ಸುಪ್ರೀಂ ತೀರ್ಪಿಗೆ ತಕರಾರೆತ್ತುವ ಮುನ್ನ…
– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ, ತುಮಕೂರು ವಿವಿ
ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಲ್ಲ ಎಂದು ಮಂಗಳವಾರ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆ ಕರ್ನಾಟಕದಲ್ಲಿ ಖಾಸಗಿ ಶಾಲೆಯವರಿಗೆ ಸಂಭ್ರಮವಾದರೆ, ಕನ್ನಡ ಹೋರಾಟಗಾರರು ಹಾಗೂ ಸಾಹಿತಿಗಳಿಗೆ ಸಂಕಟ ಆರಂಭವಾಗಿದೆ. ರಾಜ್ಯ ಮಟ್ಟದ ಪತ್ರಿಕೆಯ ಮಿತ್ರರೊಬ್ಬರು ಕರೆ ಮಾಡಿ ಈ ತೀರ್ಪು ಸರಿ ಇಲ್ಲ, ಇದರಿಂದ ಕನ್ನಡ ಸರ್ವನಾಶವಾಗುತ್ತದೆ. ಇದನ್ನು ಕುರಿತು ಸ್ಟ್ರಾಂಗ್ ಆಗಿ ಲೇಖನ ಬರೆದುಕೊಡಿ ಸಾರ್ ಎಂದರು. ಇಲ್ಲ, ಸುಪ್ರೀಂ ತೀರ್ಪು ಸರಿಯಾಗಿಯೇ ಇದೆ ಎಂದು ನನ್ನ ಅಭಿಪ್ರಾಯ ಹೇಳುವಷ್ಟರಲ್ಲಿ ಏನ್ ಸಾರ್, ಕನ್ನಡ ಮೇಷ್ಟ್ರಾಗಿ ನೀವೇ ಹಿಂಗದ್ರೆ ಹೆಂಗೆ ಎನ್ನುತ್ತ ಆಮೇಲೆ ಕರೆ ಮಾಡ್ತೀನಿ ಅಂತ ಫೋನ್ ಇಟ್ಟರು. ಅವರು ನನ್ನನ್ನು ಕನ್ನಡ ವಿರೋಧಿ ಸ್ಥಾನದಲ್ಲಿ ಸ್ಥಾಪಿಸಿಬಿಟ್ಟರು. ಈ ತೀರ್ಪು ಕುರಿತಂತೆ ಕನ್ನಡ ಪರ ಎಂದುಕೊಳ್ಳುವ ಬಹುತೇಕರ ನಿಲುವು ಹೀಗೇ ಇದ್ದರೆ ಅಚ್ಚರಿ ಇಲ್ಲ.
ಸಮಸ್ಯೆಯ ಮೂಲ 33 ವರ್ಷಗಳ ಹಿಂದಿದೆ. ಗೋಕಾಕ್ ಸಮಿತಿ 1981ರಲ್ಲಿ ಪ್ರಾಥಮಿಕ ಹಂತದಲ್ಲಿ ಕನ್ನಡವೇ ಕಲಿಕಾ ಮಾಧ್ಯಮವಾಗಬೇಕು ಎಂದು ವರದಿ ನೀಡಿದ್ದರ ಆಧಾರದಲ್ಲಿ 1982ರಲ್ಲಿ ಸರ್ಕಾರ ಹೀಗೆ ಆದೇಶ ನೀಡಿತು. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತು. 1984ರಲ್ಲಿ ಕೇಸು ಬಿತ್ತು. ಸ್ವಲ್ಪ ಕಾಲ ಸುಮ್ಮನಿದ್ದ ಸರ್ಕಾರ ಮತ್ತೆ 1994ರಲ್ಲಿ 1ರಿಂದ 4 ನೇ ತರಗತಿವರೆಗೆ ಕನ್ನಡವಲ್ಲದೇ ಬೇರೆ ಮಾಧ್ಯಮದಲ್ಲಿ ಕಲಿಸುವ ಶಾಲೆಗಳಿಗೆ ಅನುಮತಿ ಕೊಡುವುದಿಲ್ಲ ಎಂದು ಆದೇಶಿಸಿತು. ಕೆಲವು ಖಾಸಗಿ ಶಾಲೆಗಳು ಕನ್ನಡದಲ್ಲೇ ಕಲಿಸುತ್ತೇವೆಂದು ಅನುಮತಿ ಪಡೆದು ಇಂಗ್ಲಿಷ್‍ನಲ್ಲಿ ಬೋಧಿಸತೊಡಗಿದವು. ಮತ್ತೆ ತಕರಾರು ಎದ್ದು ನ್ಯಾಯಾಲಯದ ಮೆಟ್ಟಿಲಿಗೆ ಹೋಯಿತು. ಮತ್ತೆ ಸರ್ಕಾರದ ಆದೇಶ ಬಿತ್ತು. 2009ರಲ್ಲಿ ಕೇಸು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಯಿತು. ಈಗ ತೀರ್ಪು ಹೊರಬಿದ್ದಿದೆ. ಈ ತೀರ್ಪಿನಿಂದ ಕನ್ನಡ ಶಾಶ್ವತವಾಗಿ ಸತ್ತೇ ಹೋಗುತ್ತದೆ ಎಂದು ಹುಯಿಲೆಬ್ಬಿಸಲಾಗುತ್ತಿದೆ. ಹೌದೇ? ಇದರಿಂದ ಕನ್ನಡ ಸತ್ತೇ ಹೋಗುತ್ತಾ?