ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 5, 2011

1

ಭೌತಿಕ…ಭೌಗೋಳಿಕ…ಬೌದ್ದಿಕ ಅಸೂಯೆಯ ಕಲಾತ್ಮಕ ಅನಾವರಣ…!

‍ನಿಲುಮೆ ಮೂಲಕ

– ಕುಮಾರ ರೈತ

ಭಾರತ ಮತ್ತು ಚೀನಾ ಸಂಘರ್ಷ ಇಂದು ನೆನ್ನೆಯದಲ್ಲ….ಅದಕ್ಕೆ ಸುದೀರ್ಘ ಇತಿಹಾಸವಿದೆ. ಹಿಂದಿ-ಚೀನಿ ಭಾಯಿ ಭಾಯಿ ಎನ್ನುತ್ತಲೇ ಬೆನ್ನ ಹಿಂದೆ ದ್ರೋಹ ಬಗೆದ ದೇಶವದು. ನಮ್ಮ ದೇಶದ ಗಡಿ ಭಾಗದ ವಿಸ್ತಾರ ಭೂ ಪ್ರದೇಶವನದು ಅಕ್ರಮಿಸಿಕೊಂಡಿದೆ. ಭಾರತೀಯರಿಗೆ ಪುಣ್ಯಸ್ಥಳವಾದ ಮಾನಸ ಗಂಗೋತ್ರಿಗೆ ಹೋಗಬೇಕಾದರೆ ಚೀನಾ ಪರವಾನಗಿ ಪಡೆಯಬೇಕಾದ ದುಸ್ಥಿತಿ ಉಂಟಾಗಿದೆ. ಅದರ ನೆಲದ ದಾಹ ಇನ್ನೂ ಹಿಂಗಿಲ್ಲ. ಈಶಾನ್ಯ ರಾಜ್ಯಗಳ ಗಡಿ ವಿಷಯದಲ್ಲಿ ತಂಟೆ ತೆಗೆಯುತ್ತಲೇ ಇದೆ. ಈ ನಿಟ್ಟಿನಲ್ಲಿಯೇ ಮುಂಜಾಗ್ರತೆಯಿಂದ ಒಂದು ಲಕ್ಷಕ್ಕೂ ಹೆಚ್ಚಿನ ಸೈನಿಕರನ್ನು ಈ ಗಡಿಭಾಗಗಳಲ್ಲಿ ನಿಯೋಜಿಸಲು ಭಾರತ ಸರಕಾರ ನಿರ್ಧರಿಸಿದೆ. ಸ್ನೇಹದ ಮುಖವಾಡ ಧರಿಸಿ ಸಂಚು ರೂಪಿಸಬಹುದಾದ ಚೀನಾಕ್ಕೆ ಭಾರತದ ಮೇಲಿನ ಭೌತಿಕ…ಭೌಗೋಳಿಕ…ಬೌದ್ದಿಕ ಅಸೂಯೆಯನ್ನು ‘ಏಳಮ್ ಅರಿವು’ ಚಿತ್ರ ಕಲಾತ್ಮಕವಾಗಿ ಅನಾವರಣಗೊಳಿಸಿದೆ. ಇದೇ ಈ ಚಿತ್ರದ ಕೇಂದ್ರ ಪ್ರಜ್ಞೆ…! ತಮಿಳಿನ ಏಳಮ್ ಅರಿವು ಎಂದರೆ ಏಳನೇ ಅರಿವು..ಅಥವಾ ಜ್ಞಾನ ಎಂದರ್ಥ..!

ನೆರೆ ದೇಶದ ದ್ವೇಷದ ವಿಷಯವನ್ನು ತೆಗೆದುಕೊಂಡಾಗ ಅದನ್ನು ಹಸಿಹಸಿಯಾಗಿ ನಿರೂಪಿಸಿ ಮೂರನೇ ದರ್ಜೆ ಸಿನಿಮಾ ಮಾಡಿಬಿಡುವ ಸಾಧ್ಯತೆಗಳೆ ಹೆಚ್ಚು. ಆದರೆ ಇಂಥ ಅಪಾಯದಿಂದ ‘ಏಳಮ್ ಅರಿವು’ ಹೊರತಾಗಿದೆ. ಈ ಕಾರಣಕ್ಕಾಗಿಯೂ ಈ ಸಿನಿಮಾ ಪ್ರಸ್ತುತ ಪ್ರಾಮುಖ್ಯತೆ ಪಡೆಯುತ್ತದೆ. ಭಾರತ-ಚೀನಾ ನಡುವೆ ಎರಡು ಸಾವಿರ ವರ್ಷಕ್ಕೂ ಹಿಂದಿನಿಂದಲೂ ವಾಣಿಜ್ಯ ವ್ಯವಹಾರವಿದೆ. ಆದರೆ ಇದಕ್ಕಿಂತಲೂ ಮಿಗಿಲಾಗಿ ಇಲ್ಲಿನ ಶ್ರೀಮಂತ ಬೌದ್ದಿಕತೆ ಮೇಲೆ ಚೀನಾ ಕಣ್ಣಿಟ್ಟಿತ್ತು. ಅಲ್ಲಿಯ ಸಾಮ್ರಾಟರ ನೆರವಿನಿಂದ ಇಲ್ಲಿಗೆ ಪ್ರವಾಸಿಗರಾಗಿ ಬರುತ್ತಿದ್ದವರು  ಇಲ್ಲಿನ ಬಹುಮುಖ್ಯ ವಿಷಯ-ವಿಚಾರ-ವಿಜ್ಞಾನಗಳ ಜ್ಞಾನ ಸಂಗ್ರಹಿಸಿ ಸಾಗಿಸುತ್ತಿದ್ದರು.  ಚೀನಾ ಕುರಿತು ಮಹಾಭಾರತದಲ್ಲಿಯೂ ಉಲ್ಲೇಖಗಳಿವೆ. ಆದರೆ ಇಲ್ಲಿಂದ ಅಲ್ಲಿಗೆ ಯಾರೂ ಪ್ರವಾಸಿಗರಾಗಿ ಹೋದವರಲ್ಲ. ಪ್ರಚಾರಕರಾಗಿ ಹೋದರು. ಬೌದ್ಧ ಧರ್ಮದ ಪ್ರಚಾರವನ್ನು ಅಲ್ಲಿ ಕೈಗೊಂಡರು.

ಚೀನಾದಲ್ಲಿ ಬೌದ್ಧ ಮಹಾಯಾನ ಪಂಥ ಬೆಳೆದಿದೆ. ಇದೇನು ಅಷ್ಟು ಸಲೀಸಾಗಿ..ಸರಳವಾಗಿ ಬೆಳೆಯಲ್ಲಿಲ್ಲ. ಅನೇಕ ಭಾರತೀಯರ ತ್ಯಾಗ-ಬಲಿದಾನ ಸಂದಿದೆ. ಇಂಥವರಲ್ಲಿ ‘ಬೋಧಿಧರ್ಮ’ ಪ್ರಮುಖ. ಈತ ಸಾಮಾನ್ಯ ಪ್ರಚಾರಕನಲ್ಲ. ತಮ್ಮ ಪ್ರಭಾವವನ್ನು ಸಾಗರದಾಚೆಗೂ ವಿಸ್ತರಿಸಿದ್ದ ‘ಪಲ್ಲವ ರಾಜವಂಶ’ದ ಕುಡಿ. ತಮಿಳು ನಾಡಿನ ಇಂದಿನ ಕಾಂಚೀಪುರಂ ಅಂದು ಪಲ್ಲವರ ರಾಜಧಾನಿ. ಆರನೇ ಶತಮಾನ (ಕ್ರಿಸ್ತಶಕ 522) ದಲ್ಲಿ ತನ್ನ ಗುರುವಿನ ಸೂಚನೆಯಂತೆ ಬೋಧಿಧರ್ಮ ಚೀನಾ ಯಾತ್ರೆ ಕೈಗೊಳ್ಳುತ್ತಾನೆ. ಈ ಎಳೆಯನ್ನು ‘ಏಳಮ್ ಅರಿವು’ ಸಿನಿಮಾದಲ್ಲಿ ಪ್ರಬಲವಾಗಿ ಬಳಸಿಕೊಂಡು ಬೆಳೆಸಲಾಗಿದೆ. ಈತನೇ ಚೀನಾ-ಜಪಾನ್-ಕೊರಿಯಾ ಮುಂತಾದ ದೇಶಗಳಲ್ಲಿ ಪ್ರಬಲವಾಗಿರುವ ‘ಝೆನ್ ಬುದ್ದಿಸಂ’ ಪಂಥದ ಪರಿಸ್ಥಾಪಕ.

ಬೋಧಿಧರ್ಮನ ವ್ಯಕ್ತಿತ್ವವನ್ನು ಹೆಚ್ಚಾಗಿ ತಿಳಿದುಕೊಳ್ಳುವ ಅಗತ್ಯವಿದೆ. ಈತ ಅಪ್ರತಿಮ ಸಮರ ಕಲೆ ಪಟು. ಕೇರಳದಲ್ಲಿ ಇಂದಿಗೂ ಜೀವಂತವಾಗಿರುವ ಸಮರ-ಸ್ವರಕ್ಷಣಾ ಕಲೆ ‘ಕಳರಿಪಯಟ್ಟು’  ಅಪ್ರತಿಮ ಪರಿಣಿತ. ಇದೇ ರೀತಿ ಆಯುರ್ವೇದ ಆರೋಗ್ಯ ವಿಜ್ಞಾನದಲ್ಲಿಯೂ ವಿಶಾರದ. ಈತ ಚೀನಾಕ್ಕೆ ಹೋಗುವ ಮತ್ತೊಂದು ಮಹತ್ವದ ಉದ್ದೇಶವೇನೆಂದರೆ ಅಲ್ಲಿನ ಭಯಾನಕ ಸಾಂಕ್ರಾಮಿಕ ರೋಗವೊಂದು ಭಾರತಕ್ಕೆ ಪಸರಿದಂತೆ ತಡೆಯುವುದು. ಈ ವೈರಸ್ ಕಾಯಿಲೆಯಿಂದಾಗಿ ಅಲ್ಲಿ ಜನ ಹುಳುಗಳೋಪಾದಿಯಲ್ಲಿ ಸಾಯುತ್ತಿರುತ್ತಾರೆ. ಇವರಿಗೆ ಚಿಕಿತ್ಸೆ ನೀಡಿ ಗುಣಪಡಿಸುವ ಬೋಧಿಧರ್ಮ ಚಿಕಿತ್ಸೆಗಾಗಿ ಬಳಸುವ ಗಿಡಮೂಲಿಕೆಗಳ ಬಳಕೆ-ಅದರಿಂದ ಔಷಧಿ ತಯಾರಿಕೆ ಬಗ್ಗೆಯೂ ಅಲ್ಲಿನ ಜನರಿಗೆ ತಿಳಿವಳಿಕೆ ನೀಡುತ್ತಾನೆ.

ಭಯಾನಕ ಕಾಯಿಲೆಗೆ ಮದ್ದು ತಿಳಿದ ಅಲ್ಲಿಯ ಜನರ ಖುಷಿ ಹೆಚ್ಚುದಿನ ಇರುವುದಿಲ್ಲ. ಕೊಳ್ಳೆಕಾರರ ಕಾಟ ಶುರುವಾಗುತ್ತದೆ. ಇಂಥದೊಂದು ಪಡೆಯನ್ನು ಕಳರಿಪಯಟ್ಟು ಮತ್ತು ಸಮ್ಮೋಹಿನಿ ವಿದ್ಯೆ ಮೂಲಕ ಹಿಮ್ಮೆಟ್ಟಿಸುವ ಬೋಧಿಧರ್ಮ ಅಲ್ಲಿಯವರಿಗೆ ಈ ಕಲೆಗಳಲ್ಲಿ ತರಬೇತಿ ನೀಡುತ್ತಾನೆ. ಇಷ್ಟೆಲ್ಲ ಬೆಳವಣಿಗೆ ನಂತರ ಈತನಿಗೆ ತನ್ನ ತವರು ನೆಲಕ್ಕೆ ಮರುಳುವ ಅಪೇಕ್ಷೆ ಉಂಟಾಗುತ್ತದೆ. ಇದನ್ನು ಚೀನಿಗರಿಗೆ ತಿಳಿಸುತ್ತಾನೆ. ಇದರಿಂದ ಅಲ್ಲಿನವರಿಗೆ ಅಸೂಯೆ ಎಡೆಯೆತ್ತುತ್ತದೆ. ಇಂಥ ವ್ಯಕ್ತಿಯನ್ನು ಕೊಂದಾದರೂ ಇಲ್ಲಿ ಉಳಿಸಿಕೊಳ್ಳಬೇಕು. ಇದರಿಂದ ದುಷ್ಟಶಕ್ತಿಗಳು ಸುಳಿಯುವುದಿಲ್ಲ ಎಂಬ ದುರಾಲೋಚನೆಯಿಂದ ವಿಷವಿಕ್ಕಲು ಯೋಜಿಸುತ್ತಾರೆ. ಇದನ್ನು ಅರಿತ ಬೋಧಿಧರ್ಮ ಸಾವನ್ನಪ್ಪಲು ತಾನಾಗಿ ಸಮ್ಮತಿಸುತ್ತಾನೆ. ಈತನ ದೇಹವನ್ನು ಅಲ್ಲಿಯೇ ಸಮಾಧಿ ಮಾಡಲಾಗುತ್ತದೆ. ಇಲ್ಲಿಂದ ಸಿನಿಮಾ ನೇರ ಪ್ರಸ್ತುತ ಆಧುನಿಕ ಘಟ್ಟಕ್ಕೆ ನೆಗೆಯುತ್ತದೆ.

ಪ್ರಭಾವಶಾಲಿಯಾಗಿ ಬೆಳೆಯುತ್ತಿರುವ ಭಾರತದ ಮೇಲೆ ಚೀನಾ ಜೈವಿಕ ಸಮರ ಸಾರಲು ನಿರ್ಧರಿಸುತ್ತದೆ. ಇದಕ್ಕಾಗಿ ಅಲ್ಲಿನ ರಕ್ಷಣಾ ವಿಭಾಗದ ಮುಖ್ಯಸ್ಥ,  ಸಮರ ಕಲೆ ಪಟು ಮತ್ತು ಸಮ್ಮೋಹಿನಿ ವಿದ್ಯೆ ಸಾಧಿಸಿಕೊಂಡ ಚೀನಿಗ ಡಾಂಗ್ ಲೀ ನೇಮಿಸುತ್ತಾನೆ. ಈತ  ‘ಶಾವೋಲಿನ್ ಕುಂಗ್ ಪು’ ಪರಿಣಿತ. ಭಾರತದಲ್ಲಿ ಜೈವಿಕ ವೈರಸ್ ಹರಡುವುದು ಮತ್ತು ಬೋಧಿಧರ್ಮನ ವಂಶಿಗರ ಬಗ್ಗೆ ಸಂಶೋಧನೆ ನಡೆಸುತ್ತಿರುವ ಜೆನೆಟಿಕ್ಸ್ ಸೈನ್ಸ್ ರಿಸರ್ಚರ್ ಶುಭಾ ಶ್ರೀನಿವಾಸನ್ ಹತ್ಯೆ ಮಾಡುವುದು. ಈತನಿಗೆ ವಹಿಸಿದ ಈ ಎರಡೂ ಅಸೈನ್ ಮೆಂಟ್ ಗಳಿಗೆ ಪರಸ್ಪರ ಸಂಬಂಧವಿದೆ.

ಚೀನಾದಲ್ಲಿ ಹೂಳಲಾಗಿದ್ದ ಬೋಧಿಧರ್ಮನ ಸಮಾಧಿಯ ತೆಗೆಯುವ ಅಲ್ಲಿಯ ಜೆನೆಟಿಕ್ಸ್ ವಿಜ್ಞಾನಿಗಳ ತಂಡ ದೊರೆತ ಎಲುಬುಗಳು-ಕೂದಲುಗಳನ್ನು ವಿಶ್ಲೇಷಣೆಗೆ ಒಳಪಡಿಸುತ್ತಾರೆ. ವಂಶವಾಹಿ ತಳಿಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ಈ ಮಾಹಿತಿ ಪಡೆದಿದ್ದ ಶುಭಾ ಶ್ರೀನಿವಾಸನ್ ತಮಿಳುನಾಡಿನಲ್ಲಿ ಬೋಧಿಧರ್ಮ ಇದ್ದ ಪ್ರದೇಶದ ಜನರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸುತ್ತಾಳೆ. ಆದರೆ ಯಾಕೆ ಈ ಸಂಶೋಧನೆ ನಡೆಸುತ್ತಿದ್ದೇನೆ ಎನ್ನುವ ವಿಷಯ ಗೌಪ್ಯವಾಗಿಡುತ್ತಾಳೆ. ಆಗ ಬೋಧಿಧರ್ಮನ ವಂಶಿಗರ ಪತ್ತೆಯಾಗುತ್ತದೆ. ಅವರ ಮನೆಯಲ್ಲಿ ಆಕೆಗೆ ಆಶ್ಚರ್ಯ-ದಿಗ್ಬ್ರಮೆ ಉಂಟಾಗುತ್ತದೆ. ಏಕೆಂದರೆ ಬೋಧಿಧರ್ಮ ಮತ್ತು ಈತನನ್ನು  ಹೋಲುವ ವ್ಯಕ್ತಿಯ ಚಿತ್ರಪಟಗಳನ್ನು  ನೋಡುತ್ತಾಳೆ. ಈ ವ್ಯಕ್ತಿಯೆ ಅರವಿಂದ್. ಈತ ಬಳಸುತ್ತಿದ್ದ ಬಾಚಣಿಗೆ ಕೇಳಿ ಪಡೆದುಕೊಳ್ಳುತ್ತಾಳೆ. ಇದರಲ್ಲಿದ್ದ ಕೂದಲುಗಳನ್ನು ಲ್ಯಾಬಿನಲ್ಲಿ ವಿಶ್ಲೇಷಣೆಗೆ ಒಳಪಡಿಸಿದಾಗ ಆಕೆಗೆ ಮತ್ತೂ ಅಚ್ಚರಿ ಕಾದಿರುತ್ತದೆ. ಬೋಧಿಧರ್ಮನ ವಂಶವಾಹಿ ತಳಿಗಳ ಗುಣಗಳೆಲ್ಲ ಅರವಿಂದ್ ನಲ್ಲಿರುತ್ತದೆ. ಚೆನ್ನೈಯಲ್ಲಿ ಬೀಡುಬಿಟ್ಟಿದ್ದ ಸರ್ಕಸ್ ಕಂಪನಿ ಕಲಾವಿದನಾಗಿದ್ದ ಅರವಿಂದ್ ಬೆನ್ನು ಹತ್ತುತ್ತಾಳೆ. ಈಕೆ ತನ್ನಲ್ಲಿ ತೋರುವ ಆಸಕ್ತಿಯನ್ನೆ ಪ್ರೇಮ ಎಂದುಕೊಳ್ಳುವ ಅರವಿಂದ್ ಈಕೆಯನ್ನು ಗಾಢವಾಗಿ ಪ್ರೀತಿಸತೊಡಗುತ್ತಾನೆ.

ಅತ್ತ ಡಾಂಗ್ ಲೀ ಯಿಂದ ಅನಾಹುತಗಳ ಸರಮಾಲೆಯೇ ಘಟಿಸುತ್ತಾ ಹೋಗುತ್ತದೆ. ಭಯಾನಕ ವೈರಸ್ ಇಲ್ಲಿ ಪಸರಿಸುವುದಕ್ಕೆ ಕಾರಣವಾಗುವ ಈತ ಕೊಲ್ಲುವ ಸಲುವಾಗಿ ಶುಭಾ ಶ್ರೀನಿವಾಸನ್ ಬೆನ್ನು ಹತ್ತುತ್ತಾನೆ. ಈ ಸಂದರ್ಭದಲ್ಲಿ ಆತನ ದ್ವೇಷ ಅರವಿಂದ್ ಕಡೆಗೂ ತಿರುಗುತ್ತದೆ. ಈತನನ್ನೂ ಕೊಲೆ ಮಾಡಲು ನಿರ್ಧರಿಸುತ್ತಾನೆ. ಈ ಪ್ರಯತ್ನಗಳಲ್ಲಿ ಡಾಂಗ್ ಲಿ ಯಶಸ್ವಿಯಾಗದಿರಲು ಕಾರಣಗಳೇನು.. ಬೋಧಿಧರ್ಮನ ವಂಶವಾಹಿ ಗುಣಗಳು ಅರವಿಂದ್ ನಲ್ಲಿ ಸಕ್ರಿಯವಾಯಿತೆ ಎಂಬ ಬೆಳವಣಿಗೆಗಳನ್ನು ವೀಕ್ಷಕ ತುಂಬ ಕುತೂಹಲದಿಂದ ನೋಡುವ ರೀತಿ ಸಿನಿಮಾ ಸಾಗುತ್ತದೆ.

ಬೋಧಿಧರ್ಮನಾಗಿ…ಸರ್ಕಸ್ ಕಲಾವಿದ ಅರವಿಂದ್ ಆಗಿ ಸೂರ್ಯ ಅತ್ಯುತ್ತಮವಾಗಿ ಅಭಿನಹಿಸಿದ್ದಾರೆ. ಪಾತ್ರದ ಓಘದಲಿ ಅವರು ಒಂದಾಗಿ ಹೋಗಿರುವುದು ಅದಕ್ಕಾಗಿಯೇ ವಿಶೇಷವಾಗಿ ಭಾರಿ ಪರಿಶ್ರಮದಿಂದ ಹುರಿಗಟ್ಟಿಸಿಕೊಂಡ ದೇಹದಿಂದ ವ್ಯಕ್ತವಾಗುತ್ತದೆ. ಚೆಲುವೆ ಶೃತಿಹಾಸನ್ ಅಭಿನಯದಲ್ಲಿ ಉತ್ತಮ ಅಂಕಗಳನ್ನೇ ಪಡೆಯುತ್ತಾರೆ. ಚಿತ್ರಕಥೆಯ ಖಳನಾಯಕ ಡಾಂಗ್ ಲಿ ಪಾತ್ರದಲ್ಲಿ ಜಾನಿ ಟ್ರಿ ನುಗ್ವೇನ್ ಮಿಂಚಿದ್ದಾರೆ. ಪೋಷಕ ಪಾತ್ರಗಳು ಪೋಷಣೆಯಿಲ್ಲದೇ ಸೊರಗುವ ಅಪಾಯದಿಂದ ಪಾರಾಗಿವೆ. ಈ ಪಾತ್ರಗಳಲ್ಲಿ ನಟಿಸಿರುವವರು ಕೂಡ ನ್ಯಾಯ ಸಲ್ಲಿಸಿದ್ದಾರೆ.

ಆರಂಭದಿಂದ ಅಂತ್ಯದವರೆಗೂ ಚಿತ್ರ ರಭಸದಿಂದ ಸಾಗುತ್ತದೆ. ಅದರ ಟೆಂಫೋ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ. ಎಲ್ಲಿಯೂ ವೀಕ್ಷಕನಿಗೆ ಬೋರ್ ಹೊಡೆಸದ ನಿರೂಪಣೆ ಧಾಟಿ ಸಿನಿಮಾಕ್ಕೆ ದಕ್ಕಿದೆ. ಇದು ಸಾಧ್ಯವಾಗುವುದಕ್ಕೆ ಸಿನಿಮಾದ ಎಲ್ಲ ವಿಭಾಗಗಳು ಪೂರಕವಾಗಿ ಕೆಲಸ ಮಾಡಿವೆ. ಚೆನ್ನೈಯ ಚಿತ್ರ ನಿರ್ಮಾಣ ಸಂಸ್ಥೆ ರೆಡ್ ಜಾಯಿಂಟ್ ಸಂಸ್ಥೆಯ ಮಾಲೀಕ ಉದಯನಿಧಿ ಸ್ಟಾಲಿನ್ ಬಹಳ ಆಸಕ್ತಿಯಿಂದ ಸುಮಾರು 84 ಕೋಟಿ ರುಪಾಯಿ ಬಂಡವಾಳ ಹಾಕಿರುವ ಈ ಸಿನಿಮಾವನ್ನು ಯುವ ನಿರ್ದೇಶಕ ಎ.ಆರ್.ಮುರುಗದಾಸ್ ಬಹಳ ಸಶಕ್ತವಾಗಿ ನಿರ್ಮಿಸಿದ್ದಾರೆ. ಚಿತ್ರಕಥೆಯೂ ಇವರದೇ. ಚಿತ್ರಕಥೆ ವೇಗಕ್ಕೆ ತಕ್ಕಂತೆ ಕ್ಯಾಮರಾ ಕೆಲಸ ಮಾಡಿದೆ. ಈ ಜವಾಬ್ದಾರಿಯನ್ನು ರವಿ ಕೆ. ಚಂದ್ರನ್ ಸಮರ್ಥವಾಗಿ ನಿಭಾಯಿಸಿದ್ದಾರೆ. ಆಂಟೋನಿ ಸಂಕಲನ ಕೆಲಸವನ್ನು ತುಂಬ ಬಿಗಿಯಾಗಿ-ಅಚ್ಚುಕಟ್ಟಾಗಿ ಮಾಡಿದ್ದಾರೆ. ಹರೀಶ್ ಜಯರಾಜ್ ಸಂಯೋಜಿಸಿದ ಹಿನ್ನೆಲೆ ಸಂಗೀತ ಪರಿಣಾಮಕಾರಿಯಾಗಿದೆ. ಪೀಟರ್ ಹೆನ್ ಸಾಹಸ ನಿರ್ದೇಶನದಲ್ಲಿ ಕುಂಗ್ ಪು ಸಮರ ಕಲೆ ಮೈ ನವಿರೇಳಿಸುವ ಧಾಟಿಯಲ್ಲಿ ಅರಳಿದೆ.
ಜೆನೆಟಿಕ್ಸ್ ಸೈಂಟಿಸ್ಟ್ ಗಳ ಚಿತ್ರಣ ಸಹಜವಾಗಿ ಮೂಡಿಬಂದಿಲ್ಲ. ಇಂಥ ಸಂಶೋಧಕರು ಕಾಲು-ಕೈಗಳಲ್ಲಿ ಉಗುರುಗಳನ್ನು ಬೆಳೆಸಿಕೊಳ್ಳುವುದಿಲ್ಲ. ನೈಲ್ ಪಾಲೀಷ್ ಹಾಕಿಕೊಳ್ಳುವುದಿಲ್ಲ. ಲ್ಯಾಬಿನಲ್ಲಿರುವಾಗ ಮುಡಿ ಬಿಚ್ಚಿಕೊಳ್ಳುವುದಿಲ್ಲ. ಲಿಪ್ ಸ್ಟಿಕ್ ಹಾಕಿರುವುದಿಲ್ಲ. ಕೈಗೆ ಗ್ಲೌಸ್ ಧರಿಸದೇ ಲ್ಯಾಬ್ ನ ಸೂಕ್ಷ್ಮ ಸಾಧನ-ಸಲಕರಣೆಗಳನ್ನಾಗಲಿ..ಸಂಶೋಧನೆಗೆ ಒಳಪಟ್ಟ ವ್ಯಕ್ತಿ-ವಸ್ತುವನ್ನು ಮುಟ್ಟುವುದಿಲ್ಲ. ಆದರೆ ಇಂಥ ಸಹಜತೆಯನ್ನು ನಾಯಕಿ ಒಳಗೊಂಡಂತೆ ಜೆನೆಟಿಕ್ಸ್ ಸೈಂಟಿಸ್ಟ್ ಪಾತ್ರಗಳು ಒಳಗೊಂಡಿಲ್ಲ. ನಿರ್ದೇಶಕ ಇಂಥ ಸೂಕ್ಷ್ಮ ಸಂಗತಿಗಳತ್ತಲೂ ಗಮನ ನೀಡಬೇಕಿತ್ತು.

ಡಾಂಗ್ ಲಿ ಸಮ್ಮೋಹಿನಿ ಮೂಲಕ ಸಾಮಾನ್ಯ ಜನರನ್ನು ಪ್ರಚೋದನೆಗೊಳಿಸುವುದು ತೀರ ಉತ್ಪ್ರೇಕ್ಷೆಯಾಗಿ ಕಾಣುತ್ತದೆ. ಆದರೆ ಇದು ಅಸಾಧ್ಯವಲ್ಲ. ಆದರೆ ಪ್ರಚೋದನೆಗೊಳ್ಳುವ ವ್ಯಕ್ತಿಗಳಿಗೆ ನಿರ್ದಿಷ್ಟ ವ್ಯಕ್ತಿ – ವ್ಯಕ್ತಿಗಳನ್ನು ಅಥವಾ ಅವರ ಚಿತ್ರಗಳನ್ನು ತೋರಿಸುವುದು ಅಗತ್ಯವಾಗುತ್ತದೆ. ಕೆಲವೊಂದು ಸನ್ನಿವೇಶಗಳಲ್ಲಿ ಇಂಥ ಸಹಜತೆ ಕಾಣೆಯಾಗಿದೆ. ಸಮ್ಮೂಹಿನಿಯಲ್ಲಿ ಏಕ ವ್ಯಕ್ತಿ ಸಮ್ಮೋಹಿನಿ-ಸಮೂಹ ಸಮ್ಮೋಹಿನಿ ಮತ್ತು ಸ್ವ ಸಮ್ಮೋಹಿನಿ ಎಂಬ ಪ್ರಕಾರಗಳಿವೆ. ಈ ವಿದ್ಯೆಯ ತವರು ಕೂಡ ಭಾರತವೇ. ಆದರೆ ಈ ಬಗ್ಗೆ ಹೆಚ್ಚು ಸಂಶೋಧನೆ ನಡೆದಿರುವುದು ಮತ್ತು ಪ್ರಗತಿಯಾಗಿರುವುದು ಪಾಶ್ಚಿಮಾತ್ಯ ದೇಶಗಳಲ್ಲಿಯೆ..!

ಪ್ರಸ್ತುತ ಸಂದರ್ಭದಲ್ಲಿ ಎಷ್ಟೆ ಸ್ನೇಹಮಯವಾಗಿ ನಡೆದುಕೊಳ್ಳುತ್ತಿದ್ದರೂ ಭಾರತದ ಮೇಲಿನ ಚೀನಾದ ಅಸೂಯೆ-ಹಗೆತನ  ‘ಏಳಮ್ ಅರಿವು’ ಚಿತ್ರದಲ್ಲಿ ಕಲಾತ್ಮಕವಾಗಿ ಮೂಡಿರುವ ಪರಿ ಅಚ್ಚರಿ ಮೂಡಿಸುತ್ತದೆ.

1 ಟಿಪ್ಪಣಿ Post a comment
  1. ನವೀನ's avatar
    ನವೀನ
    ಆಕ್ಟೋ 9 2013

    ಚಿತ್ರ ವಿಮರ್ಶೆಯ ಜೊತೆಗೆ ಇತಿಹಾಸದ ಬಗ್ಗೆಯೂ ಚೆನ್ನಾಗಿ ಬರೆದಿದ್ದೀರಿ

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments