ಸಂಸ್ಕೃತಿ ಸಂಕಥನ – ೯
– ರಮಾನಂದ ಐನಕೈ
ವರ್ಶಿಪ್ ಅಂದರೆ ನಮ್ಮ ಪೂಜೆ ಅಲ್ಲ
ಜನಸಾಮಾನ್ಯರ ಮಾತು ಹಾಗಿರಲಿ, ಯಾವುದೇ ಭಾರತೀಯ ತಿಳುವಳಿಕಸ್ತನ ಹತ್ತಿರ ‘ಪೂಜೆ’ ಅಂದರೆ ಏನೆಂದು ಕೇಳಿದರೆ ‘ವರ್ಶಿಪ್’ ಎಂದು ಉತ್ತರ ಕೊಡುತ್ತಾನೆ. ‘ವರ್ಶಿಪ್’ ಅಂದರೆ ಏನೆಂದು ಕೇಳಿದರೆ ‘ಪೂಜೆ’ ಅನ್ನುತ್ತಾನೆ. ಅದು ಸ್ವಾಭಾವಿಕ. ಏಕೆಂದರೆ ನೂರಾರು ವರ್ಷಗಳಿಂದ ನಮ್ಮ ಜ್ಞಾನ ಇಷ್ಟು ಹದಕ್ಕೆ ಬಂದಿದೆ. ಹೆಚ್ಚು ವಾದ ಮಾಡಿದರೆ ನಿಘಂಟು ತೆರೆದು ತೊರಿಸುತ್ತಾರೆ. ಅಲ್ಲಿ ವರ್ಶಿಪ್ ಅಂದರೆ ಅರ್ಚನೆ, ಪೂಜೆ, ಆರಾಧನೆ ಎಂಬಿತ್ಯಾದಿ ಅರ್ಥಗಳಿವೆ. ನಾವಿಲ್ಲಿ ಚರ್ಚಿಸುತ್ತಿರುವುದು ತರ್ಜುಮೆಯ ಕುರಿತಾಗಲ್ಲ ಅಥವಾ ಪದಗಳ ಅರ್ಥ ವ್ಯತ್ಯಾಸಗಳ ಬಗ್ಗೆಯೂ ಅಲ್ಲ. ಇಂಥ ತಪ್ಪು ಗೃಹಿಕೆಗಳು ಒಂದು ಸಂಸ್ಕೃತಿಯ ಮೇಲೆ ಮಾಡುವ ತಪ್ಪು ಪರಿಣಾಮಗಳ ಕುರಿತು.
ಪಾಶ್ಚಾತ್ಯರು ಭಾರತಕ್ಕೆ ಬಂದು ಇಲ್ಲಿನ ಆಚರಣೆಗಳನ್ನು ನೋಡಿ ‘ಭಾರತೀಯರು ವರ್ಶಿಪ್ ಮಾಡುತ್ತಿಲ್ಲ, ಬದಲಾಗಿ ನೂರಾರು ದೇವರುಗಳನ್ನು ಪೂಜೆ ಮಾಡುತ್ತಾರೆ’ ಎಂದು ಗ್ರಹಿಸಿದರೆ ತೊಂದರೆ ಇಲ್ಲವಾಗಿತ್ತು. ಆದರೆ ಅವರು ಭಾರತೀಯರು ತಪ್ಪುತಪ್ಪಾಗಿ ವರ್ಶಿಪ್ ಮಾಡುತ್ತಿದ್ದಾರೆ ಎಂದು ಗ್ರಹಿಸಿದ್ದೇ ಯಡವಟ್ಟಾಗಲು ಕಾರಣ. ಏಕೆಂದರೆ ಮುಂದೆ ಅವರು ಈ ತಪ್ಪು ವರ್ಶಿಪ್ ಸರಿಪಡಿಸಲು ಪ್ರಯತ್ನಿಸಬೇಕಾಯಿತು. ಈ ಪ್ರಯತ್ನವೇ ಭಾರತೀಯ ಸಂಸ್ಕೃತಿಗೆ ಬಡಿದ ಬಾಲಗ್ರಹ ಎಂಬುದು ಬಾಲಗಂಗಾಧರರ ಬರಹಗಳನ್ನು ಓದಿದಾಗ ಅರಿವಾಗುತ್ತದೆ.
ಪೂಜೆ ಅಂದರೆ ವರ್ಶಿಪ್ ಅಲ್ಲ. ಇವೆರಡೂ ಆರಾಧನೆ ಎಂಬುದು ನಿಜ. ಆದರೆ ಇವುಗಳ ಹಿಂದಿನ ಉದ್ದೇಶ ಹಾಗೂ ಶರತ್ತುಗಳಲ್ಲಿ ವ್ಯತ್ಯಾಸವಿದೆ. ಪೂಜೆ ಮಾಡಲು ನಿರ್ದಿಷ್ಟವಾದ ಕಾರಣಗಳು ಬೇಕೆಂದೇನಿಲ್ಲ. ಭಾರತದಲ್ಲಿ ಪೂಜೆ ಮಾಡುವ ಯಾರನ್ನೇ ನೀವು ವಿಚಾರಿಸಿ, ಅವರ ಪೂಜೆಗೆ ನಿರ್ದಿಷ್ಟ ಕಾರಣಗಳು ಇರಲಾರದು. ಅದನ್ನು ಸಾಂಪ್ರದಾಯವಾಗಿಯೇ ಆಚರಿಸಿಕೊಂಡು ಬಂದಿರುತ್ತಾರೆ. ಹಾಗಾಗೇ ಈಗಲೂ ಬರೀ ದೇವರುಗಳನ್ನು ಮಾತ್ರವಲ್ಲ ಮರ, ಗಿಡ, ಕಲ್ಲು, ಮಣ್ಣು, ಪ್ರಾಣಿ, ನೆಲ, ಜಲ ಎಲ್ಲವನ್ನೂ ನಾವು ಪೂಜಿಸುತ್ತೇವೆ. ಆದರೆ ವರ್ಶಿಪ್ ಹಾಗಲ್ಲ. ಗಾಡ್ನನ್ನು ಮಾತ್ರ ವರ್ಶಿಪ್ ಮಾಡಬೇಕು ಹಾಗೂ ಗಾಡ್ನ ವರ್ಶಿಪ್ ಮಾಡಲು ನಿರ್ದಿಷ್ಟ ಕಾರಣ ಇದೆ. ಆ ಕಾರಣವೆಂದರೆ ಅವನನ್ನು ಮಾತ್ರ ವರ್ಶಿಪ್ ಮಾಡಬೇಕು ಹಾಗೂ ಅವನು ಹೇಳಿದಂತೆ ಮಾತ್ರ ವರ್ಶಿಪ್ ಮಾಡಬೇಕು ಎಂಬ ದೈವಾಜ್ಞೆ. ದೈವವಾಣಿಯಾದ ಪವಿತ್ರ ಗ್ರಂಥಗಳಲ್ಲಿ ಗಾಡ್ ಅದನ್ನು ತಿಳಿಸಿದ್ದಾನೆ. ವರ್ಶಿಪ್ ಅಂದರೆ ಗಾಡ್ನ ಆಜ್ಞೆಗಳಾಗಿವೆ. ಹಾಗಾಗಿ ವರ್ಶಿಪ್ ಹೀಗೆ ಮಾಡಬೇಕೆಂಬ ನಿಯಮ ಹಾಗೂ ಒತ್ತಡ ಇದೆ. ಪೂಜೆ ಮಾಡುವುದು ದೇವರ ಆಜ್ಞೆ ಅಲ್ಲ, ಪೂಜೆ ಮಾಡಲೇಬೇಕು ಅಥವಾ ಹೀಗೇ ಮಾಡಬೇಕೆಂಬ ಒತ್ತಡಗಳೂ ನಮಗಿಲ್ಲ.
ಗಾಡ್ ಮಾತ್ರ ನಿಜವಾದ ದೇವರು. ಆದ್ದರಿಂದ ಗಾಡ್ನನ್ನು ಮಾತ್ರ ವರ್ಶಿಪ್ ಮಾಡಬೇಕೆಂಬ ನಿಬಂಧನೆ ಇದೆ. ಉಳಿದ ದೇವರುಗಳೆಲ್ಲ ಸೈತಾನನ ಪ್ರತಿರೂಪಗಳು. ಉಳಿದ ದೇವರನ್ನು ಆರಾಧಿಸುವುದು ವರ್ಶಿಪ್ ಅನಿಸಲಾರದು. ಏಕೆಂದರೆ ನಿಜವಾದ ವರ್ಶಿಪ್ ಆಗಬೇಕಾದರೆ ಗಾಡ್ನ ಆರಾಧನೆ ಮಾತ್ರವಾಗಿರಬೇಕು. ನಮ್ಮ ವೈವಿಧ್ಯಮಯವಾದ ಪೂಜೆಗಳು ಎಂದಿಗೂ ವರ್ಶಿಪ್ ಆಗಲು ಸಾಧ್ಯವೇ ಇಲ್ಲ.
ಪಾಶ್ಚಾತ್ಯ ನಂಬಿಕೆ ಪ್ರಕಾರ ಈ ಬ್ರಹ್ಮಾಂಡವನ್ನು ಸೃಷ್ಟಿ ಮಾಡಿದವ ಗಾಡ್. ಇಲ್ಲಿ ನಡೆಯುವ ಪ್ರತಿಯೊಂದು ಕ್ರಿಯೆ ಹಾಗೂ ಕ್ರಿಯೆಯ ಹಿಂದಿನ ಉದ್ದೇಶ ಗಾಡ್ನ ಇಚ್ಛೆಯಂತೆ ಇರುತ್ತದೆ. ಇಂಥ ಗಾಡ್ನನ್ನು ಆರಾಧಿಸಿ ನಮ್ಮ ಅನುಭವಕ್ಕೆ ತಂದುಕೊಳ್ಳುವುದೇ ವರ್ಶಿಪ್. ಗಾಡ್ನ ಉದ್ದೇಶಗಳಿಗೆ ಹೊರತಾಗಿ ಬೇರೇನನ್ನೂ ನಾವು ವರ್ಶಿಪ್ ಮಾಡುವಂತಿಲ್ಲ. ಆದರೆ ನಮ್ಮ ಪೂಜೆಗಳು ಹಾಗಲ್ಲ. ಸಾಧ್ಯವಾದರೆ ನಮ್ಮನ್ನು ನಾವು ಮರೆಯುವ ಕ್ರಿಯೆಯೇ ಹೊರತು ದೇವರನ್ನು ಅನುಭವಕ್ಕೆ ತಂದುಕೊಳ್ಳುವುದಲ್ಲ. ಆದ್ದರಿಂದ ವರ್ಶಿಪ್ಗಳಿಗೆ ಇರುವ ಕಠಿಣ ಸವಾಲುಗಳ್ಯಾವವೂ ನಮ್ಮ ಪೂಜೆಗಳಿಗಿಲ್ಲ.
ಸೆಮೆಟಿಕ್ ರಿಲಿಜನ್ಗಳಲ್ಲಿ ಗಾಡ್ನನ್ನು ನಿರ್ದಿಷ್ಟ ಪ್ರಕಾರದಲ್ಲೇ ವರ್ಶಿಪ್ ಮಾಡುವುದೇಕೆಂದರೆ ಹಾಗೆ ಮಾಡಬೇಕೆಂದು ಅವರ ಗಾಡ್ ಅವರಿಗೆ ನಿರ್ಬಂಧವನ್ನು ವಿಧಿಸಿದ್ದಾನೆ. ಆ ರೀತಿಯಲ್ಲಿ ವರ್ಶಿಪ್ ಮಾಡದಿದ್ದರೆ ಅವರು ಶಾಶ್ವತವಾಗಿ ನರಕದಲ್ಲಿ ಕೊಳೆಯುತ್ತಾರೆ. ಅವರ ಪ್ರಕಾರ ಮನುಷ್ಯರು ಭೂಮಿಯ ಮೇಲೆ ಇರುವುದೇ ಗಾಡ್ನನ್ನು ವರ್ಶಿಪ್ ಮಾಡಲಿಕ್ಕೆ. ಅಂದರೆ ವರ್ಶಿಪ್ ಮಾಡಲಿಕ್ಕೆ ಒಂದು ಉದ್ದೇಶ ಹಾಗೂ ಕಾರಣ ಇದೆ. ಅದು ದೈವವಾಣಿಯಲ್ಲಿ ಉಲ್ಲೇಖವಾಗಿದೆ.
ಪೂಜೆ ಅನ್ನುವುದು ಸಂಪ್ರದಾಯ. ಇಂಥದ್ದೇ ದೇವರನ್ನು ಇಂಥದ್ದೇ ರೀತಿಯಲ್ಲಿ ಪೂಜಿಸಬೇಕೆಂಬ ನಿಯಮವಿಲ್ಲ. ಪೂಜಿಸುವ ಹಿಂದೆ ನಿರ್ದಿಷ್ಟ ಕಾರಣಗಳಿಲ್ಲ. ಪೂಜೆಯನ್ನು ವರ್ಣಿಸಲು ನಿಜವಾದ ದೈವವಾಣಿಯಿಲ್ಲ. ನಮ್ಮ ಪೂಜಾ ವಿಧಾನಗಳಲ್ಲಿ ಸಾಕಷ್ಟು ವೈವಿಧ್ಯತೆ ಇದೆ. ನಮ್ಮಲ್ಲಿ ದೇವರು ಎನ್ನುವುದು ಏಕರೂಪಿ ಕಲ್ಪನೆಯಲ್ಲ. ದೇವರನ್ನು ನಾವು ನೂರಾರು ರೀತಿಯಲ್ಲಿ ಕಲ್ಪಿಸಿಕೊಳ್ಳುತ್ತೇವೆ. ಏಕಕಾಲದಲ್ಲಿ ಒಬ್ಬ ವ್ಯಕ್ತಿ ಗಣೇಶನನ್ನು ಪೂಜಿಸುತ್ತಾನೆ ಹಾಗೂ ಹನುಮಂತನನ್ನೂ ಪೂಜಿಸುತ್ತಾನೆ. ಇಲ್ಲಿ ಬದ್ಧತೆಯ ಪ್ರಶ್ನೆ ಎದುರಾಗಲಾರದು. ನಮ್ಮಲ್ಲಿ ಯಾವುದೇ ದೇವರು ತನ್ನನ್ನು ಮಾತ್ರ ಪೂಜೆ ಮಾಡಿ ಎಂಬ ಫರ್ಮಾನ್ ಹೊರಡಿಸಿಲ್ಲ. ಆದ್ದರಿಂದ ನಮ್ಮ ಗಣೇಶ ತನ್ನ ಶಿಷ್ಯನೊಬ್ಬ ಹನುಮಂತನನ್ನೂ ಪೂಜಿಸಿದರೆ ಬೇಸರ ಮಾಡಿಕೊಳ್ಳಲಾರ. ಅಷ್ಟು ವಿಶಾಲ ಮನಸ್ಸಿದೆ ಆತನಿಗೆ. ಹೀಗೆ ಇಬ್ಬರನ್ನೂ ಪೂಜಿಸುವ ಕ್ರಿಯೆ ಪಾಪ ಅಥವಾ ಅನೈತಿಕ ಅನಿಸಿಕೊಳ್ಳಲಾರದು. ವರ್ಶಿಪ್ ಎಂಬುದು ಏಕದೇವನ ಕಲ್ಪನೆ (ಮಾನೋಥೇಯಿಸಂ)ಗೆ ಸಂಬಂಧಪಟ್ಟ ಪರಿಭಾಷೆ, ಆದ್ದರಿಂದಲೇ ಪಾಶ್ಚಾತ್ಯರು ನಮ್ಮನ್ನು ಕುರಿತು ‘ನೀವು ಮೂಢರು, ಅನೈತಿಕರು, ಪಾಪಿಗಳು ಏಕೆಂದರೆ ತಪ್ಪುತಪ್ಪಾಗಿ ವರ್ಶಿಪ್ ಮಾಡುತ್ತಿದ್ದೀರಿ’ ಎಂದು ಬೊಬ್ಬೆ ಹೊಡೆದುಕೊಂಡರೂ ನಾವು ಅವರನ್ನು ಸದಾ ಪೂಜಿಸುತ್ತಲೇ ಬಂದಿದ್ದೇವೆ.
ಪಾಶ್ಚಾತ್ಯರ ಪ್ರಕಾರ ವರ್ಶಿಪ್ ಅಂದರೆ ಮಾಡಲೇಬೇಕಾದ ನೈತಿಕ ಕೆಲಸ. ಆದರೆ ಪ್ರಾಚೀನ ಪೇಗನ್ನರ ಪೂಜೆ ಎಂಬುದು ವರ್ಶಿಪ್ ನ ಯಾವುದೇ ಲಕ್ಷಣಗಳನ್ನು ಹೊಂದಿಲ್ಲ. ಆದ್ದರಿಂದ ಅದು ಅನೈತಿಕ. ಅವರು ಇದೇ ದೃಷ್ಟಿಕೋನದಿಂದ ಭಾರತವನ್ನು ಗ್ರಹಿಸಿದರು. ಮೇಲ್ನೋಟಕ್ಕೆ ವರ್ಶಿಪ್ ಹಾಗೂ ಪೂಜೆಗಳ ಮಧ್ಯೆ ಸಾಮ್ಯತೆ ಕಂಡುಬಂದರೂ ಇವುಗಳ ನಡುವೆ ತಿಳುವಳಿಕೆಯ ದೊಡ್ಡ ಅಂತರಗಳೇ ಇವೆ.
ವರ್ಶಿಪ್ ನ ವ್ಯಾಖ್ಯಾನ ತುಂಬಾ ಬಿಗುವಾಗಿದೆ. ಸೃಷ್ಟಿಕರ್ತನ (ಗಾಡ್ನ) ಉದ್ದೇಶಗಳಲ್ಲಿ ನಂಬಿಕೆ ವಿಶ್ವಾಸ ಹಾಗೂ ಭರವಸೆಯನ್ನಿಟ್ಟು ತಲೆಬಾಗಿ ರಿಲಿಜನ್ನಿನ ವರ್ಣನೆಯನ್ನು ಅನುಭವಿಸುವ ಕ್ರಿಯೆಯೇ ವರ್ಶಿಪ್. ರಿಲಿಜನ್ನಿನ ವರ್ಣನೆ ಅಂದರೆ ಗಾಡ್ ಏನೇನನ್ನು ಹೇಳಿದ್ದಾನೋ ಅವೆಲ್ಲವೂ. ಇದನ್ನು ನೋಡಿದಾಗ ಭಾರತೀಯರಿರಲಿ, ಪಾಶ್ಚಾತ್ಯರಾದರೂ ಸರಿಯಾದ ವರ್ಶಿಪ್ ಮಾಡಿದ್ದಾರೋ ಎಂಬ ಅನುಮಾನ ಎದುರಾಗುತ್ತದೆ. ಅಂದರೆ ಅವರಿಗೆ ವರ್ಶಿಪ್ ಅನ್ನುವುದು ಒಂದು ಬೌದ್ಧಿಕ ಸಂಗತಿ. ಭಾರತೀಯರಿಗೆ ಪೂಜೆ ಅನ್ನುವುದು ಭಾವನಾತ್ಮಕ ಸಂಗತಿ. ಪಾಶ್ಚಾತ್ಯರು ರಿಲಿಜನ್ನನ್ನು ಎಲ್ಲೆಡೆಯಲ್ಲೂ ಇದೆ ಎಂಬುದಾಗಿ ಭಾವಿಸಿಕೊಂಡು ಭಾರತೀಯ ಸಂಸ್ಕೃತಿಯನ್ನು ವೀಕ್ಷಿಸಿದಾಗ ಇಲ್ಲಿನ ಪೂಜೆಗಳು ಅವರಿಗೆ ತಪ್ಪುತಪ್ಪಾದ ವರ್ಶಿಪ್ ನ ಹಾಗೆ ಕಂಡುಬಂತು. ದೇವರ ವಿಚಾರದಲ್ಲಿ ಪಾಶ್ಚಾತ್ಯರ ನಂಬಿಕೆಗೂ ನಮ್ಮ ನಂಬಿಕೆಗೂ ತುಂಬಾ ವ್ಯತ್ಯಾಸವಿದೆ. ಇದರ ಆಧಾರದ ಮೇಲೇ ನಮ್ಮಲ್ಲಿ ರಿಲಿಜನ್ ಇಲ್ಲ ಎಂಬ ಸರಳ ತೀರ್ಮಾನಕ್ಕೆ ಬರಬಹುದು. ಭಾರತೀಯರ ದೇವರ ಕಲ್ಪನೆಯೇ ಬೇರೆ. ನಮ್ಮಲ್ಲಿ ದೇವರ ಕುರಿತಾಗಿ ನೂರಾರು ಕಥೆಗಳಿವೆ. ನೂರಾರು ರೀತಿಯ ನಂಬಿಕೆಗಳು ಹಾಗೂ ಪೂಜಾ ವಿಧಾನಗಳಿವೆ. ಹಾಗಾಗಿ ಇವು ಯಾವತ್ತೂ ಪೂಜೆಗಳೇ ವಿನಾ ತಪ್ಪುತಪ್ಪಾದ ವರ್ಶಿಪ್ ಅಲ್ಲ.
ಹಾಗಾದರೆ ಭಾರತೀಯರಿಗೆ ದೇವರ ಕುರಿತಾಗಿ ಒಂದು ನಿರ್ದಿಷ್ಟವಾದ ನಂಬಿಕೆಯೇ ಇಲ್ಲವೇ? ಇದೆ. ಇವರ ನಂಬಿಕೆಯ ಸ್ವರೂಪವೇ ಬೇರೆ. ಇವರ ನಂಬಿಕೆ ಸಹಿಷ್ಣುತೆಯಿಂದ ಕೂಡಿದೆ. ಯಾವ ದೇವರಾದರೇನು ನೆಮ್ಮದಿ ಮುಖ್ಯ ಎಂಬುದು ನಮ್ಮ ಆಧ್ಯಾತ್ಮ. ಈ ಸಹಿಷ್ಣುತೆಯ ಕಾರಣದಿಂದಲೇ ಇವರು ನೂರಾರು ದೇವರನ್ನು ಪೂಜಿಸುತ್ತಲೂ ವರ್ಶಿಪ್ ಅನ್ನು ಗೌರವಿಸುತ್ತಾರೆ. ಆದರೆ ರಿಲಿಜನ್ ಹೊಂದಿದವರಿಗೆ ಪೂಜೆಯನ್ನು ಗೌರವಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅಸಹಿಷ್ಣುತೆ ರಿಲಿಜನ್ನಿನ ಒಂದು ಲಕ್ಷಣ. ಆದ್ದರಿಂದ ಭಾರತೀಯ ಪೂಜೆಗಳೂ ನಿಜವಾದ ವರ್ಶಿಪ್ ಅಂತ ಅವರಿಗೆ ಅನಿಸಲೇ ಇಲ್ಲ. ಪ್ರಾಚೀನ ಪೇಗನ್ ಪೂಜಾರಿಗಳ ಪೂಜೆಯಂತೆ ಇವರ ಪೂಜೆಯೂ ಅರ್ಥಹೀನ ಎಂದು ಭಾವಿಸಿದರು.
ತೀರ ಸರಳವಾಗಿ ಹೇಳಬಹುದಾದರೆ ನಮ್ಮ ಸಂಪ್ರದಾಯಗಳು ಯಾವುದೇ ಥಿಯಾಲಜಿ ಯಿಂದ ಸೃಷ್ಟಿಯಾದದ್ದಲ್ಲ. ನಮ್ಮ ಸಂಪ್ರದಾಯ ಗಳಿಗೆ ನಿರ್ದಿಷ್ಟ ಗ್ರಂಥಗಳೂ ಇಲ್ಲ. ರಿಲಿಜನ್ನಿನ ಹಾಗೆ ನಮ್ಮ ದೇವರಿಗೆ ಒಂದೇ ಕಥೆಯಿಲ್ಲ. ದೇವರು ಈ ಭೂಮಿಯ ಮೇಲೆ ನಿಜವಾಗಿ ಇದ್ದನೋ ಇಲ್ಲವೋ ಎಂಬುದರ ಕುರಿತಾಗಿಯೂ ನಾವು ತಲೆಕೆಡಿಸಿಕೊಳ್ಳವುದಿಲ್ಲ. ಏಕೆಂದರೆ ಇದೊಂದು ಬಗೆ ಹರಿಯದ ಪ್ರಶ್ನೆ ಎಂಬುದು ಇವರಿಗೆ ತಿಳಿದುಬಿಟ್ಟಿದೆ. ಹಾಗೂ ಈ ಪ್ರಶ್ನೆಯ ಉತ್ತರದಿಂದ ನಮ್ಮ ದಿನನಿತ್ಯದ ಬದುಕು ನಡೆಯ ಲಾರದೆಂಬುದೂ ಇವರಿಗೆ ಗೊತ್ತಿದೆ. ಏಕೆಂದರೆ ಇವರು ಕ್ರಿಯಾಜ್ಞಾನದಲ್ಲಿ ಬದುಕುತ್ತಿರುವವರು. ಹಾಗಾಗಿ ಇವರಿಗೆ ಪೂಜೆ ಅನ್ನುವುದು ನಿತ್ಯ ಕರ್ಮ. ತಲೆಮಾರುಗಳಿಂದ ದಾಟುತ್ತ ಬಂದಿದೆ. ಅದು ಇವರ ವೈಚಾರಿಕ ಸವಾಲು ಆಗಲಾರದು. ತಾವು ಆಚರಿಸುತ್ತಿರುವುದು ಪೂಜೆಯೋ ಅಥವಾ ವಶರ್ಿಪ್ಪೋ ಎಂಬ ಕುತೂಹಲವೂ ಇವರಿಗಿಲ್ಲ. ಆದರೆ ಐರೋಪ್ಯರಿಗೆ ಭಾರತೀಯರ ಪೂಜೆ ವರ್ಶಿಪ್ ಅಲ್ಲ ಎನ್ನುವುದರ ಕುರಿತು ಹಿತಾಸಕ್ತಿ ಇದೆ. ಅವರ ರಿಲಿಜನ್ ಹಾಗೆ ನೋಡುವುದನ್ನು ಕಲಿಸುತ್ತದೆ. ಪೂಜೆಗಳನ್ನು ಅವರು ತಪ್ಪುತಪ್ಪಾದ ವರ್ಶಿಪ್ ಎಂದೇ ನೋಡುತ್ತಾರೆ ವಿನಾ ಅದು ವರ್ಶಿಪ್ ಅಲ್ಲ, ಪೂಜೆ ಎಂದು ಗ್ರಹಿಸಲು ಸಾಧ್ಯವಾಗುವುದಿಲ್ಲ.
ಈ ವಿಷಯವನ್ನು ನಾನು ಏಕೆ ಚರ್ಚಿಸಬೇಕಾಯಿತೆಂಬುದನ್ನು ಈಗ ಹೇಳುತ್ತೇನೆ. ಇತ್ತೀಚೆಗೆ ಸೆಕ್ಯುಲರ್ ಮನಸ್ಸಿನ ಚಿಂತಕ ಸ್ನೇಹಿತರೊಬ್ಬರು ನನ್ನೊಡನೆ ಮಾತನಾಡುತ್ತ ಈ ದೇಶ ಉದ್ಧಾರ ವಾಗಬೇಕಾದರೆ ಇಲ್ಲಿನ ‘ವರ್ಶಿಪ್ ಸಿಸ್ಟಮ್ ಬದಲಾಗಬೇಕು’ ಎಂದರು. ಅವರು ಯಾರಿಗೆ ಹೇಳಿದರು, ಯಾವುದಕ್ಕೆ ವರ್ಶಿಪ್ ಎಂದರು ಎಂಬುದು ನನಗೆ ಗೊತ್ತಾಗಲಿಲ್ಲ. ಹೆಚ್ಚು ವಾದ ಮಾಡಲು ನನ್ನ ಜ್ಞಾನಕ್ಕೆ ಮಿತಿ ಇದೆ. ಕೊನೆಯ ಪಕ್ಷ ಅವರು ಈ ಲೇಖನವನ್ನಾದರೂ ಓದಲಿ ಎಂಬುದೇ ನನ್ನ ಆಶಯ.




