ಕಳ್ಳ…! ನಮ್ಮ ಅನ್ನ ಕದ್ದ ಕಳ್ಳ..!
-ರವಿ ಮುರ್ನಾಡು
ಹೊಡೆಯಬೇಡಿ ನನ್ನನ್ನು… ಹೊಡೆಯಬೇಡಿ…. ಇನ್ನು ಮುಂದೆ ಕದಿಯುವುದಿಲ್ಲ…! ಹಾಗಂತ, ತೊದಲು ನುಡಿಯಲ್ಲಿ ಪ್ರಾರ್ಥಿಸಿದ್ದೆ. ಹೊಡೆತ ನಿಂತಿತ್ತು. “ಕಳ್ಳ” ಅನ್ನುವ ಹಣೆಪಟ್ಟಿ ತೆಗೆಯಲಾಗಲಿಲ್ಲ. ಅವರೆಲ್ಲಾ ಕೆಕ್ಕರುಗಣ್ಣಿನಲ್ಲಿ ದುರುಗುಟ್ಟಿ ನೋಡುತ್ತಿದ್ದರು. ಇನ್ನು ಅನ್ನ ಕದ್ದರೆ, ಕಣ್ಣಿಗೆ ಮೆಣಸು ಹಾಕಿ ಹೊಡೆದೇವು ಜೋಕೆ ಅಂದರು. ಆಯಿತು, ನಾನು ಕದಿಯಲಿಲ್ಲ. ಅನ್ನದ ಆಸೆಗೆ ಮೂಗು ಸುವಾಸನೆಯನ್ನು ಅರಸುತ್ತಿತ್ತು. ಹೊಟ್ಟೆ ಅರ್ಧವಾದರೂ ಏಟಿಗೆ ಹೆದರಿ ಹಸಿಯದೆ ಸುಮ್ಮನಾಯಿತು.
ಅನ್ನ ಕದ್ದ ಕತೆಗಳು ಸಿನೇಮಾದಲ್ಲಿ ಬಣ್ಣಗಳಾದವು. ಜಗತ್ತಿನ ಅತ್ತ್ಯುನ್ನತ ಪ್ರಶಸ್ತಿಗಳ ಕಿರೀಟ ಹೊತ್ತ ಹಲವು ಸಾಹಿತ್ಯ ಪ್ರಾಕಾರಗಳು ಇದರ ಹಿಂದೆ ಇತಿಹಾಸದ ಪುಟ ಸೇರಿದವು. ಇಂದಿಗೂ ಕಣ್ಣಿಗೆ ಕಾಣದ ಅನ್ನ ಕದಿಯುವ ಸರದಿಗಳು ಈ ಸಮಾಜದಲ್ಲಿ ಹೀಗೆ ಸಾಲು ಸಾಲಾಗಿ ಜೀವಂತವಾಗಿವೆ. ಇಂತಹ ಸಿನೇಮಾ ನೋಡುವಾಗ ಮತ್ತು ಸಾಹಿತ್ಯಗಳನ್ನು ಓದುವಾಗ ಅದರೊಳಗೆ ಆಕಸ್ಮಿಕವಾಗಿ ನಾನೇ ಪಾತ್ರಧಾರಿಯಾಗುತ್ತೇನೆ. ಅಲ್ಲೆಲ್ಲಾ ಮಾತನಾಡುತ್ತೇನೆ. ನನ್ನ ಹಾಗೇ ನನ್ನದೇ ನೆರಳಿನ ನರ್ತನ…!. ನನ್ನದೇ ಜಗತ್ತಿನ ಒಂದು ಪ್ರಶ್ನೆ . ನಾನೊಬ್ಬ ಅನ್ನ ಕದ್ದ ಕಳ್ಳನೇ?. ಹಿಗ್ಗಾ ಮುಗ್ಗಾ ಹೊಡೆದರು. ಬೆಳಿಗ್ಗಿನಿಂದ ಸಂಜೆಯವರೆಗೆ ದುಡಿದ ಅವರ ಅನ್ನವನ್ನು ನಾನು ಕದ್ಡೆ ಅನ್ನುವ ಕಾರಣಕ್ಕಾಗಿ ಕಂಡ ಕಂಡಾಗಲೆಲ್ಲ ಕಳ್ಳ ಎಂದು ಮೂದಲಿಸಿದರು. ಅವರ ಮಕ್ಕಳೆಲ್ಲಾ ಹಿಯ್ಯಾಳಿಸಿದರು. ಕಣ್ಣುಗಳು ತೇವಗೊಳ್ಳುತ್ತವೆ…. ಏಕೆ ಅನ್ನ ಕದ್ದೆ ಅಂತ ಅವರು ಕೇಳಲಿಲ್ಲ. ಸುರುಳಿ ಬಿಚ್ಚುತ್ತಿದೆ ಮನಸ್ಸು …!
ಅದು ಕಾರ್ಮಿಕರ ಲೈನ್ ಮನೆ. ಓಗರೆಯ ಐದು ಮನೆಗಳಿದ್ದವು. ಕೊಡಗಿನ ಸೋಮವಾರಪೇಟೆಯಲ್ಲಿ ಹೆಚ್ಚು ಇಂತಹ ಕಾರ್ಮಿಕರ ಮನೆಗಳು ಕಂಡು ಬರುತ್ತವೆ. ದೊಡ್ಡ ದೊಡ್ಡ ಕಾಫಿ ತೋಟಗಳು ಅದು. ಕಾಫೀ ಕೊಯ್ಲಿನ ಸಮಯದಲ್ಲಿ ಹೊರ ಜಿಲ್ಲೆಗಳಾದ ಮೈಸೂರು,ಹಾಸನ ಸೇರಿದಂತೆ, ಕೇರಳ,ತಮಿಳುನಾಡಿನಿಂದಲೂ ಕಾರ್ಮಿಕರು ಠಿಕಾಣಿ ಹೂಡುತ್ತಾರೆ. ಸುಂಟಿಕೊಪ್ಪ ಪಟ್ಟಣದಿಂದ ಎಂಟು ಕಿ. ಮೀ. ದೂರ ” ಕಾರೆಕೊಲ್ಲಿ” ಕಾಫಿ ಎಸ್ಟೇಟಿಗೆ. ಅಲ್ಲಿಂದ “ಕಂಟ್ರೋಲ್” ಎಸ್ಟೇಟಿಗೆ ಮೂರು ಕಿ.ಮೀ. ದೂರ . ಸುಂಟಿಕೊಪ್ಪದಿಂದ ಮಡಿಕೇರಿ ದಾರಿ ಮಧ್ಯೆಯೂ ಬಸ್ಸಿನಲ್ಲಿ ಇಳಿದು ಇಲ್ಲಿಗೆ ಹೋಗಬಹುದು. ಅದು ನಮಗೆ ಗೊತ್ತಿಲ್ಲ. ನಾವೆಲ್ಲರೂ ನಡೆದು ಹೋಗಿಯೇ ಈ ಎಸ್ಟೇಟಿಗೆ ತಲಪುತ್ತಿದ್ದದ್ದು. ಅದು ಕಾರೆಕೊಲ್ಲಿ ಎಸ್ಟೇಟ್ ಮೂಲಕ. ಇಲ್ಲಿಯೇ ನನ್ನ ಅಜ್ಜಿ ಮನೆ.
ವಾರದ ಸಂತೆ ಸುಂಟಿಕೊಪ್ಪದಲ್ಲಿ ಭಾನುವಾರ. ನಾನೂ ಸಂತೆಗೆ ಹೋಗುತ್ತಿದ್ದೆ ಅಮ್ಮನೊಂದಿಗೆ. ಎಲ್ಲಾ ಮುಗಿಸಿ ಬರುವಾಗ ನನ್ನ ಕೈಯಲ್ಲೊಂದು ಬ್ಯಾಗು. ಅಮ್ಮನ ತಲೆಯಲ್ಲೊಂದು ವಾರಕ್ಕೆ ಬೇಕಾದ ದಿನಸಿಗಳ ದೊಡ್ಡ ಗಂಟು. ಬೆಳಗ್ಗಿನ ಉಪಹಾರಕ್ಕೆ ಬೇರೆ ಆಹಾರ ತಿಂದ ರುಚಿಯ ನೆನಪಿಲ್ಲ. ಮೂರು ಹೊತ್ತು ಗಂಜಿಯೇ ತಿನ್ನುವುದು. ಹಾಗಾಗಿ ಅಕ್ಕಿಯೇ ಹೆಚ್ಚಿತ್ತು ಅಮ್ಮನ ಗಂಟಿನ ಭಾರದಲ್ಲಿ. ಹಾಗೇ ಅಜ್ಜಿಯ ಕಾರೆಕೊಲ್ಲಿ ಎಸ್ಟೇಟಿಗೆ ಬಂದು, ಕಾಫಿಯೋ, ಗಂಜಿ ಅನ್ನವೋ ತಿಂದು ಕಂಟ್ರೋಲ್ ಎಸ್ಟೇಟಿಗೆ ಬರುವುದು ವಾಡಿಕೆ.
ನಾಲ್ಕೂವರೆ- ಐದು ವರ್ಷದ ಬಾಲಕ ನಾನು. ಮೂಗಲ್ಲಿ ಗೊಣ್ಣೆ ಸುರಿಯುತ್ತಿತ್ತು. ಆಗ ಮೂರು ಜನ ಮಕ್ಕಳಲ್ಲಿ ನಾನೇ ದೊಡ್ಡವನು. ಅಪ್ಪ-ಅಮ್ಮ ತೋಟಕ್ಕೆ ಹೋದ ಮೇಲೆ ಮೂರನೆಯ ಮಗುವನ್ನು ಎತ್ತಿ ಆಡಿಸುವುದು ನನ್ನ ಕೆಲಸ. ಮಗು ನೋಡಿಕೊಳ್ಳುವವನು. ಅಳುವಾಗ ಬಾಟಲ್ ಹಾಲು ಕೊಡುವುದು. ಹಾಲು ಎಂದರೆ ” ಅಮೂಲ್ ಸ್ಪ್ರೇ…! ಒಂದು ಗ್ಲಾಸು ಹಾಲಿಗೆ ಒಂದು ಲೀಟರ್ ನೀರು ಹಾಕಿ ಕಲ್ಲು ಸಕ್ಕರೆ ಮಿಶ್ರಣ ಮಾಡಿದ್ದು. ನಿದ್ದೆ ಬಂದಾಗ ನಿದ್ದೆ ಮಾಡಿಸುವುದು. ಎಚ್ಚರವಿದ್ದಾಗ ಅದನ್ನು ಒಂದು ಮೂಲೆಗೆ ಕುಳ್ಳಿರಿಸಿ ಓಗರೆಯ ಮಕ್ಕಳೊಂದಿಗೆ ತಿಪ್ಪರಲಾಗ ಆಟವಾಡುವುದು. ಕೆಲವೊಮ್ಮೆ ಮಗು “ಎತ್ತಿಕೋ” ಎಂದು ಅಳುವಾಗ ಹೊಡೆದು ಸುಮ್ಮನಾಗಿಸಿ ಆಟವಾಡುವುದು. ನಾನೊಬ್ಬ ಮಗು ನೋಡಿಕೊಳ್ಳುವವನು.
ಸಂಜೆ ಅಮ್ಮ ತೋಟದ ಕೆಲಸ ಬಿಟ್ಟು ಬಂದರು. ನೋಡಿದ್ದೇ ತಡ ಮಗು ಅಳಲು ಪ್ರಾರಂಭಿಸಿತು.
“ಏನೋ ಮಗುವಿಗೆ ಹಾಲು ಕೊಟ್ಟೆಯೇನೋ?”
” ಕೊಟ್ಟೆ ಅಮ್ಮ”
“ಮತ್ಯಾಕೆ ಅಳುತ್ತಿದೆ?”
” ಗೊತ್ತಿಲ್ಲ ಅಮ್ಮ”
ಮೊಲೆ ಹಾಲಿಗೆ ತಡಕಾಡುತ್ತಿದೆ ಮಗು. ಎತ್ತಿ ಮಡಿಲ್ಲಲ್ಲಿರಿಸಿ ಹಾಲು ಕುಡಿಸುತ್ತಿದ್ದಳು. ಮುಂಗುರುಳಿಗೆ ಬೆರಳು ಹಾಕಿ, ತಲೆ-ಮುಖ- ಶರೀರವನ್ನು ಒಮ್ಮೆ ತಡವಿದಳು. ಮಗು ಶಾಂತವಾಯಿತು.
“ಇದೇನೋ ಮಗುವಿನ ಕೆನ್ನೆ ಮೇಲೆ ಕೆಂಪು ಗೆರೆಗಳಿವೆ?”
“ಗೊತ್ತಿಲ್ಲ ಅಮ್ಮ, ಬೆರಳು ಪರಚಿರಬಹುದು..”
“ಇಷ್ಟೊಂದು ದಪ್ಪದ ಗೆರೆಯೇ?”
ಕೈ ಕಾಲುಗಳು ನಡುಗುತ್ತಿತ್ತು. ಹೌದು..! ನಾನು ಆಟವಾಡುತ್ತಿದ್ದೆ. ಮಧ್ಯೆ ಮಗು ಅಳುತ್ತಿತ್ತು…ಅದಕ್ಕೆ ಹೊಡೆದೆ ಅಂತ ಕೂಗಿ ಹೇಳಬೇಕೆನಿಸಿತು. ಅದು ಆಟವಾಡುವುದೇ … ನಾನು ಆಟವಾಡುವುದೇ…ಮಗುವೊಂದು ಮಗು ನೋಡುವ ಕೆಲಸದಲ್ಲಿ ಅಂತಹದ್ದು ನಡೆದು ಹೋಯಿತು ಅಮ್ಮ… ನನ್ನನ್ನ ಕ್ಷಮಿಸಿ ಬಿಡು..!
ಆ ಲೈನ್ ಮನೆಯಲ್ಲಿ ಇನ್ನೊಂದು ಬಡ ಕುಟುಂಬವಿತ್ತು. ನನ್ನ ಅಮ್ಮ-ಅಪ್ಪನ ಜೊತೆಗೆ ಕೂಲಿ ಕೆಲಸಕ್ಕೆ ಹೋಗುವುದು. ನಾಲ್ಕು ಮಕ್ಕಳಲ್ಲಿ ದೊಡ್ಡದು ಹೆಣ್ಣು ಮಗು, ಐದು ವರ್ಷದ್ದು. ಅದರ ಹಿಂದೆ ಮೂರು ಮಕ್ಕಳು. ಅದಕ್ಕೆ ಈ ಮೂರು ಮಕ್ಕಳನ್ನು ನೋಡುವುದೇ ಕೆಲಸ. ಮಕ್ಕಳಿಗೆ ಏನಾದರೂ ತೊಂದರೆಯಾದರೆ ಹೊಡೆತ ಬೀಳುವುದು ಇದಕ್ಕೆ. ದಿನವೂ ಅಕ್ಕಪಕ್ಕದ ಮಕ್ಕಳು ಶಾಲೆಗೆ ಹೋಗುವುದನ್ನು ನೋಡಿ ಈ ಹೆಣ್ಣು ಮಗುವಿಗೂ ಆಸೆಯಾಗಿತ್ತು. ಒಂದು ದಿನ ಸಂಜೆ ಮನೆಗೆ ಬಂದ ತಾಯಿಗೆ ಅದು ಹೀಗೆ ಕೇಳಿತ್ತು. “ಅಮ್ಮ ಅವರೆಲ್ಲಾ ಶಾಲೆಗೆ ಹೋಗುತ್ತಾರೆ, ಅವರ ಹೆಸರನ್ನು ಬರೀತಾರೆ, ನನ್ನದೂ ಬರೀತ್ತಾರೆ. ನಾನು ಶಾಲೆಗೆ ಹೋಗುತ್ತೇನೆ” ಅಂತ. ಅದಕ್ಕೆ ತಾಯಿಯ ಉತ್ತರ ಹೀಗಿತ್ತು. “ನೀನು ಶಾಲೆಗೆ ಹೋದರೆ ಮಕ್ಕಳನ್ನು ನೋಡಿಕೊಳ್ಳುವವರು ಯಾರು?” ಅಂತ. ಹೆಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ ಅನ್ನುವ ಸ್ಲೋಗನ್ ಈ ಬಡ ಕುಟುಂಬದ ಮನೆ ಬಾಗಿಲಿಗೆ ಬರಲೇ ಇಲ್ಲ. ನಾನು ಗಂಡು ಮಗುವಾಗಿ ಹುಟ್ಟಿದ್ದೆ. ಅಡ್ಡಾದಿಡ್ಡಿಯ ಜಗತ್ತಿನಿಂದ ಸರಿ-ತಪ್ಪುಗಳನ್ನು ಅರಿತೆ. ಆ ಹೆಣ್ಣು ಮಗುವಿನ ಕನಸು….!?
ಅಪ್ಪ-ಅಮ್ಮ ಸೇರಿ ನಾವು ಐದು ಜನ ಸಂತೆಯ ಅಕ್ಕಿಯಲ್ಲಿ ವಾರವನ್ನು ಅಳತೆ ಮಾಡುವುದು. ಹೊಟ್ಟೆ ತುಂಬಾ ಊಟ ಅಂತ ಅಲ್ಲಲ್ಲಿ ಬಾಯ್ಬಿಟ್ಟ ನಮ್ಮ ಅಲುಮಿನೀಯಂ ತಟ್ಟೆಯಲಿ ಬರೆಯಲಿಲ್ಲ. ಎರಡು ಲೋಟ ಅಕ್ಕಿಯಲ್ಲಿ ಎಲ್ಲರಿಗೂ ದೊಡ್ಡ ಚಮಚದಲ್ಲಿ ಎರಡು ಭಾರಿ ಅಮ್ಮ ಅನ್ನ ಮತ್ತು ಗಂಜಿ ನೀರು ಹಾಕುತ್ತಿದ್ದಳು. ಅನ್ನ ಬೇಯಿಸುವಾಗ ಇದಕ್ಕೆಂದೇ ಹೆಚ್ಚು ನೀರು ಹಾಕುತ್ತಿದ್ದರು ಅಮ್ಮ. ಅನ್ನ ಕಡಿಮೆಯಾದರೂ, ಗಂಜಿ ನೀರು ಕುಡಿಯುವ ಭರವಸೆಯಿಂದ. ರಾತ್ರಿ ಮಲಗಿದಾಗ ಹೊಟ್ಟೆ ತುಂಬಿದಂತೆ ಅನ್ನಿಸುತ್ತಿರಲಿಲ್ಲ. ಅನ್ನ ಕದಿಯುವ ಆಲೋಚನೆ ಇಲ್ಲಿಯೇ.. ಆ ರಾತ್ರಿಗಳಲ್ಲಿ ಮೊಳಕೆಯೊಡೆಯಿತು.
ಕಾರ್ಮಿಕ ಕುಟುಂಬಗಳು ಬೆಳಿಗ್ಗೆ ಏಳು ಗಂಟೆಗೆ ಕೆಲಸಕ್ಕೆ ಹೊರಟ ಮೇಲೆ ಎಲ್ಲವೂ ಖಾಲಿ ಖಾಲಿ . ಶಾಲೆಗೆ ಹೋಗುವವರು ಹೋಗುತ್ತಿದ್ದರು . ಉಳಿದ ಮಕ್ಕಳೊಂದಿಗೆ ನಾವು ಮತ್ತು ನಮ್ಮ ಮಗು ಮಾತ್ರ. ಆ ಮಕ್ಕಳೊಂದಿಗೆ ಆಟವಾಡುತ್ತಿದ್ದಂತೇ ಹತ್ತು ಗಂಟೆಗೆಲ್ಲಾ ಬೆಳಗ್ಗೆ ತಿಂದ ಗಂಜಿ ಅನ್ನ ಕರಗಿ ಹಸಿವಾಗ ತೊಡಗುತ್ತಿತ್ತು. ಮುಂದಿನ ಗಂಜಿ ಅನ್ನ ಸಿಕ್ಕುವುದು ಅಮ್ಮ ಮಧ್ಯಾಹ್ನ ಬಂದಾಗಲೇ. ಅಲ್ಲಿಯವರೆಗೆ ಹೇಗೆ ಕಾಯುವುದು ?. ಆ ಲೈನ್ ಮನೆಯಲ್ಲಿ ಮಕ್ಕಳನ್ನು ಹೊರಗೆ ಬಿಟ್ಟು ಎಲ್ಲರೂ ಮನೆಗೆ ಬೀಗ ಹಾಕಿ ಹೋಗುತ್ತಿದ್ದರು. ಮೊದಲು ಲೈನಿನ ಕೊನೆಯ ಒಂದು ಮನೆಯನ್ನು ಆಯ್ಕೆ ಮಾಡಿಕೊಂಡೆ. ಮನೆಯ ಮೇಲೆ ಹತ್ತಿ ಹೆಂಚುಗಳನ್ನು ತೆಗೆದು ಅವರ ಅಡುಗೆ ಕೋಣೆಗೆ ನೇರವಾಗಿ ಇಳಿಯುವುದು. ಹಾಗೇ ಕೈ ಹಾಕಿ ಅನ್ನ ತಿನ್ನುತ್ತಿದ್ದೆ. ಸ್ವಲ್ಪ ಸ್ವಲ್ಪವೇ ತೆಗೆಯುತ್ತಿದ್ದದ್ದು. ಗೊತ್ತಾಗಬಾರದೆಂದು. ಹಾಗೇ ಪಾತ್ರೆಗಳ ಮುಚ್ಚಳ ಮುಚ್ಚಿ ವಾಪಾಸು ಬಂದ ಹಾಗೆ ಬರ ತೊಡಗಿದೆ. ಹೆಚ್ಚಿಗೆ ಗಮನಕ್ಕೆ ಬರಲಿಲ್ಲ. ಯಾರಿಗೂ ಸಂಶಯವೂ ಬರುತ್ತಿರಲಿಲ್ಲ.
ಒಂದೊಂದು ದಿನ ಒಂದೊಂದು ಮನೆಯನ್ನು ಆಯ್ಕೆ ಮಾಡಿದೆ. ಹಸಿವಿನ ಬಾಧೆಯೂ ಕಡಿಮೆಯಾಗುತ್ತಿತ್ತು. ಹೆಚ್ಚಿನ ಉಮ್ಮಸ್ಸಿನಿಂದ ಆಟವಾಡುತ್ತಿದ್ದೆ. ತೋಟ, ಗದ್ದೆ ಬಯಲೆಲ್ಲಾ ಓಡಾಡ ತೊಡಗಿತು ನನ್ನ ಮನಸ್ಸು…… ಹಕ್ಕಿಯ ಹಾಗೆ ಹಾರಾಟ… ಕುಣಿದು ಕುಪ್ಪಳಿಸುತ್ತಿದ್ದೆ. ಗೊತ್ತಿರಲಿಲ್ಲ ವ್ಯವಸ್ಥೆ ಬದಲಾಗುತ್ತದೆ ಅಂತ. ನಗು- ಉಮ್ಮಸ್ಸಿಗೆ ಕಡಿವಾಣ ಬೀಳುತ್ತದೆ…ನನ್ನೊಳಗಿನ ಹಕ್ಕಿಯ ರೆಕ್ಕೆ ಮುರಿದು ಬೀಳುತ್ತದೆ ಅಂತ.
ದಿನವೂ ಅನ್ನ ಕದಿಯುತ್ತಿದ್ದೆ. ಆ ದಿನ ಸ್ವಲ್ಪ ಹೆಚ್ಚಿಗೆ ಕದ್ದುಬಿಟ್ಟೆ. ನನ್ನ ತಮ್ಮನಿಗೂ ತಂದು ಕೊಟ್ಟೆ. ಅವನು ಸಣ್ಣವನು ಎಲ್ಲಿಂದ ಅಂತ ಕೇಳಿದ. ಲೈನಿನ ಹಿಂಬದಿಯಲ್ಲಿ ಯಾರಿಗೂ ಗೊತ್ತಿಲ್ಲದಂತೆ ಇಬ್ಬರೂ ತಿಂದೆವು. ಯಾರಿಗೂ ಅನ್ನ ತಿಂದ ವಿಷಯ ಹೇಳಬಾರದೆಂದೆ.
ಮಧ್ಯಾಹ್ನ ಅಮ್ಮ ಊಟಕ್ಕೆ ಬಂದವಳು ತಟ್ಟೆ ತೊಳೆದು ಗಂಜಿ ಅನ್ನ ಬಡಿಸುತ್ತಿದ್ದಂತೆ ಮನೆಯ ಹೊರಗಿನಿಂದ ಹೆಂಗಸು ಬೈಯ್ಯುವ ಸ್ವರ ಕೇಳಿಸಿತು.
” ನಮ್ಮ ಅನ್ನ ಕದೀತ್ತಿದ್ದಾರೆ ಇಲ್ಲಿ”
ಮತ್ತೊಮ್ಮೆ ಸ್ವರ ಹೆಚ್ಚಾಯಿತು.
” ಏನು ಬುದ್ಧಿ ಕಲಿಸ್ತಾರೆ ಮಕ್ಕಳಿಗೆ… ಹಾಳಾಗಿ ಹೋದವು”
ಅಮ್ಮ ಹೊರಗೆ ಬಂದರು. ನಾನು ಬೆವತು ಹೋಗಿದ್ದೆ. ಕುಳಿತಲ್ಲೇ ದುಃಖ್ಖ ಒತ್ತರಿಸ ತೊಡಗಿತು. ಆ ಹೆಂಗಸು ನಮ್ಮ ಮನೆಯ ಮುಂದೆಯೇ ನಿಂತಿದ್ದಳು.
“ಯಾರು ಕದ್ದಿದ್ದು, ಏನಾಯ್ತು?” ಅಮ್ಮ ಕೇಳಿದಳು.
“ನಮ್ಮ ಮನೆ ಪಾತ್ರೇಲಿ ಅನ್ನ ಕಮ್ಮಿಯಾಗದೇ. ನಿಮ್ಮ ಮಗ ಅನ್ನ ಕದಿಯೋದು.ನನ್ನ ಮಗಳು ಹೇಳ್ತವ್ಳೆ”
ತಮ್ಮನಿಗೆ ಅನ್ನ ಕೊಟ್ಟಿದ್ದೇ ತಪ್ಪಾಯಿತು. ಅವನು ಆ ಮನೆಯ ಹುಡುಗಿಗೆ ಹೇಳಿಬಿಟ್ಟ. ಆ ಹೆಂಗಸು ಅಮ್ಮನ ಮಾತಿಗೆ ಮಾತು ಸೇರಿಸುತ್ತಿದ್ದಂತೆ ನನ್ನ ಅಪ್ಪನು ಬಂದ, ಜೊತೆಗೆ ಆ ಹೆಂಗಸಿನ ಗಂಡನು. ಅನ್ನದ ಜಗಳ ಶುರುವಾಯಿತು. ಸತ್ಯ ಹುಡುಕಲು ಕರೆದರು ನನ್ನನ್ನು. ಮೊದಲೇ ಅಳುತ್ತಿದ್ದೆ. ಅವರ ಮುಂದೆ ಇನ್ನೂ ಹೆಚ್ಚಾಯಿತು.
“ನೀನು ಅನ್ನ ಕದ್ದಿದ್ದಿಯೇನೋ?”
“ಹೌದು,, ನಾನೇ ಕದ್ದಿದ್ದಿದ್ದು. ತಮ್ಮನಿಗೂ ಕೊಟ್ಟೆ”
“ಅವಮಾನ…. ಅವಮಾನ..! ನಮ್ಮ ಮಾನ ಮರ್ಯಾದಿ ಕಳೆದುಬಿಟ್ಟೆ”
ಕಣ್ಣಲ್ಲಿ ನೀರಿಟ್ಟ ಅಮ್ಮ ಕೈಗೆ ಸಿಕ್ಕಿದ್ದಲ್ಲಿ ಭಾರಿಸ ತೊಡಗಿದಳು. ಅಪ್ಪನಿಗೆ ಸಿಕ್ಕಿದ್ದು ದೊಣ್ಣೆ. ಅಷ್ಟು ದಿನಗಳಿಂದ ತಿಂದ ಅನ್ನದ ಒಂದೊಂದು ಅಗಳು ಏಟಿನ ರೂಪದಲ್ಲಿ ತಾಂಡವಾಡ ತೊಡಗಿದವು. “ಇನ್ನು ಕದ್ದರೆ ಕೈ ಕಡಿದು ಬಿಟ್ಟೇನು” ಅಂದರು.
“ಇಲ್ಲ ಅಪ್ಪ … ಇನ್ನು ಕದಿಯೋದಿಲ್ಲ …! , ಅಮ್ಮ .. ಅಪ್ಪನಿಗೆ ಹೇಳು ನನ್ನ ಕೈ ಕತ್ತರಿಸಬೇಡ ಎಂದು”.
ಎಲ್ಲರೂ ಸುಮ್ಮನಾದರೂ. ಆ ಹೆಂಗಸು “ಒಬ್ಬರಿಗೇ ಅನ್ನ ಇರೋದು, ಎಲ್ಲಾ ಕದ್ದು ತಿಂದು ಬಿಟ್ಟವ್ನೆ” ಅಂತ , ಹಿಡಿ ಶಾಪ ಹಾಕಿ ಒಳ ಹೋದಳು. ಕೊಂಚ ಆಲೋಚಿಸಿದ ಅಮ್ಮ , ಸೀದ ಮನೆ ಒಳಗೆ ಹೋಗಿ ಗಂಜಿ ಅನ್ನವನ್ನು ಅವಳ ಮನೆಗೆ ಕೊಟ್ಟು ಬಂದಳು. ಅಪ್ಪ ಮಾತ್ರ ಗಂಜಿ ಅನ್ನ ತಿಂದ. ಆ ಒಂದು ಮಧ್ಯಾಹ್ನ ಅಮ್ಮನಿಗೂ ಅನ್ನ ಇಲ್ಲ. ನನಗೂ ಇಲ್ಲ, ತಮ್ಮನಿಗೂ. ಮಧ್ಯಾಹ್ನದಿಂದ ಸಂಜೆಯವರೆ ಕಳೆದ ಆ ನಮ್ಮೊಳಗಿನ ಭಾವಗಳು ಈ ಜಗತ್ತಿನ ಕಥೆಗಳಲ್ಲಿ ಪುಟವಾಗಿ ಉಳಿದಿಲ್ಲ. ಮಗುವಿಗೆ ಹಾಲು ಕೊಡುವ ತಾಯಿ, ತನ್ನ ಮಕ್ಕಳಿಗಾಗಿ ಹೊಟ್ಟೆಗಿಲ್ಲದೆ ಮರುಗಿದ ಕ್ಷಣಗಳು ಯಾವುದೇ ಧೀಮಂತ ಕಥೆಗಳಿಗೂ ಸಾಟಿಯಲ್ಲ ಅಂತ ಅನ್ನಿಸಿತು.
ಅನ್ನ ಕದ್ದು ಹಸಿವು ಹಿಂಗಿಸುವುದನ್ನು ಕೈಬಿಟ್ಟೆ. ಆಟವಾಡುವ ಉಮ್ಮಸ್ಸು ಇಂಗಿ ಹೋದಂತಾಯಿತು. ಹಕ್ಕಿಯ ಹಾಗೆ ತೋಟ-ಗದ್ದೆ ಬಯಲಲ್ಲಿ ಹಾರಾಡುವ ಆನಂದ ಕಳೆದು ಹೋಯಿತು. ಒಂದು ದಿನ ಹಾಗೆಯೇ ಮನೆಗೆ ನೀರು ತರಲು ಕೆರೆಯ ಹತ್ತಿರ ಹೋದೆ. ಆ ಹೆಂಗಸು ಮತ್ತು ಅವಳ ಗಂಡ ಬಟ್ಟೆ ಹೊಗೆಯುತ್ತಿದ್ದರು. ನನ್ನನ್ನು ” ಕಳ್ಳ” ಅಂದರು. ಹಲ್ಲು ಕಡಿಯುತ್ತಿದ್ದರು…. ನೀರು ತುಂಬಿಸುವ ಬಿಂದಿಗೆ ಕಿತ್ತು ಅದರಲ್ಲೇ ಹಿಗ್ಗಾ ಮುಗ್ಗಾ ಹೊಡೆದರು. ಅವರ ಕಣ್ಣುಗಳಲ್ಲಿ ಅನ್ನದ ರೋಷವಿತ್ತು. ನಾನು ಅಳುತ್ತಿದ್ದೆ… ಇನ್ನೊಮ್ಮೆ ಅನ್ನ ಕದ್ದರೆ ಕೊಂದು ಈ ಕೆರೆಗೆ ಬಿಸಾಕೆವು ಅಂದರು… ಮತ್ತೆ ಮತ್ತೆ ಹೊಡೆದರು. ಅಂಗಲಾಚಿದೆ… ಹೊಡೆಯಬೇಡಿ ನನ್ನನ್ನು… ನಾನು ಕದಿಯುದನ್ನು ಬಿಟ್ಟಿದ್ದೇನೆ . ಎಲ್ಲವನ್ನು ಸಹಿಸಿಕೊಳ್ಳಬಹುದಿತ್ತು. ಅವರ ಪೆಟ್ಟು ತಿನ್ನಲಾಗಲಿಲ್ಲ. ಜೊತೆಗೆ ಕಂಡ ಕಂಡಲ್ಲಿ ಕಳ್ಳ ಅನ್ನುವುದು. ಅವರನ್ನು ಕಂಡಾಗಲೆಲ್ಲ ಅಡಗಿಕೊಳ್ಳಲು ಪ್ರಯತ್ನಿಸಿದೆ .ನಡುನಡುವೆ ಅಳುತ್ತಿದ್ದೆ. ಒಮ್ಮೊಮ್ಮೆ ಆಲೋಚಿಸುತ್ತಿದ್ದೆ, ಇಲ್ಲಿಂದ ಓಡಿ ಹೋದರೋ.. ಹೋದರೆ ಎಲ್ಲಿಗೆ ಹೋಗುವುದು…?!!!
ಸುಮ್ಮನೆ ಒಬ್ಬನೇ ಒಂದು ಮೂಲೆಯಲ್ಲಿ ಕುಳಿತುಕೊಳ್ಳವು ದಿನಗಳು ಪ್ರಾರಂಭವಾದವು. ಕಣ್ಣ ಮುಂದೆ ಹಾರಿ ಬರುವ ಏರೋಪ್ಲೇನ್ ದುಂಬಿಗಳನ್ನು ಹಿಡಿಯಬಹುದಿತ್ತು. ಗದ್ದೆ ಬಯಲಲ್ಲಿ ಮೀನು- ನಳ್ಳಿಗಳನ್ನು ಹಿಡಿದು ಮನೆಗೆ ತರಬಹುದಿತ್ತು. ಓಗರೆಯ ಮಕ್ಕಳೊಂದಿಗೆ ಲಗೋರಿ-ಗೋಲಿ ಆಟವಾಡಬೇಕಿನಿಸುತ್ತಿತ್ತು… ” ಕಳ್ಳ” ಅಂತ ಕೆರೆದರೋ..?! ಭಯವಾಗುತ್ತಿತ್ತು. ಹಾಗಂತ ಮಕ್ಕಳ ತಂದೆ-ತಾಯಂದಿರು ನನ್ನೊಂದಿಗೆ ಸೇರಬಾರದೆಂದೂ ಕಟ್ಟಪ್ಪಣೆ ಮಾಡಿದ್ದರು.
ಮತ್ತೊಮ್ಮೆ ಅರಳಿದ ಹೂ ಮನದೊಳಗೇ ಬಾಡ ತೊಡಗಿದವು. ಹಾಗಂತ ಕರುಳ ಬಳ್ಳಿಯ ಬದಲಾವಣೆ ಅಮ್ಮನಿಗೆ ಗೊತ್ತಾಗದೆ ಇರಲಿಲ್ಲ.. ನನ್ನನ್ನು ಕಾರೆಕೊಲ್ಲಿ ಕಾಫಿ ಎಸ್ಟೇಟಿನ ಅಜ್ಜಿಯ ಮನೆಗೆ ಶಾಲೆಗೆ ಹೋಗಲು ಕಳುಹಿಸಿದಳು. ಅಲ್ಲಿಂದ ಹೇಗೋ ಪಾರಾದೆ. ಇಲ್ಲಿಯೂ ಕಥೆಗಳು ಹೆಣೆದುಕೊಳ್ಳುತ್ತವೆ…. ಹಾಗೆಯೇ ಭಾವಗಳು ಪದಗಳಾಗಿ ಸ್ಪರ್ಶಿಸುತ್ತವೆ.





ರವೀ….
ಅತ್ಯಂತ ಹೃದಯಸ್ಪರ್ಶಿ ಸನ್ನಿವೇಶವನ್ನು ಬರೆದಿದ್ದೀರಿ….
ಇದು ಕಥೆಯೋ ಅಥವಾ ನೈಜ ಘಟನೆಯೋ ಅನ್ನುವುದಕ್ಕಿಂತ…
ಹಸಿದವರ ಹೊಟ್ಟೆಪಾಡಿನ ಗೋಳು ಎಂಬುದು ಅತ್ಯಂತ ಸೂಕ್ತವಾದುದು….
ಕೊನೆಯ ಸಾಲು ಓದುವವರೆಗೆ ನನ್ನ ಹೃದಯ ರೋದಿಸುತ್ತಿತ್ತು….
ಮನಸು ಇವುಗಳು ಕೇವಲ ಕಥೆಯಲ್ಲಿ ಮಾತ್ರ ಇರಲಿ ಎಂಬ ಆಶಯ ಹೊತ್ತಿದ್ದರೂ….
ಅಲ್ಲಲ್ಲಿ ಭೀಕ್ಷೆ ಬೇಡುತ್ತ ಕಂಡಿರುವ ಹಸಿದ ಮಕ್ಕಳ ಕರಾಳ ಮುಖಗಳು ಕಣ್ಣೆದೆರು ಬಂದು ನಿಲ್ಲುತ್ತವೆ 🙂
ರವೀ….. ಮನಸ್ಸಿಗೆ ನಾಟಿತು ನಿಮ್ಮ ಬರಹ……. “ಹಸಿವು” ಮತ್ತೆ ಮತ್ತೆ ಕಾಡ್ತಾ ಇದೆ….. “ಕಾಫೀ ತೋಟಗಳಲ್ಲಿನ ಬಡತನ” ನಾನೂ ಕಣ್ಣಾರೆ ಕಂಡಿದ್ದೇನೆ…… ನೀವು ಬರೆದದ್ದು ಕೇವಲ ಕಲ್ಪನೆ/ಕಥೆ ಅಲ್ಲ ಎಂಬುದು ಗೊತ್ತು….. ಅದು ವಾಸ್ತವ…… ಕಾಫಿ ಹೂಗಳ ಕಂಪಿನ ಮಧ್ಯೆ ಹಸಿವಿನ ತಾಂಡವ ನೃತ್ಯ ನಡೆಯುವುದು ಹೆಚ್ಚಿನವರಿಗೆ ಕಾಣಿಸದು 😦 Planter ಗಳ ಹೊಚ್ಚ ಹೊಸ ಕಾರುಗಳ ಇಂಜಿನ್ ಸದ್ದಿನ ಮಧ್ಯೆ ಹಸಿವಿನ ಕೂಗು ತೀರಾ ಕ್ಹೀನವಾಗಿ ಕೇಳಿಸುತ್ತದೆ 😦
ಮಾನ್ಯ ಗಂಗಾಧರ್ ಮತ್ತು ಮಾನ್ಯ ಅಕ್ಷಯ ರಾಮರಿಗೆ ನಮಸ್ತೆ .
ಈ ಕಥೆಯ ಪಾತ್ರಧಾರಿ ನಾನೇ.ನನ್ನದೇ ಚಿತ್ರಣವಿದು.ನನಗೆ ಈಗ ೩೮ರ ಪ್ರಾಯ.ಅದೊಂದು ಮಾತಿನ ಆರ್ಭಟ ಇಂದಿಗೂ ನನ್ನ ಮನಸ್ಸಿನಲ್ಲಿ ಕುಳಿತಿತ್ತು.ಇಂತಹ ಘಟನೆಯ ಸಿನೆಮಾ ಅಥವಾ ಸಾಹಿತ್ಯವನ್ನು ಓದಿದ ದಿನಗಳಲೆಲ್ಲ ಕನಸಿನಲ್ಲಿ ಬೆಚ್ಚಿ ಬೀಳುತ್ತಿದ್ದೆ. ಅದನ್ನು ಹಾಗೆಯೇ ಪದಗಳಲ್ಲಿ ಸೆರೆಹಿಡಿದು ಬಿಟ್ಟಿದ್ದೇನೆ.ನನ್ನ ಅನ್ನದ “ಅಗಳು”ಗಳಿಗೆ ಕ್ಷಮೆ ಕೇಳಿದ್ದೇನೆ.ಇನ್ನು ಕನಸು ಬೀಳಲಿಕ್ಕಿಲ್ಲ ಅನ್ನುವ ಸಮಾಧಾನವಾಯಿತು. ಓದಬೇಕೆನ್ನು ಕನಸು ಕಂಡ ಆ ಹೆಣ್ಣು ಮಗುವಿನ ಕನಸಿನ ಬಗ್ಗೆ ನನಗೆ ಸಮಾಧಾನವಾಗಲಿಲ್ಲ.ಏನಾಯ್ತೋ ಎಂಬ ಆತಂಕವಿದೆ.
ನಿಮಗಳಿಗೆ ಹೃದಯ ತುಂಬಿದ ನಮನಗಳು.
good and nice story…………..
modalige ravi annanavarige ondu mana tattuva lekhana barediruvudakke abhinandanegalu 🙂 🙂 nimma lekhana oduvaga nanu nanna tangi namma angadiyalli kaddu tinda rasagulla bellada mithayiya nenapayitu. nammappa angadiyalli lekka kammi aagiddu nodi kelidaga nanna tangi bayi bidutiddalu nanage basunde beelutiddavu 🙂 🙂 ene heli balyavembudu bayolage kallu sakkare iddante estu bega karagi hogutte alwa ravi anna? a karagi hoguva samayadolage jeevanada moulyagalannu aritare satprajegalaguttare illavadare samajakke marakavaguttare……
ಭಾವದ ಆಳಕ್ಕಿಳಿದ ಸರ್ವರಿಗೂ ಭಾವ ತುಂಬಿದ ನಮನಗಳು.
ಹೃದಯಸ್ಪರ್ಶಿ ಸನ್ನಿವೇಶ.. ನನ್ನದೂ ಇದೇ ಥರಹದ ಒ೦ದು ಘಟನೆ ಇದೆ! ಆದರೆ ಅದನ್ನು ದಾಖಲಿಸಿದರೆ ಏನೆ೦ದುಕೊಳ್ಳುತ್ತಾರೋ ಎ೦ದು ಇಲ್ಲಿಯವರೆವಿಗೂ ದಾಖಲಿಸಲಿಲ್ಲ. ಇನ್ನು ಮ್ಮು೦ದೆ ಸಾಧ್ಯವಾದರೆ ದಾಖಲಿಸುವೆ.
ನಿಮ್ಮ ಸನ್ನಿವೇಸ ಓದಿ ಅರಿವಿಲ್ಲದೆ ಕಣ್ಣಿ೦ದ ಎರಡು ಹನಿ ಕ೦ಬನಿ ಜಾರಿದವು, ಬಹಳ ಬೇಸರದಲ್ಲಿದ್ದೇನೆ.
ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.