ನಮಗೆಂಥ ಮೀಸಲಾತಿ ಬೇಕು?
– ವಲವಿ ಬಿಜಾಪೂರ
ಶ್ರೀ ಹೋ.ಬ ರಘೋತ್ತಮ ಅವರ “ಅಸ್ಪೃಶ್ಯತೆ, ಮೀಸಲಾತಿ ಮತ್ತು ತಲೆಮಾರಿನ ಪ್ರಶ್ನೆ” ಎಂಬ ಲೇಖನವನ್ನು ಓದಿ ಪ್ರತಿಕ್ರಿಯಿಸುವದು ನನಗೆ ಅನಿವಾರ್ಯವಾಗಿದ್ದರಿಂದ ಈ ಲೇಖನ ಬರೆಯುತ್ತಿದ್ದೇನೆ.ಅವರು ಲೇಖನ ಬರೆದಲ್ಲೇ ಪ್ರತಿಕ್ರಿಯೆ ಬರೆಯಬಹುದಾಗಿತ್ತು. ಆದರೆ ತಮ್ಮ ವಿಚಾರಗಳಿಗೆ ವಿರುದ್ಧವಾಗಿ ಏನೇ ಬರೆದರೂ ಕೆಲವು ಬ್ಲಾಗಿನಲ್ಲಿ ಪ್ರಕಟವಾಗುವುದಿಲ್ಲ.ವಿರುದ್ಧ ಕಮೆಂಟುಗಳನ್ನೂ ಪ್ರಕಟಿಸುವದಿಲ್ಲ. ಯಾಕೆಂದರೆ ಅವರು ಪ್ರಗತಿಪರರೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬಹಳ ಬೆಲೆ ಕೊಡುವವರೂ ಆಗಿದ್ದಾರೆ. !? ಅದಕ್ಕಾಗಿ ನಿಲುಮೆಯಲ್ಲಿ ನನ್ನ ವಿಚಾರಗಳನ್ನು ಅಭಿವ್ಯಕ್ತ ಪಡಿಸುತ್ತಿದ್ದೇನೆ.
ಲೇಖನದ ಮೊದಲಿಗೆ ಹೇಳುತ್ತಿದ್ದೇನೆ. ನಾನು ಮೀಸಲಾತಿ ವಿರೋಧಿಯಲ್ಲ. ಮೀಸಲಾತಿ ಹೇಗಿದ್ದರೆ ಸರ್ವರಿಗೂ ಒಳಿತಾಗುತ್ತದೆ ಎಂಬ ಕುರಿತು ಮಾತ್ರ ಹೇಳುತ್ತಿದ್ದೇನೆ.
ಶ್ರೀ ರಘೋತ್ತಮ ಅವರು ಹೇಳುತ್ತಾರೆ. ” ಕೆದರಿದ ತಲೆಯ, ಗಲೀಜು ಬಟ್ಟೆಯ, ಎಣ್ಣೆ ಕಾಣದ ಹಳ್ಳಿ ಹೆಂಗಸೊಬ್ಬಳು ಅವರಿಗೆ {ಗರಿಗರಿಯಾಗಿ ಇಸ್ತ್ರೀ ಮಾಡಿದ ನೀಟಾದ ಬಟ್ಟೆ ಉಟ್ಟುಕೊಂಡು ನಾಗರೀಕರು ನೌಕರರು ಆಗಿರುವ] ಏಕವಚನದಲ್ಲಿ ಮಾತನಾಡಿಸಿದಳಂತೆ ಕಾರಣ ಆಕೆ ರಘೋತ್ತಮರ ಊರಿನ ಮೇಲ್ಜಾತಿಯವಳಾಗಿದ್ದರಿಂದ ಮತ್ತು ಇವರು ದಲಿತರಾಗಿದ್ದರಿಂದ ಕಡಲೆಕಾಯಿ ಮಾರುವ ಹೆಂಗಸಾದ ಅವಳು ಮೇಲಿರಿಮೆಯ ಸೊಕ್ಕಿನಿಂದ ಹೀಗೆ ಮಾತನಾಡಿದಳೆಂಬ ಧ್ವನಿ ಬರುವಂತೆ ಬರೆದಿದ್ದಾರೆ. ಅಲ್ಲದೇ ಬಿಜೆಪಿ ಅಧಿಕಾರಕ್ಕೆ ಬಂದರೆ ಮೂರನೆ ತಲೆಮಾರಿನ ದಲಿತರಿಗೆ ಮೀಸಲಾತಿ ಕೊಡದಿರುವಂತೆ ಚಿಂತಿಸುತ್ತಿದೆ. ಎಂದು ಆಂಗ್ಲ ಪತ್ರಿಕೆಯೊಂದರ ಸುದ್ದಿಯನ್ನೋದಿ ಆತಂಕ ವ್ಯಕ್ತಪಡಿಸಿದ್ದಾರೆ. ಮುಂಬರುವ ದಿನಗಳು ದಲಿತರಿಗೆ ಒಳ್ಳೆಯ ದಿನಗಳಲ್ಲ ಎಂಬ ಆತಂಕವನ್ನು ಸಹ ತೋಡಿಕೊಂಡಿದ್ದಾರೆ. ಗೋಧ್ರೋತ್ತರ ಮಾರಣಹೋಮದಂತೆ ಮೋದಿ ಇನ್ನೋಂದು ಮಾರಣಹೋಮಕ್ಕೆ ಸಜ್ಜಾದರೆ ಎಂದೂ ಸೇರಿಸುತ್ತಾರೆ.
ಆದರೆ ನನ್ನ ಅಭಿಪ್ರಾಯವೆಂದರೆ ಶ್ರೀ ರಘೋತ್ತಮರು ದಲಿತರಲ್ಲಿ ವಿನಾಕಾರಣ ಮೋದಿ ವಿರುದ್ಧ ಭಯ ಮೂಡಿಸುತ್ತಿದ್ದಾರೆ.ಎನಿಸುತ್ತದೆ. ಇರಲಿ, ನಾನೂ ಸಹ ನಮ್ಮೂರಿಗೆ ಹೋದಾಗ ನಮ್ಮ ಹಳ್ಳಿಯ ಜನ ನನ್ನನ್ನು ಏಕವಚನದಲ್ಲೇ ಮಾತನಾಡಿಸುತ್ತಾರೆ. ನಾನು ಇಡೀ ಭಾರತ ದೇಶವೇ ತಿಳಿದುಕೊಂಡಂತೆ ಮೇಲು ಜಾತಿಯಲ್ಲಿ [??] ಜನಿಸಿದವಳು. ಆದರೂ ನಮ್ಮೂರಿನ ಜನ ನನ್ನನ್ನೂ ಏಕವಚನದಲ್ಲಿ ಮಾತನಾಡಿಸುತ್ತಾರೆ. ಅನೇಕರು “ಯಾಕವ್ವಾ ಮಗಳ… ಎಂದ ಬಂದ್ಯವಾ? ಎಲ್ಲಾ ಪಾಡ [ಚನ್ನಾಗಿ] ಅದೀರಾ? ಎಲ್ಲಿ ಯಾವೂರಾಗ ಅದಿಯವಾ ? ಕುರುಸಾಲ್ಯಾ ನನ್ನ ಅಳ್ಯಾ ಬಂದಿಲ್ಲೇನ? [ನಮ್ಮ ಮನೆಯವರಿಗೆ ಹೀಗೆ ಸಂಬೋಧಿಸುತ್ತಾರೆ. ಊರ ಅಳಿಯನಿಗೆ ಹೀಗೆ ಸಂಬೋಧಿಸಬೇಕೆಂಬ ಅಲಿಖಿತ ನಿಯಮ. ] ನಮ್ಮ ಚಾಜಗಾರ ಕುಳ [ನಮ್ಮಿಂದ ಸನ್ಮಾನ ಕಾಣಿಕೆ ಪಡೆಯುವ ಹೆಣ್ಣು ಮಕ್ಕಳ ಮಗ] ಬಂದಿಲ್ಲೇನ??” ಹೀಗೆ ಮಾತನಾಡಿಸುತ್ತಾರೆ. ನಾನೂ ಸಹ ಸರಕಾರಿ ನೌಕರಿಯಲ್ಲಿ ನಮ್ಮ ಮನೆಯವರು ಸಹ ಸರಕಾರಿ ನೌಕರಿಯಲ್ಲಿ ಇದ್ದೇವೆ. ಮೇಲುಜಾತಿಯವರಾಗಿದ್ದೆವೆ. ಉತ್ತಮ ಗರಿಗರಿಯಾದ ಬಟ್ಟೆಗಳನ್ನು ಧರಿಸಿಯೇ ನಮ್ಮೂರಿಗೆ ಹೋಗಿರುತ್ತೇವೆ. ಆ ಹಳ್ಳಿಗರಿಗಿಂತ ಸಾವಿರ ಪಾಲು ಉತ್ತಮ ಸ್ಥಿತಿಯಲ್ಲಿ ಇದ್ದೇವೆ. ಆದರೆ ನಾವೆಂದೂ ಅವರು ನಮ್ಮನ್ನು ಬಹುವಚನದಲ್ಲಿ ಮಾತನಾಡಿಲ್ಲವೆಂದು ಸಿಟ್ಟಿಗೆ ಬಂದಿಲ್ಲ. ನಾನೂ ಕೂಡ ಹೌಂದ ಕಾಕಾ, ದೊಡ್ಡಪ್ಪ, ಮುತ್ಯಾ ಆಯಿ, ಚಿಗವ್ವ, ದೊಡ್ಡವ್ವ, ಅತ್ತಿ, ಮಾಮಾ ಹೀಗೆ ಹೇಳಿ ನಾನು ಕ್ಷೇಮವಾಗಿದ್ದನ್ನು ಹೇಳುತ್ತೇನೆ. ಇಲ್ಲಿ ಅವರ ಪ್ರೀತಿ ತಮ್ಮ ಮನೆಯ ಮಗಳೇ ನಮ್ಮೂರಿಗೆ ಬಂದಳೆಂದು ತಿಳಿಯುವ ಅವರ ಆತ್ಮೀಯತೆ ಗಮನಿಸಬೇಕೆ ಹೊರತು ಅವರ ಭಾಷೆಯಲ್ಲ. ನಾವು ಭಾರತದ ರಾಷ್ಟ್ರಪತಿಯಾಗಿ ನಮ್ಮೂರಿಗೆ ಹೋದರೂ ನಮ್ಮ ಜನಗಳು “ಏನವಾ ತಂಗೀ ಏನೋ ದೊಡ್ಡ ಸಾಬ್ತಿ ಆಗೀಯಂತಲ್ಲವಾ? ಶಿವಾ ಚಲೂ ಮಾಡಿದ ಬಿಡೂ… ನನ್ನ ಆಶೀ [ಆಯುಷ್ಯ] ಎಲ್ಲ ನಿನಗಾಗಲಿ. ಚಂದಾಗಿ ಸಿವಾ ನಿನ್ನ ಇಡಲಿ”. ಎಂದಾರೇ ವಿನಃ ಅವರಿಗೆ ರಾಷ್ಟ್ರಪತಿಗೆ ಗೌರವ ಕೊಡಬೇಕೆಂಬ ಇರಾದೆ ಇರುವದಿಲ್ಲ. ಅವರಿಗೆ ನಾವು ಅವರೂರಿನ ಮಗ , ಮಗಳು ಅಷ್ಟೇ.
ಇರಲಿ, ನಮ್ಮೂರಿನ ಜನರ ಪುರಾಣವಾಯಿತು. ನಾನೀಗ ಹೇಳ ಹೊರಟಿರುವದು ಮೀಸಲಾತಿ ಹೇಗಿರಬೇಕೆಂಬ ಕುರಿತು. ಅದಕ್ಕೂ ಮುನ್ನ ಒಂದು ರೂಪಕದ ಉದಾಹರಣೆ ಹೇಳಿ ಮುಂದುವರಿದರೆ ಓದುಗರಾದ ನಿಮಗೆ ಹೆಚ್ಚು ಅರ್ಥವಾಗುತ್ತದೆಂದು ಅಂದುಕೊಳ್ಳುತ್ತೇನೆ.
ಮತ್ತಷ್ಟು ಓದು