ರಾಜಕೀಯ ಪಕ್ಷಗಳಿಗೆ ಬೇಕು, RTI ಬ್ರೇಕು!
– ತುರುವೇಕೆರೆ ಪ್ರಸಾದ್
ನಾವು ಮತ್ತೊಂದು ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿದ್ದೇವೆ.ರಾಜಕೀಯ ಪಕ್ಷಗಳು ತಮ್ಮ ಮಾಮೂಲಿ ಬೂಟಾಟಿಕೆ ಹಾಗೂ ಡೋಂಗಿ ಮಾತುಗಳೊಂದಿಗೆ ಮತದಾರರನ್ನು ಸೆಳೆಯಲು ಕಸರತ್ತು ನಡೆಸಿವೆ. ಆಶ್ವಾಸನೆಗಳ ಸುರಿಮಳೆಯನ್ನೇ ಸುರಿಸುತ್ತಿವೆ. ಭ್ರಷ್ಟಾಚಾರ ಮುಕ್ತ ಪಾರದರ್ಶಕ ಆಡಳಿತದ ಭರವಸೆಗಳ ಮಹಾಪೂರವೇ ಹರಿಯುತ್ತಿದೆ. ಆದರೆ 9ತಿಂಗಳ ಹಿಂದೆ ಕೇಂದ್ರೀಯ ಮಾಹಿತಿ ಆಯೋಗ (ಸಿಐಸಿ) ಕಾಂಗ್ರೆಸ್, ಬಿಜೆಪಿ,ಸಿಪಿಐ, ಸಿಪಿಐ-ಎಂ, ಬಿಎಸ್ಪಿಷ ಹಾಗೂ ಎನ್ಸಿಿಪಿ-ಈ 6ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಯಡಿ ಸಾರ್ವಜನಿಕ ಸಂಸ್ಥೆಗಳು ಎಂದು ಘೋಷಿಸಿತ್ತು. ಸಿಐಸಿಯ ಆ ಆದೇಶವನ್ನು ಎಲ್ಲಾ ರಾಜಕೀಯ ಪಕ್ಷಗಳು ಧಿಕ್ಕರಿಸಿವೆ. ಆ ಬಗ್ಗೆ ಚಕಾರವೆತ್ತದೆ ಮತದಾರರೂ ಎಲ್ಲಾ ಮರೆತಂತಿದ್ದಾರೆ.
ಮಾಹಿತಿ ಹಕ್ಕು ಕಾರ್ಯಕರ್ತರಾದ ಸುಭಾಷ್ ಅಗರ್ವಾದಲ್ ಮತ್ತು ಅನಿಲ್ ಬೈರ್ವಾೋಲ್ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಸಿಪಿಐ-ಎಂ ಪಕ್ಷಗಳ ದೇಣಿಗೆ ಸ್ವೀಕೃತಿ ಹಾಗೂ ಖರ್ಚು-ವೆಚ್ಚಗಳ ಮಾಹಿತಿ ಕೋರಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ ತಾವು ಸಾರ್ವಜನಿಕ ಸಂಸ್ಥೆಗಳಲ್ಲ ಹಾಗೂ ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಯಡಿ ಬರುವುದಿಲ್ಲ ಎಂದು ತಿಳಿಸಿದ್ದವು. ಆದರೆ ಮಾಹಿತಿ ಹಕ್ಕು ಕಾರ್ಯಕರ್ತರು ರಾಜಕೀಯ ಪಕ್ಷಗಳನ್ನೂ ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ 2(ಎಚ್) ಅಡಿ ಸಾರ್ವಜನಿಕ ಸಂಸ್ಥೆಗಳೆಂದು ಘೋಷಿಸಬೇಕೆಂದು ಸಿಐಸಿಗೆ ಮನವಿ ಮಾಡಿದ್ದರು.ಅದರಂತೆ ಆಯೋಗದ ಪೂರ್ಣ ಪೀಠ ಜೂನ್ 3, 2013ರಂದು ಮೇಲಿನ 6ರಾಜಕೀಯ ಪಕ್ಷಗಳು ಸಾರ್ವಜನಿಕ ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೆ ಅವು ಉತ್ತರದಾಯಿತ್ವ ಹೊಂದಿವೆ ಎಂದು ಆದೇಶ ನೀಡಿತು. ಅದಕ್ಕೆ ಸಿಐಸಿ ಕಾರಣಗಳನ್ನೂ ನೀಡಿತ್ತು. ಎಲ್ಲಾ 6ರಾಜಕೀಯ ಪಕ್ಷಗಳು ಪರೋಕ್ಷವಾಗಿ ಕೇಂದ್ರ ಸರ್ಕಾರದಿಂದ ಸಹಾಯ ಧನ ಪಡೆದಿದ್ದವು. ದೆಹಲಿಯ ಹೃದಯ ಭಾಗದಲ್ಲಿ ಅತಿ ಕಡಿಮೆ ಅಥವಾ ಪುಕ್ಕಟೆಯಾಗಿ ನಿವೇಶನ/ಕಟ್ಟಡಗಳನ್ನು ಪಡೆದಿದ್ದವು. ಎಲ್ಲಾ ಪಕ್ಷಗಳಿಗೂ ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ರೂ.28.56ಲಕ್ಷ ಮೌಲ್ಯದ ಉಚಿತ ಪ್ರಸಾರ ಸೇವೆ ನೀಡಲಾಗಿತ್ತು. 2006-09ರ ಅವಧಿಯಲ್ಲಿ ಎಲ್ಲಾ ಪಕ್ಷಗಳಿಗೆ ಒಟ್ಟಾರೆ 510ಕೋಟಿ ಆದಾಯ ಕರ ವಿನಾಯತಿಯನ್ನು ನೀಡಲಾಗಿತ್ತು.