ಬಾನಿನಂಗಳದಲ್ಲೊಂದು ಸೌಂದರ್ಯ ಸ್ಪರ್ಧೆ
ನವನೀತ್ ಪೈ
ನಿಸರ್ಗ ದೇವತೆಯ ಎಲ್ಲಾ ಋತುಗಳಿಗೂ ತನ್ನದೇ ಆದ ಸೌಂದರ್ಯವಿದೆ. ಕೆಲವರಿಗೆ ಮುಂಜಾವಿನ ಮಂಜು ಸುಂದರ, ಕೆಲವರಿಗೆ ಮಳೆಗಾಲದ ಧಾರಾಕಾರ ಮಳೆ ಸುಂದರ, ಕೆಲವರಿಗೆ ಮುಸ್ಸೊಜೆಯ ಸೂರ್ಯಾಸ್ತ ಸುಂದರವಾದರೆ ಕೆಲವರಿಗೆ ಪೂರ್ಣಿಮೆಯ ರಾತ್ರಿ ಸೊಬಗು.
ಅಂದು ನಿದ್ದೆ ಬಾರದ ಕಾರಣ ಯಾವುದೋ ಒಂದು ಕಾದಂಬರಿಯ ಪುಟ ತಿರಿಗಿಸುತ್ತಾ ಕುಳಿತಿದ್ದೆ. ನಡುವೆ ತುಸು ವಿರಾಮ ಬೇಕೆನಿಸಿ ಅಂಗಳಕ್ಕೆ ಕಾಲಿಟ್ಟಾಗಷ್ಟೇ ತಿಳಿಯಿತು ಅಂದು ಹುಣ್ಣಿಮೆಯೆಂದು. ಬಾನಿನಂಗಳದಲ್ಲಿ ಚಂದಿರ ತನ್ನ ಸಮಸ್ತ ಕಾಂತಿಯಿಂದ ಕಂಗೊಳಿಸುತ್ತಾ ಚಿನ್ನದ ಬಟ್ಟಲಿನಂತೆ ಕಾಣಿಸುತ್ತಿದ್ದ. ನೆರೆಯ ಹೊಲಗಳಲ್ಲಿ ಹಾಲು ಚೆಲ್ಲಿದಂತೆ ಬೆಳದಿಂಗಳು ಹಬ್ಬಿತ್ತು. ತಂಗಾಳಿ ಗಿಡ ಮರಗಳನ್ನು ಅಪ್ಪಿ ಮಾಡುವ ನಿನಾದ ಇಂಪಾಗಿತ್ತು. ಚಂದಿರನನ್ನು ನೋಡುತ್ತಾ ಕುಳಿತುಕೊಳ್ಳಬೇಕೆನಿಸಿತು. ಚಂದಿರನೇತಕೆ ಓಡುವನಮ್ಮ ಮೋಡಕೆ ಬೆದರಿಹನೆ ಹಾಡು ಬಾಲ್ಯವನ್ನು ನೆನಪಿಸಿತು. ಚಂದಿರನಿಗೆ ಆಕರ್ಷಿತವಾಗಿ ಹಾರುತ್ತಿದ್ದ ಬೆಳ್ಳಕ್ಕಿ ಚಂದಿರನಲ್ಲೇ ಮನೆ ಮಾಡಿತು. ಈ ನಯನ ಮನೋಹರ ದೃಶ್ಯಕ್ಕೆ ಕಣ್ಣುಗಳೇ ಕ್ಯಾಮರಗಳಾದವು.
ಗಗನದಲ್ಲಿ ಚಂದಿರ ಮತ್ತು ತಾರೆಗಳ ನಡುವೆ ಸೌಂದರ್ಯ ಸ್ಪರ್ಧೆ ಏರ್ಪಟ್ಟಿತು. ಆಗಸವೇ ವೇದಿಕೆಯಾಯಿತು, ಮೋಡಗಳೇ ಪರದೆಗಳಾದವು, ಪರ್ವತ ಶ್ರೇಣಿಗಳೇ ನಿರ್ಣಾಯಕರಾದವು, ಸಮುದ್ರ ಸಾಗರಗಳೇ ಪ್ರೇಕ್ಷಕರಾದವು. ಮೋಡದ ಪರದೆ ಸರಿದಾಗ ಸ್ಪರ್ಧೆ ಆರಂಭವಾಯಿತು. ಚಂದಿರನ ಸೊಬಗನ್ನು ನೋಡಿ ಸಾಗರಗಳು ಚಂದಿರನನ್ನು ಅಪ್ಪಲು ಉಕ್ಕಿದವು. ಚಂದಿರ ಮಾರ್ಜಾಲದಂತೆ ಪೂರ್ವದಿಂದ ಪಶ್ಚಿಮಕ್ಕೆ ಅಡಿಯಿರಿಸುತ್ತಿದ್ದ. ನಿರ್ಣಾಯಕರು ಚಂದಿರನ ಮಾರ್ಜಾಲ ನಡಿಗೆಯಿಂದ ಆಕರ್ಷಿತರಾಗಿ ಪ್ರಾಥಮಿಕ ಸುತ್ತುಗಳಲ್ಲಿ ಚಂದಿರನಿಗೆ ಹೆಚ್ಚಿನ ಅಂಕಗಳನ್ನು ನೀಡಿದರು. ಅಹಂಕಾರದಿಂದ ಬೀಗಿದ ಚಂದ್ರ ತಾರೆಗಳನ್ನು ಹೀಯಾಳಿಸಿದ. ಬಾನಿಗೆಲ್ಲಾ ತಾನೇ ರಾಜ ಎಂದು ಮೆರೆದ.
ಸಂಘೇ ಶಕ್ತಿ ಕಲೌ ಯುಗೇ ಎಂದು ಅರಿತು ತಾರೆಗಳೆಲ್ಲಾ ಒಂದಾದರು. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಮನಗೊಂಡರು. ಸೋಲೇ ಗೆಲುವಿನ ಸೋಪಾನ ಎಂಬುದನ್ನು ಅರಿತು ಕಷ್ಟಪಟ್ಟು ಮುಂದಿನ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಚಂದಿರನು ಎಲ್ಲರನ್ನು ಹೀಯಾಳಿಸಿದ್ದರಿಂದ ಏಕಾಂಗಿಯಾದ. ಕೃಷ್ಣ ಪಕ್ಷ ಆರಂಭವಾಯಿತು. ದಿನೇ ದಿನೇ ಚಂದಿರ ಕುಗ್ಗುತ್ತಾ ಹೋದ ಮಾತ್ರವಲ್ಲದೆ ಸ್ಪರ್ಧೆಗಳಲ್ಲಿ ಆಸಕ್ತಿ ಕಳೆದುಕೊಂಡು ತಡವಾಗಿ ಆಗಮಿಸುತ್ತಿದ್ದ. ತಾರೆಗಳು ಏಕತಾನತೆಯಿಂದ ಒಂದೇ ರೀತಿಯಾಗಿ ಮಿಂಚುತ್ತಿದ್ದವು. ಚಂದಿರನ ಬೆಳದಿಂಗಳು ಕ್ಷೀಣಿಸುತ್ತಿರುವಾಗ ತಾರೆಗಳ ಬೆಳಕೆ ಬಾನನ್ನು ತುಂಬಿತು. ಚಂದಿರನಿಲ್ಲದ ಬಾನನ್ನು ಊಹಿಸಬಹುದಾದರೂ ತಾರೆಗಳಿಲ್ಲದ ಬಾನನ್ನು ಊಹಿಸಲೂ ಸಾಧ್ಯವಿಲ್ಲ. ಅಂತು ಸ್ಪರ್ಧೆಯ ನಿರ್ಣಾಯಕ ಘಟ್ಟ ಬಂದೇ ಬಿಟ್ಟಿತು. ಆ ದಿನ ಸೋಲು ತನಗೆ ಕಟ್ಟಿಟ್ಟ ಬುತ್ತಿ ಎಂದು ತಿಳಿದ ಚಂದಿರ ಸ್ಪರ್ಧೆಗೆ ಆಗಮಿಸಲೇ ಇಲ್ಲ. ಅಂದು ಅಮಾವಾಸ್ಯೆ ಆಗಿತ್ತು ತಾರೆಗಳ ಬೆಳಕೇ ಬಾನನ್ನು ತುಂಬಿತ್ತು. ಸೌಂದರ್ಯ ಸ್ಪರ್ಧೆಯನ್ನು ತಾರೆಗಳೇ ಗೆದ್ದರು. ಚಂದಿರನನ್ನು ತಮ್ಮೊಂದಿಗೆ ಸೇರಿಸಿಕೊಂಡರು. ಚಂದಿರನು ಶುಕ್ಲ ಪಕ್ಷದಲ್ಲಿ ಹಿಗ್ಗುತ್ತಾ ಸಾಗಿದ.
“ಕಾಲಾಯ ತಸ್ಮೈ ನಮಃ” ಕಾಲ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಕಾಲಚಕ್ರ ಯಾವಾಗಲೂ ತಿರುಗುತ್ತಾ ಇರುತ್ತದೆ. ಇಂದು ಕೆಳಗೆ ಇದ್ದವನು ನಾಳೆ ಮೇಲೆ ಬಂದೇ ಬರುತ್ತಾನೆ. ಇಲ್ಲಿ ಎಲ್ಲವೂ ತಾತ್ಕಾಲಿಕ ಯಾವುದೂ ಶಾಶ್ವತವಲ್ಲ. ಚಂದಿರನಂತೆ ಒಮ್ಮೆ ಪ್ರಕಾಶಮಾನವಾಗಿ ಮಿಂಚಿ ಮರೆಯಾಗುವುದಕ್ಕಿಂತ ತಾರೆಗಳಂತೆ ಸರ್ವದಾ ಮಿಂಚುವುದು ಚೆನ್ನ ಅಲ್ಲವೇ? ನಮ್ಮತನವನ್ನು ಬಿಡದೆ ಕಷ್ಟ-ಸುಖವನ್ನು ಏಕರೀತಿಯಲ್ಲಿ ಸ್ವೀಕರಿಸಬೇಕು. ಈಗ ಕತ್ತಲೆಯಾದರೆ ನಂತರ ಬೆಳಕು ಬಂದೇ ಬರುತ್ತದೆ.
*******************
ಚಿತ್ರಕೃಪೆ: layoutsparks.com





ನಿಲುಮೆಗೆ ಸ್ವಾಗತ….ಚಂದದ ಬರಹ…ಬರವಣಿಗೆ ಮುಂದುವರಿಯಲಿ…ಗುಡ್ಲಕ್ .
dhanyavadagalu
ನಿನ್ನ ಬರಹ ನಿನ್ನ ಹೆಸರಿನಷ್ಟೇ ನವೀನ.
ನವನೀತದಂತೆಯೇ ಸ್ವಚ್ಛಂದ ಸೃಜನಶೀಲತೆ.
ಇಂಥದೇ ಹೆಚ್ಚು ತಾರೆಗಳ ನಿರೀಕ್ಷೆ…..