ಕನ್ನಡಕ್ಕೆ ಕನ್ನಡಿ ಹಿಡಿದವನ ನೆನೆಯುತ್ತ
– ನವೀನ್ ನಾಯಕ್
ಕನ್ನಡದ ಬೆಳವಣಿಗೆಗೆ ಎಷ್ಟೋ ಮಹನೀಯರು ತಮ್ಮ ಜೀವನದ ಬಹಳ ಸಮಯವನ್ನು ಈ ಮಹತ್ಕಾರ್ಯಕ್ಕೆ ಉಪಯೋಗಿಸಿದ್ದಾರೆ. ಅವರೆಲ್ಲರ ಪರಿಶ್ರಮದಿಂದ ನಮ್ಮ ಕನ್ನಡ ಇಂದಿಗೆ ಹೆಮ್ಮೆಯ ಸ್ಥಾನ ಪಡೆದಿದೆ.
ದ.ರಾ ಬೇಂದ್ರೆಯವರಿಂದಲೇ, “ಕನ್ನಡಕ್ಕೆ ಕನ್ನಡಿ ಹಿಡಿದು ದುಡಿದವ ನೀನು” ಅನ್ನಿಸಿಕೊಂಡ ಆ ವ್ಯಕ್ತಿ ಯಾರು? ಅವರ ಸಾಧನೆ ಏನು? ಎಂಬ ಕುತೂಹಲವೇ. ಆ ವ್ಯಕ್ತಿ ಜರ್ಮನಿಯಲ್ಲಿ ಜನಿಸಿ ಧಾರವಾಡಕ್ಕೆ ಬಂದು ಕನ್ನಡದ ಇತಿಹಾಸದಲ್ಲಿ ಹಲವಾರು ಸಾಹಸ ಮೆರೆದವರು. ಅವರೇ ರೆವರೆಂಡ್ ಎಫ್ ಕಿಟೆಲ್.
ರೆವರೆಂಡ್ ಎಫ್ ಕಿಟೆಲ್‍ರವರು ಜರ್ಮನಿಯ ಹ್ಯಾನೋವರ್ ಪ್ರಾಂತ್ಯದಲ್ಲಿರುವ ಫ್ರೀಸ್ಲ್ಯಾಂಡ್ ನಲ್ಲಿ 1832 ರಲ್ಲಿ ಗಾಜ್ ಫ್ರೀಟ್ ಮತ್ತು ಟ್ಯುಡೋವ್ ಹೆಲೇನ್ ಹ್ಯೂಬರ್ಟ ದಂಪತಿಗೆ ಜನಿಸಿದರು. ಇವರು ಭಾರತಕ್ಕೆ ಬರುವಾಗಲೇ ಹೀಬ್ರೂ, ಗ್ರೀಕ್, ಲ್ಯಾಟೀನ್,ಫ್ರೆಂಚ್, ಮತ್ತು ಇಂಗ್ಲಿಷ್ ಭಾಷೆಯ ಜ್ಞಾನ ಹೊಂದಿದ್ದರು. ಭಾರತಕ್ಕೆ ಬರುವಾಗಲೇ ಕನ್ನಡವನ್ನು ಕಲಿಯಬೇಕೆಂದು ಮಹದಾಸೆಯನ್ನು ಹೊಂದಿದ್ದರು. ಕಿಟೆಲ್ ರವರು 1850ರಲ್ಲಿ ಬಾಸೆಲ್ ಮಿಶನ್ ಸಂಸ್ಥೆಗೆ ಸೇರಿದರು. ಈ ಮಿಶನ್ ಸಂಸ್ಥೆ 1852 ರಲ್ಲಿ ಕಾಪ್ ಮನ್ ಮತ್ತು ಕಿಟೆಲ್ ರವರನ್ನು ದಕ್ಷಿಣ ಭಾರತದ ದಾವಣಗೆರೆಗೆ ಮತಪ್ರಚಾರಕ್ಕೆ ಕಳುಹಿಸಿಕೊಟ್ಟರು. ಧಾರವಾಡಕ್ಕೆ ಬಂದ ಕಿಟೆಲರಿಗೆ ಸಾಹಿತ್ಯಾಭ್ಯಾಸ ಮಾಡಿ ಹೆಸರುವಾಸಿಯಾಗಿದ್ದ ರೇ.ವೀಗಲ್ ರವರ ಭೇಟಿ ಮಾಡಬೇಕೆಂದುಕೊಂಡಿದ್ದರು. ಅದು ಸಾದ್ಯಾವಾಗದೇ ಇದ್ದಾಗ, ಅದೇ ಊರಿನ ಇನ್ನೊಬ್ಬ ಅಧಿಕಾರಿ ಕೆ ಮೋರಿಕ್ ರವರ ಪರಿಚಯ ಮಾಡಿಕೊಂಡರು. ಕನ್ನಡ ಕಲಿಯಲು ಅದೆಷ್ಟು ಅವರಿಗೆ ಉತ್ಸಾಹವಿತ್ತೆಂದರೆ ಬರೀ ಕಾಲ್ನಡಿಗೆಯಲ್ಲೇ ಗುಡ್ಡಗಾಡುಗಳಲ್ಲಿ, ಕಾಡುಗಳಲ್ಲಿ ಅಲೆದು ಊರೂರು ಅಲೆದು ಆ ಪ್ರದೇಶಗಳ ಆಡು ಭಾಷೆಯನ್ನು ಕಲಿತರು.
ಹೀಗೆ ಶ್ರಮಪಟ್ಟು ಕಲಿತ ಕೇವಲ 13 ವರ್ಷಗಳಲ್ಲೇ “ಹಳಗನ್ನಡ ವ್ಯಾಕರಣ ಸೂತ್ರಗಳು” ಎಂಬ ಗ್ರಂಥವನ್ನೆ ಹೊರ ತರಲು ಪ್ರಯತ್ನಿಸಿದರು. ಕನ್ನಡ ಭಾಷೆಯ ಜೊತೆ ಜೊತೆಗೆ ಸಂಸ್ಕೃತವನ್ನೂ ಕಲಿತರು. 1862ರಲ್ಲಿ ಬೈಬಲ್ಲಿನ ಹೊಸ ಒಡಂಬಡಿಕೆಯನ್ನು ಕನ್ನಡಕ್ಕೆ ಅನುವಾದಿಸಿದರು. 1865ರಲ್ಲಿ “ಕರ್ನಾಟಕ ಕಾವ್ಯಮಾಲೆ ” ಎಂಬ ಪದ್ಯ ಸಂಗ್ರಹಗಳ ಅವೃತ್ತಿಯನ್ನು ಹೊರ ತಂದರು. ಈ ಕೃತಿಯು ಮುನ್ನುಡಿ ಮತ್ತು ಸಹಾಯಕ ಟಿಪ್ಪಣಿಗಳನ್ನು ಒಳಗೊಂಡಿದೆ. ಬೊಂಬಾಯಿ ಪ್ರಾಂತ್ಯಗಳಲ್ಲಿ ಕನ್ನಡಿಗರಿಗಾಗಿ ” ವಿಚಿತ್ರ ವರ್ತಮಾನ ಸಂಗ್ರಹ ” ವೆಂಬ ಪತ್ರಿಕೆ ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ 15 ದಿನಕ್ಕೊಮ್ಮೆ ಪ್ರಕಟವಾಗುತಿತ್ತು. ಈ ಪತ್ರಿಕೆಯ ಸಂಪಾದಕತ್ವವನ್ನು 1862ರಲ್ಲಿ ಕಿಟೆಲ್ಲರು ವಹಿಸಿಕೊಂಡಿದ್ದರು. ಹಾಗೆ 1864 ರಲ್ಲಿ ಕನ್ನಡ ಪುಸ್ತಕಗಳಲ್ಲಿ ಇಂಗ್ಲೆಂಡ್ ದೇಶದ ಚರಿತ್ರೆಯ ಬಗ್ಗೆ ಮಕ್ಕಳಿಗೆ ತಿಳಿಸುವ ಪ್ರಯತ್ನವನ್ನು ಮಾಡಿದ್ದರು. ತದನಂತರ 1872ರಲ್ಲಿ ಇಂಡಿಯನ್ ಆಕ್ಟಿವಿಟಿ ಎಂಬ ಪತ್ರಿಕೆಯನ್ನು ಪ್ರಾರಂಬಿಸಿದರು. ಈ ಪತ್ರಿಕೆಯಲ್ಲಿ ಆಂಗ್ಲ ಭಾಷೆಯಲ್ಲಿ ಬರೆದ ಲೇಖನಗಳ ಸಂಕಲನ, ಕೇಶಿರಾಜನು 1872ರಲ್ಲಿ ರಲ್ಲಿ ಬರೆದ ಶಬ್ದಮಣಿದರ್ಪಣವೆಂಬ ಗ್ರಂಥದ ಸಂಪಾದನೆ ಮತ್ತು ಪುನರ್ ಪ್ರಕಟಣೆಯನ್ನು ಮಾಡಿದರು.
ಈ ಪತ್ರಿಕೆಗಳಲ್ಲಿ ಪಂಚತಂತ್ರದ ಬಗ್ಗೆಯೂ ಬರೆದಿದ್ದಾರೆ. ಇವರ ಜೀವನದಲ್ಲಿ ಮಹತ್ತರವಾದ ಕೆಲಸವೆಂದರೆ ಕನ್ನಡ-ಇಂಗ್ಲಿಷ್ ನಿಘಂಟಿನ ರಚನೆ. ಕಿಟೆಲ್ಲರು ಎಂದೆಂದಿಗು ಅವಿಸ್ಮರಣೀಯವಾಗುವುದು ಈ ನಿಘಂಟಿನಿಂದಲೇ. ಕನ್ನಡ-ಇಂಗ್ಲಿಷ್ ನಿಘಂಟನ್ನು ಕಿಟೆಲ್ ರವರಿಗಿಂತ ಮುಂಚೆಯೇ ರೀವ್ ಮತ್ತು ಗಿಲ್ ಕ್ರಿಸ್ಟ್ ಬೇರೆ ಬೇರೇಯಾಗಿಯೇ ನಿಘಂಟನ್ನು ರಚಿಸಿದ್ದರು. ಆದರೆ ಕಿಟೆಲ್ ರವರ ನಿಘಂಟು ಪಾಂಡಿತ್ಯ ಪೂರ್ಣ ಬರಹಕ್ಕೆ ಹೆಸರುವಾಸಿಯಾಗಿತ್ತು. 1872ರಲ್ಲಿ ಸೂಕ್ಷವಾಗಿ ನಿಘಂಟಿನ ರೂಪುರೇಷೆಗಳನ್ನು ತಯಾರಿಸಿದರು. ತಮ್ಮ ಕಠಿಣ ಅಭ್ಯಾಸ, ಪರಿಶ್ರಮಗಳಿಂದ ಮುಂದಿನ 20 ವರ್ಷಗಳಲ್ಲಿ ಅಂದರೆ 1892ರಲ್ಲಿ ಸರಿಸುಮಾರು 70000 ಪದಗಳನ್ನು ಒಳಗೊಂಡ ಕನ್ನಡ ನಿಘಂಟಿನ ಹಸ್ತಪ್ರತಿಯನ್ನು ರಚಿಸಿ ಬಾಸೆಲ್ ಮಿಶನ್ ಗೆ ಒಪ್ಪಿಸಿದರು. ಕನ್ನಡ ಭಾಷೆಯನ್ನು ಅರಿಯಲು ಪ್ರಯತ್ನಿಸುತಿದ್ದ ಬ್ರಿಟೀಷರಿಗೆ ಈ ಪ್ರಯತ್ನ ಬಹಳವಾಗಿ ಹಿಡಿಸಿತು. 1894 ರಲ್ಲಿ ಈ ನಿಘಂಟನ್ನು ಮದರಾಸು ವಿಶ್ವವಿಧ್ಯಾಲಯ ಪ್ರಕಟಿಸಿತು. ಸರ್ ವಾಲ್ಟರ್ ಎಲಿಯಟ್ ಎಂಬ ಅಧಿಕಾರಿ ಈ ಅಭೂತಪೂರ್ವ ಪ್ರಯತ್ನಕ್ಕೆ ಹಣದ ಶಿಫಾರಸ್ಸು ಮಾಡುವುದಾಗಿ ಆಶ್ವಾಸನೆಯಿತ್ತರು. ಆದರೆ ಆ ಸಮಯದಲ್ಲಿ ಕಿತ್ತೂರಿನೊಂದಿಗೆ ಯುದ್ದ ನಡೆಯುತಿದ್ದಾಗ ರಾಣಿ ಚೆನ್ನಮ್ಮನವರು ಎಲಿಯಟ್ ನನ್ನು ಸೆರೆಹಿಡಿದು ಕಾರಾಗೃಹದಲ್ಲಿ ಇಟ್ಟರು. ಎಲಿಯಟ್ ರವರ ಪ್ರಯತ್ನ ಕೈಗೂಡಲಿಲ್ಲ. ತದನಂತರ ಕನ್ನಡಕಾವ್ಯ ಶೈಕ್ಷಣಿಕ ಪುನರ್ ರಚನೆಯ ಪ್ರಯತ್ನವನ್ನು ಕೈಗೊಂಡರು.
14 ಹಸ್ತಪ್ರತಿಗಳ ಸಹಾಯದಿಂದ ನಾಗವರ್ಮನ ಛಂದೋಬುಧಿ ಸಂಗ್ರಹ ಮಾಡಿದರು. 1875ರಲ್ಲಿ ಇದು ಮಹತ್ವದ ಬೆಳವಣಿಗೆ. ಈ ಹಸ್ತಪ್ರತಿಗಳನ್ನು ಅವರು ಗದಗ, ಧಾರವಾಡ, ಮೈಸೂರು, ಮಡಿಕೇರಿಗಳ ಸುತ್ತಿ ಸಂಗ್ರಹಿಸಿದರು. ಇದಕ್ಕೆ ಬಿ.ಎಲ್ ರೈಸ್ ಮತ್ತು ತಿರುಮಲೆ ಶಾಮಣ್ಣನವರ ಸಹಾಯವೂ ಸಿಕ್ಕಿತ್ತು. ಕಿಟೆಲ್ ರವರ ಈ ಎಲ್ಲ ಮಹತ್ವ ಸಾಧನೆಗಳನ್ನು ಅರಿತು ಜರ್ಮನಿಯ ಟ್ಯಬಿಂಗನ್ ವಿಶ್ವವಿದ್ಯಾಲಯ ಜೂನ್ 6 1896ರಲ್ಲಿ ಅವರಿಗೆ ” ಡಾಕ್ಟರೇಟ್” ಕೊಟ್ಟು ಆದರಿಸಿದರು. ಮತ್ತು ಧಾರವಾಡದ ಕರ್ನಾಟಕ ವಿಧ್ಯಾವರ್ಧಕ ಸಂಘ ಸಂಸ್ಥೆವತಿಯಿಂದ 1890ರಲ್ಲಿ ಗೌರವ ಸದಸ್ಯತ್ವವನ್ನು ಕೊಡಲಾಯಿತು. ಈ ಚೇತನ 1903ರಲ್ಲಿ ತಮ್ಮ ತಾಯ್ನೆಲದಲ್ಲೇ ದೈವಾಧೀನರಾದರು. ಕೇವಲ ಮತಪ್ರಚಾರಕ್ಕೆ ಬಂದಿದ್ದ ಈ ಪಾದ್ರಿ ಇಂದಿನ ಯುವಕರಿಗೆ ನಿಜಕ್ಕೂ ಮಾದರಿಯಾಗುತ್ತಾರೆ. ವಿದೇಶಿಯವರಾಗಿದ್ದ ಇವರು ಕನ್ನಡ ಭಾಷೆಯ ಉನ್ನತಿಗಾಗಿ ಪಟ್ಟ ಪಾಡು ಅಷ್ಟಿಷ್ಟಲ್ಲ. ತಮ್ಮ ಛಲ ನಿಷ್ಟೆಯನ್ನು ಕಾರ್ಯರೂಪಕ್ಕೆ ಇಳಿಸಿ ಕನ್ನಡಿಗರ ಇತಿಹಾಸದಲ್ಲಿ ಅಜರಾಮರವಾಗಿ ಉಳಿದರು.





ಕನ್ನಡ ಭಾಷೆಯ ಕುರಿತಾದ ಅಭಿಮಾನವನ್ನು ಸ್ವತಃಸಿದ್ಧ ಮಾದರಿಗಳ ಮೂಲಕ ಅಳೆಯುತ್ತಿರುವುದರಿಂದ ಇನ್ನೊಂದು ಅಭಿಪ್ರಾಯ ಹೇಳಿದರೆ ಒಪ್ಪಿಕೊಳ್ಳಲು ಸಾಮಾನ್ಯರಿಗೆ ಕಷ್ಟವಾಗಬಹುದು.
ಇನ್ನೊಂದು, “ಹಳಗನ್ನಡ ವ್ಯಾಕರಣ ಸೂತ್ರಗಳು” ಕಿಟ್ಟೆಲ್ ಸಂಪಾದಿಸಿದ ಪುಸ್ತಕವಲ್ಲ. ಆದರೆ ಬ್ರಿಟಿಷ್ ಲೈಬ್ರರಿಯಲ್ಲಿ ಹಾಗೆ ದಾಖಲಾಗಿರುವುದು ನಿಜ.