ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 23, 2013

14

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೪

‍ನಿಲುಮೆ ಮೂಲಕ

– ಮು. ಅ. ಶ್ರೀರಂಗ ಬೆಂಗಳೂರು

SL Bhairappa Vimarshe - Nilumeಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೩

ದಾಟು ಮತ್ತು ಭಾರತೀಪುರ
—————————–
ಯು ಆರ್ ಅನಂತಮೂರ್ತಿ ಅವರ “ಭಾರತೀಪುರ” ಕಾದಂಬರಿಯ ನಾಯಕ ಜಗನ್ನಾಥನ ‘fickle minded personality’ ನಮ್ಮ ನವ್ಯ ಸಾಹಿತ್ಯದ  ಆಧುನಿಕ ಪ್ರಜ್ಞೆಗೆ ತುಂಬ ಹತ್ತಿರವಾಗಿದೆ. ಇದು ಮೊದಲು ಪ್ರಕಟವಾಗಿದ್ದು ೧೯೭೩ರಲ್ಲಿ. ಸುಮ್ಮನೆ “ಇದೂ ಒಂದು  ಮಾಮೂಲಿ ಕಾದಂಬರಿ” ಎಂದು ಓದಿಕೊಂಡು ಹೋಗುವ ಹಾಗಿದ್ದರೆ ಯಾವ ಜಿಜ್ಞಾಸೆಯೂ ಬೇಕಾಗುವುದಿಲ್ಲ. ಆದರೆ ಜಗನ್ನಾಥ ತನ್ನ ಊರಾದ ಭಾರತೀಪುರದಲ್ಲಿ ತಾನು ತರಬೇಕೆಂದುಕೊಳ್ಳುವ ಬದಲಾವಣೆಗೆ ತಕ್ಕ ತಯಾರಿ ನಡೆಸಿದ್ದನೆ? ನಡೆಸಿದ್ದರೆ ಅದು ಯಾವ ಮಾದರಿಯದ್ದು ಎಂದು ಯೋಚಿಸಲು ಹೊರಟಾಗ ನಿರಾಸೆಯಾಗುತ್ತದೆ. ಜತೆಗೆ ಈ ಕಾದಂಬರಿಯಲ್ಲಿ ಈತನಿಗಿಂತ ಶಕ್ತಿಶಾಲಿಯಾದ, ಗಟ್ಟಿ ಮನಸ್ಸಿನ ಸಾಕಷ್ಟು ವ್ಯಕ್ತಿಗಳಿದ್ದಾರೆ.

ಅವರು ತಮ್ಮ ಜೀವನದಲ್ಲಿ ಸಾಕಷ್ಟು ನೊಂದು,ಬೆಂದು,ಹೋರಾಟ ನಡೆಸಿದವರು. ಇವರುಗಳ ಎದುರಿಗೆ ಜಗನ್ನಾಥನ ಬಡಬಡಿಕೆಗಳು ಅರ್ಥ ಕಳೆದುಕೊಳ್ಳುತ್ತವೆ. ಆದರೆ  ಶ್ರೀಮಂತ ಯುವಕನಾದ ಜಗನ್ನಾಥನ ದೃಷ್ಟಿಯಲ್ಲಿ ಅವರೆಲ್ಲಾ “ಬದಲಾವಣೆ ಸಾಧ್ಯವಿಲ್ಲ; ಹೇಗೋ ಹೊಂದಿಕೊಂಡು ಹೋದರಾಯ್ತು ಎಂದು ಜೀವಿಸುತ್ತಿರುವ ಜಡ ಜೀವಿಗಳು”. ಜಗನ್ನಾಥ ಇಂಗ್ಲೆಂಡಿನಲ್ಲಿ ಓದುತ್ತಿದ್ದಾಗಲೇ ಈತ ಪ್ರೀತಿಸುತ್ತಿದ್ದ ಮತ್ತು ಆಕೆಯೂ ತನ್ನನ್ನು ಪ್ರೀತಿಸುತ್ತಿದ್ದಾಳೆ ಎಂದು ನಂಬಿದ್ದ ಅಥವಾ ಭಾವಿಸಿದ್ದ ಮಾರ್ಗರೆಟ್ ಒಮ್ಮೆ “ಜಗನ್ ನಿನ್ನ ನೊಬಿಲಿಟಿಗಿಂತ ಚಂದರ್ ನ (ಚಂದ್ರಶೇಖರ್ – ಜಗನ್ನಾಥನ ಗೆಳೆಯ) ಅಸೂಯೆಯೇ ಹೆಚ್ಚು ನಿಜ ಅನ್ನಿಸುತ್ತೆ. one can’t feel that you are there. ನಿನ್ನ ಅಪೂರ್ಣತೆಯ ಯಾತನೆ ನಾಟಕ ಅಂತ ಅನ್ನಿಸಬಹುದು …”..ಎಂದು ಹೇಳುತ್ತಾಳೆ. (ಭಾರತೀಪುರ ಪುಟ ೩೫).  ಆಗಾಗ ಇದೇ ರೀತಿಯ ಮಾತುಗಳಿಂದ ಬೇಸತ್ತ  ಜಗನ್ನಾಥ, ಮಾರ್ಗರೆಟ್  ಜತೆಗಿನ ತನ್ನ ಪ್ರೇಮಕ್ಕೆ ಇನ್ನೊಬ್ಬ ಅಡ್ಡಿಯಾದ್ದದ್ದನ್ನು ಕಂಡು ಓದಿನಲ್ಲಿ ಆಸಕ್ತಿ ಕಳೆದುಕೊಂಡು ಭಾರತೀಪುರಕ್ಕೆ ವಾಪಸ್ಸಾಗುತ್ತಾನೆ. ಆದರೂ ಆಕೆಯ ಜತೆ ಪತ್ರ ವ್ಯವಹಾರವಿಟ್ಟುಕೊಂಡು ತನ್ನ ಭಾವನೆಗಳು,ಯೋಚನೆಗಳು,ಯೋಜನೆಗಳು ಇತ್ಯಾದಿಗಳ ಬಗ್ಗೆ ಆಕೆಗೆ ತಿಳಿಸುತ್ತಿರುತ್ತಾನೆ .(“Dearest Margaret, we can restore dignity to man only by destroying this god”)

ಭಾರತೀಪುರ ಕಾದಂಬರಿಯ ಬಗ್ಗೆ ಅನಂತಮೂರ್ತಿಯವರು ತಮ್ಮ ಆತ್ಮಕಥನ “ಸುರಗಿ”ಯಲ್ಲಿ ಕೆಲವೊಂದು ವಿಷಯಗಳನ್ನು ಹೇಳಿದ್ದಾರೆ. ಅವು ಈ ಕಾದಂಬರಿಯ ಇತಿ ಮಿತಿಗಳನ್ನು ಸೂಚಿಸುವಂತಿದೆ. “ಒಬ್ಬ ಲೇಖಕ *ತನಗೆ ಗೊತ್ತಿಲ್ಲದೇ ಇರುವುದಕ್ಕೆ * ಎದುರಾಗಬೇಕು. ಅದನ್ನು ವಿವರಿಸಲು ಸಾಧ್ಯವಾಗಬಾರದು. ನನ್ನ ಕೃತಿಯಲ್ಲಿ ಒಂದು *ಸ್ವಯಂ ಪೂರ್ಣವಾದ ಜಗತ್ತನ್ನು ಸೃಷ್ಟಿಸಿ * ಅಲ್ಲಿನ ಸಮಸ್ಯೆಗಳನ್ನು ಹೊರಜಗತ್ತಿನವರೊಂದಿಗೆ ಸಮೀಕರಿಸಲು ನಾನು ಪ್ರಯತ್ನಿಸಿದೆ…… ವಿವರಗಳ ಸಮೃದ್ಧಿ ನನ್ನ ಕೃತಿಯಲ್ಲಿರಲಿಲ್ಲವೋ?……. ಬಿಗಿಯಾದ ಬಂಧದಲ್ಲಿ ಸಾಮಾಜಿಕ ರಾಜಕೀಯ ಅರ್ಥಪೂರ್ಣತೆಯನ್ನು ಮೂಡಿಸುವ ಪ್ರಯತ್ನವೇ ವಿಫಲವಾಗುತ್ತದೆಯೋ? ಅಂದರೆ ವಿರುದ್ಧ ಉದ್ದೇಶಗಳ ಸೆಳೆತದಲ್ಲಿ ನಾನು ಸೋತನೆ?

ಹರಿಜನರು ನಿರ್ಭೀಡೆಯಿಂದ ದೇವಾಲಯಗಳಿಗೆ ಹೋಗಿಬರುವುದು ಸಾಧ್ಯವಾದಾಗ ಮಾತ್ರ ಅಸ್ಪೃಶ್ಯತೆಯ ನೈಜ ನಾಶವಾಗುತ್ತದೆ ಎಂದು ತಮಗೆ ಈಗಲೂ ಅನ್ನಿಸುತ್ತದೆ ಎಂದು ಹೇಳುತ್ತಾರೆ.   (ಸುರಗಿ  ಪುಟ ೨೭೫ -೨೭೬ ಅಕ್ಷರ ಪ್ರಕಾಶನ ಹೆಗ್ಗೋಡು ಸಾಗರ ೨೦೧೨)  *ಗೊತ್ತಿಲ್ಲದೇ ಇರುವುದಕ್ಕೆ ಎದುರಾಗಿದ್ದು ಮತ್ತು ಸ್ವಯಂಪೂರ್ಣ(?)ಜಗತ್ತನ್ನು(?) ಸೃಷ್ಟಿಸಿದ್ದು * ಇದೇ ಕಾರಣಕ್ಕೆ ಭಾರತೀಪುರ ಕಾದಂಬರಿ ಒಂದು thesis ತರಹ ಕಾಣಬಹುದು. ಹರಿಜನರು ದೇವಾಲಯಗಳಿಗೆ ಪ್ರವೇಶ ಮಾಡುವುದು ಒಂದು ಹೆಜ್ಜೆ ಅಷ್ಟೇ. ಆದರೆ ಅದೊಂದೇ ಅಲ್ಲ. ಅನಂತಮೂರ್ತಿಯವರಿಗೆ ಮತ್ತು ಅವರ ಕಾದಂಬರಿಯ ನಾಯಕನಿಗೆ ಅದು *ಶತಮಾನಗಳನ್ನು ಬದಲಿಸುವ ಹೆಜ್ಜೆ*ಯಾಗಿ  (ಭಾರತೀಪುರ ಪುಟ ೨೦೧) ಕಾಣಬಹುದು. ಆದರೆ ಹರಿಜನರಿಗೆ ಬೇಕಾಗಿರುವುದು ಸಾಮಾಜಿಕ ಭದ್ರತೆ. ಜಗನ್ನಾಥ ತನ್ನ “ವ್ಯಕ್ತಿತ್ವವನ್ನು” (identity) ಹುಡುಕಿಕೊಳ್ಳುವ ಪ್ರಯೋಗಕ್ಕೆ ಹತ್ತು ಜನ  ಹರಿಜನ ಯುವಕರನ್ನು ಆಯ್ದುಕೊಳ್ಳುತ್ತಾನೆ.ಅವರಿಗೆ ಮೊದಲು ಮರಳಿನಲ್ಲಿ ನಂತರ ಸ್ಲೇಟು ಬಳಪದಲ್ಲಿ ಅಕ್ಷರಗಳನ್ನು ತಿದ್ದಿಸುತ್ತಾನೆ. ಅವರುಗಳು ‘ಕಮಲ’,’ಬಸವ’ ಬರೆಯುವುದಕ್ಕೇ  ಕಷ್ಟಪಡುತ್ತಿದ್ದಾಗ ಅವರಿಗೆ ‘ಚೋಮನದುಡಿ’ ಓದಿಸಬೇಕು,ಫ್ರೆಂಚ್,ರಷ್ಯನ್,ಚೀನಾ ಕ್ರಾಂತಿಗಳ ಬಗ್ಗೆ ಓದಿ ಹೇಳಬೇಕೆಂದು ಸರಳವಾಗಿ ನೋಟ್ಸ್ ಮಾಡಿಟ್ಟುಕೊಂಡಿರುತ್ತಾನೆ!!.

(ಭಾರತೀಪುರ ಪುಟ ೧೦೯). ಆ ಹರಿಜನ ಯುವಕರ ಹೆಸರುಗಳೇ ಜಗನ್ನಾಥನಿಗೆ ಮರೆತು ಹೋಗುತ್ತವೆ. ಯಾರು ಪಿಳ್ಳ,ಯಾರು ಕರಿಯ,ಯಾರು ಮುದ್ದ … (ಅದೇ ಪುಟ ೬೪). ತನ್ನ ಪ್ರಯತ್ನ ಸಫಲವಾಗುತ್ತೋ   ಇಲ್ಲವೋ ಎಂಬ ಅನುಮಾನ ಬಂದಾಗ “ಸೋಲ್ತಿನೋ,ಗೆಲ್ತಿನೋ,ಮುಖ್ಯವಲ್ಲ …ಏನಾದರೂ ಮೂಲಭೂತವಾಗಿ ಮಾಡೋದು ಸಾಧ್ಯವಾಗದೇ ಹೋದ್ರೆ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತೆ-ಅಷ್ಟೇ”(ಅದೇ ಪುಟ  ೬೬)ಮೊದಲಿನಿಂದಲೂ ಮನುಷ್ಯನ ಮಿತಿಗಳೇನು ಎಂದು ನಾನು ಯೋಚಿಸಿದ್ದಿಲ್ಲ. ಸಾಧ್ಯತೆಗಳೇ ನನ್ನ ಕಾಳಜಿ;ವಿಚಾರಗಳು ಉಮ್ಮಳಿಸಿ ಬರುತ್ತಾವೆ; ವಾಸ್ತವತೆಯೆಂದರೆ ನನಗೆ ಅಸಮಾಧಾನ”(ಅದೇ ಪುಟ ೧೧೪) ಎಂದು ಸಮಾಧಾನ ತಂದುಕೊಳ್ಳುತ್ತಾನೆ.

ಭಾರತೀಪುರದ ಪ್ರಸಿದ್ಧ ದೇವಸ್ಥಾನಕ್ಕೆ ಜಗನ್ನಾಥನ ನೇತೃತ್ವದಲ್ಲಿ ಹರಿಜನ ಯುವಕರ ಪ್ರವೇಶದ ಹಿಂದಿನ ದಿನ ಆ ದೇವಸ್ಥಾನದ ಪೂಜಾರಿ ಸೀತಾರಾಮಯ್ಯನವರ ಪುಕ್ಕಲು ಮಗ ಮಧ್ಯರಾತ್ರಿಯಲ್ಲಿ ತಂದೆ ಮಲಗಿದ್ದ  ಹಾಸಿಗೆಯ ದಿಂಬಿನ ಪಕ್ಕದಲ್ಲಿದ್ದ ದೇವಸ್ಥಾನದ ಬೀಗದ ಕೈ ತೆಗೆದುಕೊಂಡು ಹಾರೆ ಸಮೇತ ಮನೆಯಿಂದ ಹೊರಟು  ದೇವಸ್ಥಾನಕ್ಕೆ ಬರುತ್ತಾನೆ. ಆ ಹಾರೆಯಿಂದ ದೇವಸ್ಥಾನದ ಗರ್ಭಗುಡಿಯ ಲಿಂಗವನ್ನು ಅಗೆದು ತೆಗೆದು ಹೊಳೆಗೆ ಹಾಕುತ್ತಾನೆ. ನಂತರ ಗರ್ಭಗುಡಿಯಲ್ಲಿ ಬಾಗಿಲು ಹಾಕಿಕೊಂಡು ಕೂರುತ್ತಾನೆ. ಅಪ್ಪನ ನೆರಳನ್ನು ಕಂಡರೇ ಹೆದರುವ ಈ ಮಗನ ಸಾಹಸದಿಂದ ದೇವರಿಲ್ಲದ ಗುಡಿಗೆ ಹರಿಜನರ ಪ್ರವೇಶವಾಗುತ್ತದೆ. ಅಂತೂ ದೇವರಿಗೆ ಮೈಲಿಗೆಯಾಗಲಿಲ್ಲ. ಊರಿನವರೆಲ್ಲಾ ಸಮಾಧಾನದ ನಿಟ್ಟುಸಿರು ಬಿಟ್ಟು ಹೊಸ ಲಿಂಗದ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಸುತ್ತಾರೆ. ಇದಿಷ್ಟು ಭಾರತೀಪುರ ಕಾದಂಬರಿಯ ಮುಖ್ಯಾಂಶಗಳು..

ಇಲ್ಲಿ ಓದುಗರಾದ ನಾವು ಗಮನಿಸಬೇಕಾದ ಒಂದು ಮುಖ್ಯ ಅಂಶವಿದೆ. ದಾಟು ಕಾದಂಬರಿಯಲ್ಲಿ ಮೋಹನದಾಸ ತನ್ನ ಕೇರಿಯವರ ಜತೆ ದೇವಾಲಯ ಪ್ರವೇಶಿಸಿದ ಸ್ವಲ್ಪ ಹೊತ್ತಿಗೆ ಆತ  ತಲೆಸುತ್ತಿ ಬಂದು ಬಿದ್ದದ್ದನ್ನು  ಭೈರಪ್ಪನವರ  “ಪ್ರತಿಗಾಮಿ”ಧೋರಣೆ,ಹರಿಜನರು ದೇವಾಲಯ ಪ್ರವೇಶಿಸಬಾರದು ಎಂಬ ಸೂಚನೆ ಇದು ಎಂದು  ವಿಮರ್ಶಕರು ಟೀಕಿಸಿದ್ದುಂಟು. ಆದರೆ ಭಾರತೀಪುರ ಕಾದಂಬರಿಯಲ್ಲಿ ದೇವಸ್ಥಾನದ ಪೂಜಾರಿಯ ಮಗನೇ ದೇವರನ್ನು ಹೊಳೆಗೆ ಎಸೆದಿದ್ದರಿಂದ ದೇವರಿಲ್ಲದ ಗುಡಿಗೆ ಹರಿಜನರ ಪ್ರವೇಶವಾದ್ದರಿಂದ  ದೇವರು ಮಲಿನವಾಗುವುದನ್ನು ಅಂತೂ ಭೂತರಾಯನೇ ತಪ್ಪಿಸಿದ ಎಂದು ಜನರು ಮಾತಾಡುವ ಸನ್ನಿವೇಶಗಳಿಂದ ಅನಂತಮೂರ್ತಿಯವರು ” ಪ್ರತಿಗಾಮಿ” ಎನಿಸಿಕೊಳ್ಳಲಿಲ್ಲ. ದಾಟುವಿನಲ್ಲಿ ಕೊನೆಯ ಪಕ್ಷ ಹರಿಜನರು ದೇವರಿದ್ದ ದೇವಸ್ಥಾನವನ್ನು ಪ್ರವೇಶಿಸಿದರು.

ಭಾರತೀಪುರದಲ್ಲಿ ಅದೂ ಆಗಲಿಲ್ಲ.

ಇನ್ನು ದಾಟು ಮತ್ತು ಭಾರತೀಪುರ ಕಾದಂಬರಿಗಳ ಬಗ್ಗೆ ವಿಮರ್ಶಕರು ಏನು ಹೇಳಿದ್ದಾರೆ ಎಂಬುದನ್ನು ಸ್ವಲ್ಪ ಗಮನಿಸೋಣ.

(೧) ‘…. ದಾಟು ಮತ್ತು ಭಾರತೀಪುರ ಎರಡೂ ಕಾದಂಬರಿಗಳನ್ನು ಗಮನಿಸಿದಾಗ ಭೈರಪ್ಪನವರು ಅನಂತಮುರ್ತಿಯವರಿಗಿಂತ ಹರಿಜನರ ಸಮಸ್ಯೆಗಳಿಗೆ ಹತ್ತಿರವಾಗಿದ್ದಾರೆ … ದಾಟುವಿನಲ್ಲಿ ಕಾಣಬಹುದಾದ ಪೂರ್ಣ ದೃಷ್ಟಿ ಭಾರತೀಪುರದಲ್ಲಿಲ್ಲ …… ಈ ಕಾದಂಬರಿಯಲ್ಲೂ(ಭಾರತೀಪುರ) ಕತೆ ಉತ್ತಮವಾಗಿದೆಯಾದರೂ ಇದು ಒಂದು ರೀತಿ thesis ಆಗಿಯೇ ಉಳಿಯುತ್ತದೆ …(ಟಿ ಎಂ ರಮೇಶ,ಸಹಸ್ಪಂದನ, ಪುಟ ೫೬೧)

(೨)……. ಸಮಾಜವನ್ನು ಕಣ್ಣಿಟ್ಟು ನೋಡುತ್ತಾ, ಬೇರೆ ವ್ಯಕ್ತಿಗಳ ವಿಶಿಷ್ಟತೆಯನ್ನು ಗುರುತಿಸುವ ದಾಟುವಿನಂತಹ ಕಾದಂಬರಿಗಳು ಉತ್ತಮ ಕಾದಂಬರಿಯ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ದಾಟುವಿನ ಮುಖ್ಯ ದೋಷವೆಂದರೆ ಕೆಲವು ಕಡೆ ಅತಿಯಾಗಿ ಪುನರಾವೃತ್ತಿಯಾಗುವ ಅಂಶಗಳನ್ನು ಕತ್ತರಿಸದಿರುವುದು. ( ಸುಮತೀಂದ್ರ ನಾಡಿಗ,ಸಹಸ್ಪಂದನ, ಪುಟ ೬೭೪).

(೩)’…….ನವ್ಯ ಕಾದಂಬರಿಗಳಲ್ಲಿ ಕಾಣುವ ನಾಯಕನ ಟೊಳ್ಳು ವ್ಯಕ್ತಿತ್ವಕ್ಕೆ ಭಾರತೀಪುರದ ಜಗನ್ನಾಥ ಸಾಕ್ಷಿಯಾಗಿದ್ದಾನೆ. ಅನುಭವದ ತೀವ್ರತೆ ಹಾಗೂ ಆಂತರಿಕ ಒತ್ತಡಗಳಿಲ್ಲದೆ ಭಾರತೀಪುರ ಸಾಮಾಜಿಕ ಪರಿವರ್ತನೆಗೆ ಕಾರಣವಾಗದೆ ಸೋಲನ್ನು ಅನುಭವಿಸುವುದನ್ನು ನಾವು ಕಾಣುತ್ತೇವೆ .(ಡಾ. ಜಿ ಎಂ ಹೆಗಡೆ,   ಡಾ. ಯು ಆರ್ ಅನಂತಮೂರ್ತಿಯವರ ಸಾಹಿತ್ಯದರ್ಶನ  ಪುಟ ೨೦೦,ಸುಂದರ ಪ್ರಕಾಶನ ಬೆಂಗಳೂರು-೧೯  ೨೦೧೨)

(೪) ‘… ಸುಮಾರು ಮುನ್ನೂರು ಪುಟಗಳ ತನಕ ತುಂಬಾ ಸಹಜವಾಗಿ ಹರಿದು ಬಂದ  (ದಾಟು ಕಾದಂಬರಿಯ) ಕಥೆ ಅಲ್ಲಿಂದ ಮುಂದಕ್ಕೆ ಹೊಸ ತಿರುವು ಪಡೆಯುತ್ತದೆ.  ಇಲ್ಲಿಯ ತನಕದ  ಘಟನೆಗಳು  ಸಹಜವಾಗಿ ಸಂಭವಿಸುತ್ತವೆ;ಆದರೆ ಮುಂದಿನ ಘಟನೆಗಳನ್ನು ಕಾದಂಬರಿಕಾರರು ನಿರ್ಮಿಸುತ್ತಾರೆ … ಪೂರ್ವಾದದ ಸಹಜತೆ ಉತ್ತರಾರ್ಧದಲ್ಲಿ ಮಂಕಾದಂತೆ ಅನ್ನಿಸಿದರೂ …ಕನ್ನಡದಲ್ಲಿ ಇದೊಂದು ಅಸಾಧಾರಣ ಕೃತಿ ಎನ್ನುವುದರಲ್ಲಿ ಸಂದೇಹವಿಲ್ಲ…ಜಾತೀಯ ಸಮಸ್ಯೆಯ ಬಗ್ಗೆ ಬಂದ ಇತ್ತೀಚಿನ ಕಾದಂಬರಿಗಳಲ್ಲಿ ಇದು ಹೆಚ್ಚು ವಸ್ತುನಿಷ್ಠವಾಗಿ ಬಂದಿದೆ ಎನ್ನುವುದನ್ನು ಮರೆಯುವಂತಿಲ್ಲ… ಕಾದಂಬರಿಯಲ್ಲಿ ಸತ್ಯಭಾಮೆ ಸೋಲುತ್ತಾಳೆ; ಭೈರಪ್ಪನವರೂ ಸೋಲುತ್ತಾರೆ.ಆದರೆ ಇಬ್ಬರ ಸೋಲೂ ಬುದ್ಧಿಪೂರ್ವಕವಾಗಿ ತಂದುಕೊಂಡ ಸೋಲು. ಸೋತ ಸೋಲಲ್ಲ.ಗೆಲುವಿನ ಧನ್ಯತೆಯನ್ನು ತಂದ ಸೋಲು.(ಬನ್ನಂಜೆ ಗೋವಿಂದಾಚಾರ್ಯ, ಸಹಸ್ಪಂದನ ಪುಟ ೫೪೯)

(೫)….ಈ ಕಾದಂಬರಿಯ (ಭಾರತೀಪುರ) ಮೇಲಿನ ನಿಜವಾದ ಆಕ್ಷೇಪವೆಂದರೆ ಇದರಲ್ಲಿ ಬರುವ ದಲಿತರು ಸರಿಯಾಗಿ ಚಿತ್ರಿತರಾಗಿಲ್ಲ; ಅವರ ಪಾತ್ರ ಚಿತ್ರಣದಲ್ಲಿ ಒಳ ಬದುಕಿನ ಅರಿವಿನ ಅಭಾವವಿದೆ …(ಡಿ ಆರ್ ನಾಗರಾಜ್  ಸಂಸ್ಕೃತಿಕಥನ  ಪುಟ ೪೪೨ ಪ್ರಕಾಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಬೆಂಗಳೂರು ೨ ೨೦೦೬) ಆದರೆ ಡಿ ಆರ್ ನಾಗರಾಜ್ ಅವರು ಈ ನಿಜವಾದ ಆಕ್ಷೇಪವನ್ನು ಕಾದಂಬರಿಕಾರರ ಪ್ರಜ್ಞಾಪೂರ್ಣ ವಿಚಾರಸರಣಿ, ಸ್ವಯಂಪೂರ್ಣವಾಗಿರುವ  ಕಾದಂಬರಿಯ ಶೈಲಿ ಇತ್ಯಾದಿ ಪದಗಳ  ಸಹಾಯದಿಂದ ನಿವಾರಿಸಿ ಬಿಟ್ಟಿದ್ದಾರೆ.

(ಈ ಲೇಖನದಲ್ಲಿ ಬರುವ ಭಾರತೀಪುರ ಕಾದಂಬರಿಯ ಪುಟಗಳ ಸಂಖ್ಯೆ ೮ನೇ ಮುದ್ರಣ  ೨೦೦೮ ಪ್ರಕಾಶಕರು :ಅಕ್ಷರ ಪ್ರಕಾಶನ ಹೆಗ್ಗೋಡು(ಸಾಗರ) ಮತ್ತು ಸಹಸ್ಪಂದನದ ಪುಟಗಳ ಸಂಖ್ಯೆ ಮೊದಲ ಮುದ್ರಣ ೧೯೭೮ರದ್ದು )

*ಮುಂದಿನ ಮುಖಾಮುಖಿ “ಆವರಣ” ಕಾದಂಬರಿ ಕುರಿತಂತೆ *

14 ಟಿಪ್ಪಣಿಗಳು Post a comment
  1. vidya
    ಡಿಸೆ 23 2013

    ಮಾನ್ಯ ಶ್ರೀರಂಗ ಅವರೆ, ದಾಟು ಕಾದಂಬರಿಯಲ್ಲಿ ಭೈರಪ್ಪ ಅವರು ಒಂದು ವಿಷಯ ಹೇಳುತ್ತಾರೆ. ಅದೇನೆಂದರೆ ಹಾರುವಯ್ಯ ನಮ್ಮ ಹೊಲಗೇರಿಗೆ ಬಂದರೆ ನಮ್ಮ ಲಕ್ಷ್ಮೀ ಹೊರಹೋಗುತ್ತಾಳೆಂದು ಅಲ್ಲಿನ ದಲಿತರು ನಂಬುತ್ತಾರೆಂದು ಹೇಳುತ್ತಾರೆ. ಹಾಗೆ ಆ ಹಾರುವಯ್ಯನನ್ನು ಪುನಃ ಕೇರಿ ದಾಟದಂತೆ ಮಾಡಲು ಪ್ರಯತ್ನಿಸುತ್ತಾರೆ. ಇರಲಿ ನನ್ನ ಅಭಿಪ್ರಾಯವೇನಂದರೆ ಮೇಲು ವರ್ಗಗಳು ಹ್ಯಾಗೆ ದಲಿತರು ಊರಲ್ಲಿ ಬರುವದನ್ನು ತಡೆಯಲು ನಾನಾ ರೀತಿಯಲ್ಲಿ ಪ್ರಯತ್ನಿಸುವರೋ ಅದೇ ರೀತಿ ದಲಿತರು ತಮ್ಮ ಕೇರಿಗೆ ಮೇಲು ಜಾತಿಯವರು ಬಾರದಂತೆ ತಡೆಯಲು ಪ್ರಯತ್ನಿಸುವದು ಕಂಡು ಬರುತ್ತದೆ. ಇದೇಕೆ ಪರಸ್ಪರ ಇಂಥ ಸಂಘರ್ಷ ಈಎರಡು ಜಾತಿಗಳ ನಡುವೆ ಇದೆ?? ಬಹಳ ವರ್ಷಗಳ ಹಿಂದೆ ದಲಿತರೋ ಅಥವಾ ಮೇಲ್ಜಾತಿಗಳವರೋ ಒಬ್ಬರು ಹೀಗೆ ಇಂಥ ಜಾತಿಯವರು ತಮ್ಮಲ್ಲಿ ಬರಬಾರದೆಂದು ನಿರ್ಬಂಧಿಸಿರಬೇಕು. ಅದಕ್ಕೇ ಇನ್ನೊಂದು ಜಾತಿಯವರೂ ತಾವೂ ಹಾಗೆ ನಿರ್ಭಂಧಿಸಿರಬಹುದೇನೋ?? ಇಂಥ ಅನೇಕ ನಂಬಿಕೆಗಳಿವೆ. ದಲಿತರು ಮೇಲ್ಜಾತಿಯವರನ್ನು ಮುಟ್ಟಿದರೆ ತಮ್ಮ ಫಲವಂತಿಕೆಯನ್ನು ಕಳೆದುಕೊಳ್ಳುವರೆಂದು ದಲಿತರಲ್ಲಿ ನಂಬಿಕೆ ಇದೆ. ಇದೇಕೆ ಹೀಗಿದೆ?? ಶ್ರೀ ಎಸ್. ಎನ್. ಬಾಲುಸರ್ ಈ ಬಗ್ಗೆ ಏನಾದರೂ ಹೇಳುವರೇ?? ಅಥವಾ ಷಣ್ಮುಖ ಅವರಾದರೂ ಉತ್ತರಿಸುವರೆ? ಸಮಾಜ ವಿಜ್ಞಾನ ಈ ಬಗ್ಗೆ ಏನು ಹೇಳುತ್ತದೆ? ದಯವಿಟ್ಟು ಈ ಬಗ್ಗೆ ಚರ್ಚೆಯಾಗಲಿ.

    ಉತ್ತರ
    • ಎ. ಷಣ್ಮುಖ
      ಡಿಸೆ 24 2013

      ವಿದ್ಯಾರವರೇ, ನೀವು ಉಲ್ಲೇಖಿಸಿರುವ ಸಂಗತಿಗಳಿಗೆ ಸಂಬಂದಿಸಿದಂದತೆ ಈಗಿರುವ ಸಮಾಜ ವಿಜ್ಞಾನದ ವಿವರಣೆಗಳಿಗೂ ಮತ್ತು ಭೈರಪ್ಪನವರು ಕಾದಂಬರಿಯಲ್ಲಿ ನೀಡಿರುವ ವಿರಣೆಗಳಿಗೂ ಅಷ್ಟೊಂದು ದೊಡ್ಡ ವ್ಯತ್ಯಾಸವೇನಿಲ್ಲ. ಅದೇ ತತಕಥಿತ ಹಿಂದೂ ಧರ್ಮದ ಮೌಢ್ಯ, ಪುರೋಹಿತಶಾಹಿ ಹುನ್ನಾರ, ಧರ್ಮಶಾಸ್ತ್ರಗಳ ತಿರುಚುವಿಕೆ, ಮೇಲ್ಜಾತಿಗಳ ಅನೈತಿಕ ಮೈತ್ರಿಯ ಮೂಲಕ ಶೋಷಣೆ, ಅಮಾನವೀಯ ಗುಲಾಮಗಿರಿ ಮತ್ತು ಅಸ್ಫೃಶ್ಯತೆಯ ಹೇರಿಕೆ…. ಮುಂತಾಗಿ ಇವೇ ವಿವರಣೆಗಳೇ ..!!! ವ್ಯತ್ಯಾಸವೇನೂ ಇಲ್ಲ.

      ನೀವು ಎತ್ತಿರುವ ವಿಚಾರಕ್ಕೆ ಸದ್ಯಕ್ಕೆ ಸುಲಭದ ಉತ್ತರವಿಲ್ಲ. ಅದಕ್ಕೆ ಈಗಿರುವ ಸಮಾಜ ವಿಜ್ಞಾನದಿಂದ ಉತ್ತರವಿಲ್ಲ (ಬದಲಿಗೆ ಈ ಸಮಸ್ಯೆಗಳನ್ನು ಇನ್ನೂ ಹೆಚ್ಚಿಸುವ ಮತ್ತು ಹೊಸ ರೀತಿಯ ಸಮಸ್ಯೆಗಳನ್ನು ಸೃಷ್ಟಸುವ ಬೀಜಗಳು ಅಲ್ಲಿವೆ) ಹಾಗಾಗಿ ಪರ್ಯಾಯ ಊಹಾ ಸಿದ್ದಾಂತಗಳನ್ನು ರೂಪಿಸಿಕೊಂಡು ನೇರ ಅಧ್ಯಯನದಿಂದ ಮಾತ್ರ ಈ ವಿಚಾರಗಳಿಗೆ ಉತ್ತರ ಕಂಡುಕೊಳ್ಳಲು ಸಾಧ್ಯ.

      [ ಮೇಲು ವರ್ಗಗಳು ಹ್ಯಾಗೆ ದಲಿತರು ಊರಲ್ಲಿ ಬರುವದನ್ನು ತಡೆಯಲು ನಾನಾ ರೀತಿಯಲ್ಲಿ ಪ್ರಯತ್ನಿಸುವರೋ ಅದೇ ರೀತಿ ದಲಿತರು ತಮ್ಮ ಕೇರಿಗೆ ಮೇಲು ಜಾತಿಯವರು ಬಾರದಂತೆ ತಡೆಯಲು ಪ್ರಯತ್ನಿಸುವದು ಕಂಡು ಬರುತ್ತದೆ. ಇದೇಕೆ ಪರಸ್ಪರ ಇಂಥ ಸಂಘರ್ಷ ಈಎರಡು ಜಾತಿಗಳ ನಡುವೆ ಇದೆ?? ]

      ನಿಮ್ಮ ಗ್ರಹಿಕೆಯಲ್ಲಿರುವ ಜಾತಿಗಳು (ವರ್ಗಗಳು?) ನಮ್ಮ ಎಲ್ಲ ಹಳ್ಳಿಗಳಲ್ಲೂ ಇವೆ. ಈ (ನಿರ್ಬಂದಿಸುವ) ಸ್ಥಿತಿಯೇ ನಿರಂತರವಾಗಿ ಯಾವಗಲೂ ಇದ್ದ ಪಕ್ಷದಲ್ಲಿ ಎಲ್ಲಾ ಹಳ್ಳಿಗಳಲ್ಲೂ ನಿರಂತರವಾಗಿ ಸಂಘರ್ಷ, ಗಲಭೆಗಳೇ ವ್ಯಾಪಕವಾಗಿ ನಡೆಯುತ್ತಿವೆ ಎಂದಾಯಿತು. ಆದರೆ ಈ ರೀತಿಯ ಸಂಘರ್ಷಗಳು ಸುದ್ದಿಯ ರೂಪದಲ್ಲಿ (ಅಂದರೆ ವಾರಕ್ಕೆ ತಿಂಗಳಿಗೆ ಒಮ್ಮೆ ಅಲ್ಲೊಂದು ಇಲ್ಲೊಂದು) ನೋಡುತ್ತಿರುವೆವೋ/ಕೇಳುತ್ತಿರುವೆವೋ ವಿನಃ ದಿನಬೇಳಗಾದರೆ ಪ್ರತಿಯೊಬ್ಬರ ದೈನಂದಿನ ಅನುಭವದಂತೇನೂ ಕಾಣುವುದಿಲ್ಲವಲ್ಲ. ಹೀಗಾಗಿ 1) ಎಲ್ಲೆಡೆ ಈ ರೀತಿ ನಿರ್ಬಂದವಿರಲಿಕ್ಕಿಲ್ಲ. 2.) ಇದ್ದರೂ ಹಾಗಿರುವುದೇ ಸಂಘರ್ಷಕ್ಕೆ ಕಾರಣವಾಗುತ್ತಿಲ್ಲ.

      ಮೊದಲನೆಯದನ್ನು ಇದುವರೆಗೂ ಯಾರೂ ತೋರಿಸಿಲ್ಲ. ಅಂದರೆ ಎಲ್ಲಾ ಹಳ್ಳಿಗಳಲ್ಲೂ ಜಾತಿಗಳ ನಡುವೆ ಇದೇ ರೀತಿಯ ನಿರ್ಬಂದಗಳಿವೆ ಎನ್ನುವುದನ್ನು ಯಾವ ಸಾಮಾಜಿಕ ಸಂಶೋಧನೆಯೂ ತೋರಿಸಿಲ್ಲ. ಅಲ್ಲಲ್ಲಿ ಆತ್ಮಕಥೆಗಳ, ಮತ್ತು ಕೆಲವು ವ್ಯಕ್ತಿಗಳ ವೈಯುಕ್ತಿಕ ಅನುಭವಗಳ ಬರವಣಿಗೆಗಳಲ್ಲಿ ಮತ್ತು ಕಥೆ ಕಾದಂಬರಿಗಳ ಘಟನೆಗಳಲ್ಲಿ ಇವು ಬರುತ್ತವೆ ಮತ್ತು ಅವು ನಮ್ಮ ಈಗಿನ ಸುದ್ದಿಗಳಲ್ಲಿ ಬರುವಷ್ಟೇ ಸಾಮಾನ್ಯವಾದದ್ದಾಗಿದೆ (ಅಂದರೆ ಅಲ್ಲೊಂದು ಇಲ್ಲೊಂದು).

      ಮೊದಲನೆಯದನ್ನು ತೋರಿಸಿದರೂ ಎರಡನೆಯದನ್ನು ಅಲ್ಲಗಳೆಯಲಾಗುವುದಿಲ್ಲ. ಅಲ್ಲವೇ?

      ನನಗೆ ಮತ್ತೊಂದು ಕುತೂಹಲದ ಪ್ರಶ್ನೆ ಇದೆ. ಅದೇನೆಂದರೆ, ದಲಿತರ ಕೇರಿಗೆ ಬ್ರಾಹ್ಮಣರು ಬರುವ ಮತ್ತು ಬ್ರಾಹ್ಮಣರ ಕೇರಿಗೆ ದಲಿತರು ಬರುವ ಎರಡೇ ಸಂಭವನೀಯತೆಯ ಹಿನ್ನೆಲೆಯಲ್ಲಿ ಮಾತ್ರವೇ ಈ ರೀತಿಯ ವಿವರಣೆಗಳು ಏಕೆ ಇವೆ? ದಲಿತರು ಮತ್ತು (ಬ್ರಾಹ್ಮಣರಲ್ಲದ) ಉಳಿದ ಜಾತಿಗಳಿಗೆ ಸಂಬಂದಿಸಿದಂತೆ ಈ ರೀತಿಯ ನಿರ್ಬಂದಗಳೇ ಇಲ್ಲವೇ? ಅದರಿಂದ ಯಾವಸಂಘಷರ್ಷವೂ ಹುಟ್ಟುವುದಿಲ್ಲವೇ?

      ನಮ್ಮ ಅಧ್ಯಯನದ ಪ್ರಕಾರ ಕರ್ನಾಟಕದಲ್ಲಂತೂ ಜಾತಿ ಸಂಘರ್ಷದ ಹೆಸರಿನಲ್ಲಿ ಹೆಚ್ಚು ಜಗಳಗಳು ವರಧಿಯಾಗಿರುವುದು (ಮತ್ತು ಆಗುತ್ತಿರುವುದು) ದಲಿತರು ಮತ್ತು (ಬ್ರಾಹ್ಮಣರಲ್ಲದ) ಉಳಿದ ಜಾತಿಗಳಿಗೆ ಸೇರಿದವರ ನಡುವೇಯೇ (ಧೌರ್ಜನ್ಯ ಕಾಯಿದೆಯಡಿಯಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಶೇ 95 ಕ್ಕೂ ಹೆಚ್ಚು ಇವರದ್ದೇ!!!). , ಬ್ರಾಹ್ಮಣರೇ ಇಲ್ಲದ ನೂರಾರು ಹಳ್ಳಿಗಳಲ್ಲೂ ದಲಿತ ಮತ್ತು ಇತರ ಜಾತಿಗಳ ಜನರ ನಡುವೆ ಸಂಘಷರ್ಷಗಳಿವೆ. (ನಾವು ಅವನ್ನು ಜಾತಿ ಸಂಘರ್ಷ ಎನ್ನುವುದಿಲ್ಲ. ಏಕೆ ಎನ್ನುವುದಕ್ಕೆ ಡಂಕಿನ್ ಜಳಕಿಯವರು ಸಂಪಾದಿಸಿರುವ “ಭಾರತದಲ್ಲಿ ಜಾತಿವ್ಯವಸ್ಥೆ ಇದೆಯೇ?” ಪುಸ್ತಕದಲ್ಲಿನ ನನ್ನ ಲೇಖನವನ್ನು ಓದಿ.) ಆದರೆ ಅವನ್ನು ಅರ್ಥಮಾಡಿಕೊಳ್ಳ ಬೇಕೆಂದರೆ ಈ ತಥಾಕತಿತ “ಮೇಲ್ಜಾತಿ” “ಕೆಳಜಾತಿ”, “ಜಾತಿವ್ಯವಸ್ಥೆಯ ಕಟ್ಟುಪಾಡು”, “ಪುರೋಹಿತಶಾಹಿಗಳ ಹುನ್ನಾರ” “ಧರ್ಮಶಾಸ್ತ್ರಗಳ ನಿಯಂತ್ರಣ” “ಹಿಂದೂಧರ್ಮದ ಶ್ರೇಣೀಕೃತ ಅಸಮಾನತೆಯ ನಿಯಮ/ತತ್ವ”… …. …. ಮುಂತಾದ ಪರಿಕಲ್ಪನೆಗಳನ್ನೆಲ್ಲಾ ಬದಿಗಿಟ್ಟು ಸಂಶೋಧನೆ ಮಾಡಬೇಕು. ನಮ್ಮ ಸಂಶೋಧನೆ ಈ ನಿಟ್ಟಿನಲ್ಲಿ ಸಾಗಿದೆ… ಈ ಅಧ್ಯಯನ ಒಂದು ಹಂತ ಮುಟ್ಟಿದಾಗ ನಿಮ್ಮ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ದೊರೆಯುತ್ತದೆ ಎನ್ನು ಆಶಾವಾದ ನನ್ನದು.. (ಇದುವರೆಗೂ ನಾವು ಕಂಡುಕೊಂಡಿರುವ ಕೆಲವನ್ನು ಮೇಲೆ ಉಲ್ಲೇಖಿಸಿದ ಪುಸ್ತಕದಲ್ಲಿ ಸ್ವಲ್ಪ ಈಗಾಗಲೇ ಹೇಳಿಯಾಗಿದೆ. ದಯವಿಟ್ಟು ಅದನ್ನು ಓದಿ. ಮತ್ತು ಶೀಘ್ರದಲ್ಲೇ ಇನ್ನೂ ಕೆಲವು ಸಂಶೋಧನಾ ಗ್ರಂಥಗಳೂ ಪ್ರಕಟವಾಗುವುದರಿಲ್ಲಿವೆ)

      ಎ. ಷಣ್ಮೂಖ

      ಉತ್ತರ
  2. M.A.Sriranga
    ಡಿಸೆ 24 2013

    ವಿದ್ಯಾ ಅವರಿಗೆ —
    ಸಿದ್ದಲಿಂಗಯ್ಯನವರ ಊರು ಕೇರಿ ಭಾಗ ೧ ಮತ್ತು ಭಾಗ ೨ ಕೃತಿಗಳನ್ನು ತಾವು ಓದಿರಬಹುದು ಎಂದು ಭಾವಿಸುತ್ತೇನೆ. ಯಾವ ಪೂರ್ವಗ್ರಹಗಳಿಲ್ಲದೆ ಇರುವ ಆ ಕೃತಿಗಳಲ್ಲಿ ಕೆಲವೊಂದು ಕುತೂಹಲಕಾರಿಯಾದ ಅಂಶಗಳಿವೆ.

    ಉತ್ತರ
  3. M.A.Sriranga
    ಡಿಸೆ 25 2013

    ವಿದ್ಯಾ ಅವರಿಗೆ —-
    ನಿಮ್ಮ ಪ್ರತಿಕ್ರಿಯೆಯ ಮೊದಲನೇ ಪ್ರಶ್ನೆಗೆ ಸಂಬಂಧಿಸಿದಂತೆ (ಹಾರುವರು ದಲಿತರ ಕೇರಿಗೆ ಹೋದರೆ ಲಕ್ಷ್ಮಿ ಅವರ ಕೇರಿಯಿಂದ ಹೊರಟುಹೋಗುತ್ತಾಳೆ …… ) ಒಂದು ಪುರಾತನ ಕಥೆ ದಾಟು ಕಾದಂಬರಿಯಲ್ಲೇ ಇದೆ. (ಪುಟ ೨೧೬-೨೧೭ ಎರಡನೇ ಮುದ್ರಣ ೧೯೭೮). ಇನ್ನು ಎರಡನೇ ಪ್ರಶ್ನೆಯ ವಿಷಯ ನನಗೆ ಗೊತ್ತಿರಲಿಲ್ಲ. ಬಹುಶಃ ಅದಕ್ಕೆ ಕಾರಣ ವರ್ಣಸಂಕರ ಆಗದಿರಲಿ ಎಂದಿರಬೇಕು. ಬ್ರಾಹ್ಮಣರು ಮಾತ್ರ ಯಾಕೆ ಈ ಮಡಿ ಮೈಲಿಗೆ ಅನ್ನು ಅಷ್ಟು ಆಚರಿಸುತ್ತಿದ್ದರು ಎಂಬುದಕ್ಕೆ ನಿಖರವಾಗಿ ಏನೂ ಹೇಳಲಾಗದಿದ್ದರೂ,ಊಹೆ ಮಾಡಿದರೆ ಅವರು ದೈಹಿಕ ಶ್ರಮದ ಕೆಲಸ ಮಾಡದೆ ದಿನದ ಹೆಚ್ಚಿನ ಕಾಲವನ್ನು ಓದು ದೇವರ ಪೂಜೆ ಇತ್ಯಾದಿಗಳಲ್ಲಿ ಕಳೆಯುತ್ತಾ ಹಿಂದಿನಿಂದ ಬಂದ ಸಂಪ್ರದಾಯಗಳನ್ನು ನಡೆಸುತ್ತಾ ಬಂದಿರಬಹುದಾದ್ದರಿಂದ ಇರಬಹುದು. ರೂಢಿಯೇ -ನಂಬಿಕೆ, ಸಂಪ್ರದಾಯವಾಗಿ ಬೆಳೆದು ಮಿತಿಮೀರಿದಾಗ ಅದರ ವಿರುದ್ಧ ಸಹಜವಾಗಿ ಜನ ತಿರುಗಿಬೀಳುತ್ತಾರೆ.

    ಉತ್ತರ
  4. vidya
    ಡಿಸೆ 25 2013

    ಆತ್ಮೀಯ ಶ್ರೀರಂಗ ಅವರೆ ಕೇವಲ ಸ್ಪರ್ಶ ಮಾತ್ರದಿಂದ ವರ್ಣಸಂಕರ ಹೇಗಾಗುತ್ತದೆ. ಇನ್ನು ಬ್ರಾಹ್ಮಣರು ಸೂಕ್ಷ್ಮ್ ಪ್ರಕ್ಜೃರ್ತಿಯವರಾಗಿದ್ದರಿಂದ ಹೆಚ್ಚು ಮಡಿ ಮೈಲಿಗೆ ಆಚರಿಸುತ್ತಿದ್ದರೆಂಬ ಅರ್ಥ್ದದಲ್ಲಿ ತಾವು ಹೇಳಿದ್ದಿರಿ. ಆದರೆ ಪೇಶ್ವೆಗಳ ಕಾಲದಿಂದ ಸುಮಾರು ರಾಜರು ಬ್ರಾಹ್ಮಣರೇ ಆಗಿದ್ದರಲ್ಲವೇ ಮಹಾಭಾರತ ಕಾಲದಲ್ಲೂ ದ್ರೋಣ ಪರಶುರಾಮನಂಥವರು ಕ್ಷಾತ್ರ ತೇಜಸ್ಸಿನವರಿದ್ದರಲ್ಲವೆ?? ಇವತ್ತು ಸುಮಾರು ಜನ ಸೈನ್ಯದ ಉನ್ನತ ಹುದ್ದೆಯಲ್ಲಿ ಬ್ರಾಹ್ಮಣರು ಇದ್ದಾರಲ್ಲವೆ?? ಹೀಗಿರುವಾಗ ಬ್ರಾಹ್ಮಣರು ಸೂಕ್ಷ್ಮ ಪ್ರಕೃರ್ತಿಯವರಾಗಿದ್ದರೆ ಇಂಥ ಕ್ಷಾತ್ರ ತೇಜಸ್ಸು ಎಲ್ಲಿಂದ ಬರುತ್ತಿತ್ತು??

    ಉತ್ತರ
  5. M.A.Sriranga
    ಡಿಸೆ 25 2013

    ವಿದ್ಯಾ ಅವರಿಗೆ–
    ತಾವು ನೀಡಿದ ಐತಿಹಾಸಿಕ ವಿವರಗಳು ಸರಿ. ನಾನು ಜನಸಾಮಾನ್ಯರ ದೃಷ್ಟಿಯಿಂದ ಮತ್ತು ಈ ಹಿಂದೆ ನಮ್ಮ ಸಮಾಜದಲ್ಲಿ ಜಾಸ್ತಿ ಇದ್ದ ಹಾಗು ಈಗ ಕ್ರಮೇಣ ಕಮ್ಮಿ ಆಗುತ್ತಿರುವ ಒಂದು ವಿದ್ಯಮಾನದ ಬಗ್ಗೆ ಹೇಳಿದ್ದು. ಸ್ಪರ್ಶದಿಂದ ದೂರವಿಟ್ಟಿದ್ದರ ಹಿಂದೆ ಅವರುಗಳ ನಡುವೆ “ಸಂಬಂಧ” ಆಗದೇ ಇರಲಿ ಎಂಬ ಉದ್ದೇಶವೂ ಇರಬಹುದಲ್ಲವೇ? ಬಸವಣ್ಣನವರ ಕಾಲದಲ್ಲಿ ಅಂತರ್ಜಾತಿ ವಿವಾಹದಿಂದ ಆದ ಅನಾಹುತಗಳ ಬಗ್ಗೆ ತಮಗೆ ತಿಳಿದಿದೆ. ಆ ಘಟನೆಗಳು ಈಗ ನಾವು ತಿಳಿದಿರುವ ರೀತಿಯಲ್ಲೇ ಅದೇ ವಿವರಗಳಲ್ಲಿ ನಡೆಯದೆ ಇರಬಹುದು; ಆದರೆ ಸತ್ಯದ ಅಂಶ ಸ್ವಲ್ಪವಾದರೂ ಇರಬಹುದು. ಜನಪ್ರಿಯ ನಾಟಕಗಳಾದ “ಕಡ್ಲಿಮಟ್ಟಿ ಕಾಶೀಬಾಯಿ” ಮತ್ತು “ಸಂಗ್ಯಾ ಬಾಳ್ಯ” ಗಳಿಗೆ ವಾಸ್ತವದ ಹಿನ್ನಲೆಗಳಿವೆ.ಕಡ್ಲಿಮಟ್ಟಿ ಎಂಬುದು ಉತ್ತರ ಕರ್ನಾಟಕದ ಜಿಲ್ಲೆಯೊಂದರಲ್ಲಿ ಈಗಲೂ ಇರುವ ಒಂದು ರೈಲ್ವೆ ನಿಲ್ದಾಣ(ಬಹುಶಃ ಬಿಜಾಪುರ ಜಿಲ್ಲೆ ಇರಬಹುದೇನೋ ನನಗೆ ಸದ್ಯಕ್ಕೆ ಜ್ಞಾಪಕಕ್ಕೆ ಬರುತ್ತಿಲ್ಲ).
    ಅನಂತಮೂರ್ತಿಯವರ ಆತ್ಮಕಥನದಲ್ಲಿ ಅವರ ಪ್ರಸಿದ್ಧ ಕಥೆಗಳಾದ “ಕಾರ್ತೀಕ” ,”ಸೂರ್ಯನಕುದುರೆ’ ಮತ್ತು “ಘಟಶ್ರಾದ್ಧ”ಕ್ಕೆ ಇದ್ದ ವಾಸ್ತವಾಂಶಗಳನ್ನು ಹೇಳಿದ್ದಾರೆ. ಇನ್ನು ಅವರ “ಅವಸ್ಥೆ” ಕಾದಂಬರಿಯ ವಸ್ತು ಆ ಕಾಲದ ಒಬ್ಬರು ಪ್ರಮುಖ ರಾಜಕಾರಣಿ ಅವರ ಜೀವನ. ಅದು ಪ್ರಕಟವಾದಾಗ ಮತ್ತು ನಂತರದಲ್ಲಿ ಸಿನಿಮಾ ಆದಾಗ ವಿವಾದವಾಗಿತ್ತು. ಬ್ರಾಹ್ಮಣರು ರಾಜ್ಯವಾಳಿದ್ದರೂ ಸಹ ಹಿಂದಿನ ರೂಢಿ ಸಂಪ್ರದಾಯಗಳನ್ನು ಮುರಿದಿದ್ದರೆ ತಮ್ಮ ಪ್ರಜೆಗಳನ್ನು ಎದುರುಹಾಕಿಕೊಳ್ಳುವ ಪ್ರಮೇಯ ಬರುತ್ತಿತ್ತು ಅಲ್ಲವೇ?

    .

    ಉತ್ತರ
  6. vidya
    ಡಿಸೆ 27 2013

    ಆತ್ಮೀಯರಾದ ಶ್ರೀರಂಗ ಅವರಿಗೆ ನನ್ನ ಮನಸ್ಸಿನಲ್ಲಿರುವ ಕೆಲವು ಸಂಶಯಗಳನ್ನು ಕೇಳುತ್ತಿದ್ದೇನೆ. ಇದು ನಿಮ್ಮ ಲೇಖನಕ್ಕೆ ನನ್ನ ಪ್ರತಿಕ್ರೀಯೆಯಲ್ಲ ಕೇವಲ ಕುತೂಹಲವಷ್ಟೇ. ಮಹಾಭಾರತದಲ್ಲಿ ಅನೇಕ ಜನ ಸೂತ ರಾಜರಿದ್ದರೆಂದು ಮಾನ್ಯ ಭೈರಪ್ಪ ಅವರು ತಮ್ಮ ಪರ್ವ ಕಾದಂಬರಿಯಲ್ಲಿ ಉಲ್ಲೇಖಿಸಿದ್ದಾರೆ. ಉಧಾಹರಣೆಗೆ ಗಾಂಧಾರಿಯ ಅಪ್ಪ, ದುಷ್ಯಲೆಯ ಗಂಡ ಇತ್ಯಾದಿ. ಆದರೆ ಇವರಾರನ್ನೂ ಮಹಾಭಾರತದಲ್ಲಿ ಸೂತಪುತ್ರಿ ಎಂದೋ ಸೂತ ಪುತ್ರ ಎಂದೋ ಜರೆದದ್ದು ನಮಗೆ ಕಂಡುಬರುವದಿಲ್ಲ. ಆದರೆ ಕರ್ಣನನ್ನು ಹೆಜ್ಜೆ ಹೆಜ್ಜೆಗೆ ಸೂತನೆಂದು ಅವಮಾನಿಸಿದ್ದು ಕಂಡು ಬರುತ್ತದೆ. ಅಷ್ಟೇ ಅಲ್ಲ ಭೀಷ್ಮರು ಕರ್ಣನಿಗೆ ತನ್ನ ಸೇನಾಧಿಪತ್ಯದಲ್ಲಿ ಹೋರಾಡಲು ಅನುಮತಿಸಲಿಲ್ಲ. ಆದರೆ ಸೂತರಾದ ಜಯದ್ರಥ ಮತ್ತು ಶಕುನಿಗೆ ಈ ನಿರ್ಭಂಧ ವಿಧಿಸಲಿಲ್ಲ. ಇನ್ನೂ ಅನೇಕ ರಾಜರಿಗೂ ಸಹ . ಇನ್ನು ಇದೇ ಮಹಾಭಾರತ ಕಾಲದಲ್ಲಿ ಸೂತರಿಗೆ ಧನುರ್ವಿದ್ಯೆ ಹೇಳಿ ಕೊಡಲಾಗುತ್ತಿರಲಿಲ್ಲ. ಆದ್ದರಿಂದ ಕರ್ಣ ತಾನು ಬ್ರಾಹ್ಮಣನೆಂದು ಹೇಳಿಕೊಂಡು ವಿದ್ಯಾಭ್ಯಾಸ ಮಾಡಬೇಕಾಯಿತು. ಎಂದಿದೆ. ಆದರೆ ಎಷ್ಟೋ ರಾಜರು ಸೂತರಿದ್ದರಲ್ಲ ಅವರಿಗೆ ಯಾರು ಧನುರ್ವಿದ್ಯೆ ಹೇಳಿಕೊಟ್ಟರು?? ಇನ್ನು ನನ್ನ 2ನೇ ಪ್ರಶ್ನೆಯೆಂದರೆ ಹಿಂದಿನ ಕಾಲದಲ್ಲಿ ಬ್ರಾಹ್ಮಣರು ಬೇರೆ ಜಾತಿಯವರಿಗೆ ಯಾವುದೇ ವಿದ್ಯೆ ಹೇಳಿಕೊಡುತ್ತಿರಲಿಲ್ಲ ಎಂಬ ಆಪಾದನೆ ಇವೆ. ಆದರೆ ಬೇಡ ಜಾತಿಯವರಾದ ವಾಲ್ಮೀಕಿಗಳಿಗೆ ಯಾರು ವಿದ್ಯೆ ಹೇಳಿಕೊಟ್ಟರು?? ಅಂಥ ಅದ್ಭುತ ಕಾವ್ಯ ಅವರಿಂದ ಹೇಗೆ ಬರಿಸಲ್ಪಟ್ಟಿತು?? ಹಾಗೇ ಕಾಳಿದಾಸ, ೧೨ನೇ ಶತಮಾನದ ದಲಿತ ವಚನಕಾರರು ಇವರಿಗೆಲ್ಲ ಯಾರು ವಿದ್ಯೆ ಕಲಿಸಿದರು?? ಇನ್ನು ಬಹಳಷ್ಟು ಜನ ಋಷಿ ಮುನಿಗಳು ಶೂದ್ರ ಕನ್ಯೆಯರನ್ನು ಮದುವೆಯಾಗಿರುವರಲ್ಲ ಇವರನ್ನು ಯಾರೂ ಏಕೆ ಶೂದ್ರರೆಂದು ಅವಮಾನಿಸಲಿಲ್ಲ ? ಹಾಗೂ ಇವರಿಗೆ ಇವತ್ತಿನಂತೆ ಆವತ್ತೂ ಕನ್ಯೆ ಸಿಗುವದು ಕಷ್ಟವಾಗಿತ್ತೆ?? ಯಾಕಾಗಿ ಇವರು ಶೂದ್ರ ಸ್ತ್ರೀಯನ್ನು ಮದುವೆಯಾದರು??

    ಉತ್ತರ
  7. M.A.Sriranga
    ಡಿಸೆ 28 2013

    ವಿದ್ಯಾ ಅವರಿಗೆ–
    ತಾವು ಕೇಳಿರುವ ಪ್ರಶ್ನೆಗಳು/ಸಂಶಯಗಳಿಗೆ ಉತ್ತರಿಸುವ ಮುನ್ನ ನನ್ನ ಓದಿನ ಮಿತಿಯನ್ನು ಹೇಳುವುದು ಉಚಿತವೆಂದು ಭಾವಿಸುತ್ತೇನೆ. ನಾನು ಸಂಸ್ಕೃತದಲ್ಲಿರುವ ಮೂಲ ಮಹಾಭಾರತವನ್ನು ಓದಿಲ್ಲ;ಹೀಗಾಗಿ ಪರ್ವದ ಜತೆ ಅದನ್ನಿಟ್ಟು ಹೋಲಿಕೆ ಮಾಡಿ ಉತ್ತರಿಸಲಾರೆ. ಭೈರಪ್ಪನವರ ಪರ್ವ ಕಾದಂಬರಿ, ಪರ್ವ ಬರೆಯುವ ಮುನ್ನ ಭೈರಪ್ಪನವರು ನಡೆಸಿದ ತಯಾರಿ,ಮಹಾಭಾರತ ನಡೆದ ಸ್ಥಳಗಳ ಭೇಟಿ. ಆ ಸ್ಥಳಗಳ ಚರಿತ್ರೆ,ಐತಿಹ್ಯ ಇತ್ಯಾದಿಗಳ ಬಗ್ಗೆ ತಿಳಿದಿರುವಂತಹ ಅಲ್ಲಿನ ವಿದ್ವಾಂಸರ ಭೇಟಿ, ಅವರ ಜತೆ ನಡೆಸಿದ ಚರ್ಚೆ ಇವೆಲ್ಲವನ್ನೂ ವಿವರವಾಗಿ ತಿಳಿಸುವ “ಪರ್ವ ಬರೆದಿದ್ದು”ಎಂಬ ದೀರ್ಘ ಲೇಖನ(ನಾನೇಕೆ ಬರೆಯುತ್ತೇನೆ? ಎಂಬ ಅವರ ಲೇಖನಗಳ ಸಂಕಲನದಲ್ಲಿದೆ),ಪರ್ವದ ಬಗ್ಗೆ ಬಂದಿರುವ ವಿಮರ್ಶೆ ಮತ್ತು ಪರ್ವ ಕಾದಂಬರಿಗಿಂತ ಮುಂಚೆ ಮಹಾಭಾರತವನ್ನು ಮಾನವ ವಂಶ ಶಾಸ್ತ್ರ(Anthropology) ಮತ್ತು ಸಮಾಜ ಶಾಸ್ತ್ರಗಳ ಹಿನ್ನೆಲೆಯಲ್ಲಿ ಅಭ್ಯಾಸಮಾಡಿ ಅದರ ಬಗ್ಗೆ ಮತ್ತು ಗಾಂಧಾರಿ,ಕುಂತಿ,ದ್ರೌಪದಿ,ಕೃಷ್ಣ ಇವರ ವ್ಯಕ್ತಿ ಚಿತ್ರಣಗಳು ಮತ್ತು ಅಲ್ಲಿನ ಒಂದೆರೆಡು ಘಟನೆಗಳನ್ನು ಮಾನವೀಯ ನೆಲೆಯಲ್ಲಿ(ಪುರಾಣದ mythಗಳನ್ನು ಬಿಟ್ಟು)ಅಧ್ಯಯನ ಮಾಡಿ ಬರೆದಿರುವ ಇರಾವತಿ ಕರ್ವೆ ಅವರ “ಯುಗಾಂತ”(ಕನ್ನಡಕ್ಕೆ ಸರಸ್ವತಿ ಗಜಾನನ ರಿಸಬೂಡ; ಪ್ರಕಾಶಕರು ಸಾಹಿತ್ಯ ಅಕಾಡೆಮಿ ಹೊಸ ದೆಹಲಿ ೧೯೭೩) ಇವುಗಳ ಓದಿನ ಆಧಾರದಿಂದ ನನಗೆ ತಿಳಿದ ಕೆಲವು ಅಂಶಗಳನ್ನು ಹೇಳುತ್ತೇನೆ. ಮೇಲೆ ಹೇಳಿದ ಯುಗಾಂತ ಪುಸ್ತಕ ಮತ್ತು ಪರ್ವ ಬರೆದಿದ್ದು ಎಂಬ ಲೇಖನವನ್ನು ತಾವು ಓದಿರಬಹುದೆಂದು ಭಾವಿಸುತ್ತೇನೆ. ನಿಮ್ಮ ಒಂದೆರೆಡು ಸಂಶಯಗಳಿಗೆ ಪೂರ್ಣ ರೂಪದಲ್ಲಿ ನಾನು ಉತ್ತರಿಸಲಾಗುತ್ತಿಲ್ಲ. ಏಕೆಂದರೆ ಅದಕ್ಕಾಗಿ ಇಡೀ ಪರ್ವ ಕಾದಂಬರಿಯನ್ನು ನಾನು ಮತ್ತೊಮ್ಮೆ ಓದಬೇಕಾಗುತ್ತದೆ. ಅದನ್ನು ಮತ್ತೊಮ್ಮೆ ಓದುವುದು ನನಗೆ ಇಷ್ಟವಾದರೂ ಸಹ, ಸದ್ಯದಲ್ಲಿ ನಾನು ಬೇರೆ ಕೆಲವು ಪುಸ್ತಕಗಳನ್ನು ಅನಿವಾರ್ಯವಾಗಿ ಓದಲೇಬೇಕಾಗಿರುವುದರಿಂದ ಅದು ಸಾಧ್ಯವಾಗಿಲ್ಲ.

    ಭೈರಪ್ಪನವರ ಪರ್ವ ಕಾದಂಬರಿಯ ಪ್ರಕಾರ
    (೧) ಗಾಂಧಾರಿಯ ಅಪ್ಪ ಸೂತನಲ್ಲ. ಗಾಂಧಾರ ದೇಶದ ಕಡೆ ಹೆಣ್ಣುಗಳನ್ನು ವಧು ದಕ್ಷಿಣೆ ಪಡೆದು ಇತರ ರಾಜರಿಗೆ ಮದುವೆ ಮಾಡುತ್ತಿದ್ದರು. ಆ ಕಾಲದಲ್ಲಿ ಸ್ವಯಂವರ, ಬಿಲ್ವಿದೆಯ ಪ್ರದರ್ಶನ,ಅಥವಾ ರಾಜಪುತ್ರಿಯರನ್ನು ಅಪಹರಿಸಿ,ನಂತರ ಅವರು ಯುದ್ಧಕ್ಕೆ ಬಂದರೆ ಅವರನ್ನು ಜಯಿಸಿ ಮದುವೆಯಾಗುವುದು ರೂಢಿಯಾಗಿತ್ತು. ಇದಾವುದೂ ಇಲ್ಲದೆ ಹಣಕ್ಕೆ ರಾಜಪುತ್ರಿಯರನ್ನು ಮದುವೆ ಮಾಡಿಕೊಡುವುದು ಕೆಳಮಟ್ಟದ್ದು ಎಂದು ಭಾವಿಸಿದ್ದರು. ಸೂತರೆಂದರೆ ಅರಮನೆಯ ದಾಸಿಯರ ಮಕ್ಕಳು. ಶಕುನಿ ಗಾಂಧಾರಿಯ ಅಣ್ಣ ಮತ್ತು ದುಷ್ಯಲೆ ಗಾಂಧಾರಿ-ದೃತರಾಷ್ಟ್ರನ ಮಗಳಾದ್ದರಿಂದ ಅವರು ಸೂತರಲ್ಲ.
    (೨) ಸೂತರಾಜರೂ ಇದ್ದರು. ವಿರಾಟರಾಜನ(ಪಾಂಡವರು ಅಜ್ಞಾತವಾಸ ಮಾಡಿದ್ದು ಈತನ ಅರಮನೆಯಲ್ಲೇ) ಹೆಂಡತಿಯ ತವರೂರಾದ ಕೇಕಯದಲ್ಲಿ ಸೂತರೇ ರಾಜಪಟ್ಟವನ್ನು ಆಕ್ರಮಿಸಿದ್ದರು. ಕೀಚಕ ಆ ದೇಶದವನೇ. ಆದರೆ ಅವರು ಶುದ್ಧ ಕ್ಷತ್ರಿಯರಲ್ಲ. ಮಹಾಭಾರತದ ಕಾಲದಲ್ಲಿ ರಾಜ ವಂಶಗಳ ಶ್ರೇಣಿಕರಣದಲ್ಲಿ ಕ್ಷತ್ರಿಯರು ಅದರಲ್ಲೂ ಕುರುವಂಶದವರು(ಪಾಂಡವ +ಕೌರವರು)ಮೇಲು ಅಂತಸ್ತಿನವರು.
    (೩) ಕುಂತಿಯ ಮದುವೆಗೂ ಮುಂಚೆ ಕರ್ಣ ಹುಟ್ಟಿದ್ದರಿಂದ ಅವನನ್ನು ಅರಮನೆಯ ದಾಸಿಗೆ ಕೊಟ್ಟುಬಿಟ್ಟರು. ಏಕೆಂದರೆ ಆ ವೇಳೆಗಾಗಲೇ ರಾಜಪುತ್ರರು ಮದುವೆಗೆ ಮುಂಚೆ ಮಕ್ಕಳು ಹುಟ್ಟಿದ್ದರೆ ಅಂತಹ ರಾಜ ಪುತ್ರಿಯರನ್ನು ಮದುವೆಯಾಗುತ್ತಿರಲಿಲ್ಲ. ಕರ್ಣ ಬೆಳೆದದ್ದು ದಾಸ-ದಾಸಿಯರ ಮನೆಯಲ್ಲಾದ್ದರಿಂದ ಆತ ಸೂತ ಎಂದು ಅನಿಸಿಕೊಳ್ಳಬೇಕಾಯ್ತು.
    (೪) ಪರಶುರಾಮ ಕ್ಷತ್ರಿಯರಿಗೆ ವಿದ್ಯೆ ಹೇಳಿಕೊಡುತ್ತಿರಲಿಲ್ಲ. ಕರ್ಣ ತಾನು ಬ್ರಾಹ್ಮಣನೆಂದು ಸುಳ್ಳು ಹೇಳಿ ಅವರಿಂದ ಸ್ವಲ್ಪ ಕಾಲ ವಿದ್ಯೆ ಕಲಿತ(ಬಿಲ್ವಿದ್ಯೆ) ನಂತರ ದುರ್ಯೋಧನನ ಪರಿಚಯವಾದ ಮೇಲೆ ಕಲಿತಿರಬಹುದಾದ ವಿದ್ಯೆಗೆ ಬಹುಶಃ ಪರ್ವ ಕಾದಂಬರಿಯಲ್ಲಿ ಉತ್ತರವಿರಬಹುದೆಂದು ನನಗೆ ಜ್ಞಾಪಕ.
    (೫) ವಾಲ್ಮೀಕಿ,ಕಾಳಿದಾಸ ಮತ್ತು ವಚನಕಾರರಿಗೆ ವಿದ್ಯೆ ಕಲಿಸಿದವರಾರು ಎಂಬ ಪ್ರಶ್ನೆಗೆ ನನಗೆ ಉತ್ತರ ಗೊತ್ತಿಲ್ಲ. ವಾಲ್ಮೀಕಿ ಮತ್ತು ಕಾಳಿದಾಸರ ಬಗ್ಗೆ ನಮ್ಮಲ್ಲಿ ಚಾಲ್ತಿಯಲ್ಲಿರುವ ಪರಂಪರಾಗತವಾದ ಅಧ್ಬುತ ರಮ್ಯ ಕಥೆಗಳು ಅದನ್ನು ಆಧರಿಸಿದ ಸಿನಿಮಾ ನಾಟಕಗಳು ಎಷ್ಟು ನಿಜವೋ ನಾನು ಅರಿಯೆ. ಅದು ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದ್ದು. ನಾನು ಹೊಸ ಕನ್ನಡ ಸಾಹಿತ್ಯದ ಒಬ್ಬ ಹವ್ಯಾಸಿ ಓದುಗ ಅಷ್ಟೇ . .

    ಉತ್ತರ

Trackbacks & Pingbacks

  1. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೫ | ನಿಲುಮೆ
  2. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೬ | ನಿಲುಮೆ
  3. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೭ | ನಿಲುಮೆ
  4. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೮ | ನಿಲುಮೆ
  5. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೯ | ನಿಲುಮೆ
  6. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧೦ | ನಿಲುಮೆ

Leave a reply to ಎ. ಷಣ್ಮುಖ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments