್ನ ಗೆಳತಿಯೊಬ್ಬರು ಉಡುಪಿ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ಎಂ.ಎಸ್. ಮಾಡುತ್ತಿದ್ದಾರೆ…. ಅವರ ಸಂಶೋಧನಾ ವಿಷಯ, ‘Appendicitis ಆಪರೇಷನ್ ನಲ್ಲಿ ಬಳಸುವ ನೂಲಿನ (Thread) ಬದಲಾಗಿ Sansevieria ಎಂಬ ಗಿಡದ ನಾರಿನ ಬಳಕೆ’. ಇದಕ್ಕೋಸ್ಕರ ಆ ನಾರಿನ Tensile strength ಕಂಡುಕೊಳ್ಳಲು ಅವರು ಬೆಂಗಳೂರಿನ ಕೇಂದ್ರ ರೇಷ್ಮೆ ಮಂಡಳಿಯಲ್ಲಿ (Central Silk Board) ಸಾಕಷ್ಟು ಅಧ್ಯಯನ ನಡೆಸಿದ್ದಾರೆ…… ಅಳಲೇಕಾಯಿ ಪಂಡಿತರ ಹಾಗೆ ಅರೆಬರೆ ಜ್ಞಾನ ಪ್ರಯೋಗ ಮಾಡಲಿಲ್ಲ….. ಯಾವುದೋ ದಾರ ಬಳಸಿ ಹೊಲಿಗೆ ಹಾಕಲಿಲ್ಲ……. ಅದರ ಸಾಧಕ ಬಾಧಕಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿಯೇ ರೋಗಿಗಳ ಮೇಲೆ ಪ್ರಯೋಗ ಮಾಡಿದ್ದಾರೆ……. ಆಲೋಪತಿಯಲ್ಲೂ ಇರುವುದು ಇದೆ ತಾನೇ ??? “Review of literature ಮತ್ತು Refferences” ಇವೆರಡೂ ಸಂಶೋಧನೆಗೆ ಮೂಲ ಆಧಾರ ಅಲೋಪತಿಯಲ್ಲಿ (ಪಾಶ್ಚಿಮಾತ್ಯ ದೇಶಗಳಲ್ಲಿ). Case studies ಮಾಡಿಯೇ ಹೊಸ ಮದ್ದು, ಶಸ್ತ್ರ ಚಿಕಿತ್ಸೆ ಮಾಡುತ್ತಾರೆ ಅಲೋಪತಿಯಲ್ಲಿ…… ಆಯುರ್ವೇದದಲ್ಲೂ ಅದೇ ಪದ್ಧತಿ ಇದೆ…….. ಹಳೆಯದೆಲ್ಲವೂ ಕೆಟ್ಟದಲ್ಲ, ಹೊಸತೆಲ್ಲವೂ ಒಳ್ಳೆಯದೂ ಅಲ್ಲ ಆಲ್ವಾ ??? 🙂

    ಇವೆಲ್ಲವನ್ನೂ ತಿಳಿಯದೆ ಕೇವಲ “ವಾಕ್ಚಾತುರ್ಯ” ಪ್ರದರ್ಶನಕ್ಕೆ ಹೊರಟರೆ ಅದನ್ನು “ಮೊಂಡು ವಾದ” ಎಂದು ಕರೆಯದೇ ಇನ್ನೇನು ಮಾಡಲು ಸಾಧ್ಯ ???? ದಯವಿಟ್ಟು “ವಿತಂಡ ವಾದ” ಬದಿಗಿರಿಸಿ……

    ಉತ್ತರ
    • sriharsha's avatar
      sriharsha
      ಜೂನ್ 7 2011

      ದಯವಿಟ್ಟು ನಗಿ ಸ್ವಾಮಿ… ನಕ್ಕು ಎಷ್ಟು ದಿನವಾಯಿತೋ ಏನೋ ಪಾಪ!

      ನಾನು ನೇರವಾಗಿ ಪ್ರಶ್ನೆ ಕೇಳಿದೆ ಮೊಂಡುವಾದ ಇತ್ಯಾದಿ ಮಾತುಗಳಿಂದ ಕೆರಳಿಸಿದವರು ತಮ್ಮ ಸ್ನೇಹಿತರು.
      ನಿಮ್ಮ ಮಾತು ಒಪ್ಪತಕ್ಕದ್ದೇ! ಅಷ್ಟೆಲ್ಲ ಸಂಶೋಧನೆ ನಡೆಸಿ ಮಾಡಿದ್ದರೆ ಒಪ್ಪುತ್ತೇನೆ. ಅದು ಬಿಟ್ಟು ಮೊಂಡುವಾದ ಎಂದು ಹೀಗಳೆದು ಪ್ರಶ್ನೆಗಳಿಗೆ ಉತ್ತರ ಕೊಡದಿದ್ದರೆ ಹೇಗೆ?
      ನನ್ನ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದರೆ ಸಾಕಿತ್ತು. ಗೊತ್ತಿಲ್ಲದಿದ್ದರೆ ಗೊತ್ತಿಲ್ಲ ಎಂದು ಹೇಳಬೇಕಿತ್ತು. ಅದು ಬಿಟ್ಟು ಮೊಂಡುವಾದ ಎಂದೆಲ್ಲ ಹೇಳಿ ಉಗಿಸಿಕೊಳ್ಳಬೇಕಿತ್ತೇ? ನನ್ನ ಭಾಷೆ ಇನ್ನೂ ಪ್ರಬಲವಾಗಿದೆ. ಬಳಸಿಲ್ಲ ಅಷ್ಟೇ!
      ನನಗೆ ಬೇಕಾಗಿದ್ದುದು ನೀವು ಹೇಳಿದಿರಲ್ಲ ಆ ರೀತಿಯ ರೆಫರೆನ್ಸ್ ಗಳು ಮಾತ್ರ! ಅದಕ್ಕಿಂತ ಹೆಚ್ಚಿನದಲ್ಲ.
      ಲೇಖಕರು ವಿಶ್ವದಾದ್ಯಂತ ಆಯುರ್ವೇದ ಓದುಲು ಶುರು ಮಾಡಿ೯ದರು ಎನ್ನುತ್ತಿದ್ದಾರೆ. ನನಗೆ ಗೊತ್ತಿರುವಂತೆ ಭಾರತ ಮಲಯಾ ನೇಪಾಳ ಕಾಂಬೋಡಿಯಾ, ಥಾಯಿಲ್ಯಾಂಡ್ ನಂತಹ ಕೆಲ ದೇಶಗಳನ್ನು ಬಿಟ್ಟರೆ ಮತ್ತಿತರ ದೇಶಗಳಲ್ಲಿ ಆಯುರ್ವೇದ ಪ್ರಚಲಿತವಿಲ್ಲ. ನೀವು ಭಾರತದಲ್ಲಿರುವ ಅಧ್ಯಯನ ಪದ್ಧತಿಯಂತೆ ಮಾತ್ರ ಹೇಳಿದ್ದೀರೇ ಹೊರತು ವಿಶ್ವದಾದ್ಯಂತ ಆಯುರ್ವೇದ ಎಲ್ಲೆಲ್ಲಿ ಉನ್ನತ ಅಧ್ಯಯನಕ್ಕೊಳಪಡುತ್ತಿದೆ ಎಂದು ತಿಳಿಸಿಲ್ಲ.
      ಆದರೆ ಆಯುರ್ವೇದಕ್ಕೆ ಪಾಶ್ಚಿಮನಾತ್ಯ ದೇಶಗಳು ಹೆದರಿವೆ ಎಂಬ ಲೇಖನದ ಆಶಯ ಒಪ್ಪತಕ್ಕದ್ದಲ್ಲ. ಲೇಖನದ ಆಶಯವೇ ನಗೆ ತರಿಸುತ್ತವೆ. ಯಾಕೆಂದರೆ ಆ ಆಶಯಕ್ಕೆ ಯಾವುದೇ ದಾಖಲೆಗಳನ್ನು ಕೊಟ್ಟಿಲ್ಲ. ಆ ದಾಖಲೆಗಳನ್ನು ಕೇಳಿದ್ದೇ ಮೊಂಡುವಾದವಾಯಿತು! ಲೇಖನದಲ್ಲಿ ಕೇವಲ ಹಾಸ್ಯಾಸ್ಪದ interpretation ಮತ್ತು assumption ಗಳನ್ನು ಬರೆಯಲಾಗಿದೆಯೇ ಹೊರತು ನಿಖರತೆಯಿಲ್ಲ.
      ಅಲ್ಲದೇ ಇನ್ನೊಂದು ವಿಷಯ ನೋಡಿ… ಆಲೋಪತಿಯು ಕೇವಲ ರೋಗವನ್ನು ಮುಚ್ಚುತ್ತದಂತೆ ಗುಣಪಡಿಸುವುದಿಲ್ಲವಂತೆ! ಇದು ನಗೆ ತರಿಸುವುದಿಲ್ಲವೇ? ಒಮ್ಮೆ ವೈದ್ಯರ ಬಳಿ ಇದರ ಬಗ್ಗೆ ಚರ್ಚೆ ಮಾಡಲಾಗಿದೆಯೇ? ಕೇವಲ ರೋಗವನ್ನು ಮುಚ್ಚಿಡುವುದಕ್ಕಾಗಿ ಕೋಟ್ಯಂತರ ಹಣವನ್ನು ಸುರಿದು ಸಂಶೋಧನೆ ಮಾಡಲಾಗುತ್ತಿದೆಯೇ? ಆಲೋಪತಿಯ ಹರಿವು ಮತ್ತು ಅಗಲಗಳು ಬಹಳ ದೊಡ್ಡದಿವೆ. ಇಂತಹ ಅಪಾಯಕಾರಿ ಹೇಳಿಕೆಗಳನ್ನು ವಿರೋಧಿಸುವುದು ಮೊಂಡುವಾದವೇ?
      ನಾನು ಆಯುರ್ವೇದದ ಬಗ್ಗೆ ಏನೂ ತಿಳಿದಿಲ್ಲ ಹಾಗಾಗಿಯೇ ಆ ಪ್ರಶ್ನೆಗಳನ್ನು ಕೇಳಿದೆ. ಉತ್ತರಿಸದೇ ಮೊಂಡುವಾದ ವಿತಂಡವಾದ ಇತ್ಯಾದಿ ಹೇಳಿದರೆ ಏನು ಮಾಡಲಾದೀತು? ನನ್ನ ಪ್ರಶ್ನೆಗಳು ಹಾಗೆಯೇ ಇವೆ. ತಾವಾದರೂ ದಯವಿಟ್ಟು ಉತ್ತರಿಸಿ.
      ನಾನು ಆಯುರ್ವೇದದ ಬಗ್ಗೆ ಯಾವ ಅಭಿಪ್ರಾಯವನ್ನೂ ವ್ಯಕ್ತ ಪಡಿಸಿಲ್ಲ ಎಂಬುದು ತಾವು ನನ್ನ ಪ್ರತಿಕ್ರಿಯೆಗಳನ್ನು ನೋಡಿದರೆ ಗೊತ್ತಾಗುತ್ತದೆ.

      ಉತ್ತರ
      • amita ravikiran's avatar
        ಜೂನ್ 7 2011

        ವಿರೋಧ ಮಾಡಲೇ ಬೇಕು ಎಂಬುದನ್ನು ಮನಸ್ಸಲ್ಲಿಟ್ಟು ವಾದ.ಮಾಡಬೇಡಿ ಶ್ರೀಹರ್ಷ ಅಂಕಿ ಅಂಶ,ಪ್ಲೇಗು ಕಾಲರ ಎಲ್ಲಾ ಸರಿ ಆಯುರ್ವೇದ ಸಮಷ್ಟಿ ಹಿತವನ್ನೋಳಗೊಂಡ ಶಾಸ್ತ್ರ…ಯಾರು ಒಪ್ಪುತ್ತಾರೋ ಇಲ್ಲವೋ ಎಂಬುದರ ಮೇಲೆ ಅದರ ಮಹತ್ತು ಬದಲಾಗಲ್ಲ…ಆಯುರ್ವೇದ ಎಂಬುದು ಕೇವಲ ಔಷದಿ ಮತ್ತು ಮಾತ್ರೆ ಅಂದುಕೊಳ್ಳಬೇಡಿ….ಭಾರತದ ದಿನನಿತ್ಯದ ಆಹಾರದಿಂದ ಹಿಡಿದು..ಜೀವನ ಶೈಲಿಯಲ್ಲಿ ಇದು ಬೆಸೆದು ಹೋಗಿದೆ…ಯಾಕೆ ನಿಮ್ಮ ಮನೆಯಲ್ಲಿ ನೆಗಡಿ,ಜ್ವರ ಬಂದಾಗ ಮನೇ ಔಷದಿ ಮಾಡಲಿಲ್ಲವೇ..ಅದು ಆಯುರ್ವೇದ ಜನಪದ ವೈದ್ಯದ ಒಂದು ಚಿಕ್ಕ ಟಿಸಿಲು…ಎಂದಾದರೂ ಮನೇ ಉಪಚಾರ ಮಾಡುವವರನ್ನುಹಿತ್ತಲ ಮದ್ದು ಕೊಟ್ಟು ಗುಣಪಡಿಸುವರನ್ನು ಅಂಕಿ ಅಂಶ ಕೇಳಿದ್ದೀರಾ..??
        ನಾನು ಯುರೋಪಿಯನ್ ರಾಷ್ಟ್ರದಲ್ಲೇ ವಾಸಿಸುತ್ತಿದ್ದೇನೆ ಆದ್ದರಿಂದ ಜನರ ಒಲವು ಯಾವ ಕಡೆ ಇದೆ…ಮತ್ತು ಇಲ್ಲಿಯ ಆಸ್ಪತ್ರೆ ಗಳಲ್ಲಿ ವೈದ್ಯರು ನಿಡುವ ಚಿಕಿತ್ಸೆಗಳು ಯಾವ ಪದ್ಧತಿಯನ್ನು ಹೋಲುತ್ತದೆ ಎಂಬುದನ್ನು ಒಮ್ಮೆ ನೀವು ಯಾರನ್ನಾದರೂ ಕೇಳಿ ನೋಡಿ…ಒಂದೇ ಒಂದು ಇಂಜೆಕ್ಷನ್ ಕೊಡಲಾಗುವುದಿಲ್ಲ..ಆದಷ್ಟು ಸಹಜ ವಾಗಿ ಗುಣ ಪಡಿಸುವತ್ತ..ವೈದ್ಯರು ಗಮನ ಹರಿಸುತ್ತಿದ್ದರೆ….ನಮ್ಮ ಶಾಸ್ತ್ರದ ತತ್ವವನ್ನು ಅವರು ಹಿಮ್ಬಲಿಸುತ್ತಿರುವಾಗ..ನಾವ್ಯಾಕೆ ವ್ಯರ್ಥ ಅಂಕಿ ಅಂಶದ ಹಿಂದೆ ಬಿದ್ದು..ವಾಸ್ತವತೆಯನ್ನು ಮರೆಮಾಚಬೇಕು.ಆಯುರ್ವೇದ…ಭಾರತದ ಕೊಡುಗೆ ಆಸ್ತಿ,ಹಿರಿಮೆ…ಹಾಗಂತ ಬೇರೆ ಯಾವ ವೈದ್ಯ ಪದ್ಹತಿಗಳು ಕೀಳು ಅಂತ ನಾ ಹೇಳುತ್ತಿಲ್ಲ..ಅದರದರ ಗೌರವ ಅದಕ್ಕಿದ್ದೇ ಇದೆ.ನೀವು ಒಪ್ಪಿದರು ಅಷ್ಟೇ ಬಿಟ್ಟರು ಅಷ್ಟೇ…ಚರ್ಚೆ..ಜ್ಞಾನ ವರ್ಧಿಸುತ್ತದೆ ವಾದವಲ್ಲ…

        ಉತ್ತರ
        • sriharsha's avatar
          sriharsha
          ಜೂನ್ 7 2011

          ನನ್ನ ವಾದ ಸರಿ.. ಒಪ್ಪಲೆಬೆಕು ಅಂತ ನಾನು ಕೇಳುತ್ತಿಲ್ಲ. ನನ್ನ ಪ್ರಶ್ನೆಗಳಿಗೆ ಉತ್ತರ ಬೇಕು ಅಷ್ಟೇ!
          ನೀವು ಪಾಶ್ಚಾತ್ಯರು ಅನುಸರಿಸುತ್ತಿರುವ ಚಿಕಿತ್ಸೆಯ ಬಗ್ಗೆ ಬಲ್ಲವರು. ದಯವಿಟ್ಟು ಹಂಚಿಕೊಳ್ಳಿ.
          ಇಲ್ಲಿ ಗಿಡಗಳನ್ನು ಉಲ್ಲೇಖಿಸಿ ಔಷಧೀಯ ಗುಣಗಳ ಬಗ್ಗೆ ಹೇಳಿದ್ದರೆ ನಾನು ವಿರೋಧಿಸುತ್ತಿರಲಿಲ್ಲ. ಆಯುರ್ವೇದ ಎಂಬ ಶಾಸ್ತ್ರ ಬಹಳ ವರ್ಷಗಳಿಂದ update ಆಗಿಲ್ಲ. ಇಲ್ಲದ್ದನ್ನು ಹೊಂದಿಸಿ ಜನರನ್ನು ದಾರಿ ತಪ್ಪಿಸುವುದಕ್ಕೆ ನನ್ನ ವಿರೋಧವಿದೆ. ಆಯುರ್ವೇದವಾಗಲಿ ಆಲೋಪತಿಯಾಗಲಿ!

          ಜನಪದ ವೈದ್ಯ ಮನುಷ್ಯನ ವೈದ್ಯಕೀಯ instinct ನಿಂದ ಬೆಳೆದುದು. ನಾಯಿ ಗರಿಕೆ ತಿಂದು ವಾಂತಿ ಮಾಡಿಕೊಳ್ಳುವ ಹಾಗೆ, ಆಕಳು ಅಜೀರ್ಣಕ್ಕೆ ಉಪವಾಸ ಮಾಡುವ ಹಾಗೆ ಪ್ರಕೃತಿ ಕೊಟ್ಟ ಪ್ರರಚೋದನೆಯಿಂದ ಹುಟ್ಟಿದ ಪದ್ಧತಿ ನಮ್ಮ ಜನಪದರದ್ದು. ಇದು ಬಹುಷಃ ಆಲೋಪತಿಗಿಂತ ಅಕ್ಯುರೇಟ್ ಆದುದು.
          ಈ ಲೇಖನದ ಆಶಯ ಆಲೋಪತಿ ಸುಳ್ಲು ಆಯುರ್ವೇದ ಸತ್ಯ ಆಯುರ್ವೇದ ಜಗತ್ತನ್ನು ಆಕ್ರಮಿಸುತ್ತಿದೆ ಎಂಬಂತಿದೆ. ಇದು ಒಪ್ಪಲಾಗುತ್ತಿಲ್ಲ, ಒಪ್ಪಬೇಕೆಂದರೆ ದಾಖಲೆ ಬೇಕೇಬೇಕು.

          ಉತ್ತರ
  8. Basavaraj's avatar
    ಜನ 11 2018

    Hiv geಔಷಧಿ idiya

    ಉತ್ತರ

Leave a reply to anand prasad ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments