ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 3, 2011

“ಕತ್ತ್ಲಲ್ಲಿ ಕರಡೀಗೆ ಜಾಮೂನು ತಿನಿಸೋಕೆ ಯಾವತ್ತು ಹೋಗ್ಬಾರ್ದು ರೀ….”

‍ನಿಲುಮೆ ಮೂಲಕ
-ರಾಕೇಶ್ ಬಿ ಎಚ್

ನಮ್ಮ ದೇಶದಲ್ಲಿ ಪ್ರಶಸ್ತಿಗಳಿಗೆ ಬರ ಅನ್ನೋದೇ ಇಲ್ಲ. ವರ್ಷದಲ್ಲಿ ಏನಿಲ್ಲ ಅಂದರೂನು ದಿನಕ್ಕೊಂದು ಪ್ರಶಸ್ತಿಯನ್ನ ನಮ್ಮ ಘನತೆವೆತ್ತ ರಾಷ್ಟ್ರಾಧ್ಯಕ್ಷರು ನೀಡುತ್ತಲೇ ಇರ್ತಾರೆ. ಅವುಗಳಲ್ಲಿ ಎಷ್ಟು ಪ್ರಶಸ್ತಿಗಳು ಯೋಗ್ಯರಿಗೆ ಹೋಗುತ್ತವೆ ಅನ್ನೋದು ಮಾತ್ರ ನಿಘೂಡ!! ಇದೇ ಕಾರಣಕ್ಕೋ ಏನೋ ನಮ್ಮ ಪತ್ರಿಕೆಗಳು ಯಾರಾದರು ಪ್ರಶಸ್ತಿಗಳಿಗೆ ಭಾಜನರಾದರೆ, “ಶ್ರೀ ಯವರಿಗೆ ದಕ್ಕಿದ ಪ್ರಶಸ್ತಿ”  ಅಂತಾನೋ , ಇಲ್ಲ “ಪ್ರಶಸ್ತಿಯನ್ನ ಗಿಟ್ಟಿಸಿಕೊಂಡ ಶ್ರೀ..” ಅನ್ನೋ ಮುಖಪುಟ ವರದಿಯನ್ನ ಹಾಕ್ತಾರೆ. ನಮ್ಮ ವೈದ್ಯಕೀಯ ಭಾಷೇಲಿ ಹೇಳೋದಾದ್ರೆ ಖಾಯಿಲೆ ಬಿದ್ದ ವ್ಯಕ್ತಿ ಕಷ್ಟ ಪಟ್ಟು ಸ್ವಲ್ಪ ಊಟ ಮಾಡಿ ಅದೇನಾದ್ರೂ ವಾಂತಿ ಆಗ್ಲಿಲ್ಲ ಅಂದ್ರೆ ದಕ್ಕಿಸ್ಕೊಂಡ ಅಂತ ಹೇಳ್ತಿವಿ. ಅಂದ್ರೆ ಕಷ್ಟಪಟ್ಟು ಒಳಗೆ ಹಾಕಿಕೊಳ್ಳೋ ಕ್ರಿಯೆ. ಅದೇ ರೀತಿ ಗಿಟ್ಟಿಸಿಕೊಳ್ಳೋದು ಅನ್ನೋದು ಕೂಡ self explanatory  ಪದ. ಹೀಗೆ ನೈತಿಕತೆಯಿಲ್ಲದ ಪ್ರಶಸ್ತಿಗಳ ಮಧ್ಯೆ ನಮ್ಮ ಭಾರತೀಯ ಮಿಲಿಟರಿ ಕೊಡುವ ”ಶೌರ್ಯ ಚಕ್ರ” ಪ್ರಶಸ್ತಿ ಭಿನ್ನವಾಗಿ ನಿಲ್ಲುತ್ತೆ. ಪ್ರಶಸ್ತಿಯ ಮಾನದಂಡವು ಕೂಡ ಅಷ್ಟೇ, ವೈರಿಯ ಜೊತೆ ನೇರವಾಗಿ ಅಲ್ಲದಿದ್ದರೂ, ಧೈರ್ಯ ಸಾಹಸದಿಂದ ಮಾಡುವಂತ self sacrifice ಗೆ ಈ ಪ್ರಶಸ್ತಿ ಮೀಸಲು. ತನ್ನ ಜೀವವನ್ನು ಲೆಕ್ಕಿಸದೆ ಭಯೋತ್ಪಾದಕರನ್ನ ಹೊಡೆದು ಹಾಕಿದ ಕಾಶ್ಮೀರದ ಕನ್ಯೆ ನಮ್ಮ ಕಣ್ಣ ಮುಂದೆ ನಿಲ್ಲೋದು ಈ ಪ್ರಶಸ್ತಿಯ ದೆಸೆಯಿಂದಲೇ. ಅಂತಹ ಎಷ್ಟೋ ವ್ಯಕ್ತಿಗಳನ್ನ ನಾವು ವೈಯಕ್ತಿಕವಾಗಿ ಭೇಟಿ ಮಾಡೋದು ಸಾಧ್ಯವೇ ಇಲ್ಲ. ಅವರುಗಳ ಕಥೆ ಕೇಳಿ ಹೆಮ್ಮೆ ಪಡೋದೇ ದೊಡ್ಡ ವಿಷಯ ಅನ್ಸುತ್ತೆ. ಆದರೆ ಈ ವ್ಯಕ್ತಿಗಳನ್ನ ಇದ್ದಕ್ಕಿದ್ದಂಗೆ ನೆನೆಯೋಕೆ ಕಾರಣ, ಆ ರೀತಿಯ ವ್ಯಕ್ತಿಯೋರ್ವನನ್ನ ನೋಡಿ, ಮಾತಾಡಿಸಿ, ಅವನ ಕಥೆ ಕೇಳಿ ಬೆಚ್ಚಿ ಬೀಳೋ ಪ್ರಸಂಗ ಬಂದಾಗ. ಆ ವ್ಯಕ್ತಿ ನಮ್ಮ ಆಸ್ಪತ್ರೆಯ ಕಥನಗಳ ಒಂದು ಪುಟ. ಅವನ ಪದಗಳಲ್ಲೇ ನನಗೆ ಕಥೆಯನ್ನ ವಿವರಿಸಿದ ಚಿತ್ರಣವನ್ನ ನಿಮಗೆ ಕಟ್ಟಿ ಕೊಡುವ ಪ್ರಯತ್ನ ಮಾಡ್ತೀನಿ. 
“ಅದು ಬೆಳಿಗ್ಗೆ  ಸುಮಾರು 10 :30 ಇರ್ಬೇಕು ಸಾರ್. ಹೊತ್ತಿಗ್ ಮುಂಚೆನೇ ಎದ್ದು ತಿಂಡಿ ತಿನ್ಕಂಡು ಹೊಲದ ಕಡಿಕೆ ಹೋಗಿದ್ದೆ. ನಮ್ದು ಮೆಕ್ಕೆ ಜೋಳದ ಹೊಲ ಸಾರ್, ಚನ್ನಾಗಿ ಬೆಳ್ಕಂಡ್ ಇದ್ದಾವೆ. ಏನಿಲ್ಲ ಅಂದ್ರು ಆರು ಅಡಿ ಅಷ್ಟು ಎತ್ತರ ಇದಾವೆ ಫಸಲು. ಅದರೊಳಗೆ ನಡ್ಕಂಡು ಹೊಯ್ತ ಇದ್ರೆ ಮುಂದೆ ಬರೋರು, ಹಿಂದೆ ಬರೋರು ಯಾರು ಕಾಣಾಕಿಲ್ಲ. ಹೊಲದ ಒಳಗೆ ನಡ್ಕಂಡು ಹೋಗ್ತಾ ಇರ್ಬೇಕಾದ್ರೆ ಎದ್ರುಗಡೆ ಇಂದ ಸರ ಸರ ಸದ್ದು. ಹೆಗ್ಗಣಗಳು ಬಹಳ ಇರದ್ರಿಂದ ಅವೆಲ್ಲ ಮಾಮೂಲು ಅನ್ನೋಹಂಗೆ ನಮಗೆ ಅಭ್ಯಾಸ. ಹಂಗೆ ಮುಂದೆ ಹೊಯ್ತ ಇದ್ದೆ ನೋಡಿ, ಅದೆಲ್ಲಿಂದ ಬಂತೋ ಸಾರ್ ಸೀದಾ ಮೈ ಮೇಲೆ ಎಗರಿ ಹಂಗೆ ನನ್ನನ್ನ ಕೆಳಿಕೆ ಕೆಡವಿ ಕೊಂಡು ಮೇಲೆ ಹತ್ತಿ ನಿಂತು ಬಿಡ್ತು ಸಾರ್. ನನ್ನನ್ನ ನಾನು ಸುಧಾರಿಸ್ಕೊಂಡು ಏನು ಎತ್ತ ಅಂತ ನೋಡೋ ಅಷ್ಟು ಟೈಮ್ ಕೊಡದಂಗೆ ಮೈಮೇಲೆ ಎಗ್ರಿತ್ತು ಸಾರ್. ಆಮೇಲೆ ನೋಡಿದ್ರೆ ಒಂದು ಎಂಟು ಅಡಿ ಎತ್ತರದ ಕರಡಿ ಸಾರ್. ಏನ್ ಮಾಡಿದ್ರು ಬಿಡಿಸ್ಕೊಳ್ಳೋಕೆ ಆಗ್ದಂಗೆ ಪಟ್ಟು ಹಾಕ್ಬಿಟ್ಟಿತ್ತು. ಅದರ ಎರಡೂ ಕೈಯಾಗೆ ನನ್ನ ತಲೆ ಕೂದಲು ಹಿಡ್ಕಂಡು ಕೀಳ್ತಾ ಇದ್ರೆ, ಒಂದು ಕಾಲ್ನ ಹೊಟ್ಟೆ ಮೇಲೆ ಇಟ್ಟಿತ್ತು. ಹಂಗು ಹಿಂಗು ಕೊಸ್ರಾಡ್ಕೊಂಡು ಸ್ವಲ್ಪ ಸಡಿಲ ಮಾಡ್ಕೊಂಡೆ ಸಾರ್. ಯಾವಾಗ್ ನಾನು ಬಿಡಿಸ್ಕೊಳ್ಳೋಕೆ  ನೋಡ್ತಾ ಇದ್ದೀನಿ ಅಂತ ಗೊತ್ತಾಯ್ತೋ ನೋಡಿ, ಹಂಗೆ ನನ್ನ ತೊಡೆಗೆ ಬಾಯಿ ಹಾಕಿ ಕಚ್ಚಿ ಬಿಡ್ತು ಸಾರ್. ಅಬ್ಬ! ಹೇಳಬಾರದು ಸಾರ್. ನೋವು ಅಂದ್ರೆ ಅವರಮ್ಮನ್ ಯಾವ ನನ್ನ ಮಗಂಗೂ ಬೇಡ ಸಾರ್ ಅದು. ನಾನು ಹೊಂಟೆ ಹೋದೆ ಅಂದ್ಕಂಡೆ ಸಾರ್ ಅವಾಗ. ಹಂಗು ಹಿಂಗು ಮಾಡಿ ನನ್ನ ಬಲಗೈನ ನನ್ನ ತೊಡೆ ಹತ್ರ ತಗಂಡು ಹೋಗಿ, ಹೆಬ್ಬೆಟ್ನ ಅದ್ರ ಬಾಯೊಳಗೆ ಇಟ್ಟೆ. ಸ್ವಲ್ಪ grip ತಗಂಡು ನನ್ನ ಎರಡೂ ಕಾಲ್ನ ಎತ್ತಿ ಅದ್ರ ಎದೆಗೆ ಜಾಡ್ಸಿ ಒದ್ದೆ ನೋಡಿ ಸಾರ್. ಸ್ವಲ್ಪ ಹಂಗೆ ಹಿಂದಕ್ಕೆ ಸರ್ಕಂತು. ಸಿಕ್ಕಿದೆ ಟೈಮು ಅಂತ ಅದ್ರ ಬಾಯೊಳಗೆ ಹಾಕಿದ್ದ ಬೆಟ್ತ್ನ ಇನ್ನ ಒಳಗೆ ಹಾಕಿ ಕೈಯಿಂದ ಅದ್ರ ಮುಖನ ಹಿಂದೆ ತಳ್ಳಿದೆ ಸಾರ್. ಆಗ ತೊಡೆಗೆ ಹಾಕಿದ ಬಾಯಿ ಬಿಡ್ತು. ಇನ್ನೊಂದ್ ಸಲ ಜಾಡ್ಸಿ ಒದ್ದ ಮೇಲೆ ಹಿಂದೆ ಹೋಗಿದ್ದು, ಅದೇನ್ ಅನ್ನಿಸ್ತೋ ಏನೋ ಬಿಟ್ಟು ಓಡಿ ಹೋತು ಸಾರ್. ಅದೃಷ್ಟ ಇತ್ತು ಸಾರ್, ಇಲ್ಲ ಅಂದ್ರೆ ಅದು ನನ್ನ ಕೊಂದಾಕಿ ಹೋಗಿದ್ರುನು ನಮ್ಮ ಊರೊರಿಗೆ ಇಲ್ಲ ಮನೆವ್ರಿಗೆ ತಿಳಿಯೋಕೆ ಮೂರು ಇಲ್ಲ ನಾಕು ದಿನ ಆಗೋದು. ಜೋಳ ನೋಡಿ, ಅಷ್ಟು ಎತ್ತರ ಬೇರೆ ಇರೋದ್ರಿಂದ ವಾಸನೆ ಬಂದ ಮೇಲೇನೆ ತಿಳಿಯೋದು ಜನಕ್ಕೆ. ಅದೇನೋ ಸಾರ್, ಬಿಡಿಸ್ಕೊಂಡು ಬಂದು ನಿಮ್ ಮುಂದೆ ಕುಂತಿದ್ದಿನಿ ನೋಡಿ ಸಾರ್.”
ಅವನ ಗಾಯಗಳಿಗೆ ಡ್ರೆಸ್ಸಿಂಗ್ ಮಾಡ್ತಾ ಇದ್ದ ನನ್ನ ಕೈಗಳು ತಾವಾಗೆ ತಮ್ಮ ವೇಗವನ್ನ ಕಡಿಮೆ ಮಾಡಿದ್ವು. ಅವನ ಕಥೆ ಕೇಳಿ ಎರಡು ನಿಮಿಷ ಏನು ಪ್ರತಿಕ್ರಿಯೆ ನೀಡಬೇಕು ಅನ್ನೋದೇ ತೋಚಲಿಲ್ಲ. ಯಾಕಂದ್ರೆ ಮೈಸೂರು zoo ನಲ್ಲಿ ಪಂಜರದ ಹಿಂದೆ ಪ್ರಾಣಿಗಳನ್ನ ನೋಡಿ ಬೆಳೆದ ತಲೆಮಾರು ನಮ್ಮದು. ಅನಿಮಲ್ ಪ್ಲಾನೆಟ್ ಗಳಲ್ಲಿ ಕ್ರೂರವಾಗಿ ವರ್ತಿಸೋ ರೀತಿಯನ್ನ ನೋಡಿ ತಿಳಿದುಕೊಳ್ಳೋ ವ್ಯವಸ್ಥೆ ಇರೋ ಸಮಾಜದ ನಡುವೆ ಇರೋರು ನಾವುಗಳು. ಅಂತಾದ್ದರಲ್ಲಿ ನನ್ನ ಮುಂದೆ ಇರೋ ವ್ಯಕ್ತಿ ಒಂದು ಮೃಗದ ಜೊತೆ ಕಾದಾಡಿ ಬಂದು ಕುಂತಿದ್ದಾನೆ. ಆದರೆ ಅವನು ಆ ಮೃಗವನ್ನ ಗೆದ್ದು ಬಂದ ಸಾಹಸವನ್ನ ಹೇಳೋವಾಗ ಕೊಂಚವೂ ಕೂಡ ಹಮ್ಮು-ಬಿಮ್ಮು ಇಲ್ಲದೆ ಹೇಳಿದ ರೀತಿ ನಿಜಕ್ಕೂ ಮೆಚ್ಚುವಂತಾದ್ದು.
ದಿನಾ ಬೆಳಗ್ಗೆಯಿಂದ ಸಂಜೆ ತನಕ ಕೆಲಸ ಮಾಡಿದಕ್ಕೆ ನಮ್ಮ ಪ್ರಾಣ ತಿಂದುಬಿಟ್ಟ ಮ್ಯಾನೇಜರ್ ಅಂತ ಬೈಯ್ಯೋ ಮುಂಚೆ, ಸಣ್ಣದಾಗಿ ಕಾಯಿಲೆ ಬಿದ್ರೆ ನಂಗೆ ಯಾಕಪ್ಪ ಬಂತು ಅಂತ ಗೋಳಾಡೋ ಮುಂಚೆ, ಜೀವನದಲ್ಲಿ ಅಂದ್ಕೊಂಡಿದ್ದು ಅಂದಕೊಂಡಂಗೆ ಸಿಗ್ಲಿಲ್ಲ ಅಂತ ಜಿಗುಪ್ಸೆ ಪಡೋ ಮುಂಚೆ ನಮ್ಮ ನಡುವೆ ಬಾಳೋ ಈ ರೀತಿ ವ್ಯಕ್ತಿಗಳನ್ನ ನೋಡಿ ಕಲಿಯೋದು ಸಾಕಷ್ಟಿದೆ ಅಲ್ವೇ? ಮೇಲೆ ಹೇಳಿದ ವ್ಯಕ್ತಿ ತರ ಕಾಡಿಗೆ ಹೋಗೋದು ಬೇಡ, ಮನೆಲೇನೆ ರಾತ್ರಿ ಕತ್ತಲಿನಲ್ಲಿ ಬಾತ್ ರೂಂ ಗೆ ಹೋಗೋವಾಗ ಅಚಾನಕ್ ಆಗಿ ಮೈ ಮೇಲೆ ಒಂದು ಇಲಿ ಬಿದ್ರೆ ಹೆಂಗಿರತ್ತೆ ನಮ್ ರಿಯಾಕ್ಶನ್ ಅಲ್ವಾ????
ಕಾಕತಾಳೀಯವೋ ಏನೋ , ಈ ಬ್ಲಾಗ್ ಬರೆಯೋವಾಗ ಯೋಗರಾಜ್ ಭಟ್ಟರು ಬರೆದಿರೋ ಹಾಡನ್ನ ಕೇಳ್ತಾ ಇದ್ದೆ. ಸರಿಯಾಗೇ ಬರೆದಿದ್ದಾರೆ ಅನ್ನಿಸ್ತು “ಕತ್ತ್ಲಲ್ಲಿ ಕರಡೀಗೆ ಜಾಮೂನು ತಿನಿಸೋಕೆ ಯಾವತ್ತು ಹೋಗ್ಬಾರ್ದು ರೀ….”
**************

chitrakrupe: indianetzone.com

Read more from ಲೇಖನಗಳು

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments