ವಿಷಯದ ವಿವರಗಳಿಗೆ ದಾಟಿರಿ

ಜೂನ್ 25, 2011

2

ಪ್ರೀತು, ಪ್ರೀತಿ ಮತ್ತು ಅವನು..

‍ನಿಲುಮೆ ಮೂಲಕ

– ಅಬ್ದುಲ್ ಸತ್ತಾರ್

ಎಂತಹಾ ಹಾಯೆನಿಸುವ ವಾತಾವರಣವೆಂದರೆ ಆ ಸಂಜೆ ಎಲ್ಲಾ  ವಯಸ್ಕರೂ  ಅಲ್ಲಿ ಸೇರಿದ್ದರು. ಮುದಿಗೆಳೆಯಾ ಗೆಳತಿಯರು ಉಲ್ಲಾಸದಿಂದ ಎದುಸಿರು  ಬಿಡುತ್ತಾ ಆ ಕಲ್ಲು ಹಾಸಿನ ಮೇಲೆ ಓಡುತ್ತಿದ್ದರೆ ಕೆಲವರು ನಡೆಯುತ್ತಿದ್ದರು.
ವಿಶಾಲವಾದ ಆ ಪಾರ್ಕಿನ ಸುರಕ್ಷಿತ ಸ್ತಳದಲ್ಲಿ ಜೋಡಿಹಕ್ಕಿಗಳು ಮುನಿಸಿನಿಂದ,  ಸರಸದಿಂದ, ವಿರಸದಿಂದ ಒಟ್ಟಿಗೇ ಸೇರಿದ್ದವು.
ಆ ಕಲ್ಲು ಬೆಂಚಿನಲ್ಲಿ  ಅವನೂ ಅವಳೂ ದೂರ ದೂರ  ಕೂಳಿತಿದ್ದಾರೆ.  ಕೊನೆಗೂ  ಸುಮ್ಮನೆ ಕೂತು ಸುಖವಿಲ್ಲೆಂದು ಅವನು ಅವಳನ್ನೊಮ್ಮೆ ಕಣ್ಣಲ್ಲಿ ಕಣ್ಣಿಟ್ಟು
ನೋಡಿದ.  ಅವಳು ಹತ್ತಿರ ಬಂದು ಅವನಿಗೆ ತಾಗಿಕುಳಿತು ಕಯ್ಯನ್ನ ಅವನ  ಹೆಗಲಿಗೇರಿಸಿದ್ದಳು. ಅವನು ಸುತ್ತ-ಮುತ್ತಲೋಮ್ಮೆ ನೋಡಿ ಅವಳ ಕೈಯನ್ನ ಮೆಲ್ಲಗೆ ಹೆಗಲಿನಿಂದ ಜಾರಿಸಿ ಸರಿಯಾಗಿ ಕೂರಲು ಹೇಳಿದ. ಅವಳು ಮುನಿಸಿಕೊಂಡು ಮುಖ ಆ ಕಡೆ ಮಾಡಿದಳು.
“ಸಾರಿ ಪ್ರೀತು, ಇದು ಪಬ್ಲಿಕ್ಕು ಅಂತಾ..”
“ಹೋಗೊಲೋ, ನಿನಗೆ ನನ್ನ ನೋವು ಮಾಡೋದಲ್ದೆ ಮತ್ತೇನು ಗೊತ್ತು?, ನೀ ತುಂಬಾ ಕೆಟ್ಟವ್ನಪ್ಪ…”
ಅಲ್ಲಿ ಮೌನ.
“ಪ್ರೀತು, ಇದು ನಮ್ಮ ಕೊನೇ ಹದಿನೈದ್ನೆ ತಾರೀಖು. ಗೊತ್ತೇ ಇಲ್ಲದಂಗೆ ನಮ್ಮ ಮೂರು ವರ್ಷ ಕಳೆದು ಹೊಯ್ತಲ್ಲೇ..”
ಅವನ ಈ ಮಾತನ್ನ ಮನಸ್ಸಲ್ಲೇ ಗುನುಗುತ್ತಿದ್ದ ಅವಳ ಕಣ್ಣು ಸ್ವಲ್ಪವೇ ಹನಿಗೂಡಿತು.
“ನನ್ನ ಮರೀತಿಯೇನೋ? ಮುಂದೆ ಸಿಕ್ಕಾಗ ಈ ರೀತಿ ನೋವು ಮಾಡ್ದೆ ನನ್ನ ಒಪ್ಕೋತೀಯಲ್ವ?,ನಂಗೆ ತಡ್ಕೋಲ್ಳೊಕ್ಕಾಗಲ್ಲ”
“ಪ್ರೀತು, ನಿಂಗಾಗಿ ನಾನೆಷ್ಟೊಂದು ಬದಲಾದೆ ಗೊತ್ತುಂಟಾ?,ಈ ಡಿಗ್ರೀ ಲೈಫಲ್ಲಿ ಎಷ್ಟೋ ಒಳ್ಳೊಳ್ಳೆ ಸಂಬಂಧವನ್ನ ಕಳ್ಕೊಂಡೆ ನಿನ್ಗೋಸ್ಕರ. ಅವ್ರ ಜೊತೆ ಸೆರ್ದೆ ಸೆರ್ದೆ ದೂರಾನೇ ಆದೆ….., ಏನೆ ಆದರೂ ಇಂತಾ ಅದ್ಭುತ ಅನುಭವ ಕೊಟ್ಟಿದ್ದಕ್ಕೆ ನಿಜಕ್ಕೂ ಥ್ಯಾಂಕ್ಸ್ ಕಣೆ”
“ಯಾಕೋ ಹಾಗೆಲ್ಲ ಮಾತಾಡ್ತೀಯ, ನಿನ್ ಫ್ರೆಂಡ್ಸ್ಗೂನಂಗೂ ಸಂಬಂಧ ಏನು? ಅಷ್ಟಕ್ಕೂ ನಾನ್ ಬಂದಾಕ್ಷಣ ನನ್ನಲ್ಲಿಗೆ ಯಾಕೆ ಓಡೋಡಿ ಬರ್ತೀಯ?”
“ಹೌದು ಹುಡ್ಗೀ, ಹುಡ್ಗೀರಂದ್ರೆ ದೂರ ಹೊಯ್ತಿದ್ದವ್ನ ಹೀಗ್ಮಾಡಿದ್ದು ಅದೇ ನಿನ್ನ ಅದ್ಭುತ ಪ್ರೀತಿ ಕಣೆ. ಆದ್ರೆ ಇನ್ಮುಂದೆ ನಾ ಹೇಗಿರ್ಲೆ ಪ್ರೀತು..”
“………………………………”,         “…………………………………..”
“ಪ್ರೀತು, ನಿನಗೊಂದು ಸತ್ಯ ಕೇಳ್ತೀನಿ ನಿಜಾ ಹೇಳು, ನನ್ನನ್ನ ಯಾಕೇ ತಿಂಗ್ಲಾನುಗಟ್ಲೆ ಗೋಳು ಹುಯ್ಸಿಕೊಂಡು ಬೀಳುಸ್ಕೊಂಡೆ? ಅದ್ರಲ್ಲೂ ನಾನೇ ಸಿಗಬೇಕಿತ್ತ…?”
ಅವಳೀಗ ಜೋರಾಗಿ ನಗಲು ಶುರುವಾದಳು.
“ಹೌದು ಕಣೋ, ನಂಗೆ ಬೀಳೋ ಒಂದೊಳ್ಳೆ ಬಕ್ರಾನನ್ನ ಹುಡುಕ್ತಿದ್ದೆ. ನೀನೆ ಸಿಕ್ಬಿಟ್ಟೆ. ಆದ್ರೆ ಅದೇನೂಂತ ಗೊತ್ತಿಲ್ಲ,ಸತ್ಯವಾಗ್ಲೂ ನಿನ್ನನ್ನ ಜೀವ ಹೋಗೋಷ್ಟು ಪ್ರೀತಿಸ್ಬಿಟ್ಟೆ. ನೀ ಅದ್ಭುತವಾದ ಪ್ರೀತೀನ ಕೊಟ್ಟೆ. ಸತ್ಯವಾಗ್ಲೂ ನಿನ್ನನ್ನ ಮರೆಯೋದಿಲ್ಲ ಕಣೋ”
“ಹೌದು ಪ್ರೀತು, ಜೀವನದಲ್ಲಿ ನಾವಿಬ್ರೂ ಒಂದಾಗೋದು ಬೇಡಾಂತ ನೀನೆ ಹೇಳಿದ್ದೀಯ, ನಂದೂ ಅದೇ ಪ್ಲಾನು. ಯಾಕಂದ್ರೆ ನಮ್ಮಿಬ್ರಿಗೂ ಹೊಂದಾಣಿಕೆ ಅನ್ನೋದೇ ಇಲ್ಲ. ನಂದೇ ಅಭಿರುಚಿ ಬೇರೆ, ನಿಂದೆ ಬೇರೆ. ಒಟ್ಟಾರೆ ಇಬ್ರೂ ಬೇರೆ ಬೇರೆ. ಒಂದ್ ಮಾತನ್ನ ನೆನಪಿಟ್ಕೋ…, ಪರಿಸ್ತಿತಿ ಎಂತಹಾ ಸಂಬಂಧಾನ ಕೂಡ ಮರ್ಸುತ್ತೆ ಕಣೆ”
“ಏನೆ ಆಗ್ಲಿ, ನನ್ನ ಮರೀಬೇಡ ಕಣೋ. ಕಳೆದೆರಡು ವರ್ಷದಿಂದ ಪ್ರತೀ ತಿಂಗ್ಳೂ ಈ ಜಾಗದಲ್ಲಿ ಸೇರ್ತಿದ್ವಿ. ನೀ ಬಿಟ್ತೊದ್ಮೇಲೆ ಕೂಡ ನಾ ಬರ್ತಾನೆ ಇರ್ತೀನಿ, ಒಬ್ಳೇ ಕೂತ್ಕೊಂಡು ನಿನ್ನ ನೆನಪಲ್ಲೇ ಕಾಲ ಕಳೀತೀನಿ ಕಣೋ. ನಾನು ನೀನು ಇವತ್ತೇ ಕೊನೆ ಅಲ್ವ….” ಮಾತು ಗದ್ಗರವಾಯಿತು.
“ನಿಂಗೆ ಮುಂಚೆ ಇದ್ದ ಲವ್ ಅಫೇರ್ ಗೊತ್ತಾಗಿದ್ರೂ ನಿಂಗೆ ಸೋತು ಹೋದೆ ಕಣೆ ಪ್ರೀತು, ನೀ ನನ್ನ ಲೈಫಲ್ಲಿ ಸತ್ಯವಾಗ್ಲೂ ಬರಬಾರ್ದಿತ್ತು. ನಿಂಗೆ ಹೊಂದಿಕೊಳ್ಳೋಕೆ ಅದೆಷ್ಟೋ ಚೇಂಜ್ ಮಾಡ್ಕೊಂಡೆ. ನಿನ್ನ ಕಳ್ಕೊಬಾರ್ದೂಂತ ಎಷ್ಟೆಷ್ಟೋ ಕೇಳ್ಕೊಂಡೆ. ಆದ್ರೆ ಪರಿಸ್ತಿತಿ ನಮ್ಮನ್ನ ಬೇರೆ ಬೇರೆ ಮಾಡ್ತಿದೆ ಪ್ರೀತು…”
ಅವಳು ವಾಚು ನೋಡಿಕೊಂಡಳು. “ಸರಿ ಕಣೋ, ನಂಗೆ ಆರುವರೆಗೇ ಮನೆ ಸೇರಬೇಕು. ಆರು ಕಾಲಾಯ್ತು..”
ಇಬ್ಬರೂ ಪರಸ್ಪರ ಸುಧೀರ್ಗವಾಗಿ ನೋಡಿಕೊಂಡರು. ನಿನ್ನೆ ಕಣ್ಣೀರಿಟ್ಟ ರೀತಿ ಇಂದವರು ಅಳಲಿಲ್ಲ. ಅವಳು ಎದ್ದು “ನಿನ್ನ ಹೊಸಾ ಫ್ರೆಂಡ್ ಶರು ಎಲ್ಲೊ?, ಕೇಳ್ದೆ ಅಂತ ಹೇಳು. ನಾ ಹೊರಡ್ತೀನಿ” ಅಂತ ಬ್ಯಾಗಿನಿಂದೊಂದು ಹೊಟ್ಟೆ ಉಬ್ಬಿಸಿ ನಗುತ್ತಿರುವ’ಹ್ಯಾಪಿ ಮ್ಯಾನ್’ ತೆಗೆದು ಅವನ ಕೈಗಿತ್ತಳು. ಪರಸ್ಪರ ಕೈ ಕೈ ಹಿಡಿದು ಕೊನೆಯದಾಗಿ ಆ ಪಾರ್ಕಿನ ಮೆಟ್ಟಿಲಿಳಿದರು. ಮತ್ತೊಮ್ಮೆ ಆತ್ಮೀಯ ನೋಟದೊಂದಿಗೆ ಆ ರಸ್ತೆಯಲ್ಲಿ ಪರಸ್ಪರ ವಿರುದ್ಧವಾಗಿ ನಡೆದರು. ಮೇಲೆ ಮೋಡ ಕವಿದಿತ್ತು.
ಈಗ ಐದು ವರ್ಷ ಕಳೆದಿದೆ. ಸುಧೀರ್ಗ ಅವಧಿಯ ನಂತರ ಅವನು ಮತ್ತದೇ ಪಾರ್ಕಿನಲ್ಲಿ, ಅದೇ ಕಲ್ಲು ಬೆಂಚಿನಲ್ಲಿ ಸ್ನೇಹಿತ ಶರೂ ಜೊತೆ ಕುಳಿತಿದ್ದಾನೆ. “ಹೇಗಿದ್ದವ್ನು ಹೇಗಾದಿದ್ದೀಯೋ ಫ್ರೆಂಡ್, ನೀ ಈ ಊರು ಬಿಟ್ಟೋದ ಮೇಲೆ ನೆನಸ್ಕೊಂಡು ತುಂಬಾ ಬೇಜಾರಾಯ್ತು ಕಣೋ. ನನಗಂತೂ ನನ್ನೂರು ಬಿಡೋಕಾಗ್ಲಿಲ್ಲ. ಈ ಪಾರ್ಕಲ್ಲಿ ಅದೇನು ವಿಶೇಷ ಉಂಟೋ ಗೊತ್ತಿಲ್ಲ. ಪ್ರೀತು ನನ್ನನ್ನ ತಿಂಗ್ಳಿಗೆ ಒಂದ್ಸಾರಿ ಇಲ್ಲಿಗೆ ಎಳ್ಕೊಂಡು ಬಂದೇ ಬರ್ತಾಳೆ. ಅಂದ್ಹಾಗೆ ನಂದೂ ಪ್ರೀತುದು ಲವ್ಮ್ಯಾರೇಜು ಕಣೋ. ಏನೆ ಆಗ್ಲಿ, ನಮ್ಮಿಬ್ರನ್ನ ಪರಿಚಯ ಮಾಡ್ಕೊಟ್ಟ ನೀನೆ ನಮ್ಮ ಮದುವೆಗೆ ಬರ್ಲಿಲ್ಲ. ಪ್ರೀತು ನಿನ್ನನ್ನ ತುಂಬಾ ಮಿಸ್ ಮಾಡ್ಕೊತಿದ್ಲು ಕಣೋ”
ಪಪ್ಪಾ ಎಂದು ಕಿರುಚುತ್ತಾ ಓಡೋಡಿ ಬರುತ್ತಿದ್ದ ಆ ಮಗೂನ ಹಿಡಿಯಲು ಪ್ರೀತು ಓಡಿ ಬರುತ್ತಿದ್ದಳು. ಶರು ಓಡಿ ಹೋಗಿ ಆ ಮುದ್ದು ಪಾಪನ್ನ ಹಿಡಿದು ಹುಲ್ಲು ಹಾಸಿನ ಮೇಲೆ ಉರುಳಾಡೋಕೆ ಶುರುಮಾಡಿದ. ಕಲ್ಲು ಬೆಂಚಲ್ಲಿ ಕುಳಿತು ಮನಸ್ಸ ಕಲ್ಲು ಮಾಡಿದ್ದರೂ ಅವಳನ್ನೊಮ್ಮೆ ಕಂಡಾಗ ಇವನ ಮನಸ್ಸು ಚುರುಗುಟ್ಟಿತು. ಈಗ ಸೀರೆಯಲ್ಲಿ ಮಿಂಚುತ್ತಿದ್ದ ಪ್ರೀತುವನ್ನ ಕಣ್ಣೆತ್ತಿ ನೋಡಿದ್ದನು. ಕೈಯಲ್ಲಿದ್ದ ಚೋಕಾಬಾರ್ ನೆಲಕ್ಕೆ ಬಿದ್ದಿದ್ದರೂ ಅದೇ ನೋಟ ಅವಳಲ್ಲೀಗಲೂ ಕಂಡನು. ಆ ಚೂಪು ನೋಟ ಮನಸ್ಸನ್ನ ಚುಚ್ಚಿತು. ನೋಡಲಾರದೆ ತಲೆ ತಗ್ಗಿಸಿದ. ಅವನ ಕೈಯಲ್ಲಿದ್ದ ‘ಹ್ಯಾಪಿ ಮ್ಯಾನ್’ ನೆಲಕ್ಕೆ ಬಿತ್ತು.
********************

pollsb.com

Read more from ಲೇಖನಗಳು
2 ಟಿಪ್ಪಣಿಗಳು Post a comment
  1. Narendra Shetty's avatar
    Narendra Shetty
    ಜೂನ್ 25 2011

    trikona preeti

    ಉತ್ತರ

Trackbacks & Pingbacks

  1. ಪ್ರೀತು, ಪ್ರೀತಿ ಮತ್ತು ಅವನು… « ಕನವರಿಕೆ

Leave a reply to Narendra Shetty ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments