ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 13, 2014

2

ನಿನ್ನೆಗೆ ನನ್ನ ಮಾತು – ಭಾಗ ೪

‍ನಿಲುಮೆ ಮೂಲಕ

– ಮು ಅ ಶ್ರೀರಂಗ ಬೆಂಗಳೂರು

ನೆನಪುಗಳುನಿನ್ನೆಗೆ ನನ್ನ ಮಾತು – ಭಾಗ ೧
ನಿನ್ನೆಗೆ ನನ್ನ ಮಾತು – ಭಾಗ ೨
ನಿನ್ನೆಗೆ ನನ್ನ ಮಾತು – ಭಾಗ ೩

ಮೂವತ್ತು ಮೂರು ವರ್ಷಗಳ  ನನ್ನ ವೃತ್ತಿ ಜೀವನದಲ್ಲಿ ನಾನು ಮುಂದೆ ಮುಂದೆ ಸಾಗಿ ಸಾಧಿಸಿದ್ದೇನೂ ಇಲ್ಲ. ಅಂಚೆ ಗುಮಾಸ್ತನಾಗಿ ಕೆಲಸಕ್ಕೆ ಸೇರಿದೆ. ಇಪ್ಪತ್ತು ವರ್ಷಗಳು ಗುಮಾಸ್ತನಾಗಿದ್ದ  ಮೇಲೆ ಅಂಚೆ ಇಲಾಖೆಯು ತನ್ನ ನೌಕರರಿಗೆ  ತಾನಾಗಿಯೇ ಒಂದು promotion ಕೊಡುತ್ತದೆ. ಹೀಗಾಗಿ ನಾನು ಅಂಚೆ ಮಾಸ್ತರನಾದೆ. ಇಲಾಖೆಯ ಪರೀಕ್ಷೆಗಳನ್ನು ಪಾಸು  ಮಾಡಿ ನಿವೃತ್ತಿಯ  ವೇಳೆಗೆ assistant  director ಆಗಿರಬಹುದಿತ್ತು. ನನ್ನ ಸಹೋದ್ಯೋಗಿಗಳಲ್ಲಿ ಕೆಲವರು  ಆ ಹಂತ ಮುಟ್ಟಿದ್ದಾರೆ. ಇನ್ನು ಕೆಲವರು ಅಂಚೆ ಇಲಾಖೆಯ ಕಡಿಮೆ ಸಂಬಳ ಸವಲತ್ತು ನೋಡಿ ಒಂದೆರೆಡು ವರ್ಷಗಳ ನಂತರ  ರಾಜೀನಾಮೆ ನೀಡಿ ಬ್ಯಾಂಕ್ ಗಳಿಗೆ ಸೇರಿದರು.  ಪ್ರೌಢಶಾಲೆಯಲ್ಲಿ ನನ್ನ  ಕಿರಿಯ ಸ್ನೇಹಿತನಾಗಿದ್ದ  ಒಬ್ಬ ಮೊದಲಿಗೆ ಅಂಚೆ ಇಲಾಖೆಯ ಕೆಲಸದಲ್ಲಿದ್ದು ನಂತರದಲ್ಲಿ ಬಿಟ್ಟು ಈಗ corporation Bank ನಲ್ಲಿ chief Manager ಆಗಿದ್ದಾನೆ. ಇವರೆಲ್ಲರನ್ನೂ ನೋಡಿ ನಾನೂ ಏಕೆ ಪ್ರಯತ್ನ ಪಡಲಿಲ್ಲ ಎಂದು ಒಮ್ಮೊಮ್ಮೆ ಅನಿಸುವುದುಂಟು. ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕೆಂಬ ಉದರ ವೈರಾಗ್ಯವನ್ನು ನಾವು ಮೇಲ್ನೋಟಕ್ಕೆ ಎಷ್ಟೇ  ತೋರ್ಪಡಿಸಿಕೊಂಡರೂ ಹಣದ ಮುಗ್ಗಟ್ಟು ನಮ್ಮನ್ನು  ಕೆಲವೊಮ್ಮೆ ಪೇಚಾಟಕ್ಕೆ ಸಿಲುಕಿಸಬಹುದು. ಸಂಸಾರಸ್ಥರಾದ ಮೇಲಂತೂ ಇದು ಇನ್ನೂ ಜಟಿಲವಾಗುತ್ತದೆ. ಇವೆಲ್ಲ ಗೊತ್ತಿದ್ದೂ ನಾನು ಇದ್ದಲ್ಲೇ ಇದ್ದುದಕ್ಕೆ.ಆಗ  ಮುಂದಿನ  ದಿನಗಳ ಬಗ್ಗೆ ಯೋಚಿಸದೆ ಕಾಲ ಕಳೆದದ್ದೇ  ಕಾರಣ.  ಒಂದೆರೆಡು ಸಂದರ್ಭಗಳಲ್ಲಿ ಹಣದ ಮುಗ್ಗಟ್ಟು ಆದಾಗ  ನನ್ನ ಬಂಧು ಬಾಂಧವರಿಂದ ಸಾಲ ಪಡೆದು ಆ ಸನ್ನಿವೇಶವನ್ನು ನಿಭಾಯಿಸಿದ್ದಾಯ್ತು. ಕೆಲಸಕ್ಕೆ ಸೇರಿದಾಗ ಒಂದು ಸಾವಿರದಷ್ಟು ಇದ್ದ ಸಂಬಳ(೧೯೭೯ರಲ್ಲಿ) ನಿವೃತ್ತನಾಗುವ ವೇಳೆಗೆ ಮೂವತ್ತು ಸಾವಿರದಷ್ಟಾಗಿತ್ತು(೨೦೧೧ರಲ್ಲಿ). ಆ ಮೂವತ್ತುಮೂರು ವರ್ಷಗಳಲ್ಲಿ ಎರಡು ಮೂರು pay commissionಗಳ ಶಿಫಾರಸ್ಸುಗಳು  ಅಷ್ಟಿಷ್ಟು ಜಾರಿಯಾಯ್ತು. ಅದರಿಂದ ಹೊಸಬರಿಗೆ ಅನುಕೂಲವಾದಷ್ಟು ಹಳಬರಿಗೆ ಆಗುವುದಿಲ್ಲ. (ನಾನು ನಿವೃತ್ತನಾದಾಗ ಮೂರು ವರ್ಷ ಕೆಲಸ ಮಾಡಿದ ಗುಮಾಸ್ತನಿಗೆ ಹದಿನೈದು ಸಾವಿರದಷ್ಟು ಸಂಬಳ ಬರುತ್ತಿತ್ತು. ಮೂವತ್ತುಮೂರು  ವರ್ಷ ಕೆಲಸ ಮಾಡಿದ ನನಗೆ ಮೂವತ್ತು ಸಾವಿರ!) ಆದರೆ ಹೊಸಬರಿಗೆ pension ಇಲ್ಲ. ಹಳಬರಿಗೆ ಇದೆ.

ಅಂಚೆ ಕಛೇರಿಗಳ ಕಾರ್ಯವೈಖರಿ ಬಗ್ಗೆ ಜನಗಳಲ್ಲಿ ಅಂತಹ ಉತ್ತಮ ಅಭಿಪ್ರಾಯವೇನೂ ಇಲ್ಲ.  ಗ್ರಾಹಕರ ಮೊದಲನೇ ಮತ್ತು ಮಹತ್ವದ ದೂರು post officeನಲ್ಲಿ ಕಿರಿಕಿರಿ ಜಾಸ್ತಿ. ಅದು customer friendly ಅಲ್ಲ. ಇದು ನಿಜ. ಇದಕ್ಕೆ ಮುಖ್ಯ ಕಾರಣ (೧)  ಆಡಳಿತ ಕಚೇರಿಯ ಅಧಿಕಾರಿಗಳು (೨) ಬ್ರಿಟಿಷರ ಕಾಲದ ನಿಯಮಗಳು(rules) ಮತ್ತು (೩) ಅಂಚೆಕಚೇರಿಯಲ್ಲಿ ಕೆಲಸ ಮಾಡುವ ನೌಕರರು. ಅಂಚೆಕಛೇರಿಯ rulesಗಳು ಎಷ್ಟು rigid ಆಗಿವೆ ಎಂದರೆ  ಅದರ ಪ್ರಕಾರ ಕೆಲಸ ಮಾಡಲು ಹೊರಟರೆ ಒಂದು ದಿನಕ್ಕೆ ಶೇಕಡಾ ಎಪ್ಪತ್ತು ಎಂಭತ್ತರಷ್ಟು  ಗ್ರಾಹಕರಿಗೆ ಮಾತ್ರ ಅವರ  ಕೆಲಸ ಮಾಡಿ ಕೊಡಬಹುದಷ್ಟೆ. ಉಳಿದವರಿಗೆ ಅವರ  ಕೆಲಸವನ್ನು ಅದೇ ದಿನವೇ  ಮಾಡಿಕೊಡದಿರಲು rules ಪ್ರಕಾರವೇ ಸಾಕಷ್ಟು ಕೊಕ್ಕೆಗಳನ್ನು ಹಾಕಿ ವಾಪಸ್ಸು ಕಳಿಸಬಹುದು .ಅಂಚೆಕಚೇರಿಯ ಧ್ಯೇಯ ವಾಕ್ಯ customer is never wrong. ಆದರೆ ಇರುವ ಕಾನೂನುಗಳು  ಅಂತರಂಗದಲ್ಲಿ (between the lines) ಪಿಸುಗುಟ್ಟುವುದು ಎಲ್ಲರನ್ನೂ ಸಂಶಯದಿಂದಲೇ ನೋಡು ಎಂಬ ರೀತಿಯದು. ಅದರ ಜತೆಗೆ ಒಬ್ಬ ನೌಕರ  ಒಂದು ಅಂಚೆಕಚೇರಿಯ ಹಣದ ವಹಿವಾಟಿನಲ್ಲಿ  fraud ಮಾಡಿದ ಎಂದು ಕೊಳ್ಳಿ; ಅದು contributory negligence ಎಂದು ಆ ಕಚೇರಿಯ ಪೋಸ್ಟ್ ಮಾಸ್ಟರ್,ಮುಖ್ಯ ಕಚೇರಿ ಮತ್ತು ಕೆಲವು ತುಂಬಾ serious ಆದ fraudಗಳಲ್ಲಿ ಆಡಳಿತ ಕಚೇರಿಯಲ್ಲಿರುವ ನೌಕರರಿಗೆ,ಅಧಿಕಾರಿಗಳಿಗೂ ಸುತ್ತಿಕೊಳ್ಳುತ್ತದೆ. ಬೆಂಗಳೂರಿನ ಒಂದು  ಸಣ್ಣ ಅಂಚೆ ಕಚೇರಿಯಲ್ಲಿ ನಡೆದ ಇಂತಹ ಬೃಹತ್ ಹಗರಣವೊಂದರಲ್ಲಿ  ಈ contributory negligence ಎಂಬ ಕಾನೂನಿನ ಕೊಕ್ಕೆಯಿಂದ  ಆಡಳಿತ ಕಚೇರಿಯಲ್ಲಿದ್ದವರು ಮತ್ತು ಮುಖ್ಯ ಕಚೇರಿಯಲ್ಲಿದ್ದವರು ಆಡಳಿತಾತ್ಮಕ ಶಿಕ್ಷೆ, ಬಡ್ತಿ ಕಡಿತ ಮತ್ತು ಬೆಂಗಳೂರಿನಿಂದ ಬೀದರ್ ಗುಲ್ಬರ್ಗಗಳ ಕಡೆಗೆ ವರ್ಗವಾಗಿ ಹೋಗಬೇಕಾಯಿತು. ಒಬ್ಬರನ್ನಂತೂ ಕರ್ನಾಟಕ ರಾಜ್ಯದಿಂದ ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡಿದರು. ಆ fraud ಮಾಡಿದ್ದಾತ  ಆ ಹಣದಿಂದ ಸೈಟು, ಕಾರುಗಳು ಮೆಟಡಾರ್ ಗಳನ್ನು ಕೊಂಡಿದ್ದ. ಆ ಕೇಸು ಸಿ ಬಿ ಐ ಗೆ ಹೋಗುತ್ತದೆ ಎಂದು ತಿಳಿದ ಮೇಲೆ ಆತ್ಮಹತ್ಯೆ ಮಾಡಿಕೊಂಡ ಎಂದು ಸುದ್ದಿ ಬಂತು. ಇಂತಹ ಪ್ರಕರಣಗಳ ದೆಸೆಯಿಂದ ನೌಕರರು ತಮ್ಮ ಕೆಲಸದಲ್ಲಿ  ಆದಷ್ಟೂ safer side ನಲ್ಲಿ ಇರಲು ಪ್ರಯತ್ನಿಸುತ್ತಾರೆ . ಇದು ಗ್ರಾಹಕರಿಗೆ ಕೆಲವೊಮ್ಮೆ ಬೇಸರ ಮತ್ತು ಸಹನೆ ಮಿತಿ ಮೀರಿದಾಗ  ನೌಕರರ ಜತೆ ಜಗಳಕ್ಕೆ ಕಾರಣವಾಗುತ್ತವೆ. ಜತೆಗೆ ಅಂಚೆ ಕಚೇರಿಯ ಆಡಳಿತ ವಿಭಾಗದಲ್ಲಿ customer care center ತುಂಬಾ ಕ್ರಿಯಾಶೀಲವಾಗಿದೆ. ಒಂದು ಫೋನ್ ಕಾಲ್  ಮಾಡಿ ಅಥವಾ ಪೋಸ್ಟ್ ಕಾರ್ಡ್ ನಲ್ಲಿ ಒಂದು ಕಂಪ್ಲೇಂಟ್ ಬರೆದು ಹಾಕಿದರೂ ಸಾಕು. ಆ ಕಚೇರಿಯಲ್ಲಿ ಸಂಬಂಧಪಟ್ಟ ನೌಕರನನ್ನು ವಿಚಾರಣೆ ಮಾಡಿ ಇನ್ನೊಮ್ಮೆ ಆ ರೀತಿ ಆಗದಂತೆ ಇರಬೇಕೆಂದು warn ಮಾಡುತ್ತಾರೆ.

ಇವೆಲ್ಲಾ ಇದ್ದರೂ ಸಹ ಅಂಚೆ ಕಚೇರಿಯ ಕೆಲವು ನೌಕರರದ್ದೂ ತಪ್ಪಿದೆ. ಇರುವ rulesಗಳ ನಡುವೆಯೇ ಮನಸ್ಸು ಮಾಡಿದರೆ ಗ್ರಾಹಕರಿಗೆ ಸಹಾಯ ಮಾಡಬಹುದು. ತೀರಾ ಆಗದೇ ಇದ್ದಾಗ ಅವರಿಗೆ ಕಿರಿಕಿರಿಯಾಗದ ಹಾಗೆ, ಬೇಸರ ಆಗದ ಹಾಗೆ ಪರ್ಯಾಯ ದಾರಿ ಹುಡುಕಬಹುದು. ಮುಖ್ಯವಾಗಿ ಆ ನೌಕರ ತನ್ನನ್ನು ಆ ಗ್ರಾಹಕರ ಸ್ಥಾನದಲ್ಲಿ ಕಲ್ಪಿಸಿಕೊಂಡು ಯೋಚಿಸಬೇಕು. ಇದಕ್ಕೆ ಅವನಿಗೆ ತಾಳ್ಮೆ ಮತ್ತು ಸಮಯ ಬೇಕು.  ಅಂಚೆಇಲಾಖೆಗೆ ಪ್ರತ್ಯೇಕ ಬಡ್ಜೆಟ್ ಇಲ್ಲ. ಅದು  ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯ ಅಧೀನದಲ್ಲಿದೆ. ಜತೆಗೆ ಅಂಚೆಇಲಾಖೆಯನ್ನು service sector ಎಂದು ಪರಿಗಣಿಸಿರುವುದರಿಂದ ಸಬ್ಸಿಡಿ ಹಣದ ಮೇಲೆ ಕೆಲಸ ನಡೆಸಬೇಕಾಗಿದೆ. ಹೀಗಾಗಿ ಖರ್ಚುಗಳಿಗೆ ಪ್ರತಿವರ್ಷ ಕಡಿತ ಮಾಮೂಲು. ಆದ್ದರಿಂದ ಕೆಲಸಕ್ಕೆ ತಕ್ಕಂತೆ ನೌಕರರ ನೇಮಕಾತಿ ನಡೆಯುತ್ತಿಲ್ಲ. ಇದರಿಂದ ಐದಾರು ಗುಮಾಸ್ತರುಗಳು ಕೆಲಸ ಮಾಡಬೇಕಾದ ಕಡೆ ಮೂರೋ ನಾಲ್ಕು ಜನ ಹಾಗೂ ಹೀಗೂ maintain ಮಾಡುತ್ತಿರುತ್ತಾರೆ. ನಿರಂತರವಾದ ಅತೀ ಕೆಲಸದ ಒತ್ತಡದಿಂದ ಬೇಸರ ಜಾಸ್ತಿ ಆದಾಗ ಅದು  ಗ್ರಾಹಕರ  ಮೇಲೆ ಪ್ರತ್ಯಕ್ಷವಾಗೋ ಪರೋಕ್ಷವಾಗೋ ಪರಿಣಾಮ ಬೀರುತ್ತಿದೆ. ಇದರ ಅರಿವು ಮೇಲಧಿಕಾರಿಗಳಿಗೂ ಇದೆ. ಆದರೆ ಅವರು ಅಸಹಾಯಕರು.   ನಾನು ಗುಮಾಸ್ತನಾಗಿದ್ದಾಗ ಅಥವಾ ಅಂಚೆ ಮಾಸ್ತರನಾಗಿದ್ದಾಗ ಆದಷ್ಟೂ customer friendly ಆಗಿ ಕೆಲಸ ಮಾಡಲು ಪ್ರಯತ್ನಿಸಿದೆ. ಮಿತಿ ಮೀರಿದಾಗ ಒಂದೆರೆಡು ಸಲ ಜಗಳವಾಗಿದ್ದೂ ಉಂಟು. ಆದರೆ ಅದು ತೀರಾ ವಿಕೋಪಕ್ಕೆ ಹೋಗದಹಾಗೆ ಎಚ್ಚರ ವಹಿಸಿದೆ. ಇಷ್ಟು ಬಿಟ್ಟರೆ ಇನ್ನು  ನನ್ನ  ವೃತ್ತಿ ಜೀವನದ ಬಗ್ಗೆ ಹೇಳುವುದೇನೂ ಇಲ್ಲ. ಆಡಳಿತ ವರ್ಗ, ನನ್ನ ಸಹೋದ್ಯೋಗಿಗಳು ಮತ್ತು ಗ್ರಾಹಕರು ಇವರುಗಳ ನಡುವೆ ಆದಷ್ಟೂ ಯಾವುದೇ ಮನಸ್ತಾಪ ಕಟ್ಟಿಕೊಳ್ಳದಂತೆ ನಿಭಾಯಿಸುವ ನಿಟ್ಟಿನಲ್ಲಿ ದಿನದ ಸಾಕಷ್ಟು ಸಮಯ ಕಳೆಯುತ್ತಿತ್ತು. ಇದರ ನಡುವೆಯೂ ಅಷ್ಟೋ ಇಷ್ಟೋ ನನ್ನ ಹವ್ಯಾಸಿ ಓದೂ ನಡೆಯುತ್ತಿತ್ತು. ಅದೇ ಸಮಾಧಾನದ ವಿಷಯ.

ನನ್ನ ಹವ್ಯಾಸಿ ಓದಿನ ಜತೆಗೆ ಅಲ್ಪಸ್ವಲ್ಪ  ಹವ್ಯಾಸಿ ಬರವಣಿಗೆ ಸಾಗಿ ಬಂದ ದಾರಿಯ ಬಗ್ಗೆ ಒಂದೆರೆಡು ಮಾತು ಹೇಳಿ ಈ ಭಾಗವನ್ನು ಮುಗಿಸಬಹುದು. ದಿನ ಪತ್ರಿಕೆಗಳ ವಾಚಕರ ವಾಣಿ/ ವಾಚಕರ ಪತ್ರಗಳು ವಿಭಾಗ, ವಾರ ಪತ್ರಿಕೆಗಳು ಹಾಗು ಮಾಸಪತ್ರಿಕೆಗಳ ”ನಿಮ್ಮ ಅನಿಸಿಕೆ” ಭಾಗಕ್ಕೆ ಬರೆಯುವುದರಿಂದ  ನನ್ನ ಬರವಣಿಗೆ ಪ್ರಾರಂಭವಾಯ್ತು.  ಎರಡು ಮೂರು ತಿಂಗಳಲ್ಲಿ  ಒಟ್ಟು ಹತ್ತು ಪತ್ರ ಬರೆದು ಕಳಿಸಿದರೆ ಮೂರೋ ನಾಲ್ಕೋ ಪ್ರಕಟವಾಗುತ್ತಿತ್ತು. ಅವು ಪ್ರಕಟವಾದಾಗ ನನ್ನ ಹೆಸರನ್ನು ಪತ್ರಿಕೆಯಲ್ಲಿ ಕಂಡು ಖುಷಿಯಾಗುತ್ತಿತ್ತು. ಆ ಕಾಲದಲ್ಲಿ ಎಂ ವ್ಯಾಸರ ಕಥೆಗಳು ‘ತರಂಗ’ ವಾರಪತ್ರಿಕೆ ಮತ್ತು ‘ತುಷಾರ’ ಮಾಸಪತ್ರಿಕೆಗಳಲ್ಲಿ  ಹೆಚ್ಚಾಗಿ ಪ್ರಕಟವಾಗುತ್ತಿತ್ತು. ಎರಡಕ್ಷರಗಳ ಶೀರ್ಷಿಕೆಯ ಆ ಕಥೆಗಳು  ವಸ್ತು ,ತಂತ್ರ ಭಾಷೆಯ ದೃಷ್ಟಿಯಿಂದ ಅದೇ ವಾರ/ಮಾಸಪತ್ರಿಕೆಗಳಲ್ಲಿ  ಪ್ರಕಟವಾದ ಬೇರೆಯವರ  ಕಥೆಗಳಿಗಿಂತ ಭಿನ್ನವಾಗಿರುತ್ತಿದ್ದವು. ಆದ್ದರಿಂದ  ಅವರ ಕಥೆಗಳನ್ನು ಓದಲು ಓದುಗರು ಕಾಯುತ್ತಿದ್ದರು ಎಂಬುದು ಆ ನಿಯತಕಾಲಿಕಗಳಲ್ಲಿ ಪ್ರಕಟವಾಗುತ್ತಿದ್ದ ಪ್ರತಿಕ್ರಿಯೆ/ಅನಿಸಿಕೆಗಳಿಂದ ತಿಳಿಯುತ್ತಿತ್ತು. ಸುಮಾರು ೨೦೦೩ರಲ್ಲಿ ”ಕೃತ” ಎಂಬ ಹೆಸರಿನಲ್ಲಿ ವ್ಯಾಸರ ಒಂದು ಕಥಾಸಂಕಲನ ಪ್ರಕಟವಾಯ್ತು. ಆಗ ನಾನು ಮೂರನೇ ಬಾರಿಗೆ ಪುನಃ ಚನ್ನಪಟ್ಟಣಕ್ಕೆ ವರ್ಗವಾಗಿ ಬಂದಿದ್ದೆ. ಆ ಸಮಯದಲ್ಲಿ ಒಮ್ಮೆ ಬೆಂಗಳೂರಿಗೆ ಬಂದಿದ್ದಾಗ ಆ ಕಥಾಸಂಕಲನವನ್ನು ಕೊಂಡುಕೊಂಡು ಒಂದೇ ದಿನದಲ್ಲಿ ಓದಿ ಮುಗಿಸಿದೆ. ಹಿಂದೆ ಆ ಕಥೆಗಳನ್ನು ವಾರಕ್ಕೊಮ್ಮೆಯೋ ತಿಂಗಳಿಗೊಮ್ಮೆಯೋ ಬಿಡಿಬಿಡಿಯಾಗಿ ನಿಯತಕಾಲಿಕಗಳಲ್ಲಿ ಓದಿದಾಗ ಆಗಿದ್ದಂತಹ ಗಾಢವಾದ ಅನುಭವ ಈಗ ಒಟ್ಟಾಗಿ ಓದಿದಾಗ ಆಗಲಿಲ್ಲ.  ಕಥಾವಸ್ತುವಿನಲ್ಲಿ ಏಕತಾನತೆ, ಮತ್ತು ಅತಿ ವಿವರಗಳು,ಕಂಡುಬಂದವು. ಒಂದು ದಿನ ಆ ಕಥಾಸಂಕಲನದ ಕೆಲವು ಕಥೆಗಳನ್ನು ಕುರಿತು ‘ಎಂ ವ್ಯಾಸರ ಕಥೆಗಳ ಬಗ್ಗೆ ಒಂದು ಟಿಪ್ಪಣಿ’ ಎಂಬ ಹೆಸರಿನಲ್ಲಿ ಎರಡು ಮೂರು ಪುಟಗಳಷ್ಟು ಒಂದು ಲೇಖನ ಬರೆದೆ. ಮಾಗಡಿಯಲ್ಲಿ   ನನ್ನ ಹಿರಿಯ ಸ್ನೇಹಿತರೊಬ್ಬರಿದ್ದಾರೆ. . ಅವರು ಕನ್ನಡದಲ್ಲಿ ಎಂ ಎ ಮಾಡಿ ಅಲ್ಲಿನ ಕಾಲೇಜೊಂದರಲ್ಲಿ  ಆಗ ಉಪನ್ಯಾಸಕರಾಗಿದ್ದರು. ಅವರಿಗೆ ಆ ಲೇಖನವನ್ನು ಕಳಿಸಿ  ಅದರ ಬಗ್ಗೆ ಅವರ ಅಭಿಪ್ರಾಯ/ವಿಮರ್ಶೆ  ತಿಳಿಸಿ ಎಂದು ಕೇಳಿದ್ದೆ. ಅವರ ಕವಿತೆಗಳು, ಕಥೆಗಳು  ಮತ್ತು ಲೇಖನಗಳು ಆಗಾಗ ನಿಯತಕಾಲಿಕಗಳಲ್ಲಿ/ಸಾಹಿತ್ಯಿಕ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಬೆಂಗಳೂರಿನ  ಕೆಲವು ಸಾಹಿತ್ಯಿಕ  ಪತ್ರಿಕೆಗಳ  ಸಂಪಾದಕರುಗಳ  ನಿಕಟ ಪರಿಚಯವೂ ಅವರಿಗಿತ್ತು. ಅದೇ ವೇಳೆಗೆ ಒಂದು ಸಾಹಿತ್ಯಿಕ  ಪತ್ರಿಕೆಯ ಸಂಪಾದಕರು ಅವರಿಗೆ ಫೋನ್ ಮಾಡಿ ಎಂ ವ್ಯಾಸರ ಕಥೆಗಳ ಬಗ್ಗೆ ಮೂರ್ನಾಲಕ್ಕು ಲೇಖನಗಳನ್ನು ಮುಂದಿನ ಸಂಚಿಕೆಯಲ್ಲಿ ಪ್ರಕಟಿಸಬೇಕಾಗಿದೆ, ನೀವು ಒಂದು ಲೇಖನ ಕಳುಹಿಸಿ ಎಂದು ಆ ನನ್ನ ಸ್ನೇಹಿತರನ್ನು ಕೇಳಿದರಂತೆ. ಆಗ ಅವರು ತಾನು ಬರೆಯಲು ಕಾಲಾವಕಾಶವಿಲ್ಲ ನನ್ನ ಸ್ನೇಹಿತರೊಬ್ಬರು ಬರೆದಿದ್ದಾರೆ; ಅದನ್ನು ಕಳುಹಿಸುತ್ತೇನೆ ಸಾದ್ಯವಾದರೆ ಪ್ರಕಟಿಸಿ ಎಂದು ಹೇಳಿ ನನ್ನ ಲೇಖನ ಕಳುಹಿಸಿ ನಂತರ ಆ ವಿಷಯವನ್ನು ನನಗೂ ಹೇಳಿದರು.

ಆ ಸಮಯದಲ್ಲಿ ನಾನು ಆ ಸಾಹಿತ್ಯಿಕ ಪತ್ರಿಕೆಯ ಚಂದಾದಾರನೂ ಆಗಿರಲಿಲ್ಲ. ಬೇರೆ ಒಂದೆರಡಕ್ಕೆ ಆಗಿದ್ದೆ ಅವು ಆ ನಂತರ ಒಂದೆರೆಡು ವರ್ಷಗಳಲ್ಲಿ ನಿಂತುಹೋದವು. ವ್ಯಾಸರ ಕಥೆಗಳನ್ನು ಕುರಿತ ನನ್ನ ಲೇಖನ ಆ ಸಾಹಿತ್ಯಿಕ ಪತ್ರಿಕೆಯ ಮುಂದಿನ ಸಂಚಿಕೆಯಲ್ಲಿ  ನನ್ನ ಹೆಸರು ಮತ್ತು ಪೂರ್ಣ ವಿಳಾಸದ ಸಮೇತ ಪ್ರಕಟವೂ ಆಗಿ ನನಗೆ ಅದರ ಒಂದು ಪ್ರತಿಯೂ ಬಂತು. ಅಂದಿನಿಂದ ನಾನು ಆ ಪತ್ರಿಕೆಯ ಚಂದಾದಾರನಾಗಿದ್ದೇನೆ.  ಈಗಲೂ ಆ ಸಾಹಿತ್ಯಿಕ ಪತ್ರಿಕೆ  ಪ್ರಕಟವಾಗುತ್ತಿದೆ. ೨೦೧೩ಕ್ಕೆ  ಅದಕ್ಕೆ ೨೫ ವರ್ಷಗಳು ತುಂಬಿದವು.  ಆ ಲೇಖನ ಪ್ರಕಟವಾದ ಒಂದೆರೆಡು ವಾರಗಳ ನಂತರ ಎಂ ವ್ಯಾಸರಿಂದ ನನಗೊಂದು ಪತ್ರ ಬಂತು. ಅವರಿಗೆ ನನ್ನ ಲೇಖನದಿಂದ ಬೇಸರವಾಗಿತ್ತು. ”ಕೃತ” ಕಥಾಸಂಕಲನದಲ್ಲಿನ ಒಂದು ಕಥೆಯನ್ನು ಹೆಸರಿಸಿ ಈ ಹಿಂದೆ ಅದು ಇಂತಹ ಒಂದು ನಿಯತಕಾಲಿಕದಲ್ಲಿ (ಈಗ ಅದರ ಹೆಸರು ಮರೆತಿದೆ) ಪ್ರಕಟವಾದಾಗ ನೀವು ತುಂಬಾ ಮೆಚ್ಚಿಕೊಂಡಿದ್ದಿರಿ, ಈಗ ಈ ರೀತಿ ಬರೆದಿದ್ದೀರಲ್ಲ ಎಂದಿದ್ದರು. ಆ ಕಥಾಸಂಕಲನದ ಕೊನೆಯ ಪುಟದಲ್ಲಿ ಓದುಗರ ಅನಿಸಿಕೆಗಳು ಎಂದು  ಅದರಲ್ಲಿದ್ದ ಕಥೆಗಳು ಈ ಮೊದಲು ನಿಯತಕಾಲಿಕಗಳಲ್ಲಿ ಪ್ರಕಟವಾದಾಗ ಬಂದಿದ್ದ ಕೆಲವೊಂದು ಅಭಿಪ್ರಾಯಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದರು.  ಅದರಲ್ಲಿ ಸುಮಾರು ಹದಿನೈದು  ವರ್ಷಗಳ ಹಿಂದೆ ನಾನು  ಅವರ ಒಂದು ಕಥೆಯನ್ನು ಮೆಚ್ಚಿಕೊಂಡು ಬರೆದಿದ್ದ ಒಂದೆರೆಡು ಸಾಲುಗಳೂ ಇದ್ದವು! ನನ್ನ ಲೇಖನದಿಂದ ಒಬ್ಬ ಹಿರಿಯ ಕಥೆಗಾರರ ಮನಸ್ಸಿಗೆ ಬೇಸರವಾಗಿದ್ದು ತಿಳಿದು ಮನಸ್ಸು ಮುದುಡಿತು. ಅವರಿಗೆ ಒಂದು ಪತ್ರ ಬರೆದ ನೆನಪಿದೆ; ಆದರೆ ಅದರಲ್ಲಿ ಏನು ಬರೆದಿದ್ದೆ ಎಂಬುದು ನೆನಪಿಲ್ಲ. ಇದರ ಜತೆಗೆ ನನಗೆ ಇನ್ನೊಂದು ವಿಷಯ ಮನಸ್ಸನ್ನು ಕೊರೆಯಲಾರಂಭಿಸಿತು. ನನ್ನ ಲೇಖನ ಆ ಸಾಹಿತ್ಯಿಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದು ನನ್ನ ಸ್ನೇಹಿತರ ”ಶಿಫಾರಸ್” ನಿಂದಲೇ? ಒಂದು ವೇಳೆ ನಾನೇ ನೇರವಾಗಿ ಕಳುಹಿಸಿದ್ದರೆ ಸಾಕಷ್ಟು ಹೆಸರುವಾಸಿಯಾದ ಆ ಸಾಹಿತ್ಯಿಕ ಪತ್ರಿಕೆಯಲ್ಲಿ ಅದು  ಪ್ರಕಟವಾಗುತ್ತಿತ್ತೆ?  ಈ ಸಂಶಯವನ್ನು ಬಗೆಹರಿಸಿಕೊಳ್ಳಬೇಕೆನಿಸಿತು. ಇದಾದ ನಾಲ್ಕೈದು ವರ್ಷಗಳ ನಂತರ  ದೂರದ ಊರಿನಲ್ಲಿರುವ ಒಬ್ಬರು ವಿಮರ್ಶಕರ ಪರಿಚಯ ಅವರ ಒಂದು ಪುಸ್ತಕವನ್ನು ನಾನು ಓದಿದ ನಂತರ ಆಯಿತು. ಇದುವರೆಗೆ ಮುಖತಃ ಭೇಟಿ ಆಗಿಲ್ಲ. ಪತ್ರ,ಫೋನು,ಇಮೇಲ್ ಮೂಲಕ ಪರಿಚಯ ಅಷ್ಟೇ. ಫೇಸ್ ಬುಕ್ ನಲ್ಲಿ ಅವರ ಫೋಟೋ ನೋಡಿದ್ದೇನೆ. ಭೇಟಿ ಆಗ ಬೇಕೆನಿಸಿದೆ. ಆದರೆ ಸದ್ಯದ ನನ್ನ ಕೆಲವು ದೈಹಿಕ ಸಮಸ್ಯೆಗಳಿಂದ ಅಷ್ಟು ದೂರ ಪ್ರಯಾಣ ಮಾಡಲು ಆಗುತ್ತಲಿಲ್ಲ. ಒಮ್ಮೆ ಹೋಗಿ ಬರುತ್ತೇನೆ. ಅವರಿಗೆ ಆ ಸಾಹಿತ್ಯಿಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ನನ್ನ ಲೇಖನದ ಜೆರಾಕ್ಸ್ ಪ್ರತಿ ಜತೆಗೆ  ನಾನು ಬರೆದಿರುವ ಈ ಲೇಖನದ ಬಗ್ಗೆ ನನಗೆ ಅಷ್ಟಾಗಿ ತೃಪ್ತಿಯಿಲ್ಲ. ದಯವಿಟ್ಟು ತಮ್ಮ ಅಭಿಪ್ರಾಯ/ವಿಮರ್ಶೆಯನ್ನು ತಿಳಿಸಿ ಎಂದು ಪತ್ರ ಬರೆದೆ. ಅವರು ವ್ಯಾಸರ ಜೀವನದ ಕೆಲವು ಘಟನೆಗಳನ್ನು ತಿಳಿಸಿ ಅವುಗಳ ಕಾರಣದಿಂದ ಅವರ ಕೆಲವು ಕಥೆಗಳಲ್ಲಿ ಒಮ್ಮೊಮ್ಮೆ ಏಕತಾನತೆ ಮತ್ತು ಸಣ್ಣ ಕಥೆಯ ಸ್ವರೂಪಕ್ಕೆ ಭಾರವೆನಿಸಬಹುದಾದ ಅತಿ ವಿವರುಗಳು ಇವೆ. ನಿಮ್ಮ ಲೇಖನದಲ್ಲಿ ಅದರ ಪ್ರಸ್ತಾಪ ಬಂದಿದೆ. ಪರವಾಗಿಲ್ಲ ಚೆನ್ನಾಗಿಯೇ ಬರೆದಿದ್ದೀರಿ ಎಂದು ತಿಳಿಸಿದರು. ಸ್ವಲ್ಪ ಸಮಾಧಾನವಾಯ್ತು.

೨೦೧೩ರಲ್ಲಿ ನಾನು ” ಸಾಹಿತ್ಯಿಕ ಪತ್ರಿಕೆಗಳ ಸಮಸ್ಯೆಗಳು ಮತ್ತು ಲಾಬಿಗಳು” ಎಂದು ಶೀರ್ಷಿಕೆ ಕೊಟ್ಟು  ಒಂದು ಲೇಖನ  ಬರೆದು ಆರೇಳು ತಿಂಗಳು ಯಾವ ಪತ್ರಿಕೆಗಳಿಗೂ ಕಳುಹಿಸದೆ ಸುಮ್ಮನಿದ್ದುಬಿಟ್ಟಿದೆ. ಕಾರಣ ಆ ವೇಳೆಗೆ ಮೂರು ಸಾಹಿತ್ಯಿಕ ಪತ್ರಿಕೆಗಳಿಗೆ ನಾನು ಚಂದಾದಾರನಾಗಿದ್ದೆ ಮತ್ತು  ಅವುಗಳ ಸಂಪಾದಕರ ಜತೆ ತಿಂಗಳಿಗೊಮ್ಮೆಯಾದರೂ ಫೋನ್ ಮೂಲಕ ಮಾತಾಡುವಷ್ಟು ಪರಿಚಯ ಬೆಳೆಸಿಕೊಂಡಿದ್ದೆ. . ಅವರಲ್ಲಿ ಬೆಂಗಳೂರಿನ ಒಬ್ಬರನ್ನು ನಾನು ೧೯೭೯ರಲ್ಲಿ ಭೇಟಿಯಾಗಬೇಕೆಂದು  ಒಮ್ಮೆ ಪ್ರಯತ್ನಿಸಿ ಅವರ  ಮನೆಯನ್ನು ಹುಡುಕಲು ಸಾಧ್ಯವಾಗದೆ ವಾಪಸ್ಸು ಬಂದಿದ್ದೆ. ಇವೆಲ್ಲಾ ತಿಳಿಸಿ ಅವರ ಹೊಸ ವಿಳಾಸಕ್ಕೆ  ಪತ್ರ ಬರೆದಿದ್ದೆ. ನಂತರ ಅವರು ಫೋನ್ ಮಾಡಿದಾಗ  ನಾನು ಅವರ ಪತ್ರಿಕೆಯಲ್ಲಿನ ಒಂದು ಅಂಕಣವನ್ನು ಮೆಚ್ಚಿಕೊಂಡಿದ್ದನ್ನು ಹೇಳಿ ಅವರ ಇತರ ಪುಸ್ತಕಗಳನ್ನು ಕಳುಹಿಸಿಕೊಡಬೇಕೆಂದು ಕೇಳಿಕೊಂಡೆ. ಅವರು ಪುಸ್ತಕ ಕಳುಹಿಸಿದ ಕೂಡಲೇ ನಾನು cheque ಕಳಿಸಿದಾಗ ಅವರು ನಾನು ನಿಮಗೆ ಪ್ರೀತಿಯಿಂದ ಆ ಪುಸ್ತಕಗಳನ್ನು ಕಳಿಸಿದ್ದು; ಹಣ ಬೇಡ. ನಾನು ಆ cheque ಅನ್ನು ಬ್ಯಾಂಕಿಗೆ ಕಳಿಸುವುದಿಲ್ಲ ಹರಿದು ಹಾಕುತ್ತೇನೆ ಎಂದರು. ಅವರ ಮನವೊಲಿಸಿ ದಯವಿಟ್ಟು ಹಾಗೆ ಮಾಡಬೇಡಿ ಎಂದು ಕೇಳಿಕೊಂಡೆ. ನನ್ನ ಮೊದಲ ಪ್ರಕಟಿತ ಲೇಖನದ ವಿಮರ್ಶೆ ಮಾಡಿದ್ದವರು  ಆ ವೇಳೆಗೆ ಸಾಹಿತ್ಯಿಕ ಪತ್ರಿಕೆಯೊಂದನ್ನು ಪ್ರಾರಂಭಿಸಿದ್ದರು. ಯಾವ ಒಂದು ಸಾಹಿತ್ಯಿಕ ಪತ್ರಿಕೆಯನ್ನೂ  target  ಮಾಡದೆ  ಮತ್ತು  ಹೆಸರಿಸದೆ ಇದ್ದರೂ ಸಹಿತ  ಆ ನನ್ನ ”ಸಾಹಿತ್ಯಿಕ ಪತ್ರಿಕೆಗಳ ……. ” ಲೇಖನದ content ನಿಂದ ನನ್ನ ಪರಿಚಯದ ಮತ್ತು ಆತ್ಮಿಯರಾದ ಆ ಮೂವರು  ಸಾಹಿತ್ಯಿಕ ಪತ್ರಿಕೆಗಳ ಸಂಪಾದಕರುಗಳಿಗೆ ಬೇಸರವಾಗುತ್ತಿತ್ತು.

ಆದರೆ ಒಂದು ದಿನ ನನ್ನಲ್ಲಿದ್ದ ಸಾಹಿತ್ಯಿಕ ಪತ್ರಿಕೆಗಳ ಸುಮಾರು ಅರವತ್ತು ಸಂಚಿಕೆಗಳನ್ನು ಒಂದು ಕಡೆ ನೀಟಾಗಿ ಜೋಡಿಸಿಡೋಣವೆಂದು ಕುಳಿತಾಗ ಹಾಗೇ  ಅವುಗಳ ಲೇಖನಗಳ glance ಮಾಡಿದೆ. ಆಗ ನಾನು ಬರೆದಿದ್ದ ಲೇಖನದಲ್ಲಿ ಉತ್ಪ್ರೇಕ್ಷೆಯಾಗಿದ್ದೇನೂ ಇಲ್ಲ ಅನಿಸಿತು. ಆದರೂ ಇನ್ನಷ್ಟು ಆ ಲೇಖನವನ್ನು ತಿದ್ದಿ ನಂತರ  ಬೆಂಗಳೂರಿನಿಂದ ಪ್ರಕಟವಾಗುವ ”ಕನ್ನಡ ಪ್ರಭ” ಪತ್ರಿಕೆಯ ಸಾಪ್ತಾಹಿಕ ವಿಭಾಗಕ್ಕೆ ಕಳಿಸಿಬಿಟ್ಟೆ. ಒಂದು ತಿಂಗಳಾದ ನಂತರ ಭಾನುವಾರದ ಆ ಪತ್ರಿಕೆಯ ಸಾಪ್ತಾಹಿಕ  ವಿಭಾಗದಲ್ಲಿ ಮೊದಲನೇ ಪುಟದಲ್ಲೇ  ದಪ್ಪ ಅಕ್ಷರಗಳ ಹೆಡ್ಡಿಂಗ್ ಕೊಟ್ಟು ಆ ಲೇಖನದ ಮೊದಲ ಭಾಗದ   ಜತೆಗೆ ನನ್ನ ಲೇಖನದಲ್ಲಿ,  ಆ ಪತ್ರಿಕೆಯ ಸಂಪಾದಕ ವರ್ಗದವರಿಗೆ ಮುಖ್ಯವೆಂದು ಅನ್ನಿಸಿದ ಐದಾರು ಸಾಲುಗಳನ್ನು box item ಮಾಡಿ ಪ್ರಕಟಿಸಿದ್ದರು. ಲೇಖನದ ಉಳಿದ ಭಾಗವನ್ನು ಐದನೇ ಪುಟದಲ್ಲಿ ಪ್ರಕಟಿಸಿ  ಅದರ ಜತೆಗೆ ಕನ್ನಡದ ಕೆಲವು ಸಾಹಿತ್ಯಿಕ ಪತ್ರಿಕೆಗಳ ಮುಖಪುಟದ (ರಕ್ಷಾಪುಟ) ಚಿತ್ರವನ್ನು ಮುದ್ರಿಸಿದ್ದರು. ಇವೆಲ್ಲದರ ಜತೆಗೆ  ಓದುಗರಿಂದ ಪ್ರತಿಕ್ರಿಯೆಗಳನ್ನೂ ಆಹ್ವಾನಿಸಿ ಚರ್ಚೆಗೆ ಅವಕಾಶ ಮಾಡಿದರು. . ವಾರಕ್ಕೊಂದರಂತೆ ನಾಲ್ಕೈದು ಭಾನುವಾರದ ಸಂಚಿಕೆಗಳಲ್ಲಿ ಈ ಚರ್ಚೆ ನಡೆಯಿತು. ಮೊದಲನೇ ಪ್ರತಿಕ್ರಿಯೆಯೇ   ನನ್ನ ಮೊದಲ ಲೇಖನ (ಎಂ ವ್ಯಾಸರ ಕಥೆಗಳ ಬಗ್ಗೆ ಒಂದು ಟಿಪ್ಪಣಿ) ಪ್ರಕಟಿಸಿದ್ದ ಸಾಹಿತ್ಯಿಕ ಪತ್ರಿಕೆಯ ಸಂಪಾದಕರದ್ದು! ಅವರು ನನ್ನ ಲೇಖನದ ಪ್ರತಿ ಪ್ಯಾರವನ್ನೂ ತುಂಡು ತುಂಡು ಮಾಡಿ ಖಂಡಿಸಿದ್ದರು !! ಅವರ ಪ್ರತಿಕ್ರಿಯೆಯಿಂದ ನನಗೆ ಬೇಸರವಾಗಲಿಲ್ಲ. ಸಾಹಿತ್ಯಿಕ ಪತ್ರಿಕೆಗಳನ್ನು ನಡೆಸುವುದು ಎಷ್ಟು ಕಷ್ಟ ಎಂದು ವಿವರವಾಗಿ ತಿಳಿಸಿದ್ದರು. ನನ್ನ ಲೇಖನ ”ಅಕಾಡೆಮಿಕ್” ಶೈಲಿಯಲ್ಲಿ ಹಗಲು ಕನಸಿನಂತ್ತಿತ್ತು!! ಮಿಕ್ಕ ಪ್ರತಿಕ್ರಿಯೆಗಳು ಓದುಗರಿಂದ ಬಂದಿದ್ದವು. ಈಗ ನನ್ನ ಪರಿಚಯದ ಸಾಹಿತ್ಯಿಕ ಪತ್ರಿಕೆಯ ಸಂಪಾದಕರುಗಳಲ್ಲಿ ನನ್ನ ”ಅಪರಾಧವನ್ನು ನಿವೇದನೆ” ಮಾಡಿಕೊಳ್ಳುವುದೊಂದೇ ಉಳಿದಿರುವ  ದಾರಿಯೆಂದು ನಿರ್ಧರಿಸಿದೆ.

ನನ್ನ ಲೇಖನಕ್ಕೆ ಮೊದಲ  ಪ್ರತಿಕ್ರಿಯೆ ಬರೆದವರನ್ನು ತಕ್ಷಣ ಫೋನಿನಲ್ಲಿ ಸಂಪರ್ಕಿಸಲಿಲ್ಲ. ಉಳಿದ ಇಬ್ಬರನ್ನು ಮಾತಾಡಿಸಿ ಬೇಸರವಾಗಿದ್ದರೆ ಕ್ಷಮಿಸಿ ಎಂದು ಕೇಳಿಕೊಂಡೆ. ಅವರು ನನ್ನನ್ನು ಸಮಾಧಾನಪಡಿಸಿ ನಾನು ಬೇಸರ ಮಾಡಿಕೊಳ್ಳುವ ಅವಶ್ಯಕತೆ ಇಲ್ಲವೆಂದೂ ಅದರಿಂದ ಚರ್ಚೆಯಾಗಿದ್ದು ಒಳ್ಳೆಯದೇ ಆಯಿತೆಂದೂ ಹೇಳಿದರು.  ಅವರಿಬ್ಬರೂ ಈಗಲೂ ಮೊದಲಿನಂತೆ ನನ್ನ ಬಗ್ಗೆ ಪ್ರೀತಿ ವಿಶ್ವಾಸದಿಂದಲೇ ಇದ್ದಾರೆ. ಅದು ಅವರ ದೊಡ್ಡ ಗುಣ. ಮೂರ್ನಾಲಕ್ಕು ತಿಂಗಳುಗಳ ನಂತರ ಕನ್ನಡ ಪ್ರಭದಲ್ಲಿ ಪ್ರಕಟವಾಗಿದ್ದ ಆ ನನ್ನ ಲೇಖನಕ್ಕೆ ಮೊದಲು ಪ್ರತಿಕ್ರಿಯಿಸಿದ್ದವರ ಸಾಹಿತ್ಯಿಕ ಪತ್ರಿಕೆಯಲ್ಲಿ  ನಾನು ಬರೆದಿದ್ದ ಮೂರು ಪುಟಗಳಷ್ಟಿದ್ದ ಪ್ತತಿಕ್ರಿಯೆಯೊಂದು.  (ಈ ಪ್ರತಿಕ್ರಿಯೆ ಸದರಿ ಸಾಹಿತ್ಯಿಕ ಪತ್ರಿಕೆಯಲ್ಲಿ  ಪ್ರಕಟವಾಗಿದ್ದ ಲೇಖನಕ್ಕೆ ಸಂಬಂಧಿಸಿತ್ತು)  ಪ್ರಕಟವಾಯ್ತು.  ಇದೇ ಸರಿಯಾದ ಸಮಯವೆಂದು ಅವರಿಗೂ ಫೋನ್ ಮಾಡಿ ಅಂತೂ ಇಂತೂ ಧರ್ಮಸಂಕಟದಿಂದ ಪಾರಾಗಿದ್ದಾಯ್ತು. ನಮಗೆ ಪರಿಚಯವಿಲ್ಲದವರ ಅಭಿಪ್ರಾಯಗಳ/ಲೇಖನಗಳ ವಿರುದ್ಧ ಪತ್ರಿಕೆಗಳ ವಾಚರವಾಣಿ/ಪತ್ರಪ್ರಭ ವಿಭಾಗಗಳಲ್ಲಿ ಮತ್ತು ಸಾಹಿತ್ಯಿಕ ಪತ್ರಿಕೆಗಳ ಪ್ರತಿಕ್ರಿಯೆ ಕಾಲಂನಲ್ಲಿ ನಾನು ಆಗಾಗ ಬರೆಯುತ್ತಿರುತ್ತೇನೆ. ಆದರೆ ಪರಿಚಿತರಾಗಿದ್ದರೆ ಹಿಂದೆ ಹೇಳಿದಂತಹ ‘ಸಂಕಟಗಳು’ ಎದುರಾಗುತ್ತವೆ; ಬರೆಯುವ ಮುಂಚೆ ಎರಡೆರಡು ಬಾರಿ ಯೋಚಿಸಿ ಬೇಡವೆಂದು ಬಿಟ್ಟಿರುವುದೂ ಉಂಟು . ನಾನು ಬರೆದಿದ್ದೆಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ ಎಂಬ ಯಾವುದೇ ಭ್ರಮೆಗಳು ನನಗಿಲ್ಲ. . ಅದು ನನಗೆ ತಿಳಿದಿದೆ. . ಆದರೂ ಗ್ರಹಚಾರ ಕೆಟ್ಟರೆ ಒಂದು ಹಕ್ಕಿ ಕೂತ  ಭಾರಕ್ಕೇ  ರೆಂಬೆ ಮುರಿದು  ಆ ಮರದ ಕೆಳಗೆ ನೆರಳಿದೆಯೆಂದು ಮಲಗಿದವನ ಮೇಲೆ ಬೀಳಬಹುದಲ್ಲವೇ? ಆ ರೀತಿ ಒಮ್ಮೊಮ್ಮೆ ಪ್ರಕಟವಾಗಿಬಿಡುತ್ತವೆ. ಸಾಹಿತ್ಯಿಕ ಪತ್ರಿಕೆಗಳನ್ನು ಕುರಿತಂತಹ ಲೇಖನದ ಪ್ರಕರಣದಲ್ಲೂ ಆಗಿದ್ದು ಹಾಗೆಯೇ. ಅದನ್ನು ಕನ್ನಡ ಪ್ರಭಕ್ಕೆ ಕಳಿಸಿದಾಗ ಅದು ಪ್ರಕಟವಾಗುತ್ತದೆ ಎಂಬ ನಂಬಿಕೆ/ಆಸೆ ನನಗಿರಲಿಲ್ಲ. ಏನು ಮಾಡುವುದು ರೈಲು ಹಳಿ ತಪ್ಪಿ ಅಪಘಾತವಾಗಿಹೋಯ್ತು!!

( ಸಶೇಷ)

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments