ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 18, 2011

1

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 11 -ಮದ್ದಿಗೆ ಒದಗಿದ ಸಿದ್ದೌಷದ…..

‍ನಿಲುಮೆ ಮೂಲಕ

ವೆಂಕಟರಮಣ ಭಟ್ಟರನ್ನು ಮೂಡಬಿದರೆಗೆ ಕರೆತರಲು ಜನ ಕಳುಹಿಸಿದೆ. ಅವರು ಬಂದರು.

“ಏನಾಗಬೇಕಿತ್ತು, ಜ್ಞಾನದಾಸಕ್ತನೇ, ಆನು ಬಂದುದರಿಂದ ಆಗಲೇನಿಹುದು?” ಎಂದರು. ಪ್ರಾಸಬದ್ಧವಾಗಿ ಮಾತನಾಡುವುದು ಅವರಿಗೊಂದು ಶ್ರಮದ ಕಾರ್ಯವಲ್ಲ.

ಕಾಗದ ಲೇಖನಿಗಳನ್ನು ಸಿದ್ಧವಾಗಿರಿಸಿಕೊಂಡೇ, ಅವರಲ್ಲಿ ನನ್ನ ಅಗತ್ಯಗಳನ್ನು ವಿವರಿಸಿದೆ.

ಪ್ರಸಂಗ ರಚನೆ

 “ಕಥೆಯನ್ನು ಹೇಳಿ” ಎಂದುದಕ್ಕೆ, ಆ ಕಥೆಯನ್ನು ವಿವರಿಸಿದೆ.
ನನ್ನ ಕಥಾ ವಿವರಣೆ ಒಂದರ್ಧ ಗಂಟೆಯ ಹೊತ್ತು ಮಾತ್ರ ನಡೆದಿರಬಹುದು.

“ಹೂಂ ಬರೆದುಕೊಳ್ಳಿ” ಎಂಬ ಅಪ್ಪಣೆ ಆಯಿತು.

ನಾನು ಬರೆದುಕೊಳ್ಳತೊಡಗಿದೆ.

ಅವರು,
ಶ್ರೀ ಧರ್ಮಸ್ಥಳವಾಸ ಮಿತ್ರ ಘನ ಸಂಕಾಶಾತ್ಮಕಂ ಸುಂದರಂ
ಖೇದಾರಣ್ಯ ದಾವಾಗ್ನಿ ರೂಪ ಭವ ಸಂಹಾರಾದ್ರಿ ಸದ್ಭೂಷಣಮ್
ವೇದಾರಾಧಿತ ಪಾದ ಪದ್ಮಯುಗಳಂ ನಿರ್ಲೇಪನಿಶ್ಚಿಂತಿತಂ
ಶ್ರೀ ಧರ್ಮಪ್ರಿಯ ನಿತ್ಯಮಂಗಳ ನಿರಾಕಾರಂ ಶುಭಾಂಗಂ ಭಜೇ

ಎಂಬ ಪದ್ಯದಿಂದ ಆರಂಭಿಸಿ ಹೇಳುತ್ತಾ ಹೋದರು.

ಮಾಸ್ತರ್ ಭಟ್ಟರ ಆಗಮನದ ವಿಚಾರ ಮಿತ್ರರು ಕೆಲವರಿಗೆ ತಿಳಿಯಿತು. ಅವರೂ ಅಲ್ಲಿ ಬಂದು ಸೇರಿದರು. ಒಬ್ಬಿಬ್ಬರು ನಮ್ಮ ವೇಷಧಾರಿಗಳೂ ಬಂದರು.

ಪದ್ಯಗಳನ್ನು ಅವರು ಹೇಳುತ್ತಾ ಹೋದಂತೆ, ಬರೆದುಕೊಳ್ಳುವ ಕೆಲಸವನ್ನು ನಾನು, ಶ್ರೀ ಕೆ. ರಾಮಚಂದ್ರ ಬಲ್ಯಾಯರು, ಶ್ರೀ ಕೆ. ಸುಬ್ಬಣ್ಣ ಭಟ್ಟರು ಮತ್ತು ಇನ್ನೊಬ್ಬರು ಮಿತ್ರರು ಒಬ್ಬರ ಹಿಂದೊಬ್ಬರಂತೆ ಮಾಡಿ ಮುಗಿಸಿಕೊಂಡೆವು.

ಎರಡೇ ದಿನಗಳಲ್ಲಿ ಪ್ರಸಂಗ ರಚನೆ ಪೂರ್ಣವಾಯಿತು. ಬರೆದು ಬರೆದು ನಮ್ಮ ಕೈಗಳು ಸೋತಿದ್ದುವಷ್ಟೆ; ಕವಿಯ ಬಾಯಿಯನ್ನು ಸೋಲಿಸಲಾಗಲಿಲ್ಲ.

ಹಾಗೆ ಸೃಷ್ಟಿಯಾದ “ಬ್ರಹ್ಮ ಕಪಾಲ” ಪ್ರಸಂಗವನ್ನು ನಮಗೆ ಇತ್ತವರು ಈಗ ಇಲ್ಲವಾಗಿದ್ದಾರೆ.

ಇತರರ ಮಟ್ಟಿಗೇನಾದರೂ ಆಗಲಿ, ನನಗಂತೂ ಆ ಹಿತ್ತಲ ಗಿಡ ಸಿದ್ಧೌಷಧವನ್ನೇ ಇತ್ತಿತ್ತು.

(ಬಡತನದಲ್ಲೇ ಕೊನೆಗಾಲವನ್ನು ಕಂಡ ಅವರ ಜೀವನವನ್ನು ನೆನೆದಾಗ ಕಂಬನಿ ಮಿಡಿಯುತ್ತದೆ.)

ಅವರು ನಮಗಿತ್ತು ಹೋದ “ಬ್ರಹ್ಮ ಕಪಾಲ”ದ ಪ್ರದರ್ಶನಕ್ಕಾಗಿ ಎರಡು ದಿನಗಳ ಅಭ್ಯಾಸ ನಡೆಸಿ, ಮಾರನೇ ದಿನದಂದು ಮೂಡಬಿದರೆಯಲ್ಲೇ ಪ್ರದರ್ಶನವನ್ನು ಆರಂಭಿಸಿದೆವು.

ಮೊದಲನೆಯ ಪ್ರಯೋಗದಲ್ಲೇ ಅದು ಯಶಸ್ಸಿನ ಸೂಚನೆಯನ್ನು ಸ್ಪಷ್ಟವಾಗಿ ತೋರಿಸಿತು. ಅದೊಂದೇ ಥಿಯೇಟರಿನಲ್ಲಿ 16 ದಿನಗಳ ಕಾಲ ನಡೆದು, ನಮಗೆ ವೀಳ್ಯ ಕೊಟ್ಟು ಕರೆಸಿ, ಆಟವಾಡಿಸಿ, ನಷ್ಟ ಮಾಡಿಕೊಂಡಿದ್ದ ಮಿತ್ರರೊಬ್ಬರ ನಷ್ಟವನ್ನೂ ತುಂಬಿಸಿಕೊಡಲು ದಾರಿಯಾಯಿತು.

ನನಗೆ ಬೇಕಾದಂತೆ ಕಥಾ ನಿರೂಪಣೆಯ ತಂತ್ರವನ್ನಷ್ಟು ಅಳವಡಿಸಿಕೊಂಡಿದ್ದೆ. ಶಿವನ ಪಾತ್ರವೂ ನನ್ನದೇ.

ಹಬ್ಬಿದ ಖ್ಯಾತಿ

ಕುಣಿಯಬೇಕೆನ್ನಿಸಿದಷ್ಟೂ ಕುಣಿದೆ. ಮಾತನಾಡಬೇಕು ಎನ್ನಿಸಿದಷ್ಟೂ ಮಾತನಾಡಿದೆ. ಬೇರೆಯವರನ್ನೂ ಕುಣಿಸಿ- ಮಾತನಾಡಿಸಿದೆ.

ಶಿವತಾಂಡವಕ್ಕೂ ಅಲ್ಲಿ ಅವಕಾಶವಿತ್ತು. ಲಾಸ್ಯಕ್ಕೂ ಎಡೆಯಿತ್ತು. ಶೃಂಗಾರದಿಂದ ಹಿಡಿದು ಭೀಭತ್ಸ, ಭಯಾನಕ ರಸದವರೆಗೂ ಪ್ರದರ್ಶನವಾಗುತ್ತಿತ್ತು.

ಒಂದು ದಿನವಂತೂ “ಭಿಕ್ಷಾಂದೇಹಿ” ಎಂದು ಬಂದ ಶಿವನನ್ನು ಹಂಗಿಸಿದ ಯಕ್ಷಿಗೆ ಶಾಸ್ತಿ ಮಾಡುವ ನೃತ್ಯದಲ್ಲಿ ಎರಡೂ ಕಾಲುಗಳನ್ನು ಒಮ್ಮೆಲೇ ನೆಲದಿಂದ ಎತ್ತಿ ಯಕ್ಷಿಯ ಪಾತ್ರಧಾರಿಯ ಎದೆಗೆ ಒದ್ದಿದ್ದೆನಂತೆ. ಆ ಹುಡುಗ ಬೆದರಿಕೊಂಡನಾದರೂ ಆಗುವ ನೋವನ್ನು ತಪ್ಪಿಸಲೆಂದು, ಮರುದಿನದ ಪ್ರದರ್ಶನದಲ್ಲಿ ಒದೆತದ ಸನ್ನಿವೇಶ ಬಂದಾಗ ಮೈಯನ್ನು ತಪ್ಪಿಸಿ ನಿಂತ. ನನ್ನ ಆಯ ತಪ್ಪಿತ್ತು ಆದರೆ ಕಾಲು ಬೇರೆ ಕಡೆಗೆ ತಾಗಿ ನೋವಾಯಿತಾದರೂ, ಆಗ ಗೊತ್ತಾಗಲಿಲ್ಲ. ಇತರರೂ ಗಮನಿಸುವಂತಿರಲಿಲ್ಲ.

ಆ ವರ್ಷ ಉಳಿದೆಲ್ಲ ಕಡೆಗಳಲ್ಲೂ ನಾವು “ಬ್ರಹ್ಮ ಕಪಾಲ”ವನ್ನೇ ಆಡುವ ಪರಿಸ್ಥಿತಿ ಬಂದೊದಗಿತು. ಮೂಡಬಿದರೆಯಿಂದ “ಬ್ರಹ್ಮಕಪಾಲ”ದ ಖ್ಯಾತಿ ಬಹಳ ದೂರದವರೆಗೂ ಹಬ್ಬಿತ್ತು. ಮಂಗಳೂರಿನಿಂದಲೂ ಅದನ್ನು ನೋಡಲೆಂದೇ ಜನರು ಬಂದುದಿತ್ತು.

ಬೇರೇನನ್ನೂ ಜನರು ಆಡಗೊಡದೆ, ಬ್ರಹ್ಮಕಪಾಲವನ್ನು ಮಾತ್ರವೇ ಆಡಿರೆನ್ನುವಾಗ, ಜ್ವರ ಬಂದರೂ ಸರಿ, ಆಯಾಸವಿದ್ದರೂ ಸರಿ, ನಾನೇ ಒದ್ದಾಡಬೇಕಾಗುತ್ತಿತ್ತು. ಕೆಲವೊಮ್ಮೆ ಪೂರ್ವಾರ್ಧದ ಈಶ್ವರನ ಪಾತ್ರವನ್ನು ಇನ್ನೊಬ್ಬರು ನಿರ್ವಹಿಸಿ, ಉತ್ತರಾರ್ಧದ ಈಶ್ವರ ನಾನಾಗಬೇಕಾಗುತ್ತಿತ್ತು.

ಒಟ್ಟಿನಲ್ಲಿ “ಬ್ರಹ್ಮಕಪಾಲ” ನನ್ನನ್ನು ಸರಿಯಾಗಿಯೇ ಕಚ್ಚಿ ಹಿಡಿಯಿತು. ಹಿಂಡಿ ಹಿಪ್ಪೆ ಮಾಡಿತು. ಆದರೆ, ಅದು ನಾನಾಗಿಯೇ ತಂದುಕೊಂಡ ಬವಣೆ.

ನನ್ನ ವೈಯಕ್ತಿಕ ಕಷ್ಟಗಳಾಗಲೀ, ದೈಹಿಕ ಶ್ರಮವಾಗಲೀ ನನ್ನನ್ನು ಬೇಸರಗೊಳಿಸಿಲ್ಲ. ಸರಿಯಾಗಿ ನಿರ್ವಹಿಸಬಲ್ಲವರು ಇದ್ದರೆ, ಅತ್ಯದ್ಭುತ ಯಶಸ್ಸನ್ನು ಗಳಿಸುವ ಸಂತೃಪ್ತಿಕರ ಅಂಶವೊಂದನ್ನು ಯಕ್ಷಗಾನ ಕಲೆಗೆ ಸೇರಿಸಿದೆನೆಂಬ ಸಮಾಧಾನ ನನಗಿದೆ.

ಪಾಲುಗಾರಿಕೆ
ಮತ್ತೆ ಎರಡು ವರ್ಷಗಳಲ್ಲೂ ತಿರುಗಾಟ ನಡೆಯಿತು. ತಿಂಗಳುಗಟ್ಟಲೆಯ ಆಟಗಳು ಮುಂದಾಗಿಯೇ ನಿಶ್ಚಯವಾಗುತ್ತಲಿದ್ದ ಕಾರಣ, ಯಾವ ರೀತಿಯ ತೊಂದರೆಯೂ ನಮಗೆ ಕಾಣಿಸಲಿಲ್ಲ. ನೊಂದುಕೊಳ್ಳುವಷ್ಟರ ಮಟ್ಟಿನ ಕಿರುಕುಳಗಳೂ ಉದ್ಭವಿಸಲಿಲ್ಲ.

ಮುಂದಿನ ವರ್ಷದಲ್ಲಿ, ಭಾಗವತರೊಬ್ಬರ ಜೊತೆಗೆ ಪಾಲುಗಾರಿಕೆಯಿಂದ ಧರ್ಮಸ್ಥಳ ಮೇಳವನ್ನು ನಡೆಸಬೇಕೆಂದು ಶ್ರೀ ಹೆಗ್ಗಡೆಯವರ ಆದೇಶವಿತ್ತು. ಆದರೆ ಮೇಳ ಹೊರಟ ಒಂದು ತಿಂಗಳಲ್ಲೇ ನಿಶ್ಚಿತ ದಿನ ನಿಶ್ಚಯದ ಸಮಯ- ಇವುಗಳ ನಿಯಮವನ್ನು ಭಾಗವತರು ಪಾಲಿಸಲಾರರೆಂದು ಸ್ಪಷ್ಟವಾಗಿ ತೋರಿ ಬಂತು. ಪರಿಸ್ಥಿತಿ ಪ್ರಕೋಪಕ್ಕೆ ಹೋಗುವಂತಾದ ಒಂದು ಕಡೆಯ ಆಟದ ತರುವಾಯ ಧರ್ಮಸ್ಥಳಕ್ಕೆ ಹೋಗಿ “ನಾನೇನು ಮಾಡಲಿ?” ಎಂದು ಶ್ರೀ ಹೆಗ್ಗಡೆಯವರನ್ನೇ ಕೇಳಿದೆ.

“ಪಾಲುಗಾರಿಕೆ ಬೇಡ. ಸಂಪೂರ್ಣ ಹೊಣೆಗಾರಿಕೆಯನ್ನು ಭಾಗವತರೇ ಇಟ್ಟುಕೊಳ್ಳಲಿ” ಎಂದು ಹೆಗ್ಗಡೆಯವರು ಹೇಳಿದಂತೆ, ತಿರುಗಾಟದ ಉಳಿದ ದಿನಗಳಲ್ಲಿ ನಾನು ವೇಷ ಮಾತ್ರ ಹಾಕುತ್ತಾ ದಿನಗಳೆದೆ.

ಮಾರನೇ ವರ್ಷ, ಮೇಳ ತಿರುಗಿ ನನ್ನ ಪಾಲಿಗೇ ಬಂತು. ಆಡಳಿತವನ್ನು ನಿರ್ವಹಿಸುವ ಮತ್ತು ವೇಷವನ್ನೂ ಹಾಕುವ (ಹೆಚ್ಚಾಗಿ ಬ್ರಹ್ಮಕಪಾಲ ಪ್ರಸಂಗವೇ ಇರುತ್ತಿದ್ದ ಕಾರಣ) ಎರಡೂ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಲಾಗುವುದಿಲ್ಲ ಎಂದು ಕಂಡು, ಮನೆಯಲ್ಲೇ ಉಳಿದಿದ್ದ ನನ್ನ ಸಹೋದರ ರಾಮನನ್ನೂ ಕರೆಸಿಕೊಂಡೆ. ವ್ಯವಸ್ಥಾಪಕನ ಕೆಲಸಕ್ಕೆ ಅವನಿದ್ದ ಕಾರಣ, ಆಟವಿಲ್ಲದ ದಿನಗಳಿಗೆ ಆಟಗಳನ್ನು ಜೋಡಿಸಿಕೊಳ್ಳುವ ಕೆಲಸ ನನಗೆ ಸುಲಭವಾಯಿತು.

ಅದರೊಂದಿಗೇ, ಇನ್ನೊಂದು ಹುಚ್ಚು ಸಾಹಸಕ್ಕೆ ಇಳಿಯುವ ಮನಸ್ಸೂ ಆಯಿತು.

ಸೀಮೋಲ್ಲಂಘನ 
ದಕ್ಷಿಣ ಕನ್ನಡ ಜಿಲ್ಲೆಯ ದಕ್ಷಿಣ ಭಾಗದ ಮೇಳಗಳು ಎಷ್ಟು ಪ್ರಸಿದ್ಧವಾಗಿದ್ದರೂ, ಜಿಲ್ಲೆಯ ಉತ್ತರ ಭಾಗದ ಉಡುಪಿ, ಕುಂದಾಪುರ ತಾಲ್ಲೂಕುಗಳಿಗೆ ಅದುವರೆಗೆ ಕಾಲಿಟ್ಟಿರಲಿಲ್ಲ. ಹಾಗೆಯೇ ಉತ್ತರ ಭಾಗದ ಮೇಳಗಳು ದಕ್ಷಿಣಕ್ಕೂ ಬರುತ್ತಿರಲಿಲ್ಲ. ಪಡುಬಿದ್ರೆಯನ್ನು ದಾಟಿ, ಯಾವ ಮೇಳವೂ ಮುಂದೆ ಹೋಗಿದ್ದ ನಿದರ್ಶನಗಳು ನನಗೆ ದೊರೆತಿರಲಿಲ್ಲ.

ಸುಮಾರು 70-80 ವರ್ಷಗಳ ಹಿಂದೆ ಕುಂಬಳೆಯ ಪ್ರಸಿದ್ಧ ವೇಷಧಾರಿ (ದಿವಂಗತ) ಶ್ರೀ ಗುಂಡ ಎಂಬವರು ಕೂಡ್ಲು ಮೇಳವನ್ನು ತನ್ನ ಯಜಮಾನಿಕೆಯಲ್ಲಿ ಕಲ್ಯಾಣಪುರದವರೆಗೆ ಕೊಂಡೊಯ್ದಿದ್ದರಂತೆ. ಅವರಿಗೆ ಆಟಗಳೇ ಸಿಗದೆ ಅವರು ಹಿಂದೆ ಬರಬೇಕಾಯಿತೆಂದು ಹೇಳುವುದನ್ನು ಕೇಳಿದ್ದೆ.

ಯಕ್ಷಗಾನದ ಮಟ್ಟಿಗೆ ನಮ್ಮ ಜಿಲ್ಲೆ ಇಬ್ಭಾಗವಾಗಿತ್ತು. ತೆಂಕು ಮತ್ತು ಬಡಗುತಿಟ್ಟುಗಳ ಪರಸ್ಪರ ಅವಹೇಳನ ನಡೆದಿತ್ತು.

ಸಾಂಪ್ರದಾಯಿಕವಾಗಿ ಬಂದ ವೇಷಭೂಷಣ-ಕುಣಿತ-ಹಾಡುಗಾರಿಕೆಗಳಲ್ಲಿ ಪದ್ಧತಿಗಳು ಎರಡಾಗಿದ್ದುವು. ಒಂದೇ ತಾಯಿಯ ಎರಡು ಕಣ್ಣುಗಳಲ್ಲಿ, ಅದು ಎಡ ಆದ್ದರಿಂದ ಚೆನ್ನಿಲ್ಲ- ಇದು ಬಲ, ಆದ್ದರಿಂದ ಸರಿಯಿಲ್ಲ ಎನ್ನುವವರು ಹೆಚ್ಚಿದ್ದರು.

ತೆಂಕಾಗಲಿ- ಬಡಗಾಗಲಿ ಯಕ್ಷಗಾನ, ಯಕ್ಷಗಾನವೇ ಅಲ್ಲವೆ? ಹೋಗಿಯೇ ನೋಡೋಣ ಎಂದು, ದೇವರ ಮೇಲೆ ಭಾರ ಹಾಕಿ ಮುಂದುವರಿದೆ.

ಇತರರಲ್ಲಿ ನನ್ನ ಯೋಜನೆಯನ್ನು ಹೇಳಿಕೊಂಡರೆ, ಖಂಡಿತವಾಗಿಯೂ ನಿರುತ್ಸಾಹಕ್ಕೆ ದಾರಿಯಾಗುವುದೆಂದು ತಿಳಿದಿತ್ತು. ಆದುದರಿಂದ ಭಾಗವತರಿಗೂ,ತಮ್ಮನಿಗೂ ಸುಳಿವು ಕೊಡದೆ ಒಂದು ದಿನ ಶಿರ್ವಕ್ಕೆ ಹೋದೆ. ಅಲ್ಲಿನ ಊರ ಮಹನೀಯರೆನಿಸಿಕೊಂಡವರನ್ನು ಕಂಡು “ಒಂದು ಆಟವನ್ನು ಇಲ್ಲಿ ಆಡಲು ಅವಕಾಶ ಮಾಡಿಕೊಡಬೇಕು” ಎಂದು ಕೇಳಿಕೊಂಡೆ.

“ಖಂಡಿತಾ ಬೇಡ ಶಾಸ್ತ್ರಿಗಳೇ! ನಿಮ್ಮ ತೆಂಕುತಿಟ್ಟಿನ ಆಟವನ್ನು ಇಲ್ಲಿನ ಜನ ಮೆಚ್ಚುವುದಿಲ್ಲ. ಸುಮ್ಮನೆ ಬಂದು, ಧರ್ಮಸ್ಥಳ ಮೇಳದವರಿಗೆ ಹೀಗಾಯಿತಂತೆ ಎಂದು ಹೇಳಿಸಿಕೊಳ್ಳುವ ಅಪಖ್ಯಾತಿ ನಿಮಗೂ ಬೇಡ. ಶ್ರೀ ಸ್ಥಳಕ್ಕೂ ಬೇಡ” ಎಂದೇ ಕೆಲವರು ಉಪದೇಶ ಮಾಡಿದರು.

“ಇದು ಒಂದು ಪ್ರಯೋಗ, ಸೋಲೋ ಗೆಲುವೋ, ಒಂದು ಅನುಭವಕ್ಕಾಗಿಯಾದರೂ ಇಲ್ಲಿ ಒಂದು ಆಟವನ್ನು ಆಡಬೇಕೆಂದು ಇದ್ದೇನೆ. ನೀವೆಲ್ಲರೂ ದೊಡ್ಡ ಮನಸ್ಸು ಮಾಡಿ ಸಹಕರಿಸಿ” ಎಂದು ಪುನಃ ಒತ್ತಾಯಿಸಿದೆ.

ಕೊನೆಗೆ ಅವರು “ನಿಮ್ಮ ಮೇಳದ ಒಂದು ಆಟಕ್ಕೆ ವೀಳ್ಯವೆಷ್ಟು?” ಎಂಬ ಪ್ರಶ್ನೆಗೆ ಬಂದರು.

“ನಿಮ್ಮ ಊರಲ್ಲಿ ಹೊಸತಾಗಿ ಆಡುವ ಆಟ. ಆದ ಕಾರಣ, ನಮ್ಮ ನಿರ್ಣಯದ ವೀಳ್ಯವನ್ನು ನಾನು ಹೇಳುವುದಿಲ್ಲ. ನಿಮಗಿಷ್ಟ ಬಂದಷ್ಟೇ ಕೊಡಿ. ಒಂದು ರಂಗಸ್ಥಳ, ದೇವತಾ ವಿನಿಯೋಗಕ್ಕೂ ಬಣ್ಣಗಾರಿಕೆಗೂ ಯೋಗ್ಯ ಜಾಗ, ಇಷ್ಟನ್ನು ಒದಗಿಸಿ. ಹಣದ ಪ್ರಶ್ನೆ ಆ ಬಳಿಕದ್ದು” ಎಂದುದಕ್ಕೆ ಅವರು ಒಪ್ಪಲೇ ಬೇಕಾಯಿತು. 15 ದಿನಗಳ ಅವಧಿ ಇರಿಸಿಕೊಂಡು, ನಾವು ಆಟವಾಡುತ್ತಿದ್ದ ಸ್ಥಳಕ್ಕೆ ಹಿಂದಿರುಗಿದೆ.

ನಡುವೆ ಇದ್ದ ಸಮಯವನ್ನು ಶಿರ್ವದಲ್ಲಿ ಆಟ ಕೊಡಲು ಒಪ್ಪಿದವರು ಸರಿಯಾಗಿ ಉಪಯೋಗ ಮಾಡಿದರು. ‘ಶಿರ್ವದ ಹೈಸ್ಕೂಲು ಆವರಣದಲ್ಲಿ ಶ್ರೀ ಧರ್ಮಸ್ಥಳ ಮೇಳದವರಿಂದ ಬ್ರಹ್ಮಕಪಾಲ’ ಎಂದು ಘೋಷಿಸಿ ಸಾಕಷ್ಟು ಪ್ರಚಾರವನ್ನು ಕರಪತ್ರಗಳಿಂದಲೂ ಇತರ ವಿಧಾನಗಳಿಂದಲೂ ಮಾಡಿದರು.

ಯಶಸ್ವಿ ಪ್ರದರ್ಶನ 
ಆಟದ ದಿನ-
ಸೂರ್ಯಾಸ್ತವಾಗುವ ಮೊದಲೇ ಹೈಸ್ಕೂಲು ಮೈದಾನಿನಲ್ಲಿ ಜನಸಂದಣಿ ಸೇರಲು ಆರಂಭವಾಗಿತ್ತು. ನಾವು ರಂಗಸ್ಥಳಕ್ಕೆ ನಿಲ್ಲುವ ವೇಳೆಗೆ, ಏನಿಲ್ಲೆಂದರೂ 6-7 ಸಾವಿರ ಮಂದಿಯ ಸಭೆ ಸೇರಿತ್ತು. ನಮ್ಮ ಪದ್ಧತಿಯನ್ನು ಒಂದಷ್ಟೂ ವ್ಯತ್ಯಾಸಗೊಳಿಸದೆ, ರಾತ್ರಿ 10 ಗಂಟೆಯಿಂದ ಸೂರ್ಯೋದಯದವರೆಗೂ “ಬ್ರಹ್ಮಕಪಾಲ”ದ ಪ್ರದರ್ಶನವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿದೆವು.

* * * * * * *
ಚಿತ್ರಕೃಪೆ : ಅಂತರ್ಜಾಲ
1 ಟಿಪ್ಪಣಿ Post a comment
  1. ನವೆಂ 18 2011

    ಮಾನ್ಯರೇ, ಆಗಿನ ಕಾಲದಲ್ಲಿ ಮಲೆನಾಡು ಪ್ರದೇಶದಲ್ಲಿ ಯಾವುದೇ ಸಾರಿಗೆ ಸಂಪರ್ಕವಿಲ್ಲದೆ. ಕಲೆಗಾಗಿ ಮುಡಿಪಾಗಿದ್ದ ಕಲಾವಿದರು. ತುಂಬಾ ದುಡಿದಿದ್ದಾರೆ. ಬಡತನದ ಬೆಗೆಯಲ್ಲಿಯೇ ಪ್ರಾಣ ತೆತ್ತ ದಿ|ವೆಂಕಟರಮಣ ಭಟ್ಟರ ಸ್ಥಿತಿ ಎಂತವರಿಗೂ ಬೇಡ ನೆಸುತ್ತದೆ. ಅದರೂ ಸಹ ೬-೭ ಸಾವಿರ ಜನರನ್ನು ಸೇರಿಸಬೇಕಾದರೆ. ಅವರ ದುಡಿಮೆ, ಶ್ರಮ, ಸಾರ್ಥಕ ಅಲ್ಲವೇ? ವಂದನೆಗಲೊಡನೆ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments