ಬೆಳಕಿಗೆ ಹೊಸತನ ನೀಡಲಿ ಹಣತೆಗಳ ಸಾಲು
ಸಂಜೆ ಯಾವಾಗ ಆಗುವುದೆಂಬ ಕಾತುರ. ನಾನಾಗ ಐದನೆಯ ಅಥವಾ ಆರನೆಯ ತರಗತಿಯಲ್ಲಿದ್ದೆ. ಶಾಲೆಯ ಕೊನೆಯ ಗಂಟೆ – ಆಗಿನ ಪರಿಭಾಷೆಯಲ್ಲಿ ಲಾಂಗ್‌ಬೆಲ್ ಯಾವಾಗ ಕೇಳಿಸುವುದೆಂದೇ ನಮ್ಮ ಗಮನ. ಶಿಕ್ಷಕರು ಕೂಡ ಇದನ್ನು ಅರಿತವರೇ ಆಗಿದ್ದರು. ಏಕೆಂದರೆ, ಅವರು ಕೂಡ ನಮ್ಮ ಹಾಗೆ ಎಳೆಯರೇ ಆಗಿದ್ದವರಲ್ಲ! ಅರ್ಧತಾಸು ಬೇಗನೆ ಲಾಂಗ್‌ಬೆಲ್! ಕ್ಲಾಸಿನಿಂದ ಹೊರ ಚಿಮ್ಮಿದ ಮಕ್ಕಳ ಹರ್ಷೋದ್ಗಾರ. ಪುಸ್ತಕದ ಚೀಲ ಹೆಗಲಿಗೇರಿಸಿ, ಬುತ್ತಿಯನ್ನು ಹುಡುಕಿಕೊಂಡು… ಮನೆಯ ಕಡೆಗೆ ಓಟ. ಆ ದಿನ ಅದು ಎಂದಿನ, ಸಾಮಾನ್ಯ ನಡಿಗೆಯಾಗಿರಲಿಲ್ಲ. ಅದು ಮನೆಯ ಕಡೆಗೆ “ಒಲಿಂಪಿಕ್ ಓಟ’. ಎಷ್ಟು ಬೇಗ ಮನೆ ತಲುಪುತ್ತೇವೆಯೋ ಅಷ್ಟು ಸಂಭ್ರಮದ ವೃದ್ಧಿ ಎಂಬ ಭಾವನೆ. ಬಾಲ್ಯದ ದಿನಗಳ ವಿಶೇಷವಾದ ಸ್ಪಂದನ ಇದಾಗಿತ್ತು.
ಈ ಸಂಭ್ರಮಕ್ಕೆ ಕಾರಣ. ದೀಪಾವಳಿಯ ಆರಂಭ. ರಜೆಯ ಸಂತಸದ ಜತೆ ಪ್ರತಿದಿನವೂ ಬಗೆಬಗೆಯ ರೂಪದಲ್ಲಿ ದೀಪಾವಳಿಯ ಆಚರಣೆಯ ಸ್ವಾರಸ್ಯ. ವರ್ಷಪೂರ್ತಿ ಉಳಿಸಿಕೊಂಡು ಬಂದ ಚಿಲ್ಲರೆ ಈಗ ನಮ್ಮ ಡಬ್ಬಿಯಲ್ಲಿ ಭಾರೀ ಮೊತ್ತ ಆಗಿರಬಹುದು ಎಂಬ ಲೆಕ್ಕಾಚಾರ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾತ್ರ ನಮ್ಮ ಈ “ಖಜಾನೆ’ಯನ್ನು ಒಡೆಯಲು ಮನೆಯವರ ಅನುಮತಿ. ಈ ಖಜಾನೆಯ ಸಂಪತ್ತು ನಮ್ಮ ಪಟಾಕಿ ಖರೀದಿ ಎಂಬ “ಮಹತ್ಕಾರ್ಯ’ಕ್ಕೆ ವಿನಿಯೋಗವಾಗಬೇಕು.
ಆ ರಾತ್ರಿಯೆಲ್ಲಾ ಮರುದಿನದ್ದೇ ಕನಸು. ಯಾರಾಯರ ಮನೆಯಲ್ಲಿ ಏನೆಲ್ಲಾ ಪಟಾಕಿ ಇತ್ಯಾದಿ ಸುಡುಮದ್ದುಗಳನ್ನು ತಂದಿರಬಹುದು ಎಂಬೆಲ್ಲಾ ಜಿಜ್ಞಾಸೆ. ನನಗೆ ಕೂಡ ನಾಳೆ ಮನೆಯ ಹಿರಿಯರು ಅವರ ಲೆಕ್ಕದ ಪಟಾಕಿಯನ್ನು ತಂದುಕೊಟ್ಟಾರು ಎಂಬ ನಿರೀಕ್ಷೆ. ಈ ದಿನ ಏನಿದ್ದರೂ ಅದು ನನ್ನ ವೈಯಕ್ತಿಕ ಡಬ್ಬಿಯ ಸಂಗ್ರಹದಿಂದ ಖರೀದಿಸಿದ ಪಟಾಕಿ ಅಲ್ವಾ… ಈ ಲಹರಿಯಲ್ಲೇ ನಿದ್ದೆ… ಅರೆ ನಿದ್ದೆ.
ಆದರೆ ಮುಂಜಾನೆ ಐದರ ಹೊತ್ತಿಗೆಲ್ಲಾ ನನ್ನನ್ನು ನಿದ್ದೆಯಿಂದ ಎಬ್ಬಿಸಲಾಗಿತ್ತು. ಕಣ್ಣುಜ್ಜಿಕೊಂಡು ವಾಸ್ತವಕ್ಕೆ ಬರುತ್ತಿದ್ದಂತೆಯೇ ಆಚೀಚೆಯ ಮನೆಗಳಿಂದ ಪಟಾಕಿ ಸದ್ದು ಮೊಳಗಲಾರಂಭಿಸಿತ್ತು! ಓಹ್…. ಅಂದ ಹಾಗೆ ಇದು “ಮೀಪುನ ಪರ್ಬ’ – ಅಂದರೆ, ಸ್ನಾನದ ಹಬ್ಬ.. ಸ್ನಾನದ ಹಬ್ಬಕ್ಕೆ ನನ್ನನ್ನು ತಯಾರುಗೊಳಿಸಲಾಯಿತು. ಈ ನಿಟ್ಟಿನಲ್ಲಿ ಅಪ್ಪನೇ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಮನೆಯ ಬೇರಾಯರಿಗೂ ಈ ನಿಟ್ಟಿನಲ್ಲಿ ನನ್ನನ್ನು ಸುಧಾರಿಸಲು ಸಾಧ್ಯವಿಲ್ಲವೆಂಬುದು ಮನೆಮಂದಿಯ ಸರ್ವಾನುಮತದ ತೀರ್ಮಾನವಾಗಿತ್ತು!
ಏಕೆಂದರೆ, ಎಣ್ಣೆ ಹಚ್ಚಿ ಕೊಳ್ಳುವ ಅರ್ಥಾತ್ ತೈಲಾಭ್ಯಂಗದ ಯಾವುದೇ ಅವಕಾಶಗಳನ್ನು ನಾವು ಸುತರಾಂ ಒಪ್ಪಿಕೊಳ್ಳುತ್ತಿರಲಿಲ್ಲ. ಆನಿಟ್ಟಿನಲ್ಲಿ ಪಲಾಯಾನ ಮಾಡುತ್ತಾ ಮಾವು, ಗೇರು, ಪೇರಳೆ ಮರ ಇತ್ಯಾದಿಗಳಲ್ಲಿ ತಪ್ಪಿಸಿಕೊಳ್ಳುತ್ತಿದ್ದೆ. ಆದರೆ ಈ ಮುಂಜಾನೆ – ನಸುಕತ್ತಲಿನಲ್ಲಿ ಅಲ್ಲಿಗೆಲ್ಲಾ ಓಡಿಹೋಗುವ ಹಾಗಿರಲಿಲ್ಲ. ಅದಕ್ಕಿಂತ ಮಿಗಿಲಾಗಿ ಅಪ್ಪನ ಆಜ್ಞೆಯನ್ನು ಮೀರುವುದುಂಟೇ?
ಎಣ್ಣೆ ಹಚ್ಚಿಕೊಳ್ಳುವ ಪ್ರಕ್ರಿಯೆಗೂ ವಿಧಿ¬ ವಿಧಾನಗಳು. ದೇವರಕೋಣೆಯ ಎದುರು ಮಣೆಯ ಮೇಲೆ ನಾನು ಕುಳಿತುಕೊಳ್ಳಬೇಕಾಗಿತ್ತು. ಆ ಬಳಿಕ ಸಾಂಕೇತಿಕ ತೈಲಸ್ಪರ್ಶ. ಬಳಿಕ ತಲೆಪೂರ್ತಿ. ಇದೇ ಅವಕಾಶವೆಂದು ಅಮ್ಮ ಕುಡ್ತೆಗಟ್ಟಲೆ ಎಣ್ಣೆಯನ್ನು ಪೂರೈಕೆ ಮಾಡುತ್ತಿದ್ದರು. “”ವರ್ಷ ಇಡೀ ಎಣ್ಣೆ ಪಾಂಡ ಕಣ್ಣಗ್‌ಲಾ ಎಡ್ಡೆ ಅತ್ತ. ಈತ್ ಕಿಞ್ಞ ಉಳ್ಳೆ. ಕ್ರಾಪ್ ಹಾಳಾಪುನು. ಎಣ್ಣೆ ಸರೀ ಪತ್ತೋಲೆ. ತರೆಡ್ ಜಪ್ಪೋಡು’ ಅಂತ ಅಮ್ಮ ಪ್ರೀತಿ ಪೂರ್ವಕ ಒತ್ತಡ ಹೇರುತ್ತಿದ್ದರೆ ಈ ತೈಲಾಭಿಷೇಕಕ್ಕೆ ಅಣ್ಣ, ಅಕ್ಕಂದಿರು ಕೂಡ “ತುಂಬು ಹೃದಯದ’ ಸಹಕಾರವನ್ನು ನೀಡುತ್ತಿದ್ದರು. ನನಗಂತೂ ಈ ತೈಲಾಭಿಷೇಕದಿಂದ ಏನೂ ಕಾಣದ ಪರಿಸ್ಥಿತಿ. ಒಂದಷ್ಟು ಹೊತ್ತು ಅಲ್ಲೇ ನಿಂತಿರಬೇಕಾಗಿತ್ತು. ಏಕೆಂದರೆ, ಈ ತೈಲವು ನನ್ನ ಶರೀರದ ಕಣಕಣದೊಳಕ್ಕೆ ಪ್ರವೇಶಿಸಬೇಕಲ್ಲ; ಅದಕ್ಕೆ!
ಬಳಿಕ ಮಹಾತೈಲ ಮಜ್ಜನದ ಕ್ಷಣ ಆರಂಭ. ನಿಜಕ್ಕಾದರೆ, ಅದು ಮಾತ್ರ ರೋಚಕವಾದ ಅನುಭವ. ನಿಗಿನಿಗಿ ಉರಿಯುವ ಒಲೆಯ ಮೇಲಿನ ಅಲಂಕೃತ ಗುಡಾಣದಲ್ಲಿ ಕೊತಕೊತ ಕುದಿಯುವ ನೀರು. ಅದನ್ನು ಅಲಂಕೃತ ತಂಬಿಗೆಯ ಮೂಲಕ ಭಾಗಶಃ ಅಲಂಕೃತ ಬಾಲ್ದಿಗೆ ಸುರಿದುಕೊಂಡು ಒಂದಿಷ್ಟು ತಣ್ಣೀರು ಬೆರೆಸಿ ಹದಗೊಳಿಸಿ ತಲೆಗೆ ಸುರಿದುಕೊಳ್ಳುವಾಗಿನ ಅನುಭವ… ಓಹ್! ಅದನ್ನು ಮಾತು -ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅದರ ಸುಖವನ್ನು ಸವಿಯಲೇಬೇಕು.
ಈ ಮಹಾತೈಲ ಮಜ್ಜನದ ಬಳಿಕ ಹೊರಬರುವುದೆಂದರೆ ಅದು ಕೂಡ ಅಷ್ಟೊಂದು ಆಹ್ಲಾದಕರ… ಒಂದು ರೀತಿಯಲ್ಲಿ ಆಯಾಸಭರಿತ ಸ್ಥಿತಿಯ ನಡುವೆಯೂ ಆನಂದದಾಯಕ ಸ್ವರೂಪ. ಗಾಳಿಯಲ್ಲಿ ತೇಲಿ ತೇಲಿ ಬಂದ ಹಾಗೆ. ಬಳಿಕ ವಿಶೇಷವಾದ ತಿಂಡಿಗಳ ಸಹಿತ ಉಪಾಹಾರ. ಇನ್ನು ಪಟಾಕಿ ಸಿಡಿಸುವ ಸಂಭ್ರಮ. ಅಂಗಳವೇ ಈ ನಿಟ್ಟಿನ ಬೃಹತ್ ಕ್ರೀಡಾಂಗಣ. ಗೂಡುದೀಪಗಳ ಸಹಿತ ಸುತ್ತಲೂ ದೀಪಗಳ ಆವಳಿಯ ಮೆರುಗು. ಆವಳಿ ಎಂದರೆ ಸಮೂಹ ಅಥವಾ ರಾಶಿ ಇತ್ಯಾದಿ. ದೀಪಗಳ ಆವಳಿ… ಇದುವೇ ದೀಪಾವಳಿ. ತಿಪಿಲೆಗಳಲ್ಲಿ (ಹಣತೆ) ಅಮ್ಮ ಹಚ್ಚಿಟ್ಟ ದೀಪಗಳ ಆವಳಿ. ಸೂರ್ಯೋದಯಕ್ಕೆ ಮುನ್ನ ಈ ದೀಪಗಳನ್ನು ನೋಡುವುದೇ ಸಂಭ್ರಮ . ನಮ್ಮ ಮನೆಯ ಅಂಗಳ ದೀಪಗಳ ಸಮೂಹದಿಂದ ರಾರಾಜಿಸುತ್ತಿತ್ತು.
ಅಷ್ಟರಲ್ಲಿ ನಮ್ಮ ಅಕ್ಕಪಕ್ಕದ ಮನೆಗಳ ಹುಡುಗರು ಕೂಡ ಸೇರಿಕೊಂಡರು. ಅವರವರ ಸಂಗ್ರಹದ ಕೆಲವೇ ಕೆಲವು ಪಟಾಕಿಗಳ ಸಹಿತ. ಏಕೆಂದರೆ, ದೊಡ್ಡ ಸಂಗ್ರಹ ದೀಪಾವಳಿಯ ಇನ್ನುಳಿದ ದಿನಗಳಿಗೆ ಬೇಕಾಗಿರುತ್ತದೆ. ಹುಡುಗಿಯರು ನಕ್ಷತ್ರಕಡ್ಡಿಯನ್ನು ಬೆಳಗುತ್ತಿದ್ದಾರೆ. ಚಿಕ್ಕಪುಟ್ಟ ಮಕ್ಕಳು ಭಯಮಿಶ್ರಿತ ಆನಂದವನ್ನು ಅನುಭವಿಸುತ್ತಿರುವುದನ್ನು ನೋಡುವುದೇ ಸೊಗಸಾದ ಅನುಭವ. ಆ ನೆನಪು ಈಗಲೂ ಹೀಗೆ ಜಿನುಗುತ್ತಿದೆಯಲ್ಲವೇ, ಹಾಗೆ!
*************
ಚಿತ್ರಕೃಪೆ: wanderlustandlipstick.com




