ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 4, 2014

3

ನಿನ್ನೆಗೆ ನನ್ನ ಮಾತು …. ಭಾಗ 3

‍ನಿಲುಮೆ ಮೂಲಕ

– ಮು ಅ ಶ್ರೀರಂಗ ಬೆಂಗಳೂರು

ನೆನಪುಗಳುಭಾಗ ೧ : ದೀಪವೂ ನಿನ್ನದೇ ಗಾಳಿಯೂ ನಿನ್ನದೇ ಆರದಿರಲಿ ಬೆಳಕೂ

ಭಾಗ ೨ : ಕಡಲು ನಿನ್ನದೇ ಹಡಗು ನಿನ್ನದೇ ಮುಳುಗದಿರಲಿ ಬದುಕು

ಅಂಚೆ ಗುಮಾಸ್ತನ ಕೆಲಸದ ತರಬೇತಿಗೆಂದು ಡಿಸೆಂಬರ್ ೧೯೭೮ರ ಕೊನೆಯ ವಾರದಲ್ಲಿ ಕೋಲಾರದಲ್ಲಿ ಬಂದಿಳಿದಾಗ  ಮಧ್ಯಾನ್ಹ ಒಂದು ಗಂಟೆಯಾಗಿತ್ತು. ಬೆಳಗ್ಗೆ ಮಾಗಡಿಯಿಂದ ಹೊರಟಾಗ ಚಳಿಯಿತ್ತು. ಆದ್ದರಿಂದ ಬೆಚ್ಚಗಿರಲಿ ಎಂದು  ಆಗ ಜೀನ್ಸ್ ಎಂದು ಕರೆಸಿಕೊಳ್ಳುತ್ತಿದ್ದ ದಪ್ಪ textureನ ಪ್ಯಾಂಟು  ಮತ್ತು ಪ್ಯಾಂಟಿನ ಬಟ್ಟೆಯಷ್ಟೇ ದಪ್ಪವಿದ್ದ  ಬಣ್ಣ ಬಣ್ಣದ ಬಟ್ಟೆಯಿಂದ ಹೊಲಿಸಿಕೊಂಡಿದ್ದ ಒಂದು ಫುಲ್ ತೋಳಿನ ಷರ್ಟ್ ಹಾಕಿಕೊಂಡಿದ್ದೆ. ಒಂದು ಕಡಿಮೆ ದರ್ಜೆಯ ದೊಡ್ಡ ಏರ್ ಬ್ಯಾಗ್ ನಲ್ಲಿ ಒಂದಷ್ಟು ಬಟ್ಟೆಗಳನ್ನು ತುಂಬಿಕೊಂಡು ಮಿಕ್ಕಿದ್ದನ್ನು ಒಂದು ಕೈ ಚೀಲದಲ್ಲಿ ಹಾಕಿಕೊಂಡು ಹೊರಟಿದ್ದೆ. ನಾನು ಈ ಮೊದಲು ಕೋಲಾರ ನೋಡಿರಲಿಲ್ಲ. ಬಸ್ ನಿಲ್ದಾಣದಲ್ಲಿ ಇಳಿದ ಮೇಲೆ ಒಂದಿಬ್ಬರನ್ನು   ದಾರಿ ಕೇಳಿಕೊಂಡು .ಅಂಚೆ ಇಲಾಖೆಯ  ಆಡಳಿತ ಕಛೇರಿಯನ್ನು ಪ್ರವೇಶ ಮಾಡಿದ್ದಾಯ್ತು. ಮೊದಲು  ಅಲ್ಲಿ report ಮಾಡಿಕೊಳ್ಳ ಬೇಕಾಗಿತ್ತು. ಮೊದಲ ದಿನದ ಭಯ ಮಿಶ್ರಿತ ಆತಂಕ ಸಹಜ ತಾನೇ? ಜತೆಗೆ ನನ್ನ ವೇಷ-ಭೂಷಣ ಇವೆಲ್ಲ ಕಂಡು ಆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ, ಅಕ್ಕ ಪಕ್ಕ ಕೂತಿದ್ದ ಒಂದಿಬ್ಬರು ಲಲನಾಮಣಿಗಳು ಪರಸ್ಪರ ಮೆಲು ದನಿಯಲ್ಲಿ ಮಾತಾಡಿಕೊಂಡು ನಕ್ಕಂತಾಯ್ತು. ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ನನ್ನ ಪ್ರವರ ಒಪ್ಪಿಸಿದ್ದಾಯ್ತು. ಅವರು ಕೇಳಿದ  ದಾಖಲಾತಿ  ಪತ್ರಗಳು,ಸರ್ಟಿಫಿಕೇಟ್ ಇತ್ಯಾದಿಗಳನ್ನೆಲ್ಲ ತೋರಿಸಿದ್ದಾಯ್ತು.

ನಾಳೆಯಿಂದ ತರಬೇತಿ ಪ್ರಾರಂಭ ಎಂದು ತಿಳಿಸಿದರು. ಅವರಿಂದ ಅಪ್ಪಣೆ ಪಡೆದು ಅಲ್ಲಿಂದ ಹೊರಟಿದ್ದಾಯ್ತು.  ಕೋಲಾರದ್ದು  ವಸತಿ ಮತ್ತು ಊಟ ವ್ಯವಸ್ಥೆ ಇಲ್ಲದ  ತಾತ್ಕಾಲಿಕ ತರಬೇತಿ  ಕೇಂದ್ರ(non  residential postal training centre –NRPTC). ವಸತಿ ಊಟ ಎಲ್ಲಾ ಇರುವ ಪೂರ್ಣ ಪ್ರಮಾಣದ ತರಬೇತಿ ಕೇಂದ್ರ ಮೈಸೂರಿನ ನಜರ್ ಬಾದ್ ಮೊಹಲ್ಲದಲ್ಲಿದೆ. ಆದರೆ ೧೯೭೮ ರಲ್ಲಿ ಆ ಕೇಂದ್ರದಲ್ಲಿ ಜಾಗ ಸಾಕಾಗದೆ  ಕೋಲಾರದಲ್ಲಿ ಒಂದು ತಾತ್ಕಾಲಿಕ ವ್ಯವಸ್ಥೆ ಮಾಡಿದ್ದರು. ಊಟ ವಸತಿಗೆ ವ್ಯವಸ್ಥೆ ಮಾಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿತ್ತು. ಕೋಲಾರದಲ್ಲಿ ನನಗೆ ಪರಿಚಯದವರು,ನೆಂಟರು,ಸ್ನೇಹಿತರು ಇರಲಿಲ್ಲ. ರಾತ್ರಿ ತಂಗುವುದು, ಊಟ,ತಿಂಡಿ ಇತ್ಯಾದಿಗಳಿಗೆ ಹೋಟೆಲ್ ಬಿಟ್ಟರೆ ಬೇರೆ ದಾರಿ ಇರಲಿಲ್ಲ. ಲಾಡ್ಜ್ ಹುಡುಕಿಕೊಂಡು ಹೊರಟೆ. ಹೊಸದಾಗಿ ಪ್ರಾರಂಭವಾಗಿದ್ದ ಒಂದು ಲಾಡ್ಜ್ ಕಾಣಿಸಿತು. ರೂಮಿನ ವ್ಯವಸ್ಥೆ ಸ್ನಾನಕ್ಕೆ ಅನುಕೂಲ ಎಲ್ಲ ಚೆನ್ನಾಗಿತ್ತು. ಈ ದಿನ  ಇಲ್ಲಿ ಕಳೆಯೋಣ; ನಾಳೆ ಹೇಗೂ ತರಬೇತಿ ಕೇಂದ್ರದಲ್ಲಿ  ಎಲ್ಲರ ಪರಿಚಯವಾಗುತ್ತದಲ್ಲ; ಆನಂತರ ನೋಡೋಣ ಎಂದು ತೀರ್ಮಾನಿಸಿಕೊಂಡು ಒಂದು ರೂಂ ಬಾಡಿಗೆಗೆ ಪಡೆದಿದ್ದಾಯ್ತು. ಹೊಸ ಲಾಡ್ಜ್ ಆದ್ದರಿಂದ ಕಿಟಕಿ,ಬಾಗಿಲುಗಳಿಗೆ ಹೊಡೆದಿದ್ದ  ಬಣ್ಣದ ವಾಸನೆ  ಮೂಗಿನ ಹೊಳ್ಳೆಗಳಿಗೆ ಹೊಡೆಯುತ್ತಿತ್ತು. ಲಾಡ್ಜ್ ಗಳಲ್ಲಿರುವ  “ರಸಿಕರನ್ನು” ಹಿಡಿಯಲು  ಪೊಲೀಸರು ಆಗಾಗ  ದಾಳಿ ಮಾಡುತ್ತಿರುತ್ತಾರೆ ಎಂದು ಪತ್ರಿಕೆಗಳಲ್ಲಿ ಓದಿದ್ದೆ. ಒಂದು ಕಡೆ ಆ ಭಯ ,ಜತೆಗೆ ಹೊಸ ಜಾಗ ಬೇರೆ. ಇವೆಲ್ಲಾ ಸೇರಿಕೊಂಡು  ಸ್ವಲ್ಪ ಹೊತ್ತು ಸತಾಯಿಸಿ ಆಮೇಲೆ  ನಿದ್ದೆ ಬಂತು.

ಕೋಲಾರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂದು ಕೊಠಡಿಯನ್ನು ನಮ್ಮ ತರಬೇತಿಗೆಂದು ಬಾಡಿಗೆಗೆ ಪಡೆದಿದ್ದರು. ಅದು ಕಾಲೇಜಿನ ಹಿಂಭಾಗದಲ್ಲಿತ್ತು. ಇಡೀ ಕಾಲೇಜು ತಾರಸಿಯದ್ದು. ನಮಗೆ ತರಬೇತಿಗೆಂದು ಕೊಟ್ಟಿದ್ದು ಹಿಂಭಾಗದಲ್ಲಿ ಕಟ್ಟಿದ್ದ ನಾಲ್ಕೈದು ಕೊಠಡಿಗಳಲ್ಲಿ ಒಂದು. ಆ ನಾಲ್ಕೈದ್ದಕ್ಕೂ asbestos ಶೀಟ್ ನ ಮೇಲ್ಚಾವಣಿ. ಕೋಲಾರದಲ್ಲಿ ಮೊದಲೇ ಬಿಸಿಲು ಜಾಸ್ತಿ; ಅದರ ಜತೆಗೆ ಈ sheet ನ ಕಾವು. ಅನಿವಾರ್ಯ;ಬೇರೆ ದಾರಿಯಿಲ್ಲ. ಬೇರೆ ಬೇರೆ ಊರುಗಳಿಂದ ಬಂದ ನಮ್ಮ ವಸತಿ ಸಮಸ್ಯೆಯನ್ನು ಬಲ್ಲ ನಮ್ಮ ತರಬೇತುದಾರರು(instructor) ನಾಲ್ಕೈದು ದಿನಗಳು ಮಧ್ಯಾನ್ಹ ಊಟದ ಬಿಡುವಿನ ನಂತರ ರೂಂ ಗಳನ್ನು ಹುಡುಕಿಕೊಳ್ಳಿ; ಈ ದಿನ ಇಷ್ಟು ಪಾಠ ಸಾಕು ಎಂದು ಬಿಡುವು ಕೊಟ್ಟಿದ್ದರು  ಪಿ ಯು ಸಿ ಯಲ್ಲಿದ್ದಾಗ ಮತ್ತು ಓದನ್ನು ಅರ್ಧಕ್ಕೆ ನಿಲ್ಲಿಸಿ ಬೆಂಗಳೂರಿನಿಂದ ವಾಪಸ್ಸು ಬಂದ ಮೇಲೆ ಕೋಲಾರಕ್ಕೆ ಹೋಗುವ ತನಕ ನಾನು ಟೈಪಿಂಗ್ ಕಲಿಯಲು ಹೋಗುತ್ತಿದ್ದೆ. ಇಂಗ್ಲಿಷ್ ನಲ್ಲಿ ಜ್ಯೂನಿಯರ್ ಪರೀಕ್ಷೆ ಪಾಸು ಮಾಡಿದ್ದೆ. ನಂತರದಲ್ಲಿ ಇಂಗ್ಲಿಷ್ ಸೀನಿಯರ್ ಮತ್ತು ಕನ್ನಡ ಜ್ಯೂನಿಯರ್ ಟೈಪಿಂಗ್   ಕಲಿಯಲು ಹೋಗುತ್ತಿದ್ದೆ. ಹೀಗಾಗಿ typing institute ನ ಮುಖ್ಯಸ್ಥರು ತುಂಬಾ ಪರಿಚಯವಾಗಿದ್ದರು.   ನನಗೆ ಕೆಲಸ ಸಿಕ್ಕಿರುವ ವಿಷಯ ಹೇಳಿದೆ. ಎಲ್ಲ  ವಿವರ ತಿಳಿಸಿದಾಗ ಅವರೇ ಕೋಲಾರದಲ್ಲಿ ತಮ್ಮ ಪರಿಚಯದವರು ಹೋಟೆಲ್ ನಡೆಸುತ್ತಿದ್ದಾರೆ ಅವರ ಬಳಿ ಹೋಗಿ ನಿಮಗೆ ಒಂದು ವ್ಯವಸ್ಥೆ ಮಾಡಿಕೊಡುತ್ತಾರೆ ಎಂದು ಕಾಗದ ಬರೆದು ಕೊಟ್ಟಿದ್ದರು. ಮೊದಲ ದಿನದ ಗಡಿಬಿಡಿಯಲ್ಲಿ ಆ ಹೋಟೆಲ್ ಹುಡುಕಿರಲಿಲ್ಲ. ಎರಡನೇ ದಿನ ಸಂಜೆ  ಒಬ್ಬರು ಪೋಸ್ಟ್ ಮ್ಯಾನ್ ರ ಬಳಿ ಆ ಹೋಟೆಲ್ ಇರುವ ಬೀದಿ,ಯಾವ ಕಡೆ ಹೋಗಬೇಕೆಂದು ದಾರಿ ವಿಚಾರಿಸಿಕೊಂಡು ಹೊರಟೆ.  ಹೋಟೆಲ್ ಸಿಕ್ಕಿತು. ಯಜಮಾನರೂ ಇದ್ದರು. ಅವರಿಗೆ ಕಾಗದ ಕೊಟ್ಟೆ. ತುಂಬಾ ವಿಶ್ವಾಸದಿಂದ ಮಾತಾಡಿಸಿ ಮನೆಗೆ ಕರೆದುಕೊಂಡು ಹೋದರು. ನಮ್ಮಲ್ಲೇ ಎರಡು ಮೂರು ದಿನ ಇರಿ  ನಿಮಗೆ ಒಂದು ಅನುಕೂಲವಾದ ರೂಂ ನೋಡೋಣ ಎಂದು ಹೇಳಿದರು. ಅವರ ಮನೆ ನಾಲ್ಕೈದು ರೂಂ ಗಳಿದ್ದ ದೊಡ್ಡಮನೆ. ಒಂದನ್ನು ನನಗೆ ಕೊಟ್ಟರು. ಆಗಲೇ ರಾತ್ರಿ ಆಗಿತ್ತು. . ಆ ದಿನ ಊಟ ಅವರ ಮನೆಯಲ್ಲೇ ಆಯ್ತು. ಡಿಸೆಂಬರ್ ಜನವರಿ ತಿಂಗಳು ಅಯ್ಯಪ್ಪನ ಸೀಸನ್. ನಾನಿದ್ದ ಮನೆ ಮಾಲೀಕರು ಅಯ್ಯಪ್ಪನ ವ್ರತದ “ಮಾಲೆ” ಧರಿಸಿದ್ದರು. ನಾನು ಹೋದ ದಿನ ಅವರ ಮನೆಯಲ್ಲಿ ಭಜನೆ ಕಾರ್ಯಕ್ರಮ. ರಾತ್ರಿ ಒಂಬತ್ತ್ತು ಗಂಟೆಯಿಂದ ಒಬ್ಬೊಬ್ಬರ ಹಾಗೆ  ಕರಿ  ವಸ್ತ್ರ ಉಟ್ಟಿದ್ದ ಭಕ್ತರು ಬರಲು ಪ್ರಾರಂಭಿಸಿದರು. ರಾತ್ರಿ ಹತ್ತರ ಹೊತ್ತಿಗೆ ತಾರಕ ಸ್ವರದಲ್ಲಿ “ಸ್ವಾಮಿ ಶರಣಂ ಅಯ್ಯಪ್ಪ” ಶುರುವಾಯ್ತು. ನನ್ನ ನಿದ್ದೆ ಹಾರಿ ಹೋಗಿತ್ತು. ರಾತ್ರಿ ಹನ್ನೆರಡು ಗಂಟೆಯಾದರೂ  ಭಜನೆ ಮುಗಿಯುವ ಸೂಚನೆ ಕಾಣಿಸಲಿಲ್ಲ. ನನಗೆ ಜಲಭಾದೆಯ ಒತ್ತಡ   ಶುರುವಾಯ್ತು.ಆ ಮನೆಗೆ   ಬಂದಾಗ ಬಟ್ಟೆ ಬದಲಿಸಿ ಕೈ ಕಾಲು ಮುಖ ತೊಳೆಯುವಾಗ ನೋಡಿದ್ದ ಟಾಯ್ಲೆಟ್ ಈಗ ಯಾವ ಕಡೆ ಇದೆ ಎಂಬುದು ಮರೆತಿತ್ತು. ಜತೆಗೆ ಅಯ್ಯಪ್ಪನ ಭಜನೆ ನಡೆಯುತ್ತಿದ್ದ ಹಾಲ್ ಒಂದನ್ನು ಬಿಟ್ಟರೆ ಮನೆಯ ಎಲ್ಲಾ ದೀಪಗಳನ್ನು ಆರಿಸಿದ್ದರು. ರಾತ್ರಿ ಕಳೆದು ಬೇಗ ಬೆಳಗಾಗಲಿ ಎಂದು ನಾನೂ ಸ್ವಾಮಿಯೇ ಶರಣಂ ಎಂದು ಭಜನೆ ಮಾಡುವುದು ಬಿಟ್ಟು ಬೇರೆ ದಾರಿಯಿರಲಿಲ್ಲ. ಯಾವಾಗ ನಿದ್ದೆ ಬಂತೋ ತಿಳಿಯಲಿಲ್ಲ. ಎದ್ದಾಗ ಬೆಳಕು ಮೂಡಿತ್ತು. ಆ  ದಿನ ಸಂಜೆ  ತರಬೇತಿಗೆಂದು ಬಂದಿದ್ದ ನನ್ನಂತೆ ವಸತಿ ಹೀನರು ಯಥಾ ಪ್ರಕಾರ ಇನ್ನೊಬ್ಬ ಪೋಸ್ಟ್ ಮ್ಯಾನ್ ಅವರಿಗೆ ನಮ್ಮ ಸಮಸ್ಯೆ ತಿಳಿಸಿದೆವು. ಅವರು ನಮ್ಮ ಜತೆ ಬಂದು  ಕೋಲಾರದ ಪೇಟೆ ಬೀದಿಯಲ್ಲಿದ್ದ ಲಾಡ್ಜ್ ಗಳನ್ನು ವಿಚಾರಿಸುತ್ತಾ ನಡೆದರು. ಒಂದೆರೆಡನ್ನು ದೂರದಿಂದಲೇ ತೋರಿಸಿ ಅಂತಹ ಕಡೆಗಳಲ್ಲಿ ಇರಬಾರದು ಎಂದು ಮೀಸೆಯ ಮರೆಯಲ್ಲಿ ನಕ್ಕರು. ಅವರು ಹೇಳಿದ ರೀತಿಯಿಂದಲೇ ಅವು “ರತಿ-ಮನ್ಮಥರ”  ಆವಾಸ ಸ್ಥಾನಗಳು ಎಂದು ತಿಳಿಯಿತು. ಇನ್ನೊಂದೆರಡರಲ್ಲಿ ಇಲ್ಲಿ ಮಲಗಿಕೊಳ್ಳಲು ಹಾಸಿಗೆಗಳು ದೊರೆಯುತ್ತವೆ ಎಂಬ ಬೋರ್ಡುಗಳು ಇದ್ದವು. ಒಳಗೆ ಹೋಗಿ ನೋಡಿದರೆ  ಒಂದು ಹಾಲಿನಲ್ಲಿ  ಇಪ್ಪತ್ತು ಇಪ್ಪತೈದು ಹಾಸಿಗೆಗಳನ್ನು ಆಸ್ಪತ್ರೆಯ ಜನರಲ್ ವಾರ್ಡ್ ನಂತೆ .ಒಂದರ ಪಕ್ಕ ಒಂದು ಹಾಸಿದ್ದರು. ಒಂದೆರಡು ಶೌಚಾಲಯಗಳು ಮತ್ತು ಒಂದು ನಲ್ಲಿ. ಬೆಳಗ್ಗೆ ಎದ್ದು ಹಲ್ಲುಗಳನ್ನು ಉಜ್ಜಿ ಮುಖ ತೊಳೆಯಬಹುದು ಅಷ್ಟೇ. ಸ್ನಾನಕ್ಕೆ ಅವಕಾಶವಿಲ್ಲ .  ಅಲ್ಲಿ ಕೇವಲ  ಒಂದು  ರಾತ್ರಿ ಕಳೆಯಬಹುದು.  ಮೂರು ತಿಂಗಳುಗಳ ಕಾಲ ಇರುವುದು ಸಾಧ್ಯವಿಲ್ಲ. .ಅಷ್ಟು ಹೊತ್ತಿಗೆ ನಮಗೂ  ಓಡಾಡಿ ಸಾಕಾಗಿತ್ತು ಜತೆಗೆ ಪಾಪ ಆ postman ದಿನವೆಲ್ಲಾ ಕೆಲಸಮಾಡಿ ಪುನಃ ನಮ್ಮ ಜತೆ ತಿರುಗಿದ್ದರು; ನಾಳೆ ನೋಡೋಣ ಎಂದು ಅವತ್ತಿಗೆ ನಮ್ಮ ರೂಮಿನ ಅನ್ವೇಷಣೆ ನಿಲ್ಲಿಸಿದೆವು.  ರಾತ್ರಿ ಊಟವನ್ನು ಹೋಟೆಲ್ ನಲ್ಲಿ ಮಾಡಿ,ನನ್ನ ಲಗ್ಗೇಜ್ ಅಯ್ಯಪ್ಪನ ಭಕ್ತರಾದಂತಹ ಆ ಹಿರಿಯರ ಮನೆಯಲ್ಲಿ ಇದ್ದುದರಿಂದ ಅಲ್ಲಿಗೇ ಹೋದೆ.ಕೋಲಾರಕ್ಕೆ ಬಂದು ಮೂರು ದಿನಗಳಾಗಿದ್ದವು. ಇನ್ನೂ ಇರಲು  ಖಾಯಂ ಆದ ಜಾಗ ಸಿಕ್ಕಿರಲಿಲ್ಲ. ಒಂದು ವೇಳೆ ಅಯ್ಯಪ್ಪನ ಆ ಹಿರಿಯ ಭಕ್ತರು ಶಬರಿ ಮಲೈಗೆ ಹೋಗುವ ತನಕ ರೂಂ ಸಿಗದಿದ್ದರೆ ಏನು ಮಾಡುವುದು? ಅವರು ಆ ಯಾತ್ರೆ ಮುಗಿಸಿ ಬರುವ ತನಕ ಅಲ್ಲೇ ಇರಬೇಕಾಗುತ್ತದಲ್ಲ ಎಂಬ ಸಂಕೋಚ ಬೇರೆ ಕಾಡುತ್ತಿತ್ತು.  ಆ ದಿನ ಮಧ್ಯಾನ್ಹ  ನಮ್ಮ ತರಬೇತಿ ನಡೆಯುತ್ತಿದ್ದ ಕಾಲೇಜಿನ ಕಟ್ಟಡದ  ಒಂದು ಕಂಬಕ್ಕೆ ಒರಗಿಕೊಂಡು ನಿಂತಿದ್ದೆ. ಆಗ ನನ್ನಂತೆಯೇ ತರಬೇತಿಗೆಂದು ಬಂದಿದ್ದ ಒಬ್ಬ ಹುಡುಗ ನನ್ನ ಬಳಿ ಬಂದು “ನೀವು ಬ್ರಾಹ್ಮಣರಾ” ಎಂದು ಕೇಳಿದ. ಹೂಂ ಅಂದೆ. ನಾನು ಅದೇ ಜಾತಿಗೆ ಸೇರಿದವನು; ನನ್ನ ರೂಮಿನಲ್ಲಿ ನಾನೊಬ್ಬನೇ ಇರುವುದು;ನೀವು ಬನ್ನಿ ನನ್ನ ಜತೆ ಇರಬಹುದು ಎಂದ. ಸರಿ ಎಂದು ಹೊರಟೆ. ಅದೊಂದು ರೀತಿಯ ವಠಾರದಂತಿತ್ತು. ಮನೆಯ ಮಾಲೀಕರದ್ದು ಒಂದು ಮನೆ,ಆ ಹುಡುಗ ಇದ್ದ ಒಂದು ರೂಮು ಮತ್ತು ಇನ್ನೊಂದು ಸಿಂಗಲ್ ಬೆಡ್ ರೂಮಿನ ಮನೆಯಲ್ಲಿ ಕೋಲಾರದ ಮುಖ್ಯ ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಹಿರಿಯ ಗುಮಾಸ್ತರು ಮತ್ತು ಅವರ ಸಂಸಾರ ವಾಸವಿದ್ದರು. . ಆ ಹುಡುಗ ಮನೆ ಮಾಲೀಕರಿಗೆ ನನ್ನ ಪರಿಸ್ಥಿತಿ ಹೇಳಿದ. ಅವರು ಒಪ್ಪಿಕೊಂಡರು. ರೂಮು ಇಬ್ಬರಿಗೆ ಸಾಕಾಗುವಷ್ಟು ಇತ್ತು. ಬಟ್ಟೆ ಒಗೆಯಲು ಆ ವಠಾರದಲ್ಲೇ ಒಂದು ಕಡೆ ಜಾಗವಿತ್ತು. ರೂಮಿನಲ್ಲಿದ್ದ ನಮಗೆ ಪ್ರತ್ಯೇಕ ಸ್ನಾನದ ಮನೆ (ಬಾತ್ ರೂಂ) ಇಲ್ಲದ್ದರಿಂದ ಬಟ್ಟೆ ಒಗೆಯುವ ಜಾಗದಲ್ಲೇ ಮಾಡಬೇಕಾಗಿತ್ತು. ಹೀಗಾಗಿ ಆ  ಎರಡು ಮನೆಯವರು ಬೆಳಗ್ಗೆ ಏಳುವ ಮುಂಚೆಯೇ ಬೆಳಗಿನ ಜಾವ ಐದು ಗಂಟೆಯೊಳಗೆ ನಾವಿಬ್ಬರೂ ಸ್ನಾನ ಮುಗಿಸಬೇಕಾಗಿತ್ತು. ಇಷ್ಟಾದರೂ ನೆಲೆ ಸಿಕ್ಕಿತ್ತಲ್ಲ ಸಾಕು ಎಂದು ನಾನು ಎರಡು ದಿನ ಇದ್ದ ಆ ಹೋಟೆಲ್ ಮಾಲೀಕರ ಮನೆಗೆ ಹೋಗಿ ಅವರಿಗೆ ವಿಷಯ ತಿಳಿಸಿ,ಕೃತಜ್ಞತೆ ಅರ್ಪಿಸಿ  ನನ್ನ ಲಗ್ಗೇಜ್ ಸಮೇತ ರೂಮಿಗೆ ಬಂದೆ.

ಆ ರಾತ್ರಿ ನಾವಿಬ್ಬರೂ ಕೂತು ಮಾತಾಡಿ ರೂಮಿನಲ್ಲೇ ಅಡಿಗೆ ತಿಂಡಿ ಮಾಡಿಕೊಳ್ಳುವುದು,ರೂಮಿನ ಬಾಡಿಗೆ  ಇತ್ಯಾದಿ ಖರ್ಚು ವೆಚ್ಚಗಳನ್ನು ಇಬ್ಬರೂ ಸಮನಾಗಿ ಹಂಚಿಕೊಳ್ಳುವುದು ಈ ಬಗ್ಗೆ ಒಪ್ಪಂದಕ್ಕೆ ಬಂದೆವು. ಕೋಲಾರ ಸಮೀಪದ  ಒಂದು ಹಳ್ಳಿಯ ರಾಜಶೇಖರ್ ಎಂಬ ಹೆಸರಿನ ಆ ಹುಡುಗ ಕೋಲಾರದ ಕಾಲೇಜಿನಲ್ಲಿ ಬಿಎಸ್ಸಿ ಓದಲು ಆ ರೂಂ ಅನ್ನು ಬಾಡಿಗೆಗೆ ಪಡೆದು ತಾನೇ ಊಟ ತಿಂಡಿ ಮಾಡಿಕೊಂಡು ಓದುತ್ತಿದ್ದ. ಹೀಗಾಗಿ ಎಲ್ಲಾ ಅನುಕೂಲವಿತ್ತು. ಬೆಳಗ್ಗೆ ತರಬೇತಿಗೆ ಹೋಗುವ ಮುಂಚೆ ಇಬ್ಬರೂ ಸೇರಿ ತಿಂಡಿ ಅಡಿಗೆ ಮಾಡಿಡುತ್ತಿದ್ದೆವು.  ತಿಂಡಿ ತಿಂದು ಮಧ್ಯಾನ್ಹ  ಬಿಡುವಿನಲ್ಲಿ ರೂಮಿಗೆ ಬಂದು ಊಟ ಮಾಡಿ ಹೋಗುತ್ತಿದ್ದೆವು. ಸಂಜೆ ವಾಕಿಂಗ್ ಜತೆಗೆ  ಆಗಾಗ ಹೋಟೆಲ್ ನಲ್ಲಿ  ತಿಂಡಿ, ರಸ್ತೆ ಬದಿಯ ಅಂಗಡಿಗಲ್ಲಿ ಬಿಸಿ ಬಿಸಿ ಬೋಂಡ ಬಜ್ಜಿಗಳ ಸೇವನೆ. ವಾರಕ್ಕೆ ಒಂದೆರಡಾದರೂ ಸಿನಿಮಾ ನೋಡುತ್ತಿದ್ದೆವು. ಕೋಲಾರ ಆಂದ್ರಕ್ಕೆ ಗಡಿ ಪ್ರದೇಶ ವಾದ್ದರಿಂದ ತೆಲುಗಿನ ಪ್ರಭಾವ ಜಾಸ್ತಿ. ಅಂಗಡಿ,ಬಸ್ಸುಗಳಲ್ಲಿ ತೆಲುಗಿನ ಮಾತುಗಳು.  ಅದೇ ರೀತಿ ತೆಲುಗಿನ ಸಿನಿಮಾಗಳು ಆಂಧ್ರದಲ್ಲಿ ಬಿಡುಗಡೆಯಾದ ಒಂದೆರೆಡು ವಾರಗಳಲ್ಲೇ ಕೋಲಾರಕ್ಕೆ ಬರುತ್ತಿದ್ದವು. ಸಿನಿಮಾಗಳ  ಕಥೆ ಸ್ವಲ್ಪ ಅರ್ಥವಾಗುತ್ತಿತ್ತು. ಕನ್ನಡದ ಜತೆಗೆ  ತೆಲುಗಿನ ನಾಲ್ಕೈದು ಸಿನಿಮಾಗಳನ್ನೂ ಆ ಕಾಲದಲ್ಲಿ ನೋಡಿದ ನೆನಪು.  ನಮಗೆ ತಿಂಗಳ ಮೊದಲ ವಾರದಲ್ಲಿ ಸುಮಾರು ನಾನೂರು ರುಪಾಯಿ ಗಳು ಸ್ಟೈಪೆಂಡ್ (ತರಬೇತಿ ಭತ್ಯೆ) ಬರುತ್ತಿತ್ತು. ಆ ಕಾಲಕ್ಕೆ ಒಬ್ಬರಿಗೆ ಅದು ಸಾಕಾಗುತ್ತಿತ್ತು. ಹೀಗಾಗಿ ಹಣದ ಸಮಸ್ಯೆ ಇರಲಿಲ್ಲ. .ಒಂದು ತಿಂಗಳು ಕಳೆಯುವಷ್ಟರಲ್ಲಿ ನನ್ನ ಎಂ. ಎಸ್ಸಿ. ಯ ಕಹಿ ನೆನಪುಗಳು ಮರೆಯುತ್ತಾ ಬಂದವು. ಈಗ BSNL  ಎಂದು ಕರೆಯುತ್ತಿರುವ ಟೆಲಿಫೋನ್ ಎಕ್ಷಚೇಂಜ್ ಮತ್ತು ಇತಿಹಾಸದ ಪುಟಗಳಲ್ಲಿ ಸೇರಿಹೋದ ಟೆಲಿಗ್ರಾಂ ನ ತಂತಿ ಇಲಾಖೆ ಎರಡೂ  ಹಿಂದೆ ಅಂಚೆ ಇಲಾಖೆಯ ಜತೆ ಸೇರಿದ್ದವು. ಪಿ ಅಂಡ್ ಟಿ (P and T) ಎಂದು ಕರೆಯುತ್ತಿದ್ದರು. ಆ ವೇಳೆಯಲ್ಲಿ ಬಿ ಎಸ್ಸಿ ಮಾಡಿದವರು ಜೂನಿಯರ್ ಎಂಜಿನಿಯರ್ ಆಗಿ ಟೆಲಿಫೋನ್ ಇಲಾಖೆಗೆ ಸೇರಬಹುದಿತ್ತು. ಕೋಲಾರದ ನನ್ನ ಆ ಆಶ್ರಯದಾತ ರಾಜಶೇಖರ್ ಅಂಚೆ ತರಬೇತಿ ನಂತರ ನಾಲ್ಕೈದು ತಿಂಗಳು ಅಂಚೆ ಇಲಾಖೆಯಲ್ಲಿ ಕೆಲಸ ಮಾಡಿ ನಂತರ ಜೂನಿಯರ್ ಇಂಜಿನಿಯರ್ ಆಗಿ ತಂತಿ ಇಲಾಖೆಗೆ ಸೇರಿಕೊಂಡ.

ನಮಗೆ ತರಬೇತಿ ಕೊಟ್ಟವರು (instructor)  ಅಂಚೆ ಇಲಾಖೆಯ inspector ದರ್ಜೆಯ  ಒಬ್ಬರು  ಅಧಿಕಾರಿ. ಅವರು  ಮೂಲತಃ ತಮಿಳುನಾಡಿನವರಾದರೂ ಕನ್ನಡ ಮತ್ತು ತೆಲುಗು  ಭಾಷೆಗಳನ್ನು ಚೆನ್ನಾಗಿ ಬಲ್ಲವರು. ಜತೆಗೆ ಇಂಗ್ಲಿಷ್ ಭಾಷೆಯ ಮೇಲೆ ಒಳ್ಳೆಯ ಪ್ರಭುತ್ವ ಇತ್ತು. ಅವರು ಹಿಂದಿನ ಕಾಲದ ಬಿ ಎ ಪದವಿ ಮಾಡಿದ್ದರು. ಕರ್ನಾಟಕ ಶಾಸ್ತ್ರೀಯ  ಸಂಗೀತದ  ಅಭಿರುಚಿ ಇದ್ದವರು. ಅಂಚೆ ಇಲಾಖೆಯ ಕಾನೂನುಗಳ ಬಗ್ಗೆಯೂ ಅಷ್ಟೇ ಪ್ರಖರವಾದ ಜ್ಞಾನವಿದ್ದವರು; ಶುದ್ಧ ಹಸ್ತರು. .ಆಡಳಿತ ಕಚೇರಿಯ ಹಿರಿಯ ಅಧಿಕಾರಿಗಳು ಇವರ ಮೇಲೆ ಅಪಾರವಾದ ವಿಶ್ವಾಸವಿಟ್ಟಿದ್ದರು. ಕೆಲವೊಂದು ಜಟಿಲ ಕಾನೂನಾತ್ಮಕ ವಿಷಯಗಳಲ್ಲಿ ಇವರ ಸಲಹೆ ಪಡೆಯದೇ ಯಾವ ನಿರ್ಣಯವನ್ನೂ ತೆಗೆದುಕೊಳ್ಳುತ್ತಿರಲಿಲ್ಲ. ನಾವು ತರಬೇತಿ ಪಡೆಯುತ್ತಿದ್ದಾಗ ಮಧ್ಯಾನ್ಹ ಊಟವಾದ ಒಂದೆರಡು ಗಂಟೆಗಳ  ನಂತರ ಕೋಲಾರದ ಬಿಸಿಲ ಝಳಕ್ಕೆ ನಮಗೆ ತೂಕಡಿಕೆ ಆಗಾಗ ಬರುತ್ತಿದ್ದದ್ದು ಉಂಟು. ಆಗ ಪಾಠ ನಿಲ್ಲಿಸಿ ಕಾಫಿ ಬ್ರೇಕ್ ಎಂದು ಹತ್ತು ಹದಿನೈದು ನಿಮಿಷಗಳು ವಿರಾಮ. ನಾವುಗಳು ವಾಪಸ್ಸು ಬಂದ ಮೇಲೆ ಅವರು ಒಂದು ಹಾಡು ಹೇಳಿ ನಮ್ಮನ್ನೂ ಹಾಡಲು ಹೇಳುತ್ತಿದ್ದರು. ಇದೆಲ್ಲದರಿಂದ ನಿದ್ದೆ ಹೋಗಿ ನಮಗೆ ಪಾಠ ಕೇಳುವ ಆಸಕ್ತಿ ಶುರುವಾಗುತ್ತಿತ್ತು. ಬೆಳಗ್ಗೆ ಒಂಬತ್ತು ಘಂಟೆಯಿಂದ ಸಂಜೆ ಆರು ಘಂಟೆಯ ತನಕ ತರಬೇತಿ ಇದ್ದುದ್ದರಿಂದ  ಸಮಯದ ಆ ನಿಯಮ ಪಾಲಿಸಲೇ ಬೇಕು ಜತೆಗೆ ನಮಗೆ ಬೇಸರವೂ ಆಗಬಾರದು. ಹೀಗಾಗಿ ಸುಮಾರು ಮೂರು ತಿಂಗಳ ಆ ತರಬೇತಿ ನಮಗೆ ಸಂತೋಷದಾಯಕವಾಗಿತ್ತು.

ತರಬೇತಿಗೆಂದು ಆಗ  ಅವಿಭಜಿತ ಜಿಲ್ಲೆಗಳಾಗಿದ್ದ  ಚಿತ್ರದುರ್ಗ,ಬೆಂಗಳೂರು ಗ್ರಾಮಾಂತರ ,ಕೋಲಾರ ಮತ್ತು ಚಿಕ್ಕಮಗಳೂರಿನಿಂದ ಬಂದ ಯುವಕ ಯುವತಿಯರಿದ್ದರು.  ರಾಜಕುಮಾರ್ -ಲಕ್ಸ್ಮಿ ಅಭಿನಯಿಸಿರುವ “ನಾ ನಿನ್ನ ಮರೆಯಲಾರೆ ” ಸಿನಿಮಾದಲ್ಲಿ, ರಾಜ್ ಅವರ ಸ್ಕೂಟರ್ ರೇಸ್ ದೃಶ್ಯವೊಂದು ಇದೆ. . ಆಗ ಸ್ಟೇಡಿಯಂ ನಲ್ಲಿ ಆ ರೇಸ್ ನೋಡುತ್ತಾ ಕೂತಿರುವ  ಲಕ್ಸ್ಮಿಯವರ  ಅಕ್ಕ ಪಕ್ಕದಲ್ಲಿ ಇಬ್ಬರು ಯುವತಿಯರು ಇದ್ದಾರೆ. ಅವರಲ್ಲಿ ಒಬ್ಬರು ನಮ್ಮ ಅಂಚೆ ತರಬೇತಿಗೆ ಸೇರಿದ್ದರು. ನಾಲ್ಕೈದು ದಿನಗಳಾದ ಮೇಲೆ ನನ್ನ ಸ್ನೇಹಿತರೊಬ್ಬರು ಈ ವಿಷಯ ನನಗೆ ಹೇಳಿದರು. ಈ ಮುಂಚೆಯೇ ಆ ಸಿನಿಮಾ ನೋಡಿದ್ದರೂ ನನ್ನ ಸ್ನೇಹಿತರು ಹೇಳಿದ್ದನ್ನು confirm  ಮಾಡಿಕೊಳ್ಳಲು ಇನ್ನೊಮ್ಮೆ ನೋಡಿದೆ. ಅವರು ಹೇಳಿದ್ದು ನಿಜವಾಗಿತ್ತು.  ಆಗಿನ ನಮ್ಮಗಳ  ವಯೋಮಾನಕ್ಕೆ ಸಹಜವಾದ  ಪ್ರೀತಿ-ಪ್ರೇಮಗಳ ಭಾವನೆಗಳು ಕೆಲವರನ್ನು  ಕಾಡಿಸಿದ್ದು ಉಂಟು. ಆದರೆ ಸುಮಾರು ಮೂವತ್ತೈದು ವರ್ಷಗಳ ಆ ಹಿಂದಿನ ಜಮಾನಾದಲ್ಲಿ ಅದು ಯಾವ “ಅನಾಹುತವನ್ನೂ’ ಮಾಡಲಿಲ್ಲ ಎಂಬುದು ನಿಜವಾಗಲೂ ನೆಮ್ಮದಿಯ, ಹೆಮ್ಮೆಯ ವಿಷಯ. ಏಕೆಂದರೆ ನಾವು ಸುಮಾರು ಐವತ್ತರಷ್ಟು  ಮಂದಿ ಯುವಕ ಯುವತಿಯರು  ಮನೆ-ಮಠ ಬಿಟ್ಟು ಬಂದವರು. ಭಾನುವಾರ,ಸರ್ಕಾರಿ ರಜೆಯ ದಿನಗಳು ಮತ್ತು ಪ್ರತಿ ದಿನ ತರಬೇತಿ ಮುಗಿದ ನಂತರ ನಮಗೆ ಯಾವ ಕಡಿವಾಣವೂ ಇರಲಿಲ್ಲ.  ಆದರೆ ಒಂದು ಜೋಡಿ ಮದುವೆಯಾಗ ಬೇಕೆಂದು ನಿರ್ಧರಿಸಿದ್ದರು. ಅವರವರ  ತೀರಾ ಹತ್ತಿರದ ಸ್ನೇಹಿತ-ಸ್ನೇಹಿತೆಯರ ಜತೆ ಮೂರ್ನಾಲಕ್ಕು ಸುತ್ತಿನ ಮಾತುಕತೆ ಆಯಿತು.  ಆದರೆ ಇದ್ದ ಒಂದೇ ಸಮಸ್ಯೆ ಎಂದರೆ ಅದು ಅಂತರ್ಜಾತಿ ವಿವಾಹವಾಗುತ್ತಿತ್ತು. ಆ  ಹುಡುಗ ಹುಡುಗಿಯ ತಂದೆ ತಾಯಿಗೆ ವಿಷಯ ಇನ್ನೂ ತಿಳಿಸಿರಲಿಲ್ಲ. ಆರ್ಥಿಕವಾಗಿ ಇಬ್ಬರೂ ಸ್ವತಂತ್ರ ರಾಗಿದ್ದರೂ ಹಿರಿಯರ ಒಪ್ಪಿಗೆಯ ಸಮಸ್ಯೆ ಎದುರಾಗಬಹುದು ಅನ್ನಿಸಿತು. ಇಷ್ಟೆಲ್ಲಾ ನಡೆಯುವ ವೇಳೆಗೆ ನಮ್ಮ ತರಬೇತಿ ಮುಗಿಯಿತು. ನಾವೆಲ್ಲಾ ನಮ್ಮ ನಮ್ಮ ಕೆಲಸದ ಊರುಗಳಿಗೆ ಹೊರಡಬೇಕಾಯ್ತು. ಆ ನಂತರ ಆ ಮದುವೆ ಆಯ್ತೋ ಇಲ್ಲವೋ ತಿಳಿಯಲಿಲ್ಲ. ಜತೆಗೆ ಅವರು ದೂರದ ಚಿತ್ರದುರ್ಗ ಜಿಲ್ಲೆಗೆ ಸೇರಿದವರು ನಾನು ಈ ಕಡೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದವನು. ಹೀಗಾಗಿ ದಿನ ನಿತ್ಯದ ನಮ್ಮ ಅಂಚೆ ಕಚೇರಿಯ ಆಡಳಿತ ವಿಭಾಗಗಳು ಬೇರೆ  ಬೇರೆ  ಜಿಲ್ಲೆಗೆ ಸೇರಿದವಾದ್ದರಿಂದ  ಇತರ ಸಹೋದ್ಯೋಗಿಗಳಿಂದ ನನಗೆ ತಿಳಿಯುವ ಸಾಧ್ಯತೆಯೂ ಇಲ್ಲವಾಯ್ತು. ತರಬೇತಿಯ ನಡುವೆ  ಒಂದು ಶನಿವಾರ ಮಧ್ಯಾನ್ಹ ಮೇಲಧಿಕಾರಿಗಳ ಅಪ್ಪಣೆ ಪಡೆದು ನಮ್ಮ  instructor  ಕೋಲಾರ ಪಟ್ಟಣಕ್ಕೆ ಎರಡು ಮೂರು ಕಿಲೋಮೀಟರ್ ದೂರದಲ್ಲಿರುವ ಅಂತರಗಂಗೆ ಎಂಬ ಹೆಸರಿನ ಒಂದು ಪ್ರೇಕ್ಷಣೀಯ ಸ್ಥಳಕ್ಕೆ ನಮ್ಮನ್ನು  ಕರೆದುಕೊಂಡು ಹೋಗಿದ್ದರು. ಅದು ಒಂದು ಚಿಕ್ಕ ಬೆಟ್ಟ. ಮೇಲಕ್ಕೆ ಹತ್ತಿಹೊಗಲು ಮೆಟ್ಟಲುಗಳಿವೆ. ಬೆಟ್ಟದ ಮೇಲ್ಭಾಗದಲ್ಲಿ ಒಂದು ದೇವಸ್ಥಾನ. ಅಲ್ಲಿ ಒಂದು ಕಲ್ಲಿನಲ್ಲಿ ಕೆತ್ತಿದ ಬಸವನ(ನಂದಿ) ಬಾಯಲ್ಲಿ ತಣ್ಣನೆಯ  ಸಿಹಿ ನೀರು ಯಾವಾಗಲೂ ಬರುತ್ತಿರುತ್ತದೆ.   ಹದಿನೈದು ವರ್ಷಗಳ ಹಿಂದೆ ಇನ್ನೊಮ್ಮೆ ನೋಡಲು ಹೋಗಿದ್ದೆ. ಆಗಲೂ ಹಾಗೇ ನೀರು ಬರುತ್ತಿತ್ತು. ಆನಂತರದಲ್ಲಿ ಹೋಗಲು ಆವಕಾಶವಾಗಲಿಲ್ಲ.

ತರಬೇತಿ ಕೊನೆಯಾಗುವ ಮುಂಚೆ  ಒಂದೆರೆಡು ವಾರಗಳು ಪರೀಕ್ಷೆ , ಬೀಳ್ಕೊಡಿಗೆ ಸಮಾರಂಭ, ಫೋಟೋಗಳು ನಮ್ಮ-ನಮ್ಮ  ಡೈರಿಗಳನ್ನು ವಿನಿಮಯ ಮಾಡಿಕೊಂಡು ವಿಳಾಸ ಬರೆಸಿಕೊಳ್ಳುವುದು,ಅದರಲ್ಲಿ ಏನಾದರೂ quotations ಬರೆಯುವುದು ಇದರಲ್ಲಿ ಕಳೆಯಿತು.  ಕೋಲಾರದಲ್ಲಿದ್ದ  ಆ ಮೂರು ತಿಂಗಳು  ಒಂದು ರೀತಿಯಲ್ಲಿ ಈಗಾಗಲೇ ಕಳೆದು ಹೋಗಿದ್ದ ನಮ್ಮ ವಿಧ್ಯಾರ್ಥಿ ಜೀವನ ಮತ್ತೊಮ್ಮೆ ಬಂದಂತಾಗಿತ್ತು. ಕೊನೆಯ ದಿನ ನಾವೆಲ್ಲಾ ಭಾರವಾದ ಮನಸ್ಸಿನೊಡನೆ ನಮ್ಮ ನಮ್ಮ  ಕೆಲಸದ ಊರುಗಳಿಗೆ ಹೊರಟೆವು.  ನಾನು  ಚನ್ನಪಟ್ಟಣದ ಮುಖ್ಯ ಅಂಚೆ ಕಚೇರಿಗೆ(head post office)  ಬಂದೆ.

(ಇನ್ನೂ ಇದೆ!!)

ಚಿತ್ರ ಕೃಪೆ : http://www.dezeen.com

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments