ಸಾಹಿತಿಗಳೆಂದರೆ ಸರ್ವಸ್ವವೇ?
– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು
ಕನ್ನಡ ಕಲಿಕಾ ಮಾಧ್ಯಮದ ವಿರುದ್ಧ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿನ ಆಶಯ ಕುರಿತು ಬರುತ್ತಿರುವ ಅಭಿಪ್ರಾಯಗಳಲ್ಲಿ ಸುಪ್ರೀಂ ತೀರ್ಪಿನ ಪರ ಬಹುತೇಕ ದನಿಗಳಿವೆ. ಸುಪ್ರೀಂ ತೀರ್ಪು ಸರಿ. ನಮ್ಮ ಸರ್ಕಾರದ ನೀತಿಗಳು ಸರಿ ಇಲ್ಲ ಎಂಬುದೂ ಸರಿ, ಆದರೂ… ಎಂದು ಅನುಮಾನದ ರಾಗ ಎಳೆಯುವವರು ಕೆಲವರು ಮಾತ್ರ. ಈ ಸರ್ವೇ ಸ್ಯಾಂಪಲ್ ಸಂಖ್ಯೆ ತುಂಬ ಕಡಿಮೆ ಎನಿಸಿದರೂ ಸುಪ್ರೀಂ ತೀರ್ಪು ಜನಸಾಮಾನ್ಯರ ದೃಷ್ಟಿಗೆ ತಕ್ಕಂತೆಯೇ ಇದೆ ಎಂಬುದರಲ್ಲಿ ಅನುಮಾನವಿಲ್ಲ. ಸರ್ವೋಚ್ಚ ನ್ಯಾಯಾಲಯದ ತೀರ್ಪು ಬಂದ ಮೇಲೂ ಇದು ಇನ್ನೂ ತೀವ್ರ ಚರ್ಚೆಯ ವಿಷಯವಾಗಿಯೇ ಇರುವುದು ವಿಷಯದ ಗಂಭೀರತೆಯನ್ನು ತೋರಿಸುತ್ತದೆ. ಆದರೆ ಸರ್ಕಾರ ಬಹುಸಂಖ್ಯಾತರ ಆಶಯವನ್ನು ಗಮನಕ್ಕೆ ತಂದುಕೊಂಡು ಹೆಜ್ಜೆ ಇಡುತ್ತಿದೆಯೇ? ಇಲ್ಲ.
ಘನ ನ್ಯಾಯಾಲಯದ ತೀರ್ಪು ಯಾವುದೇ ನಿರ್ದಿಷ್ಟ ಭಾಷಾ ಮಾಧ್ಯಮ ಹೇರಿಕೆಯ ವಿರುದ್ಧವಿದ್ದರೂ ನಮ್ಮ ಸರ್ಕಾರ ಮಾತ್ರ ಕನ್ನಡದ ರಕ್ಷಣೆ ಹೇಗಾಗಬಲ್ಲುದು ಎಂಬುದಕ್ಕಿಂತ ಕನ್ನಡ ಮಾಧ್ಯಮ ರಕ್ಷಣೆಗೆ ಪಣ ತೊಟ್ಟಂತೆ ಕಾಣುತ್ತದೆ. ತನ್ನ ಆದೇಶವನ್ನು ಅದು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಸದಾ ಸುದ್ದಿ ಬಯಸುವ ಬೆರಳೆಣಿಕೆ ಸಾಹಿತಿಗಳ ಹಾಗೂ ಹೋರಾಟಗಾರರ ಭಾವಾವೇಶದ ಅಭಿಪ್ರಾಯಕ್ಕೆ ಸರ್ಕಾರ ಬಗ್ಗುವಂತೆ ಕಾಣುತ್ತಿದೆ. ತೀರ್ಪನ್ನು ಕುರಿತು ಚರ್ಚಿಸಲು ಸರ್ಕಾರ ಕರೆದ ಸಭೆಯಲ್ಲಿ ಆಹ್ವಾನಿತರಾದವರು ಯಾರು? ಒಂದಿಷ್ಟು ಸಾಹಿತಿಗಳು, ಚಳವಳಿಗಾರರು ಹಾಗೂ ಸರ್ಕಾರಿ ಅಧಿಕಾರಿಗಳು. ಇವರೇ ಈ ವಿಷಯಕ್ಕೆ ಸಂಬಂಧಿಸಿದ ಸಮಸ್ತ ಸಂಗತಿಗಳನ್ನು ಪ್ರತಿನಿಧಿಸುತ್ತಾರಾ? ಇವರನ್ನೇ ಶಿಕ್ಷಣ ತಜ್ಞರು, ಪಾಲಕ-ಪೋಷಕರು, ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ವರ್ಗದವರು ಇತ್ಯಾದಿ ಊಹಿಸಿಕೊಳ್ಳಬೇಕಾ? ಅಷ್ಟಕ್ಕೂ ಈ ಸಭೆಯಲ್ಲಿ ಪಾಲ್ಗೊಂಡವರಲ್ಲಿ ಕನ್ನಡ ಕಲಿತರೆ ಭವಿಷ್ಯವಿದೆ ಎಂಬ ವಾತಾವರಣ ಹುಟ್ಟಿಸಬೇಕಿದೆ ಎಂದ ಗಿರೀಶ್ ಕಾರ್ನಾಡ್ ಹಾಗೂ ಭಾಷೆಯಾಗಿ ಕನ್ನಡ ಕಲಿಸಲು ಅಡ್ಡಿ ಇಲ್ಲ ಹಾಗೂ ಅಂಥ ವಾತಾವರಣ ರೂಪಿಸಬೇಕು ಎಂದ ಸಿ ಎನ್ ರಾಮಚಂದ್ರನ್ ಅವರ ಮಾತುಗಳನ್ನು ಬಿಟ್ಟರೆ ಉಳಿದವರ ಅಭಿಪ್ರಾಯಗಳೆಲ್ಲ ಹೋರಾಟಗಾರರ ಮಾತಿನಂತೆ ತಥಾಕಥಿತವಾಗಿವೆ.