ವಿಷಯದ ವಿವರಗಳಿಗೆ ದಾಟಿರಿ

ಜೂನ್ 29, 2011

18

ಸರ್ಕಾರಿ ಇಂಗ್ಲಿಶ್ ಶಾಲೆ – ಬೇಲಿಯೇ ಎದ್ದು ಹೊಲವ ಮೇಯ್ದೊಡೆ ಕಾಯುವರಾರು ?

‍ನಿಲುಮೆ ಮೂಲಕ
 –ವಸಂತ್ ಶೆಟ್ಟಿ
ಜನರ ಅಪೇಕ್ಷೆಗಳನ್ನು ಈಡೇರಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಜನರಿಂದ ಬೇಡಿಕೆ ಬಂದ್ರೆ ಆರನೇ ತರಗತಿಯಿಂದ ಎಲ್ಲೆಡೆ ಇಂಗ್ಲಿಶ್ ಮಾಧ್ಯಮದ ಶಾಲೆಗಳನ್ನು ತೆರೆಯಲು ಸರ್ಕಾರ ತಯಾರಾಗಿದೆ ಅನ್ನುವ ಹೇಳಿಕೆಯನ್ನು ಪ್ರಾಥಮಿಕ ಮತ್ತು ಪ್ರೌಡಶಾಲೆ ಸಚಿವರಾದ ಕಾಗೇರಿಯವರು ಹೇಳಿದ್ದು ಮೊನ್ನೆ ಮೊನ್ನೆ ಪತ್ರಿಕೆಗಳಲ್ಲಿ ಕಂಡೆ. ಬೇಲಿಯೇ ಎದ್ದು ಹೊಲವ ಮೇಯೊದು ಅಂದ್ರೆ ಇದೇನಾ ಅನ್ನಿಸ್ತಾ ಇತ್ತು. ಒಂದೆಡೆ ಪಾಲಿಕೆ ವ್ಯಾಪ್ತಿಯ ಕನ್ನಡ ಶಾಲೆಗಳನ್ನು ಸಿ.ಬಿ.ಎಸ್.ಈ ತೆಕ್ಕೆಗೆ ಕೊಡಿಸಿ ತಮ್ಮ ಜನ್ಮ ಪಾವನವಾಯ್ತು ಅನ್ನುವ ಸಚಿವರೊಬ್ಬರು, ಇನ್ನೊಂದೆಡೆ ಜನರ ಅಪೇಕ್ಷೆ ಈಡೇರಿಸಲು ಎಲ್ಲೆಡೆ ಇಂಗ್ಲಿಶ್ ಶಾಲೆಗಳನ್ನು ತೆರೆಯುವುದಾಗಿ ಹೇಳುವ ಈ ಸಚಿವರು. ಇವರ ಹೊಣೆಗಾರಿಕೆ ಇಲ್ಲದ ಈ ನಡೆಗಳು ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಗಟ್ಟಿಯಾದ ಸಮಾಧಿಯೊಂದನ್ನು ಸದ್ದಿಲ್ಲದೇ ಕಟ್ಟುತ್ತಿವೆ ಅನ್ನಬಹುದು.
ಇದೇ ಸಂದರ್ಭದಲ್ಲಿ ತಾಯ್ನುಡಿ ಶಿಕ್ಷಣದ ಬದಲು ಇಂಗ್ಲಿಶ್ ಬೇಕೆನ್ನುವವರ ವಾದವಾದರೂ ಏನು ಅಂದರೆ ನನಗೆ ಕಾಣುವುದು ಕೆಳಗಿನ ಕೆಲವು ಮಾತುಗಳು. ಅವುಗಳಿಗೆ ನನ್ನ ಅನಿಸಿಕೆ ಏನು ಅನ್ನುವುದನ್ನು ಈ ಸಂದರ್ಭದಲ್ಲಿ ಬರೆದಿರುವೆ.
ಕನ್ನಡ ಮಾಧ್ಯಮ ಬೇಕು ಅನ್ನುವವರದ್ದು ಬೂಟಾಟಿಕೆ. ಕನ್ನಡ ಮಾಧ್ಯಮ ಬೇಕು ಅನ್ನುವ ಸಾಹಿತಿಗಳು, ಚಿಂತಕರು, ಕನ್ನಡ ಪರ ಹೋರಾಟಗಾರರು, ರಾಜಕಾರಣಿಗಳು ತಮ್ಮ ಮಕ್ಕಳನ್ನು ಸೇರಿಸುವುದು ಇಂಗ್ಲಿಶ್ ಮಾಧ್ಯಮದ ಸಿ.ಬಿ.ಎಸ್.ಈ/ಐ.ಸಿ.ಎಸ್.ಈ ಶಾಲೆಗಳಿಗೆ, ಆದರೆ ಸಾಮಾನ್ಯ ಜನರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸಬೇಕು. ತಮ್ಮ ಮಕ್ಕಳು ಯಾವ ಮಾಧ್ಯಮದಲ್ಲಿ ಕಲಿಯಬೇಕು ಅನ್ನುವುದನ್ನು ಪಾಲಕರ ನಿರ್ಧಾರಕ್ಕೆ ಬಿಡಿ.  
ಆರು ಕೋಟಿ ಜನರ ಕಲಿಕೆ, ದುಡಿಮೆ ರೂಪಿಸಬೇಕಾದ ಸರ್ಕಾರ ತನ್ನ ನೀತಿ ನಿಯಮಗಳನ್ನು ಯಾವ ಆಧಾರದ ಮೇಲೆ ರೂಪಿಸಬೇಕು? ಯಾರೋ ನಾಲ್ಕು ಜನ ಸಾಹಿತಿಗಳು, ಚಿಂತಕರು ತಮ್ಮ ಮಕ್ಕಳನ್ನು ಇಂಗ್ಲಿಶ್  ಶಾಲೆಗಳಿಗೆ ಕಳಿಸುವುದರ ಆಧಾರದ ಮೇಲೆ ಒಂದು ಸರ್ಕಾರವೇ ನಾಡಿನ ಜನರ ಕಲಿಕೆ ರೂಪಿಸುವ ತನ್ನ ಹೊಣೆಗಾರಿಕೆಯಿಂದಲೇ ನುಣುಚಿಕೊಂಡು, ಜನರಿಂದ ಬೇಡಿಕೆ ಇದೆ ಅನ್ನುವ ಕಾರಣವೊಡ್ಡಿ ಇಂಗ್ಲಿಶ್ ಶಾಲೆಗಳನ್ನು ತೆರೆಯಲು ಹೊರಡುವುದು ಎಷ್ಟು ಸರಿ? ಕರ್ನಾಟಕದಲ್ಲಿ ಇಂದೂ ಸುಮಾರು ನೂರಕ್ಕೆ ೮೩ ಮಕ್ಕಳು ಕನ್ನಡ ಮಾಧ್ಯಮದಲ್ಲೇ ಕಲಿಯುತ್ತಿದ್ದಾರೆ. ಆದರೆ ಅನೇಕರಲ್ಲಿ “ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುವುದರಿಂದ ಉನ್ನತ ಶಿಕ್ಷಣ ಸರಳವಾಗುತ್ತದೆ, ಮಕ್ಕಳು ಬುದ್ಧಿವಂತರಾಗುತ್ತಾರೆ, ಒಳ್ಳೆಯ ಕೆಲಸಗಳು ಸಿಗುತ್ತವೆ” ಎನ್ನುವ ಅನಿಸಿಕೆಯಿದೆ. ಈ ಕಾರಣದಿಂದಾಗಿ ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಸೇರಿಸುವತ್ತ ಒಲವು ತೋರುತ್ತಿದ್ದಾರೆ. ತಾಯಿ ತಂದೆಯರಿಗೆ ತಮ್ಮ ಮಕ್ಕಳ ಕಲಿಕಾ ಮಾಧ್ಯಮವನ್ನು ತೀರ್ಮಾನಿಸುವ ಹಕ್ಕಿದೆ ಎನ್ನುವುದು ಖಂಡಿತಾ ಒಪ್ಪುವಂತಹುದ್ದೇ ಆಗಿದೆ. ಇಂಗ್ಲೀಷ್ ಭಾಷೆಯಲ್ಲಿನ ಪರಿಣಿತಿ ತಂದುಕೊಡುವ ಲಾಭಕ್ಕೂ, ಇಂಗ್ಲೀಷ್ ಮಾಧ್ಯಮದ ಕಲಿಕೆ ಉಂಟುಮಾಡುವ ನಷ್ಟಕ್ಕೂ ನಡುವಿನ ವ್ಯತ್ಯಾಸವನ್ನು ಅರಿಯದ ಮುಗ್ಧರು ಜನಸಾಮಾನ್ಯರು. ಹಾಗಾಗಿ “ಸಿರಿವಂತರಿಗೆ ಸಿಗುತ್ತಿರುವ ಇಂಗ್ಲೀಷ್ ಮಾಧ್ಯಮದ ಕಲಿಕೆ ಬಡವರಿಗೂ ಸಿಗಲಿ” ಎಂಬ ಬಣ್ಣದ ಮಾತಿನ ಆಕರ್ಷಣೆಗೆ ಸಿಕ್ಕಿಕೊಳ್ಳುವುದು ಸುಲಭವಾಗಿದೆ, ಹಾಗಾಗಿ ಇಂದು “ಕನ್ನಡಪರರು ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮಕ್ಕೆ ಕಳಿಸಿ ನಮ್ಮ ಮಕ್ಕಳನ್ನು ಉದ್ಧಾರವಾಗಲು ಬಿಡುತ್ತಿಲ್ಲ” ಎನ್ನುವ ಘೋಷಣೆ ಸಲೀಸಾಗಿ ನಂಬುವುದು ಕೂಡಾ ಸಹಜ. ಆದರೆ ಸರ್ಕಾರವೊಂದು ನಡೆದುಕೊಳ್ಳುತ್ತಿರುವ ರೀತಿ ಸರಿಯೇ ಎಂಬುದೇ ಇಲ್ಲಿನ ಮುಖ್ಯಪ್ರಶ್ನೆಯಾಗಿದೆ.
ಅಮೇರಿಕದಂತಹ ಮುಕ್ತ ಮಾರುಕಟ್ಟೆಯ ವ್ಯವಸ್ಥೆ ಹೊಂದಿರುವ ದೇಶದಲ್ಲೇ ಶಿಕ್ಷಣ, ಆರೋಗ್ಯ ಸೇವೆಯಂತಹ ಮೂಲಭೂತ ವಿಷಯಗಳು ಈಗಲೂ ಸರ್ಕಾರದ ಕಣ್ಣಂಚಿನಲ್ಲೇ ಇದೆ ಅನ್ನುವುದನ್ನು ಗಮನಿಸಬೇಕಾಗುತ್ತದೆ. ಅಷ್ಟಕ್ಕೂ ಜನ ಮರುಳೋ ಜಾತ್ರೆ ಮರುಳೋ ಅಂಬಂತೆ ಇಂಗ್ಲಿಶ್ ಶಾಲೆಗಳಿಗೆ ಸೇರಿರುವ ಮಕ್ಕಳೆಲ್ಲ ಇಂಗ್ಲಿಶ್ ಕಲಿತು ಜ್ಞಾನ, ವಿಜ್ಞಾನದ ಶಾಖೆಗಳಲ್ಲಿ ಪ್ರಪಂಚವೇ ಬೆರಗಾಗುವಂತಹ ಸಾಧನೆಯೆನಾದರೂ ಮಾಡಿದ್ದಾರಾ? ಕರ್ನಾಟಕದಲ್ಲಿ ಇವತ್ತು ಅನ್ನ ತಿನ್ನುತ್ತಿರುವವರೆಲ್ಲ ಇಂಗ್ಲಿಶಿನಿಂದಲೇ ಅದನ್ನು ಪಡೆಯುತ್ತಿದ್ದಾರಾ? ಎಲ್ಲೋ ಒಂದಿಷ್ಟು ಐಟಿ, ಕಾಲ್ ಸೆಂಟರ್ ನ ಪುಡಿಗಾಸಿನ ಕೆಲವು ಕೆಲಸಗಳ ಲಾಭವಷ್ಟೇ ಆಗುತ್ತಿರುವುದು. ಅಷ್ಟು ಮಾತ್ರದ ಲಾಭಕ್ಕೆ ಎಲ್ಲೆಡೆ ಸರ್ಕಾರವೇ ಮುಂದೆ ನಿಂತು ಇಂಗ್ಲಿಶ್ ಶಾಲೆ ತೆರೆಯುವ ಮಾತು ಸರ್ಕಾರಕ್ಕೆ ಒಂದು ಭಾಶೆಯಾಗಿ ಇಂಗ್ಲಿಶ್ ಕಲಿಸುವುದಕ್ಕೂ, ಇಂಗ್ಲಿಶ್ ಮಾಧ್ಯಮದಲ್ಲೇ ಎಲ್ಲವನ್ನೂ ಮಾಡುತ್ತೇವೆ ಅನ್ನುವುದಕ್ಕೂ ಇರುವ ಅಂತರವಾದರೂ ಅರ್ಥವಾಗಿದೆಯೇ ಅನ್ನುವ ಪ್ರಶ್ನೆ ಹುಟ್ಟು ಹಾಕುತ್ತಿಲ್ವೇ?
ಇಡೀ ರಾಜ್ಯದಲ್ಲಿ ಇಂಗ್ಲಿಶ್ ಮಾದ್ಯಮ ಶಾಲೆ ತೆರೆದರೆ ಕರ್ನಾಟಕ ಖಂಡಿತ ಮುಂದುವರೆಯುತ್ತೆ, ಏಳಿಗೆ ಹೊಂದುತ್ತೆ.
ಕರ್ನಾಟಕದ 83% ಮಕ್ಕಳು  ಇಂದಿಗೂ ಕನ್ನಡ ಮಾಧ್ಯಮದಲ್ಲೇ ಓದುತ್ತಿದ್ದಾರೆ. ಈ ಶಾಲೆಗಳನ್ನೆಲ್ಲ ಮುಚ್ಚಿ ಇಂಗ್ಲಿಶ್ ಶಾಲೆಗಳಾಗಿಸುವುದು ಸಾಧ್ಯವೇ? ಸಾಧ್ಯ ಯಾಕಾಗಲ್ಲ ಅನ್ನುವುದನ್ನು ಮೊದಲಿಗೆ ಅರ್ಥ ಮಾಡಿಕೊಳ್ಳಬೇಕು. 90 ಲಕ್ಷ ವಿದ್ಯಾರ್ಥಿಗಳಿಗೆ ಅವರ ವಾತಾವರಣದಲ್ಲಿ ಇಲ್ಲದ ಇಂಗ್ಲಿಶ್ ನುಡಿಯಲ್ಲಿ, ಅವರೆಲ್ಲ ಇಂಗ್ಲಿಶ್ ನಲ್ಲೇ ಚೆನ್ನಾಗಿ ಪಾಠ ಕೇಳಿ, ಕಲಿತು, ಮನದಟ್ಟು ಮಾಡಿಕೊಳ್ಳಲು ಇಂಗ್ಲಿಶ್ ಅನ್ನು ಅರೆದು ಕುಡಿದಿರುವ, ಅದನ್ನು ಮಕ್ಕಳಿಗೆ ಅಷ್ಟೇ ಪರಿಣಾಮಕಾರಿಯಾಗಿ ಕಲಿಸಬಲ್ಲ ಪರಿಣಿತ ಶಿಕ್ಷಕರು ಬೇಕು. ಪ್ರತಿ ಮೂವತ್ತು ವಿದ್ಯಾರ್ಥಿಗೆ ಒಬ್ಬ ಶಿಕ್ಷಕ ಅಂದರೆ ಕಡಿಮೆ ಅಂದರೂ 3 ಲಕ್ಷ ಜನ ಇಂಗ್ಲಿಶ್ ಬಲ್ಲ ಶಿಕ್ಷಕರು ಬೇಕು. ಹೇಳಿ ಎಲ್ಲಿಂದ ತರೋಣ ಇವರನ್ನೆಲ್ಲ? ಇರುವ ಮಕ್ಕಳಿಗೆ ಕನ್ನಡದಲ್ಲೇ ಪಾಠ ಮಾಡಲು ಶಿಕ್ಷಕರು ಸಿಗುತ್ತಿಲ್ಲ. ಇನ್ನು ಇವರನ್ನೆಲ್ಲಿಂದ ತರೋಣ ? ವಾತಾವರಣದಲ್ಲಿರುವ ಮಕ್ಕಳ, ಶಿಕ್ಷಕರೆಲ್ಲರ ಭಾಷೆಯಾಗಿರುವ ಕನ್ನಡದಲ್ಲಿ ಇಂತಹದೊಂದು ವ್ಯವಸ್ಥೆ ಕಲ್ಪಿಸುವುದು ಸುಲಭವೋ ಅಥವಾ ಇದಾವುದು ಇಲ್ಲದ ಇಂಗ್ಲಿಷ್ ನಲ್ಲೋ? ಹಾಗಿದ್ದರೆ ಇವತ್ತಿರುವ ಕನ್ನಡ ಮಾಧ್ಯಮ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಿ, ಹೆಚ್ಚಿನ ಕಲಿಕೆಯನ್ನು ಅದರಲ್ಲೇ ತರುವ ಪ್ರಯತ್ನಕ್ಕೆ ಹಣ, ಸಂಪನ್ಮೂಲ, ಆದ್ಯತೆ ಕೊಡುವ ಮಾತನ್ನು ಮಾನ್ಯ ಮಂತ್ರಿಗಳು ಆಡಿದ್ದರೆ ಜನರ ಬಗೆಗಿನ ಕಾಳಜಿಯ ಇವರ ಮಾತುಗಳು ನಿಜ ಅನ್ನಿಸುತ್ತಿತ್ತು.
ಕನ್ನಡದಲ್ಲಿ ಎಲ್ಲಿದೆ ವಿಜ್ಞಾನ-ತಂತ್ರಜ್ಞಾನದ ವಿಷ್ಯಗಳ ಪುಸ್ತಕಗಳು. ಉನ್ನತ ಶಿಕ್ಷಣ ಎಲ್ಲಿದೆ?                      
ಇವತ್ತು ಆ ವ್ಯವಸ್ಥೆ ಇಲ್ಲ ಅಂದರೆ ಪರಿಹಾರ, ಅದನ್ನು ಬಿಟ್ಟು ಇನ್ನೊಂದು ವ್ಯವಸ್ಥೆ ಕಟ್ಟುತ್ತೀನಿ ಅಂತ ಹೊರಡೋದಾ ಇಲ್ಲ ಅದರಲ್ಲಿ ಅಂತಹ ಸಾಧ್ಯತೆ ತರುವುದರತ್ತ ಕೆಲಸ ಮಾಡುವುದಾ? ನಿಮ್ಮನೆ ಮಗುವಿಗೆ ಯಾವುದೋ ಒಂದು ಸಾಮರ್ಥ್ಯ ಇವತ್ತಿಲ್ಲ ಅಂದರೆ,ಆ ಮಗುವನ್ನೇ ಕೈ ಬಿಟ್ಟು ಇನ್ನೊಂದು ಮಗುವನ್ನ ಕೊಂಡು ತರ್ತಿರೋ ಇಲ್ಲ ನಿಮ್ಮ ಮಗುವಲ್ಲಿ ಆ ಸಾಮರ್ಥ್ಯ ದೊರಕಿಸಿಕೊಡುವತ್ತ ಕೆಲಸ ಮಾಡುತ್ತಿರೋ? ಒಂದು ಸಮಯಾಧಾರಿತ ಯೋಜನೆ ಹಾಕಿಕೊಂಡು ಜ್ಞಾನ ಶಾಖೆಯ ಎಲ್ಲ ವಿಷಯಗಳನ್ನು ಕನ್ನಡದಲ್ಲಿ ತರುವತ್ತ ಕೆಲಸ ಮಾಡಬೇಕಾದುದು ಇವತ್ತಿನ ಅಗತ್ಯವೇ ಹೊರತು ಕೈ ಚೆಲ್ಲಿ ಎಲ್ಲೆಡೆ ಇಂಗ್ಲಿಶ್ ಶಾಲೆಗಳನ್ನು ತೆರೆಯುವುದಲ್ಲ ಅಲ್ಲವೇ?
ಎಂದಿಗೂ ಹಿಂಪಡೆಯಲಾಗದ ( irreversible) ಬದಲಾವಣೆ !
ಇದೆಲ್ಲ ಒಂದು ತೂಕವಾದರೆ, ಸರ್ಕಾರದ ಇಂತಹ ನಿಲುವೊಂದು ಮುಂದಿನ ದಿನಗಳಲ್ಲಿ ಕನ್ನಡ ಸಮಾಜದ ಮೇಲೆ ಮಾಡಬಹುದಾದ ಪರಿಣಾಮ ಎಂತಹುದು? ಇವತ್ತು ಎಲ್ಲೆಲ್ಲಿ ಕನ್ನಡದ ಬಳಕೆ ಚೆನ್ನಾಗಿ ಆಗುತ್ತಿದೆಯೋ, ಅಲ್ಲೆಲ್ಲ ಒಂದು ಪೀಳಿಗೆಯ ಅವಧಿಯಲ್ಲಿ ಆಗಬಹುದಾದ ಬದಲಾವಣೆಗಳನ್ನು ಊಹಿಸಿದ್ದೀರಾ? ಇಂಗ್ಲಿಶ್ ಮಾದ್ಯಮ ಶಾಲೆಗಳ ಸಂಖ್ಯೆ ಹೆಚ್ಚಿರುವ  ಬೆಂಗಳೂರಿನಲ್ಲಿ ಕನ್ನಡದಲ್ಲಿ ಇಂಗ್ಲಿಶ್ ಬೆರಕೆ, ಕನ್ನಡ ಮಾತನಾಡದಿರುವುದೇ ಪ್ರತಿಷ್ಟೆಯ ಸಂಕೇತ, ಕನ್ನಡದ ಬಗ್ಗೆ ಕೀಳರಿಮೆ ಮುಂತಾದ ಸಮಸ್ಯೆಗಳು ಉಲ್ಬಣಿಸಿವೆ ಅನ್ನುವುದು ಏನನ್ನು ತೋರಿಸುತ್ತಿವೆ? ಇಡೀ ಕರ್ನಾಟಕಕ್ಕೆ ಇಂಗ್ಲಿಶಿನ ವ್ಯವಸ್ಥೆ ತರುವುದು ಎಂದಿಗೂ ಹಿಂಪಡೆಯಲಾಗದ ( irreversible) ಬದಲಾವಣೆಯಾಗಲಿದೆ ಅನ್ನುವುದು ಸರ್ಕಾರದ ಅರಿವಿಗೆ ಬಂದಿದೆಯೇ? ಸಾವಿರಾರು ವರ್ಷಗಳ ಇತಿಹಾಸ, ಹಿರಿಮೆ ಇರುವ ಒಂದು ಜನಜೀವನ ಒಂದೇ ಒಂದು ಪೀಳಿಗೆಯ ಅವಧಿಯಲ್ಲಿ ಹೊಂದಲಿರುವ ಬದಲಾವಣೆ ಎಂತಹುದು ಅನ್ನುವುದರ ಪ್ರಜ್ಞೆ ಸರ್ಕಾರಕ್ಕಿದೆಯೇ?

ಕನ್ನಡ ಶಾಲೆಗಳ ಯಶಸ್ಸೊಂದೇ ಬದಲಾಯಿಸಬಲ್ಲುದು
ತಾಯ್ನುಡಿ ಶಿಕ್ಷಣ ಮಕ್ಕಳ ಬುದ್ದಿ ವಿಕಾಸಕ್ಕೆ ದಾರಿಯೆನ್ನುವುದನ್ನು ಜಗತ್ತಿನ ನೂರಾರು ಚಿಂತಕರು, ವಿಜ್ಞಾನಿಗಳು, ಶಿಕ್ಷಣ ತಜ್ಞರು ಸಾರಿ ಸಾರಿ ಹೇಳುತ್ತಿದ್ದರೂ, ತಾಯ್ನುಡಿ ಶಿಕ್ಷಣದ ವ್ಯವಸ್ಥೆಯಿಂದಲೇ ಇಸ್ರೇಲ್, ಜಪಾನ, ಜರ್ಮನಿ, ಅಮೇರಿಕ, ಇಂಗ್ಲಂಡ್, ಫ್ರಾನ್ಸ್ ನಂತಹ ದೇಶಗಳು ಏಳಿಗೆ ಹೊಂದಿರುವ ಎತ್ತುಗೆ ಕಣ್ ಮುಂದಿದ್ದರೂ, ಅಂತಹದೊಂದು ವ್ಯವಸ್ಥೆ ಕಟ್ಟುವೆಡೆ ಪ್ರಾಮಾಣಿಕವಾಗಿ ಕೆಲಸ ಮಾಡದೇ, ಈ ರೀತಿ ತನ್ನ ಜವಾಬ್ದಾರಿಯಿಂದ ಜಾರಿಕೊಳ್ಳುವ ಸರ್ಕಾರಗಳ ಕಣ್ ತೆರೆಸಲು ಇರುವ ಹಾದಿಯೊಂದೇ.. ಕನ್ನಡ ಮಾದ್ಯಮದಲ್ಲೇ ಎಲ್ಲ ಸವಲತ್ತು, ಸೌಕರ್ಯ, ಹೊಸ ಮಾದರಿಯ ಕಲಿಕೆ ಇರುವ ಖಾಸಗಿ ಶಾಲೆಗಳನ್ನು ಕನ್ನಡಿಗರು ಕಟ್ಟಿ,  ಅಂತಹ ಶಾಲೆಗಳ ಮಕ್ಕಳು ಅದ್ಭುತ ಯಶಸ್ಸು ಸಾಧಿಸಬೇಕು, ಅಂತಹ ಯಶಸ್ಸಿನ ಅಲೆಯೊಂದೇ ಸರ್ಕಾರವನ್ನು ಮತ್ತೆ ಕನ್ನಡ ಮಾಧ್ಯಮದೆಡೆಗೆ ಗಮನ ಹರಿಸುವಂತೆ ಮಾಡಬಹುದೆನೋ..
******************


18 ಟಿಪ್ಪಣಿಗಳು Post a comment
  1. maaysa's avatar
    maaysa
    ಜೂನ್ 29 2011

    This is a good move from the government. The government operates Urdu, Tamil, Telugu, Sindhi, Konkani and Marathi schools.
    What is wrong with starting new English medium schools? Many Kannada medium schools do not have enough students.
    =========================
    ಇದು ಸರ್ಕಾರದ ಒಂದು ಒಳ್ಳೆಯ ನಡೆ . ಸರ್ಕಾರವು ಉರ್ದು, ತಮಿಳು, ತೆಲುಗು, ಸಿಂಧಿ, ಕೊಂಕಣಿ ಮತ್ತು ಮರಾಠಿ ಶಾಲೆಗಳನ್ನು ನಡೆಸುತ್ತಿದೆ.
    ಹೊಸ ಇಂಗ್ಲೀಷ್ ಮಾಧ್ಯಮದ ಶಾಲೆಗಳನ್ನು ಶುರುಮಾಡಿದರೆ ಏನು ತಪ್ಪು? ಅನೇಕ ಕನ್ನಡ ಮಾಧ್ಯಮದ ಶಾಲೆಗಳಿಗೆ ಸಾಕಷ್ಟು ವಿದ್ಯಾರ್ಥಿಗಳು ಇಲ್ಲ.

    ಉತ್ತರ
    • ರವಿ's avatar
      ರವಿ
      ಜೂನ್ 30 2011

      lateral thinking.
      ———————–
      ಪಾರ್ಶ್ವ ಚಿಂತನೆ.
      ———————–
      Pārśva cintane.

      ಉತ್ತರ
      • maaysa's avatar
        maaysa
        ಜೂನ್ 30 2011

        It may be so. But, I think, the awareness about our language safety is needed more. And this action is happened by a democratically elected government.
        ಅದು ಇರಬಹುದು. ಆದರೆ, ನಾನು ಭಾವಿಸುತ್ತೇನೆ, ನಮ್ಮ ಭಾಷೆ ಸುರಕ್ಷತೆಯ ಬಗ್ಗೆ ಜಾಗೃತಿ ಹೆಚ್ಚು ಅಗತ್ಯವಿದೆ. ಈ ಕ್ರಮ ಒಂದು ಪ್ರಜಾಪ್ರಭುತ್ವವಾಗಿ ಚುನಾಯಿತ ಸರ್ಕಾರದಿಂದ ಸಂಭವಿಸಿತು ಎಂದು.

        ಉತ್ತರ
    • ರವಿಕುಮಾರ ಜಿ ಬಿ's avatar
      ರವಿಕುಮಾರ ಜಿ ಬಿ
      ಜುಲೈ 1 2011

      ಸರಿಯಾಗಿ ಹೇಳಿದಿರಿ ಮಾಯ್ಸ ,
      ಮುಕ್ಯವಾಗಿ ಸರ್ಕಾರದ ದೃಷ್ಟಿಕೋನ ಇರಬೇಕಾಗಿದ್ದು ಜನರನ್ನ ಅವರ ಶೈಕ್ಷಣಿಕ ಗುಣಮಟ್ಟವನ್ನ ಹೆಚ್ಚಿಸೋದು.ಆದರೆ ಕನ್ನಡಕ್ಕೆ ಅಪಚಾರವಾಗದಂತೆ ಸ್ವಲ್ಪ ಎಚ್ಚರ ವಹಿಸಿದರೆ ಆಯಿತು ಅಸ್ಟೇ. ಮತ್ತೆ ಸರಕಾರದಿಂದ ಕನ್ನಡದ ಏಳ್ಗೆ ಬಯಸಬಹುದಾದರೂ ಸರಕಾರವೊಂದರಿಂದಲೇ ಅದು ಅಸಾದ್ಯ ,ಅದಕ್ಕೆ ಸಾರ್ವಜನಿಕರ ಸಹಕಾರ ಅತೀ ಅಗತ್ಯ ! ಸಾರ್ವಜನಿಕರೇ ಸಹಕರಿಸದಿದ್ದರೆ ಸರಕಾರ ಏನು ಮಾಡಿದರೂ ನೀರಲ್ಲಿ ಹೋಮ ಮಾಡಿದಂತೆ ಅಲ್ಲವೇ?
      ಉದಾ: ನಮ್ಮ ಗಲ್ಲಿ ಸ್ವಚ್ಚವಾಗಿಲ್ಲ ಅಂತ ಸರಕಾರವನ್ನ ದೂರುತ್ತೇವೆ !!! ಆದರೆ ನಮ್ನಮ್ಮ ಗಲ್ಲಿಗಳನ್ನ ,ಮನೆಗಳನ್ನ ಸ್ವಚ್ಚವಾಗಿಡೋದು ಸಾರ್ವಜನಿಕರ ಕರ್ತವ್ಯ ಅಲ್ಲವೇ? ಹಾಗೆಯೇ ನಮ್ಮದೇ ಕನ್ನಡ ಭಾಷೇಲಿ ಮಾತನಾಡಿ ,ಅದನ್ನ ಸರಿಯಾಗಿ ಬಳಸಿ ಅದನ್ನು ಬೆಳೆಸೋದು ಕೂಡ ನಮ್ಮ ಕರ್ತವ್ಯ ಅಲ್ಲವೇ? ನಾವೇ ಅದನ್ನು ಬಳಸದೆ, ಅದರಲ್ಲಿ ಮಾತನಾಡದೆ ಇನ್ನೊಬ್ಬರತ್ತ ಬೆಟ್ಟು ಮಾಡಿ ತೋರಿಸಿದರೆ ಹೇಗೆ?

      ಉತ್ತರ
      • maaysa's avatar
        maaysa
        ಜುಲೈ 1 2011

        The government does not make medium of English compulsory. But it provides an option.
        ಸರ್ಕಾರ ಇಂಗ್ಲೀಷ್ ಕಡ್ಡಾಯ ಮಾಧ್ಯಮವಾಗಿ ಮಾಡುವುದಿಲ್ಲ. ಆದರೆ ಅದು ಒಂದು ಆಯ್ಕೆಯನ್ನು ಒದಗಿಸುತ್ತದೆ.

        ಉತ್ತರ
      • Priyank's avatar
        Priyank
        ಜುಲೈ 1 2011

        ರವಿ ಕುಮಾರ್ ಅವರೇ,

        ನೀವು ಹೇಳಿದಂತೆ, ಸರ್ಕಾರವು ಜನರ ಕಲಿಕೆಯ ಗುಣಮಟ್ಟ ಹೇಗೆ ಬೆಳೆಸಬೇಕು ಎಂಬುದರ ಬಗ್ಗೆಯೇ ಚಿಂತನೆ ನಡೆಸಬೇಕು.
        ಅಲ್ಲದೇ, ಕೆಲಸವೂ ಮಾಡಬೇಕು.

        ಎಲ್ಲ ಜನರ ಕಲಿಕೆಯ ಗುಣಮಟ್ಟ ಹೆಚ್ಚುವುದು ತಾಯ್ನುಡಿಯ ಕಲಿಕೆಯಿಂದಲೇ, ಎಂಬುದು ಜಗತ್ತು ಕಂಡುಕೊಂಡ ದಿಟ.
        ಈಗ, ಸರ್ಕಾರ ಮಾಡಹೊರಟಿರೋ ಕೆಲಸದಿಂದ, ಕಲಿಕೆಯ ಗುಣಮಟ್ಟ ಬೆಳೆಯುವುದಿಲ್ಲ, ಹಿಂದುಳಿಯುತ್ತದೆ.

        ಉತ್ತರ
  2. Bindu's avatar
    ಜೂನ್ 29 2011

    ಬಡ ವಿಧ್ಯಾರ್ಥಿಗಳಿಗೂ english medium ನಲ್ಲಿ ಓದುವ ಅವಕಾಶ ಸಿಗಬೇಕು. ಹಾಗಾಗಿ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳು ಬಂದರೆ ಖಂಡಿತಾ ವಿದ್ಯಾರ್ಥಿಗಳಿಗೆ ಉಪಯೋಗವಾಗುತ್ತದೆ.

    ಉತ್ತರ
  3. ಶಿಕ್ಷಣದ ಮಾಧ್ಯಮ ಬದಲಾಯಿಸಿದ ಕೂಡಲೇ ಎಲ್ಲವೂ ಬದಲಾಗದು.

    ಉತ್ತರ
  4. Priyank's avatar
    Priyank
    ಜುಲೈ 1 2011

    “ತಾಯ್ನುಡಿಯಲ್ಲಿ ಕಲಿಕೆಯಾಗಲಿ, ಅದು ಮಕ್ಕಳಿಗೆ ಒಳಿತು” ಎಂಬುದನ್ನ ಎಲ್ಲಾ ಕಲಿಕೆಯರಿಗರು ಒಪ್ಪುತ್ತಾರೆ.
    ಯುನೆಸ್ಕೋ ಕೂಡ ಇದನ್ನೇ ಒತ್ತಿ ಹೇಳುತ್ತದೆ.
    ಕನ್ನಡಿಗರು ಕನ್ನಡದಲ್ಲೇ ಹಲವು ವಿಷಯಗಳನ್ನು (ವಿಗ್ನಾನ, ಗಣಿತ, ಎಕನಾಮಿಕ್ಸ್, ರಾಜಕೀಯ) ಕಲಿತರೆ, ವಿಷಯವು ಆಳವಾಗಿ ಅರಿವಾಗುತ್ತದೆ.
    ಹೊಸದು ಎದುರು ಬಂದಾಗ, ಅದನ್ನು ಬಿಡಿಸಿ ಅರ್ತ ಮಾಡಿಕೊಳ್ಳುವ ಶಕ್ತಿಯೂ ಹುಟ್ಟುತ್ತದೆ.

    ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವವರ ಕಲಿಕೆಯ ಗುಣಮಟ್ಟ ಕೆಳಗಿದೆ ಎಂದರೆ, “ಅದಕ್ಕೆ ನಿಜವಾಗಿ ಕಾರಣವೇನು?” ಎಂಬುದನ್ನು ಆಳಕ್ಕೆ ಇಳಿದು ಹುಡುಕಬೇಕಾಗಿದೆ.
    “ಇಂಗ್ಲೀಶ್ ಮಾಧ್ಯಮ ಮಾಡಿಬಿಟ್ಟರೆ, ಗುಣಮಟ್ಟ ಬೆಳೆಯುತ್ತದೆ” ಎಂಬ ನಂಬಿಕೆ ಹುಸಿಯಾದುದು.

    ತಾಯ್ನುಡಿಯಲ್ಲಿ ಕಲಿಕೆಯ ಜೊತೆಗೇ, ಇಂಗ್ಲೀಷನ್ನು ಒಂದು ಬಾಷೆಯಾಗಿ ಚೆನ್ನಾಗಿ ಕಲಿಸುವ ಏರ್ಪಾಡು ಬೇಕಾಗಿದೆ.
    ತಾಯ್ನುಡಿಯಲ್ಲಿ ವಿಷಯಗಳ ಕಲಿಕೆ ಮಾಡಿದ ಮಕ್ಕಳು ವಿಷಯಗಳನ್ನು ಚೆನ್ನಾಗಿ ತಿಳಿದವರಾಗಿರುತ್ತಾರೆ, ಜೊತೆಗೇ, ಇಂಗ್ಲೀಷನ್ನು ಒಂದು ಬಾಷೆಯಾಗಿ ಬಲ್ಲವರಾಗಿರುತ್ತಾರೆ.
    ಇಂತಹ ಏರ್ಪಾಡಿನಿಂದ, ಕನ್ನಡ ನಾಡಿನ ಮಕ್ಕಳ ಆ ಮೂಲಕ ಕನ್ನಡ ನಾಡಿನ ಏಳಿಗೆ ಆಗುವುದು.

    ಉತ್ತರ
    • maaysa's avatar
      maaysa
      ಜುಲೈ 1 2011

      Unesco also says hundred other things about children, women and individual freedom. Where are they ?
      ಯುನೆಸ್ಕೋ ಕೂಡ ಮಕ್ಕಳು, ಮಹಿಳೆಯರು ಮತ್ತು ವೈಯಕ್ತಿಕ ಸ್ವಾತಂತ್ರ್ಯ ನೂರು ಇತರ ವಿಷಯಗಳನ್ನು ಹೇಳುತ್ತದೆ. ಅವು ಎಲ್ಲಿ?

      ಉತ್ತರ
  5. ಆಸು ಹೆಗ್ಡೆ's avatar
    ಜುಲೈ 1 2011

    ಇತರ ಎಲ್ಲಾ ವಿಷಯಗಳಿಗೆ ನೀಡುವಷ್ಟೇ ಸಮಾನ ಪ್ರಾಧಾನ್ಯವನ್ನು ಭಾಷಾ ವಿಷಯಗಳಿಗೊ ನೀಡಬೇಕು. ಯಾವ ಮಾಧ್ಯಮದಲ್ಲಿ ಕಲಿತಿದ್ದೇವೆ ಅನ್ನುವುದಕ್ಕಿಂತಲೂ, ನಮ್ಮ ಭಾಷೆಯ ಅಭ್ಯಾಸ ಯಾವ ಮಟ್ಟದಲ್ಲಿ ಇತ್ತು ಅನ್ನುವುದು ಪ್ರಾಮುಖ್ಯವಾಗುತ್ತದೆ. ಬಾಷಾ ಕಲಿಕೆಯಲ್ಲಿ ಉತ್ತಮ ಗುಣಮಟ್ಟವನ್ನು ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ಮಹತ್ಕಾರ್ಯಗಳು ನಡೆಯಬೇಕಾಗಿದೆ. ಈ ಕಾರ್ಯದಲ್ಲಿ ಭಾಷಾ ಅಧ್ಯಾಪಕರುಗಳ ಜವಾಬ್ದಾರಿ ಪ್ರಾಮುಖ್ಯವಾದುದು. ತಮ್ಮದು ಬರಿಯ ನೌಕರಿಯಾಗಿರದೇ, ಒಂದು ಭಾಷೆಯ ಬೆಳವಣಿಗಾಗಿ ತಾವು ನೀಡುತ್ತಿರುವ ಕೊಡುಗೆ ಎಂದು ಪರಿಗಣಿಸಿ, ತಮ್ಮನ್ನು ತಾವು ಈ ಮಹತ್ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು.

    ಮಾತೃಭಾಷೆಯಾದ ಕನ್ನಡ ಮತ್ತು ವ್ಯಾವಹಾರಿಕವಾಗಿ ಅನಿವಾರ್ಯವಾಗಿರುವ ಆಂಗ್ಲ ಭಾಷೆ ಇವೆರಡರಲ್ಲೂ ಪ್ರೌಢಿಮತೆ ಸಾಧಿಸುವ ಮಕ್ಕಳು ಯಾವ ಮಾಧ್ಯಮದಲ್ಲಿ ಕಲಿತರೂ ಪರವಾಗಿಲ್ಲ. ಮಾಧ್ಯಮದ ಆಯ್ಕೆಯನ್ನು ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಬಿಟ್ಟರೆ ಅನಾಹುತವೇನೂ ಆಗದು. ಆದರೆ ಯಾವುದೇ ಮಾಧ್ಯಮದ ಶಾಲೆಗಳಲ್ಲಿ, ಮಾತೃಭಾಷೆಯನ್ನು ಒಂದು ವಿಷಯವಾಗಿ ಸಮಾನ ಪ್ರಾಧಾನ್ಯ ನೀಡಿ ಕಟ್ಟುನಿಟ್ಟಾಗಿ ಕಲಿಸುವ ಬಗ್ಗೆ ಸರಕಾರ ಕ್ರಮ ತೆಗೆದುಕೊಳ್ಳಬೇಕು. ಈ ವಿಷಯದಲ್ಲಿ ಯಾವುದೇ ರೀತಿಯ ರಿಯಾಯಿತಿ ನೀಡಬಾರದು. ಒಂದು ಭಾಷೆಯ ಕಲಿಯುವಿಕೆಗೆ ಕಲಿಕೆಯ ಮಾಧ್ಯಮ ಅಡ್ಡಿಯಾಗಬಾರದು.

    ಉತ್ತರ
    • Priyank's avatar
      Priyank
      ಜುಲೈ 1 2011

      ಇತರ ಎಲ್ಲಾ ವಿಷಯಗಳಿಗೂ ನೀಡುವಷ್ಟೇ ಹೆಚ್ಚುಗಾರಿಕೆ ಭಾಷಾ ಕಲಿಕೆಗೂ ನೀಡಬೇಕು ಎಂಬ ನಿಮ್ಮ ಮಾತು ಒಪ್ಪುವಂತಾದ್ದೆ.
      “ಮಕ್ಕಳು ಯಾವ ಮಾಧ್ಯಮದಲ್ಲಿ ಕಲಿತರೂ ಪರವಾಗಿಲ್ಲ” ಎಂಬುದು ನಾಡಿನ ಎಲ್ಲ ಮಕ್ಕಳ ಹಿತವನ್ನು ಗಮನದಲ್ಲಿಟ್ಟು ನೋಡಿದಾಗ ‘ಸರಿಯಾದ ನಿಲುವಲ್ಲ’ ಎನಿಸುತ್ತದೆ.
      ಯುನೆಸ್ಕೋ ಅವರ ಒಂದು ರಿಸರ್ಚ್ ಪೇಪರಿನಲ್ಲಿ (http://unesdoc.unesco.org/images/0014/001466/146632e.pdf), ಈ ಮಾತು ಹೇಳಲಾಗುತ್ತೆ: “Instruction through a language that learners do not speak has been called “submersion” (Skutnabb-Kangas 2000) because it is analogous to holding learners under water without teaching them how to swim”.
      ಪರಿಸರದಲ್ಲಿ ಇಲ್ಲದ ಬಾಷೆಯಲ್ಲಿ ಕಲಿಕೆ ನಡೆಸಹೊರಟರೆ, ಮಕ್ಕಳಿಗೆ ಬಲುಕಷ್ಟ. ಬದಲಾಗಿ, ಮಕ್ಕಳಿಗೆ ಈಗಾಗಲೇ ಗೊತ್ತಿರುವ ಬಾಷೆಯಲ್ಲಿ ಕಲಿಕೆ ನಡೆಸುತ್ತ ನಡೆಸುತ್ತಾ, ಇನ್ನೊಂದು ಬಾಷೆಯ ಪರಿಚಯವನ್ನೂ ಮಾಡಿಸುವುದು ಒಳಿತು ಎಂಬುದು ಯುನೆಸ್ಕೋ ಒಪ್ಪುವ, ಬೆಂಬಲಿಸುವ ನಿಲುವಾಗಿದೆ.

      ಉತ್ತರ
  6. ಆಸು ಹೆಗ್ಡೆ's avatar
    ಜುಲೈ 1 2011

    ನನ್ನ ನಿಲುವು “ಸರಿಯಾದ ನಿಲುವಲ್ಲ” ಎಂದು ತಮಗೆ ಅನಿಸಿದ್ದರೆ, ಅದಕ್ಕೆ ನನ್ನ ಅಭ್ಯಂತರ ಇಲ್ಲ.
    ಇಲ್ಲಿನ ಮೂಲ ಬರಹವನ್ನು ಓದಿದಾಗ, ಹಿಂದೊಮ್ಮೆ ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದ ನನ್ನ ಲೇಖನದ (http://athradi.files.wordpress.com/2011/04/110329_page.pdf) ಕೆಲವು ಸಾಲುಗಳನ್ನು ಇಲ್ಲಿ ಪ್ರಕಟಿಸಿ, ನಾನು ನನ್ನ ನಿಲುವನ್ನು ವ್ಯಕ್ತಪಡಿಸಿದ್ದೇನೆ, ಅಷ್ಟೇ.
    ಅನ್ಯರ ನಿಲುವನ್ನು ಖಂಡಿಸುವ ಆವಶ್ಯಕತೆ ನನಗಿಲ್ಲ.
    ನಿಲುಮೆಯಲ್ಲಿ ಎಲ್ಲರ ನಿಲುವಿಗೂ ಸಮಾನ ಅವಕಾಶ ಇದೆ ಎಂದು ನನ್ನ ಅನಿಸಿಕೆ.
    ಅದು ಇಲ್ಲ ಅನ್ನುವುದಾದರೆ, ನನ್ನ ನಿಲುವನ್ನು ನನ್ನಲ್ಲೇ ಇಟ್ಟುಕೊಳ್ಳುತ್ತೇನೆ, ಪರವಾಗಿಲ್ಲ.
    ಯುನೆಸ್ಕೋ ಸಂಸ್ಥೆಯ ಅನಿಸಿಕೆಗಳನ್ನು ನಾನು ಒಪ್ಪಲೇ ಬೇಕೆಂದೇನೂ ಇಲ್ಲ.
    ಏಕೆಂದರೆ ಅದೇ ಸತ್ಯ ಅಥವಾ ಪ್ರಾಯೋಗಿಕವಾಗಿ ಅದೇ ಉತ್ತಮ ಎಂದೂ ಅನ್ನಲಾಗದು.
    ನನ್ನ ಪಾಲಿಗೆ ನಮ್ಮ ಮನೆಯಂಗಳದಲ್ಲಿ ನಾವು ನಡೆಸುವ ಪ್ರಾಯೋಗಿಕ ಪ್ರಯತ್ನಗಳೇ ಉತ್ತಮ.

    ಉತ್ತರ
    • Priyank's avatar
      Priyank
      ಜುಲೈ 1 2011

      ಸುರೇಶ ಹೆಗ್ಡೆ ಅವರೇ,

      ನಿಮ್ಮ ನಿಲುವನ್ನು ಕಂಡಿಸುತ್ತಿಲ್ಲ. ನಿಮ್ಮ ನಿಲುವಿಗೆ ಬರಲು, ನೀವು ಕೆಲವೊಂದು ವಿಷಯಗಳನ್ನು ಯೋಚಿಸಿರುತ್ತೀರಾ ಎಂಬುದು ನನಗೆ ಗೊತ್ತಿದೆ.
      ನಿಮ್ಮ ನಿಲುವನ್ನು ನಿಲುಮೆಯಲಿ ಹಂಚಿಕೊಳ್ಳುವ ಹಕ್ಕು ನಿಮಗೆ, ಮತ್ತು ಆ ಹಕ್ಕನ್ನು ನಾನು ಗೌರವಿಸುತ್ತೀನಿ.

      ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಯುನೆಸ್ಕೋ ಅವರು ಬಂದಿರುವ ಅಬಿಪ್ರಾಯವನ್ನು ನೀವು ಒಪ್ಪಲ್ಲ ಎಂದರೆ, ಅದು ನಿಮಗೆ ಬಿಟ್ಟಿದ್ದು.
      “ಸರಕಾರವು ಯಾವ ರೀತಿಯ ಶಿಕ್ಷಣ ನೀತಿ ಹೊಂದಿರಬೇಕು?” ಎಂಬ ಪ್ರಶ್ನೆಗೆ, ಯುನೆಸ್ಕೋ ಅವರ ನಿಲುವು ತಕ್ಕ ಉತ್ತರಗಳನ್ನ ಕೊಡುತ್ತದೆ.

      ಉತ್ತರ
  7. ವಿಜಯ್ ಪೈ's avatar
    ವಿಜಯ್ ಪೈ
    ಜುಲೈ 1 2011

    ಅಂದ ಹಾಗೆ ಕಾಗೇರಿಯವರ ಮಕ್ಕಳು ಹೋಗುತ್ತಿರುವುದು/ ಹೋಗಿದ್ದು ತಮ್ಮ ಹಳ್ಳಿಯ ಸರಕಾರಿ ಕನ್ನಡ ಮಾಧ್ಯಮ ಶಾಲೆಗೆ..ನಡೆದು ಗದ್ದೆ ಬಯಲನ್ನು ದಾಟಿ. ಅದು ಪಾಲಕರಾಗಿ ಅವರ ಆಯ್ಕೆ.

    ನಾಡೋಜ ಪಾಟೀಲ ಪುಟ್ಟಪ್ಪನರೆಂದರು “ಕುರಿಯ ಕೇಳಿ ಮಸಾಲೆ ಅರಿಯುವುದೆ? ಶಿಕ್ಷಣ ತಜ್ಞರನ್ನು ಕೇಳಿ’ ಎಂದು..ಅದು ಕೂಡ ಸರಿಯೆ..ಆಯ್ಕೆಗೆ ಅವಕಾಶವಿಲ್ಲದಿದ್ದರೆ, ನಾವೆಲ್ಲ ಕುರಿಗಳೆ!.

    ಶಿಕ್ಷಣ ತಜ್ಞರ ಕೆಲಸ ಕಲಿಕೆಯ ಗುಣ-ಅವಗುಣಗಳನ್ನು ಸರ್ಕಾರದ, ಜನರ ಗಮನಕ್ಕೆ ತರುವುದು ಉಳಿದ ಕ್ಷೇತ್ರದಲ್ಲಿರುವ ತಜ್ಞರಂತೆ. ಪಾಲಕರು ತಮ್ಮ, ತಮ್ಮ ಆಯ್ಕೆಯಂತೆ ಮುಂದುವರಿಯಲಿ..ಸರಕಾರ ಅದಕ್ಕೆ ಅವಕಾಶ ಒದಗಿಸಲಿ. ಮಾಧ್ಯಮ ಕನ್ನಡವೆ ಆಗಲಿ, ಆಂಗ್ಲವೇ ಆಗಲಿ.. ಮುಖ್ಯವಾದದ್ದು ಶಿಕ್ಷಣದ ಗುಣಮಟ್ಟ ಸುಧಾರಣೆ ಮತ್ತು ಕಡ್ಡಾಯವಾಗಿ ಅದನ್ನು ಕಾಯ್ದುಕೊಳ್ಳುವಿಕೆ. ಅದು ಈಗಿನ ಅನಿವಾರ್ಯತೆ.

    ಉತ್ತರ
    • Priyank's avatar
      Priyank
      ಜುಲೈ 4 2011

      ವಿಜಯ್ ಪೈ ಅವರೇ,

      ಆಯ್ಕೆಯ ಅವಕಾಶವಿರಲಿ ಎಂದು ನೀವು ಹೇಳುತ್ತಿದ್ದೀರ.
      ಹೌದು, ಜನರಿಗೆ ಆಯ್ಕೆಯ ಅವಕಾಶ ಇರಲೇಬೇಕು.

      ಕರ್ನಾಟಕದಲ್ಲಿ, ಸರ್ಕಾರವು ಯಾವ ಮಾಧ್ಯಮ ಶಾಲೆಗಳನ್ನು ಬೆಳೆಸಬೇಕು ಎಂಬುದು ಜನರೇ ನಿರ್ದಾರ ಮಾಡಲಿ.
      ಅದಕ್ಕೆ ಮುಂಚೆ, “ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಯಾಕೆ ಹಾಳಾಗಿವೆ” ಎಂಬುದರ ಬಗ್ಗೆ ಒಂದು ಅಧ್ಯಯನ ನಡೆದು, ಅದರಿಂದ ಹೊರಬಂದ ಸತ್ಯಗಳು ಜನರ ಮುಂದೆ ಬರಲಿ.
      “ತಾಯ್ನುಡಿಯಲ್ಲಿ ಕಲಿಕೆ ನಡೆಯುವುದು ಸಮಾಜಕ್ಕೆ ಹೇಗೆ ಒಳಿತು” ಎಂಬುದರ ಬಗ್ಗೆ ಜನರೆಲ್ಲರಿಗೆ ತಿಳಿಪಡಿಸುವ ಕೆಲಸವಾಗಲಿ.
      “ಇಂಗ್ಲೀಶ್ ಮಾಧ್ಯಮಗಳನ್ನೇ ಹೊಂದೋದರಿಂದ, ಏನೆಲ್ಲಾ ರೀತಿಯ ತೊಂದರೆಗಳು ಹುಟ್ಟುತ್ತವೆ” ಎಂಬುದೂ ಜನರಿಗೆ ತಿಳಿಯಪಡಿಸಲಿ.

      ಇದೆಲ್ಲಾ ಸತ್ಯಗಳು ಜನರ ಮುಂದೆ ಇದ್ದು, ಆಯ್ಕೆ ನಡೆದರೆ, ಜನರು ತಮಗೆ ಬೇಕಾದ್ದನ್ನೇ ಆರಿಸುತ್ತಾರೆ.

      ಉತ್ತರ
  8. vasant's avatar
    ಜುಲೈ 2 2011

    ಇಡೀ ರಾಜ್ಯದಲ್ಲಿ ಇಂಗ್ಲಿಶ್ ಮಾದ್ಯಮ ಶಾಲೆ ತೆರೆದರೆ ಕರ್ನಾಟಕ ಖಂಡಿತ ಮುಂದುವರೆಯುತ್ತೆ, ಏಳಿಗೆ ಹೊಂದುತ್ತೆ ಅನ್ನೋರು ಅರ್ಥ ಮಾಡಿಕೊಳ್ಳಬೇಕಿರೋದು.. ಅಂತಹದೊಂದು ವ್ಯವಸ್ಥೆ ಕಟ್ಟಲು ಸಾಧ್ಯವೇ? ಕಟ್ಟಿದರೂ ಅದು ಅಂದುಕೊಂಡ ಫಲಿತಾಂಶ ಕೊಡುತ್ತದೆಯೇ ಅನ್ನುವುದನ್ನು. ಕರ್ನಾಟಕದ 83% ಮಕ್ಕಳು ಇಂದಿಗೂ ಕನ್ನಡ ಮಾಧ್ಯಮದಲ್ಲೇ ಓದುತ್ತಿದ್ದಾರೆ. ಈ ಶಾಲೆಗಳನ್ನೆಲ್ಲ ಮುಚ್ಚಿ ಇಂಗ್ಲಿಶ್ ಶಾಲೆಗಳಾಗಿಸುವುದು ಸಾಧ್ಯವೇ? ಸಾಧ್ಯ ಯಾಕಾಗಲ್ಲ ಅನ್ನುವುದನ್ನು ಮೊದಲಿಗೆ ಅರ್ಥ ಮಾಡಿಕೊಳ್ಳಬೇಕು. 90 ಲಕ್ಷ ವಿದ್ಯಾರ್ಥಿಗಳಿಗೆ ಅವರ ವಾತಾವರಣದಲ್ಲಿ ಇಲ್ಲದ ಇಂಗ್ಲಿಶ್ ನುಡಿಯಲ್ಲಿ, ಅವರೆಲ್ಲ ಇಂಗ್ಲಿಶ್ ನಲ್ಲೇ ಚೆನ್ನಾಗಿ ಪಾಠ ಕೇಳಿ, ಕಲಿತು, ಮನದಟ್ಟು ಮಾಡಿಕೊಳ್ಳಲು ಇಂಗ್ಲಿಶ್ ಅನ್ನು ಅರೆದು ಕುಡಿದಿರುವ, ಅದನ್ನು ಮಕ್ಕಳಿಗೆ ಅಷ್ಟೇ ಪರಿಣಾಮಕಾರಿಯಾಗಿ ಕಲಿಸಬಲ್ಲ ಪರಿಣಿತ ಶಿಕ್ಷಕರು ಬೇಕು. ಪ್ರತಿ ಮೂವತ್ತು ವಿದ್ಯಾರ್ಥಿಗೆ ಒಬ್ಬ ಶಿಕ್ಷಕ ಅಂದರೆ ಕಡಿಮೆ ಅಂದರೂ 3 ಲಕ್ಷ ಜನ ಇಂಗ್ಲಿಶ್ ಬಲ್ಲ ಶಿಕ್ಷಕರು ಬೇಕು. ಹೇಳಿ ಎಲ್ಲಿಂದ ತರೋಣ ಇವರನ್ನೆಲ್ಲ? ಇರುವ ಮಕ್ಕಳಿಗೆ ಕನ್ನಡದಲ್ಲೇ ಪಾಠ ಮಾಡಲು ಶಿಕ್ಷಕರು ಸಿಗುತ್ತಿಲ್ಲ. ಇನ್ನು ಇವರನ್ನೆಲ್ಲಿಂದ ತರೋಣ ? ವಾತಾವರಣದಲ್ಲಿರುವ ಮಕ್ಕಳ, ಶಿಕ್ಷಕರೆಲ್ಲರ ಭಾಷೆಯಾಗಿರುವ ಕನ್ನಡದಲ್ಲಿ ಇಂತಹದೊಂದು ವ್ಯವಸ್ಥೆ ಕಲ್ಪಿಸುವುದು ಸುಲಭವೋ ಅಥವಾ ಇದಾವುದು ಇಲ್ಲದ ಇಂಗ್ಲಿಷ್ ನಲ್ಲೋ? ಹಾಗಿದ್ದರೆ ಇವತ್ತಿರುವ ಕನ್ನಡ ಮಾಧ್ಯಮ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಿ, ಹೆಚ್ಚಿನ ಕಲಿಕೆಯನ್ನು ಅದರಲ್ಲೇ ತರುವ ಪ್ರಯತ್ನಕ್ಕೆ ಹಣ, ಸಂಪನ್ಮೂಲ, ಆದ್ಯತೆ ಕೊಡುವ ಮಾತನ್ನು ಮಾನ್ಯ ಮಂತ್ರಿಗಳು ಆಡಿದ್ದರೆ ಜನರ ಬಗೆಗಿನ ಕಾಳಜಿಯ ಇವರ ಮಾತುಗಳು ನಿಜ ಅನ್ನಿಸುತ್ತಿತ್ತು.

    ಉತ್ತರ

Leave a reply to Priyank ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments